Short Stories for Children : ಅಚ್ಚಿಗೂ ಮೊದಲು ; ‘ಕಾಡಂಚಿನ ಊರಿನಲ್ಲಿ’ ಬಾಲ್ಯವೆಂಬ ಹೂ ಕಣಿವೆ

Childhood : ಯಾವ ಕಾರಣವೋ ಏನೋ "ಟೊಮ್ಯಾಟೋ ಪಾನಕ ಮಾಡಿಕೊಡಿ" ಎಂದು ಬಾಯಿಬಿಟ್ಟು ಕೇಳಲಾಗಲಿಲ್ಲ. ವಿಚಿತ್ರವೆಂದರೆ, ಕೊನೆಗೆ ಅಮ್ಮನೇ ಮಾಡಬಹುದೆಂದು ಆಸೆಯಿಂದ ದಿನವೂ ಕಾದಳು. ಪಾಪ, ಅಮ್ಮನಿಗೇನು ಕನಸು ಬಿದ್ದಿತ್ತಾ... ಇವಳಿಗೆ ಹೀಗಾಗಿದೆಯೆಂದು! ಅವರು ಮಾಡಲಿಲ್ಲ. ವಿಜಿ ಆ ವಿಷಯ ಕೇಳಲೂ ಇಲ್ಲ!

Short Stories for Children : ಅಚ್ಚಿಗೂ ಮೊದಲು ; ‘ಕಾಡಂಚಿನ ಊರಿನಲ್ಲಿ’ ಬಾಲ್ಯವೆಂಬ ಹೂ ಕಣಿವೆ
ಲೇಖಕಿ ವಿಜಯಶ್ರೀ ಹಾಲಾಡಿ
Follow us
ಶ್ರೀದೇವಿ ಕಳಸದ
|

Updated on:Aug 28, 2021 | 3:48 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಕಾಡಂಚಿನ ಊರಿನಲ್ಲಿ (ಮಕ್ಕಳಿಗಾಗಿ ಅನುಭವ ಕಥನ) ಲೇಖಕರು : ವಿಜಯಶ್ರೀ ಹಾಲಾಡಿ ಪುಟ : 132 ಬೆಲೆ : ರೂ. 120 ಮುಖಪುಟ ವಿನ್ಯಾಸ : ಶ್ರೀಕಂಠಮೂರ್ತಿ ಪ್ರಕಾಶನ : ಪ್ರಗತಿ ಪ್ರಕಾಶನ, ಮೈಸೂರು

*

ವಿಜಯಶ್ರೀ ಹಾಲಾಡಿ ತಮ್ಮ ಆರು ಕೃತಿಗಳಿಂದ, ಲಭಿಸಿದ ಪ್ರಶಸ್ತಿಗಳಿಂದ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ‘ಜಂಬಿಕೊಳ್ಳಿ ಮತ್ತು ಪುಟ್ಟವಿಜಿ’ ಎಂಬ ಕೃತಿಯ ಮುಂದುವರೆದ ಭಾಗವೇ ಈ ‘ಕಾಡಂಚಿನ ಊರಿನಲ್ಲಿ’. ವಿಜಿಯ ಕೌತುಕಭರಿತ ಕಣ್ಣುಗಳು ಮೂದೂರಿ ಎಂಬ ಹಳ್ಳಿಯನ್ನು ಕಂಡು, ಕಂಡರಿಸಿದ ಬಗೆ ಅನನ್ಯವಾಗಿದೆ. ಇಪ್ಪತ್ತೆರಡು ಅಧ್ಯಾಯಗಳಲ್ಲಿ ವಿದ್ಯುತ್ತೂ ಇರದ, ವನಸ್ಪತಿಗಳೇ ಸಂಜೀವಿನಿಯಾದ, ಗುಮ್ಮ- ಕುರ್ಕಗಳಿಂದ, ಮಳೆಗೆ ಶೃತಿ ಕೊಡುವ ಗೋಂಕ್ರಕಪ್ಪೆಯ, ಇರದಿದ್ದರೂ ಇದೆಯೆಂಬ ಭೀತಿ ಹುಟ್ಟಿಸುವ ಹುಲಿಯ, ಸ್ವಯಂ ವೈದ್ಯರಾಗುವ ನಾಯಿ ಬೆಕ್ಕುಗಳ, ‘ಮಳೆ ಬರಲಿ ದೇವರೆ’ ಎಂದು ಪ್ರಾರ್ಥಿಸುವ ಪ್ರಕೃತಿ ಪ್ರಿಯ ಮಕ್ಕಳ ಮುಗ್ಧತೆ, ಸೂಕ್ಷ್ಮಾವಲೋಕನದ, ಪ್ರಾಣಿ ಪ್ರೀತಿಯ, ಬಣ್ಣದಲ್ಲಿ ತೊಯ್ದಾಗಿನ ಯಕ್ಷಗಾನದ ಸೊಗಸಿನ ಚಿತ್ರಗಳಿವೆ. ಇದನ್ನೋದಿದಾಗ ನನಗೆ ‘ಲಾರ ಇಂಗಲ್ಸ್ ವೈಲ್ಡರ್’ರ ಕಥೆಗಳು ನೆನಪಾದವು. ಅದೇ ಮುಗ್ಧತೆ, ಭಯ, ಪ್ರಕೃತಿಯ ಕುರಿತಾದ ಆಕರ್ಷಣೆ. ಡಾ. ಕಮಲ ಹೆಮ್ಮಿಗೆ, ಹಿರಿಯ ಲೇಖಕರು

