Poetry : ಅವಿತಕವಿತೆ ; ಬಂದು ಹೋದ ಗುರುತು ಪತ್ತೆ ಉಳಿಯದಂತೆ

|

Updated on: Aug 08, 2021 | 12:07 PM

Poem : ‘ದೃಢವಾದ ಆತ್ಮವಿಶ್ವಾಸ ಬರೆಯಬೇಕೆನ್ನುವ ಆಶಾಭಾವ ಬರೆದದ್ದನ್ನು ಲೋಕದೊಂದಿಗೆ ಹಂಚಿಕೊಳ್ಳಬೇಕೆನ್ನುವ ಇಂಗಿತ ಹೆಚ್ಚಾಗಿ ಅಚಾನಕ್ಕಾಗಿ ಕವಿತೆಯನ್ನು ಗಂಭೀರವಾಗಿ ಪರಿಗಣಿಸಿದೆನಾ? ತಬ್ಬಿಕೊಂಡ ಮರ ಹೂವಿನದೊ ಮುಳ್ಳಿನದೊ ಹಿಡಿತ ಅದು ಹೇಗೆ ಬಿಗಿಯಾಯಿತೊ ಆಯ್ದುಕೊಂಡ ದಾರಿ ಸ್ಪಷ್ಟವಾಗಿದ್ದರೂ ಅನೇಕ ಬಾರಿ ನಾನೇಕೆ ಕವಿತೆ ಬರೆಯುತ್ತೇನೆ ಎನಿಸುತ್ತದೆ.’ ಭುವನಾ ಹಿರೇಮಠ

Poetry : ಅವಿತಕವಿತೆ ; ಬಂದು ಹೋದ ಗುರುತು ಪತ್ತೆ ಉಳಿಯದಂತೆ
Follow us on

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈ ವಾರ ಕವಿ ಭುವನಾ ಹಿರೇಮಠ ಅವರ ಕವನಗಳು ನಿಮ್ಮ ಓದಿಗೆ. 

*

ಕವಿತೆಯ ಸೂಕ್ಮ್ಷಗಳನ್ನು ಬಿಡದೆ, ಅದನ್ನು ಜನಪರವಾಗಿಸುತ್ತಾ ಅದಕ್ಕೊಂದು ನವಿರಾದ ಮಹಿಳಾ ಸ್ಪರ್ಶವನ್ನು ನೀಡಿ ಬರೆಯುವ ಭುವನಾ, ಹೊಸ ತಲೆಮಾರಿನ ಪ್ರಮುಖ ಕವಿಗಳಲ್ಲಿ ಒಬ್ಬರು.
ಪುರುಷೋತ್ತಮ ಬಿಳಿಮಲೆ.

ಕನ್ನಡಕ್ಕೆ ಸ್ಪಷ್ಟವಾಗಿ ಆಲೋಚಿಸುವ, ಆಲೋಚಿಸಿದ್ದನ್ನು ನಿರ್ಭಿಡೆಯಿಂದ ಅಭಿವ್ಯಕ್ತಿಸುವ ಕಾವ್ಯದ ಗಂಭೀರ ಅಭ್ಯಾಸಿಯಾಗಿರುವ ಭುವನಾರ ಕವಿತೆಗಳು ಕನ್ನಡದ್ದವೋ ಅನುವಾದವೋ ಎನ್ನುವಷ್ಟು ಹೊಸತಾಗಿವೆ.
ಲಲಿತಾ ಸಿದ್ಧಬಸವಯ್ಯ

*

ಮಟಾಮಾಯ!

ನೋಡಲ್ಲಿ ಆ ಗಿಡವ ದೂರದಿಂದ
ಹಣ್ಣಿನ ಒಡಲ ತುಂಬ ಬೀಜ
ಒಂದೊಂದೇ ತಿರುಳ ಸುಲಿದು ಸುಲಿದು
ಸವಿಯಲು ರುಚಿ ರುಚಿ

ತಪ್ಪಿಸಿಕೊಂಡು ಒಳಗೆ ಇಳಿಯುತಿರೊ
ಬೀಜದ ಸಾಲು ಬಾಯಿ ಹಾಕಲು
ಆಳದಾಳಕೆ ಧುಮುಕುತಿರೊ
ಬಲು ಬೆರಕಿ ತಂತುವಿದು
ಮಟಾಮಾಯ!

