Poetry: ಅವಿತಕವಿತೆ; ಲೆಕ್ಕಕ್ಕೆ ಸಿಗದ ಪಾಪದ ಹೂವುಗಳ ಪರಿಮಳದ ನೀರೆಲ್ಲ ನದಿಯಾಗಿ ಹರಿಯುತ್ತಿದೆ

|

Updated on: Apr 24, 2022 | 10:22 AM

Poem : ಕೊಡುವುದರಲ್ಲಿ ಧಾರಾಳವಾದ ಹೆಣ್ಣು ಪಡೆದಿದ್ದು ಏನು ಎಂಬ ಪ್ರಶ್ನೆ ಇಲ್ಲಿ ವಿನಿಯಮದ ಮೂಲಕ ಹೊಸ ನೆಲೆಯನ್ನು ಪಡೆದುಕೊಂಡಿದೆ. ಅಮೃತ ಈಗ ಬಣ್ಣಗೆಟ್ಟ ನೀರಾಗುತ್ತದೆ. ದೇವತೆಗಳ ಕಣ್ಣಿರಿದ ಪ್ರಶ್ನೆ ಉರ್ಮಿಳೆಯ ಕಣ್ಣೊಳಗೂ ಇಳಿದು ನಿಲ್ಲುತ್ತವೆ.

Poetry: ಅವಿತಕವಿತೆ; ಲೆಕ್ಕಕ್ಕೆ ಸಿಗದ ಪಾಪದ ಹೂವುಗಳ ಪರಿಮಳದ ನೀರೆಲ್ಲ ನದಿಯಾಗಿ ಹರಿಯುತ್ತಿದೆ
Follow us on

ಅವಿತಕವಿತೆ | Avithakavithe : ನಾನು ಕಥೆ ಬರೆಯುತ್ತೇನೆ, ಲೇಖನ ಬರೆಯುತ್ತೇನೆ, ಪ್ರಬಂಧವನ್ನೂ ಬರೆಯುತ್ತೇನೆ. ಆದರೆ ಕವಿತೆ ನನ್ನಿಷ್ಟದ ಪ್ರಕಾರ, ನನಗೆ ನೋವಾಗಲಿ, ಬೇಸರವಾಗಲಿ, ಸಿಟ್ಟಾಗಲಿ, ಖುಷಿಯಾಗಲಿ…ಒಟ್ಟಾರೆ ಭಾವನೆಗಳ ಏರುಪೇರಾದಾಗಲೆಲ್ಲ ನಾನು ಮೊರೆ ಹೋಗುವುದು ಕವಿತೆಗೆ. ಏನೋ ಒಂದಷ್ಟು ಸಾಲುಗಳು ಥಟ್ಟನೆ ಹೊಳೆದು ಅದು ಆಚೆ ಬಂದಾಗಲೇ ನಾನು ಬಿಡುಗಡೆಯ ನಿಟ್ಟುಸಿರು ಬಿಡುವುದು. ನಾನೊಬ್ಬ ಪತ್ರಕರ್ತೆ. ಸದಾಕಾಲ ಜಗತ್ತಿನ ಆಗುಹೋಗುಗಳಿಗೆ ಕನೆಕ್ಟ್ ಆಗುತ್ತಲೇ ಇರಬೇಕಾದ ಅನಿವಾರ್ಯತೆಯಿರುತ್ತದೆ. ಯುದ್ಧ, ಅಪರಾಧ, ಶೋಷಣೆ, ನಿಂದನೆ, ಅವಮಾನದಂತಹ ಸಂಗತಿಗಳು, ಮನುಷ್ಯ ಮನುಷ್ಯನನ್ನು, ಜೀವ ಸಂಕುಲವನ್ನೇ ಮರೆತಂತೆ ವರ್ತಿಸುವಂತಹ ಅನೇಕ ಘಟನೆಗಳು ಮನಸ್ಸಿನ ಮೇಲೆ ದಾಳಿ ಇಡುತ್ತಲೇ ಇರುತ್ತವೆ. ಇಂತಹ ಘಾಸಿಮಾಡುವ ಸಂಗತಿಗಳಿಂದ ಹುಟ್ಟುವ ತಳಮಳಗಳಿಗೆ ಹಚ್ಚುವ ಮುಲಾಮಿನಂತೆ ಈ ಕವಿತೆಗಳು.
ಭಾರತಿ ಹೆಗಡೆ (Bharathi Hegde)

