’ಜನ ಶತ್ರು’: ಜನಕ್ಕೆ ಏನು ಕೇಳೋದಿಕ್ಕೆ ಇಷ್ಟ ಇಲ್ಲವೋ ಅದನ್ನು ಧೈರ್ಯವಾಗಿ ಹೇಳುವ ಕಾಲ ಬಂದಾಗ ಅದು ಸ್ವಾತಂತ್ರ್ಯ

‘ಇಂದು ಜನಸಾಮಾನ್ಯ ಧ್ವನಿ ಎತ್ತುವಂತಾಗಬೇಕು ಎನ್ನುವುದೇ ನಾಟಕದ ಆತ್ಮ. ಬಹುಮತ ಎನ್ನುವುದು ಕೆಲವೊಮ್ಮೆ ಮೂರ್ಖತನಕ್ಕೆ ಈಡುಮಾಡುತ್ತದೆ. ಹಾಗೆ ನೋಡಿದರೆ ಜಗತ್ತಿಗೆ ಜಗತ್ತೇ ಕುರಿಮಂದೆಯಂತೆ ಸಾಗುತ್ತಿದೆ. ಹೀಗಿರುವಾಗ ನಮಗೆ ಬೇಕಿರುವುದು ಯೋಚನಾಶಕ್ತಿ. ಒಂದಾದರೂ ಧ್ವನಿ ಸತ್ಯದ ಪರವಾಗಿ ಹೊಮ್ಮಬೇಕು. ಸೃಜನಶೀಲತೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಯೋಚಿಸಲು ನಮಗೆ ಸಾಧ್ಯವಾಗಬೇಕು. ಸತ್ಯ ಹೇಳುವ ಜವಾಬ್ದಾರಿಯನ್ನು ಯಾರಾದರೂ ವಹಿಸಿಕೊಳ್ಳಲೇಬೇಕು. ಇಂಥ ಸಮಯದಲ್ಲಿ ರಂಗಭೂಮಿಯದ್ದೇ ಮಹತ್ತರ ಪಾತ್ರ. ಅದರಲ್ಲೂ ಹವ್ಯಾಸಿ ರಂಗಭೂಮಿ.’ ಅರುಂಧತಿ ನಾಗ್

  • ಶ್ರೀದೇವಿ ಕಳಸದ
  • Published On - 17:43 PM, 30 Mar 2021
’ಜನ ಶತ್ರು’: ಜನಕ್ಕೆ ಏನು ಕೇಳೋದಿಕ್ಕೆ ಇಷ್ಟ ಇಲ್ಲವೋ ಅದನ್ನು ಧೈರ್ಯವಾಗಿ ಹೇಳುವ ಕಾಲ ಬಂದಾಗ ಅದು ಸ್ವಾತಂತ್ರ್ಯ
‘ಜನ ಶತ್ರು‘ ನಾಟಕದ ದೃಶ್ಯ

ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ದಿನಗಳು ಕಳೆದುಹೋಗುತ್ತಿವೆ. ನಮಗರಿವಿಲ್ಲದೆಯೇ ನಾವು ಸಮೂಹಸನ್ನಿಗೆ ಒಳಗಾದವರಂತೆ ಚಲಿಸುತ್ತಿದ್ದೇವೆ. ಕೆಲವೊಮ್ಮೆ ಒಳಮನಸ್ಸಿಗಿದು ಅರ್ಥವಾಗುತ್ತಿದ್ದರೂ ಏನೋ ಅಸ್ಪಷ್ಟ. ಆದರೆ ಹೀಗೇ ಎಷ್ಟು ದಿನ? ದಾರಿಯನ್ನು ಸ್ಪಷ್ಟವಾಗಿಸಿಕೊಳ್ಳಲು ಸಣ್ಣ ಕಂದೀಲಾದರೂ ಬೇಕಲ್ಲವೆ? ಬಹುಶಃ ಕಲೆ ಎನ್ನುವ ಸೃಜನಶೀಲ ಕಂದೀಲಿನ ಬೆಳಕಿಗೆ ನಮ್ಮನ್ನು ನಾವು ಒಡ್ಡಿಕೊಳ್ಳದೇ ಇದ್ದಲ್ಲಿ ಇನ್ನೂ ಏನಾಗುತ್ತಿದ್ದೆವು? ಹಾಗೆಂದು ಇದು ಒಂದೇ ರಾತ್ರಿಗೆ ಮಹಾಬೆಳಕನ್ನು ನೀಡುವ ಐಂದ್ರಿಕ ಜಾಲವಂತೂ ಖಂಡಿತ ಅಲ್ಲ. ಆದರೆ ಸನ್ನಿಯ ಹಿಡಿತದಿಂದ ಅಷ್ಟಷ್ಟೇ ಹೊರಬಂದು ವಾಸ್ತವಕ್ಕೆ ಮುಖಾಮುಖಿಯಾಗಲು ಇರುವ ಸಣ್ಣ ಸುರಂಗ ಮಾರ್ಗ. ಇಂಥ ಸಣ್ಣಸಣ್ಣ ಬೆಳಕಿನ ಹಾಯಿಗಳನ್ನು ಮನಸಿನ ಮೇಲೆ ಹಾಯಿಸಿಕೊಳ್ಳುವುದು ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚೇ ಜರೂರಿ ಇದೆ. ಅದು ಯಾಕೆ ಮತ್ತು ಹೇಗೆ ಎಂಬುದನ್ನು ವಾಸ್ತವಾಂಶಗಳ ಮೂಲಕ ತೆರೆದಿಡುವ ಪ್ರಯತ್ನದಲ್ಲಿ ನಮ್ಮ ಕಲಾಪ್ರಾಜ್ಞರಿದ್ದಾರೆ. ನಾರ್ವೆಯ ‘ಇಬ್ಸೆನ್‌ ಅವಾರ್ಡ್ಸ್‌’ ಮತ್ತು ರಂಗಶಂಕರ ಅರ್ಪಿಸುವ ಹೆನ್ರಿಕ್‌ ಇಬ್ಸೆನ್‌ ಅವರ ‘ಆ್ಯನ್‌ ಎನಿಮಿ ಆಫ್‌ ದ ಪೀಪಲ್‌’ ಆಧರಿಸಿದ ಸಂಕೇತ್‌ ನಾಟಕ ‘ಜನಶತ್ರು’, ಸನ್ನಿಬಿಡಿಸುವ ರಿಸ್ಕಿನೊಂದಿಗೆ ಈಗಾಗಲೇ ಪ್ರಯಾಣ ಆರಂಭಿಸಿದೆ. ನಿಮ್ಮೂರು ಕಡೆ ಯಾವಾಗ ಬರಬಹುದು? ಗಮನವಿರಲಿ.

