ಅಕ್ಕಮಹಾದೇವಿ ಜಯಂತಿ | Akkamahadevi Jayanthi : ಉಗಾದಿಯ ಬಳಿಕ ಹೊಸ ಸಂವತ್ಸರದ ಮೊದಲ ಹುಣ್ಣಿಮೆ ‘ಬನದ ಹುಣ್ಣಿಮೆ’ಯ ದಿನ. ಅಂದು ಬೆಳಗಿನ ಜಾವ ಪಡುವಲದಲ್ಲಿ ಬೆಳಕು ಸುರಿಸುತ್ತ ಪೂರ್ಣಚಂದ್ರನಿದ್ದರೆ ಮೂಡಣವು ನಸುಕಿನ ಬೆಳಕು ಹರಿಸುವ ತಯಾರಿಯಲ್ಲಿ ಕೆಂಪಾಗತೊಡಗಿತ್ತು. ಉಡುತಡಿಯ ಸೋಮಯ್ಯ ಸೆಟ್ಟರ ನಾಕಂಕಣದ ಮನೆಯ ಹೊರಭಾಗ ಚಂದ್ರನ ಬೆಳದಿಂಗಳಿನಲ್ಲಿ ಮೀಯುತ್ತಲಿರುವಾಗ ಒಳಮನೆಯಲ್ಲಿ ಲಿಂಗಮ್ಮನ ಮಡಿಲು ಬೆಳಕಿನೊಳಗೆ ಮತ್ತೊಂದು ಬೆಳಕಿನಿಂದ ತುಂಬಿಕೊಂಡಿತು. ನಸುಕಿನ ಜಾವ ನೆಲದೇವತೆಗಳು ಜಾಗೃತಗೊಳ್ಳುವ ಹೊತ್ತು. ಕಾಳು ಮೊಳಕೆ ಕಟ್ಟುವ, ತೆನೆಯಲ್ಲಿ ಹಾಲು ತುಂಬುವ, ಹೂವು ಬೀಜಗೊಳ್ಳುವ ಶುಭಗಳಿಗೆ ಎಂದು ಒಕ್ಕಲುಮಕ್ಕಳೆಲ್ಲ ನಂಬಿರುವರು. ಅಂತಹ ಒಂದು ಕ್ಷಣದಲ್ಲಿ ಆ ಮನೆಯು ಕೂಸಿನ ಅಳುವಿನಿಂದ ತುಂಬಿತು. ಸೂಲಗಿತ್ತಿಯ ಕೈ ತುಂಬುವಷ್ಟು ದೊಡ್ಡದಿದ್ದ, ಕೆಂಪುಕೆಂಪಾದ, ನೀಳ ಎಳಸು ಕೈ ಬೆರಳುಗಳ, ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಮಗು. ಎತ್ತಿಕೊಂಡರೆಲ್ಲಿ ಮುದುಡುವುದೋ ಎಂಬಂತೆ ಮಲ್ಲಿಗೆ ಹೂವಿನಂತಿದ್ದ ಮಗು.
ಕವಿ, ಲೇಖಕಿ ಡಾ. ಎಚ್. ಎಸ್. ಅನುಪಮಾ ಮಹಾದೇವಿಯಕ್ಕನ ಜೀವನಾಧಾರಿತವಾಗಿ ಬರೆಯುತ್ತಿರುವ ಕಾದಂಬರಿ ‘ಬೆಳಗಿನೊಳಗು’. ಅವಳ ಬಾಲ್ಯಜೀವನ ಚಿತ್ರಿಸುವ ‘ಕಲ್ಲರಳಿ’ ಭಾಗದಿಂದ ಒಂದು ಅಧ್ಯಾಯ ಮಹಾದೇವಿಯಕ್ಕನ ಹುಟ್ಟಿದ ದಿನಕ್ಕೆ.
