‘ಮನೆ ನೋಡ್ಕೊಂಡಿರಿಯೆಂದು ನಮ್ಮನೆವ್ರನ್ನ ಕೂರ್ಸಿದ್ರೆ ಅವ್ರು ಇಷ್ಟೆಲ್ಲಾ ಮಾಡ್ಲಿಕ್ಕೆ ಎಲ್ಲಾಗತಿತ್ತೆ?‘ : ಕೆ. ವಿ. ಶೈಲಜಾ

‘ಶೈಲಜಾ ಚಿಕ್ಕಮ್ಮರಿಗೆ ಸಂಗೀತದಲ್ಲಿ ಅಪಾರ ಆಸಕ್ತಿಯಿತ್ತು. ಅದನ್ನು ಗುರುತಿಸಿ ಪೋಷಿಸಿದವರು ಕೆ.ವಿ.ಸುಬ್ಬಣ್ಣರವರೆನ್ನುವುದು ನಮ್ಮ ಕುಟುಂಬವರ್ಗದಲ್ಲಿ ಆಗಿನ ಕಾಲದಲ್ಲಿ ದೊಡ್ಡ ವಿಶೇಷವಾಗಿತ್ತು. ವಾರಕ್ಕೆರಡು ಬಾರಿ ಮುಂಡಿಗೆಸರದಂತಹ ಹಳ್ಳಿಗೆ ಬಂದು ಸಂಗೀತ ಪಾಠ ಹೇಳಿಕೊಡಲು ಪಟ್ಟಣದಲ್ಲಿದ್ದ ಭೀಮಸೇನಾಚಾರ್ಯರೆಂಬ ಸಂಗೀತ ಮಾಸ್ತರೊಬ್ಬರನ್ನು ಅವರು ನೇಮಿಸಿದ್ದರು. ಪ್ರಾಯಶಃ ಈ ಸಂಗೀತದ ಆಸಕ್ತಿಯೇ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಚಿಕ್ಕಮ್ಮ ನಮ್ಮನೆಗೆ ಬರುವಂತೆ ಮಾಡುತ್ತಿತ್ತೆಂದು ಅನ್ನಿಸುತ್ತೆ.‘ ಜಯಶ್ರೀ ಕಾಸರವಳ್ಳಿ

  • TV9 Web Team
  • Published On - 13:31 PM, 31 Mar 2021
‘ಮನೆ ನೋಡ್ಕೊಂಡಿರಿಯೆಂದು ನಮ್ಮನೆವ್ರನ್ನ ಕೂರ್ಸಿದ್ರೆ ಅವ್ರು ಇಷ್ಟೆಲ್ಲಾ ಮಾಡ್ಲಿಕ್ಕೆ ಎಲ್ಲಾಗತಿತ್ತೆ?‘ : ಕೆ. ವಿ. ಶೈಲಜಾ
ನೀನಾಸಂನ ಕೆ. ವಿ. ಸುಬ್ಬಣ್ಣ ಅವರ ಪತ್ನಿ ಶೈಲಜಾ ಮತ್ತು ಲೇಖಕಿ ಜಯಶ್ರೀ ಕಾಸರವಳ್ಳಿ

ನನ್ನ ಚಿಕ್ಕಮ್ಮ ಕೆ.ವಿ. ಶೈಲಜಾ ಅವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಒಲವು. ಈ ಅಪರೂಪದ ಅಪೂರ್ವ ಕಾರ್ಯಕ್ರಮವನ್ನು ಆಸ್ವಾದಿಸಲಿಕ್ಕಾಗಿಯೇ ಪ್ರತೀ ವರುಷ ಗಣೇಶನ ಹಬ್ಬದ ಸಮಯದಲ್ಲಿ ಸಂಗೀತ ಕಛೇರಿ ಕೇಳಲು ನಮ್ಮನೆಗೆ ಬರುತ್ತಿದ್ದರು. ಬಹುಶಃ ನನಗೆ ಚಿಕ್ಕಮ್ಮರ ಹೆಚ್ಚು ಒಡನಾಟ ಸಿಕ್ಕಿದ್ದು ಈ ಐದಾರು ವರುಷಗಳಲ್ಲಿ ಎನ್ನಬೇಕು. ಹೆಚ್ಚೇನೂ ಮಾತುಕತೆಯಿರದಿದ್ದರೂ ಅವರ ಅಚ್ಚುಕಟ್ಟುತನ, ಶಿಸ್ತು, ಸಮಯಪ್ರಜ್ಞೆ, ಅಪಾರ ಸಂಗೀತ ಪ್ರೇಮ, ಕಲಾ ವ್ಯಾಮೋಹದ ಪರಿಚಯ ನನಗಾಗುತ್ತಾ ಬಂದಿತು. ಮೂರು ದಿನಗಳ ಹಿಂದೆ ಎಂಬತ್ತೈದರ ಇಳಿವಯಸ್ಸಿನಲ್ಲಿ ಅವರು ನಮ್ಮನ್ನಗಲಿದರು. ಚಿಕ್ಕಮ್ಮ ಈಗ ನೆನಪಿನಲ್ಲಷ್ಟೇ.  

-ಜಯಶ್ರೀ ಕಾಸರವಳ್ಳಿ

ನನ್ನ ಬಾಲ್ಯದ ನೆನಪು, ಹಾಗೆ ನೋಡಿದರೆ ಶುರುವಾಗುವುದೇ ಇವ್ಯಾವ ವಿಶೇಷಣಗಳಿಲ್ಲದೇ ಶೈಲಚಿಕ್ಕಮ್ಮನೆಂದು ಪರಿಚಿತ ವಲಯದಲ್ಲಿ ಆಪ್ತರಾಗುಳಿದು ಸಂಬಂಧದಲ್ಲಿ ನನ್ನ ತಾಯಿಯ ತಂಗಿಯಾಗಿ ನಮ್ಮೆಲ್ಲರ ಚಿಕ್ಕಮ್ಮರಾಗಿ ನಮ್ಮ ಮನೆಗೆ ಬರುತ್ತಿದ್ದಂತಹ ಗಳಿಗೆಗಳಿಂದಲೇ. ಇಲ್ಲಾ ಬೇಸಿಗೆ ರಜೆಗಳಲ್ಲಿ ಕಮಕೋಡಿನ ಅಜ್ಜಯ್ಯನ ಮನೆಯಲ್ಲಿ ಎಲ್ಲರೂ ಕಲೆಯುತ್ತಿದ್ದಂತಹ ಸಂದರ್ಭಗಳಲ್ಲಿ ಕೆಲವು ದಿನ ಅವರೊಡನೆ ಕೂಡಿ ಕಳೆವ ನೆನಪಿನ ಆಧಾರದ ಮೇಲೆ. ನಾನು ತಂದೆಯವರನ್ನು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡಿದ್ದೆ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಮನೆ ಮಾಡಿ ನನ್ನ ತಾಯಿ ನಮ್ಮೊಂದಿಗೆ ನೆಲೆಸಿದ್ದರು. ಊರಲ್ಲಿರುವ ಮನೆ, ತೋಟ, ಜಮೀನು ನೋಡಿಕೊಳ್ಳುತ್ತಿದ್ದದ್ದು ನಮ್ಮೆಲ್ಲರ ಹಿರಿಯಣ್ಣ. ನಮಗೆ ರಜೆಯೆಂದರೆ ನನ್ನಜ್ಜನ ಊರಾದ ಕಮಕೋಡಿಗೆ ಹೋಗುವುದು, ಅದು ಬಿಟ್ಟರೆ, ಹಬ್ಬ ಹರಿದಿನ ಹಾಗೂ ರಜೆಗಳಲ್ಲಿ ನಮ್ಮ ಊರಾದ ಕೇಸಲೂರಿಗೆ ಹೋಗುವುದಷ್ಟೇ. ನಮ್ಮೂರಿಗೆ ಹೋಗುವ ದಾರಿಯ ಮಧ್ಯೆಯೇ ಕಮಕೋಡು ಇರುತ್ತಿದ್ದರಿಂದ ರಜೆಯ ಕೆಲ ದಿನಗಳನ್ನು ಅಲ್ಲೂ ಕಳೆಯುತ್ತಿದ್ದೆವು. ಪತಿಯನ್ನು ಬೇಗ ಕಳೆದುಕೊಂಡಿದ್ದರಿಂದಲೋ ಏನೋ ನನ್ನ ತಾಯಿಯವರು ತಮ್ಮ ಸ್ವಂತ ಅಕ್ಕತಂಗಿಯರ ಮನೆಗಳಿಗೂ ತಾವು ಹೋಗುವುದಾಗಲೀ, ನಮ್ಮನ್ನು ಕಳುಹಿಸುವುದಾಗಲೀ ಇರಲಿಲ್ಲವಾದ್ದರಿಂದ, ಅವರ ಖಾಸಗಿ ಅಕ್ಕತಂಗಿಯರ ಮನೆಗಳಿಗೂ ರಜೆಗಳಲ್ಲಿ ಹೋದಂತಹ ಬಾಲ್ಯದ ನೆನಪುಗಳು ಅಷ್ಟಾಗಿ ನನಗಿಲ್ಲ.