ಅಣ್ಣ ನಾರಾಣಪ್ಪ ಊರಿನ ಮುನಿಸಿಪಾಲಿಟಿ ಅಧ್ಯಕ್ಷ. ತಮ್ಮ ಡಾಕ್ಟರ್‌ ಗೋಪಿನಾಥ್‌ ಊರಿನ ಹೆಲ್ತ್‌ ಆಫೀಸರ್‌. ತಮ್ಮ ಊರಿಗೆ ಹತ್ತಿರುವ ರೋಗದ ಮೂಲವನ್ನು ಕಂಡು ಹಿಡಿದಾಗ ಅಣ್ಣ ತಮ್ಮಂದಿರ ನಡುವೆ ನಡೆಯುವ ಸಂಭಾಷಣೆ.

ನಾರಾಣಪ್ಪ : ಈಗ ನಾನು ಹೇಳೋದು ಕೇಳು. ಈಗ ಅದೇನು ಹೇಗೆ ನಡೀತಾ ಇದೆಯೋ ಹಾಗೇ ನಡೀಲಿ. ಈ ರಿಪೋರ್ಟು ನಿನ್ನ ಹತ್ರಾನೇ ಇರಲಿ. ಪೇಪರ್ರಿಗೆ ಸುಡುಗಾಡಿಗೆ ಕೊಡೋಕೆ ಹೋಗಬೇಡ. ಮುಂದೆ ಒಂದಿನ, ಮುನ್ಸೀಪಾಲಿಟಿ ಕೈಯಲ್ಲಿ ಆದ ದಿನ ನೀ ಹೇಳಿದ್ದು ಮಾಡಿಸೋಣ. ಅಲ್ಲೀತನಕ ಇದು ನಿನ್ನ ಮನೆಯಲ್ಲೇ ಇರಲಿ.

ಡಾಕ್ಟರ್‌ : ಮುಚ್ಚಿಡೋಕೆ ಆಗಲ್ಲ. ಒಂದಿಷ್ಟು ಜನರಿಗೆ ಗೊತ್ತಾಗಿದೆ ಆಗಲೇ.

ನಾರಾಣಪ್ಪ : ಯಾರಿಗೆ ಗೊತ್ತಾಗಿದೆ? ಆ ತುಂಡು ಪೇಪರ್‌ ಶಿವರಾಜನಿಗೆ ಹೇಳಿದೀಯಾ. ಮೊದಲಿಂದಾನೂ ಹೇಳ್ತಾಯಿದ್ದೆ, ನಿನ್ನ ಈ ದವಾಖಾನೇಲಿ ಔಷಧೀಗಿಂತಾ ಸುಳ್ಳು ಸುದ್ದಿ ಸಿಗ್ತಾವೆ ಹುಷಾರಾಗಿರೂ ಅಂತ. ಹಿರಿಯರು ಹೇಳಿದ್ದು ಕೇಳಿದ್ರೆ ನೀನು ಯಾಕೆ ಹೀಗಿರ್ತಾಯಿದ್ದೀ? ದುಡುಕು ಬುದ್ದಿ. ಏನಾದ್ರೂ ಹೊಳೀತು, ಆ ಪೇಪರ್ನೋನಿಗೆ ಹೇಳಿ ಬಿಡ್ತೀಯಾ.

ಡಾಕ್ಟರ್ : ಹೊಸದೇನಾದ್ರೂ ಹೊಳೆದ್ರೆ ಜನಕ್ಕೆ ಹೇಳೋದು ಕರ್ತವ್ಯ ಅಲ್ಲೇನು? ನಮ್ಮ ಜವಾಬ್ದಾರಿ ಅಲ್ಲೇನು?

ನಾರಾಣಪ್ಪ : ಜನಕ್ಕೆ ಹೊಸದೇನೂ ಬೇಡ. ಹಳೇದೇನಿದೆ ಅದ್ರಲ್ಲೇ ಸಂತೋಷವಾಗಿದಾರೆ. ವಿರೂಪಾಕ್ಷಂಗೆ ಸಾವಿರ ವರ್ಷ ಆದ್ವು, ವಿರೂಪಾಕ್ಷ ಹಳಬ ಆದ ಅಂತ ಹೊಸಾ ವಿರೂಪಾಕ್ಷನ್ನ ತರೋಕೆ ಆಗ್ತದೇನು? ಸಂಪ್ರದಾಯ, ರೀತಿ ರಿವಾಜು ಸಾವಿರ ವರ್ಷ ಆದವೂ ಅಂತ ತೆಗುದು ಬಿಸಾಕಕ್ಕೆ ಆಗ್ತದೇನು? ಜನ ಹೊಂದಿಕೊಂಡಿದಾರೆ ಅಂದ ಮೇಲೆ ಮುಗೀತಲ್ಲಾ? ಇದು ಸೀಕ್ರೇಟಾಗಿರಬೇಕಿತ್ತು, ಆಗಿಲ್ಲ. ಜನಕ್ಕೆ ಗೊತ್ತಾಗಿದೆ. ಇವತ್ತು ಗೊತ್ತಾಗಿಲ್ಲ ಅಂದ್ರೆ ನಾಳೆ ಗೊತ್ತಾಗತ್ತೆ. ಜನರ ಬಾಯಿಗೆ ಇದು ಬಿದ್ದ ಮೇಲೆ ಊರಿಗೆ ಒಳ್ಳೇದಾಗಲ್ಲ. ಅದಕ್ಕೇ ನೀನು ಅಂದಿದೆಲ್ಲಾ ತಪ್ಪೂ ಅಂತ ಆ ಪೇಪರ್ರಲ್ಲಿ ಬರೆಸು. ಮುಂದೇನಾಗ್ತದೋ ನೋಡೋಣ.

ಡಾಕ್ಟರ್‌ : ಅಂಥಾ ದ್ರೋಹ ಮಾಡಲ್ಲ ನಾನು.

ನಾರಾಣಪ್ಪ : ಹಾಗಾದ್ರೆ ಮುಂದೇನು ಮಾಡಬೇಕೂಂತ ನಾವೂ ಯೋಚನೆ ಮಾಡಬೇಕಾಗತ್ತೆ. ಮಾತಿಗೆ ಹೇಳ್ತೀನಿ ಇದರಿಂದ ನಿಂಗೆ ಒಳ್ಳೇದಾಗಲ್ಲ.

ದೇವನಗರಿ ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಈ ನಾಟಕ ಒಂದು ರೂಪಕ. ಕೊಳ್ಳುಬಾಕ ಸಂಸ್ಕೃತಿ ಮುಂದಾಗಿರುವ ಈ ಜಗತ್ತಿನ ಯಾವುದೇ ಆಧುನಿಕ ನಗರದ ಕಥೆಯೂ ಹೌದು. ಒಂದು ನದಿ, ಅದರ ದಂಡೆಯ ಮೇಲಿರುವ ಒಂದು ಫ್ಯಾಕ್ಟರಿ, ನದಿ ನೀರಿಗೆ ಈ ಫ್ಯಾಕ್ಟರಿ ಬೆರೆಸುವ ವಿಷ, ಆ ನದಿಯಿಂದ ಆಗುವ ಅನಾಹುತಗಳು ಒಂದು ಪ್ರಸ್ತಾಪ ಮಾತ್ರ. ನಿಜಕ್ಕೂ ನಾಟಕ ನಿರೂಪಿಸುವುದು ವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕುಗಳನ್ನು ಬಹುಮತ ಹೇಗೆ ಹತ್ತಿಕ್ಕುತ್ತದೆ ಎನ್ನುವುದನ್ನು.

