Gazal; ಅಚ್ಚಿಗೂ ಮೊದಲು: ಸಂಗಾತ ಪುಸ್ತಕದಿಂದ ‘ಮೈಂ ಅವ್ರ ಮೇರೆ ಲಮ್ಹೆ’ ಮುಕ್ತಾಯಕ್ಕನವರ ಗಝಲ್​ ಸಂಗ್ರಹ ಸದ್ಯದಲ್ಲೇ

| Updated By: Digi Tech Desk

Updated on: Feb 12, 2022 | 4:56 PM

H.S. Mukthayakka : ‘ಅಪ್ಪಟ ಗಝಲುಗಳ ಮಾತೇ ಬೇರೆ. ಅವು ಭಾವ-ನಾದದ ನದಿಗಳಂತೆ, ಹರಿಯುತ್ತಲೇ ಇರುತ್ತವೆ. ಯಾವ ಊರುಗೋಲುಗಳು ಬೇಡ ಅವುಗಳಿಗೆ. ನದಿಯ ಜೀವಂತಿಕೆ, ಮಾರ್ದವ, ಆರ್ತತೆ, ಸೌಂದರ್ಯ, ಸ್ವಚ್ಛಂದತೆ ಎಲ್ಲವೂ ಮಾಂಸಲವಾಗಿ ಓದುಗರನ್ನು ಮುಟ್ಟಿ ಮೀಯಿಸುತ್ತವೆ. ಈ ಎಲ್ಲವೂ ಮುಕ್ತಾಯಕ್ಕನವರ ಗಝಲ್‌ಗಳಲ್ಲಿ ಇವೆ‘ ಡಾ. ಎಂ. ಎಸ್. ಆಶಾದೇವಿ

Gazal; ಅಚ್ಚಿಗೂ ಮೊದಲು: ಸಂಗಾತ ಪುಸ್ತಕದಿಂದ ‘ಮೈಂ ಅವ್ರ ಮೇರೆ ಲಮ್ಹೆ’ ಮುಕ್ತಾಯಕ್ಕನವರ ಗಝಲ್​ ಸಂಗ್ರಹ ಸದ್ಯದಲ್ಲೇ
ಕವಿ ಎಚ್. ಎಸ್. ಮುಕ್ತಾಯಕ್ಕ
Follow us on

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಮೈ ಅವ್ರ ಮೇರೆ ಲಮ್ಹೆ (ಸಮಗ್ರ ಗಝಲುಗಳ ಸಂಕಲನ)

