ಸಿದ್ದಲಿಂಗಯ್ಯ ನುಡಿನಮನ ; ಏನೋ ಬೆಳಕಿದೆ ಇವನಲ್ಲಿ ಅನ್ನಿಸಿಯೇ ನಾನು ಕೀರಂ ‘ಹೊಲೆಮಾದಿಗರ ಹಾಡು’ ಪ್ರಕಟಿಸಿದೆವು; ಡಾ.ವಿಜಯಾ

Obituary : ‘ಸರಕಾರ ಕೊಡಮಾಡುವ ಪ್ರಕಾಶನ ಪ್ರಶಸ್ತಿಯನ್ನು ನಾನು ಸ್ವೀಕರಿಸಲಿಲ್ಲ. ಮುಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಿತಿಯ ಮೀಟಿಂಗ್​ನಲ್ಲಿ ಅಂದನಂತೆ, ಅಮ್ಮಾ ಒಪ್ಪೋದು ಕಷ್ಟ ಅಂತ. ಆಮೇಲೆ ನಾ ಒಪ್ಕೊಂಡಿದ್ದಕ್ಕೆ ಬಹಳ ಖುಷಿಪಟ್ಟನಂತೆ. ಏನೇ ಆದರೂ ಈವತ್ತು ಮನೆಯ ಮಗನ್ನ ಕಳಿಸಿಕೊಟ್ಟೆ ಅನ್ನಿಸುತ್ತಿದೆ.’ ಡಾ. ವಿಜಯಾ

ಸಿದ್ದಲಿಂಗಯ್ಯ ನುಡಿನಮನ ; ಏನೋ ಬೆಳಕಿದೆ ಇವನಲ್ಲಿ ಅನ್ನಿಸಿಯೇ ನಾನು ಕೀರಂ ‘ಹೊಲೆಮಾದಿಗರ ಹಾಡು’ ಪ್ರಕಟಿಸಿದೆವು; ಡಾ.ವಿಜಯಾ
ಡಾ. ಸಿದ್ದಲಿಂಗಯ್ಯ ಮತ್ತು ಡಾ. ವಿಜಯಾ

ಬರುಬರುತ್ತ ಉತ್ಸಾಹ ಮತ್ತು ಸ್ಫೂರ್ತಿಯ ಹುಡುಗನಾಗಿ ಬೆಳೆದ. ರಂಗಭೂಮಿ ಚಳವಳಿ ಮಾಡಿದಾಗೆಲ್ಲಾ ಅಲ್ಲಿಂದಲ್ಲೇ ಹಾಡು ಕಟ್ಟಿ ಹಾಡತೊಡಗಿದ. ತಾತ್ವಿಕವಾಗಿ ನಂತರದ ದಿನಗಳಲ್ಲಿ ಬದಲಾದ ಎನ್ನಿಸಿದ್ದು ನಿಜ. ಆದರೆ ನಾನದನ್ನು ಅಷ್ಟು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಎಂಎಲ್​ಸಿ ಆದ. ಬಹಳಷ್ಟು ಜನರಿಗೆ ಉಪಕಾರ ಮಾಡಿದ. ಆದರೆ ಕೆಲವರು ಇದೆಲ್ಲವೂ ದಲಿತ ಚಳವಳಿಯ ನಿಲುವುಗಳಿಗೆ ವಿರುದ್ಧ ಎಂದರು. ಅವನ ಪಾಡಿಗೆ ಅವ ಕೆಲಸಗಳನ್ನು ಮಾಡುತ್ತ ಹೋದ. ಎಂದೂ ಯಾವ ಕಾರಣಕ್ಕೂ ಜಗಳಕ್ಕೆ ನಿಂತವನಲ್ಲ. ಕೋಪ ಮಾಡಿಕೊಂಡವನಲ್ಲ. ಗಮನಿಸಬೇಕಾದದ್ದು ಎಂದರೆ ಅವನ ಎದುರು ನಿಂತು ಯಾರೂ ಏನನ್ನೂ ಪ್ರಶ್ನಿಸುತ್ತಿರಲಿಲ್ಲ. ಮುಂದೆ ಕೆಲ ಕಾರಣಗಳಿಗಾಗಿ ನಾನೂ ಸ್ವಲ್ಪ ದೂರ ಆದೆ.
ಡಾ. ವಿಜಯಾ, ಹಿರಿಯ ಸಾಹಿತಿ, ಪತ್ರಕರ್ತೆ.

