Gokak Falls : ಕೊರಳಿಗೆ ಮೂರುಗಂಟು ಹಾಕಿದ ಮಾತ್ರಕ್ಕೆ ಇವಳ ಜೀವನದ ನಿರ್ಧಾರಗಳೆಲ್ಲ ಅವನ ಸ್ವತ್ತೇ?

My Marriage My Choice : ‘ಗೀತಾನಾ! ಇಷ್ಟು ಬೇಗ ಯಾಕೆ? ಅವಳು ನನಗಿಂತ ಚಿಕ್ಕವಳು. ಅವಳದಿನ್ನೂ ಡಿಗ್ರಿನೂ ಮುಗಿದಿಲ್ವಲ್ಲ. ಕೊನೆ ಬಾರಿ ಸಿಕ್ಕಾಗ ಕಾಂಪಿಟಿಟಿವ್ ಎಗ್ಸಾಮ್​ಗೆ ಓದ್ತಿದೀನಿ, ಯುಪಿಎಸ್‍ಸಿಗೆ ಸಿದ್ಧತೆ ನಡೆಸಿದೀನಿ ಎಂದವಳು ಈಗ ಅಚಾನಕ್ಕಾಗಿ ಮದುವೆಗೆ ಯಾಕೆ ಒಪ್ಪಿದಳು?’ ಸುಷ್ಮಾ ಸವಸುದ್ದಿ

Gokak Falls : ಕೊರಳಿಗೆ ಮೂರುಗಂಟು ಹಾಕಿದ ಮಾತ್ರಕ್ಕೆ ಇವಳ ಜೀವನದ ನಿರ್ಧಾರಗಳೆಲ್ಲ ಅವನ ಸ್ವತ್ತೇ?
Follow us
ಶ್ರೀದೇವಿ ಕಳಸದ
|

Updated on:Nov 12, 2021 | 12:02 PM

Gokak Falls : ಗೋಕಾಕ ಫಾಲ್ಸ್ – ಕೇಳಲು ಕೂತುಹಲಿಯಾಗುತ್ತಿದ್ದಂತೆಯೇ ಅವರೇ ಹೇಳಿಬಿಟ್ಟರು – “ಮುಂದಿನ ತಿಂಗಳು ನಿನ್ನ ಬಾಲ್ಯದ ಗೆಳತಿ ಗೀತಾಳ ಮದುವೆ ಅಂತೆ” ನಾನು ಬೆರಗಾದೆ. ಗೀತಾನಾ! ಇಷ್ಟು ಬೇಗ ಯಾಕೆ? ಅವಳು ನನಗಿಂತ ಚಿಕ್ಕವಳು. ಅವಳದಿನ್ನೂ ಡಿಗ್ರಿನೂ ಮುಗಿದಿಲ್ವಲ್ಲ. ಕೊನೆ ಬಾರಿ ಸಿಕ್ಕಾಗ ಕಾಂಪಿಟಿಟಿವ್ ಎಗ್ಸಾಮ್​ ಗೆ ಓದ್ತಿದೀನಿ. ಯುಪಿಎಸ್‍ಸಿ ಟ್ರೈ ಮಾಡ್ತೀನಿ, ಈಗಿಂದಾನೇ ಸಿದ್ಧತೆ ಶುರು ಮಾಡಿದಿನಿ ಅಂದವಳು ಈಗ ಅಚಾನಕ್ಕಾಗಿ ಮದುವೆಗೆ ಹೇಗೆ ಸಿದ್ಧಗೊಂಡಳು? ಸರಣಿಯಾಗಿ ಹತ್ತಾರು ಪ್ರಶ್ನೆಗಳನ್ನು ಕೇಳಿಯೇ ಬಿಟ್ಟೆ. ಅಮ್ಮ ಬಂದವರೇ ನಮ್ಮನ್ನೇನು ಕೇಳುತ್ತೀ ಅವಳನ್ನೇ ಕೇಳು ಎಂದು ಗದರಿ ಅಡುಗೆಮನೆಗೆ ಹೋದರು. ಚಡಪಡಿಕೆಯಲ್ಲಿಯೇ ಅವಳಿಗೆ ಫೋನ್ ಮಾಡಿದೆ “ಏನೇ ಮದುವೆಯಂತೆ ಹೇಳಲೆ ಇಲ್ಲ, ಇಷ್ಟು ಬೇಗ ಯಾಕೆ, ಮುಂದೆ ಓದಬೇಕು ಅಂತಿದ್ದೆ. ಹೋಗಲಿ ಹುಡುಗ ನಿನಗೆ ಇಷ್ಟ ಆದನಾ ಅಥವಾ…’’ ಒಂದೇ ಉಸಿರಲ್ಲಿ ಎಲ್ಲವನ್ನೂ ಕೇಳಿ ಮೌನಿಯಾದೆ. ಸುಷ್ಮಾ ಸವಸುದ್ದಿ

