New Novel : ಅಚ್ಚಿಗೂ ಮೊದಲು : ಸಂಯುಕ್ತಾ ಪುಲಿಗಲ್ ಅವರ ‘ಆಪರೇಷನ್ ಬೆಳಕಿನ ಕಿಡಿಗಳು’ ನಾಳೆ ಬಿಡುಗಡೆ

Future : ‘ಪಕ್ಕದ ಮನೆಯ ಪ್ರಸಾದನು ತನ್ನ ಓರಗೆಯವನು. ಶೇಕಡಾ ತೊಂಭತ್ತು ಅಂಕಗಳನ್ನು ಗಳಿಸಿ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐ.ಟಿಗೆ ಸೇರಿದ್ದ. ಇನ್ನು ಕೇವಲ ನಾಲ್ಕು ವರ್ಷಗಳಲ್ಲಿ ಪ್ರಸಾದನಿಗೆ ಒಂದು ಲಕ್ಷ ಸಂಬಳ ಬರುವ ಕೆಲಸ, ವಿದೇಶ ಪ್ರಯಾಣ. "ಆದರೆ ನನಗೆ?" ಭವಿಷ್ಯದ ಅರಿವಿಲ್ಲದ ಪ್ರದೀಪ ಸುಮ್ಮನೆ ಕಣ್ಣು ಮುಚ್ಚಿದ.‘

New Novel : ಅಚ್ಚಿಗೂ ಮೊದಲು : ಸಂಯುಕ್ತಾ ಪುಲಿಗಲ್ ಅವರ ‘ಆಪರೇಷನ್ ಬೆಳಕಿನ ಕಿಡಿಗಳು’ ನಾಳೆ ಬಿಡುಗಡೆ
ಲೇಖಕಿ ಸಂಯುಕ್ತಾ ಪುಲಿಗಲ್
Follow us
|

Updated on:Sep 14, 2021 | 4:11 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಆಪರೇಷನ್ ಬೆಳಕಿನ ಕಿಡಿಗಳು (ಕಿರು ಕಾದಂಬರಿ) ಲೇಖಕರು : ಸಂಯುಕ್ತಾ ಪುಲಿಗಲ್ ಪುಟ : 172 ಬೆಲೆ : 225 ರೂ. ಮುಖಪುಟ ವಿನ್ಯಾಸ : ಪೂರ್ವಿ ಅಥಣಿ ಪ್ರಕಾಶನ : ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈ.ಲಿ

ಸಂಯುಕ್ತಾ ಪುಲಿಗಲ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವೀಧರರಾದ ಇವರು, ‘ಪರ್ವತದಲ್ಲಿ ಪವಾಡ’ ಮತ್ತು ‘ರೆಬೆಲ್ ಸುಲ್ತಾನರು’ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.  ‘ಲ್ಯಾಪ್​ಟಾಪ್​ ಪರದೆಯಾಚೆಗೆ’ ಅಂಕಣ ಬರಹ ಪುಸ್ತಕವಾಗಿ ಪ್ರಕಟವಾಗಿದೆ. ಇದೀಗ ಆಪರೇಷನ್ ಬೆಳಕಿನ ಕಿಡಿಗಳು ಕಿರು ಕಾದಂಬರಿ ನಾಳೆ ಸಂಜೆ 6ಕ್ಕೆ ಆನ್​ಲೈನ್​ನಲ್ಲಿ ಬಿಡುಗಡೆಗೊಳ್ಳಲಿದೆ.

