Covid Diary : ಕವಲಕ್ಕಿ ಮೇಲ್ ; ಹೊದಿಕೆ ಸರಿಸಿದರೆ ಬಿಟ್ಟ ಕಣ್ಣು ಬಿಟ್ಟುಕೊಂಡು ಗಪ್ಪತಿ ತಣ್ಣಗಾಗಿದ್ದ

Marriage : ಪತ್ರಿಕೆಯಲ್ಲಿ ಜಾಹೀರಾತು ಸುದ್ದಿ ಓದಿ ಗೌರೀಶ ನಕ್ಕ. ‘ಬುದ್ದಿಲ್ದ ಜನ. ಮದುವೆಯನ್ನು ಎಂತಕ್ಕೆ ಮುಂದೆ ಹಾಕಬೇಕು. ತಾಶೀಲ್ದರ‍್ರು 30 ಜನ, 50 ಜನ ಮಾತ್ರ ಅಂತಾರೆ. ಹ್ಞೂಂ ಅಂದ್ರಾಯ್ತು. ಕರೆಯೋ ಹಂಗೆ ಕರೆಯದು, ಮಾಡೋ ಹಂಗೆ ಮಾಡುದೇ’ ಎಂದು ತನ್ನ ಮದುವೆಯ ತಯಾರಿಯಲ್ಲಿ ತೊಡಗಿದ. ಇನ್ನು ಏನೇನು ಕೆಲಸ ಉಳಿದಿದೆ ಎಂದು ಮನದಲ್ಲೇ ಸ್ಕ್ಯಾನ್ ಮಾಡಿಕೊಂಡ.

Covid Diary : ಕವಲಕ್ಕಿ ಮೇಲ್ ; ಹೊದಿಕೆ ಸರಿಸಿದರೆ ಬಿಟ್ಟ ಕಣ್ಣು ಬಿಟ್ಟುಕೊಂಡು ಗಪ್ಪತಿ ತಣ್ಣಗಾಗಿದ್ದ
ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಮದುವೆಯ ದಿನ ಬಂತು. ಗಪ್ಪತಿ ಬೆಳಿಗ್ಗೆ ಏನೂ ತಿಂದಿಲ್ಲ. ಸೇರುವುದಿಲ್ಲ ಎಂದು ಬರೀ ಸೀಯಾಳದ ನೀರು ಕುಡಿದು ಅದನ್ನೂ ವಾಕರಿಸಿದ. ಮಾಸ್ಕ್ ಹಾಕಿದರೆ ವಾಂತಿ ಬಂದಂತೆ ಆಗುವುದೆಂದು ಹಾಗೇ ಕುಳಿತ. ತಲೆ ಸುತ್ತಿ ಬಂದು ಹಸೆಮಣೆಯ ಮೇಲೇ ಮಲಗಿಬಿಟ್ಟ. ಇದೀಗ ಎಲ್ಲರಿಗೂ ಗಾಬರಿಯಾಯಿತು. ಅವನ ಬಾವದಿಕ್ಕಳು ಡಾಕ್ಟರ್ ಮೇಡಂ ಬಳಿ ಒಯ್ದರು. ಅವರು ಔಷಧಿ ಕೊಡಲು ನಿರಾಕರಿಸಿದರು. ಎಷ್ಟುಬಾರಿ ಕೋವಿಡ್ ಟೆಸ್ಟ್ ಮಾಡಿಸಿ ಎಂದರೂ ಮಾಡಲಿಲ್ಲ; ಇನ್ನು ತಮ್ಮ ಬಳಿ ಬರುವುದೇ ಬೇಡ ಎಂದು ನಿಷ್ಠುರವಾಗಿ ಹೇಳಿದರು. ಕೋವಿಡ್ ಹೆಸರು ಬಂದದ್ದೇ ಬಂದವರಲ್ಲಿ ಕೆಲವರು ಮೆಲ್ಲನೆ ಕರಗಿದರು. ಸದ್ಯಕ್ಕೆ ಶಕ್ತಿ ಇಂಜೆಕ್ಷನ್ ಹಾಕಿ ಎಂದೊಬ್ಬರು ಧಮಕಿ ಹಾಕಿದರು. ಇತ್ತ ಮಂಟಪದಲ್ಲಿ ಮುಹೂರ್ತ ಹತ್ತಿರ ಬರುತ್ತಿದೆ. ಅಲಂಕೃತ ಮೇನೆಯಲ್ಲಿ ಮದುಮಗಳು ಹಸೆಮಣೆಗೆ ಬಂದಳು. ಮಾಂಗಲ್ಯ ಧಾರಣೆಯ ವೇಳೆಗೆ ಮೇಲೆ ಕಟ್ಟಿದ ಬಲೂನುಗಳು ಸಿಡಿದು ಪುಷ್ಟವೃಷ್ಟಿಯಾಯಿತು.

*

ಕುಲದೇವತಾ ಪ್ರಸನ್ನ

ನನ್ನ ಮಗಳು
ಚಿ.ಕುಂ.ಸೌ. ಮಂಗಲ

ಹಾಗೂ

ಚಿ. ರಾ. ಹನುಮಂತ
(ಶ್ರೀಮತಿ ಜಟ್ಟು ಮತ್ತು ಕೈ.ವಾ. ಲಕ್ಷ್ಮಣ ಅವರ ಮಗ)

ಇವರಿಗೆ ಬೆಳ್ಳಿಮಕ್ಕಿಯ ಗುರೂಜಿಯವರ ಆಶೀರ್ವಾದದಿಂದ ಏರ್ಪಾಡು ಮಾಡಿದ್ದ ಲಗ್ನವು ಹೊಳೆಸಾಲಿನ ಗೌರೀಶಂಕರ ದೇವಸ್ಥಾನದಲ್ಲಿ ನಡೆಯಬೇಕಿತ್ತು. ಅನಿವಾರ್ಯ ಕಾರಣಗಳಿಗೆ ಮುಂದೂಡಲಾಗಿದೆ. ಕುಟುಂಬಸ್ಥರು, ಆತ್ಮೀಯರು ಸಹಕರಿಸಬೇಕಾಗಿ ವಿನಂತಿ.

