Poetry : ಅವಿತಕವಿತೆ; ಪೆದ್ದಾ, ನನ್ನ ಪ್ರಾಣಪ್ರಿಯವಾದ ಕೊಂಡಿ ನೀನು…

Writing : ಅನಿಸಿದ್ದನ್ನು ಪ್ರಾಮಾಣಿಕವಾಗಿ ಬರೆಯುವುದು ಎಲ್ಲಕ್ಕೂ ಮುಖ್ಯ. ಹೀಗೆ ಕವಿತೆಗಳನ್ನು ಬರೆದಾಗ ಸುಮ್ಮನೇ ಭಾವಾಸ್ವಾದಿಸುವವರೂ ಉಂಟು. ಅದರೊಳಗೆ ವೈಯಕ್ತಿಕ ವಿವರ ಹುಡುಕುವವರೂ ಉಂಟು. ಅಂಥವರ ಬಗ್ಗೆ ಕನಿಕರವಾಗುತ್ತದೆ.

Poetry : ಅವಿತಕವಿತೆ; ಪೆದ್ದಾ, ನನ್ನ ಪ್ರಾಣಪ್ರಿಯವಾದ ಕೊಂಡಿ ನೀನು...
ಕವಿ ಕುಸುಮಾ ಆಯರಹಳ್ಳಿ
Follow us
ಶ್ರೀದೇವಿ ಕಳಸದ
|

Updated on: May 15, 2022 | 11:01 AM

ಅವಿತಕವಿತೆ | AvithaKavithe : ಕಾವ್ಯ, ನಾಟಕ, ಕತೆ ಕಾದಂಬರಿ ಅಂತೆಲ್ಲ ಸಾಹಿತ್ಯದ ಅಭಿವ್ಯಕ್ತಿಗೆ ಹಲವು ಪ್ರಕಾರಗಳು. ನಮ್ಮ ಪ್ರತಿಭೆ ಇದರಲ್ಲಿದೆ. ಈ ಮೂಲಕ ನಾನು ವ್ಯಕ್ತಪಡಿಸಬಲ್ಲೆ ಎಂಬ ಕಾರಣಕ್ಕೆ ನಾವೇ ಇವುಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳುತ್ತೇವಾ ಅಥವಾ ಆ ಅಭಿವ್ಯಕ್ತಿ ತನ್ನ ಮಾಧ್ಯಮವನ್ನು ತಾನೇ ಆರಿಸಿಕೊಳ್ತದಾ ಅಂತ ಯೋಚಿಸುತ್ತೇನೆ. ಎರಡೂ ಇರಬಹುದು. ತೀವ್ರಭಾವಗಳು ತಮ್ಮನ್ನು ವ್ಯಕ್ತಪಡಿಸಲು ಕವಿತೆಯ ಮಿಂಚನ್ನೆ ಆರಿಸಿಕೊಳ್ತವೇನೋ. ಕವಿತೆ ನನ್ನ cup of tea ಅಲ್ಲವೆಂದೇ ಭಾವಿಸಿದವಳು ನಾನು. ಇದು ಕವಿತೆಯಾ? ಅಂತ ಬರ್ದ ಮೇಲೆ ಡೌಟಲ್ಲಿ ಕೇಳ್ತಿರ್ತೇನೆ. ಕವಿಯಾಗಿ ಗುರುತಿಸಿಕೊಳ್ಳುವ‌ ಮಹತ್ವಾಕಾಂಕ್ಷೆ ಏನೂ ಇಲ್ಲದ್ದರಿಂದ ತೀರಾ ತಲೆಕೆಡಿಸಿಕೊಳ್ಳದೇ ಬರೆಯುತ್ತೇನೆ. ಅನಿಸಿದ್ದನ್ನು ಪ್ರಾಮಾಣಿಕವಾಗಿ ಬರೆಯುವುದು ಎಲ್ಲಕ್ಕೂ ಮುಖ್ಯ. ಹೀಗೆ ಕವಿತೆಗಳನ್ನು ಬರೆದಾಗ ಸುಮ್ಮನೇ ಭಾವಾಸ್ವಾದ ಮಾಡುವವರೂ ಉಂಟು. ಅದರೊಳಗೆ ವೈಯಕ್ತಿಕ ವಿವರಗಳನ್ನು ಹುಡುಕುವವರೂ ಉಂಟು. ಅಂತವರ ಬಗ್ಗೆ ಕನಿಕರವೂ ಆಗುತ್ತದೆ. ಕುಸುಮಾ ಆಯರಹಳ್ಳಿ, ಕವಿ, ಲೇಖಕಿ (Kusuma Ayarahalli)

ಸಾವಿರಾರು ಜನರೊಡನೆ
ಒಡನಾಡಿದರೂ
ಆಳದಲ್ಲಿ
ಮನುಷ್ಯರೆಂದರೇ ಭಯ ನನಗೆ
ನೀನೂ ಮನುಷ್ಯನೇ.

ನೀನು ನನ್ನ ಪಾಲಿಗೆ
ಕ್ರಿಯೆಯಲ್ಲ, ಪ್ರತಿಕ್ರಿಯೆ
ಹಾಗಾಗಿ
ನಿನ್ನನ್ನು ಕಂಡರೆ ನನಗೆ ಅಷ್ಟಕ್ಕಷ್ಟೆ.
ನಂಗಿಷ್ಟವಾದವನು ನೀನಲ್ಲ.
ನಿನ್ನ ಒಳಗಿರುವ ಆ ಇನ್ನೊಬ್ಬನಷ್ಟೆ

ಅದ್ಯಾರೋ ಎಲ್ಲೋ ಕೂತು
ಅಚಾನಕ್ ಹೂಡಿದ ಕೊಂಡಿ ಇದು
ಬಿಡಿಸಿಕೊಳ್ಳಲು ದಿನದಿನವೂ ಯತ್ನಿಸಿ
ಹೈರಾಣಾಗುತ್ತಿದ್ದೇನೆ.

