Poetry; ಅವಿತಕವಿತೆ: ಹುಷಾರಾಗಿರು! ಸುಲಭಕ್ಕೆ ಒಪ್ಪಿಸಿಕೊಳ್ಳಬೇಡ…

Lang Leav Poems | 'ಕವಿತೆ, ನಮ್ಮ ನಡುವೆ ಅಸಾಧ್ಯವಾದ ಒಂದು ಸಂಭಾಷಣೆ ಎನ್ನುತ್ತಾನೆ ಹೈಕು ಕವಿ ಸಂತೋಕಾ. ನನಗೆ ಸ್ವಂತ ಕವಿತೆಯಾಗಲಿ, ಅನುವಾದವಾಗಲಿ, ಬರೆಯುವಾಗ ಅಂಥ ವ್ಯತ್ಯಾಸ ಅನಿಸುವುದಿಲ್ಲ. ಎರಡೂ ನನಗೆ ಸ್ವಂತವೇ. ಅವು ನಾನು ವಾಚ್ಯವಾಗಿ ಹೇಳಲು ಸಾಧ್ಯವಾಗದ ಅಥವಾ ಹಿಂಜರಿಯುವ ಸಂಗತಿಗಳನ್ನು ಸಶಕ್ತವಾಗಿ ಧ್ವನಿಸುವಂತಿರಬೇಕು ಎನ್ನುವುದೊಂದೇ ನನ್ನ ಉದ್ದೇಶ. ಜೋರು ಧ್ವನಿಯ ಪ್ರತಿಭಟನೆ ನನ್ನ ಮನಸ್ಥಿತಿ ಅಲ್ಲವಾದ ಕಾರಣ, ಇಂಥ ಬೇಡಿಕೆ ನನ್ನೊಳಗೆ ಒಡಮೂಡಿದಾಗಲೆಲ್ಲ ನಾನು ಅನುವಾದಗಳನ್ನ ಆಶ್ರಯಿಸಿದ್ದೇನೆ. ಈ ಕಾರಣಕ್ಕಾಗಿಯೇ ಕವಿತೆ/ಅನುವಾದ ನನ್ನ ಅಭಿವ್ಯಕ್ತಿಯ ಮುಖ್ಯ ಮಾಧ್ಯಮ.' ಚಿದಂಬರ ನರೇಂದ್ರ

  • TV9 Web Team
  • Published On - 12:27 PM, 14 Feb 2021
Poetry; ಅವಿತಕವಿತೆ: ಹುಷಾರಾಗಿರು! ಸುಲಭಕ್ಕೆ ಒಪ್ಪಿಸಿಕೊಳ್ಳಬೇಡ...
ಕವಿ ಚಿದಂಬರ ನರೇಂದ್ರ

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ಅವಿತಕವಿತೆ. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ನ್ಯೂಝಿಲ್ಯಾಂಡ್​ನಲ್ಲಿ ವಾಸವಾಗಿರುವ Lang Leav-ಲ್ಯಾಂಗ್ ಲೀವ್ ಅವರ ನಾಲ್ಕು ಕವನಗಳನ್ನು ಕವಿ, ಅನುವಾದಕ ಚಿದಂಬರ ನರೇಂದ್ರ ಅವರು ಭಾವಾನುವಾದ ಮಾಡಿರುವುದು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಶಬ್ದದ ಶಿಲಾಖಂಡಗಳಲ್ಲಿ ಅರ್ಥವತ್ತಾದ ಸರಸ ಪ್ರತಿಮೆಗಳನ್ನು ನಿರ್ಮಿಸಿ, ಪ್ರಾಣಪ್ರತಿಷ್ಠಾಪನೆ ಮಾಡುವ ಕುಶಲ ಕಾವ್ಯಶಿಲ್ಪಿ ಚಿದಂಬರ ನರೇಂದ್ರ. ತಮ್ಮ ಒಲವಿಗೆ ದಕ್ಕಿದ ದೇಶವಿದೇಶಗಳ ವಿಭಿನ್ನ ಕವಿಗಳಿಗೆ, ಕವಿತೆಗಳಿಗೆ ಭಾಷೆಗಳಿಗೆ ಕನ್ನಡದ ಮನಸ್ಸನ್ನು ತೊಡಿಸುವ ವಿಶಿಷ್ಟ ಕಲೆಗಾರಿಗೆ ಅವರಿಗೆ ಕರಗತವಾಗಿದೆ. ಕಾವ್ಯದ ಆರಾಧನೆಗೆ ಅಗತ್ಯವಿರುವ ಪದಸಂಯಮ, ಭಾವನಿರ್ಲಿಪ್ತಿಯ ಪರಿಕರಗಳು ಅವರಿಗೆ ಲಭಿಸಿವೆ.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ

ಚಿದಂಬರ ಆಯ್ಕೆ ಮಾಡಿಕೊಂಡು ಅನುವಾದಿಸುವ ಕವಿತೆಗಳು ಕನ್ನಡಿಯ ಮೂಲಕ ತಮ್ಮನ್ನು, ತಮ್ಮ ಪರಿಸರವನ್ನು ನೋಡಿಕೊಳ್ಳುವುದರ ಜೊತೆಜೊತೆಗೇ ಕಿಟಕಿಯ ಮೂಲಕ ಬಹಿರಂಗ ಜಗತ್ತನ್ನು ಕೂಡ ಕಾಣಿಸುತ್ತಾರೆ. ಹೀಗೆ ಅಂತರಂಗ-ಬಹಿರಂಗಗಳ ಪಾಕವಾಗಿರುವ ಈ ಕವನಗಳು ತಮ್ಮ ವೈವಿಧ್ಯದಿಂದ ನಮ್ಮನ್ನು ಬೆರಗುಗೊಳಿಸುತ್ತ, ತಮ್ಮ ಧ್ವನ್ಯರ್ಥಗಳಿಂದ ನಮ್ಮ ಬುದ್ಧಿ, ಭಾವಗಳನ್ನು ಪ್ರಚೋದಿಸುತ್ತ ಅನುಭವದ ಹಲವು ದಿಕ್ಕುಗಳನ್ನು ನಮಗೆ ಕಾಣಿಸುತ್ತವೆ.
ಎಸ್​. ದಿವಾಕರ

ಸುನಾಮಿ
‘ಹುಷಾರಾಗಿರು! ಸುಲಭಕ್ಕೆ ಒಪ್ಪಿಸಿಕೊಳ್ಳಬೇಡ!’
ತಿಳಿಸಿ ಹೇಳಿದ್ದರು ನನಗೆ.
‘ಹುಡುಗರಿಗೆ ಬೇಕಾದದ್ದು ಅದೊಂದೇ’
ಎಚ್ಚರಿಸಿದ್ದರು ನನ್ನ.

ಅವನು ನನ್ನ ಪ್ರೀತಿಸುತ್ತಾನೋ ಇಲ್ಲವೊ
ಖಂಡಿತವಾಗಿ ಗೊತ್ತಿಲ್ಲ ನನಗೆ,
ಅಷ್ಟು ಖಚಿತವಾಗಿ ಗೊತ್ತಾಗುವುದಾದರೂ ಹೇಗೆ ?
ನನ್ನ ಮನಸ್ಸು ಮುರಿಯುವುದಿಲ್ಲ ಅವನು
ಎನ್ನುವುದನ್ನು
ಯಾವ ವಿಶ್ವಾಸದೊಂದಿಗೆ ನಂಬಲಿ?

ಆದರೆ,
ಈಗಾಗಲೇ ಅವನದಾಗಿರುವುದನ್ನ
ಅವನು ತೆಗೆದುಕೊಳ್ಳದಂತೆ ತಡೆಯುವುದು
ಸಾಧ್ಯವೆ?

ಸುನಾಮಿಯಂತೆ ಆವರಿಸಿಕೊಂಡಿತ್ತು
ಅವನ ಮಾಯೆ ನನ್ನ,
ಒಂದಾದಮೇಲೊಂದರಂತೆ ಅಲೆಗಳು
ಬಂದು ಅಪ್ಪಳಿಸುವ ಕೌತುಕದ ಎದುರು
ಶರಣಾಗುವ ಚೆಲುವನ್ನು ಬಿಟ್ಟರೆ
ಬೇರೆ ಗೊತ್ತಿರಲಿಲ್ಲ ನನಗೆ.

ಆ ಎಲ್ಲ ಎಚ್ಚರಿಕೆಗಳು,
ಹರೆಯಕ್ಕೆ ನನ್ನ ಸಿದ್ಧಮಾಡಿದ ಆ ಎಲ್ಲ ತಂತ್ರಗಳು
ಕೊಚ್ಚಿಕೊಂಡು ಹೋಗಿವೆ,
ಕ್ಷಣಮಾತ್ರದಲ್ಲಿ ನನ್ನ ಚೂರು ಮಾಡಿದ
ಆ ಅಗಾಧತೆಗೆ.

ಬುದ್ಧಿ, ಅಭಿಮಾನ, ತಂತ್ರ, ಸಿದ್ಧಾಂತ
ಎಲ್ಲ ಮಂಡಿಯೂರುವ ಗದ್ದುಗೆಯೆದುರು
ಸಂಭವಿಸುವ ಲೀಲೆ
ಪ್ರೇಮ.