ನನ್ನ ಹೊಟ್ಟೆಯೊಳಗೊ
ಹಣ್ಣ ಹೊಟ್ಟೆಯೊಳಗೊ

ಹೀಗೆ ಹತ್ತತ್ತಿರ ಬಂದರೆ
ನುಣುಚಿಕೊಂಡು ಕೈ ಕೊಸರಿಕೊಂಡು
ನಿಶ್ಶೇಷ ಉಳಿಯುತಿಲ್ಲ ಲವಲೇಷ

*

ಮರ್ಮರ

ನಿನ್ನ ಭುಜಕ್ಕೊರಗಿದಾಗ
ನಿನ್ನೊಡಲ ಬಳಸಿ ಬಂದಾಗ
ವಿಚಿತ್ರವಾದ ಧ್ವನಿ ಕೇಳಿಸುವುದು
ಅದು ಯಾವ ಹಕ್ಕಿಯ ಹಾಡೋ
ಯಾವ ಪ್ರಾಣಿಯ ಕೂಗೋ
ಗೊಂದಲ ಬಗೆಹರಿದಿಲ್ಲ
ಒಂದು ಮಾತ್ರ ಖಾತ್ರಿಯಾಗಿದೆ
ಅದು ನಿನಗೆ ಕೇಳಿಸುವುದಿಲ್ಲ
ನನ್ನ ಕಿವಿಗೆ ನೀ ಕಿವಿಯಾಗದ ಹೊರತು
ನನ್ನ ತೊಡೆ ಮೇಲೆ ನೀ ಮಲಗದ ಹೊರತು
ವಿದ್ಯುತ್ತಿನಂತೆ ಮೈಯ್ಯಿಂದ
ಮೈಗೆ ಹರಿಯದ ಹೊರತು

ಅಷ್ಟಕ್ಕೂ ಏನದು
ಈ ಕೋಟ್ಯಾನುಕೋಟಿ ಜನರ ಮಧ್ಯೆ
ಲಕ್ಷಾನುಲಕ್ಷ ಮರ್ಮರಗಳ ಬಿಟ್ಟು
ಇದೇ ಕೇಳಿಸಬೇಕೆಂದರೆ?
ಈ ಪರಿ ಕಿವಿತುಂಬ ಗುಯಿಂಗುಡಬೇಕೆಂದರೆ?

ಏನಾದರೂ ಮಾಡಲೇಬೇಕು
ಹೀಗೆಯೇ ಬಿಟ್ಟರೆ ಒಳಗೇ ಬೆಳೆದು ಬೆಳೆದು
ಗೋಡೆ ಬುಡದಿ ಬೇರುಬಿಟ್ಟು ಕೆಡುವಬಹುದು
ಜಲಮಕ್ಕಂಟಿರುವ ಒಂದೇ ಒಂದು ಮನೆಯ

ಬಾ ಜಗದೆಲ್ಲ ಗಿರಿಗಳ ಸುತ್ತಿ
ಸಪ್ತಸಾಗರಗಳ ಕಡೆದು
ಜಗದೇಕ ಪರ್ವತವ ಹತ್ತಿಳಿದು
ಕಂಡ ಕಂಡ ಹೂವ ಮುಟ್ಟಿ
ನದಿಯ ಗುಂಟ ತೆಪ್ಪ ಹಾಸಿ ತೇಲಿ ತೇಲಿ
ನೂರು ಗಡಿಗಳ ದಾಟಿ
ದಿಕ್ಕು ದಿಕ್ಕಿಗೆ ಬೆನ್ನು ಹತ್ತಿ ಓಡಿ ಓಡಿ
ತಪಾಸು ಹಚ್ಚೋಣ ಅರ್ಧಕ್ಕೇ ಬಿಟ್ಟುಹೋದ
ತಂದೆಯನ್ನೋ ತಾಯಿಯನ್ನೋ
ಕೊನೆಗೆ ಒಡಹುಟ್ಟಿದವರನ್ನಾದರೂ

