Gokak Falls: ಬಾಲ್ಯದ ಈ ಪಠ್ಯಪುಸ್ತಕಗಳೇ ನನ್ನಲ್ಲಿ ಮಾನವೀಯ ಪ್ರಜ್ಞೆ ಜಾಗೃತಗೊಳಿಸಿದ್ದು

Gokak Falls: ಬಾಲ್ಯದ ಈ ಪಠ್ಯಪುಸ್ತಕಗಳೇ ನನ್ನಲ್ಲಿ ಮಾನವೀಯ ಪ್ರಜ್ಞೆ ಜಾಗೃತಗೊಳಿಸಿದ್ದು
ಫೋಟೋ : ಡಾ. ಲೀಲಾ ಅಪ್ಪಾಜಿ

Textbook Revision Controversy : ಹೂವುಗಳೆಲ್ಲ ನಾನು ಹೆಚ್ಚು, ನೀನು ಹೆಚ್ಚು ಅಂತೆಲ್ಲ ಕಿತ್ತಾಡುವಾಗ ಸಣ್ಣ ತುಂಬೆಹೂವು ಬಂದು "ನಾವೆಲ್ಲ ಒಂದೇ" ಹೂ ಅಂದಿದ್ದು, ಸೌಹಾರ್ದ ಬದುಕಿನ ಸಾಧ್ಯತೆಯ ಕುರಿತು ತಿಳಿಸಿದ "ಮಗ್ಗದ ಸಾಹೇಬ್", ಸಾರಾ ಅಬೂಬಕರ್ ಅವರ "ಪ್ರಾಮಾಣಿಕತೆ", ಯುದ್ಧ...

ಶ್ರೀದೇವಿ ಕಳಸದ | Shridevi Kalasad

|

Jun 01, 2022 | 2:47 PM

Gokak Falls | ಗೋಕಾಕ ಫಾಲ್ಸ್ : ಪ್ರತಿ ಬಾರಿ ದೇವರ ಎದುರು ಕೈಮುಗಿದು ನಿಂತಾಗಲೆಲ್ಲ ಮನಸಲ್ಲಿ ಹೇಳುವ ಮೊದಲ ಸಾಲು “ಎಲ್ಲರನ್ನೂ ಎಲ್ಲವನ್ನೂ ಚೆನ್ನಾಗಿ ಇಟ್ಟಿರು. “ಮನಸ್ಪೂರ್ವಕವಾಗಿ ಬೇಡುತ್ತೇನೆ ಎಂತಲ್ಲ. ಅಥವಾ ಅಂತಹ ವಿಶಾಲ ಹೃದಯದವಳು ಎಂಬ ಪದವಿ ಗಿಟ್ಟಿಸಿಕೊಳ್ಳುವ ಆಸೆಯೂ ನನಗಿಲ್ಲ. ಅದು ನಾನು ನಾಲ್ಕು – ಐದನೇ ಕ್ಲಾಸಿನಲ್ಲಿದ್ದಾಗ ಗುರುಗಳೊಬ್ಬರು ಕಲಿಸಿದ್ದು. ಅಷ್ಟು ಅಚ್ಚೊತ್ತು ಕುಳಿತಿದೆ ಆ ಎಳೆ ವಯಸ್ಸಿಗೆ ಕಲಿತದ್ದು. ಇಂದು ಸುಮ್ಮನೆ ಕ್ಲಾಸಿಗೆ ಹೋಗಿ ಗೆಳತಿಯರನ್ನು ಕೇಳಿದೆ, ಶಾಲಾದಿನಗಳಲ್ಲಿ ಓದಿದ ಯಾವೆಲ್ಲ ಗದ್ಯ, ಪದ್ಯಗಳು ನೆನಪಿವೆ ನಿಮಗೆ ಎಂದು. ಕೇಳಿದ್ದೆ ತಡ ಮಾಸ್ಟರ್ಸ್ ಓದುವ ಸ್ನೇಹಿತರು ಪ್ರೈಮರಿ, ಹೈಸ್ಕೂಲ್ ಮಕ್ಕಳೇ ಆಗಿ ಹೋದರು. ಒಬ್ಬಳು ಪುಣ್ಯಕೋಟಿ ಹಾಡು, ಒಬ್ಬಳು ತಿರುಕನ ಕನಸು, ಮತ್ತೊಬ್ಬಳು ಹೇ.. ಅದ ನೆನಪ ಇದೆಯಾ ಅಜ್ಜಿಯ ಜಂಭ? ಒಡನಾಟದ ಕಥೆ ಹೀಗೆ… ಬೆಳಗ್ಗೆಯಿಂದ ಈ ಬಿಸಿಲು, ಕೆಲಸ, ಹಸಿದ ಹೊಟ್ಟೆಯಿಂದ ಕಂಗಾಲಾದವರಿಗೆ ನನ್ನ ಈ ಒಂದು ಪ್ರಶ್ನೆ ಮತ್ತೆ ಮಕ್ಕಳ ಉತ್ಸಾಹವನ್ನು ತುಂಬಿಸಿತ್ತು.                       ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

