New Book : ಅಚ್ಚಿಗೂ ಮೊದಲು : ಮಕ್ಕಳ ಕಾದಂಬರಿ ‘ದಿ ರೈಲ್ವೇ ಚಿಲ್ಡ್ರನ್’ ಬಳ್ಳಾರಿಯಲ್ಲಿ ಇಂದು ಸಂಜೆ ಬಿಡುಗಡೆ

The Railway Children : ‘ಇಲ್ಲಿ ಬರುವ ಮೂರು ಮಕ್ಕಳು ರೈಲಿಗೆ ತಮ್ಮನ್ನು ತೆರೆದುಕೊಳ್ಳುವುದು ಒಂದು ನಾಟಕೀಯವೂ ಕಷ್ಟದಾಯಕವೂ ಆದ ಪ್ರಸಂಗದಿಂದ. ಅವರ ಅಪ್ಪನನ್ನು ಶತ್ರುದೇಶಕ್ಕೆ ಗುಪ್ತಮಾಹಿತಿ ಒದಗಿಸುತ್ತಿದ್ದಾನೆಂದು ಆಪಾದಿಸಿ ಸರ್ಕಾರ ಬಂಧಿಸಿ ಸೆರೆಮನೆಗೆ ಹಾಕುತ್ತದೆ. ಇದನ್ನು ಮಕ್ಕಳಿಗೆ ಹೇಳದಂತೆ ಗುಟ್ಟಾಗಿಟ್ಟು, ಗಂಡ ಬರುವತನಕ ಕುಟುಂಬವನ್ನು ಸಂಭಾಳಿಸುವ ಹೊಣೆ ಈ ಮಕ್ಕಳ ತಾಯಿಯ ಮೇಲೆ ಬೀಳುತ್ತದೆ.‘ ಡಾ. ರಹಮತ್ ತರೀಕೆರೆ

New Book : ಅಚ್ಚಿಗೂ ಮೊದಲು : ಮಕ್ಕಳ ಕಾದಂಬರಿ ‘ದಿ ರೈಲ್ವೇ ಚಿಲ್ಡ್ರನ್’ ಬಳ್ಳಾರಿಯಲ್ಲಿ ಇಂದು ಸಂಜೆ ಬಿಡುಗಡೆ
Follow us
ಶ್ರೀದೇವಿ ಕಳಸದ
|

Updated on:Aug 15, 2021 | 4:21 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ದಿ ರೈಲ್ವೇ ಚಿಲ್ಡ್ರನ್ (ಮಕ್ಕಳ ಕಾದಂಬರಿ) ಮೂಲ : ಎಡಿತ್ ನೆಸ್ಬಿಟ್ ಕನ್ನಡಕ್ಕೆ : ಡಾ. ಅರವಿಂದ ಪಟೇಲ್ ಪುಟ : 232 ಬೆಲೆ : ರೂ. 200 ಮುಖಪುಟ ವಿನ್ಯಾಸ : ಹಾದಿಮನಿ ಪ್ರಕಾಶನ : ಅಭಿನವ, ಬೆಂಗಳೂರು

* ಇಂಗ್ಲೆಂಡಿನ ಕವಿ, ಮಕ್ಕಳ ಸಾಹಿತಿ, ಬರಹಗಾರ್ತಿ, ಎಡಿತ್ ನೆಸ್ಬಿಟ್ (15-8- 1958 – 4-5-1924) ಅವರ ಹುಟ್ಟುಹಬ್ಬದಂದೇ ಅವರ ‘ದಿ ರೈಲ್ವೆ ಚಿಲ್ಡ್ರನ್’ ಮಕ್ಕಳ ಕಾದಂಬರಿ ಬಳ್ಳಾರಿಯಲ್ಲಿ ಇಂದು ಸಂಜೆ ಐದು ಗಂಟೆಗೆ ಬಿಡುಗಡೆಯಾಗುತ್ತಿದೆ. ಬಳ್ಳಾರಿಯಲ್ಲಿ ವಾಸಿಸುತ್ತಿರುವ ಜನಪರ ವೈದ್ಯ ಡಾ. ಅರವಿಂದ ಪಟೇಲ್ ಅವರು ಕನ್ನಡಕ್ಕೆ ತಂದಿದ್ದಾರೆ.