ಈ ಅಗಾಧ ಬದುಕಿನ ದಾರಿಯ ತಿರುವು ಮುರುವು, ಏರು ತಗ್ಗುಗಳ ನಡುವೆ ಬಾಲ್ಯವೊಂದು ಹೂ ಕಣಿವೆ. ಅಲ್ಲಿ ಕಣ್ತುಂಬಿಕೊಂಡಷ್ಟು ಬಣ್ಣಬಣ್ಣದ ಹೂ, ಇಬ್ಬನಿ, ಚಿಟ್ಟೆಗಳ ದಂಡು, ಸುಗಂಧದ ಮೆಲುಗಾಳಿ. ಒಂದಷ್ಟು ಹೊತ್ತು ಮುಟ್ಟಿ, ಮೂಸಿ ಬಾನೆತ್ತರ ಹಾರಿ ಸುಖಿಸುವುದರೊಳಗೆ ಮತ್ತೆಂದೂ ಬಾರದಂತೆ ಮಾಯವಾಗಿರುತ್ತದೆ ಈ ಹೂಕಣಿವೆ! ಬದುಕಿನ ಬಂಡಿ ಹಿಮ್ಮುಖವಾಗಿ ಚಲಿಸಲು ಸಾಧ್ಯವೇ ಇಲ್ಲ. ಆದರೆ ಮನದೊಳಗೆ ಅವಿತುಕೊಂಡ ಆ ಸುಗಂಧವನ್ನು, ಹೂಗಳನ್ನು ಯಾವ ಕಾಲವೂ ಬಂದು ಕಿತ್ತುಹಾಕಲಾಗುವುದಿಲ್ಲ. ಅಂತಹ ಬಾಲ್ಯವೆಂಬ ಹೂ ಕಣಿವೆ ಎಲ್ಲರ ಮನದೊಳಗೂ ತುಂಬಿಕೊಂಡು ಬೇಕೆಂದಾಗ ಮಮತೆ ನೀಡುತ್ತದೆ. ನನ್ನೊಳಗೂ ಅಂತಃ ಒಂದು ಅಮೂಲ್ಯ ಹೂಗಳ ಲೋಕವಿದೆ. ಆಗಾಗ ಅಲ್ಲಿ ತಿರುಗಾಡಿ ನನ್ನ ಬೊಗಸೆಗೆ ನಿಲುಕಿದ ಪುಟ್ಟ ತುಣಕೊಂದನ್ನು ಹಿಡಿದು ತರುವ ಪ್ರಯತ್ನ ಮಾಡುತ್ತಿರುತ್ತೇನೆ. ವಿಜಯಶ್ರೀ ಹಾಲಾಡಿ, ಕವಿ, ಲೇಖಕಿ

*

ಪುಟ್ಟ ವಿಜಿಯ ಲೋಕ!

ವಿಜಿ, ಎರಡು ಅಥವಾ ಮೂರನೇ ತರಗತಿಯಲ್ಲಿದ್ದಾಗ ಸ್ವಲ್ಪ ಸಮಯ ಒಂದು ಸಮಸ್ಯೆ ಎದುರಿಸಿದಳು. ಅದೇನೆಂದರೆ, ಅವಳಿಗೆ ಬರೆಯುವಾಗ ಕಷ್ಟವಾಗತೊಡಗಿತು. ಯಾವುದೇ ಅಕ್ಷರವಾದರೂ ಪಟ್ಟಂತ ಬರೆಯಲು ಆಗುತ್ತಿರಲಿಲ್ಲ. ಅಕ್ಷರದ ಆರಂಭದಲ್ಲಿ ಸುರುಳಿ ಸುರುಳಿ ಸುತ್ತಿ ಮುಂದುವರಿಸಬೇಕಿತ್ತು! ಈ ಸಮಸ್ಯೆ ಯಾಕೆ ಮತ್ತು ಯಾವಾಗ ಶುರುವಾಯಿತು ಎಂದೆಲ್ಲ ನೆನಪಿಲ್ಲವಾದರೂ ಆಗ ಒಂದಷ್ಟು ಸಮಯ ಆದ ಮುಜುಗರ ಮರೆತು ಹೋಗುವುದಿಲ್ಲ. ಮಾಷ್ಟ್ರು ಅಥವಾ ಮನೆಯವರು ಯಾರಾದರೂ ಇದನ್ನು ಗಮನಿಸಿದರೋ ಇಲ್ಲವೋ ಎಂಬುದೆಲ್ಲವೂ ನೆನಪಲ್ಲಿ ಉಳಿದಿಲ್ಲ. ಕೊನೆಗೆ ಸ್ವಲ್ಪ ಸಮಯದ ನಂತರ ಅದಾಗಿಯೇ ಸರಿಹೋಯಿತು. ಹೀಗೆ ಅವಳ ವೈಯಕ್ತಿಕ ಲೋಕದಲ್ಲಿ ಯಾರಿಗೂ ವಿವರಿಸಿ ಹೇಳಲಾಗದ, ಹೇಳಬೇಕೆಂಬ ಅರಿವೂ ಆಗದ ಹಲವು ಸಂಗತಿಗಳಿವೆ.