ಲೇಖಕರು : ಎಚ್. ಎಸ್. ಮುಕ್ತಾಯಕ್ಕ

ಪುಟ : 230

ಬೆಲೆ : 270

ಮುಖಪುಟ ವಿನ್ಯಾಸ: ಸೌಮ್ಯ ಕಲ್ಯಾಣಕರ್

ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ

*

ಗಝಲ್ ಪ್ರಕಾರವು ಅತ್ಯಂತ ಆಕರ್ಷಕವಾದುದು. ನಿಜ, ಆದರೆ ಅದು ಎಲ್ಲರಿಗೂ ಒಲಿಯುವುದು ಸಾಧ್ಯವೇ ಇಲ್ಲ. ಆರಂಭದಿಂದ ಕೊನೆಯವರೆಗೂ ತುರೀಯಾವಸ್ಥೆಯ ಅನುರಕ್ತಿಯನ್ನು ಅದು ಬೇಡುತ್ತದೆ. ಸದಾ ಭಾವೋಲಿಪ್ತವಾದ, ಆದರೂ ಹುಸಿಯಾಗದ ಅಪರೂಪದ ಮನಸ್ಥಿತಿಯಿಲ್ಲದಿದ್ದರೆ ಗಝಲುಗಳನ್ನು ಬರೆಯುವುದು ಸಾಧ್ಯವಿಲ್ಲ. ಅಪ್ಪಟ ಗಝಲುಗಳ ಮಾತೇ ಬೇರೆ. ಅವು ಭಾವ-ನಾದದ ನದಿಗಳಂತೆ, ಹರಿಯುತ್ತಲೇ ಇರುತ್ತವೆ. ಯಾವ ಊರುಗೋಲುಗಳು ಬೇಡ ಅವುಗಳಿಗೆ. ನದಿಯ ಜೀವಂತಿಕೆ, ಮಾರ್ದವ, ಆರ್ತತೆ, ಸೌಂದರ್ಯ, ಸ್ವಚ್ಛಂದತೆ ಎಲ್ಲವೂ ಮಾಂಸಲವಾಗಿ ಓದುಗರನ್ನು ಮುಟ್ಟಿ ಮೀಯಿಸುತ್ತವೆ. ಈ ಎಲ್ಲವೂ ಮುಕ್ತಾಯಕ್ಕನವರ ಗಝಲ್‌ಗಳಲ್ಲಿ ಇವೆ ಎಂದೇ ಅವು ಕನ್ನಡದ ಕಾವ್ಯಾಸಕ್ತರನ್ನು ಎಂದಿಗೂ ಸೆಳೆದಿವೆ.

ಎಂ.ಎಸ್.ಆಶಾದೇವಿ, ವಿಮರ್ಶಕಿ

ಎಲ್ಲ ಕನ್ನಡ ಕವಿಗಳಂತೆ ನನ್ನ ಮಗಳು ಎಚ್. ಎಸ್. ಮುಕ್ತಾಯಕ್ಕನೂ ಪ್ರೇಮಗೀತೆಗಳನ್ನು ಬರೆದು ಗಝಲ್ ಎಂದು ಪ್ರಕಟಿಸುತ್ತಿದ್ದಳು. ಆಕೆಗೆ ಅದು ಸರಿಯಲ್ಲವೆಂದು ಹೇಳಿ ಗಝಲ್ ಬಗ್ಗೆ ಅಭ್ಯಾಸ ಮಾಡಿಸಿದೆ. ಬಹು ತೀವ್ರ ಆಕೆ ಗಝಲಿನ ಅಂತಃಸತ್ವವನ್ನು ಅರಿತುಕೊಂಡು ರಚನೆ ಮಾಡತೊಡಗಿದಳು. ಇದರ ಪರಿಣಾಮವಾಗಿ 2002ರಲ್ಲಿ ಆಕೆಯ “ನಲವತ್ತು ಗಝಲ್‌ಗಳು” ಎಂಬ ಶುದ್ಧ ಗಝಲ್‌ಗಳ ಸಂಗ್ರಹ ಪ್ರಕಟವಾಯಿತು. ನನಗೆ ಗೊತ್ತಿರುವಂತೆ ಉರ್ದು ಗಝಲ್‌ಗಳ ಪರಂಪರೆ, ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಕನ್ನಡದಲ್ಲಿ ಶುದ್ಧ ಗಝಲ್‌ಗಳ ಸಂಗ್ರಹ ಪ್ರಕಟವಾದುದು ಮುಕ್ತಾಯಕ್ಕನ ನಲವತ್ತು ಗಝಲ್‌ಗಳ ಸಂಗ್ರಹವೇ ಮೊಟ್ಟಮೊದಲಿನ ಸಂಗ್ರಹ.

ಶಾಂತರಸ, ಕವಿ, ಲೇಖಕ

*

ಗಝಲ್ -1 

ಅರ್ಧರಾತ್ರಿಯಲ್ಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು
ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು
ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು
ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು
ನನ್ನೆರಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ
ಕೊನೆ ಗಳಿಗೆಯಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು
ಇರುಳ ತಂಪಿನಲಿ ನೆನಪಾಯಿತು ಬಿಸಿಯಪ್ಪುಗೆಯ ಒಡನಾಟ ತಪ್ಪಿದ್ದು
ಇನ್ನೊಂದು ಬಟ್ಟಲನು ತುಂಬುವವರಾರೆಂದು ಮಧುಪಾತ್ರೆಯು ಕೇಳಿತು
ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು
ಕೊನೆಯಿಲ್ಲವೆ ‘ಮುಕ್ತಾʼ ಇದೆಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು

*

ಇದನ್ನೂ ಓದಿ : Literary Magazine : ‘ಅಕ್ಷರ ಸಂಗಾತ’ಕ್ಕೆ ನಾಲ್ಕು ತುಂಬಿದ ಹೊತ್ತಿನಲ್ಲಿ

ಸುವರ್ಣಾ ಚೆಳ್ಳೂರರ ‘ಕಂಬದ ಹಕ್ಕಿ’ ನಿಮ್ಮ ಓದಿಗೆ

ಮುಕ್ತಾಯಕ್ಕನವರ ಪ್ರಕಟಿತ ಕೃತಿಗಳು

ಗಝಲ್ 2

ಸಂಜೆಯಾಯಿತು ಸುಮ್ಮನೇಕಿರುವಿ ಹೇಳು ಬಟ್ಟಲು ತುಂಬು ಸಾಕಿ
ಸಂಭ್ರಮಿಸಲಿಕ್ಕಾಗಿಯೇ ಇರುವುದೀ ಇರುಳು ಬಟ್ಟಲು ತುಂಬು ಸಾಕಿ

ನೀನಿಲ್ಲದಿರೆ ಮಧುಶಾಲೆಗೆ ಶೋಭೆಯೇ ಇಲ್ಲೆಂಬರು ಗೆಳೆಯರು
ನಗುತಿವೆ ಬಾನಲಿ ಶಶಿಯೊಡನೆ ತಾರೆಗಳು ಬಟ್ಟಲು ತುಂಬು ಸಾಕಿ

ಯಾವ ನೋವಿನಲ್ಲಿ ಹೇಗೆ ಇರುವೆನೆಂದು ಈ ಜಗಕೇನು ಗೊತ್ತು
ಯಾರಿಗೂ ಲೆಕ್ಕ ನೀಡಬೇಕಿಲ್ಲ ಏಳು ಬಟ್ಟಲು ತುಂಬು ಸಾಕಿ

ಶೂನ್ಯ ಕವಿದ ಹೃದಯದಲ್ಲಿ ವಿರಹ ದೀಪ ಹೊತ್ತಿ ಉರಿಯಲಿ ಬಿಡು
ಸಂತೈಸಲಾಗದ ಉನ್ಮತ್ತ ರಾತ್ರಿಗಳು ಬಟ್ಟಲು ತುಂಬು ಸಾಕಿ

ಸಂಜೆಯಾಗುತ್ತಲೇ ಕಿವಿತುಂಬ ಕೂಜೆ ಬಟ್ಟಲುಗಳದೆ ಇಂಚರ
ಇದರಿಂದಲೇ ಕಳೆಯುತ್ತಿದೆ ಈ ಬಾಳು ಬಟ್ಟಲು ತುಂಬು ಸಾಕಿ

ಇತಿಮಿತಿಗಳನ್ನೇ ಮರೆತು ಕುಡಿಯುತಿಹೆನೆಂದು ಜರೆಯುತಿಹರೆಲ್ಲರು
ಬದುಕು ಸಾವಿನ ಹಂಗು ನನಗಿಲ್ಲ ಕೇಳು ಬಟ್ಟಲು ತುಂಬು ಸಾಕಿ

ಖರೀದಿಗೆ ಸಂಪರ್ಕಿಸಿ : 9341757653

*

ಇದನ್ನೂ ಓದಿ : Book Release: ಅಚ್ಚಿಗೂ ಮೊದಲು; ಬೇಲೂರು ರಘುನಂದನರ 
‘ರೂಬಿಕ್ಸ್​ ಕ್ಯೂಬ್​’ 

Published On - 10:50 am, Wed, 9 February 22