ಅಂಕಪರದೆ | Ankaparade : ‘ಲೇಡಿ ಮೈನಸ್ ಮ್ಯಾಕ್ಬೆತ್’ ಅಭಿನಯಿಸಿ ಐದಾರು ವರ್ಷಗಳ ಮೇಲಾಯಿತು. ನಂತರ ಮತ್ತೆ ಏಕವ್ಯಕ್ತಿ ರಂಗಪ್ರಯೋಗ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಲೇಖಕ ಉದಯ ಇಟಗಿ, ‘ಏಕವ್ಯಕ್ತಿ ರಂಗಪ್ರಯೋಗಕ್ಕಾಗಿ ಈ ನಾಟಕ ಬರೆದಿದ್ದೇನೆ. ಅದನ್ನು ನೀವು ಮಾಡಬಹುದಾ? ಎಂದು ಫೇಸ್ಬುಕ್ನಲ್ಲಿ ಮೆಸೇಜ್ ಹಾಕಿದರು. ‘ಸ್ಕ್ರಿಪ್ಟ್ ಇಷ್ಟವಾದರೆ ಮಾಡುತ್ತೇನೆ’ ಎಂದೆ. ಆತನಕ ಎಷ್ಟೋ ವರ್ಷಗಳಿಂದ ಕಾಲೇಜಿನಲ್ಲಿ ಶೇಕ್ಸಪಿಯರನ ಬೇರೆ ಬೇರೆ ನಾಟಕಗಳನ್ನು ಮಕ್ಕಳಿಗೆ ಪಾಠ ಮಾಡುತ್ತಾ ಬಂದವಳು. ಎಷ್ಟೋ ಬಾರಿ ಸ್ತ್ರೀವಾದಿ ದೃಷ್ಟಿಕೋನದಿಂದ ಅವನು ಸೃಷ್ಟಿಸಿದ ಪಾತ್ರಗಳನ್ನು ವಿಶ್ಲೇಷಿಸುತ್ತ ಬಂದವಳು. ಶೇಕ್ಸಪಿಯರ್ ಒಬ್ಬ ಬರಹಗಾರನಾಗಿ ಎಷ್ಟೇ ಮಾನವತಾವಾದಿಯಾಗಿದ್ದರೂ ಮತ್ತು ಪ್ರಗತಿಪರ ದೃಷ್ಟಿಕೋನದಿಂದ ಆಲೋಚನೆ ಮಾಡಿದರೂ ಅವನು ಎಲಿಜಬೆತ್ ಯುಗದ ಒಬ್ಬ ಗಂಡಾಗಿ ಅವನ ಪೂರ್ವಗ್ರಹಗಳೇನಿರುತ್ತವೆಯೋ ಅವು ಅಲ್ಲಿ-ಇಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಉದಾಹರಿಸುತ್ತಲೇ ಬಂದವಳು. ಹಾಗಾಗಿ ನನಗೆ ಈ ಶೇಕ್ಸಪಿಯರನ ಸ್ತ್ರೀ ಪಾತ್ರಗಳ ವಿಶ್ಲೇಷಣೆ ಬಗ್ಗೆ ತುಂಬಾ ವಿಶೇಷವಾದ ಆಸಕ್ತಿ ಇತ್ತು. ಹಾಗಾಗಿ ಅವನ ಶ್ರೀಮತಿಯ ಪಾತ್ರದಲ್ಲಿ ಹರಿದೆ.
ಪ್ರೊ. ಲಕ್ಷ್ಮೀ ಚಂದ್ರಶೇಖರ, ಪ್ರಾಧ್ಯಾಪಕಿ, ರಂಗಕಲಾವಿದೆ (Lakshim Chandrashekhar)
‘ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ. ನಾನು ಅಯ್ಯೋ, ದೇವರೆ! ಏನಾಯಿತು ಇವನಿಗೆ? ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ, ಬರೆದುಬಿಡುತ್ತೇನೆ ಸುಮ್ಮನಿರು. ಬರೆದಾದ ಮೇಲೆ ನಾನೊಬ್ಬನೇ ಅಲ್ಲ ಬರಹಗಾರರೆಲ್ಲಾ ಹೀಗೆ ಬರೆಯೋದು ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ. ನಾನದಕ್ಕೆ ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ? ಎಂದು ಕೇಳಿದ್ದೆ. ಅದಕ್ಕವನು ಪ್ಯಾಲಿಯಂತೆ ನಕ್ಕಿದ್ದ.’
