Saraswati Risbud : ಇತ್ತೀಚೆಗೆ ಕಣ್ಮರೆಯಾದ, ಕನ್ನಡ ಮರಾಠಿ ಸಾಂಸ್ಕೃತಿಕ ಸೇತುವೆಯಾಗಿದ್ದ, ಅನುವಾದ ಕಾರ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಗೌರವ ಪುರಸ್ಕಾರವನ್ನು ಪಡೆದಿದ್ದ ಸರಸ್ವತಿ ರಿಸಬೂಡ (90) ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಿಧನರಾದರು. ಕನ್ನಡದ ಹಿರಿಯ ಅನುವಾದಕಿಯರಲ್ಲಿ ಒಬ್ಬರಾಗಿದ್ದ ಅವರು ಮೂಲತಃ ಮಹಾರಾಷ್ಟ್ರದವರು. ಸಾಂಗ್ಲಿಯಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ಮರಾಠಿಯ ಪ್ರಮುಖ ಲೇಖಕಿಯರಾದ ಇರಾವತಿ ಕರ್ವೆ, ದುರ್ಗಾ ಭಾಗವತ್, ಗೋದಾವರಿ ಪರುಲೇಕರ್, ಛಾಯಾ ದಾತಾರ್ ಮುಂತಾದವರ ಕೃತಿಗಳನ್ನು ಕನ್ನಡಕ್ಕೆ ತಂದರು. ಈಗಿಲ್ಲಿ ಸರಸ್ವತಿಯವರು ಅನುವಾದಿಸಿದ ಛಾಯಾ ದಾತಾರ್ ಅವರ ‘ಸ್ತ್ರೀ ಪುರುಷ್’ (1984) ಕೃತಿಗೆ ಹಿರಿಯ ಲೇಖಕ ಶ್ರೀನಿವಾಸ ಹಾವನೂರು ಅವರು ಬರೆದ ಮುನ್ನುಡಿಯ ಆಯ್ದಭಾಗ ಮತ್ತು ಈ ಕೃತಿಯ ಕಡೆಯ ಭಾಗವನ್ನು ಮುಂಬೈನಲ್ಲಿ ವಾಸವಾಗಿರುವ ಗಿರಿಜಾ ಶಾಸ್ತ್ರಿ ಅವರು ಕಳಿಸಿದ್ದಾರೆ. ಇದಕ್ಕೆ 1986ರಲ್ಲಿ ತಿರುಮಲಾಂಬ ಪ್ರಶಸ್ತಿ ಸಂದಿತ್ತು.
ಜಗತ್ತಿನಲ್ಲಿ ಎಲ್ಲೆಲ್ಲಿಯೂ ಪುರುಷ ಪ್ರಧಾನ ಸಂಸ್ಕೃತಿ ಇದೆ. ಇದರ ಅಡಿಯಲ್ಲಿ ಸ್ತ್ರೀಯು ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡಂತಿದೆ. ಇಂದಿನ ಸುಶಿಕ್ಷಿತ ಸ್ತ್ರೀಯ ಪಾಡೂ ಕೂಡ ಇದೇ ಆಗಿದೆ. ಸ್ತ್ರೀಯು ತನ್ನ ಪ್ರಗತಿಯನ್ನು ಸಾಧಿಸಲು ಪುರುಷವರ್ಗವನ್ನು ವಿರೋಧಿಸಬೇಕಂತಿಲ್ಲ; ಆದರೆ ಸ್ತ್ರೀಯು ತನ್ನ ವ್ಯಕ್ತಿತ್ವವನ್ನು ಸಂವರ್ಧಿಸಲು ಅವಶ್ಯವಿದ್ದಲ್ಲಿ ಸಂಘರ್ಷಿಸಲೇಬೇಕು.
ಯಾವುದೊಂದು ಕ್ರಾಂತಿಯಾಗಬೇಕಾದರೆ ಅದರ ಹಿಂದೆ ಶೋಷಣೆಯ, ಅನ್ಯಾಯದ ಸ್ಥಿತಿ ಇರುತ್ತದೆ. ಛಾಯಾ ದಾತಾರರ ತವರಿನಲ್ಲಾಗಲೀ ಗಂಡನ ಮನೆಯಲ್ಲಾಗಲೀ ಅಂಥ ಸ್ಥಿತಿಯೇನಿರಲಿಲ್ಲ. ಮಧ್ಯಮ ವರ್ಗದ ನೆಮ್ಮದಿಯ ಜೀವನ ಅವರದು. ಸುಮಾರು ಹತ್ತು ವರ್ಷದ ಸಂಸಾರ ಮಾಡಿದ ಮೇಲೆ, ‘ಸುಶಿಕ್ಷಿತ ಸ್ತ್ರೀಯಾದ ನಾನು ಸಾಧಿಸಿದ್ದೇನು? ಇದುವರೆಗಿನ ನನ್ನ ಬದುಕಿಗೆ ಏನಾದರೂ ಅರ್ಥವಿದೆಯೇ ಮುಂದೂ ನಾನು ಹೀಗೆಯೇ ಜೀವನವನ್ನು ಕಳೆಯಬೇಕೆ?’ ಎಂದು ಅವರಿಗೆ ಅನಿಸತೊಡಗಿತು.
ಇಂದಿನ ಮಹಿಳೆ ಎಷ್ಟೇ ಸ್ವತಂತ್ರಳೆಂದು ತೋರಿದರೂ, ಅದು ಪುರುಷಕೇಂದ್ರಿತ ಅಧೀನವಾಗೇ ಇದೆಯೆಂದು ಅವರ ಸೂಕ್ಷ್ಮ ಪರಿಶೀಲನೆಗೆ ಕಂಡುಬಂತು. ಇದರಿಂದಾಗಿ ಅವಳು ಎಂದಿಗೂ ದುಯ್ಯಮ ಅಂದರೆ ದ್ವಿತೀಯ ದರ್ಜೆಯವಳಾಗಿಯೇ ಬಾಳುವಂತಾಗಿದೆ. ಬಡ ಹಾಗೂ ಅಶಿಕ್ಷಿತ ಸ್ತ್ರೀಯರಂತೂ ಈ ದ್ವಿತೀಯ (ತೃತೀಯವಾಗಿ ಸಹ) ದರ್ಜೆಯವರಾಗಿದ್ದಾರೆ. ಆದರೆ ಅನುಕೂಲವಂತ ವಿದ್ಯಾವಂತ ಮಹಿಳೆಯರೂ ಕೂಡ ಪುರುಷಕೇಂದ್ರದ ಪ್ರಭಾವಲಯದಲ್ಲಿ ಒಂದಿಲ್ಲೊಂದು ರೀತಿಯಾಗಿ ಸಿಲುಕಿಕೊಂಡವರೇ ಆಗಿದ್ದಾರಲ್ಲ!
ಆದರೆ ಸಾವಿರಾರು ವರ್ಷಗಳಿಂದ ನಡೆದು ಬಂದ ಈ ಸ್ಥಿತಿಯನ್ನು ಹೋಗಲಾಡಿಸಲು ಸಾಧ್ಯವೆ? ಎಲ್ಲಿಯವರೆಗೆ ಸ್ತ್ರೀಯ ಸ್ಥಾನಮಾನ ಹೀಗೆ ಕೆಳದರ್ಜೆಯಲ್ಲಿರುವುದೋ ಅಲ್ಲಿಯವರೆಗೆ ಸಮಾಜ ಜೀವನದ ಸಮತೋಲ ತಪ್ಪುವುದು. ಮುಖ್ಯತಃ ಸ್ತ್ರೀ ಶಕ್ತಿಯ ಪ್ರಯೋಜನವು ದೇಶಕ್ಕೆ ಪೂರ್ಣತಃ ಒದಗುವುದಿಲ್ಲ. ಛಾಯಾ ದಾತಾರರು ಸ್ತ್ರೀಯ ಈ ದುಯ್ಯಮ ದರ್ಜೆಯನ್ನು ತೊಡೆಯುವ ದೀಕ್ಷೆಯನ್ನು ತೊಟ್ಟರು.