ಇದುವರೆಗಿನ ನನ್ನ ಜೀವನದಲ್ಲಿ ಮುಂಡಿಗೆಸರಕ್ಕೆ ನಾನು ಭೇಟಿ ಕೊಟ್ಟಿರುವುದು ನಾಲ್ಕೈದು ಬಾರಿಯಷ್ಟೇ. ಒಮ್ಮೆ ನಾಲ್ಕೈದು ದಿನಗಳು ಅವರ ಮನೆಯಲ್ಲಿ ಹೋಗಿ ತಂಗಿದ್ದ ನೆನಪುಂಟು. ನಿಜ ಹೇಳಬೇಕೆಂದರೆ ನಾನು ಚಿಕ್ಕವಳಿರುವಾಗ ನೀನಾಸಂ ಸಂಸ್ಥಾಪಕರಾದ ಕೆ.ವಿ.ಸುಬ್ಬಣ್ಣನವರು ನಮ್ಮ ಚಿಕ್ಕಮ್ಮನ ಪತಿಯೆನ್ನುವುದಕ್ಕಿಂತಾ ಹೆಚ್ಚೇನೂ ಅವರ ಬಗ್ಗೆ ತಿಳಿವಳಿಕೆ ಇರಲಿಲ್ಲ. ನಾಡಿನ ಅನೇಕ ಕಲಾವಿದರಿಗೆ, ಸಾಹಿತಿಗಳಿಗೆ ಮುಂಡಿಗೆಸರದ ಅವರ ಮನೆ ತಂಗುದಾಣವಾಗಿತ್ತೆನ್ನುವುದಾಗಲೀ, ಎಲ್ಲೆಲ್ಲಿಂದಲೋ ತಿಂಗಳಿಗೊಮ್ಮೆಯಾದರೂ ಹೆಗ್ಗೋಡಿನತ್ತ ಪಯಣ ಬೆಳೆಸಿ, ಕೆಲ ಗಂಟೆಗಳನ್ನಾದರೂ ಸುಬ್ಬಣ್ಣರವರ ಸಾನಿಧ್ಯದಲ್ಲಿ ಕಳೆಯುವ ಹಂಬಲದಲ್ಲಿ ನಾಡಿನ ಶ್ರೇಷ್ಠ ಕಲಾವಿದರೂ, ರಾಜಕೀಯ ಧುರೀಣರೂ ಅವರನ್ನು ಹುಡುಕಿಕೊಂಡು ಬರುತ್ತಿದ್ದರೆನ್ನುವುದಾಗಲೀ ಕಿಂಚಿತ್ತು ಅರಿವೂ ನನಗಿರಲಿಲ್ಲ.
ನಾನು ಹಾಗೂ ನನ್ನ ಅಕ್ಕತಂಗಿಯರು ನಮ್ಮ ಚಿಕ್ಕಪ್ಪಯ್ಯ ಕೆ.ವಿ.ಸುಬ್ಬಣ್ಣರವರನ್ನು ಸಂಧಿಸುತ್ತಿದ್ದದ್ದು ಚಿಕ್ಕಮ್ಮನನ್ನು ವಾಪಾಸು ಮುಂಡಿಗೆಸರಕ್ಕೆ ಕರೆದುಕೊಂಡು ಹೋಗಲು ಅಜ್ಜಯ್ಯನ ಮನೆಗೆ ಬಂದಾಗಲೇ. ಅವರು ಯಾವಾಗಲೂ ಅವರ ಆತ್ಮದ ಗೆಳೆಯ ಕಡೇಮನೆ ಮಂಜಪ್ಪರ ಅಂಬಾಸಿಡರ್ ಕಾರಿನಲ್ಲೇ ಓಡಿಯಾಡುತ್ತಿದ್ದುದ್ದರಿಂದ ನಮಗೆ ಆ ಕಾರಿನ ಆಕರ್ಷಣೆಯೇ ಜಾಸ್ತಿ. ಅಜ್ಜಯ್ಯನ ಮನೆಗೆ ಬೆಳಿಗ್ಗೆ ಬಂದು ಮಧ್ಹಾಹ್ನ ಊಟ ಮಾಡಿ ಸಂಜೆ ಹೊತ್ತಿಗೆ ಹೆಂಡತಿ ಮಗನನ್ನು ಕರೆದುಕೊಂಡು ವಾಪಾಸಾಗುತ್ತಿದ್ದದ್ದೇ ಹೆಚ್ಚು.

ಅವರು ಬರುತ್ತಾರೆಂದರೆ ನಮ್ಮಜ್ಜಯ್ಯನ ಮನೆಯಲ್ಲಿ ಏನೋ ಸಂಭ್ರಮ, ಸಡಗರ. ನನ್ನ ಅಜ್ಜಯ್ಯ ಸುಬ್ಬಣ್ಣ ಬರುತ್ತಾರೆಂದು ಚಡಪಡಿಸುತ್ತಾ ಹಜಾರದಲ್ಲಿ ಓಡಿಯಾಡುತ್ತಿದ್ದರೆ, ನಾವು ಹೆಣ್ಣು ಮಕ್ಕಳು ಬಾಗಿಲ ಮರೆಯಲ್ಲಿ ನಿಂತು ಕುತೂಹಲದಿಂದ ಅಪರೂಪದವರಲ್ಲಿ ಅಪರೂಪದವರಾದ ಅತಿಥಿಯ ನಿರೀಕ್ಷೆ ಮಾಡುತ್ತಾ ಸೋಜಿಗದಿಂದ ಕಾಯುತ್ತಿದ್ದೆವು. ನಮ್ಮಜ್ಜಯ್ಯನಿಗೆ ಯಾಕೆ ಅವರ ಮೇಲೆ ಅಷ್ಟೊಂದು ಗೌರವ, ಅಭಿಮಾನವೆಂಬುದು ಮಕ್ಕಳಾದ ನಮಗೆ ಅರ್ಥವಾಗುತ್ತಿರಲಿಲ್ಲ. ಯಾವುದಾದರೂ ಕಾರ್ಯಕ್ರಮಕ್ಕೆ ಅವರು ಶಿವಮೊಗ್ಗಕ್ಕೆ ಬಂದವರು ನಮ್ಮನೆಗೆ ಬಂದರೆ ನನ್ನ ತಾಯಿಯೂ ಅತ್ಯಂತ ಸಡಗರದಿಂದ ತಿಂಡಿ, ತೀರ್ಥಯೆಂದು ಹಚ್ಚಿಕೊಂಡು ಅವರನ್ನು ಉಪಚರಿಸುತ್ತಿದ್ದದ್ದು ಇತ್ತಾದ್ದರಿಂದ ಕೆ.ವಿ.ಸುಬ್ಬಣ್ಣಯೆಂದರೆ ಪ್ರತಿಷ್ಠಿತ ವ್ಯಕ್ತಿಯಿರಬೇಕೆಂಬ ನನ್ನದೇ ಒಂದಷ್ಟು ಬಾಲಿಶ ಕಲ್ಪನೆಗಳಿದ್ದವಷ್ಟೇ. ಇಷ್ಟು ಬಿಟ್ಟು ಸುಬ್ಬಣ್ಣರವರ ಯಾವ ಪರಿಚಯವೂ ನನಗಾಗ ಇರಲಿಲ್ಲ.

shailaja subbanna

ಮನೆಯವರೊಂದಿಗೆ ಶೈಲಜಾ

ಆದರೆ ಅವರ ವ್ಯಕ್ತಿತ್ವದ ಕಿಂಚಿತ್ತು ಪರಿಚಯ, ಅವರ ಅಪಾರ ಸಾಹಿತ್ಯಾಸಕ್ತ ಚಟುವಟಿಕೆಗಳು, ಅವರೇ ಕಟ್ಟಿ ಬೆಳೆಸಿದ ನೀನಾಸಂ ರಂಗಭೂಮಿ, ಶಿವರಾಮ ಕಾರಂತ ರಂಗಮಂದಿರ, ವರ್ಷವೂ ನಡೆಯುವ ಸಾಂಸ್ಕøತಿಕ ಶಿಬಿರಗಳ ಕಾರ್ಯಕಲಾಪಗಳ ಸೂಕ್ಷ್ಮ ತಿಳುವಳಿಕೆಗಳು ಬಂದದ್ದು ತದ ನಂತರ. ಪ್ರಾಯಶಃ ತೀರಾ ತಡವಾಗಿ. ಇಡೀ ದೇಶದ ಸಾಂಸ್ಕೃತಿಕ ಲೋಕವೇ ಹೆಗ್ಗೋಡಿನತ್ತ ದೃಷ್ಟಿ ನೆಟ್ಟ ನಂತರ. ಅಷ್ಟರಲ್ಲಾಗಲೇ ನಾನು ಬೆಳೆದು ಸಾಕಷ್ಟು ದೊಡ್ಡವಳಾಗಿದ್ದೆ. ಆ ನಂತರವೂ ಮುಂಡಿಗೇಸರಕ್ಕೆ ಹೆಚ್ಚು ಭೇಟಿ ನೀಡಲಾಗಲಿಲ್ಲ. ಏಕೆಂದರೆ ಅಷ್ಟರಲ್ಲಾಗಲೇ ನಾನು ದೂರದ ಮದರಾಸಿನಲ್ಲಿ ಹೋಗಿ ನೆಲೆ ನಿಂತಿದ್ದೆ.
ಹಾಗಾಗಿ ಚಿಕ್ಕಪ್ಪಯ್ಯರಾಗಿ ಕೆ.ವಿ. ಸುಬ್ಬಣ್ಣರವರ ನನ್ನ ನೆನಪೆಂದರೆ ತೆರೆಮರೆ ಹಿಂದೆ ಕಂಡ ಅವರ ಅಸ್ಪಷ್ಟ ರೂಪ, ಖಾದಿ ಜುಬ್ಬ, ತೆಳ್ಳಗಿನ ಆಕೃತಿ, ಚುರುಕು ಕಣ್ಣುಗಳು, ಸದಾ ಕವಳ ತುಂಬಿದ ಬಾಯಿ, ಅಜ್ಜಯ್ಯನ ಜೊತೆ ನಿರರ್ಗಳವಾಗಿ ಆಡುತ್ತಿದ್ದ ಮಾತುಗಳು…