ಜ್ವರ ಬಂದಾಗ ವಿಜಿಗೆ ಕೆಟ್ಟ ಅನುಭವವಾಗುತ್ತಿತ್ತು. ತುಂಬಾ ಆಯಾಸವಾಗಿ, ಏನೂ ಮಾಡಲಾಗುತ್ತಿರಲಿಲ್ಲ. ಇದರೊಂದಿಗೆ ಗಂಟಲುನೋವು ಬೇರೆ. ಆಗ ಸುಣ್ಣ ಮತ್ತು ಬೆಲ್ಲವನ್ನು ಚೆನ್ನಾಗಿ ಬೆರೆಸಿ ಮುಲಾಮಿನ ತರ ಮಾಡಿ, ಗಂಟಲ ಭಾಗಕ್ಕೆ ಹಚ್ಚುತ್ತಿದ್ದರು ಅಮ್ಮ. ಅದು ಬೆಳಗಾಗುವಾಗ ಒಳ್ಳೇ ಸಿಮೆಂಟ್ ಗಾರೆ ತರಹ ಕುತ್ತಿಗೆಗೆ ಅಂಟಿಕೊಂಡು, ಗಂಟಲುನೋವಿಗಿಂತ ಇದೇ ದೊಡ್ಡ ಕಿರಿಕಿರಿಯಾಗುತ್ತಿತ್ತು! ಆ ‘ಗಾರೆ’ಯನ್ನು ತೊಳೆಯುವಾಗಲೂ ಅಷ್ಟೇ. ಎಷ್ಟು ತಿಕ್ಕಿದರೂ ಹೋಗದೇ ಚರ್ಮದೊಂದಿಗೆ ಅಂಟಿಹೋಗಿದೆ ಎಂಬಂತೆ ಭಾಸವಾಗುತ್ತಿತ್ತು. ಇನ್ನು ಜ್ವರಕ್ಕೆ ಕಷಾಯ ಕುಡಿದರೂ, ಮಾತ್ರೆ ನುಂಗಿದರೂ ಒಮ್ಮೆಲೇ ಹೊರಟುಹೋಗುತ್ತಿರಲಿಲ್ಲ. ಈ ಹಟಮಾರಿ ಜ್ವರ, ಶೀತ, ಮೈಕೈ ನೋವು ಎಲ್ಲ ಸೇರಿ ತಾನು ಯಾವುದೋ ಬೇರೆ ಲೋಕದಲ್ಲಿದ್ದಂತೆ ಅವಳಿಗೆ ಭ್ರಮೆಯಾಗುತ್ತಿತ್ತು. ಅವರ ಮನೆಯ ಕರಿಕಪ್ಪು ಕತ್ತಲ ರಾತ್ರಿಗಳಲ್ಲಂತೂ ಅರ್ಧಂಬರ್ಧ ನಿದ್ದೆಯಲ್ಲಿ ಮಲಗಿದ್ದಾಗ ಜ್ವರ ತಲೆಗೇರಿ ಕಣ್ಣ ಮುಂದೆ ಯಾವ್ಯಾವುದೋ ವಿಕಾರ ಚಿತ್ರಗಳು ಬರುತ್ತಿದ್ದವು. ಹಲ್ಲು ಕಚ್ಚಿ ಹಿಡಿದು, ಕೈ ಮುಷ್ಟಿ ಬಿಗಿಮಾಡಿ ಅದನ್ನೆಲ್ಲ ನೋಡುವಾಗ ತುಂಬ ಭಯವಾಗುತ್ತಿತ್ತು.