ಮನೆ ಗೆದ್ದು ಮಾರು ಗೆಲ್ಲಬೇಕು! ಗಂಡನೊಂದಿಗೆ ವಾದಿಸಿ, ತನಗೂ ಮನೆಯ ಹೊರಗಿನ ತನ್ನ ವ್ಯಕ್ತಿತ್ವಕ್ಕೆ ಪೋಷಕವಾಗುವಂಥ ಕೆಲಸಗಳಲ್ಲಿ ತೊಡಗುವ ಹಕ್ಕು ಇದೆ ಎಂದು ಸಾಧಿಸಿದರು. ನೌಕರು ಮಾಡಿ ಪಗಾರ ತರದಿದ್ದರೂ, ಮನೆ ತೂಗಿಸಿಕೊಂಡು ಹೋಗುವ ಕಾರಣದಿಂದಾಗಿ ಗಂಡನ ಗಳಿಕೆಯಲ್ಲಿ ತನಗೆ ಪಾಲು ಇದೆ ಎಂದು ತಿಳಿಸಿ ಹೇಳಿದರು. ಇತ್ತ ಆರ್ಥಿಕ ವಿಷಮತೆಯನ್ನು ಎತ್ತಿ ತೋರಿಸಿದ ಮಾರ್ಕ್ಸ್ವಾದದ ನೆಲೆಯಲ್ಲಿ ಸ್ತ್ರೀ ಪುರುಷ ವಿಷಮತೆಯನ್ನು ಅಭ್ಯಸಿಸಿದರು. ಕಾರ್ಮಿಕ ಸ್ತ್ರೀ ಸಮುದಾಯದಲ್ಲಿ (ಬೀಡಿ ಕಟ್ಟುವವರು) ಸೇರಿಕೊಂಡು ಪ್ರತ್ಯಕ್ಷ ಅನುಭವವನ್ನು ಪಡೆದರು. ಆನಂತರ ಸ್ತ್ರೀಮುಕ್ತಿ ಸಂಘಟನೆಯನ್ನು ಕಟ್ಟಿದ್ದು, ಹಾಲೆಂಡಿಗೆ ಹೋಗಿ ಸ್ತ್ರೀವಿಮೋಚನ ಚಳವಳಿಯ ವಿಭಿನ್ನ ಸ್ತರಗಳನ್ನು ಅರಿತದ್ದು- ಇವೇ ಮುಂತಾದ ಅಂಶಗಳು ಆತ್ಮಕಥನ ರೂಪದಲ್ಲಿ, ಈ ಗ್ರಂಥದ ಮೊದಲ ಪ್ರಕರಣದಲ್ಲಿ ಬಂದಿವೆ. ಅದಷ್ಟೇ ಭಾಗವು ಇತರ ಸ್ತ್ರೀಯರ ಕಣ್ಣು ತೆರೆಯಿಸುವಂತಿದೆ.
