Autobiography: ಆಧುನಿಕ ಶಕುಂತಲಾ ಕಥನ; ತಾರ್ಕಿಕವಾಗಿ ನಿಲುಕಿದ ರೇಖಾಗಣಿತ ಅಂಕಗಣಿತ, ಕಗ್ಗಂಟಾಗಿದ್ದ ಬೀಜಗಣಿತ

|

Updated on: Jun 26, 2022 | 6:30 AM

Hasan : ಆ ದಿನಗಳಲ್ಲಿ ನನಗೆ ಅಸಮಾಧಾನವುಂಟುಮಾಡಿದ್ದು, ಹಿಂದೂಗಳ ಒಂದು ನಿರ್ದಿಷ್ಟ ಪಂಗಡ ಬಿದಿರಿನ ಬುಟ್ಟಿಯಲ್ಲಿ ಸಂಗ್ರಹವಾದ ಶೌಚವನ್ನು ತಲೆ ಮೇಲಿಟ್ಟು ಸಾಗಿಸುತ್ತಿದ್ದ ಪದ್ಧತಿ. ಅದು ನನ್ನ ಮನಸ್ಸನ್ನು ತುಂಬಾ ಕದಡಿತ್ತು.

Autobiography: ಆಧುನಿಕ ಶಕುಂತಲಾ ಕಥನ; ತಾರ್ಕಿಕವಾಗಿ ನಿಲುಕಿದ ರೇಖಾಗಣಿತ ಅಂಕಗಣಿತ, ಕಗ್ಗಂಟಾಗಿದ್ದ ಬೀಜಗಣಿತ
Follow us on

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ಹಾಸನದಲ್ಲಿ ನನ್ನನ್ನು ಸರ್ಕಾರಿ ಬಾಲಕಿಯರ ವಿವಿಧೋದ್ದೇಶ ಪ್ರೌಢಶಾಲೆಗೆ ಸೇರಿಸಲಾಯಿತು. ಶಾಲೆಯ ಕಟ್ಟಡವು ಆಧುನಿಕವಾಗಿದ್ದು, ಮಧ್ಯದಲ್ಲಿ ಅಂಗಳ ಮತ್ತು ಸುತ್ತಲೂ ತರಗತಿ ಕೊಠಡಿಗಳಿದ್ದವು. ಕೇಂದ್ರ ಸರ್ಕಾರಿ ಉದ್ಯೋಗಿ (ಆದಾಯ ತೆರಿಗೆ ಇಲಾಖೆ) ಆಗಿದ್ದ ತಂದೆ ಇಂಗ್ಲಿಷ್‌ನ ಮಹತ್ವವನ್ನು ತಿಳಿದಿದ್ದರು ಮತ್ತು ಆ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಆರಿಸಿದರು. 8, 9 ಮತ್ತು 10 ನೇ ತರಗತಿಗಳಲ್ಲಿ  ಕೇವಲ ಎರಡು ವಿಭಾಗಗಳಿದ್ದವು. ಇಂಗ್ಲಿಷ್ ಮಾಧ್ಯಮದ ‘ಎ’ ವಿಭಾಗ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ‘ಬಿ’ ವಿಭಾಗ. ನನ್ನ ಎರಡನೇ ಭಾಷೆ ಕನ್ನಡವಾಗಿತ್ತು. ನಮ್ಮ ಮುಸ್ಲಿಂ ಸಹಪಾಠಿಗಳು ಉರ್ದುವನ್ನು ಎರಡನೇ ಭಾಷೆಯಾಗಿ ಆರಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ನನಗೆ ಸಾಕಷ್ಟು ಸಂಖ್ಯೆಯ ಮುಸ್ಲಿಂ ಸಹಪಾಟಿಗಳಿದ್ದರು. ಹಾಸನದಲ್ಲಿ, ಇದು ಆ ಸಮುದಾಯದ ಪ್ರಗತಿಶೀಲ ಧೋರಣೆಯನ್ನು ಪ್ರತಿಬಿಂಬಿಸುತ್ತಿತ್ತು.

ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 6)

ಇದನ್ನೂ ಓದಿ
Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

ನನಗೆ ಸ್ಪಷ್ಟವಾಗಿ ನೆನಪಿರುವುದು ಸುರೈಯ್ಯ ಎಂಬ ಒಂದೇ ಹೆಸರಿನ ಇಬ್ಬರು ನನ್ನ ಸೀನಿಯರ್ಸ್. ನಾವು ಅವರನ್ನು ದೊಡ್ಡ ಸುರಯ್ಯ ಮತ್ತು ಸಣ್ಣ ಸುರಯ್ಯ ಎಂದು ಕರೆಯುತ್ತಿದ್ದೆವು. ದೊಡ್ಡ ಸುರಯ್ಯ ಉರ್ದು ಶಿಕ್ಷಕಿಯ ಮಗಳು, ಅವಳು ಎಲ್ಲಾ ಕ್ರೀಡೆಗಳಲ್ಲಿ ಎಲ್ಲಾ ಬಹುಮಾನಗಳನ್ನು ಪಡೆಯುತ್ತಿದ್ದಳು ಮತ್ತು ತರಗತಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಿದ್ದಳು. ಶಾಂತಾ (ನನ್ನ ಪ್ರಕಾರ) ಎಂಬ ಹಿಂದೂ ಹುಡುಗಿ ಅವಳಿಗೆದುರಾಗಿ ಸಮರ್ಥವಾಗಿ ಸ್ಪರ್ಧಿಸುತ್ತಿದ್ದಳು, ಅವಳು ಸಹ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸುತಿದ್ದಳು ಮತ್ತು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲಾ ಬಹುಮಾನಗಳನ್ನು ಗೆಲ್ಲುತ್ತಿದ್ದಳು. ಇದು ಇಬ್ಬರ ನಡುವಿನ ಆರೋಗ್ಯಕರ ಸ್ಪರ್ಧೆಯಾಗಿತ್ತು. ನಾನು ಅವರಿಬ್ಬರಿಂದಲೂ ಸ್ಫೂರ್ತಿ ಪಡೆದಿದ್ದೆ ಮತ್ತು ಕ್ರೀಡೆ,  ಅಧ್ಯಯನ ಎರಡರಲ್ಲೂ ಮಿಂಚಿದ್ದೆ.

ಹಾಸನದಲ್ಲಿ ನಾನು ಮೊದಲು ಗಮನಿಸಿದ್ದು ರಸ್ತೆಯ ತುಂಬ ಹರಡಿದ್ದ ಮೈಕಾ ತುಂಡುಗಳು. ನಾವು ಅದನ್ನ ಕಾಗೆ ಬಂಗಾರ ಅಂತಿದ್ದೆವು. ಅವು ಬೆಳ್ಳಿಯ ತುಂಡುಗಳಂತೆ ಹೊಳೆಯುತ್ತಿದ್ದವು. ಎರಡನೆಯ ವಿಶೇಷವೆಂದರೆ ನಾವು ಹೊಂದಿದ್ದ ಆಹ್ಲಾದಕರ ನೆರೆಹೊರೆಯ ಸಂಬಂಧಗಳು. ನಾವು ಬಾಡಿಗೆಗೆ ಪಡೆದ ಮೊದಲ ಮನೆಯಲ್ಲಿ ನಮ್ಮ ನೆರೆಯ ಗೃಹಿಣಿ ಅಂಗವಿಕಲರಾಗಿದ್ದರು. ಬಾಲ್ಯದಲ್ಲಿ ಪೋಲಿಯೋದಿಂದ ಬಳಲಿದ ಆಕೆಗೆ ಕಾಲುಗಳು ದುರ್ಬಲವಾಗಿದ್ದರೂ. ಆಕೆ ಆ ಎರಡೂ ಕಾಲುಗಳನ್ನು ಮತ್ತು ಕೈಗಳನ್ನು ಅಂಬೆಗಾಲಿಟ್ಟು ತಿರುಗಾಡಲು ಬಳಸುತ್ತಿದ್ದಳು. ಆಕೆಯದು ಅಪಾರ ಪ್ರೀತಿಯ ಹೃದಯ. ಪ್ರತಿ ಭಾನುವಾರ ಅವಳು ನಮಗೆ ಇಪ್ಪತ್ತು ಅಥವಾ ಅದಕ್ಕಿಂತ ಹೆಚ್ಚು ಅಕ್ಕಿ ರೊಟ್ಟಿಗಳನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಕಳುಹಿಸುತ್ತಿದ್ದಳು, ನಾವು ಮೊದಲ ಬಾರಿಗೆ ಈ ತಿಂಡಿಯ ರುಚಿ ನೋಡಿದ್ದು ಹಾಸನದಲ್ಲೇ. ಅವಳು ತನ್ನ ಇತರ ವಿಶೇಷ ಅಡಿಗೆಗಳನ್ನೂ ಸಹ ಹಂಚಿಕೊಳ್ಳುತ್ತಿದ್ದಳು.

ಸ್ವಲ್ಪ ಸಮಯದ ನಂತರ ನಾವು ಕೆಆರ್ ಪುರಂನ ಒಂದು ದೊಡ್ಡ ಮನೆಗೆ ಹೋದೆವು. ಕಾಂಪೌಂಡಿನ ಒಂದು ಬದಿಯಲ್ಲಿ ಅವಳಿ ಮನೆಗಳು ಮತ್ತು ಹಿಂಭಾಗದಲ್ಲಿ ಮೂರನೇ ಮನೆ ಇತ್ತು. ಎಲ್ಲಾ ಮೂರು ಮನೆಗಳಿಗೆ ಹಿತ್ತಲಿನ ಒಂದು ಮೂಲೆಯಲ್ಲಿ ಮೂರು ಪ್ರತ್ಯೇಕ ಶೌಚಾಲಯಗಳಿದ್ದವು. ಆ ದಿನಗಳಲ್ಲಿ ನನಗೆ ಅಸಮಾಧಾನವುಂಟುಮಾಡಿದ್ದು, ಹಿಂದೂಗಳ ಒಂದು ನಿರ್ದಿಷ್ಟ ಪಂಗಡ ಬಿದಿರಿನ ಬುಟ್ಟಿಯಲ್ಲಿ ಸಂಗ್ರಹವಾದ ಶೌಚವನ್ನು ತಲೆ ಮೇಲಿಟ್ಟು ಸಾಗುಸುತಿದ್ದ ಪದ್ಧತಿ. ಅದು ನನ್ನ ಮನಸ್ಸನ್ನು ತುಂಬಾ ಕದಡಿತ್ತು.