ನನ್ನ ಚಿಕ್ಕಮ್ಮ ಅಂತಹ ಮಾತುಗಾರ್ತಿಯಲ್ಲ. ನಮ್ಮಜ್ಜಯ್ಯನ ಮನೆಯಲ್ಲಿ ನಾ ನೋಡಿದ ನನ್ನ ನೆನಪಿನ ಪ್ರಕಾರ ಅವರು ದಿನದ ಬಹಳಷ್ಟು ಸಮಯ ಮೌನವಾಗಿಯೇ ಕಳೆಯುತ್ತಿದ್ದರು. ಮಕ್ಕಳೊಡನೆ ಅವರು ಮಾತನಾಡುತ್ತಿದ್ದದ್ದು ಅಷ್ಟಾಗಿ ನನ್ನ ನೆನಪಿನಲ್ಲಿಲ್ಲ. ನಮ್ಮಮ್ಮನ ಒಡಹುಟ್ಟಿದವರಿಗೆಲ್ಲಾ ಎರಡೋ, ಮೂರೋ ಮಕ್ಕಳಷ್ಟೇ. ನಮ್ಮದು ಮಾತ್ರ ಒಂಬತ್ತು ಮಕ್ಕಳಿರುವ ಬಹು ದೊಡ್ಡ ಕುಟುಂಬ. ಅಣ್ಣಂದಿರು ದೊಡ್ಡವರಾದ್ದರಿಂದ ಅವರೊಡನೆ ಮಾತನಾಡುವುದಿತ್ತಾದರೂ, ಚಿಕ್ಕವರಾದ ನಮ್ಮೊಂದಿಗೆ ಹೆಚ್ಚು ಮಾತಿನ ಅವಕಾಶವಿರುತ್ತಿರಲಿಲ್ಲ. ನನ್ನ ಸರೀಕನಾದ ಅವರ ಒಬ್ಬನೇ ಮಗ ಅಕ್ಷರ ಕೂಡಾ ರಜೆಯಲ್ಲಿ ಕಮಕೋಡಿಗೆ ಬರುತ್ತಿದ್ದುದುಂಟು. ಚಿಕ್ಕಮ್ಮರವರ ಮಾತು ಸದಾ ಅಕ್ಷರನ (ಕೆ.ವಿ. ಅಕ್ಷರ) ಸುತ್ತವೇ ಸುತ್ತುತ್ತಿರುತ್ತಿತ್ತು. ನಮ್ಮಪ್ಪಿ ಖಾರ ತಿನ್ನೊಲ್ಲ, ಹಾಲನ್ನವೇ ಸೈ ಎನ್ನುವುದರಿಂದ ಹಿಡಿದು ಅಪ್ಪಿ ಸಂಗೀತ ಕಲಿತ ಪರಿ, ಅಪ್ಪಿ ಹೆಚ್ಚು ಅಂಕ ತೆಕ್ಕೊಂಡು ಶಾಲೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ ಬಗೆ, ಅವನ ಪ್ರಖಾಂಡ ಬುದ್ದಿಮತ್ತೆ, ಚುರುಕುತನದ ಹಲವು ಪ್ರಸಂಗಗಳು, ಒಟ್ಟಿನಲ್ಲಿ ಅಕ್ಷರನ ವಿಷಯವೇ. ಬಾಲ್ಯದಲ್ಲಿ ಮೊಮ್ಮಕ್ಕಳಲ್ಲೇ ಅತ್ಯಂತ ಪ್ರತಿಭಾವಂತನೆಂದು ಗುರುತಿಸಿಕೊಂಡಿದ್ದರಿಂದ ಸಹಜವಾಗಿಯೇ ಅಜ್ಜಯ್ಯನ ಮನೆಯಲ್ಲಿ ಅವನೆಂದರೆ ವಿಶೇಷ ಪ್ರೀತಿ ಹೆಮ್ಮೆಯಿತ್ತು.

ಚಿಕ್ಕಮ್ಮರಿಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿಯಿತ್ತು. ಅವರ ಆಸಕ್ತಿಯನ್ನು ಗುರುತಿಸಿ ಪೋಷಿಸಿದವರು ಕೆ.ವಿ.ಸುಬ್ಬಣ್ಣರವರೆನ್ನವುದು ನಮ್ಮ ಕುಟುಂಬವರ್ಗದಲ್ಲಿ ಆಗಿನ ಕಾಲದಲ್ಲಿ ದೊಡ್ಡ ವಿಶೇಷವಾಗಿತ್ತು. ವಾರಕ್ಕೆರಡು ಬಾರಿ ಮುಂಡಿಗೆಸರದಂತಹ ಹಳ್ಳಿಗೆ ಬಂದು ಸಂಗೀತ ಪಾಠ ಹೇಳಿಕೊಡಲು ಪಟ್ಟಣದಲ್ಲಿದ್ದ ಭೀಮಸೇನಾಚಾರ್ಯರೆಂಬ ಸಂಗೀತ ಮಾಸ್ತರೊಬ್ಬರನ್ನು ಅವರು ನೇಮಿಸಿದ್ದರು. ಪ್ರಾಯಶಃ ಈ ಸಂಗೀತದ ಆಸಕ್ತಿಯೇ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಚಿಕ್ಕಮ್ಮ ನಮ್ಮನೆಗೆ ಬರುವಂತೆ ಮಾಡುತ್ತಿತ್ತೆಂದು ಅನ್ನಿಸುತ್ತೆ. ನಮ್ಮ ಶಿವಮೊಗ್ಗದಲ್ಲಿ ಸಂಗೀತೋಪಾಸಕರು ಸಾಕಷ್ಟು ಸಂಖ್ಯೆಯಲ್ಲಿದ್ದರು. ವರುಷಕ್ಕೊಮ್ಮೆ ಗಣೇಶನ ಹಬ್ಬಕ್ಕೆ, ಹಲವೆಡೆ ಪೆಂಡಾಲ್‍ಗಳೆದ್ದು ಗಣೇಶನ ಕೂರಿಸಿ ನಾನಾ ತರಹದ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಿದ್ದರು. ಮುಖ್ಯವಾಗಿ ಶಾಸ್ತ್ರೀಯ ಸಂಗೀತ ಕಛೇರಿಗಳೇ ಹೆಚ್ಚು. ಆಗೆಲ್ಲಾ ಈಗಿನಂತೆ ಸಂಗೀತ ಸಭಾಗಳಿರಲಿಲ್ಲ. ವರುಷಕ್ಕೊಮ್ಮೆ ಗಣಪತಿ ಹಬ್ಬದ ಸಂದರ್ಭದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಮನೆತನದವರ ಕುಟುಂಬಗಳ ಸಹಕಾರದಿಂದ ಬ್ರಾಹ್ಮಣಕೇರಿ ಬೀದಿಯ ಪ್ರಾರಂಭದಲ್ಲಿ ಒಂದು ಬೃಹತ್ ಪೆಂಡಾಲೆದ್ದು ವಿದ್ಯಾ ಗಣಪತಿಯನ್ನು ಪ್ರತಿಷ್ಠಾಪಿಸಿ, ಒಂದು ವಾರ ಪೂರ್ಣ ಅಮೋಘ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿದ್ದರು. ತಮಿಳುನಾಡಿನಿಂದ, ಆಂಧ್ರದಿಂದ ದೊಡ್ಡ ದೊಡ್ಡ ಕಲಾವಿದರನ್ನೇ ಕರೆಸುತ್ತಿದ್ದರು. ಇವೆಲ್ಲವೂ ಐವತ್ತು ವರುಷಗಳಷ್ಟು ಹಿಂದಿನ ಮಾತು. ಕಲಾವಿದರನ್ನು ಕರೆಸುವುದು, ಅವರಿಗೆ ಸೂಕ್ತ ವಸತಿ ಸೌಕರ್ಯ ಒದಗಿಸುವುದು ಸಣ್ಣ ಸಣ್ಣ ಊರುಗಳಲ್ಲಿ ಅಷ್ಟು ಸುಲಭವಲ್ಲ. ಎಷ್ಟೋ ಪ್ರಖ್ಯಾತ ಸಂಗೀತ ವಿದುಷಿ, ವಿದ್ವಾನರು ಬ್ರಾಹ್ಮಣ ಕೇರಿಯ ಶ್ರೀಮಂತ ಮನೆಗಳಲ್ಲಿ ಬಂದು ತಂಗುತ್ತಿದ್ದರು. ಆಗಿನ ಕಾಲದಲ್ಲಿ ಕಲೆಯ ಆರಾಧಕರು ವಿಶಾಲ ಮನೋಭಾವದವರಾಗಿದ್ದರಿಂದ ಅವರ್ಯಾರಿಗೂ ಕಲಾಸೇವೆ ಹೊರೆಯೆನ್ನಿಸುತ್ತಿರಲಿಲ್ಲ.