(ಭಾಗ 1)
‘ಮಲ್ಲಯ್ನೇ ನಿನ್ನ ದಯಾ, ನೀ ಕಣ್ಣು ತೆರದು ನಮ್ಮನೆ ಬೆಳಗಿತು. ಕೂಸಿಗೆ ಏನು ಹೆಸರಿಡಾಣ ಲಿಂಗೀ?’
‘ಎಂತಾದ್ ಇಟ್ರೂ ಸೈಯೇ. ಗಟ್ಟುದ್ ಮಾರಮ್ಮ, ಮಾದೇವಿನೇ ಕಾಪಾಡ್ಲಿ’
ತಾನು ತಾಯಿಯಾದದ್ದು ಕನಸೋ ನನಸೋ ತಿಳಿಯದ ಆನಂದದಲ್ಲಿ, ತುಂಬಿದ ಒಡಲ ಬಿಸಿಯ ಹರುಷದಲ್ಲಿ ಲಿಂಗಮ್ಮ ಓಲಾಡಿದಳು. ಮಗುವನ್ನೊಮ್ಮೆ ಎತ್ತಿಕೊಂಡು, ನೆತ್ತಿಗೆ ಮುತ್ತಿಟ್ಟು ‘ಮಲ್ಲಯ್ನೇ, ಎಲ್ಲಾ ನಿನ್ ದಯಾ. ಈ ಕೂಸು ಮಾದೇವಿ, ಉಡತಡಿ ಮಹಾದೇವಿ’ ಎಂದು ಸೆಟ್ಟರು ಕಿವಿಯಲ್ಲುಸುರಿದರು. ಬೇನೆ ತಿಂದು ನಿತ್ರಾಣಗೊಂಡು ಮಲಗಿದ್ದ ಹೆಂಡತಿಯತ್ತ ಪ್ರೇಮದ ನೋಟ ಬೀರಿ ಹೊರಬಂದರು.
ಮಗು ಹುಟ್ಟಿದ್ದೇ ಹುಟ್ಟಿದ್ದು, ಮನೆಯ ಅಂದಚಂದವೇ ಬದಲಾಯಿತು. ಸಾಂಬ್ರಾಣಿ ಹೊಗೆಯ ಘಮಘಮ ಸೂರಿನಿಂದ ಮೇಲೆ ಚಿಮ್ಮಿ ಸುತ್ತಮುತ್ತ ಪಸರಿಸಿ ಮನೆಯಲ್ಲಿ ನೆತ್ತಿ ಕಾಯಿಸುವ ಎಳೆಗೂಸು ಇದೆಯೆಂದು ಊರಿಗೇ ಗೊತ್ತು ಮಾಡಿತು. ಮನೆಗೆ ಬರುವ ಬಂಧುಬಳಗ, ಇಷ್ಟಮಿತ್ರರ ಸಂಖ್ಯೆ ಹೆಚ್ಚಾಯಿತು. ಸೆಟ್ಟರು ತಮ್ಮ ವ್ಯವಹಾರಗಳನ್ನೆಲ್ಲ ಹತ್ತು ದಿನ ನಿಲ್ಲಿಸಿ ಸಂಭ್ರಮವನ್ನು ಕಣಕಣದಲ್ಲಿ ತುಂಬಿಕೊಂಡರು. ಮನೆಯಲ್ಲಿ ಮಗುವಿರುವಾಗ ಮನೆ ತುಂಬ ಧೂಳಿನ ಮೂಟೆ, ಸಾಮಾನುಗಳ ರಾಶಿ ಹಾಕುವುದು ಸರಿಯಲ್ಲವೆಂದು ಸೆಟ್ಟರು ಹೊಸ ಉಗ್ರಾಣ ಕಟ್ಟಿಸತೊಡಗಿದರು.