ಈ ನಾಟಕವನ್ನು ನೋಡಿದ ಹಿರಿಯ ಕವಿ ಕಥೆಗಾರ ಜಯಂತ ಕಾಯ್ಕಿಣಿ, ‘ಈ ನಾಟಕ ನನ್ನನ್ನು ಹಿಡಿದು ನಿಲ್ಲಿಸಿತು ಅಥವಾ ಕೂರಿಸಿತು ಅನ್ನುವುದಕ್ಕಿಂತಾ ಹಿಡಿದು ಅಲ್ಲಾಡಿಸಿತು ಎನ್ನುವುದೇ ಸೂಕ್ತ. ಮೂಲದ ಐದಂಕಿನ ಮೂರು ಮುಕ್ಕಾಲು ಗಂಟೆಯದ್ದಾಗಬಹುದಾಗಿದ್ದ ನಾಟಕವನ್ನು ಎಪ್ಪತ್ತು ನಿಮಿಷಕ್ಕೆ ಕುದಿಸಿ, ಆರ್ಕಗೊಳಿಸಿಕೊಡುವುದೇನೂ ಸಾಮಾನ್ಯ ಕೆಲಸವೇ? ವಿಕಾಸಪಥದಲ್ಲಿ ಇನ್ನೂ ವಿಕೃತಗೊಳ್ಳುತ್ತಲೇ ಹೋಗುತ್ತಿರುವ ಮನುಷ್ಯನ ಪಾಶವೀಲಾಲಸೆ, ಲಕ್ಷ್ಮೀಸುತರ ಮತ್ತು ಸರಸ್ವತೀಸುತರ ನಡುವಿನ ನಿರಂತರ ನಿರರ್ಥಕ ಹಣಾಹಣಿ, ಐಹಿಕತೆ ಮತ್ತು ದೈಹಿಕತೆಗಾಗಿನ ಹುನ್ನಾರಗಳೇ ಮಾನವ ಉತ್ಕರ್ಷದ ಲಾಂಛನಗಳಾಗಿ ಮೆರೆಯುವ ಶೋಚನೀಯ ವಿರೋಧಾಭಾಸ. ಇವೆಲ್ಲವೂ, ರಂಗಭೂಮಿಗಷ್ಟೇ ಸಾಧ್ಯವಿರುವ ರೂಪಕ ಧ್ವನಿಯೊಂದಿಗೆ, ಹಲವು ತೆರೆದ ಕಿಟಿಕಿಗಳ ಸೌಷ್ಠವದೊಂದಿಗೆ ‘ಜನಶತ್ರು’ ನನ್ನನ್ನು ಆವರಿಸಿ ಕಾಡುತ್ತದೆ.’

‘ಬಹುಮತ ಎಂದಾಕ್ಷಣ ಅದು ಸರಿಯೇ ಇರಬೇಕಾಗಿಲ್ಲ ಎನ್ನುವ ಜೀವಾಳದ ಸತ್ಯವನ್ನು ಎಂದೋ ಸಾರಿದ ಮೂಲ ಕೃತಿಯ ಆತ್ಮ ಮತ್ತು ತಹತಹ ಯಾವುದೇ ಸಮಯದ ಜಾಗೃತ ಸಂಯುಕ್ತ ಮನಸ್ಸಾಕ್ಷಿಯ ಅನುರಣನದಂತಿದೆ. ಒಂದು ಹಳ್ಳಿ, ಅದರ ಜೀವವಾಹಿನಿಯಾಗಿ ಹರಿಯುವ ಒಂದು ನದಿ, ಹಾನಿಕಾರಕ ರಸಾಯನದ ವಿಷಯವನ್ನು ಅದೇ ನದಿಗೆ ಬಿಡುವುದು ಕಾರ್ಖಾನೆ, ಆ ಕಾರ್ಖಾನೆಯಲ್ಲೇ ಹೊಟ್ಟೆಪಾಡಿಗಾಗಿ ದುಡಿಯಲು ಹೋಗುವ ಅದೇ ಹಳ್ಳಿಯ ನಾಗರಿಕರು, ಕಾರ್ಖಾನೆಯ ಕೃಪಾಪೋಷಿತ ಪಂಚರು, ವರ್ತಕರು, ಮಾಧ್ಯಮದವರು ಮತ್ತು ಇವೆಲ್ಲವುಗಳ ವಿರುದ್ಧ ದನಿ ಎತ್ತುವ ಏಕಾಂಗಿ ಡಾಕ್ಟರು. ದೈಹಿಕ ಮತ್ತು ಮಾನಸಿಕ ರೋಗ ನಿವಾರಣೆಗೆ ಬದ್ಧನಾದ ಒಬ್ಬ ವೈದ್ಯ, ಈ ವಿಷವರ್ತುಲದ ವಿರುದ್ಧ ಎದ್ದು ನಿಲ್ಲುವುದು ಅತ್ಯಂತ ಆಳವೂ ವ್ಯಾಪಕವೂ ಆದ ರೂಪಕವಾಗಿದೆ. ಒಬ್ಬನ್ನು ಇನ್ನೊಬ್ಬನ ಪರಿಚಯ ಮಾಡುತ್ತಲೇ ಆ ಇನ್ನೊಬ್ಬನ ಮಾತನ್ನು ಆಡತೊಡಗುವುದು, ಅವನು ಶುರು ಮಾಡಿದ ಮಾತನ್ನು ಮತ್ತೋರ್ವನು ಕಸಿದುಕೊಂಡು ಆಡುವುದು, ಸಂಭಾಷಣೆ ಎಂದುಕೊಂಡಿದ್ದು ತಂತಾನೇ ವೀಕ್ಷಕ ವರದಿಯಾಗುವುದು, ಹೀಗೆ ವಿಶಿಷ್ಟವಾದ ಮಾತಿನ ಹಂದರದ ಮೂಲಕ ಚಲಿಸುವ ಈ ನಾಟಕದ ಆಕೃತಿ ಕವಿತೆಯ ಸಮೀಪ ಸುಳಿಯುತ್ತದೆ.’

