Poetry: ಅವಿತಕವಿತೆ; ಆಗಿನ್ನೂ ಮಸೀದಿಗಳೇ ನನಗೆ ಎಟುಕಿರಲಿಲ್ಲ, ಇನ್ನು ಪಾಕಿಸ್ತಾನ ಗೊತ್ತಾಗುವುದು ಹೇಗೆ?
Breast Tax : ‘ನಮ್ಮಜ್ಜಿಯಂದಿರು ಎದೆಮುಚ್ಚಲು ಮೊಲೆ ತೆರಿಗೆ ಕಟ್ಟುತ್ತಿದ್ದ ಕಾಲದಲ್ಲಿ ನನ್ಮಜ್ಜನೂ ನಿಮ್ಮಜ್ಜನೂ ಒಬ್ಬನೇ ಆಗಿದ್ದ. ಮತ್ತೆ ನಾನು ಹೊರಡುವುದಾದರೂ ಎಲ್ಲಿಗೆ?’ ಮುನೀರ್ ಕಾಟಿಪಳ್ಳ
ಅವಿತಕವಿತೆ | AvithaKavithe : ನಾನು ಮೂಲತಃ ಸಾಮಾಜಿಕ ಕಾರ್ಯಕರ್ತ. ಹಲವು ಹೋರಾಟಗಳಲ್ಲಿ, ಸಮಾವೇಶಗಳಲ್ಲಿ ಭಾಷಣ ಮಾಡುತ್ತಿರುತ್ತೇನೆ. ಕೆಲವು ಘಟನೆ, ಬೆಳವಣಿಗೆಗಳು ಮನಸ್ಸನ್ನು ತೀವ್ರವಾಗಿ ತಟ್ಟಿರುತ್ತದೆ. ಅದನ್ನು ಭಾಷಣಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಆಗ ಕವಿತೆ ನೆರವಿಗೆ ಬರುತ್ತದೆ. ಅದು ಸಶಕ್ತವಾಗಿ ಭಾವನೆಗಳನ್ನು ಓದುಗರಿಗೆ ದಾಟಿಸುತ್ತದೆ. ಮನಸ್ಸನ್ನೂ ಹಗುರವಾಗಿಸುತ್ತದೆ. ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಅಫ್ ಇಂಡಿಯಾ (DYFI) ಇದರ ರಾಜ್ಯ ಸಮಿತಿ ಅಧ್ಯಕ್ಷ. ಎರಡು ದಶಕಗಳಿಂದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕೋಮುಸೌಹಾರ್ದತೆ, ಪರಿಸರ ಪ್ರಶ್ನೆಗಳು, ಕಾರ್ಮಿಕರ ಪ್ರಶ್ನೆಗಳು, ಅನ್ಯಾಯಕ್ಕೊಳಗಾದವರ ಪರ ನಿಲ್ಲುವುದು ಹೋರಾಟಗಳನ್ನು ಸಂಘಟಿಸುವುದು ಆಸಕ್ತಿಯ ವಿಷಯ. ಚಳವಳಿಗೆ ಬರುವ ಮುಂಚಿತವಾಗಿ ಮಲೆನಾಡು ಜಿಲ್ಲೆಗಳಲ್ಲಿ ಜವಳಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೆ. ನನ್ನದು ಬೀಡಿ ಕಾರ್ಮಿಕ ಕುಟುಂಬದ ಹಿನ್ನಲೆ. ಮುನೀರ್ ಕಾಟಿಪಳ್ಳ (Muneer Katipalla)
ಹೊರಡು ಇಲ್ಲಿಂದ ಎಂದು ಆರ್ಭಟಿಸುತ್ತಿದೆ ಗುಂಪು ಹೋಗುವುದಾದರು ಎಲ್ಲಿಗೆ? ಹೊರಡುವುದಾದರು ಎಲ್ಲಿಂದ? ಹೊರದಬ್ಬುವ ಮುಂಚೆ ನನ್ನೆರಡು ಮಾತುಗಳನ್ನು ಕೇಳಿಸಿಕೊಳ್ಳಿ ತಮ್ಮಂದಿರೆ
ವ್ಯಾಪಾರ ಮಾಡುವಂತಿಲ್ಲ ನೀನು ಸಿದ್ದಪಡಿಸಿದ ಆಹಾರವೂ ಹರಾಂ ನೀನು ತೊಡುವ ಬಟ್ಟೆ, ನೀನು ನಡೆಸುವ ಆರಾಧನೆ ಎಲ್ಲವೂ ಈ ನೆಲದಲ್ಲಿ ನಿಷೇಧಿಸಿದ್ದೇವೆ ಎದ್ದು ಹೊರಡು ಇಲ್ಲಿಂದ ಎಂದು ಕಣ್ಣಲ್ಲೇ ಸುಡುತ್ತಿದ್ದೀರಲ್ಲ!
