Theatre Stories : ‘ರಾತ್ರಿಯೆಲ್ಲ ನಾಟಕ ಮಾಡಿ ಹಗಲು ನಿದ್ರಿಸುವ ಗಂಡನ ಬಗೆಗೆ ಮಾತಾಡುವುದೇನಿರುತ್ತದೆ?’

Women and Theatre : ‘ನಾಟಕಕ್ಕೆ ಸ್ತ್ರೀ ಪಾತ್ರದ ಕೊರತೆಯಾದಾಗ ಹೆಂಡತಿಗೆ ಹೇಳದೆ ಮಗಳನ್ನು ಕರೆದುಕೊಂಡು ಹೋಗಿ ಶ್ರೀಪಾದರಾಯರು ಪಾತ್ರ ಮಾಡಿಸಿದರು. ಕುಂಕುಮಾಬಾಯಿಯ ಜೊತೆಗೆ ಇಡೀ ಮನೆಯವರೆಲ್ಲಾ ಒಂದಾಗಿ ಅವರ ವಿರುದ್ಧ ತಿರುಗಿಬಿದ್ದರು. ನಾಟಕದವರ ದಾಂಪತ್ಯ ನೋಡಿದ್ದ ಕುಂಕುಮಾಬಾಯಿ ಮಗಳಿಗೆ ಅಪ್ರಾಪ್ತ ವಯಸ್ಸಿನಲ್ಲೇ ಸಂಬಂಧದಲ್ಲಿ ಕೊಟ್ಟು ಮದುವೆ ಮಾಡಿ ಮುಗಿಸಿಬಿಟ್ಟರು!’ ರಜನಿ ಗರುಡ

Theatre Stories : ‘ರಾತ್ರಿಯೆಲ್ಲ ನಾಟಕ ಮಾಡಿ ಹಗಲು ನಿದ್ರಿಸುವ ಗಂಡನ ಬಗೆಗೆ ಮಾತಾಡುವುದೇನಿರುತ್ತದೆ?’
ರಂಗನಿರ್ದೇಶಕಿ ರಜನಿ ಗರುಡ ಮತ್ತು ದತ್ತಾತ್ರೇಯ ನಾಟಕ ಮಂಡಳಿಯ ವಿಷಮವಿವಾಹ ನಾಟಕ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Aug 14, 2021 | 1:52 PM

‘ಟಿವಿ9 ಕನ್ನಡ ಡಿಜಿಟಲ್ ; ಜಗನ್ನಾಟಕ ಮಹಾತ್ಮೆ’ (Kannada Theatre) ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ಕೊರೊನಾದಿಂದ ನಾಟಕ ಪ್ರದರ್ಶನಗಳಿಲ್ಲದೆ ರಂಗಕಲಾವಿದರ ಬದುಕಿಗೆ ತಾತ್ಕಾಲಿಕವಾಗಿ ಪರದೆ ಇಳಿಬಿದ್ದಂತಾಗಿ ಮನಸ್ಸು ಮ್ಲಾನವಾಗಿದೆ. ಆದರೂ ಶ್ರಾವಣ ನಿಂತಿದೆಯಾ, ನಾಳೆ ಭಾದ್ರಪದವೂ ಬರುತ್ತದೆ. ಎಷ್ಟಂತ ಮನಸ್ಸನ್ನು ಕಟ್ಟಿಹಾಕಿಕೊಳ್ಳುವುದು? ಬನ್ನಿ ಹಾಗಿದ್ದರೆ. ಈ ‘ಜಗನ್ನಾಟಕ ಮಹಾತ್ಮೆ’ಗೆ ಮೊದಲೇ ಟಿಕೆಟ್ ಬುಕ್ ಮಾಡಬೇಕಾದ ಅವಸರವಿಲ್ಲ. ಆಟೋ, ಕಾರು, ಬಸ್ಸು ಹಿಡಿದು ಓಡುವ ಜಂಜಾಟವಿಲ್ಲ. ಎಲ್ಲಿದ್ದೀರೋ ಅಲ್ಲೇ ಇದ್ದು ಓದುತ್ತಾ ಹೋದಂತೆ ಸಮಕಾಲೀನ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಮ್ಮ ರಂಗಕಲಾವಿದರು ಹಂಚಿಕೊಳ್ಳುವ ಅನುಭವ ಕಥನಗಳು ನಿಮ್ಮೆದುರು ಅರಳುತ್ತ ಹೋಗುತ್ತವೆ.