(ಹರಿವು : 2)

ಮೊನ್ನೆ ಕ್ಲಬ್‍ಹೌಸ್‍ನಲ್ಲಿ “ಮದುವೆಯಾಗೋದು ಒಳ್ಳೇದಾ ಅಥವಾ ಸ್ವತಂತ್ರವಾಗಿ ಒಬ್ಬರೇ ಜೀವನ ಸಾಗಿಸೋದೊ ಒಳ್ಳೇದಾ?” ಎಂಬ ವಿಷಯದ ಕುರಿತು ಚರ್ಚೆ ಆಗ್ತಾ ಇತ್ತು. ವಿಷಯ ಆಸಕ್ತಿದಾಯಕ ಎನಿಸಿ ನಾನು ಆ ಸಂವಾದಕ್ಕೆ ಕಿವಿಯಾದೆ. ಕೆಲ ಹಿರಿಯರು ಜೀವನಕ್ಕೆ ಸಂಗಾತಿ ಅಂತ ಒಬ್ಬರು ಇರಲೇಬೇಕು, ನಮ್ಮದೂ ಅಂತ ಒಂದು ಕುಟುಂಬ ಇದ್ರೆನೇ ಚೆಂದ ಅಂತ ಹೇಳಿದ್ರು. ಇನ್ನು ಕೆಲವರು ಜೀವನದಲ್ಲಿ ಏನಾದ್ರೂ ಸಾಧಿಸಬೇಕು, ನಮ್ಮ ಇಚ್ಛೆಯಂತೆ ಸ್ವತಂತ್ರವಾಗಿ ಜೀವನ ನಡೆಸಬೇಕು ಆದರೆ ಮದುವೆ, ಸಂಸಾರ ಅನ್ನೊ ಗೋಜಿಗೆ ಹೋಗದೇ ಅಂತ ಹೇಳಿದ್ರು. ಹೀಗೆ ಅಭಿಪ್ರಾಯ ಪಟ್ಟವರಲ್ಲಿ ತರುಣಿಯರ ಸಂಖ್ಯೆಯೇ ಹೆಚ್ಚಿತ್ತು. ನನ್ನ ಪರಿಚಯಸ್ಥರಲ್ಲೂ ಕೆಲವರು ಈ ರೀತಿ ಮನಸ್ಥಿತಿ ಹೊಂದಿದವರಿದ್ದಾರೆ ಮತ್ತು ಅವರು ಖುಷಿಯಿಂದಲೇ ಆ ಏಕಾಂಗಿ ಜೀವನವನ್ನು ಆಯ್ದುಕೊಂಡಿದ್ದಾರೆ. ಅವರದ್ದು ತಪ್ಪು ನಿರ್ಧಾರ ಎಂದು ಸಂಪ್ರದಾಯಸ್ಥರು ಅವರಿಗೆ ಬುದ್ಧಿ ಹೇಳಿ, ಮದುವೆಯಾಗುವಂತೆ ಮನ ಒಲಿಸುವ ಪ್ರಯತ್ನ ಮಾಡಿದ್ದನ್ನೂ ನೋಡಿದ್ದೇನೆ. ನಾನಂತೂ ಅವರ ಏಕಾಂಗಿ ಜೀವನದ ಆಯ್ಕೆ ಮತ್ತು ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪುತ್ತೇನೆ ಮತ್ತು ಗೌರವಿಸುತ್ತೇನೆ. ಹಾಗಂತ ಮದುವೆಯಾಗುವವರದ್ದು ತಪ್ಪು ಅಂತ ಹೇಳುವ ಸಾಹಸಕ್ಕೆ ಹೋಗಲಾರೆ. ಅದು ಅವರವರ ಭಾವಕ್ಕೆ ತಕ್ಕದ್ದು, ಅವರವರ ಆಯ್ಕೆಗೆ ಬಿಟ್ಟಿದ್ದು. ಒಟ್ಟಾರೆಯಾಗಿ ಅವರವರ ಜೀವನ ಅವರದೇ ಆಯ್ಕೆಯಾಗಿರಲಿ ಎಂದು ಬಯಸುವವಳು.