ಎಷ್ಟು ದಿನ ಪೊರೆಯುವುದು
ನಿನ್ನೊಡಲೊಳಗೆ
ನನ್ನ ಕಿವಿಯೊಳಗೆ
ಖಾಲಿ ಅವಕಾಶದೊಳಗೆ
ಆಯಾಮಗಳ ಚೌಕಟ್ಟ ಮೀರಿ ನಿಂತು
ತನ್ನದೇ ನಡೆಸುವ ನಮ್ಮನೇ ನಿಲ್ಲಿಸುವ
ಈ ಅನಾಥ ಧ್ವನಿಯ
ಬಿಟ್ಟು ಬರೋಣ ಚೂರೂ ಕಚ್ಚು ಉಳಿಯದಂತೆ
ಬಂದು ಹೋದ ಗುರುತು ಪತ್ತೆ ಹತ್ತದಂತೆ

ಭುವನಾ ಹಿರೇಮಠ ಕೈಬರಹದೊಂದಿಗೆ

“We are all poets when we are in pine woods”- Longfellow
ಕಾವ್ಯವೆನ್ನುವ ಎದೆಯ ಹಾಡು ಪಾಡು, ನನಗಷ್ಟೇ ಗೊತ್ತಿರಬೇಕಾದ ಗುಟ್ಟು ಎಂದುಕೊಂಡು ಅಲ್ಲಲ್ಲಿ ಫೇರ್ ಬುಕ್ಕಿನ ಕಡೆಯ ಪುಟಗಳಲ್ಲೋ, ಹರಿದು ಹಾಕುವ ಟಿಕೇಟಿನ ಹಿಂದೆಯೊ, ಗಾದಾಳಿಯ ಗರಿಯ ಮೇಲೊ, ಹಳ್ಳದ ತಡಿಯ ರೇವೆಯ ಮೇಲೊ ಬರೆದು ಅಷ್ಟಷ್ಟಕ್ಕೇ ಬಿಟ್ಟುಬಿಡಬೇಕಾದ ನಿಕೃಷ್ಟ ಅಭಿವ್ಯಕ್ತಿ ಎಂಬುದನ್ನೇ ನಂಬಿಕೊಂಡು ದಿನಗಳನ್ನು ದೂಡುತ್ತಿರುವಾಗ; ದೃಢವಾದ ಆತ್ಮವಿಶ್ವಾಸ ಬರೆಯಬೇಕೆನ್ನುವ ಆಶಾಭಾವ ಬರೆದದ್ದನ್ನು ಲೋಕದೊಂದಿಗೆ ಹಂಚಿಕೊಳ್ಳಬೇಕೆನ್ನುವ ಇಂಗಿತ ಹೆಚ್ಚಾಗಿ ಅಚಾನಕ್ಕಾಗಿ ಕವಿತೆಯನ್ನು ಗಂಭೀರವಾಗಿ ಪರಿಗಣಿಸಿದೆನಾ? ತಬ್ಬಿಕೊಂಡ ಮರ ಹೂವಿನದೊ ಮುಳ್ಳಿನದೊ ಹಿಡಿತ ಅದು ಹೇಗೆ ಬಿಗಿಯಾಯಿತೊ ಆಯ್ದುಕೊಂಡ ದಾರಿ ಸ್ಪಷ್ಟವಾಗಿದ್ದರೂ ಅನೇಕ ಬಾರಿ ನಾನೇಕೆ ಕವಿತೆ ಬರೆಯುತ್ತೇನೆ ಎನಿಸುತ್ತದೆ. ಹೇಳಬೇಕಾದುದನ್ನು ವಿಡಂಬನೆಯಲ್ಲಿ, ದೃಷ್ಟಾಂತದಲ್ಲಿ, ರೂಪಕ ಭಾಷೆಯಲ್ಲಿ ಹೇಳಿ ಹಗುರಾಗುವುದೊ ಭಾರಗೊಳ್ಳುವುದೊ, ಅದನ್ನೋದಿದ ಓದುಗ ಹಗುರಾಗುವನೋ ಭಾರಗೊಳ್ಳುವನೋ ನಿರ್ದಿಷ್ಟವಾಗಿ ಹೇಳಲು ಬಾರದ ಒಂದು ಉಪಕ್ರಮ ಕವಿತೆ ಎನ್ನುವ ಭಾವ ನನ್ನದು .