ನಿಮ್ಮ

ಶ್ರೀಮತಿ ಸುಬ್ಬಿ ತುಳಸು ಬೋಜ
ಮತ್ತು ಎರಡೂ ಕುಟುಂಬಸ್ಥರು

ಪತ್ರಿಕೆಯಲ್ಲಿ ಜಾಹೀರಾತು ಸುದ್ದಿ ಓದಿ ಗೌರೀಶ ನಕ್ಕ. ‘ಬುದ್ದಿಲ್ದ ಜನ. ಮದುವೆಯನ್ನು ಎಂತಕ್ಕೆ ಮುಂದೆ ಹಾಕಬೇಕು. ತಾಶೀಲ್ದರ‍್ರು 30 ಜನ, 50 ಜನ ಮಾತ್ರ ಅಂತಾರೆ. ಹ್ಞೂಂ ಅಂದ್ರಾಯ್ತು. ಕರೆಯೋ ಹಂಗೆ ಕರೆಯದು, ಮಾಡೋ ಹಂಗೆ ಮಾಡುದೇ’ ಎಂದು ತನ್ನ ಮದುವೆಯ ತಯಾರಿಯಲ್ಲಿ ತೊಡಗಿದ. ಇನ್ನು ಏನೇನು ಕೆಲಸ ಉಳಿದಿದೆ ಎಂದು ಮನದಲ್ಲೇ ಸ್ಕ್ಯಾನ್ ಮಾಡಿಕೊಂಡ.

ಫೋಟೋಗೆ ಹೇಳಿ ಆಗಿದೆ. ವೀಡಿಯೋ ಮೂರು ಕ್ಯಾಮೆರಾ ಇಟ್ಟು ಮಾಡಬೇಕು ಎಂದಿದ್ದಾನೆ. ನಮ್ಮ ಬೆಂಗ್ಳೂರಿನ ಕಡೆ ಹೇಗಿರುತ್ತಾರೆ? ಸಿನಿಮಾದಲ್ಲಿ  ಆ್ಯಕ್ಟ್ ಮಾಡಿದಂತೆ ಅನಿಸಬೇಕು, ಹಾಗೆ ಶೂಟ್ ಮಾಡುತ್ತಾರೆ. ಈ ಕಡೆಯ ಫೋಟೋಗ್ರಾಫರ್ಸ್ ಬರೀ ಬಡ್ಡು. ಕೆಲಸವನ್ನೇ ಕಲಿತಿಲ್ಲ. ಪ್ರಿವೆಡ್ಡಿಂಗ್ ಶೂಟ್ ಅಂದರೇನೆಂದೇ ಇವರಿಗಿನ್ನೂ ಗೊತ್ತಿಲ್ಲ, ಇಲ್ಲಿದ್ರೆ ಜನ ಉದ್ಧಾರ ಆಗಲ್ಲ ಎನ್ನುವುದು ಇದಕ್ಕೇ ಎಂದುಕೊಂಡು ಫೋಟೋಗ್ರಾಫರ್ ಪೇದ್ರುವಿಗೆ ಮಾಡಿದ ಪಾಠ ನೆನೆಸಿಕೊಂಡ. ಅಡುಗೆಯವರಿಗೆ ವಿಶೇಷ ಐಟಂಗಳನ್ನು ಹೇಳಿಯಾಗಿದೆ, ಸಾಮಾನು ತಂದುಕೊಟ್ಟಾಗಿದೆ. ಇಲ್ಯಾಸನಿಗೆ ಹಾರ, ಫ್ಲವರ್ ಡೆಕೊರೇಷನ್, ವಾಲಗಕ್ಕೆ ಮಾಚ ಭಂಡಾರಿ, ಬಾಸಿಂಗಕ್ಕೆ ಕುಟ್ಣ ಗುಡಿಗರ‍್ರು, ಚಪ್ಪರ ಹಾಕಲು ಕ್ಯಾಸನ ತಂಡ, ಲಗ್ನ ಕಟ್ಟಿಸಲು ಗೋಯ್ದ ಭಟ್ಟರು – ಹೇಳಲು ಮತ್ತಿನ್ಯಾರಿಗೆ ಉಳಿಯಿತು ಎಂದು ಒಮ್ಮೆ ಮನದಲ್ಲಿ ಮದುವೆಯ ಸಂದರ್ಭವನ್ನು ಕಲ್ಪಿಸಿಕೊಂಡ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅಡಿಕೆ ತೆಂಗಿನ ಮರಗಳ ನೋಡುತ್ತಾ ಈ ಹಾಳೂರಿನಲ್ಲಿರಲು ಸಾಧ್ಯವಿಲ್ಲ ಎಂದು ಗೌರೀಶ ಬೆಂಗಳೂರು ಸೇರಿ ಫೈವ್‌ಸ್ಟಾರ್ ಹೋಟೆಲಿನ ಕೆಲಸಕ್ಕಿದ್ದ. ರಜೆ ಕಮ್ಮಿಯಾದರೂ ಒಳ್ಳೆಯ ಸಂಬಳ ಮತ್ತು ಟಿಪ್ಸ್. ಗಪ್ಪತಿ-ಲಕ್ಕು ಜೋಡಿಯ ಏಕೈಕ ಸಂತಾನ. ಕಳೆದ ವರ್ಷವೇ ಆಗಬೇಕಿದ್ದ ಮದುವೆ ಕೊರೊನಾ ಬಂದು ಮುಂದೆ ಹೋಗಿತ್ತು. ಸರಳ ಗಿರಳ ಎನ್ನುವುದೆಲ್ಲ ದುಡ್ಡಿಲ್ಲದವರು, ಸಾಲಮಾಡಿ ಮದುವೆಯಾಗುವವರು ಹೇಳುವಂತಹ ಮಾತು. ಲೈಫಲ್ಲಿ ಒಂದೇ ಸಲ ಆಗುವುದು, ಚೆನ್ನಾಗಿ ಮದುವೆ ಆಗಬೇಕು. ಬಂದವರು ನಾಲ್ಕುಕಾಲ ನೆನಪಿನಲ್ಲಿರುವಂತೆ ವಿಶೇಷವಾಗಿ ಲಗ್ನ ಆಗಬೇಕು ಎಂದು ಕನಸಿದ್ದ. ತನು, ಮನ, ಧನವನ್ನೆಲ್ಲ ಬಳಸಿ ಏರ್ಪಾಟು ಮಾಡುತ್ತಿದ್ದ. ಒಳ್ಳೆಯ ಮುಹೂರ್ತ ನೋಡಿಸಿ, ಈ ಸುತ್ತಿಗೇ ಒಳ್ಳೆಯ ಹಾಲ್ ಬುಕ್ ಮಾಡಿ ಮದುವೆ ಎಬ್ಬಿಸಿದ್ದ. ಹುಡುಗಿ ಮೇದಿನಿಗೆ ವೀಡಿಯೋ ಕಾಲ್ ಮಾಡಿ ಬೆಂಗಳೂರಿನಿಂದ ಬರುವಾಗ ಮಾಂಗಲ್ಯದ ಸರ, ಸೀರೆ ತೆಗೆದಿದ್ದ. ವಿಂಡ್ಸರ್ ಹೋಟೆಲಿನ ಮ್ಯಾನೇಜರ್ ಬಳಿ ಮಾತನಾಡಿ, ಇದ್ದಬದ್ದ ದುಡ್ಡನ್ನೆಲ್ಲ ತೆಗೆದು, ಆರು ತಿಂಗಳ ಸಂಬಳ ಮುಂಗಡ ಪಡೆದು ಊರಿಗೆ ಬಂದಿದ್ದ. ಕೊರೊನಾ ಅಲ್ಲದಿದ್ದರೆ ಹೋಟೆಲು ಕೆಲಸ ಬಿಟ್ಟು ತನ್ನದೇ ಐಸ್ಕ್ರೀಮ್ ಪಾರ್ಲರ್ ಹಾಕುವ ಯೋಜನೆಯಿತ್ತು. ಅದಕ್ಕೆ ಸಾಲ ಎಲ್ಲಿ ಹೇಗೆ ಎಂದೆಲ್ಲ ನೋಡಿಟ್ಟುಕೊಂಡಿದ್ದ. ತನ್ನ ಕನಸುಗಳನ್ನೆಲ್ಲ ಬೆಂಗಳೂರು ಹುಚ್ಚಿನ ಹುಡುಗಿಗೂ ಹೇಳಿ ವಿಸ್ತರಿಸಿದ್ದ.