(‘ಶೇಕ್ಸಪಿಯರನ ಶ್ರೀಮತಿ’ಯಿಂದ)
ಆನ್ ಹ್ಯಾಥ್ವೇ ಬಗ್ಗೆ ಏನೇನೋ ಕಥೆಗಳಿದ್ದವು. ಅವಳು ಒಬ್ಬ ಘಾಟಿ ಹೆಂಗಸು. ಅವಳ ಜೊತೆ ಬಾಳಲಾರದೆ ಶೇಕ್ಸಪಿಯರ್ ಲಂಡನ್‍ಗೆ ಓಡಿಹೋದ ಅಂತೆಲ್ಲಾ ಈ ಪುರುಷ ವಿಮರ್ಶಕರು ಬರೆದಿದ್ದನ್ನೇ ನಂಬಿಕೊಂಡು ಬಂದವರು ನಾವೆಲ್ಲಾ. ಆದರೆ ಈ ನಾಟಕ ಓದಿದಾಗ ಹೌದಲ್ವಾ? ಅದನ್ಯಾಕೆ ಪ್ರಶ್ನೆ ಮಾಡಲಿಲ್ಲ ಅಂತಾ ನನಗೆ ಅನಿಸೋಕೆ ಶುರುವಾಯಿತು. ಅವನ ಪಾತ್ರಗಳನ್ನು ವಿಶ್ಲೇಷಣೆ ಮಾಡಿದವಳು ನಾನು, ಆದರೆ ಅವನ ಹೆಂಡತಿಯ ಬಗ್ಗೆ ಯಾಕೆ ವಿಶ್ಲೇಷಣೆ ಮಾಡಲಿಲ್ಲ ಅಂತ ಅನಿಸೋಕೆ ಶುರುವಾಯಿತು. ಆಮೇಲೆ ಉದಯ ಇಟಗಿ ಅವರ ನಾಟಕ ಓದಿದ ಮೇಲೆ ಶೇಕ್ಸಪಿಯರನ ಹೆಂಡತಿಯ ಮೇಲೆ ಬೇರೆ ಏನೇನು ಬರೆದಿದ್ದಾರೆ ಎಂದು ಗೂಗಲ್ನಲ್ಲಿ ನೋಡುವಾಗ ನನಗೆ ಜರ್ಮನ್ ಗ್ರೇರಳ ‘ಶೇಕ್ಸಪಿಯರ್ಸ್ ವೈಫ್’ ಪುಸ್ತಕ ಸಿಕ್ಕಿತು. ಅದನ್ನು ತರಿಸಿಕೊಂಡು ಓದಿದೆ. ಜರ್ಮನ್ ಗ್ರೇರ್ ಎಲಿಜಬೆತ್ನ ಕಾಲದ ಹೆಣ್ಣುಮಕ್ಕಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಅದರಲ್ಲೂ ಶೇಕ್ಸಪಿಯರನ ಹೆಂಡತಿಯ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಈ ಪುಸ್ತಕವನ್ನು ಬರೆದಿದ್ದಾಳೆ. ಅದರಲ್ಲಿ ಬಹಳ ಆಸಕ್ತಿದಾಯಕ ಸಂಗತಿಗಳಿದ್ದವು. ಜೊತೆಗೆ ಅಂದಿನ ಹೆಣ್ಣುಮಕ್ಕಳ ಜೀವನ ಹೇಗಿತ್ತು? ಅನ್ನುವುದನ್ನೂ ಸಹ ಹೇಳಿದ್ದಾಳೆ.