*

ಇದನ್ನು ‘ಅನುವಾದ ಮಾಡಲು ಸಾಧ್ಯವೇ?’ ಎಂದು ಸ್ನೇಹಿತ ಶಿವಲಿಂಗಪ್ಪ ಹಂದಿಹಾಳು ಕೇಳಿದಾಗ ‘ಮೊದಲು ಓದಿ ನೋಡುವೆ’ ಎಂದೆ. ಪುಸ್ತಕ ಕೈಗೆತ್ತಿಕೊಂಡು ಓದಲು ಪ್ರಾರಂಭಿಸಿದಾಗ ನನ್ನನ್ನು ಬಾಲ್ಯದತ್ತ ಕೊಂಡೊಯ್ದ ಕಥೆ ಮನಸಿಗೆ ತಟ್ಟಿದುದು ನಿಜ. ನಾವು ಬಳ್ಳಾರಿಗೆ ಬಂದದ್ದು 1964. ಮೊದಲ ಮನೆ ರೈಲು ಹಳಿಯ ಪಕ್ಕ. ಕೆಲವು ದಿನ ರೈಲು ಎದೆಯ ಮೇಲೆ ಹೋದಂತಹ ಅನುಭವ. ಹೆಚ್ಚೂ ಕಡಿಮೆ ಎಂಟು ವರುಷಗಳ ತನಕ ಶಾಲೆಗಾಗಿ ರೈಲಿನ ಹಳಿ ಕ್ರಾಸ್ ಮಾಡಬೇಕಿತ್ತು. ಗುಂತಕಲ್ ಕಡೆಯಿಂದ ಬರುವಾಗ ಸ್ಟೇಶನ್‍ಗಿಂತ ಮುಂಚೆ ರೈಲು ನಿಧಾನಗತಿಯಲ್ಲಿ ಚಲಿಸುವಾಗ ಮನೆ ಹತ್ತಿರವಿದ್ದುದರಿಂದ ಚಲಿಸುವ ರೈಲಿನಿಂದ ಇಳಿದು ಮನೆ ಸೇರುತ್ತಿದ್ದೆವು. ನಾನಾಗ ಎಂಬಿಬಿಎಸ್ ಮೊದಲ ವರ್ಷದಲ್ಲಿದ್ದೆ. ಹೀಗೊಮ್ಮೆ ರೈಲು ನಿಧಾನಿಸಲಿಲ್ಲ. ಹೆದರಿ ಇಳಿಯಲಿಲ್ಲ. ಚಿಕ್ಕವನಾದ ನನ್ನ ತಮ್ಮ ಹಾರಿಬಿಟ್ಟ. ಅವನು ಜಾರಿ ಬಿದ್ದದ್ದು ನೋಡಿದೆ ಅಷ್ಟೇ. ನಂತರ ನಾನು ಸ್ಟೇಷನ್‍ನಿಂದ ಬಂದರೂ ಅವನು ಬಂದಿರಲಿಲ್ಲ. ಹೆದರಿದೆ. ಮನೆಯಲ್ಲಿ ಏನೂ ಹೇಳದೆ ಬಿದ್ದ ಜಾಗಕ್ಕೆ ಹೊರಟೆ. ಅಲ್ಲೂ ಕಾಣಲಿಲ್ಲ. ಜಾರಿಬಿದ್ದ ಹೊಡೆತಕ್ಕೆ ಮೈಯಲ್ಲ ಸಣ್ಣಪುಟ್ಟ ಪರಚಿತ ಗಾಯಗಳೊಂದಿಗೆ ತಮ್ಮ ಮನೆಗೆ ಬಂದಿದ್ದ. ಈ ಎಲ್ಲ ನೆನಪು ತೇಲಿಬಂದು ಮತ್ತೊಮ್ಮೆ ಈ ಕಾದಂಬರಿಯನ್ನು ಓದಿದಾಗ ಅನುವಾದ ಮಾಡಲೇಬೇಕು ಅನ್ನಿಸಿತು. ಡಾ. ಅರವಿಂದ ಪಟೇಲ್, ಲೇಖಕರು