ಅಂಥವ ಇಲ್ಲಿ ಬಂದು ನೋಡಿದರೆ ಮದುವೆ ಮನೆಯ ಹವಾನೇ ಇಲ್ಲ! ಏನೇನೂ ಕೆಲಸ ಆಗಿಲ್ಲ. ಅಪ್ಪ ಅವ್ವಿಯ ಜಬ್ಬುತನದ ಮೇಲೆ ಅವನಿಗೆ ಸಿಟ್ಟು ಬಂತು. ಅವ್ವಿ ಲಕ್ಕುವಂತೂ ದಡ್ಡಿ. ಸರಿಯಾಗಿ ಮಾತಾಡಲಿಕ್ಕೂ ಬಾರದು. ತಾನಾಯ್ತು, ತನ್ನ ಅಡುಗೆಮನೆ, ಕೊಟ್ಟಿಗೆ ಹಿತ್ತಲ ಕೆಲಸವಾಯ್ತು ಅನ್ನುವಂತೆ ಇರುವವಳು. ಅವಳ ಜೊತೆ ಇದ್ದಿದ್ದು ಈ ಅಪ್ಪ ಗಪ್ಪತಿಯೂ ಬೊದ್ದನಂತೆ ಆಗಿದ್ದಾನಲ್ಲ ಎನಿಸಿತು. ಬಂದವನೇ ಒಂದೇಸಮ ಮದುವೆ ತಯಾರಿ ನಡೆಸಿದ. ಬೆಂಗಳೂರಿನಿಂದ ಬರಬೇಕಿದ್ದ ದೋಸ್ತರು ಲಾಕ್‌ಡೌನ್ ಆದೀತೇನೋ ಎಂದರು. ‘ತಪ್ಪಿಸಿಕೊಳ್ಳಲು ನೆಪ ಹೂಡಬೇಡಿ’ ಎಂದು ಗದರಿದ.

ಇನ್ನೇನು ಕೈಗೆ ಕಂಕಣ ಕಟ್ಟಿ ಮದುವೆಯ ನಾಂದಿ ಮಾಡಿಕೊಳ್ಳಬೇಕೆಂದಾಗ ಈ ವರ್ಷವೂ ಲಾಕ್‌ಡೌನ್ ಎಂಬ ಸುದ್ದಿ ಬಂತು. ‘ಥತ್ತೇರಿಕೆ, ಈ ಭಟ್ರು ಅಷ್ಟು ಕಾಸು ತಗಂಡ್ರೂ ಒಳ್ಳೆ ಮೂರ್ತ ಇಟ್ಟುಕೊಡ್ಲಿಲ್ಲಲ, ಸಾಯ್ಲಿ ಅವ್ರು’ ಎಂದು ಬೈದುಕೊಂಡ. ಅವನಷ್ಟು ಬೈಯುವಾಗ ಆ ಸುತ್ತಿಗೇ ಖ್ಯಾತ ಜ್ಯೋತಿಷಿಯಾಗಿದ್ದ ಭಟ್ಟರು ಕೋವಿಡ್‌ನಿಂದ ತೀರಿಕೊಂಡರು. ಭಂಡಾರಿ ಸಮಾಜವನ್ನು ಕಟ್ಟಿದ ತರುಣ ಮಂಯ್ಙಾತ ಭಂಡಾರಿಯ ಸಾವು ಎಲ್ಲರಲ್ಲಿ ದಿಗ್ಭ್ರಮೆ ಹುಟ್ಟಿಸಿತ್ತು. ಕೆಲವು ಮದುವೆಗಳು ಮುಂದೆ ಹೋದವು. ಏನು ಮಾಡಲಿ ಎಂದು ಸಮಾಲೋಚನೆ ನಡೆಸಿದ. ಮೇದಿನಿಯ ಮನೆಯವರು ಲಗ್ನ ಆಗಲಿ ಎಂದರೆ, ದೋಸ್ತರು ಲಾಕ್‌ಡೌನ್‌ನಲ್ಲಿ ಸರಿಯಾಗಲ್ಲ, ಮುಂದೂಡು ಎಂದರು. ಕೊನೆಗೆ ಅವನೇ ಯೋಚಿಸಿ ಈ ವರ್ಷ ಮುಂದೂಡಿದರೆ ಬರುವ ವರ್ಷವೂ ಹೀಗೇ ಕಳೆದೀತು. ಆದದ್ದಾಗಲಿ, ಈ ವರ್ಷ ಆಗೇ ಬಿಡಬೇಕೆಂದು ತೀರ್ಮಾನಿಸಿದ. ಆನ್‌ಲೈನ್ ತರಿಸಿಕೊಂಡಿದ್ದ ನೀಲಿ ಹರಳಿನಲ್ಲಿ ಮಾಡಿದ್ದ ಕೂರ್ಮ ರಿಂಗ್ (ಆಮೆಯಾಕಾರದ ಉಂಗುರ)ವನ್ನೂ, ಮಾರುತಿಯ ಶ್ರೀರಕ್ಷೆಯ ಪ್ರತೀಕವಾಗಿ ಪುಟ್ಟ ಗದೆಯ ಪೆಂಡೆಂಟಿನ ಸರವನ್ನೂ ಹಾಕಿಕೊಂಡ. ಲಾಕ್‌ಡೌನ್ ಇದ್ದರೂ ಜನ ಕಮ್ಮಿಯಾಗಬಾರದು ಎಂದು ಕರೆದಿದ್ದೇ ಕರೆದಿದ್ದು. ಎಲ್ಲರಿಗೂ ಅತಿ ಒತ್ತಾಯದ ಕರೆ. ಪ್ರೀತಿಯ ಆಗ್ರಹ. ಬಿಳಿ ಬಿಳೀ ಪಂಚೆ ಉಟ್ಟ ಗಪ್ಪತಿಯು ಮಗನೊಡನೆ ಬೈಕಲ್ಲಿ ಓಡಾಡಿದ್ದನ್ನು ಊರವರೆಲ್ಲ ನೋಡಿದರು. ಮಾಸ್ಕೂ ಇಲ್ಲದೇ ತಿರುಗುವರಲ್ಲ ಎಂದು ಕೆಲವರು ಅಚ್ಚರಿಗೊಂಡರು.

