AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್​ಲೈನ್​ ಶಾಪಿಂಗ್​ಗೆ​ ಒಪ್ಪಿದರೆ?

Online Shopping : ನಿವೃತ್ತಿ ಹೊಂದಿ ಮನೆಯಲ್ಲೇ ಇರುವ ಮಾವನಿಗೆ ಗೊತ್ತಾಗದೆ ಇರುವಂತೆ ಆನ್​ಲೈನ್ ಆರ್ಡರ್ ಮಾಡಲು ಆಗುವುದಿಲ್ಲ. ಮುಂಚಿನ ಹಾಗೆ ಚೀಲಗಳನ್ನು ಹೊತ್ತು ತರಲು ಮಗ ಸೊಸೆಗೆ ಆಗುವುದಿಲ್ಲ. ಜಗಳವೋ ಜಗಳ...

ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್​ಲೈನ್​ ಶಾಪಿಂಗ್​ಗೆ​ ಒಪ್ಪಿದರೆ?
ಸೌಜನ್ಯ : ಅಂತರ್ಜಾಲ
TV9 Web
| Edited By: |

Updated on: May 11, 2022 | 10:38 AM

Share

ಎಲ್ರೂ ಬದುಕಬೇಕಲ್ವಾ? : ‘ಅಯ್ಯೋ, ಅದಕ್ಕೆ ದುಡ್ಡು ಎಕ್ಸ್ಟ್ರಾ ನಾ? ನಾನೇ ಹೋಗಿ ತರುವೆ. ಸುಮ್ನೆ ದುಡ್ಡು ಹಾಳು ಮಾಡೋದು ನೀವೆಲ್ಲಾ!’ ಸದಾನಂದರು ಸಿಡಿಮಿಡಿಗೊಂಡರು. ‘ಅಪ್ಪ, ನೀವು ಹೋಗಿ ಬರುವುದಕ್ಕೆ ಎಷ್ಟು ಸಮಯ ವ್ಯಯವಾಗುತ್ತದೆ. ಇದರ ಡೆಲಿವರಿ ಶುಲ್ಕ ಅದಕ್ಕೆ ಹೋಲಿಸಿದರೆ ಏನೂ ಇಲ್ಲ.’ ಅರ್ಥವಾಯಿತಲ್ಲ, ಯಾವ ವಿಷಯದ ಚರ್ಚೆ ಎಂದು? ಈಗ ಆನ್ಲೈನ್ ಆರ್ಡರ್ ಕೊಟ್ಟರೆ ಮನೆಗೆ ಸಾಮಾನು, ತರಕಾರಿ, ದಿನಸಿ, ಬಟ್ಟೆಬರೆ, ಪುಸ್ತಕ ಏನೇ ಬೇಕಾದರೂ ಬಂದು ಬೀಳುವ ಈಗಿನ ಕಾಲದಲ್ಲಿ ಕೂಡ ಅಪ್ಪ ಡೆಲಿವರಿ ಚಾರ್ಜ್ ಇತ್ಯಾದಿ ತಕರಾರು ತೆಗೆದು ಗಲಾಟೆ ಎಬ್ಬಿಸುತ್ತಿದ್ದರು. ಈಗ ಜಗಳ ಆಗುತ್ತಿದ್ದು ತೆಂಗಿನ ಎಣ್ಣೆ ಖಾಲಿಯಾಗಿ, ಯಾರೂ ಗಮನಿಸದೆ ಇದ್ದದ್ದು. ತಲೆಗೆ ಸ್ನಾನ ಮಾಡಬೇಕು ಎಂದು ಕೊಬ್ಬರಿ ಎಣ್ಣೆ ಬಾಟಲ್ ತೆಗೆದರೆ ತಳದಲ್ಲಿ ಕೊಂಚ ಮಾತ್ರ ಇದೆ. ಲಾಸ್ಟ ಟೈಮ್ ಯಾರು ಬಳಸಿದ್ದು, ಯಾಕೆ ಹೇಳಿಲ್ಲ ಅಥವಾ ತಂದಿಟ್ಟಿಲ್ಲ ಎಂದು ಸದಾನಂದ ಹಾಗೂ ಪತ್ನಿಯ ಮಧ್ಯೆ ಮಾತಿನ ಯುದ್ಧ ಶುರುವಾಗಿತ್ತು. ಹೊಸ ಆ್ಯಪ್ 15 ನಿಮಿಷದ ಒಳಗೆ ಡೆಲಿವರಿ ಕೊಡುತ್ತೆ ಅಂತ ನಿಖಿಲ್ ಆರ್ಡರ್ ಮಾಡಲು ಹೋದಾಗ ಅದರ ಡೆಲಿವರಿ ಚಾರ್ಜ್ ಬಗ್ಗೆ ಈಗ ಕಿರಿಕಿರಿ ಶುರು ಮಾಡಿದ್ದರು. ಡಾ. ಸಹನಾ ಪ್ರಸಾದ್ (Dr. Sahana Prasad)

