ವೈಶಾಲಿಯಾನ: ಇಂಗ್ಲಿಷ್! ಹೆಮ್ಮೆಯಿಂದ ಬಳಸುತ್ತಿದ್ದೇವೋ, ಸಂಕೋಚದಿಂದ ಮುದುಡಿ ಹೋಗುತ್ತಿದ್ದೇವೋ?

|

Updated on: May 28, 2022 | 12:21 PM

Dr. K.S. Vaishali : ಇಂದಿನ ಸಮಕಾಲೀನ ಸಂದರ್ಭದಲ್ಲಿ ಈ ಹೊರೆಯನ್ನು ಇಂಗ್ಲಿಷ್ ಶಿಕ್ಷಕರು ಹೊತ್ತುಕೊಳ್ಳಬೇಕಾಗಿದೆ. ನಮ್ಮ ವಸಾಹತೋತ್ತರ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯದ ಬೋಧನೆ, ನಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳುವ ಗಳಿಗೆಯೂ ಹೌದು.

ವೈಶಾಲಿಯಾನ: ಇಂಗ್ಲಿಷ್! ಹೆಮ್ಮೆಯಿಂದ ಬಳಸುತ್ತಿದ್ದೇವೋ, ಸಂಕೋಚದಿಂದ ಮುದುಡಿ ಹೋಗುತ್ತಿದ್ದೇವೋ?
Follow us on

ವೈಶಾಲಿಯಾನ | Vaishaliyaana : ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ನನಗೆ ಪ್ರತಿ ವರ್ಷವೂ ಗ್ರಾಮೀಣ ಪರಿಸರದಿಂದ, ಕನ್ನಡ ಮಾಧ್ಯಮದಲ್ಲಿ ಕಲಿತು, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಬರುವ ಅನೇಕ ವಿದ್ಯಾರ್ಥಿಗಳು ಕಾಣಸಿಗುತ್ತಾರೆ. ಇವರೆಲ್ಲರೂ ಇಂಗ್ಲಿಷ್ ಅಧ್ಯಯನ ಮಾಡಲು ಬಂದ ಮೊದಲ ತಲೆಮಾರಿನ ವಿದ್ಯಾರ್ಥಿಗಳೆಂಬುದನ್ನು ನಾನು ವಿಶದೀಕರಿಸಬೇಕಿಲ್ಲವಷ್ಟೇ? ಈ ಸಂದರ್ಭದಲ್ಲಿ ನನಗೆ ಇಂಗ್ಲೆಂಡಿನ ಇಂಗ್ಲಿಷ್ ಭಾಷಾ ತಜ್ಞನೊಬ್ಬನ ಅರ್ಥಗರ್ಭಿತವಾದ ಎಚ್ಚರಿಕೆಯ ಮಾತುಗಳು ನೆನಪಾಗುತ್ತವೆ. ನಾನು ಹಿಂದೆಯೇ ನನ್ನ ಯಾನದ ಒಂದು ಭಾಗದಲ್ಲಿ ಇದನ್ನು ಉಲ್ಲೇಖಿಸಿದ್ದರೂ, ಈಗ ಮತ್ತೆ ಪ್ರಸ್ತಾಪಿಸಿದರೆ ತಪ್ಪಿಲ್ಲವೆಂದೇ ಭಾವಿಸುತ್ತೇನೆ. ಪ್ರಸ್ತುತ ಮಿಲಿಯನ್ ಡಾಲರ್‌ಗಟ್ಟಲೆ ಬಂಡವಾಳ ಹೊಂದಿರುವ ಬೃಹತ್ ಉದ್ಯಮವಾಗಿ ಬೆಳೆಯುತ್ತಿರುವ ಇಂಗ್ಲಿಷ್ ಭಾಷಾ ಕಲಿಕೆಯ ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ಕಹಿ ಸಮಾಚಾರಗಳೂ ಇವೆ.                           ಡಾ. ಕೆ. ಎಸ್. ವೈಶಾಲಿ (Dr. K.S. Vaishali)

 

(ಯಾನ 11)

ಇದನ್ನೂ ಓದಿ
ವೈಶಾಲಿಯಾನ : ಎಂಟನೇ ವಯಸ್ಸು ಬಾಲಿಕೆಯ ಮದುವೆಗೆ ಸೂಕ್ತ ಎಂದಿದ್ದ ಮನು ಮತ್ತವನ ಸ್ಮೃತಿಯ ಪರಿಣಾಮಗಳು
Vaishaliyaana : ಲೇಖಕಿ ಡಾ. ಕೆ. ಎಸ್. ವೈಶಾಲಿಯವರ ಅಂಕಣ ‘ವೈಶಾಲಿಯಾನ‘ ನಾಳೆಯಿಂದ ನಿಮ್ಮ ಓದಿಗೆ
ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಬಲಾತ್ಕಾರದ ಕುರಿತು ಹೊಸ ಮಹಿಳಾಪರ ವ್ಯಾಖ್ಯಾನದ ಅವಶ್ಯಕತೆಯಿದೆ’ ಡಾ. ಕೆ. ಎಸ್. ವೈಶಾಲಿ
Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