ಹೂವಿನ ಗಿಡಗಳು ಮತ್ತು ಮರಗಳಿಗೆ ಹಾಸನವು ಅತ್ಯುತ್ತಮ ಹವಾಮಾನವನ್ನು ಹೊಂದಿತ್ತು. ನಾನು ಮೊದಲ ಬಾರಿಗೆ ಅಪಾರ ಗಾತ್ರದ ಮತ್ತು ಅದ್ಭುತ ಬಣ್ಣಗಳ ದಾಲ್ಹಿಯಾ ಹೂವುಗಳನ್ನು ಇಲ್ಲಿ ಕಂಡೆ. ಅವಕ್ಕೆ ಬಿಟ್ಟದಾವರೆ ಎಂಬ ಸುಂದರ ಹೆಸರನ್ನು ಇಲ್ಲಿಯ ಜನ ಇಟ್ಟಿದ್ದರು. ಕೆಲವೆಡೆ ನೇರಳೆ ಬಣ್ಣದ ಪಾದ್ರಿ ಹೂವುಗಳು ರಸ್ತೆಗೆ ರತ್ನಗಂಬಳಿಯನ್ನ ಹಾಸಿದ್ದವು. ಇನ್ನು ಕೆಲವೆಡೆ ದಾರಿ ಬದಿಯ ಬಿಳಿ ಮುಗಿಲು ಮಲ್ಲಿಗೆಗಳು ಇಡೀ ರಸ್ತೆಗೆ ಸುಗಂಧವನ್ನು ಪ್ರೊಕ್ಷಿಸಿದ್ದವು. ನಾನು ಕಂಡ ಮತ್ತೊಂದು ವಿಚಿತ್ರವೆಂದರೆ ಮನೆ ಮುಂದೆ ಕಾಳು, ಹುಳ ಹುಪ್ಪಟೆಗಳನ್ನು ಹೆಕ್ಕಿ ತಿನ್ನುತಿದ್ದ, ಮುಸ್ಲಿಮರು ಸಾಕಿದ್ದ ಟರ್ಕಿ ಕೋಳಿಗಳು. ಸಾಪ್ತಾಹಿಕವಾಗಿ ನಡೆಯುತಿದ್ದ ಸಂತೆಯಲ್ಲಿ ಏನಿಲ್ಲಾ, ಏನುಂಟು? ಅಲ್ಲಿ ಪಿನ್ನುಗಳಿಂದ ಹಿಡಿದು ತರಕಾರಿ ಮತ್ತು ಹಣ್ಣುಗಳವರೆಗೆ ನಗರ ಮತ್ತು ಹಳ್ಳಿಯ ಜನಗಳ  ಎಲ್ಲಾ ಅಗತ್ಯತೆಗಳನ್ನು ಪೂರೈಸುವ ವಸ್ತುಗಳು ಲಭ್ಯವಿದ್ದವು. ಜಾನುವಾರು ಜಾತ್ರೆ ಹಾಸನದ ಮತ್ತೊಂದು ಆಕರ್ಷಣೆ. ಈ ಜಾತ್ರೆ ಸಮಯದಲ್ಲಿ ಕರ್ನಾಟಕದ ಪ್ರಸಿದ್ಧ ನಾಟಕ ಮಂಡಳಿಗಳು ಕಿಕ್ಕಿರಿದ ಪ್ರೇಕ್ಷಕರಿಗೆ ತಮ್ಮ ನಾಟಕಗಳನ್ನು ಪ್ರದರ್ಶಿಸುತಿದ್ದವು.

ಇದನ್ನೂ ಓದಿ : Column: ವೈಶಾಲಿಯಾನ; ತಾಯ್ನಾಡಿಗೆ ಮರಳಿದ ಡಾ. ವಸುಂಧರಾ, ನೆನಪರುಚಿಯಲ್ಲಿ ‘ಊರೆಂಬ ಉದರ’ದ ಪ್ರಮೀಳಾ