ಚಂಬೈ ವೈದ್ಯನಾಥ ಭಾಗವತರ್, ಶೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್, ಮಧುರೈ ಸೋಮಸುಂದರಂ, ಮಹಾರಾಜಪುರಂ ಸಂತಾನಂ, ಸಿಕ್ಕಿಲ್ ಸಿಸ್ಟರ್ಸ್, ಲಾಲ್‍ಗುಡಿ ಜಯರಾಮನ್, ಡಿ.ಕೆ. ಪಟ್ಟಂಮ್ಮಾಳ್, ಪರೂರ್ ಗೋಪಾಲಕೃಷ್ಣನ್, ಎಸ್. ಬಾಲಚಂದರ್, ಚಿಟ್ಟಿಬಾಬು, ಎಮ್.ಎಲ್. ವಸಂತಕುಮಾರಿ, ಎಂ.ಎಸ್. ಸುಬ್ಬಲಕ್ಷ್ಮಿ, ಹೀಗೆ ಅನೇಕ ಘಟಾನುಘಟಿಗಳನ್ನು ಕೇಳುವ ಸೌಭಾಗ್ಯ ನಮ್ಮದಾಗಿತ್ತು. ನನ್ನ ಚಿಕ್ಕಮ್ಮ ಅವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಒಲವು. ಈ ಅಪರೂಪದ ಅಪೂರ್ವ ಕಾರ್ಯಕ್ರಮವನ್ನು ಆಸ್ವಾದಿಸಲಿಕ್ಕಾಗಿಯೇ ಪ್ರತೀ ವರುಷ ಗಣೇಶನ ಹಬ್ಬದ ಸಮಯದಲ್ಲಿ ಸಂಗೀತ ಕಛೇರಿ ಕೇಳಲು ನಮ್ಮನೆಗೆ ಬರುತ್ತಿದ್ದರು. ಬಹುಶಃ ನನಗೆ ಚಿಕ್ಕಮ್ಮರ ಹೆಚ್ಚು ಒಡನಾಟ ಸಿಕ್ಕಿದ್ದು ಈ ಐದಾರು ವರುಷಗಳಲ್ಲಿ ಎನ್ನಬೇಕು. ಹೆಚ್ಚೇನೂ ಮಾತುಕತೆಯಿರದಿದ್ದರೂ ಅವರ ಅಚ್ಚುಕಟ್ಟುತನ, ಶಿಸ್ತು, ಸಮಯಪ್ರಜ್ಞೆ, ಅಪಾರ ಸಂಗೀತ ಪ್ರೇಮ, ಕಲಾ ವ್ಯಾಮೋಹದ ಪರಿಚಯ ನನಗಾಗುತ್ತಾ ಬಂತು.

shailaja subbanna

ಎಡಗಡೆಯಿಂದ ಶೈಲಜಾ, ಲೇಖಕಿ ಜಯಶ್ರೀ ಅವರ ತಾಯಿ ಲಕ್ಷ್ಮೀದೇವಿ ಮತ್ತು ಅಜ್ಜಿ ಸರಸ್ವತಿ, ಮತ್ತೊಬ್ಬ ಚಿಕ್ಕಮ್ಮ ಶಾರದಾ.

ನನಗಾಗ ಹನ್ನೆರಡು ವಯಸ್ಸಿರಬಹುದು. ಅಥವಾ ಇನ್ನೂ ಕಮ್ಮಿಯೇನೋ? ಆಗಷ್ಟೇ ಸಂಗೀತ ಕಲಿಯಲಾರಂಭಿಸಿದ್ದೆ. ಸಂಗೀತವೆಂದರೆ ತಾಳವನ್ನು ಕುಟ್ಟಿ ಕುಟ್ಟಿ ಗಟ್ಟಿಯಾಗಿ ಅರಚುವುದೆಂಬಂತಹ ಪ್ರಾರಂಭಿಕ ಜ್ಞಾನವಷ್ಟೇ ಸಂಪಾದಿಸಿಕೊಂಡಂತಹ ಬಾಲ್ಯವದು. ಸಂಗೀತ ಕೇಳುವುದರಲ್ಲಿ ಆಸಕ್ತಿಯಿತ್ತು. ವಿದ್ಯಾಗಣಪತಿಯವರು ಸಂಗೀತ ಕಛೇರಿಗಳನ್ನು ಏರ್ಪಡಿಸಿರುವುದು ನಮಗಾಗಿಯೆನ್ನುವಂತಹ ಮುಗ್ಧತೆ ಮಿಳಿತ ಭಾವ ಕೂಡಾ. ಏನೋ ಹುರುಪು. ಶಾಲೆಯಿಂದ ಬರುತ್ತಿದ್ದಂತೆ ಕಛೇರಿಗೆ ಹೊರಡುವ ಉತ್ಸಾಹ. ನಮ್ಮೊಂದಿಗೆ ಸಂಗೀತಾಸಕ್ತನಾಗಿದ್ದ ನಮ್ಮ ಎರಡನೆಯ ಅಣ್ಣನೂ ಕಛೇರಿಗೆ ಬರುತ್ತಿದ್ದ. ಆಗೆಲ್ಲಾ ಆರೆಂದರೆ ಆರಕ್ಕೆ ಕರಾರುವಾಕ್ಕಾಗಿ ಕಛೇರಿ ಶುರು. ಗಂಡಸರು ಒಂದು ಕಡೆ, ಹೆಂಗಸರು ಒಂದು ಕಡೆ ಕೂರುವ ಪದ್ಧತಿ. ನಾನೂ ನನ್ನ ಚಿಕ್ಕಮ್ಮ ತೀರಾ ಮುಂದಲ್ಲದ ತೀರಾ ಹಿಂದಲ್ಲದ ಮಧ್ಯದ ಜಾಗದಲ್ಲಿ ಕೂರುತ್ತಿದ್ದೆವು.

ಚಿಕ್ಕಮ್ಮರಿಗೆ ಸಂಗೀತವೆಂದರೆ ಒಂದು ಗಂಭೀರವಾದ ಶಾಸ್ತ್ರೀಯ ಕಲೆ. ಅದನ್ನು ಕೇಳುವುದಕ್ಕೂ ಶಿಸ್ತುಬದ್ಧವಾದ ಕ್ರಮವಿದೆಯೆಂದು ನಂಬಿದವರು. ಅದಕ್ಕೋ ಏನೋ ಕಛೇರಿ ಕೇಳುವಾಗ ಚಟ್ಟೇಮಟ್ಟೆ ಹಾಕಿ ಕುಳಿತೇ ಕೇಳಬೇಕೆನ್ನುವ ಕಡ್ಡಾಯ ನಿಯಮ. ಹನ್ನೆರಡು ವರುಷದ ನಾನೂ ಅದನ್ನು ಅನುಸರಿಸಬೇಕಿತ್ತು. ಯಾವ ಕಾರಣಕ್ಕೂ ಮಡಚಿದ ಕಾಲನ್ನ ಮೇಲಿಂದ ಮೇಲೆ ಬದಲಾಯಿಸುವಂತಿರಲಿಲ್ಲ. ಸಂಗೀತ ಕೇಳುವುದರ ಜೊತೆಗೆ ತಾಳ ಹಾಕಬೇಕಿತ್ತು. ಯಾವ ಕಾರಣಕ್ಕೂ ಅದು ತಪ್ಪಕೂಡದು. ನಾನು ಬೇರೆ ಆಗಷ್ಟೇ ಹಾಡಲು ಕಲಿತ್ತಿದ್ದೆನಲ್ಲಾ, ಕುಟ್ಟಿ ಕುಟ್ಟಿ ತಾಳ ಹಾಕುವುದನ್ನು ಚೆನ್ನಾಗಿ ಕಲಿತಿದ್ದೆ. ಕಲಿತ ಪಾಠವನ್ನು ಎಲ್ಲಾದರೂ ಒಪ್ಪಿಸಬೇಕಲ್ಲಾ, ಹಾಗಾಗಿ ಸಂಗೀತಗಾರರು ಬಾಯಿ ತೆರೆಯುತ್ತಿದ್ದಂತೇ ಅಧ್ವಾನವಾಗಿ ತಾಳ ತಟ್ಟುತ್ತಾ, ಜೋರಾಗಿ ಬಡಿಯುವುದಕ್ಕೆ ಮೊದಲಿಟ್ಟುಕೊಳ್ಳುತ್ತಿದ್ದೆ. ಚಿಕ್ಕಮ್ಮ ಓರೆಗಣ್ಣಿಂದ, ಕೆಲವೊಮ್ಮೆ ನೇರವಾಗಿ ನನ್ನನ್ನು ನೋಡುತ್ತಿದ್ದರೂ ತಾಳ ಜಡಿಯುವ ಪರಿಯಲ್ಲೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಹಾಡು ಕೇಳುವಾಗ ಜೋರಾಗಿ ಆಕಳಿಸಿದರೂ ಅವರು ತಿರುಗಿ ನೋಡಿಯೇ ಸಿದ್ಧ. ಇನ್ನು ಕೆಲವರ ಸಂಗೀತ ಬೇಜಾರಾಗಿ ಮಧ್ಯದಲ್ಲೆದ್ದು ಮನೆಗೆ ಹೊರಡುವ ಮಾತೇ ಬಿಲ್ಕುಲ್ ಇಲ್ಲ. ಒಂದು ಸಲ ಸಂಗೀತ ಕಛೇರಿಯ ಸಭಾಂಗಣ ಪ್ರವೇಶಿಸಿದ ನಂತರ ಮುಗಿಯುವವರೆಗೂ ಕುಳಿತಿರುವುದೇ. ಚರುಪು ಪಡೆಯದೇ ಮನೆಗೆ ಬಂದ ಉದಾಹರಣೆಯಿರಲಿಲ್ಲ.