ಹಳ್ಳಿಗಳೆಂಬ ವೃದ್ಧಾಶ್ರಮಗಳು

‘ಬೇಸಾಯದಿಂದ ಗಿಟ್ಟುವುದೇನಿಲ್ಲ ಕೈಸುಟ್ಟುಕೊಳ್ಳುವುದೇ’ ಹೀಗೆಂದು ಹಲ ವರ್ಷಗಳ ಹಿಂದೆ ತಮ್ಮ ತಮ್ಮ ಮಕ್ಕಳನ್ನು ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದೆಹಲಿಗೆ ಕಳಿಸಿಬಿಟ್ಟರು ಸಾಗರದ ಬಳಿಯ ತುಮರಿಯ ಹಳ್ಳಿಗರು. ಈಗ ನಮಗೆ ವಯಸ್ಸಾಗಿದೆ ವಾಪಾಸು ಬನ್ನಿ ಎಂದರೆ ಆ ಮಕ್ಕಳು ವಾಪಾಸು ಬಂದಾರೆಯೇ? ಇಡೀ ಹಳ್ಳಿಗೆ ಹಳ್ಳಿಯೇ ವೃದ್ಧರಿಂದ ತುಂಬಿ ಹೋಗಿದೆ. ಅವರ ಸಮಸ್ಯೆಗಳೇನು? ಅವುಗಳನ್ನು ಸಂಭಾಳಿಸುವವರು ಯಾರು? ಈ ವಿಚಿತ್ರ ಸಮಸ್ಯೆಯನ್ನೂ ‘ಜನ ಶತ್ರು’ ಹಿಡಿದಿಟ್ಟಿದೆ. ಮೇ 15ರಂದು ಇಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ತುಮರಿಯ ‘ಕಿನ್ನರ ಮೇಳ’ದ ಕಲಾವಿದರು ಈ ನಾಟಕವನ್ನು ಪ್ರಸ್ತುಪಡಿಲಿದ್ದಾರೆ.

ಈ ನಾಟಕದ ರಚನೆಕಾರ ಮತ್ತು ನಿರ್ದೇಶಕ ಎಸ್​. ಸುರೇಂದ್ರನಾಥ್, ‘1885ರಲ್ಲಿ ಇಬ್ಸೆನ್​ ಬರೆದ ನಾಟಕದ ಕಥಾವಸ್ತು ಇಂದಿಗೂ ಪ್ರಸ್ತುತ. ಇದನ್ನು ಆಧರಿಸಿಯೇ ಈ ಪ್ರಯೋಗಗಳು ರೂಪುಗೊಂಡಿರುವುದು. ಟೂರಿಂಗ್ ಟಾಕೀಸ್​ ಪರಿಕಲ್ಪನೆಯಡಿ ರೂಪಿಸಲಾಗಿದೆ. ನಾಟಕದ ಸ್ವರೂಪ ಒಂದೇ ತೆರನಾಗಿದ್ದು, ಸ್ಥಳೀಯ ಸಾಮಾಜಿಕ ಸಮಸ್ಯೆಗಳ ಆಧಾರದ ಮೇಲೆ ಕಥಾವಸ್ತು ಬದಲಾಗುತ್ತ ಹೋಗುತ್ತದೆ. ಸ್ಥಳೀಯ ನಾಟಕ ತಂಡದವರನ್ನು ಒಳಗೊಂಡ ನಾಲ್ಕೇ ನಾಲ್ಕು ಪಾತ್ರಗಳ ಮೂಲಕ ಇದು ಸಾಗುತ್ತದೆ. ಬೆಂಗಳೂರಿನಲ್ಲಿ ಪ್ರದರ್ಶನ ಆರಂಭಗೊಂಡಿತು. ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನ ಏರ್ಪಡಿಸಿದ್ದೆವು. ಮೈಸೂರಿನಲ್ಲಿ ಏಷಿಯನ್ ಪೇಂಟ್ಸ್ ಕಂಪೆನಿಯು 93 ರೈತರಿಗೆ ಕೆಲಸದ ಆಸೆ ತೋರಿಸಿ ಅವರ ಭೂಮಿಯನ್ನು ಕಬಳಿಸಿ ಮೋಸ ಮಾಡಿದ್ದೇ ನಾಟಕದ ವಸ್ತುವಾಗಿತ್ತು’ ಎನ್ನುತ್ತಾರೆ.