ಮೊದಲ ಹೆರಿಗೆ ತವರಿನಲ್ಲಾಗುವುದು ಲೋಕರೂಢಿ. ಆದರೆ ಅತ್ತೆಯನ್ನು ಕರೆಸಿಕೊಂಡ ಸೆಟ್ಟರು ಉಡುತಡಿಯಲ್ಲಿಯೇ ಬಾಣಂತನದ ವ್ಯವಸ್ಥೆ ಮಾಡಿದರು. ಲಗ್ನವಾಗಿ ಐದು ವರ್ಷದ ಬಳಿಕ ನಿಂತ ಬಸುರು. ತಮ್ಮ ಹಳ್ಳಿಯ ಮೂಲೆಗೇ ಕಳಿಸಿ ಎನ್ನಲು ತವರಿನವರಿಗೂ ಭಯ. ಬಯಕೆ ಶಾಸ್ತ್ರಕ್ಕೆಂದು ಕರೆದೊಯ್ದು ಉಡಿ ತುಂಬಿ ಮತ್ತೆ ಕರೆತಂದಿದ್ದರು. ಹೆತ್ತ ಕೂಡಲೇ ಹುಡುಗಿ ಹುಟ್ಟಿದ ಸುದ್ದಿ ಬಿದ್ರಕಾನನ್ನು ತಲುಪಿತ್ತು. ಅತ್ತ ಸೆಟ್ಟರು ತಾವು ಹೊತ್ತುಕೊಂಡ ಹರಕೆಗಳನ್ನೆಲ್ಲ ಒಂದಾದಮೇಲೊಂದು ನೆನಪಿಟ್ಟುಕೊಂಡು ಪೂರೈಸುವತ್ತ ಗಮನ ಹರಿಸಿದರೆ; ಇತ್ತ ಲಿಂಗಮ್ಮ ಬಾಣಂತಿ ಕೋಣೆಯ ಬೆಚ್ಚಗಿನ ಸುಖನಲ್ಲಿ ಮಗುವಿನೊಡನೆ ತಾನೂ ಬೆಳೆಯತೊಡಗಿದಳು. ಒಂದು ಕಡೆ ಕೆರೆ ಗೌರವ್ವನ ಜಾತ್ರೆಗೆ ಊರಿಗೂರೇ ಸಂಭ್ರಮಪಡುತ್ತಿದ್ದರೆ, ಇತ್ತ ಸೆಟ್ಟರ ಮನೆಯಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುತ್ತಿದ್ದರು. ಕಮಲ ಶಿರದ ಕೆರೆಗೌರವ್ವನ ಹಾರೈಕೆಯಿರಲೆಂದು ಮಗುವಿಗೆ ಮೊದಲ ಹೆಸರು ಕಮಲಮ್ಮ ಎಂದೂ, ಎರಡನೆಯ ಹೆಸರಾಗಿ ಮುತ್ತಜ್ಜಿಯ ಹೆಸರು ಮಲ್ಲಮ್ಮ ಎಂದೂ, ಮೂರನೆಯ ಹೆಸರಾಗಿ ತಾಯ್ತಂದೆಯರು ಇಷ್ಟಪಟ್ಟ ಮಹಾದೇವಿ ಎಂಬ ಹೆಸರನ್ನೂ ಇಟ್ಟರು. ಕೂಸು ನೋಡಲು ಬಂದ ಶಾರವ್ವ ಸಂಭ್ರಮದಿಂದ ಓಡಾಡಿದಳು.
