ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ

Patriarchy : ಎಪ್ಪತ್ತೈದು ವರ್ಷಗಳ ಹಿಂದೆ ಕೋಲಾರದ ಹಳ್ಳಿಯೊಂದರಲ್ಲಿ ಹುಟ್ಟಿದ ಕೆಳಮಧ್ಯಮ ವರ್ಗದ ಹೆಣ್ಣುಮಗಳು ಶಿಕ್ಷಣ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಹೊತ್ತಿಗೆ ಏನೆಲ್ಲ ಹಾದು ಬರಬೇಕಾಯಿತು?

ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ
Follow us
ಶ್ರೀದೇವಿ ಕಳಸದ
|

Updated on:May 22, 2022 | 3:46 PM

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ವಿದ್ಯಾವಂತ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಬೆಳೆದ ಹೆಣ್ಣುಮಕ್ಕಳು ನಮ್ಮ ದೇಶದಲ್ಲಿ ವೃತ್ತಿಯಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಸಾಧನೆಯ ಶಿಖರಕ್ಕೇರುವುದನ್ನು ನಾವು ನೋಡಿದ್ದೇವೆ ಅಥವಾ ಓದಿದ್ದೇವೆ. ಆದರೆ ದುರದೃಷ್ಟವಶಾತ್ ನಾನು ಈ ವರ್ಗಕ್ಕೆ ಸೇರಿರಲಿಲ್ಲ. ಕರ್ನಾಟಕದ ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ, ಸಂಕೋಚ ಪ್ರವೃತ್ತಿಯ, ಅಂತರ್ಮುಖಿಯಾದ ನಾನು ಯಾರೂ ಊಹಿಸಲು ಸಾಧ್ಯವಿಲ್ಲದ ಯಶಸ್ಸನ್ನು ವೃತ್ತಿಯ ಮೂಲಕ ಪಡೆದೆ. ನನಗೆ ಮಾರ್ಗದರ್ಶನ ನೀಡಲು, ಪ್ರೋತ್ಸಾಹಿಸಲು ಇರಲಿ, ಹೆಚ್ಚಿನ ಶಿಕ್ಷಣ ನೀಡಲೂ ನನ್ನ ಪೋಷಕರು ಸಿದ್ಧರಿರಲಿಲ್ಲ. ಏಕೆಂದರೆ ಇನ್ನೂ ಐದು ಮಕ್ಕಳನ್ನು ಅವರು ಓದಿಸಬೇಕಿತ್ತು. ಇಂತಹ ಪರಿಸ್ಥತಿಯಲ್ಲಿ ಪದವಿಯ ನಂತರ ಸ್ನಾತಕೋತ್ತರ ಓದು, ಅದಾದ ಮೇಲೆ ಪಿಎಚ್​.ಡಿ ನಂತರ ನಂತರ ಇಲಿ ಹೆಗ್ಗಣಗಳ ನಿಯಂತ್ರಣದಲ್ಲಿ ಪರಿಣಿತಳಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆಯುವುದು ಸುಲಭವಾಗಿರಲಿಲ್ಲ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವಿಶ್ರಾಂತ ವಿಜ್ಞಾನಿಯಾಗಿ ಆಯ್ಕೆಯಾದ ಮತ್ತು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ನಾಮ ನಿರ್ದೇಶನಗೊಂಡ ಮೊದಲ ಮಹಿಳೆ ಎನ್ನಿಸಿಕೊಂಡೆ. ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ, ಬೆಂಗಳೂರು