ಶೋಲಾಪುರ ಹೊದಿಕೆಯ ಬಣ್ಣ, ಚಿತ್ತಾರಗಳೇ ಹಾಗೆ ವಿಚಿತ್ರ ಆಕಾರ ತಾಳಿ ಬಂದು ಹೆದರಿಸುವುದು ಅಂದುಕೊಂಡಿದ್ದಳು! ಇಷ್ಟಾದರೂ, ಜ್ವರದ ಸಮಯದಲ್ಲಿ ಅಮ್ಮ ಮುದ್ದು ಮಾಡಿದಾಗ ಖುಷಿಯಾಗುತ್ತಿತ್ತು. ಆಗೆಲ್ಲ ಜ್ವರ ಗುಣವಾಗುವುದೇ ಬೇಡ ಎಂದೂ ಅನ್ನಿಸುತ್ತಿತ್ತು! ಗರ್ಚನ ಮುಳ್ಳು ಹೆಟ್ಟಿ ಕಾಲು ನೋವಾದಾಗ ಒಟ್ಟಿಗೇ ಜ್ವರವೂ ಬಂದಿತ್ತಲ್ಲ; ಆಗ ವಿಜಿಗೆ ಒಂದು ವಿಚಿತ್ರ ಆಸೆಯಾಗಿತ್ತು. ಅದು ಮೇ ತಿಂಗಳ ಬಿರುಬೇಸಿಗೆಯ ದಿನಗಳು; ಜ್ವರದ ತಾಪ ಬೇರೆ. ಅವಳಿಗೆ ಟೊಮ್ಯಾಟೊ ಹಣ್ಣಿನ ಪಾನಕ ಕುಡಿಯಬೇಕೆಂದು ಪದೇ ಪದೇ ಅನ್ನಿಸತೊಡಗಿತು. ಅಮ್ಮ ಮಾಡುವ ಏಲಕ್ಕಿ ಪರಿಮಳವಿರುವ ಟೊಮ್ಯಾಟೊ ಶರಬತ್ತು ಅವಳಿಗಿಷ್ಟ. ಈಗ ನೆನಪಾಗತೊಡಗಿತು. ಆದರೆ ಹಾಗಂತ ಅಮ್ಮನಲ್ಲಿ ಹೇಳಲಾಗಲಿಲ್ಲ. ಯಾವ ಕಾರಣವೋ ಏನೋ “ಟೊಮ್ಯಾಟೋ ಪಾನಕ ಮಾಡಿಕೊಡಿ” ಎಂದು ಬಾಯಿಬಿಟ್ಟು ಕೇಳಲಾಗಲಿಲ್ಲ. ವಿಚಿತ್ರವೆಂದರೆ, ಕೊನೆಗೆ ಅಮ್ಮನೇ ಮಾಡಬಹುದೆಂದು ಆಸೆಯಿಂದ ದಿನವೂ ಕಾದಳು. ಪಾಪ, ಅಮ್ಮನಿಗೇನು ಕನಸು ಬಿದ್ದಿತ್ತಾ… ಇವಳಿಗೆ ಹೀಗಾಗಿದೆಯೆಂದು! ಅವರು ಮಾಡಲಿಲ್ಲ. ವಿಜಿ ಆ ವಿಷಯ ಕೇಳಲೂ ಇಲ್ಲ!

ಆಗೆಲ್ಲ ವಿಜಿ ಒಬ್ಬಳೇ ಮಾತಾಡಿಕೊಳ್ಳುತ್ತಿದ್ದಳು. ಎಷ್ಟೊತ್ತಿಗೆ ನೋಡಿದರೂ ಆಟ, ಮಾತು. ಅವಳ ಕಲ್ಪನೆಯಲ್ಲಿ ಅವಳೊಬ್ಬಳೇ ಇರುತ್ತಿರಲಿಲ್ಲ! ನಾಯಿ, ಬೆಕ್ಕು, ದನ ಇನ್ಯಾರೋ ಮನುಷ್ಯರು, ಹೂ, ಗಿಡ, ಮರ, ಹೀಗೆ ಎಲ್ಲವನ್ನೂ ಸೇರಿಸಿಕೊಂಡು ಕತೆ ಕಟ್ಟಿ ತನ್ನಷ್ಟಕ್ಕೆ ಮಣಮಣ ಹೇಳಿಕೊಳ್ಳುತ್ತಿದ್ದಳು. ಮನೆಗೆ ನೆಂಟರು ಬರುವುದು-ಅವರಲ್ಲಿ ಮಾತಾಡುವುದು ಇದನ್ನೆಲ್ಲ ‘ಏಕಪಾತ್ರಾಭಿನಯ’ ಮಾಡಿಕೊಂಡು ಅವಳದ್ದೇ ಲೋಕದಲ್ಲಿರುತ್ತಿದ್ದಳು. ಹಾಗೆ ಸ್ಪಷ್ಟವಾಗಿ ನೆನಪಿರುವ ಒಂದು ಕತೆಯಲ್ಲಿ ಅವಳು ಒಬ್ಬಳು ಹೆಂಗಸಾಗಿದ್ದಳು! ಅವಳ ಗಂಡ ಬೇರೆ ಊರಿನಲ್ಲಿದ್ದವನು ಬರುವಾಗ ಬೆಂಡೋಲೆ ತಂದುಕೊಟ್ಟಿದ್ದ! ಅವರ ಮನೆಯ ಅಂಗಳದಾಚೆ ಗಿಡಗಳಲ್ಲಿ ಬೆಳೆದ ಬೆಂಡೋಲೆಯಂತಾ ಹೂಗಳನ್ನು ಕೊಯ್ಯುತ್ತಾ ಈ ಆಟ ಆಡುತ್ತಿದ್ದಳು. ಹಾಗೆ ತಂದುಕೊಟ್ಟ ಬೆಂಡೋಲೆಯನ್ನು ಕಿವಿಗೆ ಇಟ್ಟುಕೊಂಡಂತೆ ಮಾಡಿ, ಎಲ್ಲರಿಗೂ ತೋರಿಸುವುದು, ಅದಕ್ಕೆ ಎಷ್ಟೊಂದು ರುಪಾಯಿ ಎಂದು ಹೇಳುವುದು, ಅದರ ಚಂದ ವರ್ಣಿಸುವುದು ಹೀಗೆ ಅವಳಷ್ಟಕ್ಕೆ ಎಲ್ಲರ ಮಾತುಗಳನ್ನೂ ತಾನೇ ಆಡಿ ಆ ಕತೆಯನ್ನು ಅಭಿನಯಿಸುತ್ತಿದ್ದಳು. ಇಂತಹ ಸಂದರ್ಭದಲ್ಲಿ ದೊಡ್ಡವರ್ಯಾರಾದರೂ ನೋಡಿದರೆ ಮಾತ್ರ ಅವಳಿಗೆ ನಾಚಿಕೆಯಾಗುತ್ತಿತ್ತು. ವಿಜಿ ಈ ಲೋಕದಲ್ಲಿ ಎಷ್ಟು ಖುಷಿಯಾಗಿದ್ದಳೆಂದರೆ, ‘ನನಗೆ ಆಡಲು ಯಾರೂ ಇಲ್ಲ’ ಎಂಬ ಬೇಸರವೇ ಆಗುತ್ತಿರಲಿಲ್ಲ!