ಇದನ್ನೂ ಓದಿ : National Doctor‘s Day 2021 : ಕವಲಕ್ಕಿ ಮೇಲ್ ; ‘ನಾನೆಂಬ ಸೂತ್ರಧಾರಿಣಿ ಇಲ್ಲದೇ ನೀವೇ ನಿಮ್ಮದನ್ನು ಹೇಳಿಕೊಳ್ಳುವ ಕಾಲವೂ ಬರಲಿದೆ’
ಮಗು ಬಂದದ್ದೇ ಮನೆಯ ಆಯ, ಅಳತೆ ಬೇರೆಯಾಯಿತು. ಮಗುವಂತೂ ನೋಡನೋಡುತ್ತ ಬೆಳೆಯಿತು. ಇಂದು ಇದ್ದಂತೆ ನಾಳೆ ಇಲ್ಲ, ನಾಳೆಯಿದ್ದಂತೆ ಬರುವ ವಾರ ಇಲ್ಲ. ಗೋಧಿ ಬಣ್ಣದ ಮುಖ, ಕಪ್ಪು ಬಟ್ಟಲಗಣ್ಣು, ಕರಿಯ ಸೊಂಪು ಕೂದಲು, ಪುಟ್ಟ ಬಾಯಿ, ಚೂಪು ಮೂಗು – ಎಲ್ಲವೂ ಅದರ ಅಮ್ಮ, ಅಪ್ಪನಿಗೆ ಚಂದವೋ ಚಂದ. ಸೆಟ್ಟರು ಪ್ರತಿದಿನಾ ಬೆಳಿಗ್ಗೆ ಎದ್ದು ಮಗಳ ಮುಖ ನೋಡಿಯೇ ಮುಂದಿನ ಕೆಲಸ ಮಾಡುವರು. ಮೀಯಿಸಿ ತಂದ ಮಗುವಿನ ನೆತ್ತಿಯನ್ನು ಮಡ್ಡಿಧೂಪಕ್ಕೆ ಹಿಡಿದು ಕಾಯಿಸುವಾಗ ನೋಡಲು ಬರುವರು. ಆಗೊಮ್ಮೆ, ಈಗೊಮ್ಮೆ, ತಿಂಡಿ ತಿನ್ನುವ ಮುನ್ನ, ನೀರು ಕುಡಿಯುವ ಮುನ್ನ ರಾತ್ರಿ ಮಲಗುವವರೆಗೂ ನಾಲ್ಕಾರು ಸಲ ಬಾಣಂತಿ ಕೋಣೆ ಹೊಕ್ಕು ಹೊರಡುವರು. ಮಗುವಿನ ಜೊತೆಗೇ ಹಾಲೂಡುತ್ತಿರುವ ಮಗುವಿನ ತಾಯಿಯನ್ನೂ ನೋಡುವರು. ‘ಬಾಣಂತಿ ಕ್ವಾಣಿಗೆ ಹಗಲಗಲ ಬರಬ್ಯಾಡನ್ನೆ’ ಎಂದು ಅವರ ಅತ್ತೆಯು ಮಗಳ ಬಳಿ ಪಿಸುಗುಟ್ಟಿದರೂ ಹಾಗೆಂದು ಹೇಳಲಾಗದ ಲಿಂಗಮ್ಮ ಗಂಡನನ್ನು ನೋಡಿ ಕಿರುನಗೆ ಸೂಸುವಳು.
ದೊಡ್ಡ ಕಪ್ಪು ಕಣ್ಣುಗಳ ನಡುವೆ ದೃಷ್ಟಿಯಾಗಬಾರದೆಂದು ಇಟ್ಟ ಕಾಡಿಗೆಯ ಬೊಟ್ಟು ಮೂರನೆಯ ಕಣ್ಣಿನಂತೆ ಕಾಣುವುದು. ಮಗು ರಚ್ಚೆ ಹಿಡಿದು ಅತ್ತದ್ದಿಲ್ಲ, ಕಿರಿಕಿರಿ ರಗಳೆ ಮಾಡಿದ್ದಿಲ್ಲ. ಹೊಟ್ಟೆಗಷ್ಟು ಬಿದ್ದರೆ, ಎದುರು ಅವ್ವ ಕಾಣುತ್ತ ಇದ್ದರೆ ಮುಗಿಯಿತು, ನೆಲದ ಮೇಲೋ ತೊಟ್ಟಿಲಲ್ಲೋ ತನ್ನಷ್ಟಕ್ಕೆ ತಾನು ಕೈಕಾಲಾಡಿಸುತ್ತ ಮಲಗಿರುವುದು. ಹಾಗಂತ ಪದೇಪದೇ ಬಾಯಿಗೆ ಹಾಕಹೋದರೆ ಮೂತಿ ಚುಳ್ಳಿ ಮಾಡಿ ಬಾಯಿ ಹೊಲಿದು ಮುಖ ಅತ್ತ ತಿರುಗಿಸುವುದು. ತನಗೆ ಬೇಕೆಂದಾಗ ಬೇಕು, ಬೇಡವಾದರೆ ಬೇಡ ಅಷ್ಟೆ.