*

ಸ್ವಲ್ಪವೇ ಹದದ ವಾತಾವರಣ ಸಿಕ್ಕರೂ ಚಿಗಿಯುವ ಗರಿಕೆಯ ಹುಲ್ಲಿನಂತೆ ಹೆಣ್ಣು ಕೂಡ ತನಗೊದಗಿದ ಎಂತಹ ಪರಿಸ್ಥಿತಿಯಲ್ಲೂ ಮೊಳೆತು ಚಿಗಿಯುತ್ತಾಳೆ. ಬಹುತೇಕ ಸಂದರ್ಭದಲ್ಲಿ ಸಾಧ್ಯವಾದಷ್ಟು ಹಸನಾಗಿಯೇ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಅನಕ್ಷರತೆ, ಅಸುರಕ್ಷತೆಯಿಂದ ಅಧಿಕಾರದ ಕೇಂದ್ರದಿಂದ ದೂರ ಉಳಿದರೂ ತನ್ನತನವನ್ನು ಉಳಿಸಿ – ಬೆಳೆಸಿಕೊಳ್ಳುವ ಪರ್ಯಾಯವಾದ ಮಾರ್ಗವನ್ನು ಕಂಡುಕೊಳ್ಳುತ್ತಾಳೆ. ಅಂತಲ್ಲೆಲ್ಲ ಪುರುಷಾಧಿಕಾರದ ಕಬಂದಬಾಹು ಮತ್ತೆ ಕಟ್ಟಿಹಾಕುವುದನ್ನು ಇತಿಹಾಸದುದ್ದಕ್ಕೂ ಕಂಡಿದ್ದೇವೆ. ವೃತ್ತಿರಂಗಭೂಮಿಯ ರಂಗದ ಮೇಲೂ – ರಂಗದ ಹಿಂದೆಯೂ ಅನೇಕ ಹೆಣ್ಣುಮಕ್ಕಳ ಆರ್ದ್ರ ಕಥೆಗಳಿವೆ. ಅವು ಕೇಳುವ ಸಹೃದಯ ಕಿವಿಗಳಿಗೆ ಕಾದಿದ್ದಿದೆ. ಆದರೆ ಅವು ಕೂಡ ಸಾಕಷ್ಟು ಸೆನ್ಸಾರ್ ಆಗಿ ಕರುಣಾಜನಕ ಕಥೆಗಳಾಗಿಯೊ ಅಥವಾ ಇದನ್ನು ನೋಡಿ ಕಲಿಯಿರಿ- ತಿಳಿಯಿರಿ ಎಂದು ತಿರುಗಿ ನಮ್ಮ ತಲೆಗೇ ತಂದು ಮೊಟಕುವ ರೀತಿಯಲ್ಲೊ ಇರುತ್ತದೆ. ಆದರೆ ರಂಗಭೂಮಿಗೂ ಒಂದು ಶೈಕ್ಷಣಿಕ ಶಿಸ್ತು ಬಂದನಂತರ ಆರಂಭದ ಕೆಲವು ವರ್ಷಗಳ ನಂತರ ದಿನದಿಂದ ದಿನಕ್ಕೆ ಹೆಣ್ಣುಮಕ್ಕಳು ಹೆಚ್ಚು ಚೂಸಿಯಾಗಿದ್ದು ಕಾಣುತ್ತದೆ. ಆರ್ಥಿಕ ಭದ್ರತೆ, ಸಮಪಾಲಿನ ಜವಾಬ್ದಾರಿ, ತನ್ನ ಆತ್ಮಗೌವರ ಇವೆಲ್ಲದರ ಪ್ರಾಮುಖ್ಯ ತಾನು ಆಯ್ದುಕೊಳ್ಳುವ ಜೀವನ ಸಂಗಾತಿಯಿಂದ ಸಿಗಬಹುದೇ ಎನ್ನುವುದನ್ನು ಮೊದಲೇ ಸ್ಪಷ್ಟಪಡಿಸಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಬಹಳ ನಿಧಾನವಾಗಿ ಆಗುತ್ತ ಬರುತ್ತಿದೆ.  ರಜನಿ ಗರುಡ, ರಂಗಕಲಾವಿದೆ, ರಂಗನಿರ್ದೇಶಕಿ, 

*

(ಭಾಗ – 1)

ನಾನು ಚಿಕ್ಕವಳಿದ್ದಾಗ ಶಿರಸಿಯ ಮಾರಿಕಾಂಬಾ ಜಾತ್ರೆಗೆ ಸಂಭ್ರಮದಿಂದ ಹೋಗುತ್ತಿದ್ದೆ. ಜಾತ್ರೆಗೆ ಮೂರು ನಾಲ್ಕು  ಯಕ್ಷಗಾನದ ಮೇಳಗಳು, ಮೂರು ನಾಲ್ಕು ನಾಟಕ ಕಂಪನಿಗಳು ಮತ್ತು ಸರ್ಕಸ್ ಬರುತ್ತಿತ್ತು. ಅದರಲ್ಲಿ ಯಕ್ಷಗಾನ ಮಾತ್ರ ನೋಡಲು ನಮಗೆ ಅವಕಾಶವಿರುತ್ತಿತ್ತು. ಶಂಭು ಹೆಗಡೆಯವರ ಇಡಗುಂಜಿ ಮೇಳದ ಯಕ್ಷಗಾನಕ್ಕೆ ಮೊದಲ ಆದ್ಯತೆ. ನಂತರ ಸ್ಥಾನ ಉಳಿದ ಮೇಳಗಳಿಗೆ. ಕಂಪನಿ ನಾಟಕ ನೋಡುವುದಕ್ಕೆ ಮನೆಯಲ್ಲಿ ಕಟ್ಟಾ ವಿರೋಧವಿತ್ತು. ಆದರೆ ಅಜ್ಜನಮನೆ ಮಂಚೀಕೆರೆಗೆ ಅಪರೂಪಕ್ಕೆ ಹೋದಾಗ ಕಂಪನಿ ನಾಟಕಗಳನ್ನು ನೋಡುವ ಅವಕಾಶವಿರುತ್ತಿತ್ತು. ನಾನು ಅಲ್ಲಿಯೇ ಬೆರಳೆಣಕೆಯಷ್ಟು ಕಂಪನಿ ನಾಟಕಗಳನ್ನು ನೋಡಿದ್ದೇನೆ. ಅದರ ಪರದೆಗಳು, ಸೀನರಿಗಳು, ಅವು ಕ್ಷಣದಲ್ಲಿ ಬದಲಾಗುವುದು, ಅಲಂಕರಿಸಿಕೊಂಡ ನಟರು, ಬಣ್ಣಬಣ್ಣದ ಬೆಳಕು ಎಲ್ಲವನ್ನೂ ನೋಡಿದಾಗ ಯಾವುದೋ ಕಿನ್ನರ ಲೋಕದಂತೆನಿಸುತಿತ್ತು. ರಂಗದ ಮಧ್ಯದಲ್ಲಿ, ಮೈಕಿನ ಎದುರು ನಿಂತು ಅಭಿನಯಿಸಿ ಪರದೆಯ ಅತ್ತ ಇತ್ತ ಸರಿದು ಹೋಗುತ್ತಿದ್ದ ನಟ-ನಟಿಯರು ಎಲ್ಲಿ ಹೋಗುತ್ತಾರೆ? ಅವರು ಹೇಗಿರಬಹುದು? ನಮ್ಮ ನಿಮ್ಮಂತೆ ಊಟ, ತಿಂಡಿ, ನಿದ್ದೆ ಎಲ್ಲಾ ಉಳ್ಳವರಿರಬಹುದೇ? ಎನ್ನುವ ಕುತೂಹಲ ನನಗೆ. ನನ್ನ ಈ ಕುತೂಹಲ ತಣಿಯಲು ಒಮ್ಮೆಯೂ ಅವಕಾಶ ಸಿಗಲಿಲ್ಲ. ಯಕ್ಷಗಾನದವರನ್ನು ನಾನು ನಿತ್ಯವೂ ನೋಡುತ್ತಿದ್ದೆ. ಅವರೆಲ್ಲ ಸಾಮಾನ್ಯ ಮನುಷ್ಯರಂತೆ ಊರಲ್ಲೆಲ್ಲಾ ತಿರುಗಾಡಿಕೊಂಡಿರುತ್ತಿದ್ದರು. ನಮ್ಮ ಮನೆಗೆಲ್ಲ ಊಟಕ್ಕೂ ಬರುತ್ತಿದ್ದರು. ನಾವು ಮಕ್ಕಳೆಲ್ಲಾ ಯಕ್ಷಗಾನದ ಚೌಕಿಮನೆಯಲ್ಲಿ ಓಡಾಡಿ ಬರುತ್ತಿದ್ದೆವು. ಆದರೆ ಈ ಕಂಪನಿ ನಾಟಕದವರೂ ನನಗೆಂದೂ ನೋಡಲು ಸಿಕ್ಕಲೇ ಇಲ್ಲ.