ಇಂಥ ಇಪ್ಪತ್ತೊಂದನೇ ಶತಮಾನದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿಕೊಂಡು ಒಂದು ಒಳ್ಳೆಯ ಥ್ರಿಲ್ಲರ್ ಕಾದಂಬರಿಯನ್ನು ಹೊರತರಬೇಕೆನ್ನಿಸಿದಾಗ ನಾವು ಸಂಪರ್ಕಿಸಿದ್ದು ಕನ್ನಡದ ಹೊಸಗಾಲದ ಬರಹಗಾರ್ತಿಯಾದ ಸಂಯುಕ್ತಾ ಪುಲಿಗಲ್ ಅವರನ್ನು. ಅವರು ಈಗಾಗಲೇ ಒಬ್ಬ ಸಶಕ್ತ ಅನುವಾದಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಅನುವಾದಗಳು ಸಪ್ಪೆಯಾದ ಭಾಷಾಂತರವಾಗದೆ ತಾವೇ ತಾವಾಗಿ ಸೃಷ್ಟಿಶೀಲ ಕೃತಿಗಳಾಗಿವೆ. ಓದುಗರ ಮನಸ್ಸನ್ನು ಮುಟ್ಟಿವೆ, ಗೆದ್ದಿವೆ. ನಾವು ಅವರೊಡನೆ ಹೊಸ ಪುಸ್ತಕದ ಬಗ್ಗೆ ಮಾತು ತೆಗೆದಾಗ, ಆಶ್ಚರ್ಯವೆನಿಸುವಂತೆ ಅವರೂ ಕೂಡ ಇಂಥ ಯಂಗ್ ರೀಡರ್ಸ್​ಗಾಗಿ ಇಂಗ್ಲಿಷಿನ ಎನಿಡ್ ಬ್ಲೈಟನ್ ಅವರ ಫೇಮಸ್ ಫೈವ್ ರೀತಿಯ ಪುಸ್ತಕಗಳನ್ನು ಕನ್ನಡದಲ್ಲಿ ನಮ್ಮದೇ ಸೊಗಡಿನಲ್ಲಿ ತರಬೇಕು ಎಂದುಕೊಂಡಿದ್ದಾಗಿ ಹೇಳಿದರು. ಅಲ್ಲಿಗೆ ನಮ್ಮ ಗುರಿಗಳು ಒಂದುಗೂಡಿದವು. ಹೀಗೆ ಹುಟ್ಟಿದ ಕಾದಂಬರಿಯೇ ‘ಆಪರೇಶನ್ ಬೆಳಕಿನ ಕಿಡಿಗಳು’. ಪವಮಾನ್ ಅಥಣಿ, ಮೈಲ್ಯಾಂಗ್ ಪ್ರಕಾಶಕರು

ಕಲಾ ವಿದ್ಯಾರ್ಥಿಯಾಗಿ ಅನುಭವಿಸಿದ್ದ ನನ್ನ ತೊಳಲಾಟಗಳು, ತೊಂದರೆಗಳು, ಇಂದಿನ ಸಮಾಜದಲ್ಲಿ ಬಹಳ ಸುಲಭವಾಗಿ ದೊರೆಯುವ ‘ಕಪ್ಪು-ಬಿಳಿ’ ಹಣೆಪಟ್ಟಿಗಳು, ಯಾವ ನಿಲುವುಗಳೂ, ಸಿದ್ಧಾಂತಗಳೂ ಆಳವಾಗಿ ಗ್ರಹಿಕೆಯಾಗದೆ, ಗುಂಪಿನಲ್ಲಿ ಒಂದಾಗುವ ದನಿಯ ಕಾಲೇಜು ಪ್ರಾಯದ ಮಕ್ಕಳು, ಕಾಲೇಜು ಬದುಕಿನಲ್ಲಿ ಅದ್ದಿ ತೇಲುವ ಅನುಭವ ಕಥನಗಳು ಎಲ್ಲವನ್ನೂ ಒಟ್ಟುಗೂಡಿಸಿ ನನ್ನ ಬರವಣಿಗೆಯ ತುಡಿತವನ್ನು ತಣಿಸಿಕೊಳ್ಳಬೇಕು ಎಂಬ ಆಲೋಚನೆಯಲ್ಲಿದ್ದೆ. ಇಂಗ್ಲಿಷ್ ಭಾಷೆಯಂತೆ ಹದಿಹರೆಯದ ಮಕ್ಕಳಿಗಾಗಿ ದೊರೆಯುವ ಸಾಹಸದ, ರೋಚಕದ, ನಿಗೂಢ ಕಥೆಗಳು ಕನ್ನಡದಲ್ಲಿ ಸುಲಭವಾಗಿ ಸಿಗಲಾರದು ಎಂಬ ಅನಿಸಿಕೆಯೂ ಆ ಆಲೋಚನೆಗೆ ದನಿಗೂಡಿಸಿತ್ತು. ಹಲವರಿಂದ ಇದೇ ಅಭಿಪ್ರಾಯವನ್ನೂ ಕೇಳಿ ತಿಳಿದಿದ್ದೆ. ಅದೇ ಸಂದರ್ಭದಲ್ಲಿ ನನ್ನೆಲ್ಲ ಆಲೋಚನೆಗಳು ಒಟ್ಟುಗೂಡಿ ಮನದಾಳದಲ್ಲಿ ಮೂಡಿದ ವಿವಿಧ ಅಲೆಗಳ ತರಂಗಗಳು ಇಡಿಯಾಗಿ ಹೊಮ್ಮುತ್ತ ‘ಆಪರೇಷನ್ ಬೆಳಕಿನ ಕಿಡಿಗಳು’ ಕಣ್ಬಿಟ್ಟಿತು. ಸಂಯುಕ್ತಾ ಪುಲಿಗಲ್, ಲೇಖಕಿ, ಅನುವಾದಕಿ