ಮಗುವಿಗೆ ಮೂರು ತಿಂಗಳಾಗುವಾಗ ಆಷಾಢ ಅಮಾವಾಸ್ಯೆ ಬಂತು. ಅಮಾವಾಸ್ಯೆ ಪೂಜೆಗೆ ಸೆಟ್ಟರು ಗುಡಿಯ ಕಡೆಗೆ ಹೊರಟವರು ಮಗುವನ್ನು ಎತ್ತಿಕೊಂಡು, ‘ತಂಗೀ, ಅಮಾಸಿ ಪೂಜಿಗೆ ಬತ್ಯನೆ ಮಟಕ್ಕೆ? ಹೋಗ್ತೀನಿ ಆತಾ?’ ಎಂದು ಮುತ್ತಿಕ್ಕಲು ಅದರ ಹಣೆಯ ಬಳಿ ತಲೆ ಒಯ್ದರು.
ಅಷ್ಟೇ. ಬೋಡು ಬಾಯಗಲಿಸಿ ಮಗು ಕಿಲಕಿಲ ನಕ್ಕಿತು. ಆಹಾ, ಎಂತಹ ನಗೆಲಾಸ್ಯ! ಅದನ್ನು ನೋಡಿ ಸೆಟ್ಟರಿಗೆ ಶಿವನೇ ತನ್ನ ನೋಡಿ ನಕ್ಕಂತೆ ಭಾಸವಾಯಿತು. ಆಹ ಮಲ್ಲಯ್ಯ, ಎಂತಹ ಭಾಗ್ಯ ಕರುಣಿಸಿದೆ ತಂದೆ! ಅದು ಮತ್ತೊಮ್ಮೆ ತನ್ನ ನೋಡಿ ನಗಬಾರದೇ ಎಂದುಕೊಳ್ಳುತ್ತಿರುವಾಗಲೇ ನೋಡನೋಡುತ್ತ ಕೂಸಿನ ಮುಖಭಾವ ಬದಲಾಗಿ, ಮುಖ ಕಿವುಚಿ ಬಿಕ್ಕತೊಡಗಿತು. ಅಯ್ಯೋ, ಏನಾಯಿತು, ಮಗುವನ್ನೇನಾದರೂ ಒರಟಾಗಿ ಎತ್ತಿಕೊಂಡೆನೇ ಎಂದು ಸೆಟ್ಟರು ಕಂಗಾಲಾಗಿ ಮಗುವನ್ನು ಹಗೂರ ಅದರವ್ವನ ಉಡಿಗೆ ಹಾಕುವಾಗ, ‘ಮಕ್ಕಳಂದ್ರೆ ಒಂದೇಸಮ ನಗತಾ ಇರತಾವಂತ ಮಾಡರ‍್ಯಾ?’ ಎಂದು ಲಿಂಗಮ್ಮ ಕಿಚಾಯಿಸಿದಳು. ಹಾಲಿನ ವಾಸನೆಯ ಮಡಿಲು ತಲುಪಿದ ಕೂಡಲೇ ಮತ್ತೇನಿದೆ? ಮಗು ಪಕ್ಕ ತಿರುಗಿ ಸೆರಗಿನೊಳಗೆ ಹುದುಗಿ ಅಮೃತದ ಭಾಂಡಕ್ಕಾಗಿ ತಲೆಯನ್ನು ಅತ್ತಲಿತ್ತ ಆಡಿಸಿ ತಡಕಾಡತೊಡಗಿತು. ಸೆಟ್ಟರು ಕೋಣೆಯಿಂದ ಹೊರಬರುವ ಹೊತ್ತಿಗೆ ಹಿಂಬದಿಯ ಬಾಗಿಲಲ್ಲಿ ಸೋಮ ಕಾಣಿಸಿಕೊಂಡ. ಎಂಥದನ್ನೋ ಕೈಲಿ ಹಿಡಿದು ಕಂಬಳಿಕುಪ್ಪೆಯ ಸಮೇತ ಹಿಂಬಾಗಿಲ ಬಳಿ ಓಡಿಬಂದ.