ಶ್ರೀನಿವಾಸ ಹಾವನೂರು, ಹಿರಿಯ ಲೇಖಕರು
*
ಬಹುದೂರ ಸಾಗಬೇಕಾಗಿದೆ…
ಹೊಸ ಸಮಾಜದಲ್ಲಿ ಯಾರ ಶೋಷಣೆಯೂ ನಡೆಯಬಾರದೆಂದರೆ ಸಮಾಜದ ಒಬ್ಬೊಬ್ಬ ವ್ಯಕ್ತಿಯೂ ಉಚ್ಚವಿಚಾರಗಳನ್ನು ಹೊಂದಿರಬೇಕು. ತಿಳವಳಿಕೆ ಉಳ್ಳವನಾಗಬೇಕು, ಸ್ವಾವಲಂಬಿಯಾಗಿರಬೇಕು, ಬಲಿಷ್ಥನಾಗಿರಬೇಕು. ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಆತ್ಮಬಲ , ಶಕ್ತಿಗಳನ್ನು ವರ್ಧಿಸಲು ಉತ್ಸುಕನಾಗಿರಬೇಕು. ಇಂತಹ ಗುಣಮಟ್ಟದ ಸ್ತ್ರೀಯರೂ ಪುರುಷರೂ ಹುಟ್ಟಬೇಕು. ಆಗ ಸ್ತ್ರೀಪುರುಷರ ಸಂಬಂಧಗಳು ಸಮ-ಸಮವಾಗುವುವು. ಸ್ತ್ರೀಯ ಸ್ವಭಾವ ಪ್ರಕೃತಿ ಇದೇ ತರಹದ್ದು, ಪುರುಷನದ್ದೂ ಅದೇ ತರಹದ್ದು ಎಂಬ ಲಿಂಗ ಸಾಪೇಕ್ಷತೆ ಇರಬಾರದು. ಅವರೆಡೂ ಸ್ವಭಾವ ವಿಶೇಷಗಳ ಸಂಯೋಗದಿಂದ ಸಾವಿರಾರು ಪ್ರಕಾರದ ವ್ಯಕ್ತಿತ್ವಗಳು ಹರಡಬೇಕು. ಇಂದು ಪುರುಷನಿಗೆ , ಪುರುಷಾರ್ಥದ ಚೌಕಟ್ಟಿನಲ್ಲಿ ಯಾವರೀತಿ ಇಟ್ಟಿದ್ದಾರೆಂದರೆ ಒಂದು ವೇಳೆ ಗಂಡಸು ಧ್ವನಿ ತೆಗೆದು ಅತ್ತರೆ ‘ಹೆಂಗಸಿನಂತೆ ಏಕೆ ಅಳುತ್ತೀಯಾ?’ ಎನ್ನುತ್ತಾರೆ.
ಮುಂಬರುವ ಸಮಾಜವು ಈ ರೀತಿ ಉಳಿಯಲಾರದು. ಅಂತರಿಕ್ಷದಲ್ಲಿ ಪರಿಭ್ರಮಣ ಮಾಡುವ ಪುರುಷನು ಪುರುಸೊತ್ತಿನ ಸಮಯದಲ್ಲಿ ಕಸೂತಿ ಕೆಲಸಗಳನ್ನು ಕಲಿಯಬಹುದು. ಇಂದು ಅಡುಗೆ ಮನೆಯಲ್ಲಿ ನಿಪುಣಳಾದ ಸ್ತ್ರೀಯು ಖ್ಯಾತ ಶಸ್ತ್ರ ವಿದ್ಯಾವಿಶಾರದೆಯಾಗಬಹುದು. ಈಗಿನ ಎಲ್ಲಾ ರೂಢಿ ಸಂಕೇತಗಳೂ ಬದಲಾಗಬಹುದು.