ಇಲ್ಲಿ ನಾವು ಕೇವಲ ಇಂಗ್ಲಿಷ್ ಭಾಷೆಯ ದಿಗ್ವಿಜಯದ ಯಶೋಗಾಥೆಯನ್ನೇ ಕೇಳಿಸಿಕೊಳ್ಳುತ್ತೇವೆಂದುಕೊಂಡರೆ ಅದು ಭಾಗಶಃ ಮಿಥ್ಯ ಸಂಗತಿ. ವಿಭಿನ್ಯ ಭಾಷಿಕ ವಲಯಗಳಲ್ಲಿ ಈಗ ಇಂಗ್ಲಿಷ್ ದಾಪುಗಾಲಿಡುತ್ತಿರುವುದು ಕಲವೊಮ್ಮೆ ಕಹಿ ವಾರ್ತೆಯಾಗಿ ಪರಿಣಮಿಸಬಹುದೆಂಬುದನ್ನು ನಾವು ಮರೆಯಬಾರದು. ಹಲವಾರು ಆರ್ಥಿಕ, ಸಾಮಾಜಿಕ ಅಥವಾ ರಾಜಕೀಯ ಕಾರಣಗಳಿಗಾಗಿ ಜನ ಇಂಗ್ಲಿಷ್‌ನ ಪರವಾಗಿ ಇರಬಹುದು. ಆದರೆ ಇಲ್ಲಿರುವ ಪ್ರಶ್ನೆ ಜನರು ಇಂಗ್ಲಿಷ್ ಭಾಷೆಯನ್ನು ವಿಶ್ವದಾದ್ಯಂತ ಬಳಸುತ್ತಿದ್ದಾರೆಯೇ? ಎಂಬುದಲ್ಲ, ಆದರೆ ಯಾವ ಮನಸ್ಥಿತಿಯಲ್ಲಿ, ಯಾವ ದೃಷ್ಟಿಕೋನದಿಂದ ಅದನ್ನು ಬಳಸುತ್ತಿದ್ದಾರೆ ಎಂಬುದಾಗಿದೆ. ಅವರು ಇಂಗ್ಲಿಷ್ ಭಾಷೆಯನ್ನು ಹೆಮ್ಮೆಯಿಂದ ಬಳಸುತ್ತಿದ್ದಾರೆಯೇ? ಇಲ್ಲವೇ ಲಜ್ಜೆ – ನಾಚಿಕೆಗಳಿಂದ ಮುದುಡಿ ಹೋಗಿದ್ದಾರೆಯೇ? ಇಂಗ್ಲಿಷ್ ಎಷ್ಟರ ಮಟ್ಟಿಗೆ ವಿಶ್ವವ್ಯಾಪಿಯಾದ ಭಾಷೆಯಾಗಿದೆ ಎಂಬ ಸಮೀಕ್ಷೆ, ಈ ದೃಷ್ಟಿಕೋನವನ್ನೂ ಒಳಗೊಂಡಿರಬೇಕಲ್ಲವೇ? ಯಾವ ಹಂತದಲ್ಲಿ ಜನರು ಇಂಗ್ಲಿಷನ್ನು ಒಪ್ಪಿಕೊಂಡಿದ್ದಾರೆ, ಇಲ್ಲವೇ ವಿರೋಧಿಸಿದ್ದಾರೆ ಅಥವಾ ಗತ್ಯಂತರವಿಲ್ಲದೇ ನಿರುಪಾಯರಾಗಿ ಶರಣಾಗತರಾಗಿದ್ದಾರೆ ಎಂಬ ಅಂಶವೂ ಬಹು ಮುಖ್ಯವಲ್ಲವೇ ?

ಈ ಗಂಭೀರ ಚಿಂತನೆಯೊಂದಿಗೆ ಪ್ರಾಯಶಃ ವಸಾಹತೋತ್ತರ ದೇಶಗಳ ಇಂಗ್ಲಿಷ್ ಬೋಧಕರೆಲ್ಲರೂ ಮುಖಾ-ಮುಖಿಯಾಗಲೇ ಬೇಕಾಗುತ್ತದೆ. ಬಹುಭಾಷಿಕ ಹಾಗೂ ದ್ವಿಭಾಷಿಕ ಸಮುದಾಯಗಳ ಪರಿಸರದಲ್ಲಿ ಇಂಗ್ಲಿಷ್ ಅಧ್ಯಾಪಕರೆಲ್ಲರೂ ಇಂಗ್ಲಿಷ್ ಮತ್ತು ಇನ್ನಿತರ ಸ್ಥಳೀಯ ಭಾಷೆಗಳ ನಡುವಿನ ಸಮಸ್ಯಾತ್ಮಕ ಶ್ರೇಣೀಕೃತ ವ್ಯವಸ್ಥೆಯನ್ನು ಎದುರಿಸಿರುತ್ತಾರೆ. ಈ ತಾರತಮ್ಯದಿಂದ ಕೂಡಿದ ಸಂಬಂಧ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳ ಅಸಮಾನ ನೆಲೆಗಳನ್ನು ಸೂಚಿಸುತ್ತದೆ. ಇಂಗ್ಲಿಷ್ ವ್ಯಾಸಂಗವನ್ನು ಅಪೇಕ್ಷಣೀಯವಾದ, ಬಹಳ ಬೇಡಿಕೆಯಲ್ಲಿರುವ ಆಯ್ಕೆ ಎಂದು ಬಿಂಬಿಸಲಾದರೆ, ಸ್ಥಳೀಯ ಭಾಷೆಯ ಕಲಿಕೆ ಇಂಗ್ಲಿಷ್ ವ್ಯಾಸಂಗಕ್ಕಿಂತ ಕಡಿಮೆ ದರ್ಜೆಯದೆಂಬ ಅವಹೇಳನಕಾರಿ ನಿಲುವಿನೊಂದಿಗೆ ರಾಜಿಯಾಗಬೇಕಾಗುತ್ತದೆ. ಇದರ ದುಷ್ಪರಿಣಾಮ ಸಾಮಾನ್ಯವಾಗಿ ಗ್ರಾಮೀಣ ಹಿನ್ನೆಲೆಯ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಮೇಲೆ ಆಗುತ್ತದೆ ಎಂಬುದಂತೂ ಕಟು ವಾಸ್ತವ. ನವವಸಾಹತುಶಾಹಿ ಧೋರಣೆಯಂತೂ ಬಹಳ ಅಪಾಯಕಾರಿ. ಇದು ವಿದ್ಯಾರ್ಥಿಗಳ ಅಸಹಾಯಕತೆ ಮತ್ತು ನಿರುತ್ಸಾಹಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ : Booker Prize 2022: ‘ಇದು ಭಾರತೀಯ ಭಾಷೆಯ ಗೆಲುವು’ ಕೆ. ಎಸ್. ವೈಶಾಲಿ