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಮುದುಕವಿರೋಧಿ ಡೌಟಮ್ಮನೂ ಮತ್ತವಳ ವಿಚಿತ್ರಶಾಸ್ತ್ರವು
‘ಅಯ್ಯಾರೆ, ಅಯ್ಯಾರೇ..’
ಹತ್ತು ವರುಷದವನಿರಬಹುದಾದ ಸೋಮನ ಕೂಗಿಗೆ ಸೆಟ್ಟರು ಹಿತ್ತಲ ಬಾಗಿಲ ಕಡೆ ನಡೆದರು. ಮಾರಯ್ಯನೊಡನೆ ತಿರುಗುತ್ತ ಪಿಳ್ಳಂಗೋವಿ ನುಡಿಸುವುದನ್ನೂ, ಜೇನು ಕೀಳುವುದನ್ನೂ ಸೋಮ ಕರಗತ ಮಾಡಿಕೊಂಡಿದ್ದ. ಇಂದು ಅವನೂ, ಮಾರಯ್ಯನೂ ಸೇರಿ ತುಡುವಿ ಜೇನು ಕಿತ್ತು ತಂದಿದ್ದರು. ತುಪ್ಪದ ಮರಿಗೆ ಮಾರಯ್ಯನ ಕೈಯಲ್ಲಿ, ಮೇಣದ ಬಳ್ಳೆ ಸೋಮನ ಕೈಯಲ್ಲಿ.
‘ಏನ ಅದು? ಯಂತ ಹಿಡ್ಕ ಬತ್ತ ಇದಿರ?’
‘ಅದು ತಂಗಿಗೆ ತಂಡಿ ಆದ್ರ ಔಸ್ತಕಂತ ಮಾರಜ್ಜ ತುಡುವಿ ತುಪ್ಪ ತಂದಾನೆ. ಇದು ಮ್ಯಾಣ, ಅವ್ವರ‍್ಗೆ ಕುಕ್ಮ ರ‍್ಸಾಕೆ. ಅಯ್ಯಾ, ಅಯ್ಯಾ, ಕೂಸಿನ್ ನಂಗೊಮ್ಮಿ ತೋರ್ಸಿ. ನೋಡ್ತನಿ.’
ಇಡಿಯ ದೇಹವನ್ನೇ ಹಿಡಿಯಾಗಿಸಿ ಅಂಗಲಾಚಿ ಕೇಳಿದ. ಅವನನ್ನು ಬಲುಪ್ರೀತಿ ಮಾಡುವ ಅವ್ವಾರಿಗೆ ಕೂಸು ಹುಟ್ಟಿದೆ, ಎಲ್ಲ ಒಳಹೋಗಿ ನೋಡಿ ಬಂದಿದ್ದಾರೆ. ಆದರೆ ಅವನಿನ್ನೂ ನೋಡೇ ಇಲ್ಲ. ಸೆಟ್ಟರು ಬಾಣಂತಿ ಕೋಣೆ ಹೊಕ್ಕು ಮಗುವನ್ನು ಎತ್ತಿಕೊಂಡು ಬಂದರು. ಹಾಲು ಕುಡಿದು ಮಗು ಪ್ರಸನ್ನವಾಗಿದೆ. ಸೋಮ ನೋಡುತ್ತಾನೆ, ಮುದ್ದು ಮುದ್ದಾಗಿರುವ ಬೆಣ್ಣೆಮುದ್ದೆಯಂತಹ ಮಗು!
