ಅವಿತಕವಿತೆ | AvithaKavithe : ಒಂದು ಅತ್ಯಂತ ತಮಾಷೆಯ ಸಂದರ್ಭದಲ್ಲಿ ಈ ಪದ್ಯ ಬರೆಯಲು ಶುರು ಮಾಡಿದ್ದು. ಅನುವಾದದ ಕುರಿತಾದ ಒಂದು ಬಿಸಿಬಿಸಿ ಚರ್ಚೆಯಲ್ಲಿ ಕನ್ನಡ ಪಂಡಿತರೊಬ್ಬರ ಮಾತುಗಳಿಗೆ ಪ್ರತಿಕ್ರಿಯೆ ಎನ್ನುವಂತೆ ಈ ಸಾಲುಗಳನ್ನ ಬರೆದಿದ್ದು. “ದೇಖಾ ಪಂಡಿತ್ ಜೀ/ಯೇ ತುಂ ನಹಿ ಸಮಝೊಗೆ/ಕಲಾಕಾರ್ ಕಿ ಆಂಖೆ ಚಾಹಿಯೆ/ಕಿಸೀ ಕೊ ದೇಖನೇ ಕೇಲಿಯೆ” ಒಂದು ಅನುವಾದವನ್ನ ಒಬ್ಬ ಒಣ ವಿದ್ವಾಂಸ ಯಾವ ರೀತಿಯಲ್ಲಿ ನೋಡ್ತಾನೆ ಮತ್ತು ಒಬ್ಬ ಕವಿ-ಕಲಾವಿದ ಯಾವ ರೀತಿಯಲ್ಲಿ ನೋಡ್ತಾನೆ ಅಂತ ಸ್ವಲ್ಪ ವ್ಯಂಗ್ಯದ ಧಾಟಿಯಲ್ಲಿ ಬರೆದ ಪದ್ಯ ಇದು. ಬಹುಶಃ ಬೋಸ್ಕೀ (ಮೇಘನಾ ಗುಲ್ಜಾರ್) ತನ್ನ ಅಪ್ಪನ (ಗುಲ್ಜಾರ್) ಬಗ್ಗೆ ಬರೆದ ಲೇಖನ ಓದ್ತಿದ್ದೆ ಆಗ ಅಂತ ನೆನಪು. ಈ ಕಾರಣವಾಗಿಯೇ, ನನ್ನ ಮನೆಯಲ್ಲಿ ಹೆಚ್ಚು ಕಡಿಮೆ ಇದೇ ಥರ ನಡೆದ ಘಟನೆಯನ್ನು ಆಧರಿಸಿದ ಈ ಕವಿತೆಗೆ ಈ ಪ್ರಸಿದ್ಧ ತಂದೆ – ಮಗಳು ಕಥಾನಾಯಕರಾಗಬೇಕಾಯ್ತು.
ಚಿದಂಬರ ನರೇಂದ್ರ (Chidambar Narendra)
ಬೋಸ್ಕಿ ಮಾಡಿದ ಅನುವಾದ
ಯಾದ್ ಹೈ ಗುಲ್ಜಾರ್ ಸಾಬ್ ಆಪ್ಕೊ... ಅವತ್ತು ನೀವು ಇಡೀ ದಿನದ ಜಂಜಾಟ ಮುಗಿಸಿ ಹೈರಾಣಾಗಿ ಮನೆಗೆ ಬಂದು ಆರಾಮ್ ಖುರ್ಚಿಯ ಮೇಲೆ ನಿರಾಳವಾಗಿ ಕಣ್ಣು ಮುಚ್ಚಿ ಮೈ ಚೆಲ್ಲಿದ್ದಿರಿ. ಆಗ ತಾನೆ ಹೋಂ ವರ್ಕ್ ಮುಗಿಸಿದ್ದ ನಿಮ್ಮ ಲಾಡಲಿ ಬೋಸ್ಕಿ ಬಂದು ನಿಮ್ಮ ಮೇಲೆ ಹತ್ತಿ ಕೂತಳು, ನಿಮ್ಮ ಕೆದರಿದ ತಲೆ ಬಾಚಿದಳು, ಕಳೆದ ವಾರ ಔಟಿಂಗ್ ಗೆ ಹೋದಾಗ ನೀವೇ ಕೊಡಿಸಿದ್ದ ಹೇರ್ ಬ್ಯಾಂಡನ್ನ ನಿಮ್ಮ ಜುಟ್ಟಿಗೆ ಕಟ್ಟಿದಳು, ಪೌಡರ್, ಲಿಪ್ಸ್ಟಿಕ್ ಹಚ್ಚಿದಳು, ತನ್ನ ಮೇಕಪ್ ಬ್ಯಾಗ್ ನಲ್ಲಿದ್ದ ಪುಟ್ಟ ಕನ್ನಡಿ ಹೊರತೆಗೆದು ನಿಮ್ಮ ಮುಖದ ಮುಂದೆ ಹಿಡಿದಳು. ನೀವು ನಕ್ಕು ಬಿಟ್ಟಿರಿ. ಅದೇ ಸಮಯಕ್ಕೆ ಬಾಗಿಲು ನೂಕುತ್ತ ಒಳಗೆ ಬಂದ ನಿಮ್ಮ ಕ್ಲರ್ಕ್ ನಿಮ್ಮ ಅವತಾರ ನೋಡಿ ಸಿಡಿಮಿಡಿಗೊಂಡ. "ಸಾಬ್ ಗೆಸ್ಟ್ ಆನೇವಾಲೆ ಹೈ ಔರ ಆಪ್ ಇಸ್ ಹಾಲತ್ ಮೆ?" ಅವನ ದನಿಯಲ್ಲಿ ಆಕ್ಷೇಪಣೆ ಇತ್ತು. ನಕ್ಕುಬಿಟ್ಟಿರಿ ನೀವು ನಿಮ್ಮ ಅಡುಗೆಯವನನ್ನು ಕೂಗಿದಿರಿ. "ಮಹರಾಜ್ ದೇಖೊ ತೊ ಸಹಿ ಕೈಸೆ ದಿಖ್ ರಹಾ ಹೂಂ ಮೈ?" ಓಡಿ ಬಂದ ಮಹರಾಜ್ ನಿಮ್ಮನ್ನು ನೋಡಿ ಅವಾಕ್ಕಾದ ; "ಮುಝೆ ತೋ ಸಾಬ್ ನಹಿ ಪೂರಿ ಕಿ ಪೂರಿ ಬೋಸ್ಕಿ ನಜರ್ ಆರಹೀ ಹೈ" "ಸಹಿ ಪೆಹಚಾನಾ ಮಹರಾಜ್ ತುಂ ಬೋಸ್ಕಿ ಕೆ ಬಿನಾ ಯೇ ಗುಲ್ಜಾರ್ ಕ್ಯಾ ಚೀಜ್ ಹೈ" "ದೇಖಾ ಪಂಡಿತ್ ಜೀ ಯೇ ತುಂ ನಹಿ ಸಮಝೊಗೆ ಕಲಾಕಾರ್ ಕಿ ಆಂಖೆ ಚಾಹಿಯೆ ಕಿಸೀ ಕೊ ದೇಖನೇ ಕೇಲಿಯೆ" ಕ್ಲರ್ಕ್ ನಾಚಿದ ನಕ್ಕುಬಿಟ್ಟಿರಿ ನೀವು ಮತ್ತೊಮ್ಮೆ. ಹೌದು ಗುಲ್ಜಾರ್ ಸಾಬ್ ಬೋಸ್ಕಿ ನಿಮ್ಮ ಪ್ರಾಣ, ನಿಮ್ಮ ಆತ್ಮ. ನಿಮ್ಮದೇ ಕವಿತೆ ನೀವು ಅವಳ ಅನುವಾದ. ( ಬೋಸ್ಕಿ : ಗುಲ್ಜಾರ್ರ ಮಗಳು ಮೇಘನಾ )
ಕವಿತೆಯ ಅನುವಾದ ನನ್ನ ಮಟ್ಟಿಗಂತೂ ಹೊಸ ಸೃಷ್ಟಿಯೇ. ನಾವು ಎಷ್ಟೇ ಕೃತಿ ನಿಷ್ಠರಾಗಿ ಅನುವಾದ ಮಾಡುತ್ತೇವೆ ಎಂದು ಹೇಳಿಕೊಂಡರೂ, ನೀವು ಕೇವಲ ಅನುವಾದಕರಾಗಿರದೇ ಕವಿಯೂ ಆಗಿದ್ದ ಪಕ್ಷದಲ್ಲಿ ನೀವು ನಿಮ್ಮತನವನ್ನು ಆ ಕವಿತೆಗೆ ಒಂದಿಲ್ಲ ಒಂದು ರೀತಿಯಲ್ಲಿ ಸೇರಿಸಿಯೇ ಇರುತ್ತೀರಿ, ಅದು ನಿಮ್ಮ ಅನುವಾದ ಎಂದು ಓದುಗರಿಗೆ ಕೊಡಲೆ ಗೊತ್ತಾಗುವಂತೆ. (ಅನುವಾದ ಮೂಲ ಲೇಖಕನನ್ನು ಓದಿದ ಹಾಗೆ ಇರಬೇಕು ಎನ್ನುವ ವಾದವೂ ಇದೆ ಮತ್ತು ಈ ವಾದಕ್ಕೆ ನನ್ನ ಹೆಚ್ಚಿನ ತಕರಾರೇನಿಲ್ಲ) ಅತ್ಯಂತ ಶುದ್ಧ ಕಲೆ ಎಂದು ಹೆಸರಾಗಿರುವ ಸಂಗೀತದಲ್ಲಿ ಫ್ಯೂಜನ್ ಒಂದು ವಿಶಿಷ್ಟ ಪ್ರಕಾರವಾಗಿ ಜನಮನ್ನಣೆ ಗಳಿಸಿರುವ ಉದಾಹರಣೆ ನಮ್ಮ ಮುಂದಿರುವಾಗ ಕಾವ್ಯ ಪ್ರಕಾರದಲ್ಲಿ ಇಂಥ ಪ್ರಯೋಗಗಳು ಹೆಚ್ಚು ಕಂಡುಬರುವುದಿಲ್ಲ. ನಾನು ಇತ್ತಿಚೆಗೆ ಮುರಕಮಿ, ಟೋನಿ ಮಾರಿಸನ್, ಮಾರ್ಕ್ವೇಜ್, ಮಿಲಾನ್ ಕುಂದೇರಾ, ಓರ್ಹಾನ ಪಾಮುಕ, ಬೆಲ್ ಹುಕ್ಸ್, ಲ್ಯಾಂಗ್ ಲೀವ್ ಮುಂತಾದವರ ಕಾವ್ಯಮಯ ಸಾಲುಗಳ ಜೊತೆ ಅನುಸಂಧಾನ ಮಾಡುವ ರೀತಿಯಲ್ಲಿ, ಅವರ ಕಲ್ಪನೆಯನ್ನ ಬೆಳೆಸುವ ರೀತಿಯಲ್ಲಿ ಅಥವಾ ಕೌಂಟರ್ ಮಾಡುವ ರೀತಿಯಲ್ಲಿ ಒಂದಿಷ್ಟು ಫ್ಯೂಜನ್ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಇದು ಎಷ್ಟು ಮಹತ್ವದ್ದೋ, ಹೀಗೆ ಮಾಡುವುದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಇಂಥ ಪ್ರಯತ್ನಗಳು ಕಾವ್ಯ ಪ್ರಕಾರವನ್ನ ಮತ್ತಷ್ಟು ಚೇತೋಹಾರಿಯಾಗಿಸಬಹುದು ಎನ್ನುವುದು ನನ್ನ ಸದ್ಯದ ನಂಬಿಕೆ.
ಚಿಂದಬರರ ಈ ಕವಿತೆಗಳನ್ನೂ ಓದಿ : Poetry; ಅವಿತಕವಿತೆ: ಹುಷಾರಾಗಿರು! ಸುಲಭಕ್ಕೆ ಒಪ್ಪಿಸಿಕೊಳ್ಳಬೇಡ
ಚಿದಂಬರರ ಕೈಬರಹದಲ್ಲಿ ಕವಿತೆ
ಕವಿತೆ ಅವರದು ನೋಟ ನಿಮ್ಮದು
ಕವಿ ಚಿದಂಬರ ನರೇಂದ್ರ ಅವರು ಕಾವ್ಯವನ್ನೇ ಉಸಿರಾಡುತ್ತಿರುವವರು. ಇವರ ಕವಿತೆ, ಅನುವಾದಗಳಲ್ಲಿ ಜೀವನ ಪ್ರೀತಿ, ರಾಜಕಾರಣ, ಅಧ್ಯಾತ್ಮ ಕಾವ್ಯದ ಎರಕದಲ್ಲಿ ಮಿಳಿತಗೊಂಡು ಜೀವಂತವಾಗುತ್ತದೆ. ಯಾವುದೇ ಭಾಷೆ, ಪ್ರದೇಶದ ಕವಿಯಿರಲಿ ಚಿದಂಬರ ನರೇಂದ್ರ ಅವರು ಅವರನ್ನು ನಮ್ಮವರಾಗಿಸುತ್ತಾರೆ. ಅನುವಾದ ಎಲ್ಲೂ ಕಗ್ಗಂಟಾಗದೇ ನಮ್ಮೊಂದಿಗಿನ ಸಂವಾದದಂತೆ, ಪಿಸುಮಾತಿನಂತೆ, ನಮ್ಮೊಳಗಿಂದಲೇ ಮೂಡಿಬಂದಂತೆ ಅನಿಸುತ್ತದೆ. ಇವರ ಅನುವಾದಗಳ ಮೂಲಕ ಹಾಫಿಜ್, ಎರಿನ್ ಹ್ಯಾನ್ಸನ್, ಲ್ಯಾಂಗ್ ಲೀವ್, ಬುಕೋವ್‌ಸ್ಕಿ, ನೆರುಡ, ಹರುಕಿ ಮುರಕಮಿ, ಗುಲ್ಜಾರ್, ಭರ್ತೃಹರಿ ಎಲ್ಲರೂ ಕನ್ನಡದವರೇ ಆಗಿಬಿಟ್ಟಿದ್ದಾರೆ. ಜೊತೆಗೆ ಕವಿಗಳಿಗೆ ಭಾಷೆ ನೆಪ ಅಷ್ಟೆ; ಇವರು ಆ ಮೂಲಕ ನಡೆಸುತ್ತಿರುವುದು ಲೋಕ ಸಂವಾದವನ್ನೇ. ಚಿದಂಬರ ಅವರಿಗೂ ಅನುವಾದ ಎನ್ನುವುದು ತಮ್ಮ ಕಾವ್ಯರಚನೆಯ ವಿಸ್ತರಣೆ. ಇವರ ಕವಿತೆ, ಅನುವಾದಗಳ ವಿಶೇಷ ಇಲ್ಲಿನ ಸ್ವಭಾವೋಕ್ತಿ. ಎಲ್ಲೂ ವಿಜೃಂಭಣೆ ಇಲ್ಲದೆ ಎಲ್ಲರ ಬದುಕಲ್ಲೂ ಇರುವ ಸಂಗತಿಗಳನ್ನು ತಟ್ಟುತ್ತಾ ಬದುಕಿನ ಧಾವಂತದಲ್ಲಿ ಕಾಣದೇ ಹೋದ ಸಂಗತಿಯನ್ನು ಚಕ್ಕನೆ ಕಾಣಿಸಿ ಹೋಗುವ ಬಗೆಯಲ್ಲಿ ಇರುವುದು ಇವರ ಆಯ್ಕೆಯ ಕವಿತೆಗಳ ವಿಶೇಷತೆ. ಜೊತೆಗೆ ಅವು ಹಳೆಯ, ನಿರೀಕ್ಷಿತ ಜಾಡಿನಲ್ಲಿ ಇರುವುದಿಲ್ಲ ಎನ್ನುವುದನ್ನೂ ಗಮನಿಸಬೇಕು. ಹೀಗೆ ಮಾಡುತ್ತಾ ಅವರು ಕನ್ನಡದ ಓದಿನ ವಲಯವನ್ನು, ಸಂವೇದನೆಯ ವಲಯವನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದಾರೆ.
ನ್ಯೂಜಿಲೆಂಡ್‌ನ ಲ್ಯಾಂಗ್ ಲೀವ್ ಕವಿತೆಯೊಂದನ್ನು ನರೇಂದ್ರ ಅವರು ಹೀಗೆ ಅನುವಾದಿಸುತ್ತಾರೆ:
ಬಿಕ್ಕುತ್ತ,
ನಿನ್ನ ನೀನು ಇರಿದುಕೊಳ್ಳುತ್ತ
ಒಬ್ಬಂಟಿಯಾಗಿ ಕೂತಿರುವಾಗ,
ನನಗನಿಸುತ್ತದೆ,
ಪೆನ್ ಸಿಲುಕಿಸಬೇಕು
ನಾನು ನಿನ್ನ ಕೈಬೆರಳುಗಳಲ್ಲಿ
ಮತ್ತು ಸಂತೈಸಬೇಕು ಪ್ರೀತಿಯಿಂದ
ಹೀಗೆ ಆಪ್ತವಾಗಿ ಕವಿತೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ.
ಡಾ. ಪಿ. ಭಾರತೀದೇವಿ, ಕವಿ, ಅನುವಾದಕಿ
*
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಕವಿತೆಗಳನ್ನು ಓದಲು ಕ್ಲಿಕ್ ಮಾಡಿ
Published On - 7:36 am, Sun, 26 June 22