ಹಾಗೆ ನೋಡಿದರೆ, ಪ್ರಸ್ತುತ ಕೈಗಾರಿಕಾ ವಲಯದಂಚಿನಲ್ಲಿರುವ ಎಲ್ಲ ಹಳ್ಳಿಗಳೂ ಎದುರಿಸುತ್ತಿರುವ ಜ್ವಲಂತ ಸಮಸ್ಯೆ ಇದು. ಬೆಂಗಳೂರಿನ ಏರ್ಪೋರ್ಟ್​ ಬಳಿ ಇರುವ ಹಳ್ಳಿಗರೂ ಇದಕ್ಕೆ ಹೊರತಾಗಿಲ್ಲ. ಏರ್ಪೋರ್ಟಿನಲ್ಲಿ ಕೆಲಸ ಮಾಡುತ್ತಿರುವ ಕೂಲಿಮಂದಿಯ ಹಿನ್ನೆಲೆಯನ್ನೊಮ್ಮೆ ಗಮನಿಸಿದರೆ ಸಾಕು ವಸ್ತುಸ್ಥಿತಿ ಅರ್ಥವಾಗುತ್ತದೆ. ಕೈಗಾರಿಕೋದ್ಯಮಗಳು ತೋರುವ ಲಕ್ಷಲಕ್ಷಗಳ ಆಸೆಗೆ ಅವಿದ್ಯಾವಂತ ರೈತ ಮಾರುಹೋಗುತ್ತಾನೆ. ಇದ್ದಕ್ಕಿದ್ದಂತೆ ಕೈಗೆ ಬಂದ ಹಣವನ್ನು ಹೇಗೆ ಖರ್ಚು ಮಾಡುವುದು ಎಂಬ ಅರಿವಿಲ್ಲದೆ ಕೆಲ ವರ್ಷಗಳಲ್ಲೇ ದಿವಾಳಿಯಾಗಿಬಿಡುತ್ತಾನೆ. ಹಾಗೆಯೇ ಈವತ್ತು ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಅಪಾರ್ಟ್​ಮೆಂಟ್​ಗಳನ್ನು ಕಟ್ಟಿಸುತ್ತಿರುವವರೂ ಭೂಮಿ ಮಾರಿ ಬಂದವರೇ. ಆ ಅಪಾರ್ಟ್​ಮೆಂಟ್​ಗಳನ್ನು ಕಟ್ಟುತ್ತಿರುವ ಕೂಲಿಮಂದಿ? ನಮ್ಮ ನಿಮ್ಮ ಊರುಗಳಿಂದ ಬಂದವರು. ಸಂಕಟಕ್ಕೀಡುಮಾಡುವ ಇಂಥ ಅನೇಕ ವಿಪರ್ಯಾಸಗಳ ನಡುವೆ ನಾವಿದ್ದೇವೆ ನಮ್ಮೊಂದಿಗೆ ಈಗ ಕೊರೊನಾ ಕೂಡ ಮತ್ತು ರಾಜಕೀಯದ ಮಹಾಪಗಡೆಯಾಟವೂ.

ಸಾಮಾಜಿಕ ಕಳಕಳಿ ಮತ್ತು ಹೋರಾಟಪರ ಹಿನ್ನೆಲೆಯಿಂದ ಬಂದ ಹಿರಿಯ ಪತ್ರಕರ್ತೆ, ಲೇಖಕಿ ಡಾ. ವಿಜಯಾ, ‘ಇದೇ ನಾಟಕವನ್ನು ಸತ್ಯಜಿತ್ ಸಿನೆಮಾ ಮಾಡಿದ್ದರು, ಆ ಸಿನೆಮಾ ಕೂಡ ನೋಡಿದ್ದೇನೆ. ಈಗ ಸುರೇಂದ್ರನಾಥ್ ನಿರ್ದೇಶನದ ನಾಟಕವನ್ನೂ ನೋಡಿದೆ. ಕೆಲವೇ ನಿಮಿಷಗಳಲ್ಲಿ ಬಹಳ ಮಹತ್ವದ ಸಂಗತಿಯನ್ನು ಈ ನಾಟಕ ಹೇಳಿದೆ. ಇದುವರೆಗೂ ನಂಬಿಕೊಂಡು ಬಂದ ಬಹುಮತ ಅನ್ನುವುದೇ ಸಮಾಜಕ್ಕೆ ಹೇಗೆ ಅಪಾಯಕಾರಿ ಆಗುತ್ತದೆ ಎನ್ನುವುದನ್ನು ಅತ್ಯಂತ ಕಲಾತ್ಮಕವಾಗಿ, ಮನಮುಟ್ಟುವಂತೆ ನಾಟಕದ ಕಥಾಹಂದರವನ್ನು ಶಕ್ತಿಯುತವಾಗಿ ಕಟ್ಟಲಾಗಿದೆ. ಇದು ಹೆಚ್ಚೆಚ್ಚು ತಲುಪುವ ತುರ್ತು ಇದೆ’ ಎನ್ನುತ್ತಾರೆ.