ಒಮ್ಮೆ ಇಂತಹದೊಂದು ಸಂಗೀತ ಕಛೇರಿಯಲ್ಲಿ ಕುಳಿತಿರುವಾಗಲೇ ವಿಶೇಷ ಘಟನೆಯೊಂದು ಸಂಭವಿಸಿತು. ಕಛೇರಿ ಶುರುವಾಗಿ ಸ್ವಲ್ಪ ಹೊತ್ತಿಗೆ ತೆಳ್ಳಗಿರುವವರೊಬ್ಬರು ಇಬ್ಬರು ಚಿಕ್ಕ ಹೆಣ್ಣುಮಕ್ಕಳೊಡನೆ ಬಂದು ನನ್ನ ಮಗ್ಗುಲಲ್ಲಿ ಕುಳಿತರು. ಎರಡೂ ಮಕ್ಕಳೂ ಸಣ್ಣವರಾದ್ದರಿಂದ ಸಣ್ಣಗೆ ಕೊಂಯ್ಯ ಪಂಯ್ಯ ಮಾಡುತ್ತಲೇ ಇದ್ದವು. ಅವರು ಬಂದು ಕೂರಲಿಕ್ಕೆ ಇಲ್ಲಾ, ಒಂದು ಮಗು ಮಲಗಬೇಕೆಂದು ಹಟ ಹಿಡಿಯಿತು. ಆ ಮಗುವನ್ನು ತೊಡೆ ಮೇಲೆ ಹಾಕಿ ತಟ್ಟುತ್ತಿದ್ದಂತೇ, ಇನ್ನೊಂದು ಮಗುವೂ ಮಲಗಬೇಕೆಂದು ವರಾತ ಹಿಡಿಯಿತು. ಇದ್ದಕಿದ್ದಂತೆ ನಮ್ಮ ಅಕ್ಕಪಕ್ಕ ಕೂತವರೆಲ್ಲಾ ಅವರೊಂದಿಗೆ ಮಾತಿಗಿಳಿದರು. ಮಗುವನ್ನು ಸಮಾಧಾನಿಸುವರು ಕೆಲವರು, ಅವರೊಂದಿಗೇ ಮಾತಿಗಿಳಿದವರು ಇನ್ನು ಕೆಲವರು. ಅವರ ವೈಯಕ್ತಿಕ ಪರಿಚಯ ನನಗಿರಲಿಲ್ಲವಾದರೂ ಅವರ್ಯಾರೆಂದು ತಿಳಿದಿತ್ತು. ಅವರನ್ನು ಅನೇಕ ಬಾರಿ ದೂರದಿಂದ ನೋಡಿದ್ದೆ. ಒಮ್ಮೆ ನನ್ನತ್ತೆ ಮಗಳೊಬ್ಬಳು ‘ಅವ್ಳು ಕತೆ ಬರೀತಾಳೆ, ಗೊತ್ತುಂಟಾ?’ ನನ್ನ ಕಿವಿಯಲ್ಲಿ ಪಿಸುಗುಟ್ಟಿ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದ್ದಳು. ಆಗಷ್ಟೇ ಸಾಹಿತ್ಯದಲ್ಲಿ ಆಸಕ್ತಿ ಮೊಳೆತು ಶಿಮರಾಮ ಕಾರಂತರ ಕಾದಂಬರಿ, ಚಿತ್ತಾಲರು, ಅನಂತಮೂರ್ತಿರವರ ಕತೆಗಳನ್ನು ಓದುತ್ತಿದ್ದ ನನಗೆ ‘ಅವಳು ಕತೆಗಾರ್ತಿ’ ಎಂದಿದ್ದು ಮಂತ್ರದಂತೆ ತಲೆಯೊಳಗೆ ಝೇಂಕರಿಸುತ್ತಿತ್ತು. ನಾನೊಬ್ಬ ಕತೆಗಾರ್ತಿ ಆಗಬೇಕೂಂತ ಹಗಲೂ ರಾತ್ರಿ ಹಲುಬುತ್ತಿದ್ದಂತಹ ಕಾಲವದು. ಸಿಕ್ಕಿದ್ದೆಲ್ಲಾ ಓದುತ್ತಿದ್ದೆ. ಅಲ್ಲಿಯವರೆಗೂ ಕತೆ ಬರೆಯುವವರ್ಯಾರನ್ನೂ ಹತ್ತಿರದಿಂದ ಇರಲಿ, ದೂರದಿಂದಲೂ ನೋಡಿರಲಿಲ್ಲವಾದ್ದರಿಂದ ಅವರ ಬಗ್ಗೆ ತಣಿಯದ ಕುತೂಹಲ. ತಮಾಷೆಯೆಂದರೆ ನನ್ನಜ್ಜಯ್ಯ ಕಮಕೋಡು ನರಸಿಂಹಶಾಸ್ತ್ರಿಯವರು, ನನ್ನ ಮಾವ ಕಮಕೋಡು ಶಂಕರ, ನನ್ನ ಚಿಕ್ಕಪ್ಪ ಕೆ.ವಿ.ಸುಬ್ಬಣ್ಣ ಬರಹಗಾರರೆಂದೇ ನನಗಾಗ ಗೊತ್ತಿರಲಿಲ್ಲ. ತ್ರಿವೇಣಿ, ಆರ್ಯಾಂಬ ಪಟ್ಟಾಭಿ, ಎಂ.ಕೆ.ಇಂದಿರಾರವರ ಕಾದಂಬರಿಗಳನ್ನು ಓದುತ್ತಿದ್ದ ಕಾಲದಲ್ಲಿ, ಅವರನ್ನೆಲ್ಲಾ ಒಮ್ಮೆ ನೋಡಬೇಕೆಂಬ ಹಂಬಲ. ಅದುವರೆಗೂ ಯಾವ ಲೇಖಕರನ್ನೂ ಕಂಡಿರದ ಮಲೆನಾಡಿನ ನನಗೆ, ಬೆಂಗಳೂರು, ಮೈಸೂರಿನಲ್ಲಿ ನೆಲೆಸಿದ ಲೇಖಕರೆಂದರೆ ಎಲ್ಲೋ ಪರದೇಶಗಳಲ್ಲಿದ್ದಂತೆ ಭಾಸವಾಗುತ್ತಿತ್ತು.