 

ಅವಳ ಕಣ್ಣೊಳಗಿಳಿದ ಪ್ರಶ್ನೆ

ಅವಳು
ಬೊಗಸೆ ತುಂಬ ಮಧುವ ಹಿಡಿದು ನಿಂತವಳು
ಒಂದು ನಡುಮಧ್ಯಾಹ್ನ ವಯ್ಯಾರವಾಗಿ ನಡೆದು ಬಂದವಳು
ಅದೆಷ್ಟು ಸುರಿದರೂ ಬರಿದಾಗದ ಪಾತ್ರೆಯದು
ಕುಡಿಕುಡಿದು… ಕುಡಿಯುತ್ತಲೇ ಇದ್ದರೂ…
ಇಂಗದ ಅವನ ದಾಹ

ಇವಳು ಮಲ್ಲಿಕಾ
ಬಿರಿದ ಮಲ್ಲಿಗೆಯಂಥವಳು
ಒಂದು ಮುಂಜಾನೆ ಮುಸುಕಿದ ಮಂಜನ್ನು ಸರಿಸುತ್ತ
ಎದ್ದು ಬಂದಳು ದೇವತೆಯಂತೆ
ನಡೆದು ಹೋದ ಹಾದಿಯ ತುಂಬ ಅದೆಷ್ಟು
ಮಲ್ಲಿಗೆಯ ಘಮಲು?

ಇಳಿಸಂಜೆಯಲ್ಲೊಬ್ಬಳು ಊರ್ಮಿಳೆ
ಯುಗಾಂತರದ ವನವಾಸದಲ್ಲೇ ಮಿಂದವಳು
ವಿರಹದ ತಾಪವನ್ನೆಲ್ಲ ನುಂಗಿಕೊಂಡವಳ
ಹೊಕ್ಕಳಿನಾಳಕ್ಕೆ ಬೆಳಕ ರೇಖೆಯ ಹರಿಸಿದವನು
ಹಿಡಿದಿದ್ದಳು ಗಟ್ಟಿಯಾಗಿ
ಈ ಮಣ್ಣೊಳಗಿನ ಬೇರಿನಂತೆ
ಮರವಾಗಬೇಕೆಂದುಕೊಂಡಳು

ಇಳಿಸಂಜೆಗೆಂಪು
ಆಕಾಶದ ತುಂಬೆಲ್ಲ ಓಕುಳಿಯ ರಂಗು
ಬಣ್ಣದ ನೀರಿನೊಳಗಿಂದ ಅಮೃತದ ಬಿಂದುವೊಂದು
ನೆಲಕ್ಕೆ ಬಿದ್ದು ಹೊರಳಾಡುತ್ತಿತ್ತು
ಅವಳ ತೆಕ್ಕೆಯೊಳಗೆ ಅಮೃತದ ಕಳಶವನ್ನೇ ಕುಡಿದವನ
ಲೆಕ್ಕಕ್ಕೆ ಸಿಗದ ಪಾಪದ ಹೂವುಗಳ
ಪರಿಮಳದ ನೀರೆಲ್ಲ ನದಿಯಾಗಿ ಹರಿಯುತ್ತಿದೆ

ಮುಂಜಾನೆ ಮಧ್ಯಾಹ್ನ ಇಳಿಸಂಜೆ
ಘೀಳಿಡುವ ನಡುರಾತ್ರಿಗಳಿಗೂ
ಬೇಕು ಪಾರಿಜಾತದ ಪರಿಮಳದ ಅಮಲು…!

ಅಮೃತವಿತ್ತ ಮೋಹಿನಿ ದೇವತೆಯರ ಕಣ್ಣಿರಿದ ಪ್ರಶ್ನೆ
ಊರ್ಮಿಳಾ ಕಣ್ಣೊಳಗೂ ಇಳಿದು ನಿಂತವು
ತಿರುಗಿನಿಂತ ಪ್ರಶ್ನೆಗಳಿಗೆ
ಚೆಲ್ಲಿದಳು ಬಣ್ಣಗೆಟ್ಟ ನೀರನ್ನು
ವಿಷಾದವಿರದ ನಡು ಹಾದಿಯಲ್ಲಿ