*

ಏನು ಹೇಳೋದು ಮನೆಯ ಮಗನನ್ನ ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ಅವನು ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಪರಿಚಯವಾದ. ಮಾತು ಕಡಿಮೆ ಸಂಕೋಚದ ಸಣ್ಣ ಹುಡುಗ. ಯಾವಾಗಲೂ ನಮ್ಮ ಮನೆಗೆ ಬರುತ್ತಿದ್ದ. ಶಾಂತಿನಾಥ ದೇಸಾಯಿಯವರನ್ನು ಪರಿಚಯಿಸಿದೆ. ನನಗೆ ಲೇಖಕರು ಕಳಿಸಿದ ಹೊಸ ಪುಸ್ತಕಗಳನ್ನು, ‘ಇವೆಲ್ಲ ಇಟ್ಟುಕೊಂಡು ನೀವೇನು ಮಾಡುತ್ತೀರಿ ಅಮ್ಮಾ?’ ಎನ್ನುತ್ತಲೇ ಹೊತ್ತುಕೊಂಡು ಹೋಗುತ್ತಿದ್ದ ಮಹಾ ಪುಸ್ತಕ ವ್ಯಾಮೋಹಿ. ಈ ಹುಡುಗ ‘ಹೊಲೆಮಾದಿಗರ ಹಾಡು’ ಬರೆದಾಗ, ಈ ಹುಡುಗನಲ್ಲಿ ಏನೋ ಬೆಳಕಿದೆ ಅನ್ನಿಸಿತು. ನಾನು ಕೀರಂ ನಾಗರಾಜ ಹಣ ಹಾಕಿ ಪ್ರಕಟಿಸಿದೆವು. ಖುದ್ದಾಗಿ ಮಾರಿದೆವು. ಆಗಿನ್ನೂ ನಾನು ಪ್ರಕಾಶನ ಶುರು ಮಾಡಿರಲಿಲ್ಲ. ನಂತರ ಎರಡನೇ ಸಂಕಲನ ‘ಸಾವಿರಾರು ನದಿಗಳು’ ಬಿಡುಗಡೆಯನ್ನು ನಾನು ಬರಗೂರು ಮಾಡಿದೆವು.

ರಾಮಕೃಷ್ಣ ಹೆಗಡೆಯವರಿಗೆ ನಾವೊಂದಿಷ್ಟು ಜನರು ಪ್ರಿಯರಾಗಿದ್ದೆವು. ಅವರಿಗೆ ಬೇಸರವೆನ್ನಿಸಿದಾಗೆಲ್ಲ ಅಥವಾ ಏನಾದರೂ ಚರ್ಚಿಸಬೇಕೆನ್ನಿಸಿದಾಗೆಲ್ಲ ರಾತ್ರಿಯೂಟಕ್ಕೆ ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ನಾನು ಪ್ರೇಮಾ ಕಾರಂತ, ಸಿದ್ದಲಿಂಗಯ್ಯ, ಸಿ.ವಿ. ರಾಜಗೋಪಾಲ್ ಹೀಗೆ ಕೆಲವೊಂದಿಷ್ಟು ಜನ. ಗುಂಡು ಹಾಕುವವರು ಹಾಕುತ್ತಿದ್ದರು. ಆ ಎಲ್ಲ ಗಂಡಸರ ನಡುವೆ ನಾವಿಬ್ಬರೇ ಹೆಣ್ಣುಮಕ್ಕಳು, ಹರಟೆ ಹೊಡೆಯುತ್ತ ನಮ್ಮ ಪಾಡಿಗೆ ನಾವು ಇರುತ್ತಿದ್ದೆವು. ಆಗ ಸಿದ್ದಲಿಂಗಯ್ಯ ಒಂದರ ಮೇಲೊಂದು ಹಾಡು ಹೇಳುತ್ತಲೇ ಇರುತ್ತಿದ್ದ.