ಕಾದಂಬರಿ ಓದುತ್ತಿದ್ದಂತೆ ಕಳೆದುಹೋದ ಬಾಲ್ಯದ ದಿನಗಳಿಗೆ ಮರಳಿ ಹೋದಂತಾಯಿತು. ಇದಕ್ಕೆ ಕಾರಣವಿದೆ. ನನ್ನ ಬಾಲ್ಯ-ತಾರುಣ್ಯಗಳು ರೈಲ್ವೆ ಹಳಿಯ ಪಕ್ಕದ ಮನೆಗಳಲ್ಲಿ ಕಳೆದವು. ರೈಲಿನ ಸಿಳ್ಳು ಕೇಳಿದರೆ ಮನೆಯೊಳಗಿಂದ ಹೊರಬಂದು ಅದರಲ್ಲಿದ್ದ ಅಜ್ಞಾತ ಪಯಣಿಗರಿಗೆ ಕೈಬೀಸುವುದು ನಮಗೆಲ್ಲ ಅಭ್ಯಾಸವಾಗಿತ್ತು. ಬಿಡುವಿನ ಸಮಯವನ್ನು ರೈಲು ನಿಲ್ದಾಣದಲ್ಲಿ ಮರದ ದಿಮ್ಮಿಗಳನ್ನು ಗೂಡ್ಸುಗಳಿಗೆ ಲೋಡು ಮಾಡುವುದನ್ನು ನೋಡುತ್ತ ಕಳೆಯುತ್ತಿದ್ದೆವು. ಕಾಲೇಜು ವಿದ್ಯಾಭ್ಯಾಸವನ್ನೂ ನಿತ್ಯ ರೈಲುಪಯಣ ಮಾಡಿಯೇ ಮುಗಿಸಿದೆ. ಬೆಳೆದ ಮೇಲೂ ರೈಲು ನನ್ನ ಬೆನ್ನುಬಿಡಲಿಲ್ಲ. ಈಗಲೂ ನನ್ನ ಮನೆ ರೈಲ್ವೆಹಳಿಗೆ ಸಮೀಪದಲ್ಲಿದೆ. ರೈಲುಗಾಡಿ ನನಗೊಂದು ವಿಸ್ಮಯ. ಈ ದೃಷ್ಟಿಯಿಂದ ನಾವೆಲ್ಲ ‘ಪಥೇರ್ ಪಾಂಚಾಲಿ’ಯ ಮಕ್ಕಳೇ. ಅದರಲ್ಲಿ ಮಕ್ಕಳು ರೈಲನ್ನು ನೋಡಲು ಹೋಗುವ ಅದ್ಭುತವಾದ ದೃಶ್ಯವಿದೆ. ಈ ಕಾದಂಬರಿಯಲ್ಲೂ ಜೀವನದಲ್ಲಿ ಮೊದಲ ಬಾರಿಗೆ ರೈಲನ್ನು ನೋಡುವ ಮಕ್ಕಳ ದೃಶ್ಯವಿದೆ.