ಆಗಷ್ಟೇ ಸಾಹಿತ್ಯದತ್ತ ನನ್ನ ಒಲವು ಹರಿದಿದ್ದರಿಂದಲೋ ಏನೋ, ಪಕ್ಕದಲ್ಲಿ ಬಂದು ಕುಳಿತವರನ್ನು, ‘ಆಕೆ ಕತೆ ಬರೀತಾಳೆ. ಗೊತ್ತುಂಟಾ?’ ಎಂದು ದೂರದಿಂದ ತೋರಿದಂದಿನಿಂದಾ ಕತೆ ಬರೆಯುವ ಅವರನ್ನೊಮ್ಮೆ ಹತ್ತಿರದಿಂದ ಕಾಣಬೇಕೆಂದು ಚಡಪಡಿಸುತ್ತಿದ್ದ ನಾನು, ಬಹುಶಃ ಅದೇ ಕಾರಣಕ್ಕೆ ಅವರು ಮಗ್ಗುಲಲ್ಲಿ ಬಂದು ಕುಳಿತಿದ್ದೇ, ಸೂಜಿಗಲ್ಲಿನಂತೆ ಸೆಳೆದಿದ್ದರಿಂದಲೋ ಏನೋ, ಮಗ್ಗುಲಿಗೇ ಕಣ್ಣು ಚೆಲ್ಲಿ ಕುಳಿತುಬಿಟ್ಟಿದ್ದೆ. ಅವರು ಹಾಡು ಕೇಳುವುದಕ್ಕಿಂತ ಹೆಚ್ಚಾಗಿ ಅಳುವ ಮಕ್ಕಳನ್ನು ತಟ್ಟುತ್ತಾ ಅಕ್ಕಪಕ್ಕದವರೊಡನೆ ಮಾತನಾಡುತ್ತಿದ್ದರು. ನನ್ನ ಚಿಕ್ಕಮ್ಮನಿಗೆ ಅವತ್ತು ಸಂಗೀತವನ್ನು ತಲ್ಲೀನರಾಗಿ ಆಲಿಸಲು ಬಹಳ ತೊಂದರೆಯಾಯಿತು. ಅವರು ಒಮ್ಮೆ ಸುಮ್ಮನೇ ನನ್ನ ಪಕ್ಕದಲ್ಲಿದ್ದವರನ್ನು ಇಣಿಕಿ ನೋಡಿದರು, ಮಾತು ನಿಲ್ಲದಾಗ ಬಗ್ಗಿ ಹಣಿಕಿ ನೋಡಿದರು, ನಗೆ ಬುಗ್ಗೆ ಎದ್ದಾಗ ತಲೆ ತಿರುಗಿಸಿ ಅವರನ್ನೇ ದೃಷ್ಟಿಸಿ ನೋಡಿದರು.

shailaja subbanna

ಪತಿ ಕೆ.ವಿ. ಸುಬ್ಬಣ್ಣ, ಮಗ ಅಕ್ಷರ, ಮೊಮ್ಮಗ ಶಿಶಿರ ಮತ್ತು ಸೊಸೆ ವಿದ್ಯಾ ಅವರೊಂದಿಗೆ ಶೈಲಜಾ

ವಿದ್ಯಾ ಗಣಪತಿಯ ಕಾರ್ಯಕಲಾಪಗಳಲ್ಲಿ ನನ್ನತ್ತೆ ಮಗಳ ಗಂಡ ಮತ್ತು ನನ್ನ ಮಗ್ಗುಲಲ್ಲಿ ಕುಳಿತವರ ಪತಿ ಸಕ್ರಿಯರಾಗಿದ್ದರಿಂದ ಅವರ ಹೆಸರು ಶ್ರೀನಿವಾಸ ಮೂರ್ತಿಯೆನ್ನುವುದು ಗೊತ್ತಿತ್ತು. ವಿದ್ಯಾ ಗಣಪತಿ ಕಮಿಟಿಯಲ್ಲಿದ್ದ ಅವರು ಪ್ರತೀ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿ ಅತಿಥಿಗಳಿಗೆಲ್ಲಾ ವಂದನಾರ್ಪಣೆ ಸಲ್ಲಿಸುತ್ತಿದ್ದದ್ದು ಸಾಮಾನ್ಯ. ನನ್ನ ಮಗ್ಗುಲಲ್ಲಿದ್ದ ಅವರ ಪತ್ನಿಯ ಹೆಸರು ‘ಜಾನಕಿ’ ಎಂದು ಅವಳು ಹೇಳಿದ್ದು ನೆನಪು. ಅವತ್ತು ನನ್ನ ಮತ್ತೊಂದು ಪಕ್ಕದಲ್ಲಿ ಕುಳಿತು ತಾವು ಆಸ್ವಾದಿಸುತ್ತಿದ್ದ ಸಂಗೀತದ ರಸಗ್ರಹಣಕ್ಕೆ ತೊಂದರೆಯಾಯಿತೆಂದು ಸ್ವಲ್ಪ ಅಸಮಾಧಾನದಿಂದಲೇ ನನ್ನ ಪಕ್ಕದ ಹೆಣ್ಣನ್ನು ಹಣಿಕಿ ನೋಡಿದ್ದ ನನ್ನ ಚಿಕ್ಕಮ್ಮ ಅವರಿಗೂ ಕೂಡಾ ನನ್ನ ಮಗ್ಗುಲಲ್ಲಿದ್ದವರ ಪರಿಚಯವಿದ್ದಂತಿರಲಿಲ್ಲ. ತಮಾಷೆಯೆಂದರೆ, ಅವತ್ತು ನಾವು ಮೂವರೂ, ಯಾರ ಪರಿಚಯ ಯಾರಿಗೂ ಇರದೆ, ಒಂದು ಸರಳ ರೇಖೆ ಎಳೆದಂತೆ ಒಬ್ಬರ ಮಗ್ಗುಲನ್ನು ಒಬ್ಬರು ಆಯ್ದುಕೊಂಡಂತೆ, ಎಷ್ಟು ಮುಗ್ಧರಾಗಿ ಕುಳಿತಿದ್ದೆವಲ್ಲಾ! ಏಕೆಂದರೆ ನನ್ನ ಮಗ್ಗುಲಲ್ಲಿದ್ದ ಕತೆಗಾರ್ತಿಯಾದರೂ ಯಾರು ಅಂತೀರಾ? ನಮ್ಮ ನಾಡಿನ ಪ್ರಖ್ಯಾತ ಲೇಖಕಿಯಾದ ವೈದೇಹಿಯವರು. ಮತ್ತೊಂದು ಪಕ್ಕದಲ್ಲಿ ನೋಡಿದರೆ ಅಕ್ಷರ ಪ್ರಕಾಶನಾಲಯ ಮತ್ತು ನೀನಾಸಂ ಹುಟ್ಟುಹಾಕಿದ ಕೆ.ವಿ. ಸುಬ್ಬಣ್ಣನವರ ಪತ್ನಿ ಹಾಗೂ ಕೆ.ವಿ.ಅಕ್ಷರನ ತಾಯಿ ಶೈಲಜಕ್ಕಾ! ಕೆಲ ವರುಷಗಳ ನಂತರ, ಜಾನಕಿಯೇ ವೈದೇಹಿಯವರಾಗಿ, ಅವರ ಅಲ್ಲಿಯವರೆಗಿನ ಪುಸ್ತಕಗಳನ್ನು ಕೆ.ವಿ.ಸುಬ್ಬಣ್ಣರವರೇ ತಮ್ಮ ಅಕ್ಷರ ಪ್ರಕಾಶನಾಲಯದಿಂದ ಪ್ರಕಟಿಸಿದ್ದರೆನ್ನುವುದು ಮತ್ತು ಚಿಕ್ಕಮ್ಮರ ಕುಟುಂಬ ವಲಯಕ್ಕೆ ವೈದೇಹಿಯವರು ಹತ್ತಿರದವರಾಗಿ ಕುಟುಂಬದವರಲ್ಲಿ ಒಬ್ಬರೆನ್ನುವಷ್ಟು ನಿಕಟರಾಗಿ ಆಪ್ತರಾಗಿರುವುದು ಈಗ ಎಲ್ಲರಿಗೂ ತಿಳಿದ ಸಂಗತಿ. ಇದಲ್ಲವೇ ಯೋಗಾಯೋಗವೆಂದರೆ!