ಮನೆಯಲ್ಲಿ ಸದಾನಂದರು ಜತೆ ಅವರ ಪುತ್ರ ನಿಖಿಲ್ ಹಾಗೂ ಪತ್ನಿಯ ಮಧ್ಯೆ ವಾಗ್ವಾದ ಸಾಮಾನ್ಯ. ಅದರಲ್ಲೂ ನಿಖಿಲ್ ಯೋಚಿಸುವುದರ ತದ್ವಿರುದ್ಧ ಅವರಪ್ಪ ಸದಾನಂದ. ಮನುಷ್ಯನಿಗೆ ಆ ಹೆಸರು ಇಟ್ಟ ಅವರ ತಂದೆ ತಾಯಿಗೆ ಅಂದರೆ ತನ್ನ ಅತ್ತೆ ಮಾವನಿಗೆ, ಪತ್ನಿ ರುಕ್ಮಿಣಿ ಹಾಕಿದ ಶಾಪವೆಷ್ಟೋ. ಹೆಸರಿಗೆ ಮಾತ್ರ ಸದಾನಂದಾ, ಯಾವಾಗಲೂ ಗೊಣಗಾನಂದ ಎಂದು ರುಕ್ಮಿಣಿಯ ಅಳಲು. ಮನೆಗೆ ಏನು ತರಬೇಕಿದ್ದರೂ ಅವರನ್ನೇ ಕೇಳಿ ತರಬೇಕು. ಅವರು ಹಲವಾರು ಬ್ರ್ಯಾಂಡ್ ಬೆಲೆಗಳನ್ನು ನೋಡಿ, ಯೋಚಿಸಿ, ಅಳೆದು ಸುರಿದು ತರುವುದು. ತಲೆ ಚಿಟ್ಟು ಹಿಡಿದು ಹೋಗುತ್ತಿತ್ತು ರುಕ್ಮಿಣಿಯವರಿಗೆ. ಆಕೆ ಜಾಣೆ. ಆನ್ಲೈನ್ ಶಾಪಿಂಗ್ ಮಾಡಿದರೆ ಸಮಯ ಉಳಿತಾಯ, ಎಲ್ಲದಕ್ಕೂ ಮಿಗಿಲಾಗಿ ಮನೆ ಬಾಗಿಲಿಗೆ ಸಾಮಾನು ಬರುತ್ತದೆ. ಒಂದೊಂದೇ ಐಟಂ ಆರಿಸಿ ಬಾಸ್ಕೆಟಿನಲ್ಲಿ ಹಾಕು, ಬಿಲ್ ಮಾಡಿಸಲು ದೊಡ್ಡ ಸರತಿಯಲ್ಲಿ ನಿಲ್ಲು, ಕಾರಿನಲ್ಲಿ ಪೇರಿಸು, ಅದನ್ನು ಮನೆಯ ಹತ್ತಿರ ಇಳಿಸು… ಸಾಕಪ್ಪಾ ಸಾಕು. ಅದೆಲ್ಲಾ ಸಣ್ಣ ವಯಸ್ಸಿನಲ್ಲಿ ಮಾಡಿ ಮಾಡಿ ಸುಸ್ತಾಗಿದೆ. ಈಗ ನೆಮ್ಮದಿಯಾಗಿ ಇರೋಣ ಅಂದರೆ ಸದಾನಂದರದ್ದು ಒಂದೇ ಹಠ. ಅವೆಲ್ಲಾ ಬೇಡ, ಡೆಲಿವರಿ ಚಾರ್ಜ್ ಆಗುತ್ತೆ ಎಂದು.

ಈಗ ಬಂದಿರುವ ಕಷ್ಟ ಬಗೆ ಹರಿಸುವುದು ಹೇಗೆ? ನಿವೃತ್ತಿ ಹೊಂದಿ ಮನೆಯಲ್ಲೇ ಇರುವ ಸದಾನಂದರಿಗೆ ಗೊತ್ತಾಗದೆ ಇರುವ ತರಹ ಆರ್ಡರ್ ಮಾಡಲು ಸಹ ಆಗುವುದಿಲ್ಲ. ಮತ್ತೆಮತ್ತೆ ಅದೇ ವಿಷಯಕ್ಕೆ ಜಗಳ ಆಗುವುದು ಕೂಡ ಇಷ್ಟ ಇಲ್ಲ. ಮುಂಚಿನ ಹಾಗೆ ಚೀಲಗಳನ್ನು ಹೊತ್ತು ತರಲು ಇಬ್ಬರಿಗೂ ಆಗುವುದಿಲ್ಲ. ಮಗನಿಗೆ ನೂರೆಂಟು ಕೆಲಸ. ಅದನ್ನೆಲ್ಲಾ ಬಿಟ್ಟು ಅಂಗಡಿಗೆ ಹೋಗುವುದಕ್ಕೆ ಆಗುವುದಿಲ್ಲ ಅವನಿಗೆ.