janashatru

ಸತ್ಯ ಹೇಳಲು ಧ್ವನಿ ಬೇಕು

ಜನಸಾಮಾನ್ಯನ ಧ್ವನಿ

ರಂಗಶಂಕರದ ನಿರ್ದೇಶಕಿ ಅರುಂಧತಿ ನಾಗ್ ಈ ನಾಟಕದ ಕುರಿತು, ‘ಇಂದು ಜನಸಾಮಾನ್ಯ ಧ್ವನಿ ಎತ್ತುವಂತಾಗಬೇಕು ಎನ್ನುವುದೇ ನಾಟಕದ ಆತ್ಮ. ಬಹುಮತ ಎನ್ನುವುದು ಕೆಲವೊಮ್ಮೆ ಮೂರ್ಖತನಕ್ಕೆ ಈಡುಮಾಡುತ್ತದೆ. ಹಾಗೆ ನೋಡಿದರೆ ಜಗತ್ತಿಗೆ ಜಗತ್ತೇ ಕುರಿಮಂದೆಯಂತೆ ಸಾಗುತ್ತಿದೆ. ಆದರೆ ನಮಗೆ ಬೇಕಿರುವುದು ಯೋಚನಾ ಶಕ್ತಿ. ಒಂದಾದರೂ ಧ್ವನಿ ಸತ್ಯದ ಪರವಾಗಿ ಹೊಮ್ಮಬೇಕು. ನಮ್ಮ ಮನರಂಜನಾ ಕ್ಷೇತ್ರವಂತೂ ಕನಸು, ಪ್ರೇಮ, ಕೌಟುಂಬಿಕ ನಾಟಕದೊಳಗೇ ಕಳೆದುಹೋಗಿದೆ. ಅದರಲ್ಲೂ ಧಾರಾವಾಹಿ ಜಗತ್ತನ್ನಂತೂ ಕೇಳುವುದೇ ಬೇಡ. ಸೃಜನಶೀಲತೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಯೋಚಿಸಲು ನಮಗೆ ಯಾಕೆ ಸಾಧ್ಯವಾಗುತ್ತಿಲ್ಲ? ಟಿಆರ್​ಪಿ ಭರದಲ್ಲಿ ನಮ್ಮ ಚಾನೆಲ್​ಗಳದ್ದು ಗಾಂಪರ ಗುಂಪೇ ಆಗಿಹೋಗಿದೆ. ಹೀಗಿರುವಾಗ ಸತ್ಯ ಹೇಳುವ ಜವಾಬ್ದಾರಿಯನ್ನು ಯಾರಾದರೂ ವಹಿಸಿಕೊಳ್ಳಲೇಬೇಕಲ್ಲ. ಇಂಥ ಸಮಯದಲ್ಲಿ ರಂಗಭೂಮಿಯದ್ದೇ ಮಹತ್ತರ ಪಾತ್ರ. ಅದರಲ್ಲೂ ಹವ್ಯಾಸಿ ರಂಗಭೂಮಿ. ಇಲ್ಲಿ ಯಾರನ್ನೂ ಹೊಗಳಿ ಅಟ್ಟಕ್ಕೇರಿಸಿ ಕೂರಿಸಬೇಕಿಲ್ಲ. ಹವ್ಯಾಸಿ ರಂಗಭೂಮಿಗೆ ಮಾತ್ರ ಸತ್ಯ ಹೇಳುವ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವಿದೆ. ಈ ಹಿನ್ನೆಲೆಯಲ್ಲಿ ರಂಗಶಂಕರದ ಸಹಪ್ರಾಯೋಜಕತ್ವದಲ್ಲಿ ಈ ನಾಟಕ ಪ್ರಸ್ತುತಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಮತ್ತು ಐತಿಹಾಸಿಕ ದಾಖಲೆ ಕೂಡ’ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಬಹುಮತದ ದಬ್ಬಾಳಿಕೆಯ ವಿರುದ್ಧ ಎತ್ತಲೇಬೇಕಾದ ದನಿಯ ಅಗತ್ಯದ ಅರಿವು ಉಂಟು ಮಾಡಿಕೊಡುವುದೇ ಈ ಪ್ರಸ್ತುತಿಯ ಉದ್ದೇಶ. ಇದನ್ನೇ ಇಬ್ಸೆನ್‌ ತಮ್ಮ ನಾಟಕದಲ್ಲಿ ಹೇಳುವುದು ಕೂಡ; ‘ಎಲ್ಲರಿಗೂ ಇಷ್ಟವಾಗೋದನ್ನು ಹೇಳೋದು ಸ್ವಾತಂತ್ರ್ಯವಲ್ಲ. ಜನಕ್ಕೆ ಏನು ಕೇಳೋದಿಕ್ಕೆ ಇಷ್ಟ ಇಲ್ಲವೋ ಅದನ್ನು ಧೈರ್ಯವಾಗಿ ಹೇಳುವ ಕಾಲ ಬಂದಾಗ ಅದು ಸ್ವಾತಂತ್ರ್ಯ.’