ನಮ್ಮ ದ್ವಿಭಾಷಾ ಹಾಗೂ ಬಹುಭಾಷಾ ಸಂಸ್ಕೃತಿಯೊಂದಿಗೆ ಅನುಸಂಧಾನ ನಡೆಸದೆ ಯಾವ ಸಂವೇದನಾಶೀಲ ಇಂಗ್ಲಿಷ್ ಶಿಕ್ಷಕರಿಗೂ ಉಳಿಗಾಲವಿಲ್ಲ. ನಮ್ಮ ಇಂಗ್ಲಿಷ್ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದಾಗ, ಇಂಗ್ಲಿಷ್ ಭಾಷೆಗಿರುವ ಸಮಸ್ಯಾತ್ಮಕ ಸ್ಥಾನದ ಅರಿವಾಗದೇ ಇರದು. ಇಂಗ್ಲಿಷ್ ಭಾಷೆ ವ್ಯಾವಹಾರಿಕವಾಗಿ ಹಲವಾರು ಹಂತಗಳಲ್ಲಿ ಚಾಲ್ತಿಯಲ್ಲಿದ್ದರೂ, ಕ್ರಿಯಾತ್ಮಕ ಅಭಿವ್ಯಕ್ತಿಯಲ್ಲಿ, ಸೃಜನಶೀಲ ಸಾಹಿತ್ಯದ ಭಾಷೆಯಾಗಿ, ಕೇವಲ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಮೇಲಿನ ಸ್ತರದಲ್ಲಿರುವವರಿಗೇ ಸೀಮಿತವಾಗಿದೆ. ಭಾಷೆಯ ವಲಯವೇ ವಸಾಹತೋತ್ತರ ಸಂದರ್ಭಗಳಲ್ಲಿ ಮೂಲಭೂತವಾದ ಸಂಘರ್ಷದ ನೆಲೆಯಾಗಿ ಪರಿಣಮಿಸುತ್ತದೆ ಏಕೆಂದರೆ ವಸಾಹತುಶಾಹಿ ಯಜಮಾನಿಕೆಯ ಕೇಂದ್ರ ಬಿಂದುವೇ ಭಾಷೆಯ ಮೇಲೆ ನಿಯಂತ್ರಣ ಸಾಧಿಸುವಿಕೆಯಾಗಿದ್ದು, ಇದು ಹಲವಾರು ಕ್ರಮಗಳಲ್ಲಿ ಕಾರ್ಯಗತಗೊಳ್ಳುವ ಪ್ರಕ್ರಿಯೆಯಾಗಿದೆ. ಸ್ಥಳೀಯ ಪ್ರಾದೇಶಿಕ ಭಾಷೆಗಳನ್ನು ನೇಪಥ್ಯಕ್ಕೆ ಸರಿಸಿ, ತನ್ನ ಭಾಷೆಯನ್ನು ಪ್ರಮಾಣೀಕೃತ ಭಾಷೆಯೆಂದು ಪ್ರತಿಷ್ಠಾಪಿಸುವ ಮೂಲಕ ವಸಾಹತುಶಾಹಿ ಆಡಳಿತ ವ್ಯವಸ್ಥೆ ದಮನಿತ ವರ್ಗದ, ಮೂಲ ನಿವಾಸಿಗಳ ಸಾಂಸ್ಕೃತಿಕ ಜಗತ್ತಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗುತ್ತದೆ. ಭಾಷೆಯೇ ನಮ್ಮ ವಾಸ್ತವತೆಯನ್ನು ಗ್ರಹಿಸುವ ಸ್ವರೂಪವನ್ನು ನಿರ್ಧರಿಸುತ್ತದೆ ಅಲ್ಲವೇ?

