Vijaya Bhaskar‘s Death Anniversary: ‘ನೀನೇ ಸಾಕಿದ ಗಿಳಿ’ ಹಮ್ಮಿಂಗ್ ಕೇಳಿ ‘ನನ್ನ ಮನಸ್ಸನ್ನೇ ಹಿಡಿದುಬಿಟ್ಟೆ’ ಎಂದಿದ್ದರು ಪುಟ್ಟಣ್ಣ
Puttanna Kanagal : ಪುಟ್ಟಣ್ಣನವರು ಯಾವಾಗ್ಲೂ ಹೇಳ್ತಾ ಇದ್ದರು ‘ನನ್ನ ಸಿನಿಮಾಗಳಲ್ಲಿ ಉದ್ವೇಗ ಮತ್ತು ಉತ್ಕಟತೆ ಇರುತ್ತೆ. ಅದನ್ನು ಬ್ಯಾಲೆನ್ಸ್ ಮಾಡಿ ಕ್ಲಾಸಿಕ್ ಮಾಡಿದ್ದು ವಿಜಯ ಭಾಸ್ಕರ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ.’
ವಿಜಯ ಭಾಸ್ಕರ್ | Vijaya Bhaskar (1931-2002) : ಕೆ.ಎಸ್.ಎಲ್. ಸ್ವಾಮಿ, ಗೀತಪ್ರಿಯ ಅವರಿಗೆ ವಿಜಯ ಭಾಸ್ಕರ್ ನೆಚ್ಚಿನ ಸಂಗೀತ ನಿರ್ದೇಶಕರು. ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರಿಗಂತೂ ಮೊದಲು ವಿಜಯ ಭಾಸ್ಕರ್ ಕಾಲ್‌ಶೀಟ್ ಸಿಗಬೇಕು. ಅಮೇಲೆ ಸ್ಟಾರ್‌ಗಳು ಅನ್ನೋ ಭಾವನೆ. ಪುಟ್ಟಣ್ಣನವರ 24 ಸಿನಿಮಾಗಳಲ್ಲಿ 17ಕ್ಕೆ ವಿಜಯ ಭಾಸ್ಕರ್ ಅವರದೇ ಮ್ಯೂಸಿಕ್. ಕವಿಗೀತೆಗಳನ್ನ ಸರಿಯಾಗಿ ಅರ್ಥ ಮಾಡಿಕೊಂಡು ಟ್ಯೂನ್ ಮಾಡೋದರಲ್ಲಿ ಕೂಡ ಅವರದು ಎತ್ತಿದ ಕೈ. ಬೆಳ್ಳಿಮೋಡ ಸಿನಿಮಾದ ಬೇಂದ್ರೆ ಅವರ ‘ಮೂಡಣ ಮನೆಯ ಮತ್ತಿನ ನೀರಿನ’ ‘ಶರಪಂಜರ’ ಸಿನಿಮಾದ ‘ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ’ ‘ಅರಿಶಿನ ಕುಂಕುಮ’ಸಿನಿಮಾದ ‘ಇಳಿದು ಬಾ ತಾಯೇ’ ಜಿ.ಎಸ್.ಎಸ್ ಅವರ ‘ವೇದಾಂತಿ ಹೇಳಿದನು’ ‘ಹಾಡು ಹಳೆಯದಾದರೇನು’ ಸುರಂ ಎಕ್ಕುಂಡಿ ಅವರ ‘ಯಾವ ಕಾಣಿಕೆ ನೀಡಲಿ ನಿನಗೆ’ ಕೈಯ್ಯಾರ ಕಿಞಣ ರೈ ಅವರ ‘ಸಾಗಿದೆ ಸಂಗ್ರಾಮ’ ಹೀಗೆ ಹಲವು ಕವಿ ಗೀತೆಗಳನ್ನು ಸಿನಿಮಾದಲ್ಲಿ ಅಳವಡಿಸಿ ದೃಶ್ಯ ಕಾವ್ಯ ಮಾಡಿದ್ದು ವಿಜಯ ಭಾಸ್ಕರ್ ಅವರ ಹೆಗ್ಗಳಿಕೆ. ಎನ್. ಎಸ್. ಶ್ರೀಧರಮೂರ್ತಿ, ಹಿರಿಯ ಪತ್ರಕರ್ತ
