Sign In

By signing in or creating an account, you agree with Associated Broadcasting Company's Terms & Conditions and Privacy Policy.

Poetry: ಅವಿತಕವಿತೆ; ಕದಲಿಸಲಾಗದ ಕೋಟೆಬಾಗಿಲೇನಲ್ಲ ಆದರೂ, ತಾನೇ ತಾನಾಗಿ ತೆರೆಯಲಿಲ್ಲ

Poem : ಅನಿಸಿದ್ದನ್ನು ಖುಲ್ಲಂಖುಲ್ಲಾ ಹೇಳುವುದಕ್ಕಿಂತ, ಅದಕ್ಕೊಂದು ಹೊದಿಕೆ ಮುಚ್ಚಿ ಹೇಳುವುದು ಮತ್ತು ಓದುಗರು ಆ ಹೊದಿಕೆ ಸರಿಸಿ ತಮ್ಮ ಭಾವಶಕ್ತಿ, ಅನುಭಾವಕ್ಕೆ ಅನುಗುಣವಾಗಿ ಗ್ರಹಿಸುವ ಪ್ರಕ್ರಿಯೆಯಲ್ಲಿ ಒಂದು ಆನಂದವಿದೆ.

Poetry: ಅವಿತಕವಿತೆ; ಕದಲಿಸಲಾಗದ ಕೋಟೆಬಾಗಿಲೇನಲ್ಲ ಆದರೂ, ತಾನೇ ತಾನಾಗಿ ತೆರೆಯಲಿಲ್ಲ
Follow us
ಶ್ರೀದೇವಿ ಕಳಸದ
|

Updated on: May 01, 2022 | 8:03 AM

ಅವಿತಕವಿತೆ | AvithaKavithe : ನಾನೇಕೆ ಬರೆಯುತ್ತೇನೆಂದರೆ ಬರೆಯುವುದೊಂದೇ ಸ್ವಲ್ಪಮಟ್ಟಿಗಾದರೋ ನನಗೆ ಗೊತ್ತಿರುವ ಸೃಜನಶೀಲ ಕೆಲಸ ಎಂಬ ಕಾರಣಕ್ಕಷ್ಟೇ. ನನಗೆ ಅನಿಸಿದ್ದನ್ನು ಸಮರ್ಥವಾಗಿ ಇತರರಿಗೆ ದಾಟಿಸಲು ಬರವಣಿಗೆ ಮೂಲಕವಷ್ಟೇ ನನಗೆ ಸಾಧ್ಯ. ವಿಷಯ ಮತ್ತು ನನ್ನ ಭಾವಲಹರಿಯನ್ನು ಆಧರಿಸಿ ಕತೆಯೋ, ಲಲಿತ ಪ್ರಬಂಧವೋ, ಕವನವೋ ಏನಿಲ್ಲವಾದರೆ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಆಗಿಯಾದರೋ ಆ ಬರವಣಿಗೆ ರೂಪ ಪಡೆಯುತ್ತದೆ. ಹಾಗಿದ್ದೂ ಕವನ ಬರೆದಾಗ ನನಗೆ ಸಿಗುವ ಖುುಷಿ ಒಂದು ಗುಟುಕು ಹೆಚ್ಚೇ. ಕಾರಣ ಕವನ ನನ್ನ ಮಾಧ್ಯಮವಲ್ಲ ಎಂಬ ಅಂಜಿಕೆ ನನ್ನದು. ಜೊತೆಗೆ ಅನಿಸಿದ್ದನ್ನು ಖುಲ್ಲಂಖುಲ್ಲಾ ಹೇಳುವುದಕ್ಕಿಂತ, ಅದಕ್ಕೊಂದು ಹೊದಿಕೆ ಮುಚ್ಚಿ ಹೇಳುವುದು ಮತ್ತು ಓದುಗರು ಆ ಹೊದಿಕೆ ಸರಿಸಿ ತಮ್ಮ ಭಾವಶಕ್ತಿ, ಅನುಭಾವಕ್ಕೆ ಅನುಗುಣವಾಗಿ ಗ್ರಹಿಸುವ ಪ್ರಕ್ರಿಯೆಯಲ್ಲಿ ಒಂದು ಆನಂದವಿದೆ. ಸಮಾಜವನ್ನು ಅರಿಯುವಲ್ಲಿ, ನನ್ನ ಭಾವಾನುಭೂತಿಯನ್ನು ವಿಸ್ತರಿಸುವಲ್ಲಿ ಇತರರ ಬರವಣಿಗೆಯ ಪಾತ್ರ ತುಂಬಾ ದೊಡ್ಡದು. ಹಾಗೆಯೇ, ನನ್ನ ಅಭಿವ್ಯಕ್ತಿಯ ಮಾಧ್ಯಮವಾಗಿಯೂ ನನ್ನನ್ನು ಸಲಹಿರುವುದು ಬರವಣಿಗೆಯೇ. ಅರ್ಪಣ ಎಚ್. ಎಸ್. (Arpana H.S.)