ನಾವು ಈ ಪ್ರಪಂಚವನ್ನು ಹೇಗೆ ಅವಲೋಕನ ಮಾಡುತ್ತೇವೆ, ನಮ್ಮ ಮೌಲ್ಯಗಳ ವ್ಯವಸ್ಥೆ ಹೇಗೆ ರೂಪಗೊಂಡಿದೆ, ನಮ್ಮ ಇತಿಹಾಸ, ಭೌಗೋಳಿಕ ವಿವರಗಳು, ನಮ್ಮ ವೈಶಿಷ್ಟ್ಯತೆ– ಮುಂತಾದವುಗಳ ಪ್ರತಿನಿಧೀಕರಣವು ಭಾಷಾ ಮಾಧ್ಯಮದ ಮೂಲಕವೇ ಸಾಕಾರಗೊಂಡು ಅದರ ಅಡಿಪಾಯದ ಮೇಲೆ ನಮ್ಮ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಲಯಗಳು ಒಂದು ಮೂರ್ತ ಸ್ವರೂಪ ಪಡೆದುಕೊಳ್ಳುತ್ತವೆ. ಆದ್ದರಿಂದ ರಾಜಕೀಯ ಸ್ವಾತಂತ್ರ್ಯ ಹಾಗೂ ದಾಸ್ಯ ವಿಮೋಚನೆಯ ಪಥದಲ್ಲಿ ಭಾಷೆಯ ಮಹತ್ವದ ಪಾತ್ರವನ್ನು ಅಲ್ಲಗಳೆಯಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಿರ್ವಸಾಹತೀಕರಣದ ಹರಿಕಾರರಾದ ಕೆನ್ಯಾದ ಸುಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ಇಂಗ್ಲಿಷ್ ಭಾಷೆಯನ್ನು ತಿರಸ್ಕರಿಸುವ ಮೂಲಕ ಸ್ವಾಯತ್ತತೆಯನ್ನು ಪಡೆದುಕೊಳ್ಳುವ, ಮಾತೃಭಾಷೆಯನ್ನು ಅಡಿಗಲ್ಲಾಗಿ ನೋಡುವ ದೃಷ್ಟಿಕೋನದ ಬಗ್ಗೆ ಒಲವು ತೋರಿಸುತ್ತಾರೆ.