ಇಲ್ಲಿ ಬರುವ ಮೂರು ಮಕ್ಕಳು ರೈಲಿಗೆ ತಮ್ಮನ್ನು ತೆರೆದುಕೊಳ್ಳುವುದು ಒಂದು ನಾಟಕೀಯವೂ ಕಷ್ಟದಾಯಕವೂ ಆದ ಪ್ರಸಂಗದಿಂದ. ಅವರ ಅಪ್ಪನನ್ನು ಶತ್ರುದೇಶಕ್ಕೆ ಗುಪ್ತಮಾಹಿತಿ ಒದಗಿಸುತ್ತಿದ್ದಾನೆಂದು ಆಪಾದಿಸಿ ಸರ್ಕಾರ ಬಂಧಿಸಿ ಸೆರೆಮನೆಗೆ ಹಾಕುತ್ತದೆ. ಇದನ್ನು ಮಕ್ಕಳಿಗೆ ಹೇಳದಂತೆ ಗುಟ್ಟಾಗಿಟ್ಟು, ಗಂಡ ಬರುವತನಕ ಕುಟುಂಬವನ್ನು ಸಂಭಾಳಿಸುವ ಹೊಣೆ ಈ ಮಕ್ಕಳ ತಾಯಿಯ ಮೇಲೆ ಬೀಳುತ್ತದೆ. ಹೀಗಾಗಿ ಇದ್ದಕ್ಕಿದ್ದಂತೆ ಬಡತನಕ್ಕೆ ಇಳಿಯುವ ಕುಟುಂಬವು ಲಂಡನ್ ನಗರ ತೊರೆದು, ಒಂದು ಹಳ್ಳಿಗೆ ವಲಸೆ ಬರುತ್ತದೆ. ಹೊಸ ಪರಿಸರದಲ್ಲಿ ಮಕ್ಕಳು ತಮ್ಮ ಜೀವಂತಿಕೆ ಪ್ರಕಟಿಸುತ್ತ ಹೋಗುತ್ತವೆ. ಇಡೀ ಕಾದಂಬರಿ ಅವರು ಮಾಡುವ ಅನೇಕ ಬಗೆಯ ಸಾಹಸಗಳನ್ನು ಒಳಗೊಂಡಿದೆ. ಡಾ. ರಹಮತ್ ತರೀಕೆರೆ, ಹಿರಿಯ ಲೇಖಕರು, ವಿಮರ್ಶಕರು

acchigoo modhalu the railway children

                                                            ಕಲೆ : ಹಾದಿಮನಿ

ಹಿಂಗೆ.. ಹಿಂಗೆ.. ಒಂದೂರಾಗ…

ಅವರ ಕಥೆ ಎಲ್ಲಿಂದ ಶುರು ಮಾಡೋದು, ಹಾ… ಯಾವ ಕಡೆಯಿಂದ ಶುರು ಮಾಡಿದರೂ ಕಥೆ ಕಥೆಯಾಗಿಯೇ ಸಾಗಬೇಕಲ್ವ? ರೈಲಿಗೂ ಅವರಿಗೂ ಮೊದಲಿನಿಂದಲೂ ಯಾವುದೇ ಹತ್ತಿರದ ಸಂಬಂಧವಿರಲಿಲ್ಲ. ಹಾಗಾಗಿ ಅವರೆಂದೂ ತಮ್ಮನ್ನು ರೈಲಿನ ಜೊತೆಗೆ ಗುರುತಿಸಿಕೊಂಡವರಲ್ಲ. ಯಾವಾಗಲೋ ಒಮ್ಮೆ ‘ಮ್ಯಾಸ್ಕೆಲೈನ್ ಆ್ಯಂಡ್ ಕೂಕ್ಸ್’ ಎನ್ನುವ ಇಂಗ್ಲಂಡ್‍ನ ಪ್ರಸಿದ್ಧ ಹೋಟೆಲ್​ಗೆ ರೈಲಿನ ಮೂಲಕ ಹೋಗಬಹುದು. ‘ಪ್ಯಾಂಟೋಮೈಮ್’ ಎನ್ನುವ ಮಕ್ಕಳ ಬೊಂಬೆ ಆಟದ ಆನಂದ ಅನುಭವಿಸೋದಕ್ಕೆ, ಪ್ರಾಣಿಸಂಗ್ರಹಾಲಯಕ್ಕೆ, ‘ಮೆಡಮ್ ಟುಸ್ಸಾಡ್ಸ್’ ಹೆಸರಿನ ಮೇಣದ ವಸ್ತು ಸಂಗ್ರಹಾಲಯಕ್ಕೆ ಹೀಗೆ, ಕೆಲವೇ ಕೆಲವು ವಿಶೇಷ ಸಂದರ್ಭಗಳಲ್ಲಿ ರೈಲು ಪ್ರಯಾಣ ಮಾಡಬಹುದೆಂದು ಅವರು ತಿಳಿದಿದ್ದರು.