ಕುಟುಂಬ ಮತ್ತು ಸರ್ಕಾರದಿಂದ ಎಲ್ಲಾ ಪ್ರೋತ್ಸಾಹವನ್ನು ಪಡೆಯುವ ಈ ದಿನಗಳಲ್ಲಿ ಮಹಿಳಾ ಶಿಕ್ಷಣ ಎನ್ನುವುದು ಸುಲಭವಾಗಿದೆ. ಹೆಚ್ಚಿನ ವ್ಯಾಸಂಗ ಮಾಡಲು ಅವಕಾಶಗಳು ಸಾಕಷ್ಟು ಉತ್ತಮವಾಗಿವೆ. ಆದರೆ 1950 ರಿಂದ 1973ರ ಅವಧಿಯಲ್ಲಿ ನಾನು ಅಧ್ಯಯನ ಮಾಡುವಾಗ ಅಂತಹ ವಾತಾವರಣ ಇರಲಿಲ್ಲ. ಕೆಲವೇ ಕೆಲವು ಹುಡುಗಿಯರು ಪದವಿಯನಂತರ ಎಂ.ಎಸ್​ಸಿ, ಎಂಎ ಓದಲು ಬರುತ್ತಿದ್ದರು. ಸಂಶೋಧನೆಯನ್ನು ತಮ್ಮ ಧ್ಯೇಯವಾಗಿಸಿಕೊಂಡರು ಕಡಿಮೆ ಹುಡುಗಿಯರು. ಪದವಿಯ ನಂತರ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನಾನು ನನ್ನ ತಂದೆಯನ್ನು ಬೇಡಿಕೊಳ್ಳಬೇಕಾಯಿತು. ನಾನು ಎಂ.ಎಸ್​ಸಿ ಅಧ್ಯಯನ ಮಾಡಲು ರಾಷ್ಟ್ರೀಯ ಸಾಲದ ವಿದ್ಯಾರ್ಥಿವೇತನವನ್ನು ಪಡೆಯುತ್ತೇನೆ ಎಂದು ಅವರಿಗೆ ಮನವರಿಕೆ ಮಾಡಿದ ನಂತರ ಅವರು ಸ್ನಾತಕೋತ್ತರ ಅಧ್ಯಯನಕ್ಕೆ ಒಪ್ಪಿಕೊಂಡರು. ಅದೃಷ್ಟವಶಾತ್ ನನಗೆ ಪಿ.ಎಚ್‌ಡಿ ಮಾಡಲು ಸಂಶೋಧನಾ ಫೆಲೋಶಿಪ್ ಸಿಕ್ಕಿತು.

ಕೃಷಿವಿಶ್ವವಿದ್ಯಾಲಯದಲ್ಲಿ ಉದ್ಯೋಗಕ್ಕೆ ಸೇರಿದ ನಂತರ ನನ್ನ ಸಂಶೋಧನೆಯ ವಿಷಯವೇ ಬೇರೆ ಆಯಿತು. ಹೊಲ ಗದ್ದೆಗಳಲ್ಲಿ, ತೋಟದ ಬೆಳೆಗಳಲ್ಲಿ, ಎಣ್ಣೆಕಾಳುಗಳ ಬೆಳವಣಿಗೆಯಲ್ಲಿ, ವಾಣಿಜ್ಯ ಬೆಳೆಗಳಲ್ಲಿ, ಮನೆಗಳಲ್ಲಿ, ಗೋದಾಮುಗಳಲ್ಲಿರುವ ಇಲಿ ಪ್ರಭೇದಗಳನ್ನು ಗುರುತಿಸುವುದಲ್ಲದೆ, ಅವುಗಳಿಂದಾಗುವ ನಷ್ಟದ ಪ್ರಮಾಣ, ಇಲಿ ಪಾಷಾಣಗಳು ಎಷ್ಟು ಪರಿಣಾಮಕಾರಿಯಾಗಿವೆ, ಇಲಿಗಳ ವರ್ತನೆ, ಅದನ್ನು ಹೇಗೆ ಅವುಗಳ ಹತೋಟಿಯಲ್ಲಿ ಉಪಯೋಗಿಸಿಕೊಳ್ಳಬಹುದು ಮುಂತಾದವು ನನ್ನ ಸಂಶೋಧನೆಯ ವಿಷಯಗಳಾಗಿದ್ದವು. ನಾನು ಹೆಚ್ಚಿನ ಸಮಯ ಹೊಲಗದ್ದೆಗಳಲ್ಲಿಯೇ ಹೆಣಗಬೇಕಾಗಿತ್ತು, ಹಳ್ಳಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡಬೇಕಾಗುತ್ತಿತ್ತು. ವೃತ್ತಿಪರ ಯಶಸ್ಸು ನಿಧಾನವಾಗಿ, ಸ್ಥಿರವಾಗಿ ಬರಲಾರಾಂಭಿಸಿತು.