ಮುಂದುವರಿದ ಕ್ಲಬ್​ ಹೌಸ್ ಸಂವಾದದಲ್ಲಿ ಕೆಲವು ಮಹಿಳೆಯರು ತಮ್ಮ ದಿಟ್ಟ ನಿರ್ಧಾರ ಮತ್ತು ಆಯ್ಕೆಗಳಿಂದ ತಮ್ಮ ಮ್ಯಾರೇಜ್ ಲೈಫ್ ಮತ್ತು ಪ್ರೊಫೆಷನಲ್ ಲೈಫ್ ಎರಡನ್ನೂ ಸಮವಾಗಿ ನಡೆಸಿಕೊಂಡು ಹೋಗುತ್ತಿರುವ ಕಥೆಗಳನ್ನು ಬಿಚ್ಚಿಟ್ಟರು. ಕೇಳುತ್ತಿದ್ದ ಯಾರಿಗೂ ಅದು ಸ್ಫೂರ್ತಿ ಮತ್ತು ಸಾರ್ಥಕ ಭಾವವನ್ನುಂಟು ಮಾಡುವ ಹಾಗಿತ್ತು. ಹೆಣ್ಣು ಬಾಲ್ಯದಲ್ಲಿ ಪಾಲಕರ, ಯೌವ್ವನದಲ್ಲಿ ಗಂಡನ, ಮುಪ್ಪಿನಲ್ಲಿ ಗಂಡುಮಕ್ಕಳ  ಆಶ್ರಯದಲ್ಲಿರಬೇಕು ಎಂಬ ವಿಚಾರ ಹೇಗೆ ಜನ್ಮ ತಾಳಿತೋ ಏನೋ. ನನಗಂತೂ ಅದು ಹೆಣ್ಣನ್ನು ತನ್ನ ಹಿಡಿತದಲ್ಲೇ ಇರಿಸಿಕೊಳ್ಳುವ ಗಂಡುಜಾತಿಯ ಹುನ್ನಾರದಂತೆ ಕಾಣಿಸುತ್ತದೆ. ಇರಲಿ, ಈಗಂತೂ ಆ ಸ್ಥಿತಿ ಎಷ್ಟೋ ಪಾಲು ಬದಲಾಗಿದೆ. ಒಮ್ಮೆ ಅವಳು ಎಲ್ಲಾ ರೀತಿಯಿಂದ ಸಶಕ್ತಳಾದರೆ ಅವಳಿಗೆ ಯಾರ ಆಶ್ರಯವೂ ಬೇಕಿಲ್ಲ, ಬೇರೆ ಯಾರದ್ದೋ ನಿರ್ಧಾರಗಳಿಗೆ, ಆಯ್ಕೆಗಳಿಗೆ ತಲೆಯಾಡಿಸುವ ಹಂಗಿನಲ್ಲಿ ಅವಳು ಬದುಕುತ್ತಿಲ್ಲ ಎಂದು ನನ್ನನ್ನು ನಾನು ಸಮಾಧಾನಿಸಿಕೊಳ್ಳುವಾಗಲೇ ಹೊರಗೆ ಹೋಗಿದ್ದ ಅಜ್ಜಿ ಒಳಗೆ ಬರುತ್ತಿರುವುದನ್ನು ಗಮನಿಸಿದೆ. ಏನೋ ಸಮಾಚಾರವೊಂದನ್ನು ಹೊತ್ತು ತಂದಿದ್ದಾರೆ ಎನ್ನುವುದನ್ನು ಅವರ ಕಣ್ಣುಗಳೇ ಹೇಳುತ್ತಿದ್ದವು.