ಪುರಾಣದ ಪ್ರತಿಮೆಗಳನ್ನು ಬಳಸಿ ಕವಿತೆ ಕಟ್ಟುವ ಪರಂಪರೆ ನಮ್ಮಲ್ಲಿ ಮೊದಲಿಂದಲೂ ಇದೆ. ಗೋಪಾಲಕೃಷ್ಣ ಅಡಿಗರು ಅದನ್ನು ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ಹೈಪರ್ ಲಿಂಕ್​ ನಂತೆ ಕೊಟ್ಟು ವಿಸ್ತರಿಸಿದರು. ಈ ಕವಿತೆ ಇಂತಹ ಮಾದರಿಯನ್ನೇ ವಿವರಗಳಲ್ಲಿ ಕಟ್ಟುವ ಪ್ರಯತ್ನ. ಇಲ್ಲಿ ಮೋಹಿನಿ ಮತ್ತು ಊರ್ಮಿಳೆಯ ರೂಪಕಗಳನ್ನು ಆಧುನಿಕ ನೆಲೆಯಲ್ಲಿ ಹಿಡಿಯಲು ಪ್ರಯತ್ನ ಪಡಲಾಗಿದೆ. ಕೊಡುವುದರಲ್ಲಿ ಧಾರಾಳವಾದ ಹೆಣ್ಣು ಪಡೆದಿದ್ದು ಏನು ಎಂಬ ಪ್ರಶ್ನೆ ಇಲ್ಲಿ ವಿನಿಯಮದ ಮೂಲಕ ಹೊಸ ನೆಲೆಯನ್ನು ಪಡೆದುಕೊಂಡಿದೆ. ಅಮೃತ ಈಗ ಬಣ್ಣಗೆಟ್ಟ ನೀರಾಗುತ್ತದೆ. ದೇವತೆಗಳ ಕಣ್ಣಿರಿದ ಪ್ರಶ್ನೆ ಉರ್ಮಿಳೆಯ ಕಣ್ಣೊಳಗೂ ಇಳಿದು ನಿಲ್ಲುತ್ತವೆ. ಇಡೀ ಕವಿತೆಯ ಶಕ್ತಿ ಇರುವುದು ಅದರ ಚಿತ್ರಕಶಕ್ತಿಯಲ್ಲ ಅಮೂರ್ತವಾದದ್ದನ್ನು ಮೂರ್ತ ವಿವರಗಳಲ್ಲಿ ಹಿಡಿಯುವ ವಿನ್ಯಾಸವೇ ವಿಭಿನ್ನ ಎನ್ನಿಸುತ್ತದೆ. ಇದು ಗದ್ಯದ ನೆಲೆಯಲ್ಲಿಯೇ ಸಾಗಿದರೂ ಕವಿತೆಯ ಸೂಕ್ಷ್ಮಗಳನ್ನು ತನ್ನ ಅಭಿವ್ಯಕ್ತಿಯ ಮೊಗ್ಗಲುಗಳಲ್ಲಿ ಸಾಧಿಸಿಕೊಂಡ ಕವಿತೆ. ಒಟ್ಟಾಗಿ ನೋಡುವಾಗ ಇದರ ಕೇಂದ್ರ ಪ್ರಜ್ಞೆ ಎಲ್ಲಿ? ಎಂದು ಹೇಳುವುದು ಕಷ್ಟ. ಇಂತಹ ವಿನ್ಯಾಸ ಕೂಡ ಒಂದು ರೀತಿಯಲ್ಲಿ ಅಪೇಕ್ಷಿತವೇ!
ಎನ್.ಎಸ್.ಶ್ರೀಧರ ಮೂರ್ತಿ

*

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾರತಿ ಹೆಗಡೆಯವರ ಈ ಅನುಭವಕಥನವನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಸಾಕಷ್ಟು ಹೂವುಗಳು ಸಿಕ್ಕವು ಮುಳ್ಳು ಸರಿಸಿ ಎತ್ತಿಕೊಂಡೆ

ಅವಿತಕವಿತೆ : Poetry: ಅವಿತಕವಿತೆ; ‘ಗೆದ್ದೆನೆಂಬ ಭಾವದಲ್ಲಿ ಬೀಗುವಾಗಲೇ ಮತ್ತೆಲ್ಲೋ ಹೊಲಿಗೆ ಬಿಚ್ಚಿರುತ್ತದೆ’

 

Published On - 9:45 am, Sun, 24 April 22