ಅರೆ, ಹೋಗುವುದಾದರು ಎಲ್ಲಿಗೆ? ತಾಯಿ ಗರ್ಭದಿಂದ ಈ ಮಣ್ಣಿಗೇ ಬಿದ್ದವನು ನಾನು ನನ್ನ ಅಜ್ಜನ ತಾತನದ್ದೂ ಇದೇ ಕತೆ ಎಷ್ಟು ಪುರಾತನ ಅಂತ ಕೇಳಿದಿರಾ? ನಿಮ್ಮ ಇತಿಹಾಸದಷ್ಟೇ ದೀರ್ಘ ಬೇಕಿದ್ದರೆ ನಿಮ್ಮ ಅಜ್ಜನ ತಾತನಲ್ಲಿ ಕೇಳಿರಿ
ಅಂದು ಕಾಫಿ, ಏಲಕ್ಕಿ ತೋಟದಲ್ಲಿ ಧಣಿಗಳ ಮನೆಯ ಜೀತದ ದುಡಿಮೆಯಲ್ಲಿ ಕುಲೀನರಿಗೆ ನಮ್ಮ ನೆರಳು ಸೋಕದಂತೆ ನಡೆಯಬೇಕಾಗಿದ್ದ ದಿನಮಾನದಲ್ಲಿ ನಮ್ಮಜ್ಜಿಯಂದಿರು ಎದೆಮುಚ್ಚಲು ಮೊಲೆ ತೆರಿಗೆ ಕಟ್ಟುತ್ತಿದ್ದ ಕಾಲದಲ್ಲಿ ನನ್ನಜ್ಜನೂ ನಿಮ್ಮಜ್ಜನೂ ಒಬ್ಬನೇ ಆಗಿದ್ದ ಮತ್ತೆ ನಾನು ಹೊರಡುವುದಾದರೂ ಎಲ್ಲಿಗೆ
ನನ್ನಜ್ಜ ಅಲ್ಲಾ ಕೂಗಲು ಕಲಿತ ಹೌದು ಆತನಿಗೇನು ಸ್ವರ್ಗ ಸಾಧನೆಯ ಉತ್ಕಟ ಬಯಕೆಯಿರಲಿಲ್ಲ ಈ ತಾರತಮ್ಯದ ನರಕದಿಂದ ತಪ್ಪಿಸಿಕೊಳ್ಳಬೇಕಿತ್ತು ಒಂದೇ ಬಾವಿಯ ನೀರು ಕುಡಿಯುವುದು ಒಂದೇ ಸಾಲಿನಲ್ಲಿ ಕೂತು ಉಣ್ಣುವುದು ವಯಸ್ಸಿಗೆ ಬಂದ ಮೊಮ್ಮಗಳು ಎದೆಯ ಮೇಲೆ ಬಟ್ಟೆ ತೊಡುವುದು ಇಷ್ಟೆ, ಹೌದು ಇಷ್ಟಕ್ಕಾಗಿಯೇ ಆತ ಸೂಫಿಯ ಸಂಗ ಮಾಡಿದ ಈಗ ಹೊರಡುವುದಾದರೂ ಎಲ್ಲಿಂದ!