ನಾನು ನೀನಾಸಮ್ ರಂಗಶಿಕ್ಷಣ ಮುಗಿಸಿ ನಾಟಕದವನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದಾಗ ಮನೆಯ ಹಿರಿಯರೆಲ್ಲಾ ನಾಟಕದವರ ಬದುಕು ಬವಣೆಗಳನ್ನೆಲ್ಲ ತಿಳಿಸಿ ಹೇಳಲು ಪ್ರಯತ್ನಿಸಿದರು. ಆದರೂ ನಾನು ಪಟ್ಟು ಹಿಡಿದು ನನ್ನ ಸಹಪಾಠಿಯನ್ನೇ ಮದುವೆಯಾದೆ. ಅದೂ ವೃತ್ತಿರಂಗಭೂಮಿಯ ಗರುಡ ಸದಾಶಿವರಾಯರ ಮೊಮ್ಮಗನನ್ನು. ಅವರ ನಾಟಕ ಒಂದು ಕಾಲದಲ್ಲಿ ನಮ್ಮೂರಿನಲ್ಲಿ ಮನೆ ಮಾತಾಗಿದ್ದರಿಂದ ನನ್ನ ಮನೆಯವರಿಗೆ ಸಮಾಧಾನ ಪಟ್ಟುಕೊಳ್ಳಲು ಅದೊಂದೇ ಕಾರಣವಾಗಿತ್ತು.

kannada theatre garud

1954ರಲ್ಲಿ ನವದೆಹಲಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಾಲ್ಗೊಂಡ ಗದುಗಿನ ದತ್ತಾತ್ರೇಯ ನಾಟಕ ಮಂಡಳಿ

ನಾನು ಗರುಡರ ಮನೆ ಸೇರಿದಾಗ ಅಲ್ಲೇನು ನಾಟಕದ ವಾತಾವರಣ ಇರಲಿಲ್ಲ. ಉತ್ತರ ಕರ್ನಾಟಕದ ಮಧ್ಯಮ ವರ್ಗದ ಬ್ರಾಹ್ಮಣರ ಮನೆಯಂತೆಯೇ ಇತ್ತು. ಆ ಮನೆಯಲ್ಲಿ ಮತ್ತೆ ನಾಟಕದ ವಾತಾವರಣ ಸೃಷ್ಟಿಸಿದ್ದು ನಾನು ಮತ್ತು ಪ್ರಕಾಶ. ನನ್ನ ಮಾವ ಶ್ರೀಪಾದರಾವ್ ಗರುಡರನ್ನುಳಿದು ಉಳಿದವರೆಲ್ಲಾ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿದ್ದರು. ಶ್ರೀಪಾದರಾಯರು ಆಗಲೇ ಆಧುನಿಕ ನಾಟಕಗಳಿಗೆ ತೆರೆದುಕೊಂಡಿದ್ದರು. ಒಮ್ಮೆ ತಮ್ಮ ತಂದೆಯ ಕಾಲದ ರಂಗಭೂಮಿಯ ಬಗ್ಗೆ ಮಾತಾಡಿದರೆ ಇನ್ನೊಮ್ಮೆ ನಮ್ಮ ಕಾಲದ ನಾಟಕಗಳ ಬಗೆಗೆ ಮಾತಾಡುತ್ತಿದ್ದರು. ಎಂದೂ ಅವರು ತಮ್ಮ ಸಮಕಾಲೀನ ವೃತ್ತಿ ರಂಗಭೂಮಿಯ ಬಗೆಗೆ ನನ್ನ ಬಳಿ ಮಾತನಾಡಲೇ ಇಲ್ಲ. ಹೀಗಾಗಿ ನಾನು ರಂಗಭೂಮಿಯ ಇತಿಹಾಸವನ್ನು ನಿತ್ಯವೂ ಕೇಳುತ್ತಿದ್ದೆ.