ಆಫ್ರಿಕ ಖಂಡದ ಸಂಪದ್ಭರಿತ ಭಾಷೆಗಳಾದ ಸ್ವಾಹಿಲಿ, ಝಲು, ಯೋರುಬ, ಅರೇಬಿಕ್, ಆಮ್ಹಾರಿಕ್ –ಮೊದಲಾದ ಭಾಷೆಗಳಲ್ಲಿ ಬರೆಯುವ ಲೇಖಕ-ಲೇಖಕಿಯರೊಡನೆ ಯಾವ ಸಂವಾದವನ್ನೂ ನಡೆಸದೆ, ಕೇವಲ ಇಂಗ್ಲಿಷಿನಲ್ಲಿ ಬರೆಯುವ ಆಫ್ರಿಕನ್ ಬರಹಗಾರರನ್ನು ಮಾತ್ರ ಪರಿಗಣಿಸಿ, ಆಫ್ರಿಕನ್ ಸಾಹಿತ್ಯ ಸಮಾವೇಶದಲ್ಲಿ, ಸಮಕಾಲೀನ ಆಫ್ರಿಕನ್ ಸಾಹಿತ್ಯದ ರೂಪು- ರೇಷೆಗಳ ಬಗ್ಗೆ ಚರ್ಚಾಗೋಷ್ಠಿಗಳನ್ನು ನಡೆಸುವುದು ಎಂಥಾ ಮೂರ್ಖತನವೆಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, On the Abolition of the English Department ಎಂಬ ಪ್ರಬಂಧವನ್ನೇ ನೈರೋಬಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ, ತಮ್ಮ ವಿಶ್ವವಿದ್ಯಾನಿಲಯದ ಮಾನವಿಕ ಶಾಸ್ತ್ರಗಳ  ಬೋಧಕ ಮಂಡಳಿಯಲ್ಲಿ ಮಂಡಿಸಿದ್ದರು. ಆಫ್ರಿಕನ್ ಸಾಹಿತ್ಯ ಕೆರೀಬಿಯನ್ ಹಾಗೂ ಆಫ್ರೋ-ಅಮೇರಿಕನ್ ಸಾಹಿತ್ಯಗಳೊಡಗೂಡಿ , ಆಫ್ರಿಕನ್ ಸಂಸ್ಕೃತಿಯ ಪುನಶ್ಚೇತನದಲ್ಲಿ ಪ್ರಮುಖ ಪಾತ್ರ ವಹಿಸಿರುವಾಗ, ಇನ್ನೂ ಇಂಗ್ಲಿಷ್ ಸಾಹಿತ್ಯ – ಸಂಸ್ಕೃತಿಗಳ ಅಧ್ಯಯನವನ್ನೇ ಪ್ರಧಾನ ಆಶೋತ್ತರವನ್ನಾಗಿ ಇಟ್ಟುಕೊಳ್ಳುವುದು ಅರ್ಥಹೀನವೆಂದು, ಇಂಗ್ಲಿಷ್ ಸಾಹಿತ್ಯದ ಅಧ್ಯಯನವನ್ನು ಕೇಂದ್ರವಾಗಿಟ್ಟುಕೊಳ್ಳುವುದಾದರೆ, ಇಂಗ್ಲಿಷ್ ವಿಭಾಗವನ್ನೇ ಮುಚ್ಚಿಬಿಡುವ ತೀಮಾರ್ನವೇ ಸೂಕ್ತ ಎಂದು ವಾದಿಸಿದ್ದರು. ಇಂತಹ ಚರ್ಚೆಗಳು ನಮ್ಮ ಭಾರತದ ಸಮಕಾಲೀನ ಸಂದರ್ಭದಲ್ಲಿಯೂ ಅತ್ಯಗತ್ಯ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ “ತೆಂಕಣದ ನುಡಿಗಳು ಮತ್ತು ಇಂಗ್ಲಿಶ್” ಎಂಬ ಪ್ರಬಂಧ ಸಂಕಲನದಲ್ಲಿ, ಸಂಪಾದಕ ಡಾ. ಮೇಟಿ ಮಲ್ಲಿಕಾರ್ಜುನರವರು ತಮ್ಮ ‘ಕನ್ನಡ- ಇಂಗ್ಲಿಶು : ಅಂಟಿದ ನಂಟು’ ಲೇಖನದಲ್ಲಿ “ಭಾರತದಲ್ಲಿ ಇಂಗ್ಲಿಶು ಒಂದು ಬಗೆಯ ಮೇಲ್ವರ್ಗ ಹಾಗೂ ಬ್ರಿಟಿಶು ವಸಾಹತು ಚರಿತ್ರೆಯ ರೂಪಕದಂತಿದೆ. ಭಾರತದ ಮೇಲ್ವರ್ಗ ಮತ್ತು ಬ್ರಿಟಿಶರ ಸಾಮ್ರಾಜ್ಯದ ಚರಿತ್ರೆಯನ್ನು ಅರಿಯಲು ಇಲ್ಲಿ ಇಂಗ್ಲಿಶು ಕೇವಲ ಒಂದು ಅಸ್ತ್ರವಾಗಿ ಮಾತ್ರ ಆಗಿರದೆ, ಅಂತಹ ಚಾರಿತ್ರಿಕ ಒಳಸುಳಿಗಳ ಜಾಡನ್ನು ಪತ್ತೆಹಚ್ಚಿ ನೋಡುವ ವಿಶ್ಲೇಷಕವೂ ಆಗಿರುತ್ತದೆ. ಬ್ರಿಟಿಶು ಸಾಮ್ರಾಜ್ಯದ ಎಲ್ಲ ಮಾಜಿ ವಸಾಹತುಗಳಲ್ಲಿ ಈ ಹಿಂದೆ ಇದ್ದ ಮತ್ತು ಇವತ್ತು ಇರುವ ಇಂಗ್ಲಿಶಿನ ಯಜಮಾನಿಕೆ ಎಷ್ಟೊಂದು ಪರಿಣಾಮಕಾರಿಯಾಗಿ ನೆಲೆ ನಿಂತಿದೆ ಎಂಬುದು ಈಗಲೂ ನಿಚ್ಚಳವಾಗಿ ಕಾಣುತ್ತಿದೆ. ಇಂಗ್ಲಿಶು ಕೇವಲ ನುಡಿಯಾಗಿ ಮಾತ್ರ ಇಲ್ಲಿ ಅಸ್ತಿತ್ವಕ್ಕೆ ಬಂದಿರುವುದಿಲ್ಲ. ಬದಲಾಗಿ ಅದೊಂದು ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ವಿದ್ಯಮಾನವಾಗಿದೆ. ವಸಾಹತೋತ್ತರ ಸನ್ನಿವೇಶದಲ್ಲಿಯೂ ಕೂಡ ಇಂಗ್ಲಿಶಿನ ವೈಹಾಳಿಯನ್ನು ಕಾಣಬಹುದಷ್ಟೆಯಲ್ಲದೇ ಅದರ ಪ್ರಭಾವ ಮತ್ತು ಪರಿಣಾಮಗಳನ್ನು ವಸಾಹತುಶಾಹಿಗೆ ಒಳಗಾದ ಒಂದೊಂದು ದೇಶದಲ್ಲಿಯೂ ಈ ಹೊತ್ತಿಗೂ ನೋಡುತ್ತೇವೆ. ಆದರೆ ಇದರ ಪ್ರಭಾವ ಹಾಗೂ ಪರಿಣಾಮದ ಪ್ರಮಾಣ ಮತ್ತು ಸ್ವರೂಪಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಭಾಷಾ ಕಲಿಕೆಯ ಮಾದರಿಗಳನ್ನು ಸ್ಥೂಲವಾಗಿ ಗಮನಿಸಿದಾಗ ಕಂಡು ಬರುವ ಸಂಗತಿಗಳೆಂದರೆ ಏಕಭಾಷಾ ಸಂಹಿತೆ ಭಾಷೆಯ ಅವಸಾನದ ಸಂಕೇತ ಆಗಿಬಿಡಬಹುದೇನೋ? ಬಹುಭಾಷಿಕ ಕಲಿಕಾ ಮಾದರಿಗಳು ಭಾಷಾ ವೈವಿಧ್ಯತೆಯನ್ನು ಪೋಷಿಸಿ ಸಂಸ್ಕೃತಿಗಳನ್ನು ಬೆಸೆಯಲು ನಾಂದಿಯಾಗುತ್ತವೆ. ಸ್ಥಳಿಯ ಹಿನ್ನಲೆಯನ್ನುಳ್ಳ ವಿಷಯಗಳಿಗೆ ಚಲಾವಣೆ ದೊರಕುತ್ತದೆ, ಇದು ಮಾನವ ಹಕ್ಕುಗಳ ದೃಷ್ಟಿಯಿಂದಲೂ ಅತ್ಯಂತ ಸಮಂಜಸವಾದದ್ದು. ಪ್ರಪಂಚದ ಸಂಪನ್ಮೂಲಗಳ ಮರುಹಂಚುವಿಕೆಯಲ್ಲಿಯೂ ಸಮಾನತೆಯಂಥ ಪ್ರಜಾಸತ್ತಾತ್ಮಕ ನಿಲುವುಗಳ ಮೇಲುಗೈಯಾಗುತ್ತದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಭಾಷಾ ಅಧ್ಯಯನವನ್ನು ವಿಶ್ಲೇ಼ಷಿಸುವುದಾದರೆ ಇಂಗ್ಲಿಷಿನ ‘Llingua Franca’ ಎಂಬ ನಿಷ್ಪಕ್ಷಪಾತದ ಸೋಗನ್ನು ಹಾಕುವ ನಿಲುವನ್ನು Lingua diabolica, Lingua frankensteinia ಎಂದು ಮರು ವ್ಯಾಖ್ಯಾನಿಸಬೇಕಾಗುತ್ತದೆ ಎನ್ನುವ ದುಗುಡವನ್ನು ವ್ಯಕ್ತ ಪಡಿಸುವ ರಾಬರ್ಟ್ ಫಿಲಿಪ್‌ಸನ್ ಇಂಗ್ಲಿಷ್ ಸಾರ್ವಭೌಮತ್ವವನ್ನು ತಮ್ಮ Linguistic Imperialism Continued ಎಂಬ ಸ್ವಾರಸ್ಯಕರವಾದ ಪುಸ್ತಕದಲ್ಲಿ ಖಂಡಿಸುತ್ತಾರೆ.