ಇಂದು ನಿಮ್ಮ ಕೈಗೆ ಬಡಿಗೆ ನೀಡಿದವರನ್ನು ಒಮ್ಮೆ ಕೇಳಿ ಬಿಡಿ ಅಂದು ಒಂದೇ ಸಾಲಿನಲ್ಲಿ ಊಟಕ್ಕೆ ಕೂತಿದ್ದರೆ ಊರ ಬಾವಿಯ ನೀರು ಸೇದಲು ಬಿಟ್ಟಿದ್ದರೆ ನಮ್ಮ ಅಮ್ಮಂದಿರ ಎದೆಯ ಮೇಲೆ ಬಟ್ಟೆ ಧರಿಸಲು ತೆರಿಗೆ ಹಾಕದಿರುತ್ತಿದ್ದರೆ ಈ ಸಂತೆ ವ್ಯಾಪಾರಿಯ ಅಜ್ಜ ಸೂಫಿಯ ಸಂಗಕ್ಕೆ ಬೀಳುತ್ತಿದ್ದನೇ ? ಅಲ್ಲಾನನ್ನು ಕೂಗುತ್ತಿದ್ದನೇ ? ಉತ್ತರ ಸಿಗದೇ ನಾನು ಹೊರಡುವುದಾದರು ಎಲ್ಲಿಗೆ ?
ಅಂದು ಊರ ಬಾಗಿಲಿನಿಂದ ನನ್ನನ್ನೂ, ನಿಮ್ಮನ್ನೂ ಒಟ್ಟಿಗೆ ಹೊರದಬ್ಬಲಾಗಿತ್ತು ಜಾತ್ರೆಯ ಸಂತೆಗೂ, ದೇವರ ಅಂಗಲಕ್ಕೂ ಅಂದು ನನ್ನಜ್ಜನಿಗೂ ನಿಮ್ಮಜ್ಜನಿಗೂ ಪ್ರವೇಶ ಇರಲಿಲ್ಲ ಹಾಗೆ ಹೊರಗಟ್ಟಿದ ಜನಗಳೇ ಇಂದು ನಿಮ್ಮ ಕೈಗೆ ಬಡಿಗೆ ನೀಡಿದ್ದಾರೆ ನೀವು ನನ್ನ ಮೇಲೆ ಬೀಸುತ್ತಿದ್ದೀರಿ ನಿಮ್ಮಜ್ಜ ನನ್ನಜ್ಜ ಒಬ್ಬನೇ ಆಗಿದ್ದ ನಾನು ಹೋಗುವುದಾದರೂ ಎಲ್ಲಿಗೆ ಹೊರಡುವುದಾದರೂ ಎಲ್ಲಿಂದ!?
ಕನ್ನಡ ಕಾವ್ಯ ಪರಂಪರೆಯಲ್ಲಿ ನೇರ ಅಭಿವ್ಯಕ್ತಿಯ ದಾರಿಯನ್ನು ನವೋದಯದ ಕಾಲದಲ್ಲಿಯೇ ನೋಡಬಹುದು. ಕಾವ್ಯದ ತಾಂತ್ರಿಕ ಅಂಶಗಳತ್ತ ಅತಿಯಾಗಿ ಗಮನವಿರಿಸಿದರೆ ಅದು ಕೃತಕವಾಗಿ ಬಿಡ ಹುದು ಎನ್ನುವ ಮಾತು ಆಗಲೇ ಕೇಳಿಬಂದಿತ್ತು. ನವ್ಯಕಾಲದಲ್ಲಿ ಕಾವ್ಯಶಿಲ್ಪಕ್ಕೆ ಮಹತ್ವ ಸಿಕ್ಕಿತು. ದಲಿತ-ಬಂಡಾಯ ಬಂದಾಗ ಕಾವ್ಯ ಮತ್ತೆ ನೇರ ಅಭಿವ್ಯಕ್ತಿಯ ಮಾರ್ಗಕ್ಕೆ ಹೊರಳಿತು. ಮುನೀರ್ ಅವರ ಈ ಕವಿತೆ, ನೇರ ಅಭಿವ್ಯಕ್ತಿ ಮಾರ್ಗದ ಜೊತೆಗೆ ತೀವ್ರತೆಯನ್ನೂ ಜತನವಾಗಿ ಉಳಿಸಿಕೊಂಡ ಕವಿತೆ. ಸಮಕಾಲೀನ ವಿದ್ಯಮಾನಗಳು ಕವಿತೆಯ ನೆಲೆ. ಇದರ ಉದ್ದೇಶ ಅಲ್ಲಿ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದಲ್ಲ. ಆ ಪ್ರಶ್ನೆಗಳ ಹಿಂದೆ ಇರುವ ಹುಸಿತನವನ್ನು ಬಯಲಿಗೆ ಎಳೆಯುವುದು.