ಕೇಳಲು ಕೂತುಹಲಿಯಾಗುತ್ತಿದ್ದಂತೆಯೇ ಅವರೇ ಹೇಳಿಬಿಟ್ಟರು – “ಮುಂದಿನ ತಿಂಗಳು ನಿನ್ನ ಬಾಲ್ಯದ ಗೆಳತಿ ಗೀತಾಳ ಮದುವೆ ಅಂತೆ” ನಾನು ಬೆರಗಾದೆ. ಗೀತಾನಾ! ಇಷ್ಟು ಬೇಗ ಯಾಕೆ? ಅವಳು ನನಗಿಂತ ಚಿಕ್ಕವಳು. ಅವಳದಿನ್ನೂ ಡಿಗ್ರಿನೂ ಮುಗಿದಿಲ್ವಲ್ಲ. ಕೊನೆ ಬಾರಿ ಸಿಕ್ಕಾಗ ಕಾಂಪಿಟಿಟಿವ್ ಎಗ್ಸಾಮ್​ ಗೆ ಓದ್ತಿದೀನಿ. ಯುಪಿಎಸ್‍ಸಿ ಟ್ರೈ ಮಾಡ್ತೀನಿ, ಈಗಿಂದಾನೇ ಸಿದ್ಧತೆ ಶುರು ಮಾಡಿದಿನಿ ಅಂದವಳು ಈಗ ಅಚಾನಕ್ಕಾಗಿ ಮದುವೆಗೆ ಹೇಗೆ ಸಿದ್ಧಗೊಂಡಳು? ಸರಣಿಯಾಗಿ ಹತ್ತಾರು ಪ್ರಶ್ನೆಗಳನ್ನು ಕೇಳಿಯೇ ಬಿಟ್ಟೆ. ಅಮ್ಮ ಬಂದವರೇ ನಮ್ಮನ್ನೇನು ಕೇಳುತ್ತೀ ಅವಳನ್ನೇ ಕೇಳು ಎಂದು ಗದರಿ ಅಡುಗೆಮನೆಗೆ ಹೋದರು. ಚಡಪಡಿಕೆಯಲ್ಲಿಯೇ ಅವಳಿಗೆ ಫೋನ್ ಮಾಡಿದೆ “ಏನೇ ಮದುವೆಯಂತೆ ಹೇಳಲೆ ಇಲ್ಲ, ಇಷ್ಟು ಬೇಗ ಯಾಕೆ, ಮುಂದೆ ಓದಬೇಕು ಅಂತಿದ್ದೆ. ಹೋಗಲಿ ಹುಡುಗ ನಿನಗೆ ಇಷ್ಟ ಆದನಾ ಅಥವಾ…’’ ಒಂದೇ ಉಸಿರಲ್ಲಿ ಎಲ್ಲವನ್ನೂ ಕೇಳಿ ಮೌನಿಯಾದೆ. ಅವಳು ನಿಟ್ಟುಸಿರು ಬಿಟ್ಟು ಕೊಂಚ ಸುಧಾರಿಸಿಕೊಂಡು, “ಆಯ್ತಾ ನಿನ್ನ ಪ್ರಶ್ನೆಗಳು?” ನಾನು ತಡವರಿಸುತ್ತಲೇ, “ಹಾಗಲ್ಲ ನನಗೆ ಶಾಕ್ ಆಯ್ತು. ಐ ಆ್ಯಮ್ ಶ್ಯೂರ್ ಇದು ನಿನ್ನ ನಿರ್ಧಾರವಂತೂ ಅಲ್ಲವೇ ಅಲ್ಲ’’ ಎಂದೆ. ಅದಕ್ಕವಳು, “ನಮ್ಮ ಮದುವೆ ನಮ್ಮ ನಿರ್ಧಾರ ಆಗೋಕೆ ಹೇಗೆ ಸಾಧ್ಯ?” ಎಂದಳು.  ಇದು ನನಗೆ ಇನ್ನೂ ಶಾಕ್ ಕೊಟ್ಟಿತು. “ಯಾಕಾಗಬಾರದು?! ಯಾವಾಗ ಮದುವೆ ಆಗಬೇಕು, ಯಾರನ್ನು ಮದುವೆ ಆಗಬೇಕು ಅಂತ ನಿರ್ಧರಿಸುವ ಹಕ್ಕು ನಮ್ಮದು’’ ಅಂದೆ.

