Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಥೇಮ್ಸ್ ತಟದ ತವಕ ತಲ್ಲಣ (ಜಾಗತಿಕ ಮಾಧ್ಯಮ ಲೋಕದೊಳಗೊಂದು ಪಯಣ)
ಲೇಖಕರು : ಸತೀಶ್ ಚಪ್ಪರಿಕೆ
ಪುಟ : 192
ಬೆಲೆ : ರೂ. 192
ಮುಖಪುಟ ವಿನ್ಯಾಸ : ವೀರೇಶ ಹೊಗೆಸೊಪ್ಪಿನವರ
ಪ್ರಕಾಶನ : ನವಕರ್ನಾಟಕ ಪ್ರಕಾಶನ, ಬೆಂಗಳೂರು
*
ಇದೇ 19ರಂದು ಈ ಕೃತಿಯ ಎರಡನೇ ಮುದ್ರಣವನ್ನು ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸಂಜೆ ಐದಕ್ಕೆ ಪತ್ರಕರ್ತ ಎಸ್. ಜನಾರ್ಧನ ಅವರು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಸೃಜನಶೀಲತೆಯ ಕುರಿತು, ನಿಮ್ಮೊಳಗಿನ ಬರಹಗಾರ ಈಗ ಏನು ಯೋಚಿಸುತ್ತಿರಬಹುದು ಎಂದು ಸತೀಶ್ ಚಪ್ಪರಿಕೆ ಅವರಿಗೆ ಕೇಳಿದಾಗ…
*
ನಂ. 13 ರೀನಿಯಸ್ ಸ್ಟ್ರೀಟ್…
ಸರಿಯಾಗಿ ಹದಿನಾಲ್ಕು ವರ್ಷಗಳ ಹಿಂದಿನ ಮಾತು.
ಅದು ಟಿವಿ9 ಆರಂಭದ ದಿನಗಳು. ಚಾನೆಲ್ ಲಾಂಚ್ ಆಗುವುದಕ್ಕಿಂತ ಮೊದಲು ಇನ್ಪುಟ್ ವಿಭಾಗದ ಮುಖ್ಯಸ್ಥನಾಗಿ ಮೇಲಿನ ವಿಳಾಸದಲ್ಲಿದ್ದ ಕಟ್ಟಡದ ಒಳಹೊಕ್ಕವ, ನಂತರ ಸುಮಾರು ಹತ್ತು ತಿಂಗಳ ಕಾಲ ನಾನು ನಾನಾಗಿರಲಿಲ್ಲ. ಬೆಳಿಗ್ಗೆ 5ರಿಂದ ನಡುರಾತ್ರಿ 1ರವರೆಗೆ ಬದುಕೆಲ್ಲವೂ ಟಿವಿ9. ನಂತರ ಒಂದೇ ಒಂದು ರಜೆ ಅಥವಾ ವಾರದ ರಜೆಯಿಲ್ಲದೇ ಹತ್ತು ತಿಂಗಳು ಕಳೆದಿದ್ದೆ.
ಆ ನಡುವೆ ಸಾಹಿತ್ಯ, ಪುಸ್ತಕ, ಓದು, ಬರವಣಿಗೆ, ಓಡಾಟ, ಸೃಜನಶೀಲತೆ, ಏಕಾಂತ ಎಲ್ಲವೂ ಜೀವನದಲ್ಲಿ ಮರೆತು ಹೋಗುವ ಹಂತ ತಲುಪಿದ್ದವು. ಒಂದು ಹಂತದಲ್ಲಿ ಅದೋ ಅಥವಾ ಇದೋ ಎಂಬ ನಿರ್ಧಾರ ಮಾಡಬೇಕಾಗಿ ಬಂದಾಗ ಆಯ್ಕೆ ಮಾಡಿದ್ದು ಎರಡನೆಯದನ್ನು.
ಆ ಎರಡನೇ ಆಯ್ಕೆಯ ಪರಿಣಾಮವಾಗಿಯೇ ‘ಥೇಮ್ಸ್ ತಟದ ತವಕ ತಲ್ಲಣ’ ಬರೆದದ್ದು. ಅದಕ್ಕೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಾಪ್ತವಾಗಿದ್ದು. ಈಗ ಎರಡನೇ ಮುದ್ರಣ ಕಾಣುತ್ತಿರುವುದು. ಅದೂ ಹನ್ನೆರಡು ವರ್ಷಗಳ ನಂತರ!
