Vincent van Gogh : ಅಭಿಜ್ಞಾನ ; ಸೂಳೆಕೆರೆಗಳಿಗೆ ಹೋಗಿದ್ದು ಸುಖದ ಕ್ಷಣಗಳನ್ನು ಅರಸುತ್ತ ಅಲ್ಲ
Artist : ‘ಇದೀಗ ಧಮನಿಗಳಲ್ಲಿ ಹುಚ್ಚು ಹೊಳೆಯಾಗಿ ಹರಿದ ರಕ್ತವೆಲ್ಲಾ ಹಿಂಗಿ ಖಾಲಿಯಾದಂಥ ಭಾವ. ದೈಹಿಕವಾಗಿ ಪೂರಾ ಸವೆದುಹೋಗಿದ್ದೆ. ಮಾನಸಿಕವಾಗಿ ಛಿದ್ರವಾಗಿದ್ದೆ. ಚಿತ್ರಿಸುವುದು ಸೃಷ್ಟಿಸುವುದು ನನಗೆ ಉಸಿರಿಗಿಂತ ಹೆಚ್ಚು ಅನಿವಾರ್ಯವಾಗಿತ್ತು. ದೈಹಿಕವಾಗಿ ಸೃಷ್ಟಿಸುವ ಬಗೆ ಇಲ್ಲದಾಗ ಬೌದ್ಧಿಕ ಸೃಷ್ಟಿ ತೀವ್ರವಾಗುವುದೆ? ಇಷ್ಟು ಉತ್ಕಟವಾಗಬೇಕೆ?’ ವ್ಯಾನ್ ಗೋ
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಲೇಖಕಿ ನೇಮಿಚಂದ್ರ ಅವರ ನೋವಿಗದ್ದಿದ ಕುಂಚ– ಪ್ರಸಿದ್ಧ ಚಿತ್ರಕಾರ ವ್ಯಾನ್ಗೋನ ಜೀವನಚಿತ್ರದಿಂದ.
*
ನನ್ನಕಲೆ ಅತೀ ವೈಯಕ್ತಿಕವಾಗಿತ್ತು. ನಿಸರ್ಗ, ಸ್ಥಿರ ಚಿತ್ರ, ಭಾವಚಿತ್ರ ಎಲ್ಲದರಲ್ಲೂ ನಾನಿದ್ದೆ. ನನ್ನ ಉನ್ಮಾದವಿತ್ತು. ಕೊನೆಗೆಲ್ಲ ಏತಕ್ಕಾಗಿ ಅನಿಸಿದ್ದುಂಟು. ನನ್ನ ಮುಂಜಾವಿನ ಒಂದು ಕಪ್ಪು ಕಾಫಿಯನ್ನೂ ಒದಗಿಸದ, ನಾನು ಪ್ರೀತಿಸಿದ ಹುಡುಗಿಯನ್ನು ಅರೆಕ್ಷಣವೂ ಹಿಡಿದಿಡಲಾರದ, ನನ್ನ ಹುಚ್ಚು ಉನ್ಮಾದಗಳಿಗಷ್ಟೇ ಸಂಗಾತಿಯಾದ ಈ ಚಿತ್ರಗಳ ಉಪಯೋಗವೇನು? ಈ ಬಣ್ಣಗಳ ಬಿಸುಪು ಕೂಡಾ ನನ್ನ ಎದೆಯ ಶಿಶಿರವನ್ನು ಕರಗಿಸುವಂತಿಲ್ಲ. ವಿಚಿತ್ರವೆಂದರೆ ಎಲ್ಲ ಕಲಾವಿದರೂ ಬದುಕಿನ ಭೌತಿಕ ಸುಖಗಳಿಗೆ ಹೊರತಾದವರೆ. ನಾವು ನಿಜಕ್ಕೂ ಬದುಕನ್ನು ಪೂರ್ಣ ಕಂಡದ್ದುಂಟೆ? ಅಥವಾ ಸಾವಿನ ಈಚೆ ಬದಿಯ ಒಂದಿಷ್ಟು ನೋವನ್ನಷ್ಟೇ ಉಂಡವರೇ? ನಾವು ಚಿತ್ರಕಾರರು. ಸತ್ತು ಮುಂದಿನ ಜನಾಂಗಗಳಿಗೆ ಕಥೆಯಾಗುವವರು. ಆದರೆ ನಾವು ಬದುಕಿದ್ದೆಂದು? ಕಲಾವಿದನ ಬದುಕಿನಲ್ಲಿ ಸಾವಿಗಿಂತ ನಿಷ್ಠುರ ಸತ್ಯಗಳು ಅದೆಷ್ಟು ಬಾರಿ ಹಾದುಹೋಗುವುದಿಲ್ಲ.