ಎಲ್ಲಿಯವರೆಗೆ ಹೊಸಮಾನವನು ಸಂಭವಿಸುವುದಿಲ್ಲವೋ ಅಲ್ಲಿಯವರೆಗೆ ಅಶಕ್ತನ ಎಲ್ಲಾ ಕ್ಷೇತ್ರಗಳಲ್ಲಿ ಆಕ್ರಮಿಸುವನು. ಅದೇ ಸಂಗತಿ ಸ್ತ್ರೀ ಪುರುಷರಲ್ಲಿ ನಡೆಯುವುದು. ಹೊಸ ಮಾನವನು ಆಧ್ಯಾತ್ಮ ಪ್ರಯತ್ನಗಳಿಂದ ನಿರ್ಮಾಣವಾಗುವುದಿಲ್ಲ. ಅದಕ್ಕೆ ಅವಶ್ಯಕವಾದ ಭೌತಿಕ ಪರಿಸರವನ್ನು ಸಿದ್ಧಪಡಿಸಬೇಕಾಗಿದೆ. ಸಂಸ್ಥೆಗಳಲ್ಲಿ ಬದಲಾವಣೆ ಉಂಟು ಮಾಡಬೇಕಾಗುತ್ತದೆ. ಸಾಮುದಾಯಕ ಸಂಘಟನೆಯ ಆವಶ್ಯಕತೆ ಇರುತ್ತದೆ. ಪೈಪೋಟಿ ಸ್ಪರ್ಧೆಗಳನ್ನು ಬಿಟ್ಟು ಮಿತ್ರತ್ವ ಸಂಬಂಧಗಳನ್ನು ನಿರ್ಮಿಸಬೇಕಾಗುತ್ತದೆ. ಇದನ್ನೆಲ್ಲಾ ಹಂತ ಹಂತವಾಗಿ ಸಾಧಿಸಬೇಕಾಗಿದೆ.
ಸ್ತ್ರೀಮುಕ್ತಿಯ ಕನಸು ಭವ್ಯವಾದದ್ದು, ದಿವ್ಯವಾದದ್ದು. ಮಾರ್ಗದಲ್ಲಿ ಎಡರುವ ಆತಂಕಗಳು ಬರುತ್ತವೆ. ಬಹುದೂರ ಸಾಗಬೇಕಾಗುತ್ತದೆ.
*
ಪರಿಚಯ : ಸರಸ್ವತಿ ರಿಸಬೂಡ ಅವರು 31-12-1931 ರಲ್ಲಿ ಸಾಂಗ್ಲಿಯಲ್ಲಿ ಜನಿಸಿದರು. ಎಸ್ಎಸ್ಎಲ್ಸಿ ತನಕ ಓದು. ಗಜಾನನ ವೆಂಕಟೇಶ ರಿಸಬೂಡ ಅವರೊಂದಿಗೆ ವಿವಾಹ. ಅನುವಾದಿತ ಕೃತಿಗಳು, ಯುಗಾಂತ – ಡಾ. ಇರಾವತಿ ಕರ್ವೆ, ಸ್ತ್ರೀ-ಪುರುಷ- ಛಾಯಾ ದಾತಾರ್, ದಿಗಂತದಾಚೆ- ದುರ್ಗಾ ಭಾಗವತ್, ಮಾನವ ಎಚ್ಚತ್ತಾಗ – ಗೋದಾವರೀ ಪರುಲೇಕರ್, ಸುಂದರ ನಾನಾಗುವೆ – ಪು.ಲ. ದೇಶಪಾಂಡೆ, ಸ್ವಾತಂತ್ರ್ಯ ಸಂಗ್ರಾಮದ ಮಹಾಭಾರತ – ಗ.ಪ. ಪ್ರಧಾನ್, ವಾಲ್ಮೀಕಿ ರಾಮಾಯಣ – ಶಾಪ ಮತ್ತು ವರ ಶ್ರೀಪಾದ ರಘುನಾಥ ಭಿಡೆ. ಸ್ವಂತ ಪುಸ್ತಕ ಕನ್ನಡ ಶಿಕಾ ಕನ್ನಡ ಸ್ವಯಂಬೋಧಿನಿ.
ಇದನ್ನೂ ಓದಿ : Maha Shivaratri; ಕಾಯುವನೇ ಶಿವ?: ಬೆಳಕು ಇಳಿದು ಹೋಯಿತು ಖಾಲಿ ಸೀಟನ್ನು ಸವರುತ್ತಾ ಕುಳಿತೆ
Published On - 1:26 pm, Sun, 5 September 21