ಆದರೆ ಕಾಲ ಒಂದೇ ಸಮನೆ ಇರುವುದಿಲ್ಲ. ಗಟ್ಟಿಮುಟ್ಟಾಗಿ ಇರುವ ಸದಾನಂದರಿಗೂ ಈಗ ಮಂಡಿನೋವು, ಕತ್ತಿನ ನೋವು ಇತ್ಯಾದಿ ಬಾಧಿಸುತ್ತಿತ್ತು. ಆದರೂ ದಿನಾ ಬೆಳಗ್ಗೆ ಚೀಲ ಹಿಡಿದು ಸದಾನಂದರು ತರಕಾರಿ, ಸೊಪ್ಪು ತರುತ್ತಿದ್ದರು. ಅವರಿಗೆ ಸ್ಪಾಂಡಿಲೈಟಿಸ್ ಇರುವುದರಿಂದ ಜಾಸ್ತಿ ಹೊರಲು ಆಗುತ್ತಿರಲಿಲ್ಲ. ಅವರು ತರಕಾರಿ ತಂದ ಮೇಲೆ ಅಡುಗೆ ಮಾಡಿ ಬಡಿಸುವಷ್ಟರಲ್ಲಿ ರುಕ್ಮಿಣಿಗೆ ಸಾಕಾಗಿ ಹೋಗುತ್ತಿತ್ತು. ಹೊತ್ತು ಗೊತ್ತಿಲ್ಲದ ಕೆಲಸ ಇದ್ದ ನಿಖಿಲ್ ತನ್ನ ಊಟವನ್ನು ಆಫೀಸಿನಲ್ಲೇ ಮುಗಿಸಿಕೊಳ್ಳುತ್ತಿದ್ದ. ‘ನಂಗೇನೂ ಕಷ್ಟ ಇಲ್ಲ, ನಾನೇ ತರುತ್ತೀನಿ’ ಎಂದು ಜವಾಬ್ದಾರಿ ವಹಿಸಿಕೊಂಡ ಸದಾನಂದರಿಗೆ ಕೊಂಚ ದಿನದಲ್ಲೇ ಕಷ್ಟವಾಗತೊಡಗಿತು. ಆದರೂ ತಮ್ಮ ಹಠ ಬಿಡಲಿಲ್ಲ.

ಇದನ್ನೂ ಓದಿ : ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು

ಹೀಗಿರುವಾಗ ಒಮ್ಮೆ ನಿಖಿಲ್ ಅಪ್ಪನ ಬಳಿ ಬಂದು ಕುಳಿತ. ‘ಇಲ್ಲಿ ನೋಡಿ ಅಪ್ಪ, ಇವುಗಳಲ್ಲಿ ಯಾವುದು ಬೆಸ್ಟ್’ ಎಂದು ಮಂಡಿ ನೋವಿನ ತೈಲಗಳನ್ನು ಮೊಬೈಲ್ ಓಪನ್ ಮಾಡಿ ತೋರಿಸಿದ. ‘ಆನ್ಲೈನ್ ನಂಗೆ ಇಷ್ಟ ಇಲ್ಲ ಅಂತ ಗೊತ್ತು ತಾನೇ?’ ಸಿಡುಕಿದರು ಸದಾನಂದ. ‘ನೋಡೋಕ್ಕೆ ಏನಪ್ಪಾ, ಇಲ್ಲಿ ಬಹಳ ವೆರೈಟಿ ಇವೆ. ಡಿಸ್ಕೌಂಟ್ ಕೂಡ ಸಿಗುತ್ತದೆ. ಇಲ್ಲಿ ನೋಡಿ ನೀವು ಯಾವುದು ಬೇಕು ಅಂತ ಹೇಳಿ. ನಾನು ಅಂಗಡಿಯಿಂದ ತಂದುಕೊಡುವೆ. ಅರೆ ಮನಸ್ಸಿನಿಂದಲೇ ಮೊಬೈಲ್ ನೋಡುತ್ತಾ ಅವರಿಗೆ ಅಚ್ಚರಿಯಾಯಿತು. ತಾನು, ರುಕ್ಮಿಣಿ ಈಗ ಜಾಸ್ತಿ ಮನೆ ಬಿಟ್ಟು ಹೋಗುವುದಿಲ್ಲ. ಅವಳಂತೂ ಎಲ್ಲವೂ ಆನ್ಲೈನಿನಲ್ಲಿ ತರಿಸೋಣ ಎನ್ನುತ್ತಾಳೆ. ಆದರೆ ತಾನು ಹತ್ತಿರವಿರುವ ಮಾರುಕಟ್ಟೆಗೆ ಚೀಲ ಹಿಡಿದು ಸುತ್ತಾಡುತ್ತೇನೆ. ಇಷ್ಟೊಂದು ನಮೂನೆಗಳು ಅಲ್ಲಿಯೂ ಸಿಗುವುದಿಲ್ಲ. ಯೋಚಿಸುತ್ತಾ ಇದ್ದ ಅವರಿಗೆ ಅಹಂ ಅಡ್ಡಿ ಬಂತು. ಇಷ್ಟು ದಿನ ಆನ್ಲೈನ್ ಬೇಡ ಎಂದು ಹೇಳುತ್ತಿದ್ದ ತಾವು ಸುಲಭವಾಗಿ ಒಪ್ಪಿಕೊಳ್ಳುವುದು ಹೇಗೆ? ಅಪ್ಪನ ಮುಖವನ್ನೇ ನೋಡುತ್ತಿದ್ದ ನಿಖಿಲ್. ‘ಇದು ಇರಲಿ’ ಆಕರ್ಷಕ ಬಾಟಲ್ ತೋರಿಸಿ ಹೇಳಿದರು. ‘ನಮ್ಮ ಡಾಕ್ಟರ್ ಕೂಡ ಈ ತರದ್ದೇ ಉಪಯೋಗಿಸಲು ಹೇಳಿದ್ದಾರೆ.’