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಇದೇ ಭಾನುವಾರ ಉದಯ ಇಟಗಿ ಅವರ ‘ಶೇಕ್ಸ್ಪಿಯರನ ಶ್ರೀಮತಿ’ಯೊಂದಿಗೆ ಭೇಟಿ
ಉದಯ ಇಟಗಿಯವರು ರಾಬರ್ಟ್ ನೇಯವರ ಕಾದಂಬರಿ ಆಧರಿಸಿ ಈ ನಾಟಕ ಬರೆದಿದ್ದಾರೆ. ಅವನು ಶೇಕ್ಸಪಿಯರನ ಸಾನೆಟ್‍ಗಳಲ್ಲಿ ಬರುವ ಕಥಾಹಂದರವನ್ನೇ ಆಧಾರವಾಗಿಟ್ಟುಕೊಂಡು ಸ್ವಲ್ಪ ರೊಮ್ಯಾಂಟಿಸೈಸ್ ಮಾಡಿ ಶೇಕ್ಸಪಿಯರ್ ಮತ್ತು ಅವನ ಗೆಳೆಯನಿಗಿದ್ದಂಥ ಸಲಿಂಗಕಾಮದ ಪ್ರೀತಿಯನ್ನು ಹೆಚ್ಚು ಒತ್ತಿಹಿಡಿದು ಬರೆದಿದ್ದಾನೆ. ಅದು ಸಾಲದು ಎಂದೆನಿಸಿತು ನನಗೆ. ನಾಟಕಕ್ಕೆ ಇನ್ನೂ ಗಟ್ಟಿತನ ಬೇಕು. ಶೇಕ್ಸಪಿಯರನ ಹೆಂಡತಿ ಇನ್ನೂ ಗಟ್ಟಿಯಾಗಬೇಕು ಎಂದೆನಿಸಿತು. ಏಕೆಂದರೆ ನಾನು ಒಬ್ಬ ಸ್ತ್ರೀವಾದಿಯಾಗಿ ಹೆಣ್ಣುಪಾತ್ರಗಳಲ್ಲಿ ಆ ಗಟ್ಟಿತನವನ್ನು ಕಾಣಲು ಇಷ್ಟಪಡುತ್ತೇನೆ. ಹಾಗಾಗಿ ಜರ್ಮನ್ ಗ್ರೇರಳ ಪುಸ್ತಕದಲ್ಲಿ ಸಿಕ್ಕ ಅನೇಕ ವಿಷಯಗಳನ್ನು ಉದಯ ಇಟಗಿಯವರ ಅನುಮತಿ ಪಡೆದು ಈ ನಾಟಕದಲ್ಲಿ ಸೇರಿಸುತ್ತಾ ಬಂದೆ. ಆಗ ನನಗೆ ಆ ಪಾತ್ರ ಹೆಚ್ಚುಹೆಚ್ಚು ಇಷ್ಟವಾಗುತ್ತಾ ಹೋಯಿತು. ಆನ್ ಹ್ಯಾಥ್ವೇ ಒಂದು ಕಡೆ ಸಾಂಪ್ರದಾಯಿಕ ಗ್ರಾಮೀಣ ಭಾಗದಿಂದ ಬಂದ ಹೆಣ್ಣುಮಗಳು. ಇನ್ನೊಂದು ಕಡೆ ಅವಳ ಗಂಡನ ನಾಟಕಗಳಿಗೆ ಮತ್ತು ಅವನ ಪಾತ್ರಗಳಿಗೆ ತನ್ನ ಮನಸ್ಸನ್ನು ತೆರೆದಿಟ್ಟು ಪ್ರಶ್ನೆ ಮಾಡುವಂಥವಳು.
ಅವನು ಸೃಷ್ಟಿಸಿದ ಬಹಳಷ್ಟು ಖಳನಾಯಕಿಯರಿಗೆ ಅವನ ಹೆಂಡತಿಯೇ ಪ್ರೇರಣೆ ಎಂದು ಹೇಳುತ್ತಾರೆ. ನಾನಿದನ್ನು ಹೇಗಾದರೂ ಮಾಡಿ ಅಲ್ಲಗಳೆಯಬೇಕು ಮತ್ತು ಅವಳ ಬಾಯಿಯಲ್ಲಿ ಇದನ್ನು ಹೇಳಿಸಬೇಕು ಎಂದು ಅನ್ನಿಸಿತು. ಹಾಗಾಗಿ ಅವಳನ್ನು ಗಟ್ಟಿಗೊಳಿಸುತ್ತಾ ಹೋದೆ. ಆದರೆ, ಈ ನಾಟಕದಲ್ಲಿ ಅವಳನ್ನು ಮೇಲು ಮಾಡಬೇಕು ಮತ್ತು ಶೇಕ್ಸಪಿಯರ್ನನ್ನು ಕೀಳು ಮಾಡಬೇಕೆಂಬ ಉದ್ದೇಶ ಇಲ್ಲ.
ಶೆಕ್ಸಪಿಯರ ಒಬ್ಬ ನಾಟಕಕಾರನಾಗಿ, ಕವಿಯಾಗಿ ಜಗತ್ಪ್ರಸಿದ್ಧನಾಗಿದ್ದಾನೆ. ಆದರೆ ಒಬ್ಬ ಗಂಡನಾಗಿ, ಗಂಡಸಾಗಿ ತನ್ನ ಹೆಂಡತಿಯನ್ನು ಮತ್ತು ತಾನು ಸೃಷ್ಟಿಸಿದ ಪಾತ್ರಗಳನ್ನು ಹೇಗೆ ನೋಡುತ್ತಾನೆ ಎನ್ನುವುದು ಮುಖ್ಯ. ಹಾಗಾಗಿ ನಾನಿಲ್ಲಿ ಆನ್ ಹ್ಯಾಥ್ವೇಳನ್ನು ಒಬ್ಬ ಗಟ್ಟಿ ಹೆಂಗಸಾಗಿ ಬಿಂಬಿಸಿದ್ದೇನೆ. ಅವಳು ಗಂಡನಿಂದ ದೂರವಿದ್ದರೂ ಮತ್ತೊಬ್ಬ ಗಂಡಿಸಿನ ಸಹವಾಸವನ್ನು ಬಯಸದೇ ಒಂಟಿಯಾಗಿ ದುಡಿದು, ಮೂರು ಮಕ್ಕಳನ್ನು ಸಾಕಿ ಇಡೀ ಮನೆಯನ್ನು ನೋಡಿಕೊಂಡಳು. ಜೊತೆಗೆ ಶೇಕ್ಸಪಿಯರನ ಮನೆಯನ್ನು ರಿಪೇರಿ ಮಾಡಿಸಿ ವಾಸಮಾಡಲು ಯೋಗ್ಯವಾಗಿಸಿಕೊಂಡಳೆಂದು ಹೇಳುತ್ತಾರೆ.
