Poetry: ಅವಿತಕವಿತೆ; ಮನುಷ್ಯ ತನ್ನ ತಲವಾರಿನಲ್ಲೇ ತನ್ನ ಕ್ರೌರ್ಯವ ವಧಿಸುವ ಹಾಗೆ
Writing: ಪದ್ಯ ಒಂದೇ ಸಲಕ್ಕೆ ಎಡಿಟಿಂಗ್ ಇಲ್ಲದೆ ತಾನೇ ಬರೆಸಿಕೊಂಡು ಹೋಗಬಹುದು ಅಥವಾ ಒತ್ತಾಯಿಸಿ ಬಾರೆನೆಂದು ಧರಣಿಗೆ ಕೂರಲೂಬಹುದು. ಕೊನೆಗೆ ಅದನ್ನು ಚಿತ್ತೈಸಿ ಅದು ಹೊಮ್ಮುವ ಹಾಗೆ ಮಾಡಿದಾಗ ವಿಭಿನ್ನ ರೀತಿಯ ಆಹ್ಲಾದ ಉಂಟಾಗುವುದು.
ಅವಿತಕವಿತೆ | AvitaKavite : ಕಾವ್ಯ ರಚನೆಯ ಪ್ರಕ್ರಿಯೆ ನನಗೆ ಬಹಳ ಹಿಡಿಸುತ್ತದೆ. ಒಂದು ಅದು ರೀತಿಯಲ್ಲಿ ಸುಲಭವಾಗಿ ಒಪ್ಪಿಕೊಳ್ಳುದ ಇನಿಯ/ಇನಿಯೆಯ ಹಾಗೆ. ಯಾವುದೂ ಅತಿಯಾಗುವಂತಿಲ್ಲ, ರಮಿಸುವುದು ಕೂಡ ಸ್ವಲ್ಪ ಮಿತಿಯಲ್ಲಿಯೇ. ಚೌಕಾಸಿ ಮಾಡಿ ಪದಗಳನ್ನು ತುಂಡರಿಸಿ, (ಕೆಲವೊಮ್ಮೆ) ಪ್ರಾಸಕ್ಕೆ ಸಿಲುಕಿಸುವ ಅಥವಾ ಮೊದಲು ಹೊಳೆದ ಉಪಮೆಗಿಂತ ಇನ್ನೊಂದು ಸುಂದರ ಉಪಮೆ ತನಗೆ ತಾನೇ ಉದ್ಭವ ಆಗುವ ಪ್ರಕ್ರಿಯೆ ತುಂಬಾ ಸಂತಸ ಮೂಡಿಸುತ್ತದೆ. ಒಂದು ರೀತಿಯಲ್ಲಿ ಇದು ಸೈಕಲ್ ಕಲಿಯುವ ಹಾಗೆ. ಸೈಕಲ್ ಕಲಿಯುವಾಗ ಕ್ರಮೇಣ ಬೀಳುವ ಹೆದರಿಕೆ ಮಾಯವಾಗಿ ಬ್ಯಾಲೆನ್ಸ್ ಮೂಡಿದಾಗ ಆಗುವ ಸುಖ, ಆನಂದವನ್ನು ಕವನಗಳು ಹುಟ್ಟಿಸುತ್ತವೆ. ಪದ್ಯ ಸುಲಭವಾಗಿ ಎಡಿಟಿಂಗ್ ಇಲ್ಲದೆ ತನಗೆ ತಾನೇ ಬರೆಸಿಕೊಂಡು ಹೋಗಬಹುದು, ಅಥವಾ ಹಲವಾರು ಬಾರಿ ಯೋಚನೆ ಮಾಡಲು ಒತ್ತಾಯಿಸಿ ಬಾರೆನೆಂದು ಧರಣಿಗೆ ಕೂರಲೂಬಹುದು. ಕೊನೆಗೆ ಅದನ್ನು ಚಿತ್ತೈಸಿ ಅದು ಹೊಮ್ಮುವ ಹಾಗೆ ಮಾಡಿದಾಗ ವಿಭಿನ್ನ ರೀತಿಯ ಆಹ್ಲಾದ ಉಂಟಾಗುವುದು. ಹಾಗಾಗಿ ನನಗೆ ಕವನಗಳನ್ನು ಬರೆಯುವುದೆಂದರೆ ಬಹಳ ಇಷ್ಟ. ಮುಕುಂದ ಸೆಟ್ಲೂರ (Mukund Setlur)
ಒಂದು ಕಥೆ ಹುಟ್ಟಿಸು ಮಾಂಟೋ
