DS Nagabhushan: ಗಾಂಧಿ ಕಥನದ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿಎಸ್ ನಾಗಭೂಷಣ ನಿಧನ
ಇವರ ‘ಗಾಂಧಿ ಕಥನ’ (Gandhi Kathana) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಿಕ್ಕಿತ್ತು.
ಶಿವಮೊಗ್ಗ: ಖ್ಯಾತ ಸಾಹಿತಿ, ವಿಮರ್ಶಕ ಡಿ.ಎಸ್.ನಾಗಭೂಷಣ (DS Nagabhushan) ಅವರು ಗುರುವಾರ (ಮೇ 19) ಮಧ್ಯರಾತ್ರಿ 12.15ಕ್ಕೆ ಶಿವಮೊಗ್ಗದಲ್ಲಿ ನಿಧನರಾದರು. ಶಿವಮೊಗ್ಗದ ವಿದ್ಯಾನಗರ ರೋಟರಿ ಚಿತಾಗಾರದಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ‘ಗಾಂಧಿ ಕಥನ’ (Gandhi Kathana) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಿಕ್ಕಿತ್ತು.
ನಿರಂತರ ಅಧ್ಯಯನ ಮತ್ತು ಬರಹವನ್ನೇ ಧ್ಯಾನಿಸುತ್ತಿದ್ದ ಅಪರೂಪದ ಬರಹಗಾರ ಡಿ.ಎಸ್.ನಾಗಭೂಷಣ್ ಬೆಂಗಳೂರಿನ ತಿಮ್ಮಸಂದ್ರದಲ್ಲಿ 1ನೇ ಫೆಬ್ರುವರಿ 1952ರಂದು ಜನಿಸಿದರು. ಆಕಾಶವಾಣಿ ದೆಹಲಿ ಕೇಂದ್ರದಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ 1981ರವರೆಗೆ ಸೇವೆ ಸಲ್ಲಿಸಿದ್ದರು. ನಿಲಯದ ಸಹಾಯಕ ನಿರ್ದೇಶಕರಾಗಿ 7 ವರ್ಷ ಸೇವೆ ಸಲ್ಲಿಸಿದ್ದರು. 2005ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ ಓದು, ಬರವಣಿಗೆಗೆ ಬದುಕು ಮುಡಿಪಿಟ್ಟರು. ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’, ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ), ‘ಗಾಂಧಿ ಕಥನ’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಪತ್ನಿ ಸವಿತಾ ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಿ.ಎಸ್.ನಾಗಭೂಷಣ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮಹತ್ವದ್ದು. 2019ರಲ್ಲಿ ಪ್ರಕಟವಾದ ಗಾಂಧಿ ಕಥನ ಕನ್ನಡ ಸಹೃದಯರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾತ್ರವಲ್ಲದೆ, ಹಲವು ಪ್ರಮುಖ ವಿಮರ್ಶಕರ ಗಮನವನ್ನೂ ಸೆಳೆದಿತ್ತು. ಈ ಪುಸ್ತಕದ ಕಥನ ವೈಖರಿ, ಈ ಪುಸ್ತಕಕ್ಕಾಗಿ ಲೇಖಕರು ನಡೆಸಿದ್ದ ಸಿದ್ಧತೆಗಳೂ ಹಲವು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕೃತಿಯ ಕುರಿತು ಪ್ರಕಟವಾದ ಎರಡು ಪ್ರಮುಖ ವಿಮರ್ಶೆಗಳ ಆಯ್ದ ಭಾಗವನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ‘ಓದಿನಂಗಳ’ದಲ್ಲಿ ‘ಅನಾರ್ಕಲಿಯ ಸೇಫ್ಟಿಪಿನ್’ ತಂದಿದ್ದಾರೆ ಡಿಎಸ್ ನಾಗಭೂಷಣ
ಸ್ವ- ಆವಿಷ್ಕಾರದ ಸಂಭ್ರಮ: ಲಕ್ಷ್ಮೀಶ ತೋಳ್ಪಾಡಿ
ಗಾಂಧಿ ಕಥನ ಕೃತಿಯ ಬಗ್ಗೆ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿಯವರು ‘ಹೊಸ ಮನುಷ್ಯ ಸಮಾಜವಾದಿ ಮಾಸಿಕ’ದಲ್ಲಿ ಹೀಗೆ ಬರೆದಿದ್ದರು.