Gokak Falls Sushma Savasuddi

ಸೌಜನ್ಯ : ಅಂತರ್ಜಾಲ

ಅದಕ್ಕವಳು ಕಪಾಳಕ್ಕೆ ಹೊಡೆದಂತೆ, ‘‘ಯಾಕೆ ಸೌಮ್ಯ ಅವರ ಅಕ್ಕ ತನ್ನ ಆಯ್ಕೆ ಪ್ರಕಾರ ಅಂತರ್ಜಾತಿ ಆಗಿದ್ದಕ್ಕೆ ಎಷ್ಟೆಲ್ಲ ರಂಪಾಟ ಆಯ್ತು ನೋಡಿಲ್ವಾ ನೀನು? ಅವರ ಅಪ್ಪ-ಅಮ್ಮ ಎಷ್ಟು ನೋವುಪಟ್ಟರು ಪಾಪ’’ ಎಂದಳು.  ಅದೇ ನನಗೂ ಇನ್ನೂ ಅರ್ಥ ಆಗದಿರೋ ವಿಷಯ. ಅವರ ಅಪ್ಪ-ಅಮ್ಮ ನೋವು ಮಾಡಿಕೊಳ್ಳೊವಂತಹದ್ದೇನಿತ್ತು ಅದರಲ್ಲಿ. ಅವರು ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದರು. ಪಾಲಕರನ್ನೂ ಒಪ್ಪಿಸೋ ಪ್ರಯತ್ನ ಮಾಡಿದರು. ಒಪ್ಪದೇ ಇದ್ದಾಗ ತಾವೇ ಮದುವೆ ಆದರು. ಜಾತಿ ಬೇರೆಯಾದರೂ ಮನುಷ್ಯರೇ ತಾನೆ? ಅದು ಬಿಟ್ಟರೆ  ಬೇರೆ ಏನೂ ತೊಂದರೆ ಇರಲಿಲ್ಲ. ಈಗಲೂ ಅವರು ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಇದೆಲ್ಲವನ್ನೂ ಗೀತಾಳ ಬಳಿ ಚರ್ಚಿಸಲು ಹೋಗಲಿಲ್ಲ. “ಹೌದು ಪಾಲಕರಿಗೆ ಗೊತ್ತಿರುತ್ತೆ ನಮಗೆ ಎಂಥವರು ಹೊಂದುತ್ತಾರೆ ಅಂತ. ಅವರಿಗೂ ತಮ್ಮ ಮಕ್ಕಳ ಜೀವನ ಚೆನ್ನಾಗಿರೋದೇ ಮುಖ್ಯ ಅಲ್ವಾ? ಆದರೂ ಯಾವ ಟೈಮ್‍ಗೆ ಮದುವೆ ಆಗಬೇಕು ಅನ್ನೋ ನಿರ್ಧಾರವನ್ನಾದರೂ ಹುಡುಗಿಯರಿಗೆ ಬಿಡಬೇಕಿತ್ತು” ಅಂದೆ. ಅದಕ್ಕವಳು, “ಆ ಅದೃಷ್ಟ ಹುಡುಗಿಯರಿಗೆ ಇಲ್ಲ ಬಿಡೇ. ಹುಡುಗ ಇಂಜಿನಿಯರ್, ಮದುವೆ ಆದ ಮೇಲೆ ಡಿಗ್ರಿ ಕಂಪ್ಲಿಟ್ ಮಾಡೋಕೆ ಅವಕಾಶ ಕೊಡ್ತಿನಿ ಅಂದಿದಾರೆ. ನನ್ನ ಹಿಂದೆ ತಂಗಿಯರು ಬೇರೆ ಇದ್ದಾರೆ. ಹಣಾನೂ ಜಾಸ್ತಿ ಕೇಳಿಲ್ವಂತೆ ಅದಕ್ಕೆ ಮನೇಲಿ ಒತ್ತಾಯ ಮಾಡಿದ್ರು ಕೊನೆಗೆ ಒಪ್ಪಿಕೊಂಡೆ’’ ಅಂದ್ಲು. ‘‘ಮತ್ತೆ ಯುಪಿಎಸ್​ಸಿ’’ ಅಂದೆ. “ಅವರಿಗೆ ಕೇಳಿ ನೋಡ್ತಿನಿ ಹೂಂ ಅಂದ್ರೆ ಮಾಡ್ತೀನಿ’’ ಎಂದಳು.