ಅವರು ಮಧ್ಯಮ ವರ್ಗದ ಕುಟುಂಬದ ಮಕ್ಕಳು. ದೊಡ್ಡ ನಗರದಿಂದ ದೂರವಿದ್ದರು. ಅಪ್ಪ ಅಮ್ಮನ ಜೊತೆ ವಾಸವಾಗಿದ್ದರು. ಸಾಮಾನ್ಯವಾದ ಮನೆ ಅವರದು. ಕೆಂಪು ಇಟ್ಟಿಗೆಗಳಿಂದ ಕೂಡಿದ ಗೋಡೆಗಳು, ಬಣ್ಣದ ಗಾಜಿನಿಂದ ಕೂಡಿದ ಮುಂಬಾಗಿಲು, ಟೈಲ್ಸ್​ಗಳ ಹಾದಿಪಟ್ಟಿಯೇ ಪಡಸಾಲೆ ಎಂದು ಕರೆಸಿಕೊಂಡಿತ್ತು. ಬಿಸಿನೀರು ಸೌಲಭ್ಯವಿದ್ದ ಬಚ್ಚಲುಮನೆ, ವಿದ್ಯುತ್ತಿನ ಬೆಲ್‍ಗಳು, ಬಿಳಿ ಬಣ್ಣದ ಗೋಡೆಗಳು, ಫ್ರೆಂಚ್ ಕಿಟಕಿಗಳು ಇದ್ದವು. ‘ಎಲ್ಲಾ ಮಾಡರ್ನ್ ಸೌಲಭ್ಯಗಳಿರುವ ಮನೆ’ ಎಂದು ಬಾಡಿಗೆಗೆ ಗೊತ್ತು ಮಾಡಿಕೊಡುವ ಏಜೆಂಟ್‍ಗಳು ಹೇಳುತ್ತಿದ್ದರು.

ಮನೆಯಲ್ಲಿ ಮೂವರು ಮಕ್ಕಳು. ರಾಬರ್ಟಾ ಎಲ್ಲರಿಗಿಂತ ದೊಡ್ಡವಳು. ಯಾವ ಅಮ್ಮನಿಗೂ ತನ್ನ ಮಕ್ಕಳಲ್ಲಿ ಇಂಥವರೇ ಇಷ್ಟವಾದವರೆಂದು ಇರೋದಿಲ್ಲ. ಹಾಗೇನಾದರೂ ಈ ಮನೆಯಲ್ಲಿ ಇರೋದಾದರೆ ಅದು ರಾಬರ್ಟಾ ಅನ್ನಬಹುದಿತ್ತು. ಎರಡನೆಯವನು ಪೀಟರ್, ಎಂಜಿನೀಯರ್ ಆಗಬೇಕು ಎಂದುಕೊಂಡವನು. ಕೊನೆಯವಳು ಫಿಲ್ಲಿಸ್, ಹಾಗೆಂದರೆ ತುಂಬಾ ಚೆನ್ನಾಗಿರೋಳು ಎಂದರ್ಥ.