‘ಗಾಂಧಿಯವರ ಚಿತ್ರ ಆರಾಧನಾ ಭಾವದಿಂದ ಬಾನೇರದಂತೆ, ವಿಮರ್ಶೆಯ ಉಳಿಯಿಂದ ಮೂರ್ತಿ ಭಂಜನೆಯೂ ಆಗದಂತೆ, ವರದಿ ಮಾತ್ರ ವಿವರಣೆಗಳಿಂದ ರಕ್ತ ಹೀನವು ಆಗದಂತೆ, ಸಾವಧಾನದ ಓದುಗರಿಗೆ ತಮ್ಮೊಳಗೇ ಅರ್ಥವಾಗುವಂತೆ, ತಮ್ಮದೇ ಪೂರ್ವಾಗ್ರಹಗಳ ತಿಕ್ಕಾಟದ ಒಳಗಿಂದಲೇ ಗಾಂಧಿ ಮೂರ್ತಿಯೊಂದು ಮೂಡಿಬರಲನುವಾಗುವಂತೆ -ಬಹು ಪರಿಶ್ರಮದಿಂದ ಬರೆದಿರತಕ್ಕ ಅಪೂರ್ವವಾದ ಬರಹವಿದು. ಗಾಂಧಿ, ತಮ್ಮನ್ನು ತಾವೇ ಹೇಗೆ ಕಡೆದುಕೊಂಡರೆನ್ನವುದನ್ನು, ತಮ್ಮನ್ನು ತಾವೇ ಕೆತ್ತಿಕೊಳ್ಳುತ್ತಾ ಆ ಅಸಹನೀಯ ನೋವು ಮತ್ತು ಸ್ವ- ಆವಿಷ್ಕಾರದ ಸಂಭ್ರಮಗಳನ್ನು ಹೇಗೆ ಅನುಭವಿಸಿದರೆಂಬುದನ್ನು ಪಾರದರ್ಶಕವಾಗಿ ತೋರಿಸುತ್ತಿರುವ ಗ್ರಂಥವಿದು. ಪಾರದರ್ಶಕತೆಗೆ ವಿರೋಧಿಯಾದ ಎಲ್ಲ ಬಗೆಯ ವಾಗಾಡಂಬರಗಳನ್ನು ಕೈಬಿಟ್ಟ ಬರಹವಿದು. ಒಂದು ಮಾತಿನಲ್ಲಿ ಹೇಳಬೇಕೆಂದರೆ- ಉಪವಾಸ ಕೂರುತ್ತಾ, ಉಪವಾಸದಿಂದಲೇ ಪುಷ್ಟಿಗೊಳ್ಳುತ್ತ ಹೋಗುವ ಗಾಂಧಿ ವ್ಯಕ್ತಿತ್ವವನ್ನು ತೋರಿಸಬೇಕಾದ ಮಾತು ಹೇಗಿರಬೇಕು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಂಡ ಬರಹವಿದು’.
ಬೃಹತ್ ಕೃತಿ, ಮಹತ್ಕೃತಿ: ನಿತ್ಯಾನಂದ ಬಿ.ಶೆಟ್ಟಿ
ಸಾಮಾಜಿಕ ಚಿಂತಕ ನಿತ್ಯಾನಂದ ಬಿ.ಶೆಟ್ಟಿ ಅವರು ಪ್ರಜಾವಾಣಿಯಲ್ಲಿ ಹೀಗೆ ಬರೆದಿದ್ದರು.
‘ಗಾಂಧಿಯ ಕಾಲದ ರಾಜಕೀಯ- ಸಾಮಾಜಿಕ- ಸಾಂಸ್ಕೃತಿಕ ಮತ್ತು ಬೌದ್ಧಿಕ ವಾತಾವರಣವೊಂದನ್ನು ತನ್ನ ಭಾವಕೋಶದಲ್ಲಿ ಮರುಸೃಜಿಸದಿದ್ದರೆ ಯಾವ ಲೇಖಕನಿಗೂ ಇಂತಹ ಕೃತಿಯನ್ನು ರಚಿಸಲು ಸಾಧ್ಯವಿಲ್ಲ. ಡಿಎಸ್‍ಎನ್ ತಮ್ಮ ಅಪಾರವಾದ ಓದಿನಿಂದ ಇಂತಹ ಸನ್ನಿವೇಶವೊಂದನ್ನು ತಮ್ಮೊಳಗೆ ಪುನರ್ ಸೃಷ್ಟಿಸಿಯೇ ಗಾಂಧಿ ಕಥನಕ್ಕೆ ತೊಡಗಿದಂತಿದೆ ಎನ್ನುವುದಕ್ಕೆ ಅವರು ಕೃತಿಯ ಕೊನೆಗೆ ಕೊಟ್ಟ ಪರಾಮರ್ಶನ ಗ್ರಂಥಗಳ ಪಟ್ಟಿಯೇ ಸಾಕ್ಷಿ. 24 ಶೀರ್ಷಿಕೆಗಳಲ್ಲಿರುವ 38 ಪುಸ್ತಕಗಳನ್ನು ಓದಿ 93 ಅಧ್ಯಾಯಗಳಾಗಿ ಈ ಪುಸ್ತಕವನ್ನು ಡಿಎಸ್‍ಎನ್ ಹೆಣೆದಿದ್ದಾರೆ. ಹಾಗಾಗಿ ಇದು ಬೃಹತ್ ಕೃತಿಯೂ ಹೌದು, ಮಹತ್ಕೃತಿಯೂ ಹೌದು’.
Published On - 7:02 am, Thu, 19 May 22