ನನ್ನ ಚಿತ್ರಗಳಿಗೆ ಎಂದಿಗೂ ಯಾವ ಮೌಲ್ಯವೂ ಬರಲಾರದೇನೋ ಎಂಬ ಅನುಮಾನ ಮೂಡಿದಾಗ ಗಾಬರಿಯಾಗುತ್ತಿದ್ದೆ. ಈ ಚಿತ್ರಗಳನ್ನು ತಯಾರಿಸಲು ನಾನು ಸುರಿಯುತ್ತಿರುವಷ್ಟು ಹಣವನ್ನಾದರೂ ಅವು ವಾಪಸ್ಸು ತಂದಿದ್ದರೆ ನನ್ನನ್ನು ಯಶಸ್ವೀ ಕಲಾವಿದನೆಂದುಕೊಳ್ಳಬಹುದಾಗಿತ್ತು. ಖರ್ಚಾಗದ, ಒಂದಿಷ್ಟೂ ಬೆಲೆ ಇರದ ನನ್ನ ಚಿತ್ರಗಳಿಗಾಗಿ ಥಿಯೋನ ಹಣ ಹಿಂಡುವುದು ತಪ್ಪುತ್ತಿತ್ತು. ಥಿಯೋನ ಬಳಿ ಮತ್ತೆ ಹಣ ಕೇಳಲು ಎಂತಹುದೋ ಸಂಕೋಚ. ಬರೀ ಕಾಫಿಯಲ್ಲಿ ದಿನ ಕಳೆದದ್ದಿದೆ. ಮಧ್ಯಾಹ್ನ ಒಣ ಬ್ರೆಡ್ ಒಂದಿಷ್ಟು ತಿಂದಿದ್ದರೆ ರಾತ್ರಿ ಹಾಗೆಯೇ ಮಲಗಿದ್ದಿದೆ. ಹಾಗಿದ್ದೂ ನನಗೆ ಬಣ್ಣಗಳು ಬೇಕಿತ್ತು. ಬಣ್ಣಗಳಿಗಾಗಿ ಥಿಯೋನ ಕಾಡುವುದು, ಪೀಡಿಸುವುದು ತಪ್ಪಿರಲಿಲ್ಲ. ಮತ್ತೆ ಥಿಯೋ ಹಣಕ್ಕಾಗಿ ಪರದಾಡುವ ಬಗ್ಗೆ ಚಡಪಡಿಸುತ್ತಿದ್ದಂತೆ ಮನಸ್ಸಿನ ಶಾಂತಿ ಪೂರಾ ಕದಡಿ ಬಗ್ಗಡವಾಗುತ್ತಿತ್ತು. ಇಂಥ ಹತಾಶೆಯ ಸ್ಥಿತಿಯಲ್ಲೂ ಕೆಲವೊಮ್ಮೆ ಭರವಸೆ ಆತ್ಮವಿಶ್ವಾಸ ಮೂಡಿದ್ದಿದೆ. ನಮಗೆ ಗೆಲುವಿದೆ… ಇದ್ದೇ ಇದೆ… ಈ ಚಿತ್ರಗಳ ದನಿ ಈ ಜನಕ್ಕೆ ಎಂದಾದರೂ ಕೇಳಿಸೀತು. ಆದರೆ ಆ ನಮ್ಮ ಗೆಲುವನ್ನು ಕಾಣಲು ನಾವು ಬದುಕಿರುತ್ತೇವೆಯೇ ಎಂಬ ಅನುಮಾನ.
ದಿನಗಳು ಉರುಳಿದವು. ವ್ಯತ್ಯಾಸವಿಲ್ಲದ ಏಕಾಂಗಿ ದಿನಗಳು. ನನ್ನ ಹೃದಯದಲ್ಲೀಗ ಪ್ರೀತಿಯ ಹಂಬಲವಿರಲಿಲ್ಲ. ಕಳಕೊಂಡ ಹೃದಯಗಳ ಎಣಿಕೆ ತಪ್ಪಿತ್ತು. ಇಲ್ಲಿಯ ಸೂಳೆಕೇರಿಗಳಿಗೆ ಹೋದೆ. ಸುಖದ ಕ್ಷಣಗಳನ್ನು ಹುಡುಕಿ ಅಲ್ಲ, ದೇಹ-ಮನಸ್ಸುಗಳ ಆಸೆಗಳೆಲ್ಲ ಸತ್ತಿದ್ದವು. ನನ್ನಲ್ಲೊಂದಿಷ್ಟು ಅನುಕಂಪವನ್ನು ತೋರುವ ಆ ಹುಡುಗಿ, ನನ್ನ ಮಾತುಗಳನ್ನಿಷ್ಟು ಸಮಾಧಾನದಿಂದ ಕೇಳುವ ಆ ಹುಡುಗಿ… ಬೇಕೆನ್ನಿಸುತ್ತಿತ್ತು. ಮಾನವ ಸಂಪರ್ಕವೇ ಇಲ್ಲದೆ ಬದುಕುವ ಬಗೆ ಹೇಗೆ? ರೂಪದರ್ಶಿಗಳಿಗೆ ಹಣ ಸುರಿಯಲಾರದ ನಾನು ಈ ರಾತ್ರಿ ಬದುಕಿನ ಬಾಲೆಯರಲ್ಲಿ ನನ್ನ ಕ್ಯಾನ್ವಾಸ್ಗೆ ಜೀವ ತುಂಬಲು ಬೇಡಿಕೊಂಡೆ. ಗಿಡ-ಮರ-ರಾತ್ರಿ ನಕ್ಷತ್ರಗಳನ್ನು, ನದಿಯ ಬದಿಯ ದೋಣಿಗಳನ್ನು ಎಷ್ಟೊಂದು ಬಿಡಿಸಲಿ, ನನ್ನ ಕ್ಯಾನ್ವಾಸ್ಗಳೂ ಹಸಿದಿದ್ದವು, ಮನುಷ್ಯ ಸ್ಪರ್ಶಕ್ಕೆ.