ಇದನ್ನೂ ಓದಿ: ಬುದ್ಧನಾಗುವ ಭ್ರಮೆ ಕಳಚಿ

avithakavithe

ಚಿದಂಬರ ನರೇಂದ್ರ ತಮ್ಮ ಕೈಬರಹದೊಂದಿಗೆ

ಸುಂದರ ಸಮಜಾಯಿಷಿಗಳು
‘ಅವನನ್ನು ಪ್ರೇಮಿಸಿದ ನಿನ್ನ ಅನುಭವ ಹೇಳು’
ಕೃತಜ್ಞತೆ ಕೇಳಿಕೊಂಡಾಗ

‘ಗೋರಿಯನ್ನು ಬಗೆದು ಹೊರಗೆ ತೆರೆದಂತೆ
ಮಿಂಚಿನ ಕ್ಷಣಗಳಲ್ಲಿ ಬದುಕಿಸಿಕೊಂಡಂತೆ’
ತುಟಿ ಕಚ್ಚಿ ಉತ್ತರಿಸಿದೆ.

‘ಅವನು ನಿನ್ನ ಪ್ರೇಮಿಸಿದ ಅನುಭವ?’
ಖುಶಿ ಒತ್ತಾಯ ಮಾಡಿ ಕೇಳಿದಾಗ

‘ಶಾಶ್ವತ ಕತ್ತಲೆಯಿಂದ ಹೊರಬಂದು ಕಾಣಿಸಿಕೊಂಡಂತೆ
ಜೀವಮಾನದ ಮೌನ ಕತ್ತರಿಸಿ ಜಗತ್ತು  ಕೇಳಿಸಿಕೊಂಡಂತೆ’

ನಾನು ಉತ್ತರಿಸಿದಾಗ ಸುತ್ತ ಬೆಳದಿಂಗಳು

‘ಅವನನ್ನು ಕಳೆದುಕೊಂಡ ಅನುಭವ?’
ದುಗುಡ ವಿಚಾರಿಸಿತು ಅಂತಃಕರಣದಿಂದ

‘ನನಗೆ ಹೇಳಲಾದ ಪ್ರತೀ ವಿದಾಯವನ್ನು ಕಿವಿಗೊಟ್ಟು ಕೇಳಿದಂತೆ’
ಎಲ್ಲ ವಿದಾಯಗಳೂ ಒಮ್ಮೆಲೇ ಆಕ್ರಮಣ ಮಾಡಿದಂತೆ

ದುಗುಡ ಯಾಕೋ ಸುಮ್ಮನಾಗಿಬಿಟ್ಟಿತು ನನ್ನ ಉತ್ತರಕ್ಕೆ.

avitha kavithe

ಲ್ಯಾಂಗ್ ಲೀವ್ ಥೈಲ್ಯಾಂಡಿನ ರೆಫ್ಯೂಜಿ ಕ್ಯಾಂಪ್​ನಲ್ಲಿ ಹುಟ್ಟಿದ ಕಾಂಬೋಡಿಯಾ ಮೂಲದ ಕವಿ. ಈಗ ನ್ಯೂಜಿಲ್ಯಾಂಡ್​ನಲ್ಲಿ ವಾಸವಾಗಿರುವ ಈಕೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. Love and Misadventures, Lullabies, Memories, The Universe of Us, Sea of Strangers, Love looks pretty on you, September Love ಈ ಕೃತಿಗಳು ಹೆಚ್ಚು ಮಾರಾಟವಾಗಿವೆ. ಪ್ರೀತಿ-ಪ್ರೇಮ, ಗೆಳೆತನ, ಮುಂತಾದ ಸಂಬಂಧಗಳ ಸಂಕೀರ್ಣ ಎಳೆಗಳನ್ನು ಸರಳವಾಗಿ, ಕಾವ್ಯಾತ್ಮಕವಾಗಿ ಕಟ್ಟಿಕೊಡುವ ಲ್ಯಾಂಗ್ ಅವರ ಪದ್ಯ-ಬರಹಗಳು ಕುತೂಹಲಕಾರಿಯಾಗಿವೆ.

ಅಲೆಮಾರಿ
ಅವಳು ಹೇಗಿದ್ದಾಳೆ ಅಂತೀರಾ?
ಜನ ಹೇಳುವ ಪ್ರಕಾರ
ಒಂದು ಮಧುರ ವಿಷಣ್ಣ ಆತ್ಮ.ಅವಳು
ರಾತ್ರಿಗೆ ಸೂರ್ಯನ ಹಾಗೆ
ಕ್ಷಣ ಮಾತ್ರದ ಬಂಗಾರ.
ಮಸುಕಾದ ನಕ್ಷತ್ರ

ಮುಂಜಾನೆಯ ಬೆಳಕಿಗೆ;
ಊದಿದ ಕ್ಯಾಂಡಲ್ ದೀಪದ ಕಂಪನ.