ಹಾಸನದಲ್ಲಿ ನಾನು ಉತ್ತಮ ವಾಗ್ಮಿ, ಜಾಣ ವಿದ್ಯಾರ್ಥಿ, ಉತ್ತಮ ಕ್ರೀಡಾಪಟು, ಮತ್ತು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ (NCC) ಪೂರ್ವಗಾಮಿಯಾದ ACC ಯ ಕೆಡೆಟ್ ಆಗಿ ಹೊರಹೊಮ್ಮಿದೆ. ಹಾಸನದಲ್ಲಿ ಮಾತ್ರವಲ್ಲದೆ ಅರಸೀಕೆರೆ, ಬೇಲೂರು, ಅರಕಲಗೂಡು ಮುಂತಾದೆಡೆ ನಡೆದ ವಿವಿಧ ಅಂತರ್‌ ಶಾಲಾ ಚರ್ಚೆಗಳಲ್ಲಿ ನನ್ನ ಶಾಲೆಯನ್ನು ಪ್ರತಿನಿಧಿಸಿ ಬಹುಮಾನ ಗಳಿಸಿದೆ. ಆ ದಿನಗಳಲ್ಲಿ ಹಾಸನದಲ್ಲಿ ನಡೆಯುತಿದ್ದ ಒಂದು ಗಮನಾರ್ಹದ ಆಚರಣೆ ಎಂದರೆ ಗಣೇಶ ಹಬ್ಬದ ಸಮಯದಲ್ಲಿ ಅಂತರ್ ಶಾಲಾ ಚರ್ಚೆಗಳು. ಆರ್ಕೆಸ್ಟ್ರಾಗಳು, ನಾಟಕಗಳು ಮುಂತಾದ ಅನೇಕ ಮನರಂಜನಾ ಕಾರ್ಯಕ್ರಮಗಳಿಗೆ ಸಮಾನವಾಗಿ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಚರ್ಚಾ ಕೌಶಲವನ್ನು ಪ್ರದರ್ಶಿಸುವುದನ್ನು ಕೇಳಲು ಪ್ರೇಕ್ಷಕರು ನೆರೆದಿರುತ್ತಿದ್ದರು. ಇದು ಸಾರ್ವಜನಿಕರು ಶಾಲಾ ಮಕ್ಕಳಿಗೆ ಕೊಡುತ್ತಿದ್ದ ಪ್ರೋತ್ಸಾಹವನ್ನು ತೋರಿಸುತ್ತಿತ್ತು. ನಾನು ರೋಮಾಂಚನಗೊಂಡ ಇನ್ನೊಂದು ಘಟನೆಯೆಂದರೆ ಅರಸೀಕೆರೆಯಲ್ಲಿ ನಡೆದ ಅಂತಹ ಒಂದು ಚರ್ಚಾ ಸ್ಪರ್ಧೆಯಲ್ಲಿ ನಾನು ಗೆದ್ದ ನಗದು ಬಹುಮಾನ. ಶ್ರೀಮಂತರು ಯುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದ ರೀತಿ ಅದಾಗಿತ್ತು, ಹಿಂದಿನ ದಿನಗಳಲ್ಲಿ ರಾಜರು ತಮ್ಮಆಸ್ಥಾನಗಳಲ್ಲಿ ಪ್ರತಿಭೆಯನ್ನು ಗೌರವಿಸುತ್ತಿದ್ದ ಹಾಗೆ !

ಹಾಸನ ಜಿಲ್ಲೆಯ ತಾಲೂಕುಗಳ ಚರ್ಚಾ ಸ್ಪರ್ಧೆಗಳಲ್ಲಿ ನನ್ನ ಶಾಲೆಯನ್ನು ಪ್ರತಿನಿಧಿಸುವುದಲ್ಲದೆ  ಶಿಮ್ಲಾ ಬಳಿಯ ತಾರಾದೇವಿಯಲ್ಲಿ ನಡೆದ ರೆಡ್ ಕ್ರಾಸ್ ಕ್ಯಾಂಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದೆ. ಅದು ನನ್ನ ಶಾಲಾ ಜೀವನದ ಅತ್ಯಂತ ರೋಮಾಂಚಕ ಅನುಭವವಾಗಿತ್ತು. ನಾನು 14 ನೇ ವಯಸ್ಸಿನಲ್ಲೇ ಹಿಮಾಲಯದ ಶಿಬಿರಕ್ಕೆ ಪ್ರಯಾಣಿಸಿದ್ದೆನೆಂದರೆ ಅದು ಉಹಾತೀತವಾದ ಸಂತೋಷದ ವಿಷಯವಾಗಿತ್ತು. ಪ್ರಯಾಣವೇ ಸಾಹಸಮಯ. ಹಾಸನದಿಂದ ಬೆಂಗಳೂರಿಗೆ ಬಸ್, ಮದ್ರಾಸ್ ಮೇಲ್ ಮೂಲಕ ಬೆಂಗಳೂರಿನಿಂದ ಮದ್ರಾಸ್ ನಗರಕ್ಕೆ, ಅಲ್ಲಿಂದ ಗ್ರ್ಯಾಂಡ್ ಟ್ರಂಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನವದೆಹಲಿಗೆ ಮತ್ತು ಪಾರಂಪರಿಕ ರೈಲು ಎಂದು ಪರಿಗಣಿಸಿದ್ದ ಕಾಲ್ಕಾ-ಶಿಮ್ಲಾ ಪ್ಯಾಸೆಂಜರ್ ರೈಲಿನಲ್ಲಿ ತಾರಾದೇವಿಗೆ. ಹಾಸನದಿಂದ ತಾರಾದೇವಿಗೆ ಒಟ್ಟು ಐದು ದಿನಗಳ ಪ್ರಯಾಣ.  ಒಂದು ತಿಂಗಳ ಅವಧಿಯ ಶಿಬಿರ ಅದಾಗಿತ್ತು. ನಮಗೆ ಪ್ರಥಮ ಚಿಕಿತ್ಸೆ, ಯುದ್ಧ ಸಂದರ್ಭಗಳನ್ನು ಹೇಗೆ ಎದುರಿಸುವುದು, ಗಾಯಾಳುಗಳನ್ನು ನೋಡಿಕೊಳ್ಳುವುದು ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಯಿತು.