ಯಾವುದೇ ಸೃಜನಶೀಲ ಲೇಖಕ ಅಥವಾ ವ್ಯಕ್ತಿಯ ಪಾಲಿಗೆ ಓದು-ಓಡಾಟ ಇಲ್ಲದೇ ಹೋದಲ್ಲಿ ಜೀವನ ನಶ್ವರವಾಗಿ ಹೋಗುತ್ತದೆ. ನನಗೆ ಓದು-ಓಡಾಟದ ಹುಚ್ಚು ಹಿಡಿದಿದ್ದು 1985ರ ನಂತರ. ನಾನು ಪಿಯುಸಿ ಮುಗಿಸಿದ್ದೆ. ತಂದೆಯವರು ಊರಿಂದ ಬಂದು ಬೆಂಗಳೂರಿನ ದೇವಯ್ಯ ಪಾರ್ಕ್‌ನಲ್ಲಿ ‘ಶ್ರೀರಾಮಚಂದ್ರ ವಿಲಾಸ’ ಎಂಬ ಪುಟ್ಟ ರೆಸ್ಟೋರೆಂಟ್ ಒಂದನ್ನು ಲೀಸ್ಗೆ ಪಡೆದು ನಡೆಸುತ್ತಿದ್ದರು. ನಾನು ಆನಂದ್ ರಾವ್ ಸರ್ಕಲ್ ನಲ್ಲಿರುವ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿ’ನಲ್ಲಿ ಬಿಎಸ್ಸಿ ಗೆ ಸೇರಿದ್ದೆ. ದೇವಯ್ಯ ಪಾರ್ಕ್ ಮತ್ತು ಹರಿಶ್ಚಂದ್ರ ಘಾಟ್ ನಡುವಿನ ಇಳಿಜಾರಿನಲ್ಲಿ ಸಿ.ಕೆ.ಸರ್ಕುಲೇಟಿಂಗ್ ಲೈಬ್ರರಿ ಇತ್ತು. ಆ ಲೈಬ್ರರಿಯ ಮಾಲೀಕ ಕಾಂತರಾಜು ನಮ್ಮ ಹೋಟೆಲ್ಗೆ ಬರುತ್ತಿದ್ದರು. ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು. ಅವರ ಮೂಲಕ ನಾನು ಪುಸ್ತಕ ಪ್ರಪಂಚದೊಳಗೆ ಮುಳುಗಿ ಹೋದೆ.
ನಮ್ಮೆಲ್ಲರ ಪಾಲಿಗೆ ಕಾಂತಿ ಆಗಿದ್ದ ಕಾಂತರಾಜು ಯಾವುದೇ ಶುಲ್ಕವಿಲ್ಲದೇ ಯಾವುದೇ ಕೃತಿಯನ್ನು ಓದುವ ಸ್ವತಂತ್ರ ಅವಕಾಶವನ್ನು ನನಗೆ ಕೊಟ್ಟಿದ್ದರು. ಮುಂದಿನ ಮೂರು ವರ್ಷ ನಾನು ‘ಇಂದಿರಾಬಾಯಿ’ಯಿಂದ ಹಿಡಿದು ‘ಶಿಕಾರಿ’ವರೆಗೆ ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳ ಆಳಕ್ಕೆ ಶೋಧಿಸುವ ಯತ್ನ ಮಾಡಿದ್ದೆ ಅದೆಂತಹ ಓದಿನ ಸುಃಖವದು!? ವಾರಕ್ಕೆ ಎರಡು-ಮೂರು ಕಾದಂಬರಿಗಳನ್ನು ಓದಿ ಮುಗಿಸಿ ಬಡುತ್ತಿದ್ದೆ. ಆ ನಡುವೆ ಕೆಮಿಸ್ಟ್ರಿ, ಬಾಟನಿ ಮತ್ತು ಝೂಲಾಜಿ ಹಳ್ಳ ಹತ್ತಿ ಹೋಗಿದ್ದವು. ನನ್ನ ಮೂರು ವರ್ಷದ ಬಿಎಸ್ಸಿ ನಾಲ್ಕನೇ ವರ್ಷಕ್ಕೆ ಮುಂದುವರೆಯಿತು. ಸ್ವಲ್ಪ ದಿನ ಕಾದಂಬರಿಗಳನ್ನು ಪಕ್ಕಕ್ಕಿಟ್ಟು ಪಠ್ಯ ಪುಸ್ತಕ ಕೈಯಲ್ಲಿ ಹಿಡಿದ ಪರಿಣಾಮ ಪ್ರಥಮ ದರ್ಜೆಯಲ್ಲಿ ಬಿಎಸ್ಸಿ ಪಾಸಾಗಿದ್ದೆ.