(ಭಾಗ – 1 )

ಕನ್ನಡಿ ಮುಂದೆ ನಿಂತು ಕಾಡಿಗೆಯನ್ನು ತೀಡಿಕೊಳ್ಳುತ್ತಿದ್ದ ಮಾಧುರಿಯ ಉತ್ಸುಕತೆಯನ್ನು ಗಮನಿಸುತ್ತಿದ್ದ ಅವಳ ತಂದೆಯ ಕಣ್ಣುಗಳಲ್ಲಿ ಸಂತೋಷ ತುಂಬಿತ್ತು. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಬೆಳೆದ ಮಗು ಇಂದು ಸ್ವತಂತ್ರವಾಗಿ ತನ್ನ ಕಾಲ ಮೇಲೆ ತಾನು ನಿಂತಿದ್ದಾಳೆ ಎನ್ನುವುದು ಅವರ ನೆಮ್ಮದಿಗೆ ಕಾರಣ. “ಆಲ್ ದಿ ಬೆಸ್ಟ್ ಮಗಳೇ, ಗೆದ್ದು ಬಾ” ಎನ್ನುತ್ತಾ ಬಾಗಿಲಿಗೆ ಒರಗಿ ನಿಲ್ಲುತ್ತಾರೆ. ಅಪ್ಪನ ದನಿ ಕೇಳಿ ಕನ್ನಡಿಯ ಪ್ರತಿಬಿಂಬದಲ್ಲೇ ಇಣುಕಿ “ಥ್ಯಾಂಕ್ಸ್ ಅಪ್ಪಾ. ನಾನೇನು ಯುದ್ಧಕ್ಕೆ ಹೊರಟಿದೀನಾ ಗೆದ್ದು ಬಾ ಅಂತೀಯಲ್ಲಾ?”, ಎಂದು ಮಾಧುರಿ ನಗುತ್ತಾ ಬಾಚಣಿಗೆಯನ್ನು ತೆಗೆದುಕೊಂಡು ತನ್ನ ಕೆಲಸವನ್ನು ಮುಂದುವರೆಸುತ್ತಾಳೆ.