ನನ್ನ ಕೆಲಸ ಹೆಚ್ಚಿತು. ಆಹಾರದ ಕೊರತೆ ಹಾಗೇ ಸಾಗಿತ್ತು. ಏಕೋ ಒಳಗೆಲ್ಲಾ ಎಂತಹುದೋ ತಳಮಳ, ನರಗಳ ತುಡಿತ. ಇದೀಗ ಧಮನಿಗಳಲ್ಲಿ ಹುಚ್ಚು ಹೊಳೆಯಾಗಿ ಹರಿದ ರಕ್ತವೆಲ್ಲಾ ಹಿಂಗಿ ಖಾಲಿಯಾದಂಥ ಭಾವ. ದೈಹಿಕವಾಗಿ ಪೂರಾ ಸವೆದುಹೋಗಿದ್ದೆ. ಮಾನಸಿಕವಾಗಿ ಛಿದ್ರವಾಗಿದ್ದೆ. ಚಿತ್ರಿಸುವುದು ಸೃಷ್ಟಿಸುವುದು ನನಗೆ ಉಸಿರಿಗಿಂತ ಹೆಚ್ಚು ಅನಿವಾರ್ಯವಾಗಿತ್ತು. ದೈಹಿಕವಾಗಿ ಸೃಷ್ಟಿಸುವ ಬಗೆ ಇಲ್ಲದಾಗ ಬೌದ್ಧಿಕ ಸೃಷ್ಟಿ ತೀವ್ರವಾಗುವುದೆ? ಇಷ್ಟು ಉತ್ಕಟವಾಗಬೇಕೆ? ಪಾಪ ಥಿಯೋ ನನಗೆ ಹಣ ಒದಗಿಸಲು ಅದೆಷ್ಟು ಬಗೆಯಲ್ಲಿ ದುಡಿದನೋ. ‘ಇಂಪ್ರೆಷನಿಸ್ಟ್’ಗಳ ಬೆಳಕಿಗೆ ತರಲು ಹೆಣಗಾಡಿದ. ಕಂಪನಿಯ ಮಾಲೀಕರ ಕೋಪಕ್ಕೂ ಗುರಿಯಾದ.
ಹಗಲೆಲ್ಲಾ ಉರಿವ ಸೂರ್ಯನ ಅಡಿ. ಭೋರಿಡುವ ಗಾಳಿಯ ಮಧ್ಯೆ ಛಲ ಬಿಡದೆ ಚಿತ್ರಿಸುವ ನಾನು, ಆರ್ಲೆಯ ಜನಕ್ಕೆ ವಿಚಿತ್ರವಾಗೆ ಕಂಡಿದ್ದೆ. ಇಲ್ಲಿಯ ಗಾಳಿ ರೋಸದೆ ಬೀಸಿಬೀಸಿ ಭೋರಿಡುವ ಗಾಳಿ, ಈ ನೆಲದ್ದಲ್ಲವೆಂಬಂತೆ ಘೂಳಿಡುವ ಗಾಳಿ, ನನ್ನೆದೆಯ ಉದ್ವೇಗವನ್ನು ನನ್ನ ಧಮನಿಗಳಲ್ಲಿ ರಕ್ತದೊತ್ತಡವನ್ನು ಇಮ್ಮಡಿಸುತ್ತಿತ್ತು. ನರಗಳಲ್ಲಿ ವಿಚಿತ್ರ ತುಡಿತ.
ಸೌಜನ್ಯ : ನವಕರ್ನಾಟಕ ಪಬ್ಲಿಕೇಷನ್ಸ್
ಇದನ್ನೂ ಓದಿ : Television Presenter : ನಾ. ಸೋಮೇಶ್ವರರು ಇಂದಿಗೂ ಜೋಪಾನವಾಗಿಟ್ಟುಕೊಂಡ ಆ ಪುಸ್ತಕ? ಥಟ್ ಅಂತ ಹೇಳಿ!
Published On - 11:08 am, Thu, 16 December 21