ಗರುಡರ ಅನೇಕ ನಾಟಕಗಳಲ್ಲಿ ಪುರುಷ ಪಾತ್ರಗಳಷ್ಟೇ ಸ್ತ್ರೀ ಪಾತ್ರಗಳಿಗೂ ಪ್ರಾಧಾನ್ಯ ಇದೆ. ವಿಷಮ ವಿವಾಹ, ಪಾದುಕಾ ಪಟ್ಟಾಭಿಷೇಕ, ಸತ್ಯ ಸಂಕಲ್ಪ, ಶಕ್ತಿ ವಿಲಾಸ, ಕಂಸವಧಾ ಮುಂತಾದ ನಾಟಕಗಳಲ್ಲಿ ಸ್ತ್ರೀಪಾತ್ರಗಳು ಪುರುಷ ಪಾತ್ರಕ್ಕೆ ಸಮನಾಗಿವೆ. ಅವರ ನಾಟಕದ ಸ್ತ್ರೀಪಾತ್ರಗಳು ರಂಗದ ಮೇಲೆ ವಿಜೃಂಭಿಸುವಂತೆ, ಮನೆಯಲ್ಲಿ ಸ್ತ್ರೀಯರ ಪರಿಸ್ಥಿತಿ ಇರಲಿಲ್ಲ. ಯಾಕೆಂದರೆ ಅಲ್ಲಿ ಪುರುಷರೇ ಸ್ತ್ರೀ ಪಾತ್ರಧಾರಿಗಳಾಗಿದ್ದರು. ಅಲ್ಲದೆ ಅದಕ್ಕೆ ಸ್ವತಃ ಗರುಡರೇ ಯಜಮಾನರು. ಮನೆಯಲ್ಲಿ ಅವರ ಹೆಂಡತಿ ಭೀಮಾಬಾಯಿಯವರ ಯಜಮಾನಿಕೆ. ಮನೆ ಜನರನ್ನು ಮತ್ತು ಕಂಪನಿಯ ಜನರನ್ನು ಅವರು ತೂಗಿಸಿಕೊಂಡು ಹೋಗಬೇಕಾಗಿತ್ತು. ಆದ್ದರಿಂದ ವಿಪರೀತ ಧಾರ್ಷ್ಟ್ಯತನ ಅವರಲ್ಲಿತ್ತು.

kannada theatre garud

  ದತ್ತಾತ್ರೇಯ ನಾಟಕ ಮಂಡಳಿಯ ಎಚ್ಚೆಮ್ಮನಾಯಕ ದೃಶ್ಯ ಮತ್ತು ಶ್ರೀಪಾದರಾಯರು 

ಗರುಡರ ಎಂಟು ಮಕ್ಕಳಲ್ಲಿ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣುಮಕ್ಕಳು, ಎಲ್ಲರೂ ಕಂಪನಿಯಲ್ಲಿಯೇ ಬೆಳೆದರು. ಕಂಪನಿ ನಿಂತ ನಂತರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಬೇರೆ ಬೇರೆ ಬದುಕಿನ ದಾರಿ ಹುಡುಕಿಕೊಂಡರು. ಅವರ ಹೆಣ್ಣುಮಕ್ಕಳು ಕೂಡ ಪಾತ್ರಗಳನ್ನು ಕಂಪನಿಯಲ್ಲಿ ಮಾಡದಿದ್ದರೂ ತಮ್ಮದೇ ಸಂಸ್ಥೆ ಕಟ್ಟಿಕೊಂಡು ಶಾಲೆಗಳಲ್ಲಿ ಮಾಡುತ್ತಿದ್ದರು. ಇವರೆಲ್ಲ ದಿನವೂ ನಾಟಕ, ಸಾಹಿತ್ಯ, ಸಂಗೀತ, ನೃತ್ಯಗಳ ಬಗೆಗೆ ಗಂಡಸರೊಂದಿಗೆ ಸರಿ ಸಮಾನವಾಗಿ ಕೂತು ಮಾತಾಡುತ್ತಿದ್ದರು. ನಾಟಕವೇನಾದರೂ ಪ್ರಾರಂಭ ಮಾಡಿದರೆ ಈ ಹೆಣ್ಣುಮಕ್ಕಳು ಅದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಆದರೆ ಗರುಡರ ಸೊಸೆಯರು ಯಾರೂ ರಂಗಭೂಮಿಯಿಂದ ಬಂದವರಲ್ಲ. ಎರಡನೆಯ ಸೊಸೆಯಾದ ನನ್ನತ್ತೆ ಕುಂಕುಮಾಬಾಯಿ ಈ ಕಲಾವಿದರನ್ನೆಲ್ಲ ಚೆನ್ನಾಗಿ ನಿಭಾಯಿಸುತ್ತಿದ್ದರು. ಮನೆಯಲ್ಲಿ ಊಟ-ತಿಂಡಿ, ಹಬ್ಬ, ಶ್ರಾದ್ಧ, ವ್ರತ-ದೇವರು ಪೂಜೆಗಳೆಲ್ಲಾ ವ್ಯವಸ್ಥಿತವಾಗಿ ನಡೆಯುತ್ತಿದ್ದವು. ನಾಟಕದವರು ಮನೆಗೆ ಯಾರೇ ಬರಲಿ ಅತಿಥಿ ಸತ್ಕಾರ ಮಾಡುತ್ತಿದ್ದರು. ಹೀಗೊಂದು ಶಿಸ್ತಿನಲ್ಲಿ ಸಂಸಾರ ನಡೆಸುತ್ತಿದ್ದವರು ಕುಂಕುಮಾಬಾಯಿ.