ಇಂಗ್ಲಿಷ್ ಶಿಕ್ಷಣವೆನ್ನುವುದು ಬ್ರಿಟಿಷ್ ವಸಾಹತುಶಾಹಿಯ ಶಸ್ತ್ರಾಗಾರದಲ್ಲಿ ಪ್ರಮುಖವಾದ ಆಯುಧವಾಗಿತ್ತು ಎಂದು ವಸಾಹತೋತ್ತರವಾದಿ ಚಿಂತಕರು ಹೇಳುತ್ತಾರೆ. ಈ ಮಿಲಿಟರಿ ರೂಪಕದ ಮಹತ್ವವೇನು? ಎನ್ನುವ ಪ್ರಶ್ನೆ ಉದ್ಭವಿಸಿದರೆ ಇದು ಸಮರ್ಪಕವಾಗಿ ವಸಾಹತುಶಾಹಿಯ ಆಕ್ರಮಣಕಾರಿ ಉದ್ದೇಶಗಳನ್ನು ಅಭಿವ್ಯಕ್ತಿಸುತ್ತದೆಯೆಂದು ಹೇಳಬಹುದು. ನೇರವಾಗಿ ಸೈನ್ಯದಿಂದ ಮುತ್ತಿಗೆ ಹಾಕಿ ಪರದೇಶದ ಪ್ರಾಂತ್ಯವನ್ನು ವಶಪಡಿಸಿಕೊಳ್ಳದಿದ್ದರೂ, ಇಲ್ಲಿ ಶಿಕ್ಷಣದ ಮೂಲಕ ಹಿಡಿತ ಸಾಧಿಸುವುದೂ ಅಧಿಪತ್ಯ ಸ್ಥಾಪನೆ ಮಾಡುವುದರ ಸಂಕೇತವೇ ಎನ್ನುವುದು ಗಮನಾರ್ಹವಾದ ಅಂಶ. ಮೆಕಾಲೆಯ ಕುಖ್ಯಾತ ವರದಿ (Macaulay’s Infamous Minutes, 1835) ಇದನ್ನು ಸಮರ್ಥಿಸಿಕೊಳ್ಳುತ್ತದೆ. ಆಳುವ ಬ್ರಿಟಿಷ್ ವರ್ಗ ಮತ್ತು ಆಳ್ವಿಕೆಗೆ ಒಳಪಡುವ ಮಿಲಿಯನ್ನುಗಟ್ಟಲೆ ಭಾರತೀಯರ ನಡುವೆ ಇಂಗ್ಲಿಷ್ ಭಾಷೆಯನ್ನು ಕಲಿತು, ಅದರಲ್ಲಿ ಪರಿಣತಿ ಹೊಂದಿದ , ರಕ್ತ-ಮಾಂಸ-ಬಣ್ಣಗಳಿಂದ ಭಾರತೀಯರೇ ಆಗಿದ್ದರೂ ತಮ್ಮ ನಿಲುವು, ಅಭಿರುಚಿ, ಬೌದ್ಧಿಕತೆ, ನೈತಿಕತೆಗಳಲ್ಲಿ ಬ್ರಿಟಿಷರ ಪಡಿಯಚ್ಚುಗಳಾಗಿ, ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವ ‘ಬ್ರೌನ್ ಸಾಹಿಬ್’ಗಳ ಸಂತತಿಯನ್ನು ತರಬೇತುಗೊಳಿಸುವ ಸಾಮ್ರಾಜ್ಯಶಾಹಿ ಉತ್ತುಂಗದ ಕನಸನ್ನು ಕಂಡಿದ್ದ ಮೆಕಾಲೆಯ ಬಳುವಳಿಯಾದ ಇಂಗಿಷ್ ಶಿಕ್ಷಣದಲ್ಲಿ, ನಾವು ಸಮಕಾಲೀನ ಭಾರತ ಉಪಖಂಡದಲ್ಲಿ ಯಾವ ರೀತಿಯ ಪ್ರತಿರೋಧಾತ್ಮಕ ಮಾರ್ಪಾಡುಗಳನ್ನು ಅಳವಡಿಸಿಕೊಂಡಿದ್ದೇವೆ ಎಂಬ ಪ್ರಶ್ನೆ ಇಂಗ್ಲಿಷ್ ಬೋಧಕ ವರ್ಗವನ್ನು ನಿರಂತರವಾಗಿ ಬಾಧಿಸುತ್ತಿರುವುದಂತೂ ಸತ್ಯವೇ.