ಇದನ್ನೂ ಓದಿ
Image
Humanity; ನಾನೆಂಬ ಪರಿಮಳದ ಹಾದಿಯಲಿ: ಪಾತರದವರಂಗ ಹಾಡ್ಕೊಂತ ಕುಣಕೊಂತ ಹೋಗಬೇಕಂತಿಯೇನು?
Image
ನಾನೆಂಬ ಪರಿಮಳದ ಹಾದಿಯಲಿ: ಪ್ರೀತಿಯನ್ನು ಆತುಕೊಂಡಿದ್ದಕ್ಕೆ ಇಂದು ನಿನ್ನ ಮುಂದೆ ಹೀಗಿದ್ದೇನೆ
Image
ನಾನೆಂಬ ಪರಿಮಳದ ಹಾದಿಯಲಿ: ಕಂಬಳಿ ಹುಳವೊಂದು ಚಿಟ್ಟೆಯಾಗುವ ಘಳಿಗೆ ಸಹಿಸಿಕೊಂಡಿದ್ದಕ್ಕೇ…

ಆದರೆ ಸುಲಭವಾಗಿ ಅಲ್ಲ. ಎಲ್ಲಾ ಹಂತಗಳಲ್ಲಿ ಲಿಂಗ ಪಕ್ಷಪಾತವಿತ್ತು, ದಮನದ ವಿರುದ್ಧ ಧೈರ್ಯವಾಗಿ ನಿಂತಿದ್ದರಿಂದ ಸಂಬಳ ನಿಲ್ಲಿಸಲಾಯಿತು. ನ್ಯಾಯವನ್ನು ಪಡೆಯಲು ಮತ್ತು ಇಲಾಖೆಯ ಮುಖ್ಯಸ್ಥರು ಮತ್ತು ಅಧೀನ ಅಧಿಕಾರಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ವರ್ಷಾನುಗಟ್ಟಲೆ ಹೋರಾಡಬೇಕಾಯಿತು. ವಿಶ್ವವಿದ್ಯಾನಿಲಯದಲ್ಲಿ ಮತ್ತು ನ್ಯಾಯಾಲಯದಲ್ಲಿ ಸುದೀರ್ಘವಾದ ಹೋರಾಟಗಳು ಅಂತಿಮವಾಗಿ ನನ್ನ ಕಷ್ಟಗಳನ್ನು ಕೊನೆಗೊಳಿಸಿದವು. ಆದರೆ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕ ಬರವಣಿಗೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಮುಂದುವರೆಯಿತು. ವಾಸ್ತವವಾಗಿ ಈ ಚಟುವಟಿಕೆಗಳು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದವು. ನಾನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ನಂತರ ಅಂತಾರಾಷ್ಟ್ರೀಯ ಮನ್ನಣೆ ಪಡೆದೆ. ಅಮೆರಿಕ ಮತ್ತು ಯುರೋಪ್‌ನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ನನ್ನ ಕಾರ್ಯಕ್ಷೇತ್ರ, ಸಂಶೋಧನೆಗೆ ಸಂಬಂಧಿಸಿ ಉಪನ್ಯಾಸಗಳನ್ನು ನೀಡಲು ಆಹ್ವಾನಿತಳಾದೆ. ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವುದು ಅನೇಕರಿಗೆ ಹೆಮ್ಮೆಯ ಸಾಧನೆಯಾಗಿದೆ. ಆದರೆ ನಾನು ಪ್ರಪಂಚದಾದ್ಯಂತ ಅಂತಹ ಸಾಕಷ್ಟು ವೈಜ್ಞಾನಿಕ ಸಮ್ಮೇಳನಗಳಲ್ಲಿ Sessional Chairman ಆಗಿ ವರ್ಷಗಟ್ಟಲೆ ಭಾಗವಹಿಸುತ್ತಿದ್ದೆ.

ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ

ವೈಯಕ್ತಿಕ ಜೀವನವು ಆಹ್ಲಾದಕರವಾಗಿತ್ತೇ? ಆರಂಭಿಕ ವರ್ಷಗಳಲ್ಲಿ ಇತ್ತು. ಮೊದಮೊದಲು ಒಳ್ಳೆಯ ಕೆಲಸದಲ್ಲಿದ್ದ ಪತಿರಾಯನ ಪ್ರೀತಿ, ಪ್ರೋತ್ಸಾಹ ಸಾಕಷ್ಟಿತ್ತು. ಆಮೇಲಾಮೇಲೆ ಹೆಚ್ಚು ಸಮಯ ನಿರುದ್ಯೋಗಿಯಾಗಿದ್ದ, ಆರ್ಥಿಕವಾಗಿ ನನ್ನ ಮೇಲೆ ಅವಲಂಬಿತನಾಗಿದ್ದ, ನನಗಿಂತ ಹತ್ತು ವರ್ಷ ದೊಡ್ಡವನಾಗಿದ್ದ, ನನಗಿಂತ ಕಡಿಮೆ ಓದಿದ್ದ (ಡಿಗ್ರಿಯನ್ನೂ ಮಾಡದ) ಗಂಡನೊಡನೆ ಜೀವನ ಗುಲಾಬಿಗಳ ಹಾಸಿಗೆಯಾಗಿರಲಿಲ್ಲ. ಇವೆಲ್ಲವನ್ನೂ Typical ಭಾರತೀಯ ನಾರಿಯಂತೆ ಹಲ್ಲು ಕಚ್ಚಿಕೊಂಡು ಸಹಿಸಿದೆ. ಆದರೆ ಅವನು ತನ್ನ ಮಗಳ ವಯಸ್ಸಿನ ನನ್ನ ಕಾರ್ಯದರ್ಶಿಯಾಗಿದ್ದ ಹುಡುಗಿಯೊಂದಿಗೆ ಲೈಂಗಿಕ ಸಂಬಂಧಕ್ಕೆ ಒಳಗಾದಾಗ ನನ್ನಿಂದ ಸಹಿಸಲಾಗಲಿಲ್ಲ. ಆಕೆ ಆತನನ್ನು ಮದುವೆಯಾಗಲು ಒತ್ತಾಯಿಸಿದಾಗ ಅವನು ಅವಳೊಂದಿಗೆ ಬೆಂಗಳೂರಿನ ಪಂಚತಾರಾ ಹೋಟೆಲ್ಲೊಂದರಲ್ಲಿ ಅವಳೊಂದಿಗೆ ಆತ್ಮಹತ್ಯೆ ಮಾಡಿಕೊಂಡನು. ಅದು ಕರ್ನಾಟಕದ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿ ಮಾಡಿತು. ಇದು ಸಾಲದೆಂಬಂತೆ 2000ನೇ ಇಸವಿಯಲ್ಲಿ ಆರು ಲಕ್ಷ ರೂಪಾಯಿ ಸಾಲವನ್ನು ಬಿಟ್ಟಿದ್ದರಿಂದ ಆದ ಕಾರ್ಪಣ್ಯಗಳು, ದ್ರೋಹ ಮಾಡಿದ ಸಂಕಟ, ಆರ್ಥಿಕ ಸಮಸ್ಯೆಗಳು, ಘಟನೆಗಳಿಂದ ಆಘಾತಕ್ಕೊಳಗಾದ ಹದಿಹರೆಯದ ಮಗಳ ಜವಾಬ್ದಾರಿ ಇವೆಲ್ಲವುಗಳಿಂದ ನಾನು ಹೈರಾಣಾಗಿದ್ದೆ. ಜೀವನ ಸಂಗಾತಿಯನ್ನು ಕಳೆದುಕೊಂಡ ನಷ್ಟದಿಂದ ದುಃಖಿತಳಾಗಿದ್ದೆ. ಆದರೆ ಅದಕ್ಕಿಂತ ಹೆಚ್ಚಾಗಿ ಕೋಪಗೊಂಡಿದ್ದೆ.