ಅದಾದ ಮೇಲೆ ಸಿಕ್ಕಿದ ಸಂಶೋಧನಾ ಸಹಾಯಕನ ಕೆಲಸ ಮತ್ತು ನಂತರ ಪತ್ರಕರ್ತನಾಗುವವರೆಗಿನ ಎಲ್ಲ ಅವತಾರಗಳ ನಡುವೆಯೂ ಓದು ಮುಂದುವರೆದಿತ್ತು. ಆಳವಾದ ಓದಿನ ಪರಿಣಾಮವಾಗಿ ಬರೆಯುವ ಪ್ರಯತ್ನ ಕೂಡ ಆರಂಭವಾಗಿತ್ತು. ಮೂಲತಃ ಪಿಯುಸಿಯಲ್ಲಿ ಇದ್ದಾಗ ಕವನಗಳನ್ನು ಬರೆಯುತ್ತಿದ್ದವ ಕ್ರಮೇಣ ಕಥೆ ಮತ್ತು ಲೇಖನಗಳ ಲೋಕ ಪ್ರವೇಶಿಸಿದ್ದೆ. ಕೊನೆಗೆ ಬರವಣಿಗೆಯ ಶಕ್ತಿಯಿಂದಲೇ ಪತ್ರಕರ್ತನಾಗಿ ಆಯ್ಕೆಯಾಗಿ ‘ಪ್ರಜಾವಾಣಿ’ ಸೇರಿದ್ದು. ಟಿವಿ9ನ ಸ್ಟುಡಿಯೋ ಬದುಕನ್ನು ಹೊರತು ಪಡಿಸಿದರೆ ಕಳೆದ ಮೂವ್ವತ್ಮೂರು ವರ್ಷಗಳ ಅವಧಿಯಲ್ಲಿ ನನ್ನನ್ನು ಮನುಷ್ಯನಾಗಿ ಇಟ್ಟಿರುವುದು ಓದು-ಓಡಾಟ. ನಡು-ನಡುವೆ ನನ್ನದೇ ಏಕಾಂತದ ಬದುಕಲ್ಲಿ ವಿಹರಿಸುವ ಕಲೆ ಕೂಡ ಕರಗತವಾಗಿದೆ.
ಮಹದಾಯಿಯ ನಿಗೂಢ ಕಾನನದ ನಡುವಿಂದ ಹಿಡಿದು, ಆಂಧ್ರ-ಒಡಿಶಾ ಗಡಿಯಲ್ಲಿನ ನಕ್ಸಲರ ಗೂಡು; ಕೊಲಂಬೊಂದಿಂದ ಹಿಡಿದು ಸ್ಕಾಟ್ಲೆಂಡ್ ಮೂಲೆ; ದುಬೈನ ಮಿರುಗುವ ಮಿನಾರುಗಳಿಂದ ಸಿಂಗಪುರದ ಹೊಳೆವ ರಸ್ತೆಗಳು. ಕಳುವಿನ ಬಾಗಿಲಿನ ಗುಡಿಸಿಲಿನ ಕಲ್ಲು ಕುಟಿಗರ ಸೀತುವಿನಿಂದ ಹಿಡಿದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್-ಬಿಲಿಯಾಧಿಪತಿ ಎನ್.ಆರ್. ನಾರಾಯಣ ಮೂರ್ತಿ, ಕನಕ್ ಭಾಯ್, ದೇಶ್ ದೇಶಪಾಂಡೆ, ಲಾರ್ಡ್ ಸ್ವರಾಜ್ ಪಾಲ್- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಹರೀಶ್ ಹಂದೆ- ಬೇಜವಾಡ ವಿಲ್ಸನ್, ಶಿವರಾಮ ಕಾರಂತ- ಕೆ.ವಿ.ಸುಬ್ಬಣ್ಣ… ಹೀಗೆ ಬದುಕಿನ ವಿವಿಧ ಹಂತದಲ್ಲಿ ನನ್ನ ಬದುಕಿಗೆ ಒಂದು ರೂಪ ನೀಡಿದ ಮಹಾತ್ಮರ ಸಂಖ್ಯೆ ಲೆಕ್ಕಕ್ಕಿಲ್ಲದಷ್ಟು. ಅಲ್ಲಿ ಕೋರಮಂಗಲದಲ್ಲಿ ಸಿಕ್ಕಿದ್ದ ಒಬ್ಬ ಆಟೋ ಡ್ರೈವರ್ ಇಂದ ಹಿಡಿದು ಗುಜರಾತ್ ನಲ್ಲಿ ಸಿಕ್ಕಿದ್ದ ಈಗ ಈ ದೇಶವನ್ನಾಳುತ್ತಿರುವ ಪ್ರಧಾನ ಮಂತ್ರಿಯವರೆಗೆ ಎಲ್ಲರೂ ಇದ್ದಾರೆ.