ಹೀಗೆ ಮೂಲೋಕ ಸುತ್ತುವಾಗ ಗಪ್ಪತಿಗೆ ಜ್ವರ ಬಂತು. ಆಸ್ಪತ್ರೆಗೆ ಹೋಗುವುದು ರಿಸ್ಕು, ಜ್ವರ ಅಂದಕೂಡಲೇ ಕೋವಿಡ್ ಕೋವಿಡ್ ಎಂದು ಹಿಂಸೆ ಕೊಡುತ್ತಾರೆಂದು ಗೌರೀಶ ಬೆಂಗಳೂರಿನಿಂದ ತಂದಿದ್ದ ಮಾತ್ರೆಗಳ ಕಿಟ್ ತೆಗೆದ. ಎಂಥಾ ಜ್ವರವೂ ಬಿಟ್ಟೋಡುವುದೆಂದು ಒಂದು ಡೋಲೋ ನುಂಗಿಸಿದ. ಬೆವರಿ ಜ್ವರ ಕಮ್ಮಿ ಮಾಡಿಕೊಂಡು ಆಸ್ಪತ್ರೆಗೆ ಒಯ್ದ. ‘ಮೇಡಂ ಏನಾಯ್ತು ಅಂತ ಕೇಳಿದ್ರೆ ಜ್ವರ ಅಂದುಬಿಡಬೇಡ, ಮೈಕೈನೋವು ಹೇಳಿ ಇಂಜೆಕ್ಷನ್ ತಗೊ, ಅದರಿಂದ ಜ್ವರನೂ ಕಡಿಮೆಯಾಗುತ್ತೆ, ಇಲ್ಲಂದ್ರೆ ಕೋವಿಡ್ ಅಂತ ಸರ‍್ಸಿಬಿಡ್ತಾರೆ’ ಎಂದು ಬುದ್ಧಿವಂತ ಮಗ ದಡ್ಡ ಅಪ್ಪನಿಗೆ ಹೇಳಿಕೊಟ್ಟ. ಡಾಕ್ಟರ್ ಮೇಡಂಗೆ ತಮ್ಮ ಖಾಯಂ ಪೇಶೆಂಟಾದ ಗಪ್ಪತಿಯ ಕೈಮುಟ್ಟಿದ್ದೇ ಗೊತ್ತಾಯಿತು. ಅವರು ಜ್ವರ ಬಂದಿದೆ ಎನ್ನುವುದು, ಇವರು ಇಲ್ಲ ಎನ್ನುವುದು. ಕಚ್ಚಾ ರಸ್ತೆಯಲ್ಲಿ ತಿರುಗಿ ಬೆನ್ನುನೋವು; ಮನೆ ಹಿತ್ತಲು ಚೊಕ್ಕ ಮಾಡಿ ಹೆಗಲು ನೋವು; ಕಟ್ಟಿಗೆ ಕಡಿದು ಕುತ್ಗೆ ನೋವು ಎಂದೆಲ್ಲ ಕತೆ ಕಟ್ಟಿ ಜ್ವರದ ಸುದ್ದಿ ಎತ್ತದಂತೆ ನೋಡಿಕೊಂಡರು. ಅಂತೂ ಇಂಜೆಕ್ಷನ್ ತೆಗೆದುಕೊಂಡು ಬಂದರು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಜ್ವರವೇನೋ ಬಿಟ್ಟಿತು. ಆದರೆ ಏನು ಮಾಡಿದರೂ ಗಪ್ಪತಿಗೆ ಊಟ ಸೇರುತ್ತಿಲ್ಲ. ಅನ್ನ ತಿಂದರೆ ಮಣ್ಣು ತಿಂದಂತೆ, ಏನೂ ರುಚಿ ತಿಳಿಯುತ್ತಿಲ್ಲ. ಪರಿಮಳ ಗೊತ್ತಾಗುತ್ತಿಲ್ಲ. ಉಪ್ಪಿನಕಾಯಿಯ ಟೇಸ್ಟೂ ತಿಳಿಯುತ್ತಿಲ್ಲ. ಎಲ್ಲರೂ ಮೇಲಿನ ತೋಟದ ಹಲಸಿನಹಣ್ಣು ತಿಂದು ಆಹಾ ಅನ್ನುತ್ತಿದ್ದರೆ ಇವನಿಗೆ ಪರಿಮಳವೇ ಬರುತ್ತಿಲ್ಲ. ಯಾರದಾದರೂ ಕಣ್ಣು ಬಿತ್ತೇ? ಮದ್ದು ಬಿತ್ತೇ? ಎಂದೆಲ್ಲ ಯೋಚಿಸಿದ.