ಒಂದು ಕಥೆ ಹುಟ್ಟಿಸು ಮಾಂಟೋ, ಆ ಕಥೆಯಲ್ಲಿ ನೀ ವರ್ಣಿಸಿದ ಸಿಮೆಂಟ್ ಗೋಡೆಯ ಮೇಲೆ ಹಠ ಬಿದ್ದು ಬೆಳೆದ ಅರಳಿಮರದ ಸಸಿಯ ನಿಷ್ಕಲ್ಮಶ ಹಸಿರು ಬಣ್ಣವಿರಲಿ ಹರಾಮಿ ಗಿರಾಕಿಗಳ ಪರ್ಸು ಖಾಲಿ ಮಾಡಿಸಿ ಅವರ ನಗುತ್ತ ಸಾಗು -ಹಾಕೋ ಯುಕ್ತಿಯುಳ್ಳ ಸೂಳೆಯೊಬ್ಬಳು ಆಗಂತುಕನ ಪ್ರೇಮದ ಸುಳಿಯಲ್ಲಿ ಬೀಳುವ, ಉತ್ಕಟ ಪ್ರೀತಿಯಿರುವ ಕಥೆ ಹುಟ್ಟಿಸು ಮಾಂಟೋ, ಕಂಠಪೂರ್ತಿ ಕುಡಿಯುವುದಕ್ಕೆ ದುಡ್ಡು ಶೇಖರಿಸುವ ಆಸೆ ತೊರೆದು ಅನಿಶ್ಚಿತ ತಿರುವಿನ ಸುಖಕ್ಕಾಗಿ ಕಥೆ ಹುಟ್ಟಿಸು ಮಾಂಟೋ, ಕಥೆ ಹುಟ್ಟಿಸು ಮಾಂಟೋ, ಆ ಕಥೆಯ ಓದಿ ಮನುಷ್ಯ ತನ್ನ ತಲವಾರಿನಲ್ಲೇ ತನ್ನ ಕ್ರೌರ್ಯವ ವಧಿಸುವ ಹಾಗೆ ಒಂದಾದರೂ ಕಥೆ ಹುಟ್ಟಿಸು ಮಾಂಟೋ.
ಕವಿತೆ ಅವರದು ನೋಟ ನಿಮ್ಮದು
ತನ್ನ 42 ನೇ ವಯಸ್ಸಿನಲ್ಲಿಯೇ ಈ ಲೋಕದಿಂದ ನಿರ್ಗಮಿಸಿದ ಮಾಂಟೋ ಅಲ್ಪಾಯುಷ್ಯದ ಬಾಳನ್ನು ಆಗಾಧವಾಗಿ ಬದುಕಿದ. ಬದುಕಿರುವಷ್ಟು ಕಾಲ ಕಡುಕಷ್ಟಗಳನ್ನೇ ಬದುಕಿದ ಅವನು, ವಿಭಜನೆಯ ಮತೀಯ ಹಿಂಸಾಚಾರ ನರಹತ್ಯೆಗಳಿಗೆ ಸಾಕ್ಷಿಯಾದವನು. ರಕ್ತಸಿಕ್ತ ವಿಭಜನೆ, ಗಾಯಗೊಂಡ ಭಾರತ ಮಾಂಟೊನನ್ನು ರೂಪಿಸಿತು. ಮಾಂಟೊನಂತೆಯೇ ತೀಕ್ಷವಾಗಿ ಕಟುವಾಗಿ ರೋಗಗ್ರಸ್ತ ಸಮಾಜದ ಕೊಳಕನ್ನು, ಮನುಷ್ಯನ ಕ್ಷುದ್ರತೆಯ ಮುಖವಾಡವನ್ನು ತನ್ನ ಹರಿತವಾದ ಲೇಖನಿಯಿಂದ ಕಿತ್ತೊಗೆದು ಸಮಾಜವನ್ನು ಬದಲಿಸುವ ಆಶಯ ಈ ಕವಿತೆಯಲ್ಲಿದೆ. ವಿಭಜನೆ ಸೃಷ್ಟಿಸಿದ್ದ ಹಾಹಾಕಾರ, ಮತಾಂಧರ ಕ್ಷುದ್ರತೆ, ಜನರ ದಾರುಣತೆಗೆ ಕರಗಿದ, ಮರುಗಿದ, ನೊಂದ ಮಾಂಟೋ ಕುಡಿತಕ್ಕೆ ಬಲಿಬಿದ್ದ. ಮನುಷ್ಯಲೋಕವೇ ತನ್ನ ಕ್ರೌರ್ಯಕ್ಕೆ ಬೆಚ್ಚಿಬೀಳಿಸುವಂತಹ ಕತೆಗಳನ್ನು ಬಿಟ್ಟುಹೋಗಿದ್ದಾನೆ.