*
(ಭಾಗ 3)
ಪುಟ್ಟಣ್ಣ ಮತ್ತು ವಿಜಯಭಾಸ್ಕರ್ ಇಬ್ಬರೂ ಮದ್ರಾಸಿಗೆ ಬಂದ ಕಾಲದಿಂದಲೂ ಪರಿಚಿತರು. ‘ಬೆಳ್ಳಿ ಮೋಡ’ದಿಂದ ಆರಂಭಿಸಿ ‘ಮಸಣದ ಹೂವು’ ವರೆಗೂ ಈ ನಿಕಟ ಸಂಬಂಧ ಬೆಳೆದು ಬಂದಿತು. ಪುಟ್ಟಣ್ಣನವರು ಯಾವಾಗ್ಲೂ ಹೇಳ್ತಾ ಇದ್ದರು ‘ನನ್ನ ಸಿನಿಮಾಗಳಲ್ಲಿ ಉದ್ವೇಗ ಮತ್ತು ಉತ್ಕಟತೆ ಇರುತ್ತೆ. ಅದನ್ನು ಬ್ಯಾಲೆನ್ಸ್ ಮಾಡಿ ಕ್ಲಾಸಿಕ್ ಮಾಡಿದ್ದು ವಿಜಯಭಾಸ್ಕರ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ.’ ‘ಉಪಾಸನೆ’ ಅನ್ನುವ ಸಂಗೀತವನ್ನೇ ಬೇಸ್ ಆಗಿಟ್ಟು ಕೊಂಡ ಸಿನಿಮಾ ಮಾಡುವಾಗ ವಿಜಯಭಾಸ್ಕರ್ ತುಂಬಾ ಶ್ರಮ ತೆಗೆದು ಕೊಂಡಿದ್ದರು. ವೀಣೆ ಬೇಸ್ ಆಗಿರೋ ಸಿನಿಮಾ ಆಗಿದ್ದರಿಂದ ದೊರೆಸ್ವಾಮಿ ಅಯ್ಯಂಗರ್ ಅವರನ್ನು ಕನ್ಸಲ್ಟ್ ಮಾಡಿ ಟ್ರ್ಯಾಕ್ ಕ್ರಿಯೇಟ್ ಮಾಡಿದ್ದರು.
ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಮ್ಯೂಸಿಕ್ ಬಿಟ್‌ಗಳನ್ನು ಸಿನಿಮಾ ಉದ್ದಕ್ಕೂ ಅವರು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು ಪುಟ್ಟಣ್ಣನವರ ಮನಸ್ಸಿನಲ್ಲಿ ಏನು ಓಡ್ತಾ ಇದೆ ಎನ್ನೋದು ವಿಜಯ ಭಾಸ್ಕರ್ ಅವರಿಗೆ ಖಚಿತವಾಗಿ ಗೊತ್ತಾಗಿ ಬಿಡ್ತಾ ಇತ್ತು. ‘ಮಾನಸ ಸರೋವರ’ ಸಿನಿಮಾ ಮಾಡುವಾಗ ಪುಟ್ಟಣ್ಣನವರಿಗೆ ಡಿಫರೆಂಟ್ ಆದ ಪ್ಯಾಥೋ ಫೀಲ್ ಬೇಕಿತ್ತು. ಅದನ್ನ ಹೇಳುವುದಕ್ಕೆ ಒದ್ದಾಡ್ತಾ ಇದ್ದರು. ‘ನೀನೆ ಸಾಕಿದ ಗಿಳಿ’ ಹಮ್ಮಿಂಗ್ ಮೂಡಿಸಿದಾಗ ಪುಟ್ಟಣ್ಣ ಕಣ್ಣೀರು ಸುರಿಸುತ್ತಾ ‘ನೀನು ನನ್ನ ಮನಸ್ಸನ್ನೇ ಹಿಡಿದು ಬಿಟ್ಟೆ ಕಣೋ’ ಎಂದಿದ್ದರು. ಕೆ.ಎಸ್.ಎಲ್. ಸ್ವಾಮಿಯವರಿಗೂ ವಿಜಯ ಭಾಸ್ಕರ್ ಅಂದರೆ ಬಹಳ ಪ್ರೀತಿ. ‘ಮಲಯ ಮಾರುತ’ ಇವರ ಕಾಂಬಿನೇಷನ್‌ನಲ್ಲಿ ಬಂದ ಬೆಸ್ಟ್ ಫಿಲಂ ಎನ್ನಿಸಿಕೊಂಡಿದೆ.