ಗಪ್ಪತಿಗೆ ಸ್ವಲ್ಪ ಭಯ ಶುರುವಾಗಿತ್ತು. ಟೆಸ್ಟು ಗಿಸ್ಟು ಮಾಡಿ, ಕೊರೊನಾ ಬಂತೆಂದು ಸರ್ಕಾರಿ ಆಸ್ಪತ್ರೆಗೆ ಹಾಕಿದರೆ ಆ ಭಟ್ರ ತರಹವೇ ಹಾರ್ಟಟ್ಯಾಕ್ ಆಗಿ ಸತ್ತುಹೋದೇನು ಅನಿಸಿತು. ‘ಮನೆಗೋಗ್ತೆ, ಮನೆಗ್ ಕರ‍್ಕಂಡ್ ಹೋಗು’ ಅಂತ ಒಂದೇಸಮ ಹೇಳಿದರೂ ಆಸ್ಪತ್ರೆಯವರು ಬಿಡದಿದ್ದಕ್ಕೆ ಅವರು ಹಾರ್ಟ್​ ಫೇಲಾಗಿ ಸತ್ತಿದ್ದು ಎಂದು ಎಲ್ಲ ಮಾತಾಡಿಕೊಳ್ಳುತ್ತಿದ್ದರು. ಮಗ ಹೇಳಿಕೊಟ್ಟಂತೆಯೇ ಸುಳ್ಳಾಡಿದ. ಮತ್ತೆರೆಡು ಸಲ ಆಸ್ಪತ್ರೆಗೆ ಎಡತಾಕಿದ. ತಂಡಿಯಾಗಿ ಗಂಟಲು ನೋವಾಗುತ್ತಿದ್ದರೂ ಹಲಸಿನಹಣ್ಣು ತಿಂದು ತಂಡಿಯಾಯಿತು, ಶರಬತ್ತು, ಕೋಲ್ಡ್ ಕುಡಿದು ಗಂಟಲುನೋವು ಬಂತು ಎಂದೆಲ್ಲ ಸಬೂಬು ಹೇಳಿದ. ಮೇಡಂ ಜ್ವರದ ಸುಳಿವನ್ನೇ ಎತ್ತಿ ಹಿಡಿದರು. ‘ಮದುವೆ ಕರೆಯಲು ಓಡಾಡಿದೀರಿ, ಮೊದ್ಲು ಕೋವಿಡ್ ಟೆಸ್ಟ್ ಮಾಡಿಸ್ಕೊಳ್ಳಿ’ ಎಂದು ಬಾರಿಬಾರಿ ಹೇಳಿದರು. ಬೆಂಗಳೂರಿನಲ್ಲಿದ್ದ ಮಗನಿಗಾದರೂ ಅರ್ಥವಾದೀತೆಂದು ಅವನನ್ನು ಆಚೆ ಕರೆದು, ‘ಅಪ್ಪ ಸುಸ್ತಾಗಿರುವುದು ನೋಡಿದರೆ ಅನುಮಾನ, ಟೆಸ್ಟ್ ಮಾಡಿಸಿ’ ಎಂದು ಮತ್ತೆಮತ್ತೆ ಹೇಳಿದರು. ಇನ್ನೆರೆಡು ದಿನದಲ್ಲಿ ಮದುವೆ ಇದೆ, ಈಗ ಕೋವಿಡ್ ಟೆಸ್ಟ್ ಮಾಡಿಸುವುದು ಹೇಗೆ? ಮೇಡಂಗೆ ಇದೆಲ್ಲ ಗೊತ್ತಾಗಲ್ಲ ಎಂದು ಗೌರೀಶ ಅವರ ಸರಿತನಕ್ಕೆ ವ್ಯಗ್ರನಾದರೂ ಸುಮ್ಮನೆ ಹ್ಞೂಂಹ್ಞೂ ಎಂದ. ‘ಈಗೊಂದು ಗ್ಲುಕೋಸ್ ಹಾಕ್ಕೊಡಿ, ಟೆಸ್ಟಿಗೆ ಕರ‍್ಕಂಡು ಹೋಗ್ತೀನಿ’ ಎಂದು ರೈಲು ಬಿಟ್ಟ. ಸಲೈನು, ಇಂಜೆಕ್ಷನ್, ಗುಳಿಗೆ ಪಡೆದು ಅಪ್ಪನನ್ನು ‘ರೆಡಿ’ ಮಾಡಿದ. ಇನ್ನು ಎರಡು ದಿನ ಕಳೆಯಲಿ, ಆಮೇಲೆ ಟೆಸ್ಟ್ ಅಲ್ಲ ಏನು ಬೇಕಾದರೂ ಮಾಡಬಹುದು ಎನ್ನುವುದು ಅವನ ಧೋರಣೆ.

ಆದರೆ ಏನು ಮಾಡಿದರೂ ಗಪ್ಪತಿ ರೆಡಿ ಆಗುತ್ತಿಲ್ಲ. ಇದ್ದೊಬ್ಬ ಮಗನ ಮದುವೆ ಎಂದು ಸಂಭ್ರಮವೇ ಇಲ್ಲವಲ್ಲ ಇವನಿಗೆ ಎಂದು ಮಗನಿಗೆ ಅಪ್ಪನ ಮೇಲೇ ಸಿಟ್ಟು. ‘ಕೋವಿಡ್ ಅಂತ ಕಂಗಾಲಾಗಬ್ಯಾಡ ಅಪ್ಪ. ಬೆಂಗ್ಳೂರಲ್ಲಿ ಬೇಕಷ್ಟ್ ಕೊರೊನಾ ನೋಡಿದಿನಿ. ಒಂದ್ವರ್ಷಲಿಂದ ಬರಿ ಅದೇ ಕೇಳಿಕೇಳಿ ಸಾಕಾಗಿದೆ. ಕೊರೊನ ಅಂದ್ರೆ ಬರೀ ತಂಡಿಜ್ವರ ಅಷ್ಟೆಯ’ ಎಂದು ಧೈರ್ಯ ಹೇಳಿದ. ‘ಇವತ್ತು ನಾಳಿ ಎರ‍್ಡು ದಿನಕ್ಕೆ ಬಗ್ಗೇಲ್ ಸರಿ ಮಾಡ್ಕ. ಕಡೆಗ್ ಆಸ್ಪತ್ರೆಗ್ ಅಡ್ಮಿಟ್ ಮಾಡ್ತೆ’ ಎಂದು ಅನುನಯಿಸಿದ. ಅವ್ವಿಯ ಸಲಹೆಯಂತೆ ಜಾತಕ ತೋರಿಸಿ ಬಂದ. ನೋಟಗಾರ ಅಪ್ಪನ ಹೆಸರಲ್ಲಿ ಕೋಳಿಯ ತಲೆ ತಿಪ್ಪಿದ. ಬೆಳ್ಳಿಮಕ್ಕಿ ವೀರಮಾರುತಿ ದೇವರ ಪ್ರಸಾದ ಬಲಗಡೆಯೇ ಆಯಿತು. ಎಲ್ಲ ಕಡೆ ಏನೂ ತೊಂದರೆ ಇಲ್ಲ, ಮದುವೆ ಮುಗಿಸಿ ಎಂಬ ಅಭಯವೇ ಸಿಕ್ಕಿತು.