ನಿದ್ದೆಗೆಡಿಸಿ ಕಾಡುವ ಮಾಂಟೋ, ಬೆತ್ತ ಹಿಡಿದು ಬೆಂಬತ್ತುವ ಮಾಂಟೋ ಬೆತ್ತಲೆಯನ್ನು ಬೆತ್ತಲೆ ಎಂದೇ ಬರೆದ, ಮನುಷ್ಯನ ಮುಖವಾಡಗಳನ್ನು ಕಳಚಿ ಇದ್ದುದನ್ನು ಇದ್ದಂತೇ ಹಸಿಹಸಿಯಾಗಿಯೇ ಬರೆದ ತಪ್ಪಿಗೆ ಅನೇಕ ಸಲ ಜೈಲಿಗೂ ಹೋಗಬೇಕಾಯಿತು. ಮಾಂಟೋ ಹೇಳುತ್ತಾನೆ – ನಾನು ದಂಗೆಯೇಳುತ್ತೇನೆ, ನಮ್ಮಿಂದ ದುಡಿಸಿಕೊಂಡು ಅದಕ್ಕೆ ತಕ್ಕ ಸಂಬಳನೀಡದ ಪ್ರತಿಯೊಬ್ಬನ ವಿರುದ್ಧ ದಂಗೇಯೇಳಬಯಸುತ್ತೇನೆ.
‘ನಾನು ಯಾವ ಕಾಲದಲ್ಲಿ ಹೇಗೆ ಜೀವಿಸಿದ್ದೆ ಎಂದು ನಿಮಗೆ ಗೊತ್ತಿರದಿದ್ದರೆ ನನ್ನ ಸಣ್ಣ ಕತೆಗಳನ್ನು ಓದಿ. ಒಂದುವೇಳೆ ನೀವು ಆ ಕತೆಗಳನ್ನು ಓದಿ ಅರಗಿಸಿಕೊಳ್ಳಲಾರಿರಿ ಎಂದರೆ ಆ ಕಾಲ ಅದೆಷ್ಟು ಅಸಹನೀಯವಾಗಿತ್ತು! ನನ್ನೊಳಗಿನ ಎಲ್ಲಾ ದುರ್ಗುಣಗಳು ಆ ಕಾಲದ ಕೇಡುಗಳು. ನನ್ನ ಬರವಣಿಗೆಯಲ್ಲಿ ಯಾವ ಕೆಡಕೂ ಇಲ್ಲ. ಯಾವ ಕೆಡಕನ್ನು ನನ್ನ ಹೆಸರಿಗೆ ಮೆತ್ತಲಾಗಿದೆಯೋ ಅದು ಅಂದಿನ ವ್ಯವಸ್ಥೆಯ ಕೆಡಕು!’ ಎನ್ನುವ ಮಾಂಟೋ. ಒಬ್ಬ ಪತ್ರಕರ್ತ ಮತ್ತು ಬರಹಗಾರನಿಗಿರಬೇಕಾದ ನೈತಿಕ ಜವಾಬ್ದಾರಿಯನ್ನು ಸಹಜವಾಗಿಯೇ ನಿಭಾಯಿಸಿದ್ದಾನೆ.