ಮಾಧುರಿಯ ತಂದೆ ಅನಂತರಾಮಯ್ಯನವರು ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ಜಯನಗರದ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಜೆಪಿನಗರದಲ್ಲಿ ನೆಲೆಸಿದ್ದ ಮನೆಯೊಂದರ ಹೊರತು ಹೆಚ್ಚಿಗೆ ಆಸ್ತಿ ಮಾಡದೆ ಸಮಾಜ ಸೇವೆಯಲ್ಲಿ ತೊಡಗುವುದೇ ಅವರಿಗೆ ಇಷ್ಟದ ಕೆಲಸ. ಮಗಳನ್ನು ಬದುಕಿನಲ್ಲಿ ಒಬ್ಬ ಸಾರ್ಥಕ ವ್ಯಕ್ತಿಯಾಗಿ ಬೆಳೆಸಬೇಕು ಎಂಬುದು ಅನಂತರಾಮಯ್ಯನವರ ಆದರ್ಶ. ಅದೇ ಆಸೆಯಲ್ಲಿ ಸ್ವಂತಿಕೆ, ಜೀವನಕಲೆಗಳನ್ನು ತಮಗೆ ಸಾಧ್ಯವಾದಷ್ಟೂ ಧಾರೆ ಎರೆಯಲು ಪ್ರಯತ್ನಿಸಿರುತ್ತಾರೆ. ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿಸಿ ಭಾಷಾಪ್ರೇಮ, ವೈಜ್ಞಾನಿಕ ದೃಷ್ಟಿಕೋನ, ವೈಚಾರಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಎಲ್ಲವನ್ನೂ ಪರಿಚಯಿಸಿರುತ್ತಾರೆ.

ಇಂದು ಆ ಎಲ್ಲ ಗುಣಗಳೂ ಮೌನವಾಗಿ ಅವಳೊಳಗೆ ಬೆಳೆಯುತ್ತಾ ಮಗಳು ಅರಳಿ ಭುಜದೆತ್ತರಕ್ಕೆ ಬೆಳೆದು ನಿಂತದ್ದನ್ನು ಕಂಡು ಅವರಿಗೆ ಹೆಮ್ಮೆ ಎನಿಸಿ ಮೌನವಾಗಿ ಅವಳನ್ನೇ ನೋಡುತ್ತಿರುತ್ತಾರೆ. ಅಮ್ಮನ ಛಾಯೆ ಮಗಳಲ್ಲಿ ಕಂಡು ಭಾವುಕರಾಗುತ್ತಾರೆ. ತಂದೆಯ ಪ್ರತಿಕ್ರಿಯೆಗೆ ಕಾಯುತ್ತಾ ತಲೆಗೂದಲಿಗೆ ಕ್ಲಿಪ್ ಹಾಕುತ್ತಿದ್ದ ಮಾಧುರಿ, ಏನೂ ಉತ್ತರ ಬಾರದ್ದರಿಂದ ತಿರುಗಿ ತಂದೆಯ ಕಡೆ ನೋಡುತ್ತಾಳೆ. ಲಹರಿಯಲ್ಲಿ ಹನಿಗಣ್ಣಾಗಿದ್ದ ಅಪ್ಪ ಕಣ್ಣು ಹೊರಳಿಸಿ, “ಹೌದು ಮತ್ತೆ. ಜೀವನದ ಪ್ರತಿಯೊಂದು ಹೊಸ ಘಟ್ಟಾನೂ ಒಂದು ಛಾಲೆಂಜ್. ನೀನು ಈವತ್ತು ಕಾಲೇಜು ಮೆಟ್ಟಿಲು ಹತ್ತಾಯಿದ್ದೀಯಾ. ಇದನ್ನು ಬರೀ ಪಾಸ್ ಮಾಡಿ ಮುಗಿಸೋದಲ್ಲ. ನಿನ್ನ ಗೆಲುವಿನ ದಾರಿಗೆ ಇದು ಮೊದಲ ಹೆಜ್ಜೆ ಅಂತ ನಂಬಿ ಮುಂದಕ್ಕೆ ಹೆಜ್ಜೆ ಇಡಬೇಕು. ಅದಕ್ಕೇ…” ಎಂದು ಮುಂದುವರೆಸುತ್ತಾರೆ. ಅಪ್ಪನ ಆದರ್ಶಗಳ ಪರಿಚಯವಿದ್ದ ಮಾಧುರಿ ನಕ್ಕು, ಅವರ ಮಾತನ್ನು ನಿಲ್ಲಿಸಿ, ಕೈಹಿಡಿದು “ಶೂರ್ ಅಪ್ಪಾ. ಐ ನೋ ವಾಟ್ ಯು ಮೀನ್. ಅದಕ್ಕೇ ಅಲ್ವಾ ಯಾರು ಏನು ಹೇಳಿದರೂ ನಾನು ನನಗೆ ಬೇಕಾದ್ದ ಓದನ್ನೇ ಡಿಗ್ರೀಗೆ ತೊಗೊಂಡಿದ್ದು” ಎಂದು ಹೇಳಿ ಕಾಲೇಜಿಗೆ ಹೊರಡುತ್ತಾಳೆ. ಮಗಳ ಕಣ್ಣಿನ ಹೊಳಪು ನೋಡಿದ ತಂದೆಗೆ ಮೆಚ್ಚುಗೆಯಾಗುತ್ತದೆ. ಮಗಳು ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಇದ್ದರೂ ಇಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ನೆನೆದು ಕ್ಷಣ ಆತಂಕವಾಗುತ್ತದೆ. “ಜೋಪಾನ ಮಗಳೇ” ಎನ್ನುತ್ತಾ ಮಾಧುರಿ ಹೊರಟ ಗಾಡಿಯತ್ತ ಕೆಲ ಕ್ಷಣಗಳು ದಿಟ್ಟಿಸಿ ತಮ್ಮ ಕೆಲಸದತ್ತ ಹೊರಳುತ್ತಾರೆ.