ಅವಳು ಒಳಗಿದ್ದಳು ಮೌನ ನಿಟ್ಟುಸಿರಾಗುವಂತೆ ಬಿಕ್ಕುತ್ತಾ ಜೋರಾಗಿ ಉಸಿರೆಳೆಯುತ್ತಾ ತನ್ನಿರುವಿಕೆ ಜಾಹೀರು ಪಡಿಸುತ್ತಾ ಆಗಿದ್ದಾಂಗೆ ಬಾಗಿಲತ್ತ ನೋಡುತ್ತಾ

ಅವ ಅಲ್ಲೇ ಹೊರ ನಿಂತಿದ್ದ ಆಗಾಗ್ಗೆ ಕದ ತಟ್ಟಲು ಕೈ ಎತ್ತುತ್ತಾ ಹಾಗೆಯೇ ಮತ್ತೆ ಇಳಿಸುತ್ತಾ ಬಾಗಿಲು ತಾನಾಗಿಯೇ ತೆರೆಯಬಹುದು ಒಳಗಿಂದ ಕನಸೊಂದು ಇಣುಕಬಹುದು ಎಂಬ ಹಂಬಲದಲ್ಲೇ ಕಾಯುತ್ತಾ

ಕದಲಿಸಲಾಗದ ಕೋಟೆಬಾಗಿಲೇನಲ್ಲ ಆದರೂ, ತಾನೇ ತಾನಾಗಿ ತೆರೆಯಲಿಲ್ಲ ಯಾರೂ ತಟ್ಟಿದ ಸದ್ದು ಕೇಳಲೂ ಇಲ್ಲ ಒಳಗವಳು ಹೊರಗಿವನು, ಕಾಯುವುದು ಮುಗಿಯಲಿಲ್ಲ ಅದ್ಯಾಕೋ ಇಬ್ಬರಿಗೂ ಕೊನೆವೆರೆಗೂ ತಿಳಿಯಲೇ ಇಲ್ಲ ಅಸಲಿಗೆ ಕದ ಹಾಕಿರಲೇ ಇಲ್ಲ

AvithaKavithe Kannada Poetry Column by Arpana HS

ಅರ್ಪಣ ಎಚ್. ಎಸ್. ಕೈಬರಹ

ಅರ್ಪಣ ಅವರ ಕವಿತೆಯನ್ನು ಓದುತ್ತಿರುವಂತೆ ಮನಃಪಟಲದಲ್ಲಿ ಮೂಡಿದ್ದು ಕವಿ ತಿರುಮಲೇಶ್ ಅವರ, ‘ಮಂಜಿನೊಳಗಿದೆ ಒಂದು ಮುಖ, ಮುಟ್ಟಲಾರೆ ಅದನ್ನ. ಇಬ್ಬನಿಯೊಳಗಿದೆ ಒಂದು ಲೋಕ, ತಲುಪಲಾರೆ ಅದನ್ನ’.