ಪತಿ ಎಂದು ಕರೆಯಲ್ಪಟ್ಟ ಹೀನನಡತೆಯ ಗಂಡಸೊಬ್ಬ ನನ್ನನ್ನು ಶೋಷಿಸಿದ್ದಾನೆ, ನನ್ನನ್ನು ಅವಮಾನಿಸಿ, ಸಮಸ್ಯೆಗಳ ಸರಪಳಿಯನ್ನು ನನ್ನ ಕುತ್ತಿಗೆಗೆ ಕಟ್ಟಿ ತಾನು ಮಾತ್ರ ವಿದೇಶಿ ಮಧ್ಯ ಕುಡಿದು Windsor Manor ಹೋಟೆಲಿನ ಸುಪ್ಪತ್ತಿಗೆಯಲ್ಲಿ ಆರಾಮವಾಗಿ ನಿದ್ದೆ ಮಾತ್ರೆ ತಿಂದು ಸುಖವಾಗಿ ಸತ್ತು ಹೋದ. ನಾನು ಸ್ವಲ್ಪ ದಿನ ದುಃಖಿಸಿದೆ. ಆದರೆ ನನ್ನ ಮತ್ತು ನನ್ನ ಮಗಳ ಜೀವನವನ್ನು ಸ್ವಾರ್ಥಿ, ನಡತೆಗೆಟ್ಟ ಗಂಡಸೊಬ್ಬನ ಆತ್ಮಹತ್ಯೆ ಹಾಳುಮಾಡಲು ಅವಕಾಶ ನೀಡಬಾರದು ಎಂದು ಮನಸ್ಸು ಮಾಡಿದೆ.

ಇದನ್ನೂ ಓದಿ : Gender Equality; ನಾನೆಂಬ ಪರಿಮಳದ ಹಾದಿಯಲಿ: ಪ್ರಶ್ನಿಸುವ ಸಾಹಸ ಮನೋಭಾವದ ಹೆಣ್ಣೆಂದರೆ ಸಮಾಜಕ್ಕೆ ಇನ್ನೂ ಬಿಸಿತುಪ್ಪವೆ?

ನಾನು ಆರ್ಥಿಕವಾಗಿ ಕುಸಿದು ಹೋಗಿದ್ದೆ, ನನ್ನ ಮಗಳನ್ನು ಮೌಂಟ್ ಕಾರ್ಮೆಲ್ ಕಾಲೇಜಿಗೆ ಸೇರಿಸಲು ನನ್ನ ಬಳಿ ರೂ.5000 ಇರಲಿಲ್ಲ. ಮಹಾ ಸ್ವಾಭಿಮಾನಿಯಾದ ನಾನು ಯಾರನ್ನೂ ಸಾಲ ಕೇಳಲಿಲ್ಲ ಕೊನೆಗೆ ನನ್ನ ಕ್ರೆಡಿಟ್ ಕಾರ್ಡ್ ಬಳಸಿ ಸಿಟಿ ಬ್ಯಾಂಕಿನಿಂದ ಸಾಲ ಮಾಡಿದೆ. ನನಗೆ ಸಿಟಿಬ್ಯಾಂಕ್ ಕಲ್ಪವೃಕ್ಷವಾಗಿತ್ತು. ನನ್ನ ಮನೆಯ ಮೇಲೆ ಆರು ಲಕ್ಷ ಸಾಲವನ್ನು ಅದೇ ಬ್ಯಾಂಕಿನಿಂದ ಪಡೆದು ಗಂಡ ಮಾಡಿದ ಸಾಲ ತೀರಿಸಿದೆ. ಕೆಲವು ವರ್ಷಗಳ ಕಾಲ ಪಡಿತರ ಸೇರಿದಂತೆ ನನ್ನ ಜೀವನಕ್ಕೆ ಅಗತ್ಯವಾದ ಎಲ್ಲಾ ಖರ್ಚುಗಳನ್ನು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಪೂರೈಸಿಕೊಂಡೆ.