ಇದನ್ನೂ ಓದಿ : Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್ಸಿಂತ್’ ನಾಟಕ
ಬಹಳಷ್ಟು ಜನ ಹೇಳುತ್ತಾರೆ, ಆನ್ ಮೋಸದಿಂದ ಶೇಕ್ಸಪಿಯರನನ್ನು ಮದುವೆಯಾದಳೆಂದು. ಆದರೆ ನನ್ನ ಪ್ರಕಾರ ಅದು ಸುಳ್ಳು. ಶೇಕ್ಸಪಿಯರನೇ ಅವಳನ್ನು ಮದುವೆಗೆ ಮುನ್ನ ಬಸಿರು ಮಾಡಿ ಅವಳಿಗೆ ಮೋಸ ಮಾಡಲು ನೋಡಿದ. ಹಾಗೆ ನೋಡಿದರೆ ಅವನೇ ಇವಳನ್ನು ಹಾಗೂ ಹೀಗೂ ಮಾಡಿ ತನ್ನೆಡೆ ಮಾಡಿಕೊಂಡ ಎಂದು ಹೇಳಬಹುದು. ಏಕೆಂದರೆ ಇವನಿಗಾದರೂ ಆನ್ ಸಿಕ್ಕಳು. ಆದರೆ ಇವನ ಅಣ್ಣತಮ್ಮಂದಿರಿಗೆ ಹೆಣ್ಣೇ ಸಿಗಲಿಲ್ಲ. ಹಾಗಾಗಿ ಶೇಕ್ಸಪಿಯರನ ವಿಮರ್ಶಕರು ಆನ್ ಮೇಲೆ ಹೊರಿಸುವ ಅಪವಾದಕ್ಕೆ ಯಾವುದೇ ಹುರುಳಿಲ್ಲ ಎಂದು ಈ ನಾಟಕದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ಆನ್ ಒಬ್ಬ ಗಟ್ಟಿಯಾದಂಥ, ಶ್ರೇಷ್ಠ ಹೆಂಗಸಾಗಿದ್ದಳು. ಹೇಗೆಂದರೆ ಶೇಕ್ಸಪಿಯರ್ ಅವಳನ್ನು ಅಷ್ಟು ವರ್ಷ ಬಿಟ್ಟುಹೋದರೂ ಅವನು ಮತ್ತೆ ವಾಪಾಸ್ ಬಂದಾಗ ಅವನನ್ನು ಸ್ವೀಕರಿಸಿ ಅವನೊಟ್ಟಿಗೆ ಜೀವನ ನಡೆಸಿದಳು. ಅವನ ಹೆಸರಿಗೆ ಯಾವುದೇ ರೀತಿಯ ಕಳಂಕ ಬರದೇ ಇರೋ ರೀತಿ ಜೀವನ ನಡೆಸಿದಳು. ಅದನ್ನು ಈ ನಾಟಕ ಎತ್ತಿ ಹೇಳುತ್ತದೆ.
ನಾಟಕ : ಶೇಕ್ಸಪಿಯರನ ಶ್ರೀಮತಿ
ರಚನೆ : ಉದಯ ಇಟಗಿ
ವಿನ್ಯಾಸ, ನಿರ್ದೇಶನ : ವಿಶ್ವರಾಜ ಪಾಟೀಲ
ತಂಡ : ಕ್ರಿಯೇಟಿವ್ ಥಿಯೇಟರ್, ಬೆಂಗಳೂರು
ಸ್ಥಳ : ವ್ಯೋಮ, ಜೆ.ಪಿ.ನಗರ
ಸಮಯ : ಸಂಜೆ 6 ಮತ್ತು 8ಗಂಟೆಗೆ
ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com
Published On - 9:29 am, Sat, 21 May 22