*

ತತ್ರಾಣಿ

ನೂರು ತೂತಿನ ಕೊಡವ
ಹೊತ್ತು ಬರಬೇಡವೋ ಸರವೊತ್ತಿಗೆ
ಇನ್ನೂರು ವಾಂಛೆ
ಮುನ್ನೂರು ಸ್ಖಲನಸುಖ
ನಾಲ್ಕುನೂರಾ ಒಂದು ಅಳುವ ಕಂದಮ್ಮಗಳು
ಒಂದು ಕೂಸಿಗೊಂದು ಕೊಡ
ಕೊಡಕೆ ನೂರು ತೂತು
ಹೀಗೆಯೇ ನಡೆದರೆ
ಬೆಳೆಯುವುದು ಲೆಕ್ಕ
ಚುಕ್ತಾ ಮಾಡುವುದೇಗೆ

ತೂತಿಲ್ಲ ತಳವಿಲ್ಲ
ತಲೆಮೇಲೆ ಸಿಂಬಿಲ್ಲ
ಹೊತ್ತು ನಡೆವ ಒಂದೊಂದು ಹೆಜ್ಜೆಗೂ
ಒಂದು ಸಂಜೀವಿನಿ ಗಿಡ
ಸುರುವಿದ ಕಡೆ ಬಾಯಿ
ಬಾಯಿ ಬಿಟ್ಟಲ್ಲೆಲ್ಲ ಸಂಜೀವಿನಿ ಕೊಳ
ಮೇಲೆ ಮೇಲೇರಿದರೆ ಸಂಜೀವಿನಿ ಗುಡ್ಡ
ಇಳುವಬೇಡ ತುತ್ತ ತುದಿಗೆ
ಹೆಸರು ಕೇಳದೆ ಹಾಗೆ
ಕೈತಪ್ಪಿ ಒಡೆದರೆ
ಜೋಡಿಸಲು ಹೆಣಗಿದರೆ
ಮತ್ತೆ
ಚೂರು ಚೂರು ಚೂರು

ಆರಿಸಿಕೊ ಒಡೆಯುವ ಮುಂಚೆ
ಕಾಪಿಟ್ಟುಕೊ ಕಣ್ಣಲ್ಲಿ ಕಣ್ಣಿಟ್ಟು
ಕೂಡಿಟ್ಟುಕೊ ಎಲ್ಲ ಲೆಕ್ಕವ ಒಳಗೆ
ಒಳಗೊಳಗೆ
ನಿನ್ನೊಳಗಿನ ಪರಿಧಿಯೊಳಗೆ
ಪರಿಧಿಯೊಳಗಿನ ಕೇಂದ್ರದೊಳಗೆ

*

ಚಿಂತ್ಯಾಕ ಚೆಲಿವಿಯ ಗುಂಗ್ಯಾಕ

ಕುರುಡು ಕನಡ್ಯಾಗ ನಿನ್ನ ಮಾರೀಯ ನೋಡೇನ
ಚಿಂತ್ಯಾಕ ಚೆಲಿವಿಯ ಗುಂಗ್ಯಾಕ| ನನ ಗಿಳಿಯೆ
ಕುಂತ್ಯಾಕ ಮಾಡತಿ ಕಾರುಣಿವಿ

ಕಿವುಡ ಕಣಿವ್ಯಾಗ ನಿನ್ನ ಬಲಾರಿ ಕೇಳೇನ
ಚಿಂತ್ಯಾಕ ಚೆಲಿವಿಯ ಗುಂಗ್ಯಾಕ| ನನ ಗಿಳಿಯೆ
ಅಂತರಲೆ ತೂರತಿ ಬಿಳಿಜ್ವಾಳ