ಮೊದಲ ಭಾಗ : Vijaya Bhaskar’s Death Anniversary: ವಿಜಯ ಭಾಸ್ಕರರನ್ನು ಸಂಗೀತದೆಡೆ ಸೆಳೆದ ದೇವಸ್ಥಾನದ ಲೆಗ್ ಹಾರ್ಮೋನಿಯಂ
ವಿಜಯಭಾಸ್ಕರ್ ಅವರ ಕೈಚಳಕದಿಂದ “ಮಲಯಮಾರುತ” ಸಂಗೀತದ ಕಣಜವಾಗಿ ಮಾರ್ಪಟ್ಟಿತ್ತು. ಈ ಚಿತ್ರದಲ್ಲಿ ಇರುವ ಹದಿನೈದು ಗೀತೆಗಳಲ್ಲಿ ಹತ್ತು ಗೀತೆಗಳನ್ನು ಕೆ.ಜೆ. ಯೇಸುದಾಸ್ ಅವರೇ ಹಾಡಿದ್ದರು. ಚೆಂಬೈ ವೈದ್ಯನಾಥ ಭಾಗವತರ್ ಅವರ ನೇರಶಿಷ್ಯರಾದ ಅವರು ಗುರುಭಕ್ತಿಯನ್ನು ತುಂಬಿ ಗೀತೆಗಳನ್ನು ಶ್ರೀಮಂತಗೊಳಿಸಿದ್ದರು. ಎಲ್ಲೆಲ್ಲೂ ಸಂಗೀತವೇ, ಶಾರದೆ ನೀ ದಯೆ ತೋರಿದೆ, ನಟನ ವಿಶಾರದಾ ಮೊದಲಾದ ಗೀತೆಗಳಂತೂ ಶಾಸ್ತ್ರೀಯ ಸಂಗೀತದ ವೈಭವವನ್ನೇ ಬಿಂಬಿಸುತ್ತಿದ್ದವು. ಕನಕದಾಸರ “ಎಲ್ಲರೂ ಮಾಡುವುದು ಹೊಟ್ಟೆಗಾಗಿ”ಕೀರ್ತನೆಯನ್ನು ಪಾಶ್ಚಾತ್ಯ ಶೈಲಿಯಲ್ಲಿ ಸಂಯೋಜಿಸಿದ್ದು, ಅಧರಂ ಮಧುರಂನಂತಹ ಭಕ್ತಿಭಾವದ ಕೀರ್ತನೆಯನ್ನು ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ತಂದಿದ್ದು ವಿಜಯಭಾಸ್ಕರ್ ಅವರ ಹೆಗ್ಗಳಿಕೆಯಾಗಿತ್ತು.
ಅಕ್ಕ ಮಹಾದೇವಿಯವರ ವಚನ, ಮುತ್ತುಸ್ವಾಮಿ ದೀಕ್ಷಿತರ ಮತ್ತು ತ್ಯಾಗರಾಜ ಭಾಗವತರ ಕೀರ್ತನೆಗಳನ್ನು ವಿಜಯಭಾಸ್ಕರ್ ಸಮರ್ಥವಾಗಿ ಚಿತ್ರದ ಚೌಕಟ್ಟಿಗೆ ತಂದಿದ್ದರು. ಚಿತ್ರೀಕರಣಕ್ಕೆ ಮೊದಲೇ ಗೀತೆಗಳ ಸಂಯೋಜನೆಯನ್ನು ಮಾಡಿದ್ದ ರವೀಯವರು ಅವುಗಳನ್ನು ಚಿತ್ರದುದ್ದಕ್ಕೂ ಸಂಗೀತದ ಓಟ ದೊರಕುವಂತೆ ಬಳಸಿಕೊಂಡರು. ಅಷ್ಟೇ ಅಲ್ಲ ಇನ್ನೂ ಎಂಟು ಗೀತೆಗಳು ಧ್ವನಿಮುದ್ರಣಗೊಂಡು ಚಿತ್ರದಲ್ಲಿ ಬಳಕೆಯಾಗದೆ ಉಳಿದವು. ಈ ಅಂಶವೇ ವಿಜಯಭಾಸ್ಕರ್ ಅವರ ರೇಂಜ್ ಎಷ್ಟರ ಮಟ್ಟಿಗಿನದು ಎನ್ನುವುದಕ್ಕೆ ನಿದರ್ಶನವಾಗಿದೆ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಹಿಂದಿನ ಭಾಗ : Vijaya Bhaskar’s Death Anniversary: ಹಾಡೊಂದು ಹಾಡುವೆ ನೀ ಕೇಳು ಮಗುವೆ
Published On - 12:55 pm, Thu, 3 March 22