* ಇಂಜಿನಿಯರಿಂಗ್ ಸೀಟು ಸಿಕ್ಕಿದ್ದರೂ ಕಲಾ ವಿಭಾಗದಲ್ಲಿ ತನ್ನ ಆಸಕ್ತಿ ಕಂಡುಕೊಂಡ ಮಾಧುರಿ, ಪಿಯುಸಿ ಪರೀಕ್ಷೆಗೆ ಮುನ್ನವೇ ತಂದೆಗೆ ತಿಳಿಸಿದ್ದಳು. ನೆಂಟರಿಷ್ಟರೆಲ್ಲಾ ತಂದೆ ಮಗಳಿಗೆ ಬುದ್ಧಿವಾದ ಹೇಳಿದ್ದರು. ಯಾವ ಲೆಕ್ಕಕ್ಕೂ ಇಲ್ಲದ ಬಿ.ಎ ಓದಿಸಬೇಡ ಎಂದು ಉಪದೇಶ ಮಾಡಿದ್ದರು. “ನೀನು ಡಾಕ್ಟರಾಗಿ ನಿನ್ನ ಮಗಳನ್ನು ಆರ್ಟ್ ಓದಿಸ್ತೀಯಾ”, ಎಂಬುದು ಬಹುಪಾಲು ಮಂದಿಯ ಅಭಿಪ್ರಾಯವಾಗಿತ್ತು. ಬಿ.ಎ ಓದಿದರೆ ಗಂಡು ಸಿಗುವುದಿಲ್ಲ ಎಂಬ ಕಿವಿಮಾತೂ ದೊರಕಿತ್ತು. ಸಮಾರಂಭಗಳಿಗೆ ಹೋದರೆ “ಬಿ.ಎ ನೇ…?” ಎಂದು ಕಣ್ಣರಳಿಸಿ ರಾಗತೆಗೆಯುತ್ತಿದ್ದರು. ಆ ಯಾವ ಮಾತುಗಳನ್ನೂ ಕೇಳದೆ, ಮಾಧುರಿಯ ಮನಸ್ಸನ್ನು ಕೇಳಿದ್ದರು ಅವಳ ತಂದೆ. ತನ್ನ ನೆರೆಹೊರೆಯವರ, ನೆಂಟರ ಮಾತುಗಳನ್ನು ಕೇಳಿ ನೊಂದಿದ್ದ ಮಾಧುರಿನ್ನು ಕೂರಿಸಿಕೊಂಡು, “ಮಗು ಒಬ್ಬ ಡಾಕ್ಟರ್ ಆಗಿ ಬದುಕಿನ ಸುಖ ದುಃಖಗಳನ್ನ ಸಾಕಷ್ಟು ನೋಡಿದೀನಿ. ಎಲ್ಲಕ್ಕಿಂತ ಸಂತೋಷದ, ನೆಮ್ಮದಿಯ ಬದುಕನ್ನು ನಡೆಸುವುದು ಮುಖ್ಯ ಅಂತ ಚೆನ್ನಾಗಿ ಅರ್ಥವಾಗಿದೆ. ನಾನು ನಿನ್ಜೊತೆ ಇದೀನಿ. ನಿನ್ನ ಮನಸ್ಸಿಗೆ ಬಂದದ್ದನ್ನೇ ಓದು, ಆದರೆ ನೀನು ಏನೇ ಮಾಡಿದರೂ ಅದರಲ್ಲಿ ಪೂರ್ತಿ ಮನಸ್ಸಿಟ್ಟು ಮಾಡು. ನಿನ್ನ ಇಷ್ಟದ ಓದನ್ನು ಗಂಭೀರವಾಗಿ ತೊಗೊಂಡು ಅದನ್ನು ಬದುಕಿಗೆ ಅನ್ವಯಿಸಿಕೋ. ಇಂತಹ ಸಬ್ಜೆಕ್ಟ್ ಒಳ್ಳೆಯದು ಇಂಥದ್ದು ಪ್ರಯೋಜನವಿಲ್ಲ ಅನ್ನೋದೆಲ್ಲಾ ಸುಳ್ಳು ನಂಬಿಕೆಗಳು. ಒಂದು ಸಮಾಜದ ಬೆಳವಣಿಗೆಗೆ ಎಲ್ಲ ರೀತಿಯ ಜ್ಞಾನ ಬಹಳ ಮುಖ್ಯವಾಗುತ್ತದೆ. ಈ ಮಿಥ್ ಗಳನ್ನು ಒಡೆಯುವಂತೆ ನೀನು ಬೆಳಿ” ಎಂದು ಅವಳ ತಂದೆ ಹುರಿದುಂಬಿಸಿದ್ದರು.