ಮನೆ ಕಟ್ಟುವ ಆಟವನ್ನೂ ಇಷ್ಟೇ ತನ್ಮಯತೆಯಿಂದ ಆಡುತ್ತಿದ್ದಳು. ಸಮ ಎತ್ತರದ ನಾಲ್ಕು ಕವೆಕೋಲುಗಳನ್ನು ಆರಿಸಿಕೊಳ್ಳುವುದು ಮೊದಲಿನ ಮುಖ್ಯ ಕೆಲಸ. ಆಮೇಲೆ ಒಂದು ಕವೆಕೋಲಿನಿಂದ ಇನ್ನೊಂದನ್ನು ಸೇರಿಸಲು ಮತ್ತೆ ನಾಲ್ಕು ಕೋಲುಗಳು. ಇದಾದ ಮೇಲೆ ಮಧ್ಯಕ್ಕೆ ಅಡ್ಡ ಹಾಕಲು ಕೆಲವು ಸಪೂರ ಕೋಲುಗಳು. ಆಯ್ಕೆಯೆಲ್ಲ ಮುಗಿದಾದ ನಂತರ ಗುಂಡಿತೋಡಿ ಕೋಲುಗಳನ್ನು ಹುಗಿದು ಚಪ್ಪರದಾಕಾರದಲ್ಲಿ ಮಾಡಿ ನಿಲ್ಲಿಸುತ್ತಿದ್ದಳು. ಈ ಕೆಲಸ ಮಾಡುವಾಗ ಅದೆಂತಾ ನೆಮ್ಮದಿ! ಇಷ್ಟಾದ ಮೇಲೆ ದೊಡ್ಡದೊಂದು ಉಸಿರುಬಿಟ್ಟು ಕೆಸುವಿನೆಲೆ ಮುಂತಾದ ದೊಡ್ಡ ದೊಡ್ಡ ಎಲೆಗಳನ್ನು ಹುಡುಕಿ ತಂದು ಮನೆ ಮಾಡಿನ ಮೇಲೆ ಒಪ್ಪವಾಗಿ ಜೋಡಿಸುವುದು. ಈಗ ಮನೆಗೆ ನೆರಳೂ ಆಯಿತು. ಮನೆಯೊಳಗಿನ ಸಣ್ಣ ಜಾಗವನ್ನು ಸ್ವಚ್ಛಗೊಳಿಸಿ ಮಣ್ಣು ನಯ ಮಾಡುವುದು. ಇಷ್ಟೆಲ್ಲ ಆದ ಮೇಲೆ ಎಷ್ಟು ಖುಷಿ! ಸುಮ್ಮನೆ ಕೂತು ಆ ಮನೆಯನ್ನು ನೋಡುವುದು. ಹಾಗೆ ನೋಡುವುದೇ ಸುಖ. ಮತ್ತೂ ಸಮಯ ಉಳಿದರೆ ನೆಂಟರು ಬಂದಂತೆ ಎಣಿಸಿ ಅವರಲ್ಲಿ ಮಾತಾಡುವುದು, ಅವರಿಗೆ ಮಣ್ಣಿನ ಕಾಫಿ, ತಿಂಡಿ ಮಾಡಿ ಪುಟ್ಟ ಎಲೆಗಳಲ್ಲಿ ಹಾಕಿಕೊಡುವುದು! ಅಷ್ಟೊತ್ತಿಗೆ ಅಮ್ಮನೋ ಅಜ್ಜಿಯೋ, ಅಕ್ಕಂದಿರೋ ಕರೆದರೆ ದಡಬಡಿಸಿ ಓಡುವುದು. ಹೀಗೆ ಕಟ್ಟಿದ ಮನೆ ಕೆಲವೊಮ್ಮೆ ಸುಮಾರು ದಿನ ಉಳಿಯುತ್ತಿದ್ದುದೂ ಉಂಟು. ತೋಟದಲ್ಲೋ, ಹಾಡಿಯಲ್ಲೋ, ಹಟ್ಟಿಯ ಹಿಂದೋ ಇರುತ್ತಿದ್ದ ಆ ಪುಟಾಣಿ ಚಪ್ಪರ ಗಾಳಿ, ಮಳೆ ಬಂದರೆ ಕವುಚಿ ಬೀಳುತ್ತಿತ್ತು. ಆಗ ಮತ್ತೊಂದು ‘ಮನೆ’ ಕಟ್ಟುವ ಉಮೇದೂ ಬರುತ್ತಿತ್ತು! ಈ ಆಟವನ್ನು ನೀಲಿಮಾ ಮತ್ತು ಇತರ ಮಕ್ಕಳೊಂದಿಗೆ ಸೇರಿಯೂ ಅನೇಕ ಸಲ ಆಡಿದ್ದಳು.