ನಮ್ಮ ಚಿಕ್ಕಮ್ಮ ಅವರಿಗೆ ಸಂಗೀತದಲ್ಲಿ ಆಸಕ್ತಿಯಿದ್ದುದರಿಂದ ನನ್ನಣ್ಣಂದಿರಾದ ಸತೀಶ್ ಮತ್ತು ಗಿರೀಶ್ ಅಂದ್ರೆ ವಿಶೇಷ ಪ್ರೀತಿ. ಸಂಗೀತದ ಬಗ್ಗೆ ಸಾಕಷ್ಟು ವಿಚಾರವನ್ನು ಅವರು ತಿಳಿದುಕೊಂಡಿದ್ದರು. ನನ್ನಣ್ಣ ಮತ್ತು ಅವರು ಗಂಟೆಗಟ್ಟಲೆ ಕಲ್ಪನಾಸ್ವರಗಳ ಬಗ್ಗೆಯೋ, ಆಲಾಪದ ಬಗ್ಗೆಯೋ, ಕೆಲವರ ನುಡಿಸಾಣಿಕೆಯ ಬಗ್ಗೆಯೋ, ಸ್ವರ ಪ್ರಸ್ತಾಪದ ಬಗ್ಗೆಯೋ ಗಂಭೀರವಾಗಿ ಚರ್ಚಿಸುತ್ತಿದ್ದರು. ಹಾಗೇ ಗಿರೀಶ್ ಜೊತೆ ಜಾಗತಿಕ ಸಿನಿಮಾ ಮತ್ತು ರಂಗಭೂಮಿಗೆ ಸಂಬಂಧಪಟ್ಟ ಅನೇಕ ಸಂಗತಿಗಳನ್ನು ಮಾತನಾಡುವುದಿತ್ತು. ನಾಡಿನ ಪ್ರಖ್ಯಾತ ಕಲಾವಿದರೊಂದಿಗೆ ಆತ್ಮೀಯ ಒಡನಾಟ ಹಾಗೂ ನಿಕಟ ಭಾಂದವ್ಯ ಕೆ.ವಿ.ಸುಬ್ಬಣ್ಣ ಅವರಿಗಿತ್ತಾದ್ದರಿಂದ ಎಷ್ಟೋ ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ಅವರ ಮನೆಯಲ್ಲಿ ಬಂದು ತಿಂಗಳುಗಟ್ಟಲೆ ಇರುತ್ತಿದ್ದರು. ಅವರೊಡನೆಯ ಅನೇಕ ಸ್ವಾರಸ್ಯಕರ ಘಟನೆಗಳು ಚಿಕ್ಕಮ್ಮರ ಬಳಿಯಿರುತ್ತಿದ್ದವು. ಸಾಮಾನ್ಯವಾಗಿ ದಿನವೂ ಊಟಕ್ಕೆ ಯಾರಾದರೂ ಇದ್ದೇ ಇರುತ್ತಿದ್ದರಿಂದ ಹೆಚ್ಚುವರಿ ಅಡುಗೆ ಇದ್ದರೂ, ಕೆಲವೊಮ್ಮೆ ಅವೇಳೆಯಲ್ಲಿ ಯಾರಾದರೂ ಬಂದು ಮತ್ತೆ ಅಡುಗೆ ಮಾಡಿದಂತಹ ಪ್ರಸಂಗವೂ ಇರುತ್ತಿತ್ತು. ಕಾರಂತದ್ವಯರು ಅವರ ಮನೆಯಲ್ಲಿ ತಿಂಗಳಾನುಗಟ್ಟಲೆ ಇರುತ್ತಿದ್ದರಿಂದ ಇಬ್ಬರಿಗೂ ಪ್ರತ್ಯೇಕ ಕೋಣೆಗಳಿದ್ದು, ಶಿವರಾಮ ಕಾರಂತರನ್ನು ದೊಡ್ಡ ಕಾರಂತರೆಂದೂ, ಬಿ.ವಿ.ಕಾರಂತರನ್ನು ಚಿಕ್ಕ ಕಾರಂತರೆಂದೂ ಕರೆಯುತ್ತಿದ್ದರು. ಅನಂತಮೂರ್ತಿ ಮತ್ತು ಸುಬ್ಬಣ್ಣರವರಂತೂ ಸಹಪಾಠಿಗಳು. ನನ್ನಜ್ಜಯ್ಯನ ಆಪ್ತ ಶಿಷ್ಯರು. ಕುಟುಂಬದೊಂದಿಗೆ ಬಂದು ಅನಂತಮೂರ್ತಿಯವರು ಅವರ ಮನೆಯಲ್ಲಿರುತ್ತಿದ್ದುದಿತ್ತು.
ಸುಬ್ಬಣ್ಣರವರು ಸದಾ ನಾನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಿದ್ದರಿಂದ ಅವರಿಗೆ ಅಷ್ಟು ಬಿಡುವಿರುತ್ತಿರಲಿಲ್ಲವೇನೋ. ಆದ್ದರಿಂದ ಮನೆಯೊಳಗಿದ್ದೂ ಮನೆಗೆ ಸಂಬಂಧಪಟ್ಟ ವಿಷಯಗಳಿಂದ ದೂರವೇ ಉಳಿದಿರುತ್ತಿದ್ದರೆನ್ನಿಸುತ್ತೆ. ಅವರ ಮನೆಯ ವ್ಯವಹಾರ ಮತ್ತು ವಹಿವಾಟು ನೋಡಿಕೊಳ್ಳುತ್ತಿದ್ದ ಆಪ್ತ ಬಂಟ ಶೇಷಗಿರಿಯೆಂಬುವವರಿಗೆ ಮದುವೆಯಾಗಿ ಬೇರೆ ಹೋಗಿದ್ದ ಸಂದರ್ಭವದು. ನನ್ನ ತಾಯಿಗೆ ಏನೋ ಆತಂಕ. ಶೇಷಗಿರಿಯಿಲ್ಲದೇ ತಂಗಿಯ ಮನೆ ವ್ಯವಹಾರ ಸುಸೂತ್ರವಾಗಿ ನಡೆಯುತ್ತದೆಯೇ? ಹಲವು ಬಾರಿ ನಮ್ಮ ಮುಂದೂ ಹೇಳಿ ಪೇಚಾಡಿಕೊಂಡಿದ್ದರು.

ಚಿಕ್ಕಮ್ಮ ಅವರು ಮತ್ತೆ ಬಂದಾಗ ಅದೇ ಆತಂಕವನ್ನು ಅವರ ಮುಂದೂ ವ್ಯಕ್ತಪಡಿಸಿದ್ದರು: ‘ಮೊದಲಿಂದ್ಲೂ ಸುಬ್ಬಣ್ಣರವ್ರಿಗೆ ವಿಪರೀತ ಕೆಲ್ಸ. ಈಗಂತೂ ಶೇಷಗಿರಿಯಿಲ್ದೇ ಮನೆ, ತೋಟ, ಜಮೀನಂತಾ ಒಬ್ಬಳೇ ನೊಡ್ಕೋಬೇಕಲ್ಲೇ, ನಿಂಗೆ ಕಷ್ಟಾಂತ ಅನ್ಸಲ್ವೇನೇ?’
‘ಹಾಗಂತಾ ನಮ್ಮನೆಯವ್ರನ್ನಾ ಮನೆ ನೋಡ್ಕೊಂಡಿರಿಯೆಂದು ಕೂರ್ಸಿದ್ರೆ ಅವ್ರೂ ಒಬ್ಬ ಸಾಮಾನ್ಯ ಕೃಷಿಕನಂತೆ ಸುಮ್ನೆ ಬೆಳೆ ಬೆಳ್ಕೊಂಡು ಇರ್ಬೇಗಾಗ್ತಿತ್ತಲ್ಲನೇ? ಇಷ್ಟೆಲ್ಲಾ ಮಾಡ್ಲಿಕ್ಕೆ ಎಲ್ಲಾಗತ್ತಿತ್ತೇ..?’ ಚಿಕ್ಕಮ್ಮ ಹೇಳಿದ ಮಾತು.

ಆ ಕಾಲಕ್ಕೇ ಚಿಕ್ಕಮ್ಮ ಇಷ್ಟೆಲ್ಲಾ ಯೋಚಿಸುತ್ತಿದ್ದರೆನ್ನುವುದು ನೆನೆದರೆ ನಿಜಕ್ಕೂ ಆಶ್ಚರ್ಯವಾಗುವುದುಂಟು. ಕಲೆಯನ್ನು, ಕಲಾವಿದರನ್ನು ಅತ್ಯಂತ ಹತ್ತಿರದಿಂದ ಕಂಡು ಮಾಗಿದ ಮನೋಭಾವವದು. ಪ್ರಾಯಶಃ ಕೃಷಿಕ ಕುಟುಂಬದಿಂದ ಬಂದ ಅವರಿಗೆ ಕೃಷಿಯೆನ್ನುವುದು ದೊಡ್ಡ ಭಾರವೆನ್ನಿಸಲಿಲ್ಲವೇನೋ? ಬಾಲ್ಯದಲ್ಲಿ ನಾ ಕಂಡ ಅವರ ಮನೆ ಹಿತ್ತಲುಗಳೇ ಸಾಕು, ಚಿಕ್ಕಮ್ಮನ ಅಪಾರವಾದ ಹೂ ಗಿಡಗಳ ಪ್ರೀತಿಗೆ. ಮನೆ ಮುಂದೆ, ಚೌಕಿ, ಹಿಂದ್ಗಡೆ ಹಿತ್ತಲ ತುಂಬೆಲ್ಲಾ ರಾಶಿ ರಾಶಿ ಹೂ ಹಣ್ಣಿನ ಗಿಡ, ಮರ, ಬಳ್ಳಿಗಳೇ ಇದ್ದವು. ದಿನಾ ತಾಜಾ ಹೂಗಳನ್ನು ಕಿತ್ತು ತಂದು ಮನೆಯ ಮೂಲೆಗಳಲ್ಲಿ ಸುಂದರವಾಗಿ ಹೂ ಜೋಡಿಸಿಡುವುದು ಅವರ ಅತ್ಯಂತ ಪ್ರಿಯ ಹವ್ಯಾಸವಾಗಿತ್ತು.