ಹಳೆಬೀಡು ಶಿಲ್ಪ. ಸೌಜನ್ಯ : ಅಂತರ್ಜಾಲ

ಹಿಂದಿರುಗುವಾಗ ನಾವು ಚಂಡೀಗಢಕ್ಕೆ ಹೋದೆವು, ಅಲ್ಲಿ ಪಂಜಾಬ್‌ನ ರಾಜ್ಯಪಾಲರು ರಾಜಭವನದಲ್ಲಿ ನಮಗೆ ಊಟದೌತಣ ಏರ್ಪಡಿಸಿದ್ದರು. ಚಂಡೀಗಢದಿಂದ ನಾವು ಹೊಸ ದೆಹಲಿಗೆ ಬಸ್ಸಿನಲ್ಲಿ ತಲುಪಿದೆವು, ಅಲ್ಲಿ ಎರಡು ದಿನ ತಂಗಿ, ಹಳೆ ದೆಹಲಿ ಮತ್ತು ನವದೆಹಲಿಯನ್ನು ವೀಕ್ಷಿಸಲು ಹೋದೆವು. ದೂರದ ಪ್ರಯಾಣ, ಈ ಎಲ್ಲಾ ಮಾನ್ಯತೆ, ಎಲ್ಲೆಲ್ಲಿಂದಲೋ ಶಿಬಿರಕ್ಕೆ ಬಂದ ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆ, ಮನೆಯಿಂದ ದೂರದಲ್ಲಿರುವ ಶಿಬಿರದಲ್ಲಿ ಉಳಿದುಕೊಂಡಿದ್ದು, ಇವೆಲ್ಲ ಅನುಭವಗಳು ನನ್ನನ್ನು ಪ್ರಬುದ್ಧಳನ್ನಾಗಿ ಮಾಡಿದವು. ದೇಶದಾದ್ಯಂತ ಬೇರೆ ಬೇರೆ ಜನರೊಂದಿಗೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಈ ಪ್ರಯಾಣಗಳು ಮತ್ತು ಶಿಬಿರ ನನಗೆ ಕೊಟ್ಟವು.

ನಾನು ಇಷ್ಟೊಂದು ವಿವಿಧ ಅನುಭವಗಳನ್ನು ಒಂದು ಕಡೆ ಪಡೆಯುತ್ತಿದ್ದರೆ, ಇನ್ನೊಂದು ಕಡೆ ಪಾಠಗಳಲ್ಲಿ ಅದರಲ್ಲೂ ಬೀಜಗಣಿತದಲ್ಲಿ ಹಿಂದೆ ಬಿದ್ದುಹೋದೆ. ಬೀಜಗಣಿತ ಒಂಬತ್ತನೇ ತರಗತಿಯಲ್ಲಿ ಪರಿಚಯಿಸಲಾದ ಹೊಸ ವಿಷಯ. ಶಾಲೆಗಳು ಪ್ರಾರಂಭವಾದ ಒಂದು ತಿಂಗಳ ನಂತರ ನಾವು ಹಿಂತಿರುಗಿದ್ದರಿಂದ ನಾನು ಬೀಜಗಣಿತದ ಮೊದಲ ಕೆಲವು ಅಧ್ಯಾಯಗಳ ತರಗತಿಗಳನ್ನು ತಪ್ಪಿಸಿಕೊಂಡೆ. ಮೊದಲನೆಯದಾಗಿ, ಸಂಖ್ಯೆಗಳಿಗೆ ಅಂಟಿಕೊಂಡಿರುವ ಇಂಗ್ಲಿಷ್ ಅಕ್ಷರಗಳನ್ನು ಅರ್ಥಮಾಡಿಕೊಳ್ಳುವುದು ನನಗೆ ವಿಚಿತ್ರವಾಗಿ ಕಂಡಿತು. ಆದರೆ ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ತಾರ್ಕಿಕವಾಗಿ ಪರಿಹರಿಸುವುದು ನನಗೆ ಜೀವನದುದ್ದಕ್ಕೂ ಸಮಸ್ಯೆಯಾಗಿ ಉಳಿದುಬಿಟ್ಟಿತು. ರೇಖಾಗಣಿತ ಮತ್ತು ಅಂಕಗಣಿತವು ತಾರ್ಕಿಕವಾಗಿತ್ತು ಮತ್ತು ನಾನು ಅವುಗಳನ್ನು ನಾನಾಗಿಯೇ ಅರ್ಥಮಾಡಿಕೊಂಡೆ. ಆದರೆ ಬೀಜಗಣಿತವು ಭೇದಿಸಲು ಕಠಿಣವಾದ ಬೀಜವಾಗಿತ್ತು. ಜೀವನದಲ್ಲಿ ಒಂದು ಕಳೆದುಕೊಂಡರೆ  ಮತ್ತೇನನ್ನಾದರೂ ಗಳಿಸುತ್ತೇವೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ.