ಹಳೇಹುಬ್ಬಳ್ಳಿಯ ಬಡ ವಕೀಲರ ಮಗಳು ಕುಂಕುಮಾಬಾಯಿ. ನಾಟಕದ ಗಂಧವೂ ಅರಿಯದ ಅವರು ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಶ್ರೀಪಾದ ರಾಯರನ್ನು ಮದುವೆಯಾಗಿ ಗರುಡರ ಮನೆಗೆ ಬಂದಾಗ ಭಾವ-ಮೈದುನರು, ಅತ್ತಿಗೆ-ನಾದಿನಿಯರು, ಅತ್ತೆ-ಮಾವ ಅಲ್ಲದೆ ಅನೇಕ ಸಂಬಂಧಿಕರು ಮನೆ ತುಂಬ ತುಂಬಿದ್ದರು. ಆಗ ಗರುಡ ಸದಾಶಿವರಾಯರ ಕಂಪನಿ ನಿಂತು ಹಲ ವರ್ಷವೇ ಆಗಿತ್ತು. ಶ್ರೀಪಾದರಾಯರು ಕಂಪನಿ ನಡೆಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೆ, ತಾವೇ ಕಂಪನಿಯನ್ನು ಎರಡು ಸಲ ಮಾಡಲು ಪ್ರಯತ್ನಿಸಿ ಮೈತುಂಬ ಸಾಲ ಮಾಡಿ ಅದನ್ನು ತೀರಿಸಲು ಬೇರೆ ಬೇರೆ ಕಂಪನಿಗಳಿಗೆ ಹೋಗುತ್ತಿದ್ದರು. ವರ್ಷಾನುಗಟ್ಟಲೆ ಮನೆಗೆ ಬಾರದೆ ಹೆಂಡತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ತಿರುಗುತ್ತಿದ್ದರು.

ಮೂರು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ನೋಡಿಕೊಳ್ಳುತ್ತಿದ್ದ ಕುಂಕುಮಾಬಾಯಿ ದಿನವೂ ಮನೆಯಲ್ಲಿ 50 ಜನರಿಗೆ ರೊಟ್ಟಿ ಬಡಿದು ಅಡಿಗೆ ಮಾಡಿ ಹಾಕುತ್ತ ದಿನ ನೂಕುತ್ತಿದ್ದರು. ಕೆಲ ಸಮಯ ಗಂಡನ ಜೊತೆ ಕಂಪನಿಗೂ ಹೋಗುತ್ತಿದ್ದರು. ಊರಿಂದ ಊರಿಗೆ ಕಂಪನಿ ತಿರುಗುವಾಗ ಮಕ್ಕಳಿಗೆ ಶಾಲೆಯ ವ್ಯವಸ್ಥೆಯನ್ನು ಮಾಡುತ್ತಿದ್ದರು. ಶಾಲೆಯ ಅಭ್ಯಾಸ ಬಿಟ್ಟು ನಾಟಕ ನಡೆಯುವಲ್ಲಿ ಮಕ್ಕಳು ಹೋದರೆ ಬಾಸುಂಡೆ ಏಳುವಂತೆ ಹೊಡೆಯುತ್ತಿದ್ದರು. ನಾಟಕಕ್ಕೆ ಸ್ತ್ರೀ ಪಾತ್ರದ ಕೊರತೆಯಾದಾಗ ಹೆಂಡತಿಗೆ ಹೇಳದೆ ಕದ್ದು ಮಗಳನ್ನು ಕರೆದುಕೊಂಡು ಹೋಗಿ ಶ್ರೀಪಾದರಾಯರು ಪಾತ್ರ ಮಾಡಿಸಿದರು. ಕುಂಕುಮಾಬಾಯಿಯ ಜೊತೆಗೆ ಇಡೀ ಮನೆಯವರೆಲ್ಲಾ ಒಂದಾಗಿ ಶ್ರೀಪಾದರಾಯರ ವಿರುದ್ಧ ತಿರುಗಿಬಿದ್ದರು. ನಾಟಕದವರ ದಾಂಪತ್ಯ ನೋಡಿದ್ದ ಕುಂಕುಮಾಬಾಯಿ ಮಗಳಿಗೆ ಅಪ್ರಾಪ್ತ ವಯಸ್ಸಿನಲ್ಲೇ ಸಂಬಂಧದಲ್ಲಿ ಕೊಟ್ಟು ಮದುವೆ ಮಾಡಿ ಮುಗಿಸಿಬಿಟ್ಟರು!