Acchigoo Modhalu Vijayashree Haladi

ವಿಜಯಶ್ರೀ ಅವರ ಪುಸ್ತಕಗಳು

ಬೀಚುಬೆಕ್ಕು, ಕಾಳುನಾಯಿ ಅಥವಾ ದನಕರು ಪಕ್ಕದಲ್ಲಿದ್ದರೆ ಅವು ವಿಜಿಯ ಲೋಕದ ಸದಸ್ಯರಾಗುತ್ತಿದ್ದವು. ಅವುಗಳೊಂದಿಗೆ ಮಾತಾಡುತ್ತಾ ತಾನು ಹೇಳಿದಂತೆ ಕೇಳಬೇಕೆಂದು ಒಮ್ಮೊಮ್ಮೆ ಹಠ ಹಿಡಿಯುತ್ತಿದ್ದಳು! ಅವು ಕೇಳದೇ ಇದ್ದಾಗ ಕಾಲು ನೆಲಕ್ಕಪ್ಪಳಿಸಿ ಸಿಟ್ಟು ಮಾಡಿ ಮುಖವುಬ್ಬಿಸಿದರೂ ಕೂಡಲೇ ರಾಜಿಯಾಗುತ್ತಿದ್ದಳು. ಅವುಗಳಿಗೆ ಇದೆಲ್ಲ ಅರ್ಥವಾಗದಿದ್ದರೂ ಇವಳು ಮೈ ಸವರುವುದು, ತಮ್ಮೊಂದಿಗೆ ಇರುವುದು ಇಷ್ಟವಾಗಿ ಕಣ್ಣರಳಿಸಿ ನೋಡುತ್ತಿದ್ದವು. ಬೆಕ್ಕುಗಳನ್ನಂತೂ ಎತ್ತಿಕೊಂಡು ಉಪಚಾರ ಮಾಡುವುದೇ ಮಾಡುವುದು. ಆದರೆ ಮುಖದ ಹತ್ತಿರ ತರುವುದು, ಹಾಸಿಗೆ ಮೇಲೆ ಮಲಗಿಸುವುದು ಇದನ್ನೆಲ್ಲ ಅಜ್ಜಿ, ಅಮ್ಮ ಒಪ್ಪುತ್ತಿರಲಿಲ್ಲ. ಅವುಗಳ ರೋಮದಿಂದ ಕಾಯಿಲೆ ಬರುತ್ತದೆ ಅದೂ ಅಲ್ಲದೆ ಬೆಕ್ಕಿನ ಮರಿಗಳನ್ನು ಆ ತರ ಮುದ್ದು ಮಾಡಿದರೆ ಅದು ಬಡ್ಡಾಗುತ್ತದೆ, ಚುರುಕಿರುವುದಿಲ್ಲ ಎಂದು ಅಣ್ಣ ಎಚ್ಚರಿಸುತ್ತಿದ್ದ. ವಿಜಿ ಮಾತ್ರ ಬೆಕ್ಕು ನಾಯಿಗಳೊಂದಿಗೆ ಸಂಭಾಷಿಸುತ್ತ ಪ್ರಪಂಚವೆಲ್ಲ ಸುತ್ತುಹಾಕಿ ಬರುತ್ತಿದ್ದಳು!