ಸರಿ, ಮುಂದಿನ ವಾರ ತಂದುಕೊಡುತ್ತೇನೆ ಎಂದು ಎದ್ದು ಹೋದ ಮಗ. ಹದಿನೈದು ದಿನವಾದರೂ ಅದರ ಬಗ್ಗೆ ಸುದ್ದಿ ಎತ್ತಲೇ ಇಲ್ಲ. ಸದಾನಂದರು ಹತ್ತಿರದ ಮಾರುಕಟ್ಟೆಗೆ ಹೋದಾಗ ವಿಚಾರಿಸಿದರು. ‘ಅದೆಲ್ಲಾ ಆನ್ಲೈನಿನಲ್ಲಿ ತರಿಸಿಕೊಳ್ಳಿ ಸರ್. ಒಂದೆರಡು ಬಾಟಲ್ ಯಾರೂ ಡೆಲಿವರಿ ಕೊಡೋಲ್ಲ ನಮಗೆ. ಅದಕ್ಕಿಂತ ಜಾಸ್ತಿ ಇಲ್ಲಿ ಮಾರಾಟವಾಗುವುದಿಲ್ಲ’ ಎಂದು ಪುಕ್ಕಟ್ಟೆ ಸಲಹೆ ಕೊಟ್ಟ ಮೆಡಿಕಲ್ ಶಾಪಿನವ. ಕೊಂಚ ದಿನ ತಡೆದು ಮಡದಿಯ ಹತ್ತಿರ ಮೆಲ್ಲಗೆ ಪ್ರಸ್ತಾಪಿಸಿದರು. ಜಾಣೆಯಾದ ಆಕೆ ತಕ್ಷಣವೇ ಆರ್ಡರ್ ಮಾಡಿ ಒಂದೆರಡು ದಿನದಲ್ಲೇ ಬಾಟಲ್ ಮನೆಗೆ ಬಂತು. ಮಗುವಿನಂತೆ ಸಂಭ್ರಮಪಟ್ಟರು ಸದಾನಂದರು. ಅದೃಷ್ಟವೆಂಬಂತೆ ಅವರ ನೋವುಗಳೂ ಶಮನವಾದವು.

ಈಗ ಸದಾನಂದರು ತಮ್ಮ ಇತಿಮಿತಿಯನ್ನು ಅರಿತು ಜಾಸ್ತಿ ಹೊರಗಡೆ ಹೋಗುವುದಿಲ್ಲ. ಕೊತ್ತಂಬರಿ ಸೊಪ್ಪು, ಮಡದಿಯ ಹಣೆಯ ಸ್ಟಿಕರ್ ಕೂಡ ಈಗ ಆನ್ಲೈನಿನಲ್ಲಿ ಸರಬರಾಜು ಆಗುತ್ತಿದೆ! ಡೆಲಿವರಿ ಚಾರ್ಜ್ ಬಗ್ಗೆ ಮಾತೇ ಆಡುತ್ತಿಲ್ಲ!

ಪ್ರತಿಕ್ರಿಯೆಗಾಗಿ : tv9kannadadigital@mail.com

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