ಮದುವೆಯ ಹಿಂದಿನ ದಿನ ಎಲ್ಲರನ್ನು ಫೋನ್ ಮಾಡಿ ಕರೆದಿದ್ದೇ ಕರೆದಿದ್ದು. ಬಸ್ ಇಲ್ಲದ್ದರಿಂದ ಬರುವವರಿಗೆ ತೊಂದರೆಯಾಗದಿರಲೆಂದು ಗೆಳೆಯ ಸುಬ್ರಾಯನಿಗೆ ಹೇಳಿ ಒಂದು ಟ್ರಾಕ್ಸ್ ಬುಕ್ ಮಾಡಿದ. ಅಂತೂ ಮದುವೆ ಕಡಿಮೆ ಎನ್ನುವಂತೆ ಆಗಬಾರದು. ನಿಂತು ಹೋಗಬಾರದು. ಕೋವಿಡ್ ಇದ್ದರೂ ಹೆದರದೆ ಚೆನ್ನಾಗಿ ಮಾಡಿದರೆಂದು ಆಗಬೇಕೆಂಬ ಹಠ. ಮೇದಿನಿಯ ತಮ್ಮನೂ ಇವನಂಥವನೇ ಆಗಿ ಬೆಂಬಲ ಸಿಕ್ಕಿತು.

ಮದುವೆಯ ದಿನ ಬಂತು. ಗಪ್ಪತಿ ಬೆಳಿಗ್ಗೆ ಏನೂ ತಿಂದಿಲ್ಲ. ಸೇರುವುದಿಲ್ಲ ಎಂದು ಬರೀ ಸೀಯಾಳದ ನೀರು ಕುಡಿದು ಅದನ್ನೂ ವಾಕರಿಸಿದ. ಮಾಸ್ಕ್ ಹಾಕಿದರೆ ವಾಂತಿ ಬಂದಂತೆ ಆಗುವುದೆಂದು ಹಾಗೇ ಕುಳಿತ. ತಲೆ ಸುತ್ತಿ ಬಂದು ಹಸೆಮಣೆಯ ಮೇಲೇ ಮಲಗಿಬಿಟ್ಟ. ಇದೀಗ ಎಲ್ಲರಿಗೂ ಗಾಬರಿಯಾಯಿತು. ಅವನ ಬಾವದಿಕ್ಕಳು ಡಾಕ್ಟರ್ ಮೇಡಂ ಬಳಿ ಒಯ್ದರು. ಅವರು ಔಷಧಿ ಕೊಡಲು ನಿರಾಕರಿಸಿದರು. ಎಷ್ಟುಬಾರಿ ಕೋವಿಡ್ ಟೆಸ್ಟ್ ಮಾಡಿಸಿ ಎಂದರೂ ಮಾಡಲಿಲ್ಲ; ಇನ್ನು ತಮ್ಮ ಬಳಿ ಬರುವುದೇ ಬೇಡ ಎಂದು ನಿಷ್ಠುರವಾಗಿ ಹೇಳಿದರು. ಕೋವಿಡ್ ಹೆಸರು ಬಂದದ್ದೇ ಬಂದವರಲ್ಲಿ ಕೆಲವರು ಮೆಲ್ಲನೆ ಕರಗಿದರು. ಸದ್ಯಕ್ಕೆ ಶಕ್ತಿ ಇಂಜೆಕ್ಷನ್ ಹಾಕಿ ಎಂದೊಬ್ಬರು ಧಮಕಿ ಹಾಕಿದರು. ಇತ್ತ ಮಂಟಪದಲ್ಲಿ ಮುಹೂರ್ತ ಹತ್ತಿರ ಬರುತ್ತಿದೆ. ಅಲಂಕೃತ ಮೇನೆಯಲ್ಲಿ ಮದುಮಗಳು ಹಸೆಮಣೆಗೆ ಬಂದಳು. ಮಾಂಗಲ್ಯ ಧಾರಣೆಯ ವೇಳೆಗೆ ಮೇಲೆ ಕಟ್ಟಿದ ಬಲೂನುಗಳು ಸಿಡಿದು ಪುಷ್ಟವೃಷ್ಟಿಯಾಯಿತು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಗೌರೀಶ ಎಷ್ಟೆಲ್ಲ ಕರೆದಿದ್ದ, ಎಷ್ಟು ತಿರುಗಿದ್ದ! ಐನೂರು ಜನರಾದರೂ ಆಗುವರೆಂದು ಅಡುಗೆ ಮಾಡಿಸಿದ್ದ. ಆದರೆ ಹುಡುಗಿಯ ಮನೆಯಿಂದ ಎರಡು ಟ್ರಾಕ್ಸ್​ನಲ್ಲಿ ಬಂದ ಮೂವತ್ತು ಜನ, ತನ್ನ ಕಡೆಯ ಇಪ್ಪತ್ತು ಮೂವತ್ತು ಜನರನ್ನು ಬಿಟ್ಟರೆ ಮದುವೆಯ ಹಾಲ್ ತುಂಬಲಿಲ್ಲ. ಬಂದವರಿಗೆ ಎಲೆಯಲ್ಲಿ ಚೆಲ್ಲುವಷ್ಟು ಬಡಿಸಿದರು. ತುಂಬಿತುಂಬಿ ಮನೆಗೆ ಕಳಿಸಿದರು. ಯಾಕೋ ಗೌರೀಶನಿಗೆ ಎಷ್ಟು ಸೈರಿಸಿಕೊಂಡರೂ ಮನಸ್ಸಿಗೆ ಕಿರಿಕಿರಿ ಎನಿಸುತ್ತಿದೆ. ಶಾಂತಿಯೇ ಇಲ್ಲ.

ಹಗಲಿಡೀ ಮಲಗಿದ ಅಪ್ಪ ಸಂಜೆಗೆ ಎದ್ದು ಕೂತ. ಸೊಸೆ ಮನೆ ತುಂಬಿದ್ದನ್ನು ನೋಡಿದ. ಚಾಕಣ್ಣು ಮಾಡಿಸಿ ಕುಡಿದದ್ದು ನೋಡಿದರೆ ಸ್ವಲ್ಪ ಆರಾಮಾದ ಹಾಗೆ ಕಾಣಿಸಿದ. ‘ತಮಾ, ಅದ್ ಬಗೇಲ್ ತಂದ್ಕೊಡ್ತ್ಯೆನ?’ ಎಂದ. ‘ಅದರ’ ಮಾರಾಟ ಲಾಕ್‌ಡೌನೆಂದು ಬಂದ್ ಆಗಿತ್ತು. ಆಸ್ಪತ್ರೆಗೆ ಒಯ್ಯುವುದೋ ಬಿಡುವುದೋ ಎಂಬ ದ್ವಂದ್ವದಲ್ಲಿ ಮತ್ತೆರೆಡು ದಿನ ಕಳೆಯಿತು. ಈಗವನಿಗೆ ಜ್ವರವಿಲ್ಲ, ಆದರೆ ನಿತ್ರಾಣ. ಅವನಿಷ್ಟು ನಿತ್ರಾಣವಾದದ್ದನ್ನು ಅವ್ವಿ ಎಂದೂ ನೋಡಿದವಳಲ್ಲ. ಬೀಗರೂಟವೊಂದು ಆಗಲಿ, ಆಮೇಲೆ ಆಸ್ಪತ್ರೆಗೆ ಒಯ್ಯುವಾ ಎಂದು ಭಾವನೂ ಭಾವಮೈದನೂ ಮಾತಾಡಿಕೊಂಡರು.