ಒಬ್ಬಳೇ ಕಾಡುಗಳಲ್ಲಿ ಸುತ್ತುವುದು ವಿಜಿಗೆ ಇಷ್ಟದ ವಿಷಯವಾಗಿತ್ತು. ಐದು-ಆರನೇ ಕ್ಲಾಸಿಗೆ ಹೋಗುವಷ್ಟು ದೊಡ್ಡವಳಾದಾಗ ಅವಳು ಹೀಗೆ ಒಬ್ಬಳೇ ಮನೆ ಹತ್ತಿರದ ಕಾಡಿನಲ್ಲಿ ತಿರುಗುತ್ತಿದ್ದಳು. ಹಣ್ಣು, ಹೂ ಕೊಯ್ಯುವುದು, ಗಿಡ-ಮರಗಳನ್ನು ನೋಡುವುದು, ಸಣ್ಣ ಗುಡ್ಡಗಳನ್ನು ಹತ್ತಿಳಿಯುವುದು, ಹಕ್ಕಿಗಳನ್ನು ಗಮನಿಸುವುದು, ಅಪರೂಪಕ್ಕೆ ಸಿಗುವ ಹಕ್ಕಿ ಗರಿಗಳನ್ನು ಹೆಕ್ಕಿ ತರುವುದು ಇವೆಲ್ಲದರ ನಡುವೆ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ. ಆದಷ್ಟು ಸುತ್ತಿ ಕಾಡಿನ ಯಾವ ಯಾವ ಭಾಗಗಳಲ್ಲಿ ಏನೇನು ಗಿಡಮರಗಳಿವೆ ಎಂದೆಲ್ಲ ನೋಡಿಕೊಂಡು ಬೇಗ ಬೇಗ ಮನೆಗೆ ವಾಪಸ್ಸಾಗುತ್ತಿದ್ದಳು. ಕಾಡಿನ ವಸ್ತು-ವಿಷಯಗಳೇ ಅವಳ ಮಾನಸಿಕ ಸ್ನೇಹಿತರಾಗಿದ್ದವು.

ತೀರಾ ಸಣ್ಣವಳಿರುವಾಗ ಅಡುಗೆಮನೆಯ ಗೋಡೆಗೆ ಬೆನ್ನು ತಿಕ್ಕುತ್ತಾ ಆಚೆಯಿಂದ ಈಚೆ, ಈಚೆಯಿಂದ ಆಚೆ ನಡೆದಾಡುತ್ತಿರುವುದೇ ವಿಜಿಯ ಒಂದು ಆಟವಾಗಿತ್ತು! ವಿದ್ಯುತ್ತೆಲ್ಲ ಇಲ್ಲದ ಕಾಲವಾದ್ದರಿಂದ ಸಂಜೆಯಾದೊಡನೆ ವಾತಾವರಣ ಪೂರ್ತಿ ಕತ್ತಲು. ಅಥವಾ ಕಪ್ಪುಮೋಡಗಳು ಕಟ್ಟಿಕೊಂಡಿರುವ ಮಳೆಗಾಲದಲ್ಲಿ ಹಗಲೂ ಕತ್ತಲಾಗಿಬಿಡುತ್ತಿತ್ತು. ಅಡುಗೆಮನೆಯ ಒಲೆ ಸದಾ ಉರಿಯುತ್ತ ಬೆಕ್ಕು, ಶಾಖ ಎರಡನ್ನೂ ಕೊಡುತ್ತಿತ್ತು. ಹೊಗೆ ಹಿಡಿದು ಕಪ್ಪಾದ ಅಡುಗೆಮನೆಯ ಗೋಡೆಗಳು, ಅಟ್ಟ ಎಲ್ಲವೂ ಒಂದು ಬಗೆಯ ಆಪ್ತತೆಯನ್ನು ನಿರ್ಮಿಸಿದ್ದವು. ಬೀಚುಬೆಕ್ಕು ಮತ್ತು ಅದರ ಮರಿಗಳು ಹೆಚ್ಚಿನ ಹೊತ್ತು ಒಲೆ ಮುಂದೆ ಮಲಗಿರುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮ ಅಡುಗೆಮನೆಯಲ್ಲಿ ಇರುತ್ತಿದ್ದರು. ತಿಂಡಿ, ಕಾಫಿ, ಟೀ, ಅಡುಗೆ ಏನಾದರೊಂದು ಮಾಡುತ್ತ ತಮ್ಮ ಕೆಲಸದಲ್ಲಿ ಅವರು ಮಗ್ನರಾಗಿರುವಾಗ ವಿಜಿ ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತ, ಕತೆ ಕಟ್ಟುತ್ತ ಗೋಡೆಗೆ ಬೆನ್ನು ಒರೆಸುತ್ತಾ ನಡೆದಾಡುತ್ತಿದ್ದಳು. ಅದು ಬೇಸರವೆನಿಸಿದಾಗ ಹಟವನ್ನೂ ಮಾಡುತ್ತಿದ್ದಳು. ಅಮ್ಮನ ಗಮನ ಸೆಳೆಯಲು ಏನಾದರೂ ರಾಗ ತೆಗೆದು ಅಳುತ್ತಿದ್ದಳು. ಆಗ ಕೆಲವೊಮ್ಮೆ ಅಜ್ಜಿ ಬಂದು ಸಮಾಧಾನ ಮಾಡುತ್ತಿದ್ದರು. ಅಥವಾ ಅಮ್ಮನೇ ತಿನ್ನಲು ಏನಾದರೂ ಕೊಟ್ಟು ಉಪಚರಿಸಿದಾಗ ಅಲ್ಲೇ ಕೂತು ಒಲೆಯ ಉರಿಯನ್ನು ನೋಡುತ್ತಾ ಮತ್ತೆ ತನ್ನದೇ ಲೋಕದಲ್ಲಿ ಪಯಣ ಹೊರಡುತ್ತಿದ್ದಳು.