kannada theatre garud

ಮೊಮ್ಮಗಳೊಂದಿಗೆ ಗರುಡ ಶ್ರೀಪಾದರಾಯರು ಮತ್ತವರ ಪತ್ನಿ ಕುಂಕುಮಾಬಾಯಿಯವರು

ಧಾರ್ಮಿಕ ಪ್ರವೃತ್ತಿಯ ಕುಂಕುಮಾಬಾಯಿ ತುಂಬಾ ಸೌಮ್ಯ ಸ್ವಭಾವದವರು. ಶ್ರಾದ್ಧ-ಹಬ್ಬಗಳಲ್ಲದೆ ಅನೇಕ ವೃತಗಳನ್ನು ಮಾಡುತ್ತಿದ್ದರು. ಗಂಡನ ಏಳಿಗೆಗಾಗಿ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಅರ್ಥಿಕ ಉನ್ನತಿಗಾಗಿ ಈ ವೃತಗಳನ್ನು ಹಿಡಿಯುತ್ತಿದ್ದರು. ಸವದತ್ತಿ ಎಲ್ಲಮ್ಮ, ಹುಲಿಗೆಮ್ಮ, ತುಳಜಾಭವಾನಿ ಇವರೆಲ್ಲ ಅದೆಷ್ಟು ಹರಕೆಯನ್ನು ಅವರಿಂದ ಪಡೆದರೋ! ಉಪವಾಸವಿರುವುದು, ಉಡಿ ತುಂಬುವುದು, ಬಳೆ ಇಡಿಸುವುದು ಮುಂತಾದ ಬಗೆಗಳಲ್ಲದೆ 3ದಿನ, 5ದಿನ, 7ದಿನ, ಮೂರುವಾರಗಳ ಕೋರ್ಸ್‍ಗಳಿರುತ್ತಿದ್ದವು. ಗಂಡನಿಲ್ಲದ ದಿನಗಳಲ್ಲಿ ನಾದಿನಿಯರು-ಮೈದುನರ ಕಿರುಕುಳ ಮತ್ತು ಆರ್ಥಿಕ ತೊಂದರೆಗಳಿಂದ ನೊಂದಿದ್ದರಿಂದ ಅವರಿಗೆ ಸ್ವಲ್ಪ ನೆಮ್ಮದಿ ಸಿಗುತ್ತಿದ್ದುದು ವೃತಗಳಿಂದಲೇ ಇರಬೇಕು. ನನ್ನತ್ತೆಯ ವೃತಗಳು, ಪೂಜೆ-ಪುನಸ್ಕಾರಗಳಿಂದ ನನಗಾದ ಲಾಭವೆಂದರೆ ನನ್ನ ತವರಿನವರು ನನ್ನ ಗಂಡನ ಮನೆಯವರು ಕಟ್ಟುನಿಟ್ಟಿನ ಬ್ರಾಹ್ಮಣರು ಎಂದು ತಿಳಿದರು.

ಇವರ ಬದುಕು ಬವಣೆಗಳನ್ನು ರಂಜಿಸಿ ಹೇಳುವುದು ನನ್ನ ಉದ್ದೇಶವಲ್ಲ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ಸ್ಥಿತಿವಂತರ ಮನೆಯ ಮಹಿಳೆಯರ ಪರಿಸ್ಥಿತಿ ಕೂಡ ಹೀಗೇ ಇತ್ತು. ಆದರೆ ಬಣ್ಣ ಹಚ್ಚದ ಈ ಸ್ತ್ರೀಯರು ಸದ್ದಿಲ್ಲದೆ ರಂಗಭೂಮಿಯ ಸೇವೆಗೈದರು. ಅನಕ್ಷರಸ್ಥರಾದ ಈ ಮಹಿಳೆಯರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಶಿಕ್ಷಣವೊಂದೇ ದಾರಿ ಎಂದು ಅರಿತರು. ಬದಲಾಗುತ್ತಿರುವ ಹೊರಜಗತ್ತನ್ನು ಗಮನಿಸಿದರು. ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಆಚೆ ಇಟ್ಟು ಗಂಡ-ಮಕ್ಕಳ ಏಳಿಗೆಗಾಯೇ ತಮ್ಮ ಜೀವನವನ್ನು ಮೀಸಲಿಟ್ಟರು. ಇದು ಕುಂಕುಮಾಬಾಯಿಯ ಪಾಡೊಂದೇ ಅಲ್ಲ, ಇದು ಅಂದಿನ ನಾಟಕ ಕಂಪನಿಯ ಪರದೆಯ ಹಿಂದಿರುವ ಸ್ತ್ರೀಯರ ಬದುಕು. ರಾತ್ರಿಯೆಲ್ಲ ನಾಟಕ ಮಾಡಿದ ಗಂಡನಿಗೆ ಬೆಳಗಿನ ಜಾವ 3-4 ಗಂಟೆಗೆ ಬಿಸಿ ಅಡುಗೆ ಮಾಡಿ ಹಾಕಬೇಕಿತ್ತು. ಮತ್ತೆ ಬೆಳಗಾದ ಮೇಲೆ ಮಕ್ಕಳ ಊಟ ತಿಂಡಿ ಶಾಲೆಯ ವ್ಯವಸ್ಥೆ ಮಾಡಿ, ಮುಂದೆ ಮನೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು.