ಹಣಕಾಸಿನ ಸಮಸ್ಯೆಗಳ ಹೊರತಾಗಿ, ನಾನು ಸಮಾಜದಲ್ಲಿ ಮತ್ತು ನಾನು ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾಲಯದಲ್ಲಿ ನನ್ನನ್ನು ಪುನರುತ್ಥಾನಗೊಳಿಸಿಕೊಳ್ಳಬೇಕಿತ್ತು. ನನ್ನ ಸಂಶೋಧನೆಯಲ್ಲಿ, ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವಲ್ಲಿ ಮತ್ತು ವೈಜ್ಞಾನಿಕ ಪುಸ್ತಕಗಳನ್ನು ಬರೆಯುವಲ್ಲಿ ನಾನು ಹಗಲು ರಾತ್ರಿ ಮುಳುಗಿದೆ. ಇವೆಲ್ಲವು ನನಗೆ ಹೊಸ ಜೀವನ ಮತ್ತು ಗೌರವವನ್ನು ತಂದುಕೊಟ್ಟವು. ಇಂದು ನನ್ನ ಕೆಲಸಗಳಿಂದ ನಾನು ಚೆನ್ನಾಗಿ ಗುರುತಿಸಲ್ಪಟ್ಟಿದ್ದೇನೆ ಮತ್ತು ಉತ್ತಮ ಯಶಸ್ಸನ್ನು ಸಾಧಿಸಿದ್ದೇನೆ.

ಪತಿಯಿಂದ ದ್ರೋಹ, ಮೋಸ, ಶೋಷಣೆ, ದಮನಕ್ಕೊಳಗಾದ ಮಹಿಳೆಯರಿಗೆ ನನ್ನ ಜೀವನ ಪಾಠವಾಗಬೇಕೆಂದು ನಾನು ಬಯಸುತ್ತೇನೆ. ಇಂದು ನನ್ನ ವೈಯಕ್ತಿಕ ಜೀವನದಲ್ಲಿ ಮತ್ತು ನನ್ನ ವೃತ್ತಿಜೀವನದಲ್ಲಿ ಎದುರಾದ ಏರಿಳಿತಗಳನ್ನು ಯಶಸ್ವಿಯಾಗಿ ಎದುರಿಸಿದ್ದೇನೆ ಮತ್ತು ತೃಪ್ತಿ ಹೊಂದಿದ್ದೇನೆ. ನನ್ನ ಈ ಜೀವನ ಅಸಾಧಾರಣವಾಗಿರದಿರಬಹುದು ಆದರೆ ಖಂಡಿತ ಸಾಮಾನ್ಯವಾದದ್ದಲ್ಲ. ಪುರುಷರ ಸ್ವಾರ್ಥದಿಂದ ನಲುಗಿದ ಹೆಂಗಸರನ್ನು ಮೇಲಕ್ಕೆತ್ತಿ, ವಿರೋಧಿಗಳ ವಿರುದ್ಧ ಹೋರಾಡಿ ಅವರ ಜೀವನವನ್ನು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ನನ್ನ ಆತ್ಮಕಥನ ಸ್ಫೂರ್ತಿದಾಯಕವಾಗಿರಬೇಕೆಂದು ಬಯಸುತ್ತಿದ್ದೇನೆ. ಇದು ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ.

(ಈ ಅಂಕಣ ಪ್ರತೀ ಭಾನುವಾರ ಪ್ರಕಟವಾಗಲಿದೆ. ಮೊದಲ ಭಾಗಕ್ಕಾಗಿ ಇಂದೇ ನಿರೀಕ್ಷಿಸಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 3:38 pm, Sun, 22 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್