acchigoo modhalu samyuktha puligal

ಸೌಜನ್ಯ : ವೆಕ್​ಟೀಝಿ

(ಭಾಗ 2)

“ದೀಪೂ, ಹೇಗಿತ್ತೋ ಕಾಲೇಜಿ ಮೊದಲ ದಿನ?” ಜಪಸರವನ್ನು ಕೈಬೆರಳುಗಳಲ್ಲಿ ಎಣಿಸುತ್ತಾ ಕೂತಿದ್ದ ಗುಂಡಜ್ಜಿ ಪ್ರದೀಪ ಮನೆ ಸೇರಿದ ಕೂಡಲೇ ಕೇಳಿದರು. ಏನೂ ಉತ್ತರಕ್ಕೆ ಕಾಯದೆ, “ಹೋಗು ಮೊದಲು ಕೈಕಾಲು ತೊಳೆದುಕೊಂಡು ಬಾ. ಹಾಳಾದ್ದು ಏನೇನು ಮುಟ್ಟಿರ್ತೀಯೋ” ಎಂದು ಜಪಸರದ ಮಣಿಗಳ ಎಣಿಕೆಯನ್ನು ಮುಂದುವರೆಸಿದರು. ಕೈಕಾಲು ತೊಳೆದು ದೇವರಿಗೆ ನಮಸ್ಕರಿಸಿ ಬಂದು ಕೂತ ಪ್ರದೀಪನಿಗೆ ಸೀತಮ್ಮ ಕಾಫಿ ತಂದು ಕೊಟ್ಟರು. ಅಲ್ಲೇ ಎದುರಿಗೆ ಕುರ್ಚಿಯಲ್ಲಿ ದಿನಪತ್ರಿಕೆ ಓದುತ್ತಿದ್ದ ಕೃಷ್ಣಮೂರ್ತಿಗಳು ಪತ್ರಿಕೆಯನ್ನೊಮ್ಮೆ ಸರಿಸಿ ಪ್ರದೀಪನತ್ತ ನೋಡಿ ಮತ್ತೆ ಪುಟಗಳ ಹಿಂದೆ ಸರಿದು, “ಏನು ಸಾಹೇಬ್ರು ಈವತ್ತು ಕಡೆದು ಕಟ್ಟೆ ಹಾಕಿದ ಕಾಲೇಜು ಹೇಗಿತ್ತೋ! ಓದುಗೀದೋರು ಯಾರಾದ್ರು ಇದಾರೋ? ಅಥವಾ ಪೋಲಿ ಅಲೆಯೋರೇನೋ ಎಲ್ರೂ ಅಲ್ಲಿ?” ಎಂದು ವ್ಯಂಗ್ಯವಾಡಿದರು. “ಕಾಲೇಜು ಚೆನ್ನಾಗಿದೆ. ಕ್ಲಾಸಿನವರೂ ಚೆನ್ನಾಗಿದಾರೆ” ಎಂದಷ್ಟೇ ಹೇಳಿ ಒತ್ತರಿಸಿ ಬರುತ್ತಿದ್ದ ಕೋಪವನ್ನು ಹೊರ ಸಿಡಿಸುವಂತೆ ಚಿಮ್ಮಿ ಎದ್ದು ಹೊರಟುಹೋದ. ಕೃಷ್ಣಮೂರ್ತಿಗಳು ಅವನಿಗೆ ಕೇಳಿಸುವಂತೆ ಜೋರಾಗಿ, “ನೋಡೇ ಸೀತಾ. ನಿನ್ನ ಮಗನ ಧಿಮಾಕು. ದೊಡ್ಡೋನಾಗೋದ. ಇನ್ನು ನೀನುಂಟು, ಅವನುಂಟು. ನಮ್ಮನ್ನು ನಡುನೀರಿಗೆ ಬಿಡೋದೇ ಅವನ ಕೆಲಸ. ಗೋವಿಂದಾ…” ಎಂದು ರೇಗಿ, ನೋಯುವ ಸೊಂಟವನ್ನು ಹಿಡಿದು ಕುಂಟುತ್ತಾ ಎದ್ದು ಸಂಧ್ಯಾವಂದನೆಗೆಂದು ನಡೆದರು. ಅಪಾರ್ಟ್ಮೆಂಟು, ಕಟ್ಟಡಗಳ ಮೊರೆ ಹೋಗಿ ಹೊಸ ರೂಪ ಪಡೆದುಕೊಳ್ಳುತ್ತಿರುವ ನಗರದ ಬಸವನಗುಡಿಯಲ್ಲಿ ಉಳಿದಿರುವ ಕೆಲವೇ ಹಳೇ ಕಾಲದ ಸಾಂಪ್ರದಾಯಿಕ ಮನೆಗಳಲ್ಲಿ ಕೃಷ್ಣಮೂರ್ತಿಗಳ ಮನೆಯೂ ಒಂದಾಗಿತ್ತು. ಗೋಡೆಯ ಸುಣ್ಣ ಸವೆದು, ಬಡತನವನ್ನು ಬಿಂಬಿಸುತ್ತಾ ಪಳೆಯುಳಿಕೆಯಂತಿದ್ದ ಮನೆಯಾದರೂ ಹಳೆಯ ಕಾಲದ ವೈಭವಕ್ಕೆ ಮೂಕ ಸಾಕ್ಷಿಯಂತಿತ್ತು.