ಪ್ರಾಣಪ್ರಿಯವಾದ ಕೊಂಡಿ ನೀನು ಪೆದ್ದಾ..
ಕಳಚಲು ಹೊರಟಾಗೆಲ್ಲ
ಪ್ರಾಣವೇ ಹೋದಂತೆ..ಅಪಾರ ನೋವು.
ತಂತಾನೇ ಕಳಚಲೂಬಹುದು.
ಆದರೂ
ನಿಧಾನವಾಗಿ, ಉಪಾಯದಲಿ
ಬಿಡಿಸಿಕೊಳ್ಳಲೇಬೇಕು
ಯಾಕೆಂದರೆ
ಆಳದಲ್ಲಿ
ಮನುಷ್ಯರೆಂದರೇ‌ ಭಯ ನನಗೆ.
ಹೊರಗೆ ಸುಮ್ಮನೇ ನಗೆ.

AvithaKavithe Kannada Poetry Column by Kusuma Ayarahalli

ಕುಸುಮಾ ಕೈಬರಹ


ಕವಿತೆ ಅವರದು ನೋಟ ನಿಮ್ಮದು

ಇದನ್ನೂ ಓದಿ
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Poetry : ಅವಿತಕವಿತೆ ; ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು
Image
Poetry ; ಅವಿತಕವಿತೆ : ನಿರ್ವಾಹವಿಲ್ಲದೇ ಹರಿವ ಹಾದರಕೆ ಮತ್ತೆಂದೂ ಮರಳುವ ಮನಸಿಲ್ಲ
Image
Poetry ; ಅವಿತಕವಿತೆ : ಆವಿಯಾಗದ ಹೊರತು ತುಂಬಿಕೊಳ್ಳುವುದಾದರೂ ಹೇಗೆ?

ಆಯರಹಳ್ಳಿಯ ಕೃಷಿಬದುಕಿನ ಹಿನ್ನೆಲೆಯ ಕುಸುಮ, ಅವರ ನಿಖರ, ತೀಕ್ಷ್ಣ ಬರವಣಿಗೆ-ಮಾತುಕತೆಗಳಾಚೆಗೆ ಒಂದು ಆರ್ದ್ರವಾದ ಭಾವಜೀವಿ. ಭಾವತೀವ್ರ ಒಸಗೆಗಳನ್ನು ಬರೆಯಲು ಕುಸುಮ ಕವಿತೆಯ ಮೊರೆಹೋಗಿದ್ದಾರೆ. ಸಟ್ಟನೆ ನೋಡಿದರೆ ಗದ್ಯವೇ ಅನಿಸಿಬಿಡಬಹುದಾದ, ನಿಧಾನವಾಗಿ ಓದಿದರೆ ಪದ್ಯದ ಕಮನೀಯತೆಯಲ್ಲಿ ಸಾಲುಸಾಲಾಗಿರುವ ಭಾವಪೂರ್ಣ ಕವಿತೆ ಇದು. ಹಾಸ್ಯದ ಹೊನ್ನಗವಸಿನಲ್ಲಿ ಒಳಗೆ ಅಡಗಿಸಿಟ್ಟಿರುವ ವಿಷಾದ ಕುಸುಮ ಅವರ ರೀತಿ. ಗೀತೆಯ ಲಯ ಇವರ ಕವಿತೆಗಳಲ್ಲಿ ಕಡಿಮೆಯೇ. ಓದುತ್ತ ಓದುತ್ತ ಓದಿದವರ ಮನಸ್ಥಿತಿಯನ್ನ ಸಾಲುಗಳ ಮೂಲಕ ಭಾವಪಲ್ಲಟ ಮಾಡುವ ಕವಿತೆ ಇವರದು. ಸ್ವಗತದ ಧಾಟಿಯಲ್ಲಿರುವ ಈ ಕವಿತೆಯಲ್ಲಿ ಕವಿ ಎಲ್ಲರಿಗೂ ಆಗಬಹುದಾದ ಕಳಚಿಕೊಳ್ಳುವ ಪ್ರಕ್ರಿಯೆಯ ಅನಿವಾರ್ಯತೆ ಮತ್ತು ಅದರಿಂದುಂಟಾಗುವ ನೋವು ವಿಷಾದವನ್ನು , ಕಲ್ಪಿತ ಸಂವಾದಿಯೊ ಹೇಳಿದಂತೆ ಬರೆದಿದ್ದಾರೆ. ಕವಿ ತನ್ನ ತಲ್ಲಣಗಳನ್ನು ನೀಗಿಕೊಳ್ಳಲು ಬಳಸುವ ಉಪಕರಣವಾಗಿ ಬರೆದ ಈ ಕವಿತೆಯಲ್ಲಿ ಆ ಬಿಡುಗಡೆಯ ಹಾಯೆನ್ನಿಸುವ ಭಾವ ಆಹ್ಲಾದವಾಗಿದೆ. ಆಹಾ ಎಂದುಕೊಂಡು ಓದುತ್ತಲೇ ಓದಿ ಮುಗಿದಾಗ ಕವಿಯ ಭಾರವು ನಮ್ಮದೂ ಆಗಿಬಿಡುತ್ತದೆ.

ಸಿಂಧು ರಾವ್, ಲೇಖಕಿ

ಪ್ರತಿಕ್ರಿಯೆಗಾಗಿ : tv9kannadadigital@gmail.com