ಎಂಥಾ ವಿಚಿತ್ರ ಅನ್ನಿಸಿತು ಇದೆಲ್ಲ ನನಗೆ. ನಿನ್ನೆಯವರೆಗೂ ಯಾರು ಅಂತಾನೇ ಗೊತ್ತಿಲ್ಲದಿದ್ದವನು ಕೊರಳಿಗೆ  ಮೂರು ಗಂಟು ಹಾಕಿದ ಮಾತ್ರಕ್ಕೆ ಇವಳ ಜೀವನದ ನಿರ್ಧಾರಗಳೆಲ್ಲ ಅವನ ಸ್ವತ್ತೇ? “ಸರಿ ಮದುವೆಗೆ ತಪ್ಪದೇ ಬಾ’’ ಅಂತ ಮಾತು ಮುಗಿಸಿದ ಅವಳ ಫೋನ್ ಕಟ್ಟಾಗಿತ್ತು. “ನಾನೂ ಒಪ್ಪಿಕೊಂಡುಬಿಟ್ಟೆ” ಎಂಬ ಅವಳ ಮಾತಿನಲ್ಲಿದ್ದ ಅಸಹಾಯಕತೆ, ತನ್ನ ಕನಸುಗಳನ್ನು ಬಲಿ ಕೊಟ್ಟ ಅಸಮಾಧಾನ, ತನ್ನತನವನ್ನು ತ್ಯಾಗ ಮಾಡಿದ ನೋವು, ತನ್ನ ಗುರಿಗೆ ಮನೆಯವರಿಂದ ಸಿಗದ ಸಹಕಾರ… ಎಲ್ಲವನೂ ನನ್ನನ್ನು ಕಾಡುತ್ತಲೇ ಇದೆ ಈ ಕ್ಷಣದವರೆಗೂ.