ಇವರಿಗಿರುವ ಮನರಂಜನೆ ಅಥವಾ ಇವೆಲ್ಲ ಜಂಜಡದಿಂದ ಬಿಡುಗಡೆಯನ್ನು ಅವರು ಕಂಡುಕೊಂಡಿದ್ದು ವೃತಗಳಿಂದ. ಅನೇಕ ದೇವರ ವೃತಗಳನ್ನು ಮಾಡುತ್ತಿದ್ದರಿಂದ ಬೇರೆ ಬೇರೆ ಮಹಿಳೆಯರೊಂದಿಗೆ ಪರಿಚಯವಾಗುತ್ತಿತ್ತು. ಅವರ ಸಂಪರ್ಕವೇರ್ಪಡುತ್ತಿತ್ತು. ಹೆಚ್ಚು ಕಟ್ಟುನಿಟ್ಟು ವೃತ ಮಾಡಿದಷ್ಟು ಅವರ ಸ್ಥಾನಮಾನವೇರುತ್ತಿತ್ತು. ಮೊದಲೇ ನಾಟಕ ಕಂಪನಿಯವರು ಎಂಬ ತಿರಸ್ಕಾರಕ್ಕೆ ಒಳಗಾದ ಈ ಸ್ತ್ರೀಯರು ಮಧ್ಯಮ ವರ್ಗದವರು ಮತ್ತು ಮೇಲ್ವರ್ಗದವರೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಪೂಜೆಗೋ, ಅರಿಶಿನ ಕುಂಕುಮಕ್ಕೋ ಸ್ತ್ರಿಯರೆಲ್ಲಾ ಸೇರಿಕೊಂಡಾಗ ತಮ್ಮ ಮಕ್ಕಳ ಬಗೆಗೆ, ಗಂಡನ ಬಗೆಗೆ ಮಾತಾಡಿಕೊಂಡರೆ, ನಾಟಕದವರ ಹೆಂಡತಿಯರಿಗೆ ಅವರ ಬಳಿ ಹಂಚಿಕೊಳ್ಳಲು ವಿಷಯವೇನಿರುತ್ತದೆ? ರಾತ್ರಿಯೆಲ್ಲ ನಾಟಕ ಮಾಡಿ ಹಗಲು ನಿದ್ರಿಸುವ ಗಂಡನ ಬಗೆಗೆ ಮಾತಾಡುವುದೇನಿರುತ್ತದೆ?

kannada theatre garud

ಅತ್ತೆ ಮಾವ, ನಾದಿನಿ, ಮಗಳೊಂದಿಗೆ ಲೇಖಕಿ ರಜನಿ ಗರುಡ

ದಿನವಿಡೀ ನಾಟಕದ ಗುಂಗಿನಲ್ಲಿರುವ ಗಂಡಂದಿರಿಗೆ ಸಂಸಾರದ ಜವಾಬ್ದಾರಿ, ಹೊರಜಗತ್ತಿನ ಸಂಪರ್ಕಗಳೇನೂ ಇರುತ್ತಿರಲಿಲ್ಲ. ಇವರ ಹೆಂಡಂದಿರ ತವರವರು ಬಂದಾಗ ಅಸಡ್ಡೆಯಿಂದ ಕಂಡವರೆ ಹೆಚ್ಚು. ಅಲ್ಲದೆ ಈ ಗಂಡಸರಿಗೆ ಮದುವೆಯೇತರ ಸಂಬಂಧಗಳೂ ಇರುತ್ತಿತ್ತು. ಅಂತಹ ಗಂಡಂದಿರಾಗಿ ಬಿಟ್ಟರಂತೂ ಇವರ ಬದುಕು ನರಕಯಾತನೆ. ಗಂಡಂದಿರು ರಸವತ್ತಾಗಿ ಪಾತ್ರ ಮಾಡುತ್ತಿದ್ದರೆ ರಾತ್ರಿ ನೀರವತೆಯಲ್ಲಿ ಏಕಾಂಗಿಯಾಗಿ ನಿಟ್ಟುಸಿರು ಬಿಡುತ್ತ ಮಲಗುವುದು ಇವರ ನಿತ್ಯದ ಕರ್ಮವಾಗಿತ್ತು. ಆದ್ದರಿಂದ ಕಾಣದ ದೈವಕ್ಕೆ ಹೆಚ್ಚು ವೃತಗಳ ಮೂಲಕ ಮೊರೆ ಹೋಗುತ್ತಿದ್ದರು. ನಾಟಕ ಕಂಪನಿಯ ಜನಗಳಿಗೆ ಹೊರ ಜಗತ್ತಿನ ಸಂಪರ್ಕ ಏರ್ಪಟ್ಟಿರುವುದು ಅವರ ಹೆಂಡತಿಯರಿಂದಲೆ. ಹಬ್ಬ-ಹರಿದಿನ, ಬಂಧು-ಬಳಗ ಅಂತೆಲ್ಲ ಇರಿಸಿಕೊಂಡು ಅಸ್ತವ್ಯಸ್ತ ಬದುಕಿಗೆ ಶಿಸ್ತಿನ ಮತ್ತು ಮೌಲ್ಯಯುತವಾದ ಕ್ರಮವನ್ನು ತರಲು ಪ್ರಯತ್ನಿಸಿದರು. ಆದ್ದರಿಂದ ಅವರು ಬಣ್ಣದ ಬದುಕಿನ ಪುಣ್ಯದ ಹೂಗಳು!

(ಎರಡನೇ ಭಾಗದಲ್ಲಿ : ಆ ಕಾಲದಲ್ಲಿ ಬ್ರಾಹ್ಮಣ ಮಡಿ ಹೆಂಗಸರು, ಗಂಡ ಬಿಟ್ಟವರು, ಅನಾಥ ಹೆಂಗಸರು ಕಂಪನಿಯನ್ನು ಸೇರುವುದಿತ್ತು.)