ಇದನ್ನೂ ಓದಿ : Music: ವೈಶಾಲಿಯಾನ; ‘ಇದನ್ನು ನೀವು ‘ಹರಾಮ್’ ಎಂದರೆ, ನಾನು ಮತ್ತಷ್ಟು ಹರಾಮ್’ ಎಂದಿದ್ದರು ಬಿಸ್ಮಿಲ್ಲಾ ಖಾನ್

ಬ್ರಿಟಿಷರನ್ನು ಅವರ ಬೌದ್ಧಿಕ ಕಾರ್ಯ ಚಟುವಟಿಕೆಗಳ ಮೂಲಕವೇ ಅವರ ಅಧೀನದಲ್ಲಿದ್ದ ಭಾರತೀಯ ಸಮೂಹಕ್ಕೆ ಪರಿಚಯಿಸಬೇಕು ಎನ್ನುವ ಯೋಜನೆ ಮತ್ತೊಂದು ಮಹತ್ವಾಕಾಂಕ್ಷೆಯಿಂದ ಕೂಡಿತ್ತು. ಇದು ಬ್ರಿಟಿಷರನ್ನು ವಸಾಹತುಶಾಹಿ ಅಧಿಪತ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ವಾಣಿಜ್ಯ ವಹಿವಾಟುಗಳು, ಮಿಲಿಟರಿ ಕಾರ್ಯಾಚರಣೆಗಳ, ಪ್ರಾಂತ್ಯಗಳ ಆಡಳಿತ ನಿರ್ವಹಣೆ ಇತ್ಯಾದಿಗಳಲ್ಲಿ ಅವರ ಉಪಸ್ಥಿತಿಯೇ ಇಲ್ಲವೇನೋ ಎಂಬುವಂಥ ಭ್ರಮೆಯನ್ನುಂಟುಮಾಡಿ, ಅವರ ಭೌತಿಕ ಅಸ್ತಿತ್ವದ ಸತ್ಯವನ್ನು ತೇಲಿಸಿ, ಬ್ರಿಟಿಷರ ನಿಜವಾದ ಸತ್ವ, ವೈಶಿಷ್ಟ್ಯತೆಗಳು ಅಡಗಿರುವುದೇ ಅವರ ಬೌದ್ಧಿಕ ಕೆಲಸಗಳಲ್ಲಿ ಎಂಬ ಪರಿಕಲ್ಪನೆಯನ್ನು ರೂಪಿಸಿತು. ಇದು ಗೌರಿ ವಿಶ್ವನಾಥನ್ ಅವರು ತಮ್ಮ Masks of Conquest ಹೇಳಿರುವಂತೆ ರೆನೇ ಡೆಕಾರ್ಟ್ಸ್ ಎಂಬ ತತ್ವಶಾಸ್ತ್ರಜ್ಞನ ಘೋಷವಾಕ್ಯ ‘Cogito egro sum’ ’ ಅರ್ಥಾತ್ ‘I think therefore I am’ ಎಂಬ ತತ್ವಕ್ಕೆ ಅನುಷಂಗಿಕವಾಗಿ ಬ್ರಿಟಿಷರು ನಮ್ಮನ್ನಾಳುವ ಪರಕೀಯರೆನ್ನುವ ವಾಸ್ತವತೆಯನ್ನು ನಗಣ್ಯವಾಗಿಸಿ, ಕೇವಲ ಅವರ ಬೌದ್ಧಿಕ ವ್ಯವಸಾಯಕ್ಕೆ ಮಾತ್ರ ಪ್ರಾಮುಖ್ಯ ನೀಡಿತು. ಹಾಗಾಗಿ ಇಲ್ಲಿ ಇಂಗ್ಲಿಷ್ ವ್ಯಕ್ತಿಯ ಬದಲಿಗೆ ಇಂಗ್ಲಿಷಿನ ಸಾಹಿತ್ಯ ಪಠ್ಯವೇ ಅವನ ಇರುವಿಕೆಯ ಪ್ರತೀಕವಾಗಿ ಮಾರ್ಪಾಡುಗೊಂಡಿತ್ತು.