ಏಕಾಂಗಿ ಗಾಳಿಪಟ
ಯಾರೋ ಹಾರಿಸಿ-
ಆಕಾಶದಲ್ಲಿ ಕತ್ತರಿಸಿಕೊಂಡ
ಸಶಕ್ತ  ಪ್ರತಿಭಟನೆ.

ಇದನ್ನೂ ಓದಿ: ಮಿದುಳಿನಲ್ಲಿ ಹುಟ್ಟಿದ ಅವನ ಚಿತ್ರ

avitha kavithe

ಚಿದಂಬರ ಅವರ ಕವನ ಸಂಕಲನಗಳು

ಆತ್ಮಗಳ ಪ್ರೇಮ
ದೇಹಗಳ ವಿಷಯ ಬೇರೆ.
ಯಾವಾಗ ಎರಡು ಆತ್ಮಗಳು
ಪ್ರೇಮದಲ್ಲಿ
ತಮ್ಮನ್ನು ತಾವು ಕಂಡುಕೊಳ್ಳುತ್ತವೆಯೋ
ಆಗ ಪರಸ್ಪರರಿಗೆ ಹತ್ತಿರವಾಗುವುದನ್ನು ಬಿಟ್ಟರೆ
ಬೇರೆ ಏನೂ ಇಲ್ಲ ಅವುಗಳ ನಡುವೆ.

ಹತ್ತಿರವಾಗುವುದೆಂದರೆ
ಕೈಕೈ ಹಿಡಿದುಕೊಂಡು ಜಗತ್ತಿನ ಹಿಂಜರಿಕೆಗಳಿಗೆ
ಧೈರ್ಯ ತುಂಬುವುದು,
ದನಿಯಲ್ಲಿ ದನಿ ಸೇರಿಸಿ ಪ್ರೇಮದ ಸಂಗೀತಕ್ಕೆ
ಶ್ರುತಿಯಾಗುವುದು
ಒಬ್ಬರು ಇನ್ನೊಬ್ಬರ ನಗುವಿನಲ್ಲಿ ಸಮಾಧಾನ
ಕಂಡುಕೊಳ್ಳುವುದು.

ಆತ್ಮಗಳಿಗೆ,
ಗಡಿಯಾರ – ಕ್ಯಾಲೆಂಡರ್​ಗಳ ಹಂಗಿಲ್ಲ,
ಕಾಲ ಮತ್ತು ಅಂತರಗಳ ಬಗ್ಗೆ ಅರಿವಿಲ್ಲ,
ಆದರೆ,
ಒಬ್ಬರು ಇನ್ನೊಬ್ಬರ ಹತ್ತಿರ
ಇದ್ದುಬಿಡುವುದಕ್ಕಿಂತ ದೊಡ್ಡ ಸತ್ಯ
ಜಗತ್ತಿನಲ್ಲಿ ಇನ್ನಾವುದೂ ಇಲ್ಲ ಎನ್ನುವುದು
ಮಾತ್ರ ಗೊತ್ತು.

ಇದು ಕಾರಣ
ನೀವು, ಇನ್ನೊಬ್ಬರು ಕಾಣಿಸದಾದಾಗ
ಏನೋ ಕಳೆದುಕೊಂಡವರಂತೆ ಓಡಾಡುವುದು
ಮತ್ತು ಆತ್ಮಗಳು
ತಾತ್ಕಾಲಿಕವನ್ನೂ ಶಾಶ್ವತ ಎನ್ನುವಂತೆ ಗ್ರಹಿಸಿ
ಪೆದ್ದ ಹುಡುಗರಂತೆ ಗದ್ದಲ ಹಾಕುವುದು.

***
ಪರಿಚಯ: ಧಾರವಾಡ ಮೂಲಕ ಚಿದಂಬರ ನರೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜಿನಿಯರಿಂಗ್  ಪದವೀಧರ. ಸದ್ಯ ಕಂಪನಿಯೊಂದರಲ್ಲಿ ಹೈಡ್ರೋ ಟರ್ಬೈನ್ ಡಿಸೈನ್ ವಿಭಾಗದ ಚೀಫ್ ಆಗಿ ಕಾರ್ಯ ನಿರ್ವಹಣೆ. ಈ ತನಕ ಮೂರು ಕವಿತಾ ಸಂಕಲನಗಳು ಪ್ರಕಟಗೊಂಡಿವೆ.