*

ಪರಿಚಯ : ರಜನಿ ಗರುಡ ರಂಗನಟಿ, ನಿರ್ದೇಶಕಿ. ಧಾರವಾಡದಲ್ಲಿ ನೆಲೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪುಟ್ಟಹಳ್ಳಿ ಕೆರೇಕೈಯವರು. ನಿನಾಸಮ್​ನಲ್ಲಿ ರಂಗಶಿಕ್ಷಣ ಮುಗಿಸಿ ತಿರುಗಾಟದಲ್ಲಿ ರೆಪರ್ಟರಿ ಕಂಪನಿಯಲ್ಲಿ ಮುಖ್ಯನಟಿಯಾಗಿದ್ದರು. ಧಾರವಾಡಕ್ಕೆ ಬಂದ ನಂತರ ‘ಬಾಲಬಳಗ ಸೃಜನಶೀಲಶಿಕ್ಷಣ’ ಎನ್ನವ ಪರ್ಯಾಯ ಶಿಕ್ಷಣಶಾಲೆಯನ್ನು ಪ್ರಾರಂಭಿಸಿ ‘ಥಿಯೇಟರ್ ಫಾರ್ ಎಜ್ಯುಕೇಶನ್’ ಕಾರ್ಯಕ್ರಮ ಹುಟ್ಟುಹಾಕಿದ್ದಾರೆ. ಸಮಕಾಲೀನ ಪ್ರೇಕ್ಷಕರಿಗಾಗಿ ಪಾರಂಪರಿಕ ತೊಗಲುಗೊಂಬೆಯಾಟವನ್ನು ‘ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್’ ನ ಸಹಯೋಗದಲ್ಲಿ ಅದರ ಕಲಾತ್ಮಕ ಅಭಿವೃದ್ಧಿಯ ಕುರಿತು ಕೆಲಸ ಮಾಡಿದ್ದಾರೆ. ಗೊಂಬೆಮನೆ ಸಂಸ್ಥೆಯ ಸ್ಥಾಪಕ ಸದಸ್ಯೆಯಾಗಿದ್ದು ಗೊಂಬೆ ವಿನ್ಯಾಸ ಮಾಡುವುದರ ಜೊತೆಗೆ ಗೊಂಬೆಯಾಟದ ನಿರ್ದೇಶನವನ್ನು ಮಾಡುತ್ತಿರುತ್ತಾರೆ.

ಅಭಿನಯಿಸಿದ ನಾಟಕಗಳು – ಚೆರಿಹಣ್ಣಿನ ತೋಟ, ದಿ ಬಂಡಲ್, ತುಘಲಕ್, ಗುಡ ವುಮನ್ ಆಫ್ ಸೇಜುವಾನ್, ಸಾಹೇಬರು ಬರುತ್ತಾರೆ, ಧಾಂ ಧೂಂ ಸುಂಟರಗಾಳಿ, ಹ್ಯಾಮ್ಲೇಟ್, ಒಥೆಲೋ, ಈಡಿಪಸ್, ಬೆತ್ತಲೆವೇಷ, ಜಡಭರತನ ಕನಸುಗಳು, ಅಂಜುಮಲ್ಲಿಗೆ, ವಿಷಮ ವಿವಾಹ, ಸ್ವಪ್ನದರ್ಶನ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಚಿದಂಬರ ರಾವ್ ಜಂಬೆ, ಕೆ. ವಿ. ಅಕ್ಷರ, ರುಸ್ತುಂ ಭರೂಚಾ, ಫ್ರಿಟ್ಸ್ ಬೆನೆವಿಟ್ಸ್, ಡಾ. ಚಂದ್ರಶೇಖರ ಕಂಬಾರ, ಡಾ. ಪ್ರಕಾಶ ಗರುಡ, ನಟರಾಜ ಏಣಗಿ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ನಿರ್ದೇಶಿಸಿದ ನಾಟಕಗಳು – ಪುಷ್ಪರಾಣಿ, ಗುಲ್ಪುಟ್ಟಿ- ಮುನ್ಪುಟ್ಟಿ, ಬೆಟ್ಟಪ್ಪನ ಕನಸು, ಬೆಪ್ಪುತಕ್ಕಡಿ ಬೋಳೆಶಂಕರ, ಹಕ್ಕಿಹಾಡು, ಬುದ್ಧಹೇಳಿದ ಕಥೆ, ಕಪ್ಪುಕಾಗೆಯ ಹಾಡು, ಅಗ್ನಿವರ್ಣ, ಮೈಸೂರು ಮಲ್ಲಿಗೆ ಮುಂತಾದ ನಾಟಕಗಳನ್ನು ಮಕ್ಕಳಿಗಾಗಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ನಿರ್ದೇಶಿಸಿದ್ದಾರೆ. ಕೆಂಪು ಹೂ, ಅಂಗುಲಹುಳುವಿನ ಪರಕಾಯ ಪ್ರವೇಶ, ಅಂಚೆಮನೆ, ಪಾಪು ಗಾಂಧಿ ಬಾಪು ಗಾಂಧಿಯಾದ ಕಥೆ ಮುಂತಾದ ಗೊಂಬೆಯಾಟಗಳನ್ನು ನಿರ್ದೇಶಿಸಿದ್ದಲ್ಲದೆ ಶಾಲಾಮಕ್ಕಳಿಗಾಗಿ ಮತ್ತು ಬಾಲಾಕಾರ್ಮಿಕ ಮಕ್ಕಳಿಗಾಗಿಯೂ ಗೊಂಬೆಯಾಟಗಳನ್ನು ಬರೆದು – ನಿರ್ದೇಶಿಸಿದ್ದಾರೆ. ಹಲವಾರು ಕಿರುಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಆಗಾಗ ರಂಗಭೂಮಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಇದನ್ನೂ ಓದಿ : Kannada New Movie : ‘ಅಂದರ್ ಮಂಚೋಕೋಂಬೋ ಟಿಣಿಂಗ್ ಮಿಣಿಂಗ್ ಟಿಷ್ಯಾ!’

Published On - 4:27 pm, Thu, 12 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