ಇವೆಲ್ಲ ಶಾಲೆಯ ಅನುಭವಗಳಾಗಿದ್ದವು. ಮನೆಯ ಕಡೆಯೂ  ಕೆಲವು ಸಣ್ಣ ಬದಲಾವಣೆಗಳಾದವು. ಮೊದಲ ಬಾರಿಗೆ ನಾವು ಮಳೆಗಾಲ ಮತ್ತು ತಂಪಾದ ತಾಪಮಾನದಲ್ಲಿ ನಿರಂತರ ಮಳೆಗೆ ಒಡ್ಡಿಕೊಂಡಿದ್ದೆವು. ತಂದೆ ಉಣ್ಣೆಯ ಹೊದಿಕೆಗಳು ಮತ್ತು ಸ್ವೆಟರ್​ಗಳನ್ನು ಖರೀದಿಸಿದರು. ವಾತಾವರಣ ತಂಪಾಗಿದ್ದರಿಂದ ಮಕ್ಕಳಿಗೆ ಕಾಫಿ ಕುಡಿಯಬಾರದು ಎಂಬ ಅವರ ನಿಯಮವನ್ನು ಸಡಿಲಿಸಲಾಗಿತ್ತು. ಆಯ್ದ ಚಿತ್ರಗಳನ್ನು ವೀಕ್ಷಿಸಲು ಅವರು ನಮಗೆ ಮಿತಿಗಳೊಂದಿಗೆ ಅನುಮತಿ ನೀಡಿದರು. ಅಂದರೆ ಅವರೇ ಆಯ್ದ ಬಿ.ಆರ್. ಪಂತುಲು ಅವರ “ಸ್ಕೂಲ್ ಮಾಸ್ಟರ್ ” ಮತ್ತು ಹಿಂದಿಯಲ್ಲಿ ವಿ.ಶಾಂತಾರಾಮ್ ಅವರ “ಡಾ. ಕೊಟ್ನಿಸ್ ಕಿ ಅಮರ್ ಕಹಾನಿ”, “ದೋ ಆಂಖೇ ಬಾರಾ ಹಾತ್” ಮತ್ತು “ನವರಂಗ್” ವಿಕ್ಷಿಸಲು ನಮಗೆ ಪರವಾನಗಿ ಸಿಕ್ಕಿತು. ಡಾ.ಕೊಟ್ನಿಸ್ ಮತ್ತು ದೋ ಆಂಖೇಯಲ್ಲಿನ ಆದರ್ಶವಾದಿ ಜೈಲರ್ ಅವರ ಸಾವನ್ನು ನೋಡಿ ಬಹಳ ಅತ್ತಿದ್ದೆ. ನವರಂಗ್ ಕಣ್ಣಿಗೆ ಹಬ್ಬವಾಗಿತ್ತು. ನಾನು ಪಕ್ಕಾ ಕಮರ್ಷಿಯಲ್ ಹಿಂದಿ ಚಲನಚಿತ್ರವಾದ “ಧೂಲ್ ಕಾ ಫುಲ್” ಅನ್ನು ಪಕ್ಕದ ಮನೆಯವರ ಜೊತೆ ತಂದೆಗೆ ತಿಳಿಸದೆ ನೋಡಿದೆ. ಅದರಲ್ಲಿ ರಫಿ ಭಾವಪೂರ್ಣವಾಗಿ ಹಾಡಿದ್ದ, “ತು ಹಿಂದೂ ಬನೇಗಾ, ನ ಮ್ಮುಸಲ್ಮಾನ್ ಬನೇಗಾ…” ನನ್ನನ್ನು ಇಂದಿಗೂ ಭಾವಪರವಶಳನ್ನಾಗಿ ಮಾಡುತ್ತೆ. ಚಲನಚಿತ್ರಗಳು ಮತ್ತು ಚಲನಚಿತ್ರ ಸಂಗೀತವು ನನ್ನನ್ನು ತುಂಬಾ ಆಕರ್ಷಿಸಿತು. ಆದರೆ ಶಿಸ್ತಿನ ತಂದೆಯ ಅಡಿಯಲ್ಲಿ ಅವು ಚಟಗಳಾಗಲಿಲ್ಲ.