ಆದರೆ ಬೀಗರೂಟದ ದಿನ ಬೆಳಿಗ್ಗೆ ಸೂರ್ಯ ಮೂಡುವ ವೇಳೆಗೆ ಗಪ್ಪತಿ ಏಳಲಸಾಧ್ಯವಾದಷ್ಟು ನಿತ್ರಾಣವಾಗಿದ್ದ. ಸುಸ್ತು ಅವನ ಮುಖದ ಗೆರೆಗೆರೆಗಳ ಸಂದಿಯಿಂದ ಸೂಸುತ್ತಿತ್ತು. ಎತ್ತಿ ಒಯ್ದು ಮೀಯಿಸಿದರು. ಭಯದಿಂದ ಅವ್ವಿ ಎದೆ ಬಡಿದುಕೊಂಡು ಬೊಬ್ಬೆ ಹಾಕಿದಳು. ಊಟ ಮುಗಿದದ್ದೇ ಆಸ್ಪತ್ರೆಗೊಯ್ದು ಅಡ್ಮಿಟ್ ಮಾಡುವೆನೆಂದು ಅವಳಿಗೆ ಸಮಾಧಾನ ಹೇಳಿ ಬೀಗರನ್ನು ಎದುರುಗೊಂಡ.

ಬಂದವರು ಕೆಲವರಷ್ಟೇ. ಅವರೆಲ್ಲ ಉಂಡು, ತಿರುಗಿ ಹೋಗುವಾಗ ಅಕ್ಕಿ ಕೋಲಿಯಲ್ಲಿ ಮಲಗಿಸಿದ್ದ ಗಪ್ಪತಿಯನ್ನು ನೋಡಲು ಹೋದರು. ಊಟ ಮಾಡದ ಅವ್ವಿ ಕಾಟಿನ ಕೆಳಗೆ ಮುದುರಿ ಮಲಗಿದ್ದಾಳೆ. ರಾತ್ರಿಯಿಡೀ ಗಂಡ ಏದುಸಿರು ಬಿಡುತ್ತ ಬೆನ್ನು ತಿಕ್ಕು ತಿಕ್ಕು ಎಂದದ್ದಕ್ಕೆ ನಿದ್ರೆ ಬಿಟ್ಟು ದಣಿದಿದ್ದಕ್ಕೋ ಏನೋ, ಗೊರಕೆ ಹೊಡೆಯುತ್ತಿದ್ದಾಳೆ. ಗೌರೀಶ ‘ಅಪ್ಪಾ’ ಎಂದರೆ ಏನೂ ಪ್ರತಿಕ್ರಿಯೆಯೇ ಇಲ್ಲ. ‘ಮಾವ ಹೋಗ್ತರಂತೆ ನೋಡ ಅಪ್ಪ’ ಎಂದು ಮಗ ಅಪ್ಪನ ಹೊದಿಕೆ ಸರಿಸಿದರೆ ಬಿಟ್ಟ ಕಣ್ಣು ಬಿಟ್ಟುಕೊಂಡು ಗಪ್ಪತಿ ತಣ್ಣಗಾಗಿದ್ದ. ಮೌನವಾಗಿ ಎದ್ದು ಹೋಗಿದ್ದ. ಮದುವೆ ಮನೆ ಮಸಣದ ಮನೆಯಾಯಿತು.

ಮದುಮಕ್ಕಳು, ಅವ್ವಿಯೂ ಸೇರಿದಂತೆ ಮದುವೆ ಮನೆಗೆ ಬಂದವರಲ್ಲಿ ಮೂವತ್ತು ಜನ ಕೋವಿಡ್ ಆಗಿ ಮನೆವಾಸ, ಆಸ್ಪತ್ರೆವಾಸ ಅನುಭವಿಸಿದರು. ಇನ್ನೂ ಸುಸ್ತಿನಿಂದ ಆಘಾತದಿಂದ ಚೇತರಿಸಿಕೊಳ್ಳಲು ಕಷ್ಟಪಡುತ್ತಿರುವರು.

***

ಸಾವಿನ ದುಃಖ ಕರಗಿಸಲಾರದ ಕಲ್ಲು ಇದೆಯೆ?