ಘಟಪ್ರಭೆ, ನೀನಂತೂ ನಿನ್ನಿಷ್ಟದಂತೆ ಹರಿಯುತ್ತಿದ್ದೀಯಾ. ಆದರೆ ಇಂತಹ ಅದೆಷ್ಟೋ ಹೆಣ್ಣುಮಕ್ಕಳು ಪಟ್ಟಭದ್ರ ಹಿತಾಸಕ್ತಿಗಳು ರೂಪಿಸಿದ ಸೂತ್ರಕ್ಕೆ ಸಿಲುಕಿ ನಿಂತ ನೀರಾಗಿದ್ದು ನಿನಗೆ ಕಾಣುತ್ತಿಲ್ಲವೆ?; ಯಾವುದನ್ನು ಭಾವನಾತ್ಮಕವಾಗಿ ಯೋಚಿಸಬೇಕು, ಯಾವುದನ್ನು ರಚನಾತ್ಮಕವಾಗಿ ರೂಪಿಸಿಕೊಳ್ಳಬೇಕು, ಯಾವುದನ್ನು ವಾಸ್ತವಿಕ ನೆಲೆಯಲ್ಲಿ ವಿರೋಧಿಸಬೇಕು, ಯಾವುದನ್ನು ಮುಕ್ತಮನಸಿನಿಂದ ಸ್ವೀಕರಿಸಬೇಕು ಮತ್ತು ಇದೆಲ್ಲವೂ ಸಾಧ್ಯವಾಗಿಸಿಕೊಳ್ಳುವ ಹೊತ್ತಿಗೆ ನಮ್ಮನ್ನು ನಾವು ಹೇಗೆ ಪ್ರಾಮಾಣಿಕವಾಗಿ, ಪಾರದರ್ಶಕತೆಯಿಂದ ಬಸಿದುಕೊಳ್ಳಬೇಕು ಎನ್ನುವುದು ಗಂಡಿಗೂ ಗೊತ್ತಾಗಬೇಕು ಹೆಣ್ಣಿಗೂ. ಗಂಡು-ಹೆಣ್ಣಿನ ಸಂಬಂಧವೆಂದರೆ ಒಲವಿನಿಂದ, ಗೌರವದಿಂದ, ಘನತೆಯಿಂದ ಪರಸ್ಪರರ ಭಾವ-ಬುದ್ಧಿಯನ್ನು ಬೆಸೆದುಕೊಳ್ಳುತ್ತ ಉದ್ದಕ್ಕೂ ತಮ್ಮತನ ಕಾಪಾಡಿಕೊಳ್ಳುವ ಅತ್ಯಂತ ಮೋಹಕ ಜವಾಬ್ದಾರಿ. ಅದು ಹೇಗಿರಬೇಕೆಂದರೆ, ಆ ಜೋಡಿಯ ಪ್ರಭಾವಳಿಯನ್ನು ತಾಕಿದ ಯಾವುದೂ ತನ್ನ ಜಿಡ್ಡನ್ನು ತಾನೇ ಖೊಡವಿಕೊಂಡು ಹೊಸ ಆಲೋಚನೆಗಳ ಸ್ಫುರಣಕ್ಕೆ ಕಾರಣವಾಗುವಂತೆ. ಇಂಥ ಮನುಕುಲದ ಹಾದಿಗೆ ನಿನ್ನ ಕರುಣೆ ಬೇಕು ತಾಯೇ, ಅರಿವಿನ ಕಣ್ಣು ತೆರೆಸು. ಧುಮುಕುವ ಶಕ್ತಿ ನೀಡು.

ಹಿಂದಿನ ಹರಿವು : Gokak Falls : ಹೇಳು ಘಟಪ್ರಭೇ, ವತ್ಸಲಾ ಟೀಚರ್​ಗೆ ನಿನ್ನ ಸೇತುವೆಯಲ್ಲಿ ಜಾಗವಿರಲಿಲ್ಲವೆ?

Published On - 11:34 am, Fri, 12 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