ನನ್ನ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರಿದ ದಾರಿದೀಪಗಳೆಂದರೆ ಕೆಲವು ಪರಿಣಾಮಕಾರಿಯಾದ ಆತ್ಮಚರಿತ್ರೆಗಳನ್ನ ಹಿಂದಿ ಪರೀಕ್ಷೆಗಳಿಗಾಗಿ ಓದಿದ್ದು. ಹಿಂದಿಯನ್ನ ಕಲಿಯುವುದು ಆಗ ಹಾಸನದಲ್ಲಿ ಹೈಸ್ಕೂಲ್ ಶಾಲೆಯ ಮಕ್ಕಳಲ್ಲಿ ಒಂದು ಹವ್ಯಾಸವಾಗಿತ್ತು. ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮತ್ತು ಗಾಂಧೀಜಿಯವರ ಅನುಯಾಯಿಗಳಾದ ಶ್ರೀ ರಾಜಗೋಪಾಲಾಚಾರಿ ಸ್ಥಾಪಿಸಿದ ದಕ್ಷಿಣ ಭಾರತ್ ಹಿಂದಿ ಪ್ರಚಾರ ಸಭೆ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ಯುವ ವಿದ್ಯಾರ್ಥಿಗಳು ಹಿಂದಿ ಕಲಿಯುತಿದ್ದರು.

ಇದನ್ನೂ ಓದಿ :Column: ಅನುಸಂಧಾನ; ಮರಿಯಾನೊ ಸಿಗ್ಮನ್​ನ ‘ಮನಸ್ಸಿನ ಹೆಜ್ಜೆ ಗುರುತು’

ಪ್ರಥಮ, ದ್ವಿತೀಯ, ಪ್ರವೇಶ, ವಿಶಾರದ ಇತ್ಯಾದಿ ಎಂದು ಈ ಪರೀಕ್ಷೆಗಳನ್ನು ಕರೆಯಲಾಗುತ್ತಿತ್ತು ಈ ಪರೀಕ್ಷೆಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುತ್ತಿತ್ತು. ವಿಶಾರದ  ಹಿಂದಿಯಲ್ಲಿ ಪದವಿಗೆ ಸಮಾನವಾಗಿತ್ತು. ನಾನು ಹೈಸ್ಕೂಲ್ ಮುಗಿಸುವ ಹೊತ್ತಿಗೆ ಈ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದೆ. ಆದರೆ ನನ್ನ ವ್ಯಕ್ತಿತ್ವವನ್ನು ಪುಷ್ಟೀಕರಿಸಿದ್ದು ಪಠ್ಯಪುಸ್ತಕಗಳಾಗಿದ್ದ ಆತ್ಮಚರಿತ್ರೆಗಳು. ಇವುಗಳೆಂದರೆ ಗಾಂಧೀಜಿ, ವಿನೋಬಾ ಭಾವೆ, ಜಮುನಾಲಾಲ್ ಬಜಾಜ್ ಅವರ ಆತ್ಮಚರಿತ್ರೆಗಳು ಮತ್ತು ಪ್ರೇಮಚಂದ್ ಅವರ ಶ್ರೇಷ್ಠ ಹಿಂದಿ ಕಾದಂಬರಿ ಗೋದಾನ್. ಇವೆಲ್ಲವುಗಳಲ್ಲಿ ನನ್ನನ್ನು ಮಂತ್ರಮುಗ್ಧಗೊಳಿಸಿದ್ದು ಗಾಂಧೀಜಿಯವರ ಜೀವನ ಚರಿತ್ರೆ. ಇಲ್ಲಿ ಗಾಂಧಿಯವರು ತಾವು ಮಾಡಿದ ನಿಷೇಧಿತ ಕೆಲಸಗಳನ್ನು ಬಹಿರಂಗವಾಗಿ ಒಪ್ಪಿಕೊಂಡರು, ದಕ್ಷಿಣ ಆಫ್ರಿಕಾದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಕ್ರಮೇಣ ವಿಕಾಸಗೊಂಡರು, ನಂತರ ಸತ್ಯಾಗ್ರಹ, ಉಪವಾಸ, ಅಹಿಂಸೆ, ಬ್ರಿಟಿಷರನ್ನು ಧಿಕ್ಕರಿಸಿ ವಿದೇಶಿ ಸರಕುಗಳನ್ನು ಬಹಿಷ್ಕರಿಸುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರು. ಮತ್ತೆ ಮತ್ತೆ ಜೈಲಿಗೆ ಹೋದರು. ಇವೆಲ್ಲ ಗಾಂಧಿಯವರ ಹೊರಾಟಗಳು ಹದಿಹರೆಯದ ನನಗೆ  ಬಹಳ ಪ್ರಭಾವಶಾಲಿಯಾಗಿದ್ದವು. ನ್ಯಾಯಕ್ಕಾಗಿ ಹೋರಾಡುವ ಮತ್ತು  ಸರಳ ಜೀವನವನ್ನು ನಡೆಸುವ ಪ್ರಜ್ಞೆಯನ್ನು ನನ್ನಲ್ಲಿ ಹುದುಗಿಸಿದವು . ನಾನು ಆಧುನಿಕ ಜೀವನದ ಬಲೆಗಳಿಗೆ ಬಲಿಯಾಗಿದ್ದೇನೆಂಬುದು ನಿಜವಾದರೂ ಗಾಂಧೀಜಿಯವರ ಕೆಲವು ಪಾಠಗಳನ್ನು ಉಳಿಸಿಕೊಂಡಿದ್ದೇನೆ. ಈ ಮೌಲ್ಯಗಳು ಅಪಾರ ಪ್ರಮಾಣದ ನೈತಿಕ ಧೈರ್ಯವನ್ನು ನನಗೆ ನೀಡಿವೆ. ಈಗ ಸುತ್ತಲೂ ಕಣ್ಣು ಹಾಯಿಸಿದಾಗ ಗಾಂಧೀಜಿ ಕನಸು ಕಂಡ ಭಾರತ ಇದೇನಾ ಎಂದು ಅನಿಸುತ್ತಿದೆ.