ಎರಡು ತಿಂಗಳು ಕಳೆದಿದೆ. ಆ ಮನೆ ನಿಶ್ಶಬ್ದದ, ಗಾಢ ವಿಷಾದದ, ಪಶ್ಚಾತ್ತಾಪದ ತಾಣವಾಗಿಬಿಟ್ಟಿದೆ. ಅವನಿಗೆ ಅಪ್ಪನ ಪ್ರತಿ ಹೆಜ್ಜೆಯೂ, ಅದರೊಳಗಿನ ಸುಸ್ತೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನ ದಣಿದ ಮುಖ ನೋಡುವಾಗ ‘ಅದೇ’ ಇರಬಹುದೇ ಎಂದು ಒಳಗೊಳಗೇ ಭಯವಾದದ್ದಿತ್ತು. ಆದರೆ ಮೇಲೆ ತೋರಿಸಬಾರದೆಂದು ಹುಂಬ ಧೈರ್ಯ ತಳೆದ. ಎಷ್ಟೋ ಜನರಿಗೆ ಕೋವಿಡ್ ಬಂದದ್ದು, ಹೋದದ್ದು, ಏನೂ ಆಗದೇ ಗುಣವಾದದ್ದು ನೋಡಿದ್ದ. ಹಾಗೆಯೇ ಅಪ್ಪನ ವೀಕ್ನೆಸ್ ಸರಿ ಮಾಡಬಹುದು ಎಂದು ಭಾವಿಸಿದ್ದ. ಆದರೆ ಇದೇನಾಗಿ ಹೋಯಿತು? ಊರ ತುಂಬ ಎಲ್ಲರೂ ಅವನನ್ನು ಟೀಕಿಸುವವರೇ. ನಿಂದೆಯ, ಅಪಹಾಸ್ಯದ ಕಟಕಿ ಮಾತುಗಳನ್ನು ಆಡುವವರೇ. ಬೇರೆ ಯಾರೂ ಬೇಡ, ಅವ್ವಿಯೇ ಮಗನ ಮುಖ ಕಂಡರೆ ಸಾಕು, ‘ನೀನೇ ನಿಮ್ಮಪ್ಪನ್ನ ಕೊಂದಾಂವ’ ಎಂದು ಎದೆ ಬಡಿದುಕೊಂಡು ಕೂಗಾಡುತ್ತಾಳೆ. ಮಾತೇ ಆಡದ ಅವ್ವಿ ಇದೊಂದು ಮಾತನ್ನು ಪದೇಪದೇ ಹೇಳಲು ಕಲಿತುಬಿಟ್ಟಿದ್ದಾಳೆ. ಬರಬರುತ್ತ ಅವಳ ಆರೋಪ ಮಗನ ಮೇಲಿನಿಂದ ಸೊಸೆಯ ಮೇಲೆ ತಿರುಗಿದೆ. ಈ ಮುಹೂರ್ತ ಇಟ್ಟುಕೊಟ್ಟ ಭಟ್ಟರ ಮೇಲೆ ತಿರುಗಿದೆ. ಮನಸ್ಸು ಬಂದರಷ್ಟೇ ಮೀಯುತ್ತಾಳೆ, ತಿನ್ನುತ್ತಾಳೆ. ಅವಳಿಗೆ ಗಂಡನ ಹೊರತು ಬೇರೇನೂ ಕಾಣುತ್ತಿಲ್ಲ. ಅವನ ಏದುಸಿರಿನ ಶಬ್ದದ ಹೊರತು ಬೇರೇನೂ ಕೇಳುತ್ತಿಲ್ಲ. ‘ಎಲ್ರು ಮನೆ ಬಿಟ್ಟೋಗಿ, ಅವ್ರು ಬತ್ತಾರೆ’ ಎನ್ನುವವಳು ಮರುಕ್ಷಣ ತಾನು ಸಾಯಬೇಕು, ಅವರಿದ್ದಲ್ಲಿ ಹೋಗಬೇಕು, ಇದು ನನ್ನ ಮನೆಯಲ್ಲ ಎಂದು ಬಡಬಡಿಸುತ್ತಾಳೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇದು ಒಂದು ಮನೆಯ ಕತೆಯಲ್ಲ. ಈ ಅಪ್ಪನಂತೆ ಎಷ್ಟೋ ಜನ ಟೆಸ್ಟ್ ಮಾಡಿಕೊಳ್ಳಲು ಹೆದರಿ ಕೊನೆಯುಸಿರೆಳೆದಿದ್ದಾರೆ. ಪ್ರಾಣವಾಯು ಸಿಗದೇ ತಣ್ಣಗಾಗಿದ್ದಾರೆ. ಹಣಬಲವಿದ್ದವರ ಕತೆ ಒಂದು. ಇಲ್ಲದವರು ‘ನಾರಾಯಣನೇ ವೈದ್ಯ, ಗಂಗಾನದಿಯೇ ಔಷಧಿ’ ಎಂದು ಬೆಚ್ಚಗಿರುವ ಜನನಾಯಕರ ಮೂರ್ಖತನದಿಂದ ಕಾಣದೂರಿಗೆ ನಡೆದುಬಿಟ್ಟಿದ್ದಾರೆ.

ದುಃಖಕರವಾದ, ದಾರುಣವಾದ, ಖಿನ್ನತೆಯನ್ನು ಉದ್ದೀಪಿಸುವ ಈ ಇದೆಲ್ಲವನ್ನು ಏಕೆ ನೆನೆಯಬೇಕು? ಏಕೆಂದರೆ ನಾವು ಗೌರವದ ವಿದಾಯ ಹೇಳಲೂ ಸಾಧ್ಯವಾಗದ ನಮ್ಮವರ ಸಾವು ಹುಸಿ ಹೋಗಬಾರದು ಎಂದು. ಅದು ಎಚ್ಚರಿಕೆಯ ಗಂಟೆಯಾಗಿ ಒಳಗೆ ಸದಾ ಮೊಳಗಲಿ ಎಂದು. ಮೂರನೆಯ ಅಲೆಗೆ ಕೋವಿಡ್ ಮತ್ತಷ್ಟು ಜೀವಗಳ ಕದ್ದೊಯ್ಯದಿರಲಿ ಎಂದು.

ಅಡ್ಡಿಲ್ಲಲ?
*
ಪದಗಳ ಅರ್ಥ
ಬೊದ್ದ = ಬೆಪ್ಪ

ಹೆಸರುಗಳ ಉತ್ತರ ಕನ್ನಡ ರೂಪ
ಪೇದ್ರು = ಪೆಡ್ರೊ
ಮಾಚ = ಮಾಬ್ಲೇಶ್ವರ
ಕುಟ್ಣ = ಕೃಷ್ಣ
ಕ್ಯಾಸ = ಕೇಶವ
ಗೋಯ್ದ = ಗೋವಿಂದ
ಗಪ್ಪತಿ = ಗಣಪತಿಯ ತದ್ಭವ
ಮಂಯ್ಙಾತ = ಮಂಜುನಾಥ

ನೋಟಗಾರ = ಪ್ರಶ್ನೆ ಕೇಳಿದರೆ ಉತ್ತರ ಹೇಳಿ ಪರಿಹಾರದ ಆಚರಣೆ ಮಾಡಿಸುವವರು
ಕೋಳಿಯ ತಲೆ ತಿಪ್ಪುವುದು = ಕೋಳಿಯ ತಲೆ ತಿರುಪುವುದು, ಬಲಿ
ಸೀಯಾಳ = ಎಳನೀರು
ಕೋಲಿ = ಕೋಣೆ
ಅಡ್ಡಿಲ್ಲ = ಹೌದಲ್ಲವ, ಪರವಾಗಿಲ್ಲ ಎನ್ನಲು ಉ.ಕ.ದವರು ಪದೇಪದೇ ಬಳಸುವ ನುಡಿಗಟ್ಟು
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 20 : ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ಅಳುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?

ಇದನ್ನೂ ಓದಿ : Covid diary ; ಕವಲಕ್ಕಿ ಮೇಲ್ : ಇಂಗ್ಲೆಂಡಿನ ಪೋರ್ಟ್ಸ್​ಮೌತ್ ಹಡಗುಕಟ್ಟೆಯಲ್ಲಿ ಕಾಯುತ್ತಿರುವ ಟ್ರೀಜಾ