ಈ ನಾಟಕ ನೋಡಿದ ಕಥೆಗಾರ, ಆರ್ಥಿಕ ತಜ್ಞ ಎಂ. ಎಸ್​. ಶ್ರೀರಾಮ್, ‘ಇಬ್ಸೆನ್ನನ ಪಬ್ಲಿಕ್ ಎನಿಮಿ ಸದಾ ಕಾಲಕ್ಕೂ ಅನ್ವಯಿಸಿ – ಭಿನ್ನ ಪರಿಸರ-ಸಂದರ್ಭ-ಬಿಕ್ಕಟ್ಟುಗಳ ಸಂದರ್ಭದಲ್ಲಿ ಪ್ರಯೋಗ ಮಾಡಬಲ್ಲಂತಹ ನಾಟಕ. ಎಸ್. ಸುರೇಂದ್ರನಾಥ್ (ಸೂರಿ) ಕಳೆದ ವರ್ಷ ಪಡೆದ ಇಬ್ಸನ್ ಪ್ರಶಸ್ತಿಗಾಗಿ ಜನಶತ್ರು ನಾಟಕದ ಹಲವು ಅವತರಣಿಕೆಗಳನ್ನು ಆಯಾ ಸಂದರ್ಭ ಮತ್ತು ಸ್ಥಳೀಯತೆಗೆ ಅನ್ವಯವಾಗುವಂತೆ ಬರೆದಿದ್ದಾರೆ. ನಾಲ್ಕೇ ಪಾತ್ರಗಳು, ಪ್ರೇಕ್ಷಕರನ್ನು ಊರಿನ ಜನರಂತೆ ನಾಟಕದಲ್ಲಿ ಅಳವಡಿಸಿ, ಅಡಕಗೊಳಿಸಿ, ಅವರನ್ನೂ ನಾಟಕದ ಪಾತ್ರಧಾರಿಗಳಾಗಿಸಿ ಮುಂದುವರೆವ ಈ ನಾಟಕ ನಮ್ಮ ಕಾಲದ ಜಟಿಲ ಸಮಸ್ಯೆಗಳನ್ನು ಪ್ರತಿಫಲಿಸುತ್ತದೆ. ಬೆಳವಣಿಗೆ, ಪರ್ಯಾವರಣ, ತಕ್ಷಣ ಲಾಭ, ಪರಿಸರ ನಾಶದಿಂದ ತೆತ್ತಬೇಕಿರುವ ದೀರ್ಘಕಾಲಿಕ ದಂಡ, ರಾಜಕೀಯ, ವ್ಯಾಪಾರ – ಅನೇಕ ಹಿತಾಸಕ್ತಿಗಳನ್ನು ಒಂದೆಡೆ ಸೇರಿಸಿ ತಿಕ್ಕಾಟಕ್ಕೆ ಒಳಪಡಿಸುವ ಮಿನಿಮಲಿಸ್ಟ್ ಆದ ಈ ಪ್ರಯೋಗ ಸಮಕಾಲೀನವೂ ಸಾರ್ವಕಾಲಿಕವೂ ಆಗಿದೆ’ ಎನ್ನುತ್ತಾರೆ.

ಸದ್ಯಕ್ಕೆ ಮತ್ತೊಂದು ಪ್ರದರ್ಶನ ಬೆಂಗಳೂರಿನಲ್ಲಿಯೇ ಇದೆ. ಹಾಗೇ ನಿಮ್ಮೂರಿನ ಬಳಿ ಈ ನಾಟಕ ಬಂದಾಗ ನಿಮ್ಮ ನಿಮ್ಮ ಸುರಕ್ಷೆಯಲ್ಲಿ ನೀವೂ ಕೂಡ ಖಂಡಿತಾ ಹೋಗಿ ನೋಡಬಹುದು.

ವಿನ್ಯಾಸ, ರಚನೆ ಮತ್ತು ನಿರ್ದೇಶನ: ಎಸ್.  ಸುರೇಂದ್ರನಾಥ್‌
ಪಾತ್ರವರ್ಗ : ಕೀರ್ತಿಭಾನು, ಗಣೇಶ್‌ ಶೆಣೈ, ಬಿ. ವಿ. ಶೃಂಗ, ರಾಘ್‌ ಅರಸ್‌, ಅನಿಲ್‌ ಬಿ.
ಸ್ಥಳ : ರಂಗಶಂಕರ
ದಿನಾಂಕ : ಏಪ್ರಿಲ್ 9
ಸಮಯ : ಸಂಜೆ 7.30 
ಟಿಕೇಟು ದರ : ರೂ. 150
http:bookmyshow.com

ಇದನ್ನೂ ಓದಿ : ಬಂದಾಳ ಬಂದಾಳ ಸವದತ್ತಿ ಎಲ್ಲವ್ವ ಬಂದಾಳ ಬೆಂಗಳೂರಿಗೆ