ಹಿತ್ತಲಿನ ಬಾವಿಗೆ ಒರಗಿ ಕೂತಿದ್ದ ಪ್ರದೀಪನ ಬಳಿಗೆ ಸೀತಮ್ಮ ಒಂದು ಬಾಳೆಹಣ್ಣನ್ನು ತಂದುಕೊಟ್ಟು, “ಮಗೂ ಬೆಳಗ್ಗಿಂದ ಹಸ್ಕೊಂಡಿದೀಯಾ. ತಿನ್ನು” ಎಂದು ಬೆನ್ನು ಸವರುತ್ತಾ, “ನಿಮ್ಮಪ್ಪನಿಗೆ ನಿಂದೇ ಚಿಂತೆ. ಅವರಿಗೆ ನೆನ್ನೆ ರಾತ್ರಿ ನಿದ್ದೆಯಿಲ್ಲ. ನಿನ್ನ ಕಾಲೇಜು ಹೇಗಿರತ್ತೋ ಏನೋ ಅಂತ. ಅವರ ಮಾತಿಗೆ ನೀನು ಬೇಸರಿಸಿಕೋಬೇಡಪ್ಪಾ. ಈ ಸರ್ತಿ ಚೆನ್ನಾಗಿ ಓದು” ಎನ್ನುತ್ತಾ ಬೆನ್ನುಸವರಿ ಹೊರಟುಹೋದರು. ಒಂದು ಕಡೆ ಕಾಲೇಜಿನ ರ‍್ಯಾಗಿಂಗ್, ಮತ್ತೊಂದು ಕಡೆ ಅಪ್ಪನ ಹೀಯಾಳಿಕೆ. ಹೊಟ್ಟೆ ಹಸಿದು ಬೆಂಕಿ ಬಿದ್ದಿದ್ದರೂ ಅಪ್ಪನಿಗಾಗಿಯೇ, ಅಪ್ಪನ ನಂಬಿಕೆಗಳನ್ನು ಎತ್ತಿಹಿಡಿಯುವ ಸಲುವಾಗಿಯೇ ಇಡೀ ಕಾಲೇಜು ಮೂರು ಸುತ್ತು ಓಡಿದ್ದು ಎಂಬುದನ್ನು ಅಪ್ಪನ ಬಳಿ ಹೇಗೆ ಹೇಳಲಿ ಎಂದು ಪ್ರದೀಪ ಒಳಗೇ ಮರುಗುತ್ತಿದ್ದ. ಸಂಜೆಗತ್ತಲ ಕೆಂಪು ಪ್ರದೀಪನ ಮೈಯನ್ನು ಪ್ರತಿಫಲಿಸುವಂತೆ ಅವನ ಮೈಯೆಲ್ಲಾ ಉರಿಯುತ್ತಿತ್ತು. ಪಕ್ಕದ ಮನೆಯ ಪ್ರಸಾದನು ತನ್ನ ಓರಗೆಯವನು. ಶೇಕಡಾ ತೊಂಭತ್ತು ಅಂಕಗಳನ್ನು ಗಳಿಸಿ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐ.ಟಿಗೆ ಸೇರಿದ್ದ. ಇನ್ನು ಕೇವಲ ನಾಲ್ಕು ವರ್ಷಗಳಲ್ಲಿ ಪ್ರಸಾದನಿಗೆ ಒಂದು ಲಕ್ಷ ಸಂಬಳ ಬರುವ ಕೆಲಸ, ವಿದೇಶ ಪ್ರಯಾಣ. “ಆದರೆ ನನಗೆ?” ಭವಿಷ್ಯದ ಅರಿವಿಲ್ಲದ ಪ್ರದೀಪ ಸುಮ್ಮನೆ ಕಣ್ಣು ಮುಚ್ಚಿದ. ಗೀತಾ ಮೇಡಂ ಮಾತುಗಳನ್ನು ನೆನೆದು ಸಾಂತ್ವನ ತಂದುಕೊಳ್ಳಲು ಪ್ರಯತ್ನಿಸಿದ. ಹೇಗಾದರೂ ಮಾಡಿ ತಾನು ಚೆನ್ನಾಗಿ ಓದಬೇಕು. ತನ್ನ ಭವಿಷ್ಯ ಕಂಡುಕೊಳ್ಳಬೇಕು ಎಂದು ನಿರ್ಧರಿಸಿದ.

ಈ ಕಾದಂಬರಿಯನ್ನು ಮುದ್ರಣ, ಆಡಿಯೋ, ಇ-ಬುಕ್​ ರೂಪದಲ್ಲಿ ಖರೀದಿಸಲು ಸಂಪರ್ಕಿಸಿ : ಮೈಲ್ಯಾಂಗ್ ಬುಕ್ಸ್)

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ಕಾದಂಬರಿಕಾರ ಗುರುಪ್ರಸಾದ ಕಾಗಿನೆಲೆಯವರ ‘ಕಾಯಾ‘ ನಾಳೆ ಬಿಡುಗಡೆ

Published On - 12:42 pm, Tue, 14 September 21

ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