ಅಕ್ಕಪಕ್ಕದ ಹೆಂಗಸರೊಡನೆ ವಿನಾಕಾರಣ ಹರಟೆ ಹೊಡೆಯುತ್ತಾ ಕಾಲ ಕಳೆಯವುದು, ಅದಕ್ಕಾಗಿ ಅವರಿಗಾಗಿ ಕಾಯುವುದು, ತಾನು ಅವರನ್ನು ಕಾಣಲು ಹೋಗೋದು, ಇದ್ಯಾವುದೂ ತಾಯಿಗೆ ಇಷ್ಟವಿರಲಿಲ್ಲ. ಸಾಧ್ಯವಿದ್ದಷ್ಟೂ ಅವಳು ಮಕ್ಕಳಿಗಾಗಿ ಸಮಯ ಮಾಡಿಕೊಳ್ಳುತ್ತಿದ್ದಳು. ಅವರೊಡನೆ ಆಟವಾಡುತಿದ್ದಳು, ಅವರಿಗಾಗಿ ಪುಸ್ತಕ ಓದುತ್ತಿದ್ದಳು. ಅವರ ಹೋಮ್‍ವರ್ಕ್ ಮಾಡಲು ಸಹಾಯ ಮಾಡುತ್ತಿದ್ದಳು. ಇದಲ್ಲದೆ, ಅವರು ಶಾಲೆಗೆ ಹೋದಾಗ, ಅವರಿಗಾಗಿ ಕತೆಗಳನ್ನು ಕೂಡ ಬರೆಯುತ್ತಿದ್ದಳು. ಚಹಾ ಸಮಯದಲ್ಲಿ ಎತ್ತರದ ದನಿಯಲ್ಲಿ ಓದುತ್ತಿದ್ದಳು. ಮಕ್ಕಳ ಹುಟ್ಟುಹಬ್ಬದ ಸಮಯಕ್ಕೆ ಮೋಜಿನ ಚುಟುಕು ಪದ್ಯಗಳನ್ನು ರಚಿಸುತ್ತಿದ್ದಳು. ಪುಟ್ಟ ಬೆಕ್ಕಿನ ಮರಿಗೆ ಹೆಸರು ಇಡುವಾಗ, ಬೊಂಬೆ ಮನೆಯನ್ನು ಅಂದಗೊಳಿಸುವಾಗ, ಗಂಟಲುಬಾವಿನಿಂದ ಮಕ್ಕಳು ಗುಣವಾದಾಗ, ಹೀಗೆ ಹಲವಾರು ಖುಷಿಯ ಸಮಯಗಳಲ್ಲಿ ಈ ಚುಟುಕು ಹಾಡುಗಳನ್ನು ಅವಳು ಹಾಡುತ್ತಿದ್ದಳು.

ಮೂವರೂ ಅದೃಷ್ಟವಂತರೇ. ಆ ಮನೆಯಲ್ಲಿ ಅವರಿಗೆ ಬೇಕಾದುದೆಲ್ಲ ಸಿಗುತ್ತಿತ್ತು. ಒಳ್ಳೆಯ ಬಟ್ಟೆಗಳು, ಚಳಿಗಾಲಕ್ಕೆ ಬೆಚ್ಚಗಾಗಿಸುವ ಬೆಂಕಿಕುಂಡವಿತ್ತು. ಮಕ್ಕಳಿಗಾಗಿಯೇ ಆಟಿಕೆಗಳಿಂದ ತುಂಬಿದ್ದ ನರ್ಸರಿ ಕೋಣೆಯೊಂದಿತ್ತು. ಗೋಡೆಯ ಮೇಲೆ ‘ಮದರ್‍ಗೂಸ್’ನ ದೊಡ್ಡ ಚಿತ್ರ ಗೋಡೆಯನ್ನು ಅಲಂಕರಿಸಿತ್ತು. ಮನೆಯಲ್ಲಿ ಇವರನ್ನು ನೋಡಿಕೊಳ್ಳುವುದಕ್ಕೆ ದಯಾಳು ಗುಣದ, ಹಾಸ್ಯ ಪ್ರವೃತ್ತಿಯ ಆಯಾ ಕೂಡ ಇದ್ದಳು. ಅವರೆಲ್ಲ ತುಂಬಾ ಹಚ್ಚಿಕೊಂಡ ಜೇಮ್ಸ್ ಎನ್ನುವ ನಾಯಿ ಸಹ ಜೊತೆಗಿತ್ತು.