ಒಂದೇ ಒಂದು ಹೆಜ್ಜೆ ಕದಲಿದರೂ ಸಾಕಿತ್ತು ಈ ಪ್ರೇಮಿಗಳು ಒಂದಾಗುವ ಸಾಧ್ಯತೆಗೆ. ಆದರೆ ಇದನ್ನೆಲ್ಲ ಇಬ್ಬರ ಅಹಮಿಕೆ, To be Or not to be ಗೊಂದಲ ತುಂಡರಿಸಿಬಿಟ್ಟಿದೆ. ಅವರೇ ಸೃಷ್ಟಿಸಿಕೊಂಡ ಗೊಂದಲದ ಗೂಡನ್ನು ಒದ್ದು ಎದ್ದುಬರಲಾರದ ಜಡತ್ವ ಯಾಕಾದರೂ ಆವರಿಸಿಕೊಂಡಿದೆಯೋ ಎನಿಸದೇ ಇರಲಾರದು. ಅವಳು ಅವನು ಇಬ್ಬರೂ ತಮ್ಮ ಮನಸ್ಸಿನ ಒಳಹೊರಗನ್ನು ಕೋಟೆ ಕಟ್ಟಿ ಭದ್ರಪಡಿಸಿಕೊಂಡು ಯಾರಾದರೂ ತಳ್ಳಿಕೊಂಡು ಬರಲಿ ಎಂದು ಕಾಯುವ ನಿರೀಕ್ಷೆಯಲ್ಲಿಯೇ ಕೈಯಲ್ಲಿದ್ದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಮೂಗಿನ ನೇರಕ್ಕೆ ಎಲ್ಲ ಸರಿಯಿದೆ ಎಂದುಕೊಂಡಿದ್ದೂ ನಮ್ಮ ದೃಷ್ಟಿಕೋನದಲ್ಲಿ ಸರಿಯಿರುತ್ತದಾದರೂ ಹೊರನೋಟಕ್ಕೆ ದಕ್ಕಿದ್ದು ಒಳನೋಟದಲ್ಲಿ ಶೂನ್ಯವಾಗಿರುತ್ತದೆ. ಅಷ್ಟಕ್ಕೂ ಈ ಬದುಕಿನ ಬೆರಗು ತಾಳಿಕೊಳ್ಳುವುದೇ ಇಂತಹ ಅಸಮಂಜಸಗಳಲ್ಲಿ, ಮನುಷ್ಯರು ಬಾಳುವುದೇ ಇಂತಹ ನಿರೀಕ್ಷೆಗಳಲ್ಲಿ. ಇಲ್ಲಿ ಯಾವುದಕ್ಕೂ ತಾತ್ವಿಕವಾದ ಉತ್ತರಗಳಿರಬೇಕೇಂದೇನೂ ಇಲ್ಲ. ಈ ಪದ್ಯದಲ್ಲಿ ಬರುವ ಗಂಡು – ಹೆಣ್ಣು ರೂಪಕಗಳಾಗಿ ಬದುಕಿನ ಅಪರಿಪೂರ್ಣತೆಯ ಪ್ರತೀಕಗಳು. ಇದಲ್ಲದೇ ಒಂದಿಡೀ ಬದುಕಿನ ಎಲ್ಲಾ ಮನುಷ್ಯ ಪ್ರಯತ್ನಗಳು ಇದೇ ಅಪರಿಪೂರ್ಣತೆಯ ಬೆಂಬತ್ತಿ ಸಾಗುವ ಕ್ರಿಯೆಯೇ ಆಗಿವೆ. ರೇಣುಕಾ ನಿಡಗುಂದಿ, ಲೇಖಕಿ

*

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾರತಿ ಹೆಗಡೆ ಕವನವನ್ನೂ ಓದಿ : Poetry: ಅವಿತಕವಿತೆ; ಲೆಕ್ಕಕ್ಕೆ ಸಿಗದ ಪಾಪದ ಹೂವುಗಳ ಪರಿಮಳದ ನೀರೆಲ್ಲ ನದಿಯಾಗಿ ಹರಿಯುತ್ತಿದೆ