ಯಾವುದೇ ವ್ಯಕ್ತಿ, ಅದರಲ್ಲಂತೂ ಒಬ್ಬ ಸೃಜನಶೀಲ ವ್ಯಕ್ತಿಯ ಬದುಕು ರೂಪುಗೊಳ್ಳುವುದೇ ಆ ವ್ಯಕ್ತಿಯ ಸುತ್ತಲಿರುವ ನೂರಾರು-ಸಾವಿರಾರು ಇನ್ನಿತರ ಪ್ರಭಾವಶಾಲಿ ವ್ಯಕ್ತಿಗಳಿಂದ. ಇಲ್ಲಿ ‘ನಾನು’ ಎನ್ನುವುದು ಮಿಥ್ಯ. ಅವರೆಲ್ಲರ ಬದುಕು-ಪ್ರಭಾವದ ಫಲವೇ ‘ನಾನು’. ಇದು ಕೇವಲ ಬದುಕಿಗೆ ಮಾತ್ರ ಸೀಮಿತವಾದದ್ದಲ್ಲ. ಬರವಣಿಗೆಗೆ ಕೂಡ ಈ ನಿತ್ಯಸತ್ಯ ಅನ್ವಯವಾಗುತ್ತದೆ. ಯಾವುದೇ ಒಬ್ಬರ ಬರಹಗಾರ, ಲೇಖಕ, ಕಥೆಗಾರ, ಕವಿ, ನಾಟಕಗಾರನ ಸಾಹಿತ್ಯ ರೂಪುಗೊಳ್ಳುವುದೇ ಸುತ್ತಲಿನ ವ್ಯಕ್ತಿಗಳಿಂದ. ಸುತ್ತಲಿನ ಅನುಭವ ಸಮಾಜದಿಂದ. ಆ ಎಲ್ಲ ನಾಡು-ನುಡಿ, ಜೀವಿಗಳು-ಮನುಷ್ಯರು ಬೇರೆ ಬೇರೆ ರೀತಿಯಲ್ಲಿ ಒಂದು ಸೃಜನಶೀಲ ಮನಸ್ಸಿನ ಮೇಲೆ ಪರಿಣಾಮ ಬೀರುವುದರ ಪರಿಣಾಮವೇ ಒಂದು ಕಥೆ/ ಕಾದಂಬರಿ/ ಕವಿತೆ/ ನಾಟಕ ಇತ್ಯಾದಿ.
ಇಲ್ಲಿ ‘ನಾನು’ ಎನ್ನುವುದು ಇಲ್ಲವೇ ಇಲ್ಲ. ಏನಿದ್ದರೂ ‘ಅವರು’ ಮಾತ್ರ. ಅಂತಹ ‘ಅವರು’ ಮತ್ತು ‘ನೀವುಗಳು’ ಒಂದಾಗಿಯೇ ನನ್ನನ್ನು ರೂಪಿಸಿದ್ದು, ನನ್ನನ್ನು ರೂಪಾಂತಗೊಳಿಸುತ್ತಿರುವುದು, ಬೆಳೆಸುತ್ತಿರುವುದು, ಬರೆಯುಸುತ್ತಿರುವುದು, ಬದುಕಿಸುತ್ತಿರುವುದು ಎನ್ನುವ ಬಲವಾದ ನಂಬಿಕೆ ನನ್ನದು. ಒಬ್ಬ ವ್ಯಕ್ತಿ ‘ಸಮಷ್ಟಿ’ಯ ‘ಪ್ರಾಡಕ್ಟ್’. ಅಂತಹ ಒಂದು ಕಾಲಘಟ್ಟದ ‘ಸಮಷ್ಟಿ’ಯ ಸೃಜನಶೀಲ ‘ಪ್ರಾಡಕ್ಟ್’ ಆಗಿರುವ ನನಗೆ ಬರೆಯಲು ಒಂದಿಷ್ಟು ಶಕ್ತಿ ಇದೆ ಎನ್ನುವುದೇ ತೃಪ್ತಿ ನೀಡುವ ಮಾತು. ಅದು ನನ್ನ ಭಾಗ್ಯ.
ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ನವಕರ್ನಾಟಕ ಪ್ರಕಾಶನ
*
ಪರಿಚಯ : ಜಾಗತಿಕ ನೆಲೆಯಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರತಿಬಿಂಬವಾಗಿ ಹೊರಹೊಮ್ಮಿರುವ ‘ಬುಕ್ ಬ್ರಹ್ಮ’ ಡಿಜಿಟಲ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರು ಸತೀಶ್ ಚಪ್ಪರಿಕೆ. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು, ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆ ಎಂಬ ಕುಗ್ರಾಮಕ್ಕೆ ಸೇರಿದ್ದು ಕೃಷಿ ಕುಟುಂಬದಲ್ಲಿ ಹುಟ್ಟಿದವರು. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ‘ಪ್ರಜಾವಾಣಿ’ ದಿನಪತ್ರಿಕೆ ಮೂಲಕ ಪತ್ರಕರ್ತ ವೃತ್ತಿ ಆರಂಭಿಸಿದರು. ನಂತರ ‘ಟಿವಿ9’, ‘ದಿ ಸಂಡೆ ಇಂಡಿಯನ್’ ನಿಯತಕಾಲಿಕದ ಸಹಾಯಕ ಸಂಪಾದಕರಾದರು. ಒಂದು ವರ್ಷ ಕಾಲ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ನಂತರ ‘ವಿಆರ್‌ಎಲ್ ಮಿಡಿಯಾ’ ಸಂಸ್ಥೆಯ ಪ್ರಧಾನ ಸಂಪಾದಕರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದರು. ಪತ್ರಿಕಾ ವ್ಯವಸಾಯಕ್ಕೆ ವಿದಾಯ ಹೇಳಿದ ಮೇಲೆ, ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಸಂಸ್ಥೆ ‘ಫರ್ಬೆಂಡನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತ ‘ಪ್ರಜಾವಾಣಿ’ ಮತ್ತು ‘ಹಫಿಂಗ್ಟನ್ ಪೋಸ್ಟ್’ (ಇಂಗ್ಲಿಷ್)ನಲ್ಲಿ ಅಂಕಣಗಳನ್ನು ಬರೆದರು.
ಮೂರು ದಶಕಗಳ ಹಿಂದೆ ಹಿಂದೆ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಬೆಳಕಿಗೆ ಬಂದ ಕತೆಗಾರರಾದ ಅವರ ‘ಮತ್ತೊಂದು ಮೌನಕಣಿವೆ’, ‘ಹಸಿರು ಹಾದಿ’, ‘ವಿಶ್ವಕಪ್ ಕ್ರಿಕೆಟ್’, ‘ಬೇರು’, ‘ಥೇಮ್ಸ್ ತಟದ ತವಕ ತಲ್ಲಣ’, ‘ದೇವಕಾರು’, ‘ಮುಸಾಫಿರ್’, ‘ಖಾಂಜಿ ಭಾಯ್’ ಮತ್ತು ‘ವರ್ಜಿನ್ ಮೊಹಿತೊ’ ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಈ ಪೈಕಿ ‘ಥೇಮ್ಸ್ ತಟದ ತವಕ ತಲ್ಲಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.
*
ಇದನ್ನೂ ಓದಿ : Book Release : ಅಚ್ಚಿಗೂ ಮೊದಲು : ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಆತ್ಮಕಥನ ‘ಹರಿವ ನದಿ’ ಲೋಕಾರ್ಪಣೆಗೆ ಸಿದ್ಧ