shailaja subbanna

ಶೈಲಜಾ ಮತ್ತು ಕೆ.ವಿ. ಸುಬ್ಬಣ್ಣ

ಅಪಾರವಾದ ಸಂಗೀತಾಸಕ್ತರಾದರೂ, ನನ್ನ ನೆನಪಿನಲ್ಲಿರುವ ಇನ್ನೊಂದು ಸಂಗತಿಯೆಂದರೆ ಅವರು ಬಾರದೇ ನಾವು ಮಾತ್ರ ಹೋದ ಎಂ.ಎಸ್ ಸುಬ್ಬಲಕ್ಷ್ಮಿ ಕಛೇರಿ. ಅದ್ಯಾಕೋ ಅಲ್ಲಿಯವರೆಗೂ ಶಿವಮೊಗ್ಗದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ ಕಛೇರಿ ಕೇಳುವ ಯೋಗ ನಮಗ್ಯಾರಿಗೂ ಬಂದಿರಲಿಲ್ಲ. ಅಷ್ಟರಲ್ಲಾಗಲೇ ಅನೇಕ ಸಂಗೀತ ಸಭೆಗಳು ಹುಟ್ಟಿಕೊಂಡು ಒಮ್ಮೆ ಭದ್ರಾವತಿಯ ಸಂಗೀತ ಸಭೆಯೊಂದು ಸುಬ್ಬಲಕ್ಷ್ಮಿ ಅವರ ಕಛೇರಿ ಏರ್ಪಡಿಸಿತ್ತು. ಹೇಗೆಂದರೂ ಶೈಲಾ (ನಮ್ಮಮ್ಮ ಕರೆಯುತ್ತಿದ್ದದ್ದು ಹಾಗೆಯೇ) ಬರುತ್ತಾಳೆಂದು ಮನೆ ಮಂದಿಯೆಲ್ಲಾ ಹೋಗಿ ಕಛೇರಿ ಕೇಳಲು ದುಬಾರಿ ಟಿಕೇಟ್‍ಗಳನ್ನೂ ಮತ್ತು ಒಂದು ಅಂಬಾಸಿಡರ್ ಕಾರನ್ನೂ ಬುಕ್ ಮಾಡಿದ್ದರು. ಕಛೇರಿ ಮುಗಿದರೂ ಚಿಕ್ಕಮ್ಮ ಬರಲಿಲ್ಲ. ಆಗೆಲ್ಲಾ ಟೆಲಿಫೋನ್ ಮನೆ ಮನೆಯಲ್ಲೂ ಇಲ್ಲದ ಕಾಲ. ಮತ್ತೆ ಅವರು ಎಂದಿನಂತೇ ಗಣೇಶನ ಹಬ್ಬದ ಸಂದರ್ಭದಲ್ಲಿ ಬಂದಾಗ, ‘ನೀ ಬರ್ತಿಯೆಂದು ಆಸೆಯಿಂದ ಕಾದಿದ್ದೆ. ಮತ್ಯಾವಾಗ ಸುಬ್ಬಲಕ್ಷ್ಮಿ ಈ ಕಡೆ ಬರೋದೋ ಎಂತೋ! ಅವ್ರ ಕಛೇರಿ ಕೇಳೊಕೆ ಬರ್ಲೇ ಇಲ್ವಲ್ಲೇ?’ ಅಮ್ಮ ಕೇಳಿದಾಗ ಚಿಕ್ಕಮ್ಮ ಹೇಳಿದ ಮಾತು ನನಗಿನ್ನೂ ನೆನಪಿದೆ. ಅದೇ ಸಂದರ್ಭದಲ್ಲಿ ನನ್ನಮ್ಮನ್ನ ಚಿಕ್ಕಪ್ಪರ ಮಗಳ ಮದುವೆ. ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮರನ್ನು ಕಳೆದುಕೊಂಡ ಅವಳು ನಮ್ಮಜ್ಜಯ್ಯನ ಮನೆಯಲ್ಲಿ, ಸೋದರಮಾವನ ಮನೆಯಲ್ಲಿಯೆಂದು ಬೆಳೆದವಳಿಗೆ ತೀರಾ ತಡವಾಗಿ ಮದುವೆ ನಿಶ್ಚಯವಾಗಿತ್ತು. ನಮ್ಮಮ್ಮ ನೆಂಟರಿಷ್ಟರ ಮನೆಗಳ ಶುಭ ಕಾರ್ಯಗಳಿಗೆ ಹೋಗುತ್ತಿರಲಿಲ್ಲವಾದ್ದರಿಂದ ತಂಗಿಯ ಮದುವೆಯಾದರೂ ಹೋಗಿರಲಿಲ್ಲ. ಆದರೆ ಚಿಕ್ಕಮ್ಮ ಹೇಳಿದ ಮಾತು, ‘ಸುಬ್ಬಲಕ್ಷ್ಮಿ ಕಛೇರಿ ಮತ್ಯಾವಗ್ಲಾದ್ರೂ ಸಿಗುತ್ತೆ, ಕೇಳ್ಬಹುದೇ. ಆದ್ರೆ ಗಾಯತ್ರಿ ಮದ್ವೆ ಮತ್ತೆ ಸಿಗುತ್ತನೇ?’

ಹೆಗ್ಗೋಡಿನಲ್ಲಿ ಅನೇಕ ವರುಷಗಳಿಂದ ಕೆ.ವಿ.ಸುಬ್ಬಣ್ಣರವರು ಸಾಂಸ್ಕೃತಿಕ ಶಿಬಿರ ನೆಡೆಸಿಕೊಂಡು ಬಂದಿದ್ದರೂ ಅವರ ಜೀವಿತ ಅವಧಿಯಲ್ಲಿ ಒಮ್ಮೆಯೂ ಹೆಗ್ಗೋಡಿಗೆ ಆ ಸಂದರ್ಭದಲ್ಲಿ ನಾನು ಹೋಗಿರಲಿಲ್ಲವೆಂಬ ಕೊರಗು ನನಗಿದ್ದೇ ಇದೆ. ಪ್ರತಿ ವರುಷವೂ ಹೋಗಿ ಬಂದ ಅನೇಕರು ತುಂಬಾ ಆಪ್ತವಾಗಿ ಮಾತನಾಡುವುದನ್ನು ಕೇಳಿದ್ದೇನೆ. ಹಾಗೆ ಹೋದವರೆಲ್ಲರೂ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಂಡಿಗೇಸರದಿಂದ ಬರುತ್ತಿದ್ದ ಚಿಕ್ಕಮ್ಮರನ್ನು ಸಂಧಿಸಿದವರೇ. ಅವರೆಲ್ಲರ ಪ್ರೀತಿಯ ‘ಶೈಲಜಕ್ಕಾ’ ಅವರು. ತಮ್ಮ ಬಳಿ ಮಾತಿಗೆ ನಿಲ್ಲುತ್ತಿದ್ದ ಪ್ರತಿಯೊಬ್ಬರನ್ನೂ ನಸುನಗುತ್ತಾ ಮೆಲ್ಲಗೆ ಮನೆಯವರನ್ನೆಲ್ಲಾ ವಿಚಾರಿಸಿಕೊಳ್ಳುತ್ತಿದ್ದ ಚಿಕ್ಕಮ್ಮರ ಅಕ್ಕರೆಯ ಮೆಲು ಮಾತು ಅವರೆಲ್ಲರ ಹೃದಯದಲ್ಲೀಗ ಚಿರಂತನವಾಗಿ ನೆಲೆ ನಿಂತಿದೆ. ಪ್ರಾಯಶಃ ಹೆಗ್ಗೋಡಿಗೆ ಹೋದವರೆಲ್ಲರ ಮನದಲ್ಲೂ ಆಫೀಸಿನೆದುರಿನ ಬೆಂಚಿನ ಮೇಲೆ ಕೂತಿರುತ್ತಿದ್ದ, ಊರವರಷ್ಟೇ ಅಲ್ಲದೇ, ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ತುಂಬು ಪ್ರೀತಿಯಿಂದ ಕರೆಯುತ್ತಿದ್ದ ‘ಶೈಲಜಕ್ಕಾ’ರ ನೆನಪು ಎಂದಿಗೂ ಮಾಸಲು ಸಾಧ್ಯವಿಲ್ಲ. ಹಾಗೇ ಚಿಕ್ಕಮ್ಮರಾಗಿ ಉಳಿದ ಅವರ ನೆನಪು ನನ್ನಲ್ಲೂ!

***

ಪರಿಚಯ : ಲೇಖಕಿ ಜಯಶ್ರೀ ಕಾಸರವಳ್ಳಿ ಅವರ ಮೊದಲ ಕಥಾ ಸಂಕಲನ ‘ತಂತಿ ಬೇಲಿಯ ಒಂಟಿ ಕಾಗೆ’. ಇದಕ್ಕೆ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿಗಳು ಲಭಿಸಿವೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ ‘ತುಲಿಕಾ’ ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಅನುವಾದಿಸಿದ್ಧಾರೆ. ‘ದಿನಚರಿಯ ಕಡೇ ಪುಟಗಳಿಂದ’ ಇತ್ತೀಚಿನ ಪ್ರಕಟಿತ ಕಥಾ ಸಂಕಲನ.

ಇದನ್ನೂ ಓದಿ : ಸ್ವರ್ಗವಾಣಿ, ವಾರ್ತೆಗಳನ್ನು ಓದುತ್ತಿರುವವರು ಎ.ವಿ. ಚಿತ್ತರಂಜನ್ ದಾಸ್