ಇಂದಿನ ಸಮಕಾಲೀನ ಸಂದರ್ಭದಲ್ಲಿ ಈ ಹೊರೆಯನ್ನು ಇಂಗ್ಲಿಷ್ ಶಿಕ್ಷಕರು ಹೊತ್ತುಕೊಳ್ಳಬೇಕಾಗಿದೆ. ನಮ್ಮ ವಸಾಹತೋತ್ತರ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯದ ಬೋಧನೆ, ನಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳುವ ಗಳಿಗೆಯೂ ಹೌದು. ನಮ್ಮ ಮಾತೃಭಾಷೆ ಮತ್ತು ಇನ್ನಿತರ ಭಾರತೀಯ ಭಾಷೆಗಳ ಸಾಹಿತ್ಯ-ಸಂಸ್ಕೃತಿಗಳೊಡನೆ ನಡೆಸುವ ಅನುಸಂಧಾನದಿಂದ ಮಾತ್ರ ನಮ್ಮ ಇಂಗ್ಲಿಷ್ ಸಾಹಿತ್ಯದ ಕಲಿಕೆ ಅರ್ಥಪೂರ್ಣವಾಗಲು ಸಾಧ್ಯವಾಗುತ್ತದೆ. ಇದು ತೌಲನಿಕ ಅಧ್ಯಯನಕ್ಕಿಂತ ಹೆಚ್ಚಾಗಿ ಅಂತರ್ಶಿಸ್ತೀಯ ಸ್ವರೂಪದಲ್ಲಿರಬೇಕಾದ Inter-literary’ ಬಹುಶ್ರುತ ಅಧ್ಯಯನ ಆಗಿರಬೇಕೆನ್ನುವ ಗಾಯತ್ರಿ ಚಕ್ರವರ್ತಿ ಸ್ಪಿವಾಕ್‌ರವರ ವಾದ ಸರಣಿಯನ್ನು ಮೆಲುಕು ಹಾಕುವ ಅವಶ್ಯಕತೆ ಇದೆ. “ಕೇವಲ ಇಂಗ್ಲಿಷ್ ಸಾಹಿತ್ಯವನ್ನಷ್ಟೇ ಓದಿಕೊಂಡ ಏಕ ಭಾಷಿಕರಿಗೆ ಇಂಗ್ಲಿಷ್ ಸಾಹಿತ್ಯವೆಷ್ಟು ಅರ್ಥವಾದೀತು?” ಎಂಬ ಹರೀಶ್ ತ್ರಿವೇದಿಯವರ ಮಾರ್ಮಿಕ ಪ್ರಶ್ನೆಗೆ ಅವರ Colonial Transactions ಪುಸ್ತಕದ ಒಂದು ಅಪರೂಪದ ಒಳನೋಟದ ಸಾಲಿನಿಂದಲೇ ಉತ್ತರಿಸುತ್ತ, ಮುಕ್ತಾಯಗೊಳಿಸಲು ಬಯಸುತ್ತೇನೆ : “ಸೃಜನಶೀಲ ದ್ವಿಭಾಷಾ ಭಾರತೀಯ ಸಾಹಿತ್ಯ ಸಂವೇದನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಈಗ ಸ್ವಲ್ಪ ಕಾಲದಿಂದ ಇಂಗ್ಲಿಷ್ ಸಾಹಿತ್ಯವೆನ್ನುವುದು, ಅನೇಕ ವಿದೇಶಿ ಸಾಹಿತ್ಯಗಳ ಪೈಕಿ ಮತ್ತೊಂದು ಎನ್ನಿಸಿಕೊಂಡಿದೆ. ಹೌದು ಖಂಡಿತವಾಗಿಯೂ ಇಂಗ್ಲಿಷ್ ಸಾಹಿತ್ಯದ ವಿಷಯದಲ್ಲಿ ನಮಗೆ ಒಂದು ವಿಶಿಷ್ಟವಾದ ಐತಿಹಾಸಿಕ ನಂಟಿದೆ. ಆದರೆ ಅದು ಅಷ್ಟಕ್ಕೇ ಸೀಮಿತವಾಗಿದೆ. ಇನ್ನೂ ಹೆಚ್ಚಿನ ನಂಟಾಗಿ ಉಳಿದಿಲ್ಲ. ಈ ಬಗೆಯ ಕ್ರಿಯಾತ್ಮಕ ಬೆಳವಣಿಗೆಯ ಹಂತದಲ್ಲಿ ನಮ್ಮ ಭಾರತೀಯ ಭಾಷೆಗಳಲ್ಲಿ ಬರೆಯುವ ಲೇಖಕರನ್ನು ಕಾಣಬಲ್ಲೆವು. ಆದರೆ ನಮ್ಮ ಇಂಗ್ಲಿಷ್ ಸಾಹಿತ್ಯದ ತರಗತಿಗಳಲ್ಲಿ ಮಾತ್ರ ನಾವು ಈ ಹಂತವನ್ನು ತಲುಪಿಯೇ ಇಲ್ಲ.” ಇಂತಹ ಒಂದು ಶ್ಲಾಘನೀಯ, ಪ್ರಾಮಾಣಿಕ ಅಂತಃಸತ್ವವನ್ನು, ಸ್ವ-ವಿಮರ್ಶಾತ್ಮಕ ದೃಷ್ಟಿಕೋನವನ್ನು ಇಂಗ್ಲಿಷ್ ಸಾಹಿತ್ಯದ ಬೋಧಕರು ಬೆಳೆಸಿಕೊಳ್ಳಬೇಕಾದ ತುರ್ತು ಪರಿಸ್ಥಿತಿ ಸನ್ನಿಹಿತವಾಗಿದೆ.

(ಮುಂದಿನ ಯಾನ : 11.6.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com