ಅಡಗುಮರಿ ಹಾದ್ಯಾಗ ಮನಸ ಸೆರಿ ಹಿಡದೇನ
ಚಿಂತ್ಯಾಕ ಚೆಲಿವಿಯ ಗುಂಗ್ಯಾಕ| ನನ ಗಿಳಿಯೆ
ನಿಂತ್ಯಾಕ ಕುಡಿತಿ ಹದಮಜಿಗಿ

ನಿಂತ ನೀರಾಗ ನಿನ್ನ ನೆರಳ ಕೈ ಹಿಡದೇನ
ಚಿಂತ್ಯಾಕ ಚೆಲಿವಿಯ ಗುಂಗ್ಯಾಕ| ನನ ಗಿಳಿಯೆ
ಎದ್ದ್ಯಾಕ ಹೊಂಟಿ ಅರನಿದ್ದಿಗಿ

ಮೈಯಿಲ್ಲ ಚೆಲುವಿಲ್ಲ ಮಾಟದ ಮರಿಯಿಲ್ಲ
ತೊಳದ ಬಟ್ಟಲಕಿಂತ ಹಸನಿಲ್ಲ| ನನ ಗಿಳಿಯೆ
ಹಕ್ಕಲದ ರಾಶಿಗಿ ಪೂಜ್ಯಾಕ

ಕುಂತರ ಕೂಟ ನಿಂತರ ಮಾಟ
ಕುಂತ ನಿಂತ ಎದ್ದರ ಕೂಡ್ಯಾಟ| ನನ ಗಿಳಿಯೆ
ಹಂಗ್ಯಾಕ ಚೆಲಿವಿಯ ಗುಂಗ್ಯಾಕ

 

ಭುವನಾ ಪುಸ್ತಕಗಳು

ಪರಿಚಯ : 1984 ನವ್ಹೆಂಬರ್ 3ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸೋಮನಟ್ಟಿಯಲ್ಲಿ ಜನಿಸಿದ ಇವರು ಎಮ್.ಎಸ್ಸಿ ಭೌತಶಾಸ್ತ್ರ ಸ್ನಾತಕೋತ್ತರ ಪದವಿ ಹೊಂದಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಕತೆ ಹಾಗೂ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2018ನೇ ಸಾಲಿನಲ್ಲಿ ‘ಟ್ರಯಲ್ ರೂಮಿನ ಅಪ್ಸರೆಯರು’ ಎಂಬ ಮೊದಲ ಕವನ ಸಂಕಲನವನ್ನು ಪಲ್ಲವ ಪ್ರಕಾಶನ, ಹೊಸಪೇಟೆ ಇವರು ಪ್ರಕಟಿಸಿದ್ದಾರೆ. ಈ ಸಂಕಲನಕ್ಕೆ ‘ಕಾಜಾಣ ಯುವ ಪುರಸ್ಕಾರ-2019’ ‘ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ-2019’ ‘ಅಮ್ಮ ಪ್ರಶಸ್ತಿ-2019’ ‘ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ-2019’ ಗೌರವಗಳು ಲಭಿಸಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿ.ಎ ಕನ್ನಡ ಮೊದಲ ಚತುರ್ಮಾಸದ ಪಠ್ಯಕ್ಕೆ ‘ನೀಲಿ ಚಕ್ರಕ್ಕೆ ಕಾಲಿರಬೇಕಿತ್ತು’ ಎಂಬ ಪದ್ಯ ಆಯ್ಕೆಯಾಗಿದೆ.

ಇದನ್ನೂ ಓದಿ : Poetry : ಅವಿತಕವಿತೆ ; ಹಸಿವಿನ ಮುಂದೆ ಧ್ಯಾನ, ಮುದ್ರಿಕೆ, ನಾಥಪಟ್ಟ ಇವೆಲ್ಲವೂ ಶೂನ್ಯ

Published On - 12:05 pm, Sun, 8 August 21