ಬರುಬರುತ್ತ ಉತ್ಸಾಹ ಮತ್ತು ಸ್ಫೂರ್ತಿಯ ಹುಡುಗನಾಗಿ ಬೆಳೆದ. ರಂಗಭೂಮಿ ಚಳವಳಿ ಮಾಡಿದಾಗೆಲ್ಲಾ ಅಲ್ಲಿಂದಲ್ಲೇ ಹಾಡು ಕಟ್ಟಿ ಹಾಡತೊಡಗಿದ. ತಾತ್ವಿಕವಾಗಿ ನಂತರದ ದಿನಗಳಲ್ಲಿ ಬದಲಾದ ಎನ್ನಿಸಿದ್ದು ನಿಜ. ಆದರೆ ನಾನದನ್ನು ಅಷ್ಟು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಎಂಎಲ್​ಸಿ ಆದ. ಬಹಳಷ್ಟು ಜನರಿಗೆ ಉಪಕಾರ ಮಾಡಿದ. ಆದರೆ ಕೆಲವರು ಇದೆಲ್ಲವೂ ದಲಿತ ಚಳವಳಿಯ ನಿಲುವುಗಳಿಗೆ ವಿರುದ್ಧ ಎಂದರು. ಅವನ ಪಾಡಿಗೆ ಅವ ಕೆಲಸಗಳನ್ನು ಮಾಡುತ್ತ ಹೋದ. ಎಂದೂ ಯಾವ ಕಾರಣಕ್ಕೂ ಜಗಳಕ್ಕೆ ನಿಂತವನಲ್ಲ. ಕೋಪ ಮಾಡಿಕೊಂಡವನಲ್ಲ. ಗಮನಿಸಬೇಕಾದದ್ದು ಎಂದರೆ ಅವನ ಎದುರು ನಿಂತು ಯಾರೂ ಏನನ್ನೂ ಪ್ರಶ್ನಿಸುತ್ತಿರಲಿಲ್ಲ. ಮುಂದೆ ಕೆಲ ಕಾರಣಗಳಿಗಾಗಿ ನಾನೂ ಸ್ವಲ್ಪ ದೂರ ಆದೆ.

ಆದರೆ ಅವನು ಬಿಡಲಿಲ್ಲ. ಕನ್ನಡ ಪುಸ್ತಕ ಪ್ರಾಧಿಕಾರದ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷನಾದಾಗ ಸಮಿತಿಗಳಿಗೆ ನನ್ನನ್ನೂ ಸೇರಿಸಿದ. ಮುಂದೆ ಸರಕಾರ ಕೊಡಮಾಡುವ ಪ್ರಕಾಶನ ಪ್ರಶಸ್ತಿಯನ್ನು ನಾನು ಸ್ವೀಕರಿಸಲಿಲ್ಲ. ಮುಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಿತಿಯ ಮೀಟಿಂಗ್​ನಲ್ಲಿ ಅಂದನಂತೆ, ಅಮ್ಮಾ ಒಪ್ಪೋದು ಕಷ್ಟ ಅಂತ. ಆಮೇಲೆ ನಾ ಒಪ್ಕೊಂಡಿದ್ದಕ್ಕೆ ಬಹಳ ಖುಷಿಪಟ್ಟನಂತೆ. ಏನೇ ಆದರೂ ಈವತ್ತು ಮನೆಯ ಮಗನ್ನ ಕಳಿಸಿಕೊಟ್ಟೆ ಅನ್ನಿಸುತ್ತಿದೆ.

ಇದನ್ನೂ ಓದಿ :Siddalingaiah Death: ಕವಿ, ಸಾಹಿತಿ ಸಿದ್ದಲಿಂಗಯ್ಯ ನಿಧನ; ಯಡಿಯೂರಪ್ಪ, ಸಿದ್ಧರಾಮಯ್ಯ, ಕುಮಾರಸ್ವಾಮಿ ಸಹಿತ ಹಲವು ಗಣ್ಯರ ಸಂತಾಪ