*

ಪರಿಚಯ : ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದ ಮುದೂರಿ ಎಂಬ ಹಳ್ಳಿ. ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ‘ಬೀಜ ಹಸಿರಾಗುವ ಗಳಿಗೆ’-ಕವಿತೆಗಳು, ‘ಒತಿಕ್ಯಾತ ತಲೆಕುಣ್ಸಿ’-ಮಕ್ಕಳ ಪದ್ಯಗಳು, ‘ಅಲೆಮಾರಿ ಇರುಳು’-ಹಾಯ್ಕು ಮಾದರಿಯ ಕವಿತೆಗಳು, ‘ಪಪ್ಪುನಾಯಿಯ ಪೀಪಿ’-ಮಕ್ಕಳ ಪದ್ಯಗಳು, ‘ಸೂರಕ್ಕಿ ಗೇಟ್’-ಮಕ್ಕಳಿಗಾಗಿ ಕಾದಂಬರಿ, ‘ಜಂಬಿಕೊಳ್ಳಿ ಮತ್ತು ಪುಟ್ಟವಿಜಿ’-ಮಕ್ಕಳಿಗಾಗಿ ಅನುಭವ ಕಥನ, ಸಾಕು ಬೆಳಕಿನ ಮಾತು – ಕವನ ಸಂಕಲನ. ಮಕ್ಕಳ ಕವಿತೆಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಮುಂಬೈ ಕನ್ನಡ ಸಂಘ ಕವಿತೆಗಳಿಗಾಗಿ ಕೊಡುವ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಮಕ್ಕಳ ಸಾಹಿತ್ಯಕ್ಕಾಗಿ ರಾಜ್ಯ ಮಟ್ಟದ ಜಿ.ಬಿ ಹೊಂಬಳ ಪುರಸ್ಕಾರ, ಮಕ್ಕಳ ಸಾಹಿತ್ಯಕ್ಕಾಗಿ ಡಿಸೋಜ-ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾ ರಾವ್ ದತ್ತಿನಿಧಿ ಪ್ರಶಸ್ತಿ, ಕವಿತೆಗಳಿಗಾಗಿ ಚೆನ್ನವೀರ ಕಣವಿ ಮೆಚ್ಚುಗೆ ಪುರಸ್ಕಾರ, ಸುಧಾ ಪ್ರಬಂಧ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಮುಂತಾದವು ದೊರಕಿವೆ. ಎರಡು ಮಕ್ಕಳ ಪದ್ಯಗಳು ಸಿಬಿಎಸ್‍ಇ ಪಠ್ಯ ಕ್ರಮದಲ್ಲಿ ಪಠ್ಯಗಳಾಗಿವೆ. ಪ್ರಸ್ತುತ ಏಳನೇ ತರಗತಿಯ ತೃತೀಯ ಭಾಷೆ ಪಠ್ಯ ಪುಸ್ತಕದಲ್ಲಿ ಕವಿತೆಯೊಂದು ಪಠ್ಯವಾಗಿದೆ. ಕವಿತೆಗಳು, ಮಕ್ಕಳ ಪದ್ಯಗಳು, ಕತೆಗಳು, ಪ್ರಬಂಧ, ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರೇಖಾಚಿತ್ರ ಕಲಾವಿದೆಯೂ ಹೌದು.

(ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 0821-4287558)

ಇದನ್ನೂ ಓದಿ : New Stories : ಅಚ್ಚಿಗೂ ಮೊದಲು ; ನಲವತ್ತು ವರ್ಷಗಳ ಐವತ್ತು ಕಥೆಗಳ ಗುಚ್ಛ ‘ನಾನು ನಾನೇ! ನಾನು ನಾನೇ?’

Published On - 3:46 pm, Sat, 28 August 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