acchigoo modhalu the railway children

                                                                             ಕಲೆ : ಹಾದಿಮನಿ

ಎಡಿತ್ ನೆಸ್ಬಿಟ್ : ಆಧುನಿಕ ಇಂಗ್ಲಿಷ್ ಲೇಖಕರಲ್ಲಿ ಇವರದು ಮಹತ್ವದ ಹೆಸರು. 1858ರಂದು ಇಂಗ್ಲೆಂಡಿನ ಕೆನ್ನಿಂಗ್ಟನ್‍ನಲ್ಲಿ ಇವರು ಹುಟ್ಟಿದರು. ಸಮಾಜವಾದದ ಬಗ್ಗೆ ಒಲವಿದ್ದ ನೆಸ್ಬಿಟ್ ಮಾರ್ಕ್ಸ್​ವಾದಿ, ಸಮಾಜವಾದೀ ಸಿದ್ಧಾಂತಿಯಾದ ವಿಲಿಯಂ ಮೋರಿಸ್ ಅವರ ಅನುಯಾಯಿ. ಪತಿ ಹಬರ್ಟ್ ಬ್ಲಾಂಡ್ ಜೊತೆ ಸೇರಿ ಫ್ಯಾಬಿಯಾನ್ ಸೊಸೈಟಿಯನ್ನು ಆರಂಭಿಸಿದರು. ನೆಸ್ಬಿಟ್ 1890ರ ಹೊತ್ತಿಗೆ ಮಕಳ ಕಥನ ಸಾಹಿತ್ಯದ ಬರವಣಿಗೆ ಆರಂಭಿಸಿದ್ದರು. ಅವರ ರಚನೆಯ ಅರವತ್ತು ಕೃತಿಗಳಲ್ಲಿ ಮಕ್ಕಳಿಗಾಗಿ ನಲವತ್ತಕ್ಕೂ ಹೆಚ್ಚಿವೆ. ಅವು ಅತ್ಯಂತ ಸರಳ ಮತ್ತು ಹಾಸ್ಯಮಯ ನಿರೂಪಣೆ ಹಾಗೂ ಸಹಜ ಪಾತ್ರ ಲಕ್ಷಣಗಳನ್ನು ಹೊಂದಿವೆ. ಇವರ ಕಥೆಗಳಲ್ಲಿ ಫ್ಯಾಂಟಸಿ ಇಣುಕಿದ್ದರೂ ಅದು ಮಕ್ಕಳ ದೈನಂದಿನ ಬದುಕಿನ ಸಂಗತಿಗಳ ನಿರೂಪಣೆಯ ಭಾಗವಾಗಿಯೇ ಬಂದಿರುತ್ತದೆ. ಅವರ ಪ್ರಮುಖ ಕೃತಿಗಳಲ್ಲಿ ‘ದಿ ಸೀಕ್ರೆಟ್ ಟ್ರೆಷರ್ ಸೀಕರ್ಸ್’ (1899), ‘ದಿ ವುಡ್ಬಿಗುಡ್ಸ್’ (1901), ‘ದಿ ರಿವೋಲ್ಟ್ ಆಫ್ ದಿ ಟಾಯ್ಸ್ ಅಂಡ್ ವಾಟ್ ಕಮ್ಸ್ ಆಫ್ ಕ್ವಾರೆಲಿಂಗ್’ (1902), ‘ಫೈವ್ ಚಿಲ್ಡ್ರನ್ ಅಂಡ್ ಇಟ್’ (1902), ‘ದಿ ಸ್ಟೋರಿ ಆಫ್ ದಿ ಅಮ್ಯುಲೆಟ್’ (1906) ಪ್ರಮುಖವಾದವು.

ಡಾ. ಅರವಿಂದ ಪಟೇಲ್ : 1959ರಲ್ಲಿ ಬಳ್ಳಾರಿಯ ಕೃಷಿಕ ಕುಟುಂಬದಲ್ಲಿ ಇವರು ಹುಟ್ಟಿದ್ದು. ವೃತ್ತಿಯಿಂದ ವೈದ್ಯರಾಗಿದ್ದರೂ ಸಹಜ ಕೃಷಿಯ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ಇವರು, ಅರಿವು ಸಂಘಟನೆಯ ಮೂಲಕ ಬಳ್ಳಾರಿಯ ಶಾಲಾಮಕ್ಕಳಿಗೆ, ಶಿಕ್ಷಕರಿಗೆ ಆರೋಗ್ಯ, ಪರಿಸರ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದಾರೆ. ಕನಸಿನಂಗಳ, ಬೆಳಕಿನತ್ತ ಕವನ ಸಂಕಲನಗಳು.

(ಈ ಪುಸ್ತಕದ ಖರೀದಿಗಾಗಿ :9448804905)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ಕಡಿದಾಳು ಶಾಮಣ್ಣನವರ ‘ಕಾಡ ತೊರೆಯ ಜಾಡು’ ನಾಳೆಯಿಂದ ಲಭ್ಯ

Published On - 4:21 pm, Sun, 15 August 21

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