‘ಅರರೆ, ಅರರೆ! ಕೂಸೇ, ಕೂಸೇ’ ಅನ್ನುತ್ತ ಸೋಮ ಚಣಕಾಲ ಮಗುವನ್ನು ದಿಟ್ಟಿಸುತ್ತ ಮೈಮರೆತ. ರ‍್ರನೆ ಓಡಿಹೋಗಿ ಮೇಣದ ಬಳ್ಳೆಯನ್ನು ಮಾಡಿಗೆ ಸಿಕ್ಕಿಸಿ ಕೈ, ಮುಖದ ಮೇಲೆ ನೀರೆರೆಚಿಕೊಂಡು ಮುಂಡಿಗೆ ಕೈ ಒರೆಸುತ್ತಾ ಓಡಿಬಂದ.
‘ಏನ ಸಂದಾಕದೆ! ಅಯ್ಯಾರ, ಕೈ ಮಾರಿ ತೊಕ್ಕಂಡು ಬಂದೆನಿ. ನಾ ಒಮ್ಮಿ ಎತಗೋತನಿ, ಕೊಡರೀ..’
ಯಾತ್ಕಲಾ ಎಂದು ಬಾಯಲ್ಲಿ ಅಂದರೂ ಆ ಎಳೆಯನು ಹಿಂಜರಿಕೆ, ಹೆದರಿಕೆಗಳ ಮರೆತು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ ಸೆಟ್ಟರಿಗೆ. ಗುರುಮಠದಲ್ಲಿ ಕಲಿಯಲೆಂದು ಮನೆಯಲ್ಲೇ ಇದ್ದ ತಮ್ಮ ನೆಂಟರ ಹುಡುಗರಿಗೆ ಮಗುವನ್ನು ಎತ್ತಲು, ಆಡಿಸಲು ಬಿಟ್ಟಿರಲಿಲ್ಲ. ಆದರೆ ಮೂರು ಹೊತ್ತೂ ಇಲ್ಲೇ ಇರುವ, ಮಗುವಿನ ಅಳು ಕೇಳುತ್ತಲಿರುವ, ತಮ್ಮ ಮನೆ ಬಿಟ್ಟರೆ ಬೇರೆ ಬಂಧುಬಳಗವಿಲ್ಲದ ಸೋಮ ಆಸೆಪಟ್ಟಾಗ ಇಲ್ಲವೆನ್ನಲಾಗಲಿಲ್ಲ.
‘ಹಗೂರ ಕೈ ಮುಂದ ತಾರಲಾ, ಇಲ್ಬಾ, ಯರ‍್ಗೂ ಕಾಣಸಬ್ಯಾಡ’, ನೀಡಿದ ಅವನ ಕೈ ಮೇಲೆ ತಮ್ಮ ತೋಳ ಸಮೇತ ಮಗುವನ್ನಿಟ್ಟರು.
‘ಚೀ ಕಳ್ಳಿ, ಚೀ ಕಳ್ಳಿ, ಕಮ್ಲಿನನೆ ನೀನು? ಏನ್ ಮಾದವಿನ ನೀನು? ನಾ ಯಾರ್ ಗೊತ್ತಾತ ನಿಂಗೆ?’