ಇದನ್ನೂ ಓದಿ : Poetry : ಅವಿತಕವಿತೆ; ಪೆದ್ದಾ, ನನ್ನ ಪ್ರಾಣಪ್ರಿಯವಾದ ಕೊಂಡಿ ನೀನು
ಪ್ರಸ್ತುತ ಕವಿತೆಯೂ ಹಾಗೇ ಮಾಂಟೋನನ್ನು ತೀವ್ರವಾಗಿ ಹಚ್ಚಿಕೊಂಡ ಅಭಿಮಾನಿಯಿಂದ ಬರೆಸಿಕೊಂಡಿದೆ. ಒಂದು ನಿವೇದನೆಯೆಂಬಂತೆ ಕವಿ ತಾನು ಕಾಣಬಯಸುವ ಸಮಾಜವನ್ನು, ತನ್ನ ಆಶಯಗಳನ್ನು ಕವಿತೆಯ ಮೂಲಕ ಪೋಣಿಸಿದ್ದಾರೆ.
‘ಕಥೆ ಹುಟ್ಟಿಸು ಮಾಂಟೋ’ ಎನ್ನುವ ಕವಿ ಕಾಂಕ್ರೀಟಿನಲ್ಲಿಯೂ ಚಿಗಿತು ಬೆಳೆಯುವ ಅರಳಿಮರದ ಹಸಿರನ್ನು, ಗಿರಾಕಿಗಳಿಂದಲೇ ಮೋಸಹೋಗುವ ಸೂಳೆಗೆ ಹಿಡಿಯಷ್ಟು ಪ್ರೀತಿಯನ್ನು ಬಯಸುತ್ತಾರೆ. ‘ಪ್ರತಿ ಹೆಣ್ಣೂ ವೇಶ್ಯೆಯಾಗಿರುವುದಿಲ್ಲ, ಆದರೆ ಪ್ರತಿಯೊಬ್ಬ ವೇಶ್ಯೆಯೂ ಹೆಣ್ಣಾಗಿರುತ್ತಾಳೆಂಬುದನ್ನು ಮರೆಯಬಾರದು’ ಎನ್ನುವ ಮಾಂಟೊ ಇಲ್ಲಿ ನೆನಪಾಗುತ್ತಾನೆ.
ಹಣ, ಪ್ರತಿಷ್ಠೆಯ ಬೆನ್ನೇರುತ್ತ ಆಯುಷ್ಯವನ್ನು ಕಳೆದುಕೊಂಡುಬಿಡುವ ನಾವೆಲ್ಲರೂ ಬದುಕಿನ ಒಂದು ತಿರುವಿನಲ್ಲಿ ನಾವು ನಿಜವಾಗಿಯೂ ಬದುಕಿದ್ದೇವಾ ಅಂತ ಪ್ರಶ್ನಿಸಿಕೊಂಡರೆ ಉತ್ತರ ಬಹಳ ನೋವಿನದಾಗಿರುತ್ತದೆ. ಅರೆ… ಕಳೆದೇ ಹೋಯ್ತಾ ಆಯುಷ್ಯ ಎನಿಸುವಷ್ಟು ಹತಾಶೆಯದು. ಮನುಷ್ಯ ತನ್ನೊಳಗಿನ ಕ್ರೌರ್ಯವನ್ನು ಸಾಯಿಸಿದಾಗಲೇ ಅವನಿಗೆ ನೆಮ್ಮದಿಯ ಶಾಂತಿಯ ಅಪಾರ ಪ್ರೀತಿಯ ಬದುಕು ದೊರೆಯುತ್ತದೆ ಎನ್ನುವ ಅರಿವನ್ನೂ ಇಲ್ಲಿ ಕವಿ ಕಾಣುತ್ತಾರೆ.
ಕವಿ ಮುಂದೊಂದು ದಿನ ಮಾಂಟೋನನ್ನೇ ತನ್ನೊಳಗೆ ಆವಾಹಿಸಿಕೊಂಡು ಕಥೆ ಹುಟ್ಟಿಸುವಂತಾಗಬಹುದು, ಅದುವರೆಗೂ ಕಾಲವಿನ್ನೂ ಹದಗೊಳ್ಳಬೇಕು, ಹುತ್ತಗಟ್ಟಬೇಕು ಕಥೆಯೊಂದು ಹುಟ್ಟಿಬರಲು ಎನಿಸುತ್ತದೆ. ರೇಣುಕಾ ನಿಡಗುಂದಿ, ಲೇಖಕಿ, ಅನುವಾದಕಿ
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 8:14 am, Sun, 22 May 22