ಹಾಸನ ಜಿಲ್ಲೆಯ ದೇವಾಲಯದ ವಾಸ್ತುಶಿಲ್ಪವನ್ನು ನಾನು ಉಲ್ಲೇಖಿಸದಿದ್ದರೆ ನನ್ನ ನಿರೂಪಣೆಯಲ್ಲಿ ನಾನು ವಿಫಲನಾಗುತ್ತೇನೆ. ನಾನು ಈಗಾಗಲೇ ಇತಿಹಾಸ ತರಗತಿಗಳಲ್ಲಿ ಹೊಯ್ಸಳ ರಾಜವಂಶದ ಮೂಲವನ್ನು ಅಧ್ಯಯನ ಮಾಡಿದ್ದೆ. ಕನ್ನಡದ ಜನಪ್ರಿಯ ಕಾದಂಬರಿಗಳ ಉತ್ಕಟ ಓದುಗಳಾದ ನಾನು ತ್ರಿವೇಣಿ, ಅನುಪಮಾ ನಿರಂಜನ, ಅನಕೃ, ತರಾಸು, ಕಟ್ಟಿಮನಿ, ರಾಜರತ್ನಮ್, ರಾಮ ರಾವ್ ಮುಂತಾದವರ ಜನಪ್ರಿಯ ಕಾದಂಬರಿಗಳನ್ನು ಹೆಚ್ಚು ಕಡಿಮೆ ಓದಿದ್ದೆ. ಈ ದೊಡ್ಡ ಪುಸ್ತಕಗಳ ಸಂಗ್ರಹದಲ್ಲಿ ಕೆ.ವಿ. ಅಯ್ಯರ್ ಅವರ ಶಾಂತಲಾ ಎಂಬ ಒಂದು ಮಾಸ್ಟರ್ ಪೀಸ್ ಇತ್ತು, ಅದು ರಾಜ ವಿಷ್ಣುವರ್ಧನ ಹೆಂಡತಿ ಶಾಂತಲೆಯ ಕಥೆಯನ್ನು ಭಾವಪೂರ್ವಕವಾಗಿ ವಿವರಿಸಿದೆ. ರಾಜ ವಿಷ್ಣುವರ್ಧನ ನಿರ್ಮಿಸಿದ ಬೇಲೂರು ಮತ್ತು ಹಳೇಬೀಡಿನ ಭವ್ಯವಾದ ದೇವಾಲಯಗಳು ಮತ್ತು ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಏಕಶಿಲೆಯ ಪ್ರತಿಮೆ ನೋಡದಿದ್ದರೆ ಅದೂ ಹಾಸನದಲ್ಲಿ ವಾಸವಾಗಿದ್ದುಕೊಂಡು, ಅದೊಂದು ಕ್ಷಮಿಸಲಾರದ ಪಾಪ. ಎಲ್ಲಾದರೂ ಕಲ್ಲಿನಲ್ಲಿ ಹೂವು ಅರಳಿದ್ದರೆ ಅದು ಬೇಲೂರು, ಹಳೇಬೀಡುಗಳಲ್ಲಿ. ತಂದೆ ನಮ್ಮನ್ನು ಬೇಲೂರು ಮತ್ತು ಹಳೇಬೀಡಿಗೆ ಕರೆದೊಯ್ದರು. ಆದರೆ ಅವರು ಶ್ರವಣಬೆಳಗೊಳಕ್ಕೆ ಪ್ರವಾಸವನ್ನು ಯೋಜಿಸುವ ಹೊತ್ತಿಗೆ ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ಆದ್ದರಿಂದ ನಾವು ನಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿ, ಸ್ಕೂಲಿನಿಂದ ಟಿ.ಸಿ ತೆಗೆದುಕೊಂಡು ಬೆಂಗಳೂರಿಗೆ ಎರಡನೇ ಬಾರಿ ವಾಸಿಸಲು ಹೊರಟೆವು.

(ಮುಂದಿನ ಕಥನ : 3.7.2022)

ಈ ಅಂಕಣದ ಎಲ್ಲಾ ಭಾಗಗಳ ಓದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com