ಸೋಮ ತಲೆಯನ್ನು ಹಿಂದೆ ಮುಂದೆ ಮಾಡಿ ಚೀ ಕಳ್ಳಿ, ಚೀ ಕಳ್ಳಿ ಎನ್ನುತ್ತಿದ್ದರೆ ಮಗುವಿಗೆ ಅದೇನು ಅರ್ಥವಾಯಿತೋ ಏನೋ ಬೋಡಗಲಿಸಿ ಒಂದೇಸಮ ನಕ್ಕುಬಿಟ್ಟಿತು. ಸೋಮನಿಗಾದ ಆನಂದವು ಅದರ ಮುಖದ ಕಣಕಣದಲ್ಲೂ ನಗುವಾಗಿ ಹೊರಹೊಮ್ಮಿತು. ಅವನ ಕೈಮೇಲೆ ಎದೆಯುಬ್ಬಿಸಿ, ತಲೆಯನ್ನು ಆಚೆ ಈಚೆ ಕುಣಿಸುತ್ತ, ಹಾರಿಸುತ್ತ ಮಗು ನಗುತ್ತಿದೆ. ಅವನು ತಲೆ ಆಡಿಸಿದಷ್ಟೂ ಅದಕ್ಕೆ ಒಳಗಿನಿಂದೊತ್ತೊತ್ತಿ ಚಿಮ್ಮುವ ನಗೆ!
‘ಅದು ಸೊಲುಪ್ ದೊಡ್ಡಾಗ್ಲಿ, ಆಮ್ಯಾಲೆ ಯಾರದಾರೆ ಅವ್ಳಿಗೆ? ಯಾರ ಸಂತಿ ಆಡಬೇಕದು? ನಿನ್ನ ಜೋಡಿನೆ ಬರತಾಳೆ ತಗ’ ಎಂದು ಸೆಟ್ಟರು ಮಗುವನ್ನು ಅದರಮ್ಮನ ಮಡಿಲು ಸೇರಿಸಿ ಬಂದರು.
ಮಗು ಬೆಳೆಯುತ್ತ ಹೋದಂತೆ ಗಿಲಕಿ, ಗಂಟೆ, ಬೀಸಣಿಗೆಯಂತಹ ಆಟಿಕೆಯ ಸಾಮಾನುಗಳೇನು! ಹತ್ತಿ ನೂಲಿಂದ ನೇಯ್ದ ಮೆತ್ತನ್ನ ಬಟ್ಟೆಗಳನ್ನು ಕತ್ತರಿಸಿ ಲಿಂಗಮ್ಮ ಹೊಲಿದ ಹೊಸಹೊಸ ಅಂಗಿಗಳೇನು! ಕಾಲು, ಕೊರಳು, ಕಿವಿ, ಬೆರಳಿಗೆಲ್ಲ ತೊಡಿಸಿದ ಆಭರಣಗಳೇನು? ದೃಷ್ಟಿಯಾಗಬಾರದೆಂದು ಕಟ್ಟಿದ ಕಲ್ಲುಮಣಿಯ ಸರವೇನು? ಕಣ್ಣಿಗೆ ಕಾಡಿಗೆಯೇನು? ನೆತ್ತಿ ಕಾಯಿಸಲು ಸಾಂಬ್ರಾಣಿ, ಧೂಪಗಳೇನು? ತಲೆಗೂದಲು ಸೊಂಪಾಗಿ ಬೆಳೆಯಲು ಹಚ್ಚುವ ಭೃಂಗಾಮಲಕ ತೈಲವೇನು? ಮೈಗೆ ಪೂಸಲು ಪರಿಮಳದ ಎಣ್ಣೆಗಳೇನು? ಮೀಯಿಸಲೆಂದು ನಯಸಾಗಿ ಕುಟ್ಟಿ, ಪುಡಿ ಮಾಡಿ, ಜರಡಿ ಹಿಡಿದು ಅರಿಶಿನದ ಜೊತೆ ಬೆರೆಸಿದ ಅಂಟಲಕಾಯಿಯ ಪುಡಿಯೇನು?
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?
Published On - 10:22 am, Sat, 16 April 22