ಹಿಂದೂ-ಮಸ್ಲಿಂ ಮೈತ್ರಿಯ ಕುರಿತು ನಮ್ಮಲ್ಲಿ ವಿಪುಲ ಸಾಹಿತ್ಯವಿದೆ. ಭಾವೈಕ್ಯತೆಯ ಕುರಿತು ಮಹತ್ತರ ಚರ್ಚೆಗಳೂ ಕೂಡ ಆಗಿವೆ. ಹೀಗಿದ್ದರೂ ಪ್ರಶ್ನೆಗಳು ಏಕೆ ಹುಟ್ಟುತ್ತಿವೆ ಎನ್ನುವ ನೆಲೆಯಲ್ಲಿ ನೋಡಿದರೆ ಈ ಕವಿತೆಯಲ್ಲಿ ಆಕ್ರೋಶದಂತೆ ಅಸಹಾಯಕತೆ ಕೂಡ ಕಾಣುತ್ತದೆ. ‘ಹೋಗುವುದಾದರೂ ಎಲ್ಲಿಗೆ’ ಎಂದು ಕವಿತೆಯಲ್ಲಿ ಪುನರಾವರ್ತನೆಗೊಳ್ಳುವ ಸಾಲಿನ ಮೂಲ ‘ನಿಮ್ಮಜ್ಜ ಮತ್ತು ನನ್ನಜ್ಜ ಒಬ್ಬನೇ ಆಗಿದ್ದ’ ಎಂಬ ನೆಲೆಯದು. ಇಂತಹ ಸಮಗ್ರತೆಯನ್ನು ನಾವು ಏಕೆ ಕಳೆದುಕೊಂಡೆವು ಎನ್ನುವ ವಿಷಾದವನ್ನೂ ಕವಿತೆ ಹುಟ್ಟಿಸುತ್ತದೆ. ಇಂತಹ ಕವಿತೆಗಳು ಯಾರನ್ನು ಉದ್ದೇಶಿಸಿವೆ ಎನ್ನುವುದು ಕುತೂಹಲಕರದ ಸಂಗತಿ. ದ್ವೇಷ ಬಯಸುವವರಿಗೆ ಸತ್ಯ ಬೇಕಿಲ್ಲ. ಸತ್ಯ ಗೊತ್ತಿರುವವರಿಗೆ ದ್ವೇಷ ಗೊತ್ತಿಲ್ಲ. ಸಹಬಾಳ್ವೆ ಈ ಮಣ್ಣಿನ ಸಹಜಗುಣ. ಅದು ಹಿನ್ನೆಲೆಗೆ ಸರಿದಿದ್ದರೂ ತಾತ್ಕಾಲಿಕವಾಗಿ ಮಾತ್ರ. ಈಗಲೂ ಹಾಗೇ ಆಗಲಿ ಎನ್ನುವುದು ಕವಿತೆಯ ಆಶಯ. ಅದು ಪ್ರಾಮಾಣಿಕವಾಗಿದೆ ಎನ್ನುವುದು ಸಮಕಾಲೀನ ಸಂದರ್ಭದಲ್ಲಿ ಮುಖ್ಯವಾದ ಸಂಗತಿ. ಎನ್. ಎಸ್. ಶ್ರೀಧರಮೂರ್ತಿ, ಲೇಖಕ, ಹಿರಿಯ ಪತ್ರಕರ್ತ
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : Poetry: ಅವಿತಕವಿತೆ; ಸುದೀರ್ಘ ಹಗಲಿನಲ್ಲಿ ಕಡುಕಿರಾತಕಿಯಾಗಿ ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ ಒಬ್ಬಳೇ
ಇದನ್ನೂ ಓದಿ : Poetry: ಅವಿತಕವಿತೆ; ಅಳುವ ತಾಯಿಯ ಮುಖಕ್ಕೆ ಮೈಕಿಟ್ಟು
Published On - 9:00 am, Sun, 3 April 22