(ಹರಿವು 16)

ಹೌದು, ಸದ್ಯ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಗಂಟೆಗಟ್ಟಲೆ ಚರ್ಚೆ ನಡೆದಿತ್ತು ನಮ್ಮಲ್ಲೂ. ವಾದ ವಿವಾದ, ಪರ ವಿರೋಧ ಎಲ್ಲವೂ ಮಾತುಗಳಲ್ಲಿ ಹೊರಹೊಮ್ಮಿತ್ತು ಆದರೆ ಯಾವುದೂ ಸ್ಪಷ್ಟ ಉತ್ತರ ನೀಡುವಂತಹದ್ದಲ್ಲ. ತಪ್ಪುಗಳನ್ನು ತುಂಬ ಅಚ್ಚುಕಟ್ಟಾಗಿ ಸಮರ್ಥಿಸಿಕೊಳ್ಳಬಲ್ಲ ಮಹಾನರನ್ನು ರಾಜ್ಯ ನೋಡಿದೆ. ಹೀಗಿರುವಾಗ ಮಾತುಗಳು, ಪ್ರಶ್ನೆಗಳು, ಪ್ರತಿ ಉತ್ತರಗಳು ಪರಿಹಾರದ ದಾರಿಗಳಾಗಬಹುದೆಂದು ಅನಿಸುವುದಿಲ್ಲ ನನಗೆ. ಹೀಗಿರುವಾಗ ಮನಸ್ಸು ನಿರುಪಯೋಗ ಎನ್ನಿಸಬಲ್ಲ ಮಾತನ್ನು ಬಿಟ್ಟು ಮೌನದಲ್ಲಿ ತನ್ನ ಬಾಲ್ಯವನ್ನು ಮೆಲಕು ಹಾಕಿತು. ನಮ್ಮ ಶಾಲೆಯ ಮೈದಾನದ ಮಧ್ಯಭಾಗಕ್ಕೆ ಒಂದು ದೊಡ್ಡ ಸಂಕೇಶ್ವರ ಮರ ಇತ್ತು. ಇಂದಿಗೂ ಕನ್ನಡ ಸರ್ ಅಂದ್ರೆ ಥಟ್ ಅಂತ ನೆನಪಾಗೋದು ಅದೇ ಮರ. ಅವರ ಬಹುತೇಕ ಪಾಠಗಳು ಅದೇ ಮರದ ಕೆಳಗೆ ಆಗುತಿದ್ದವು. ಹಾಗಾಗಿಯೇ ಕನ್ನಡ ಕ್ಲಾಸ್ ಅಂದ್ರೆ ಎಲ್ಲ ಕಾಯ್ತಾ ಇದ್ದೆವು.

ನನಗೆ ನೆನಪು ಇರುವ ಮಟ್ಟಿಗೆ ಅದು ಎರಡನೇ ಕ್ಲಾಸಿನ ಎರಡನೇ ಪಾಠ “ನಾವೆಲ್ಲ ಒಂದೇ”. ಹೂವುಗಳೆಲ್ಲ ನಾನು ಹೆಚ್ಚು, ನೀನು ಹೆಚ್ಚು ಅಂತೆಲ್ಲ ಕಿತ್ತಾಡುವಾಗ ಸಣ್ಣ ತುಂಬೆಹೂವು ಬಂದು ನಾವೆಲ್ಲ ಒಂದೇ ಎಂದು ಸಾಬೀತು ಪಡಿಸುತ್ತದೆ. ಈ ಪಾಠ ನಮಗರಿವಿಲ್ಲದಂತೆ ನಮ್ಮಲ್ಲಿ ಒಂದು ಬದಲಾವಣೆ ತಂದಿತ್ತು. ನಮ್ಮ ಶಾಲೆಯಲ್ಲಿ ಒಂದು ರೂಢಿ ಇತ್ತು. ದಿನವೂ ಯಾವ ಕ್ಲಾಸಿನ ಮಕ್ಕಳು ಎಲ್ಲರೂ ಶಿಸ್ತಾಗಿ ಬಂದಿದಾರೆ, ಯಾವ ತರಗತಿಯ ಗೈರು ಸಂಖ್ಯೆ ಕಡಿಮೆ ಇದೆ ಎಂದು ನೋಡಿ ಆ ತರಗತಿಗೆ ಅಂದು ಶಾಲೆಯ ಹಸಿರು ಧ್ವಜವನ್ನು ಪ್ರಾರ್ಥನಾ ಮುಗಿದ ಬಳಿಕ ಕೊಡ್ತಾ ಇದ್ದರು. ಆ ತರಗತಿಯ ಪ್ರತಿನಿಧಿ ಆ ಧ್ವಜವನ್ನು ಸ್ವೀಕಾರ ಮಾಡಿ ಅದನ್ನು ತಮ್ಮ ಕ್ಲಾಸಿನ ಮುಂದಿರುವ ಕಂಬಕ್ಕೆ ಕಟ್ಟುತ್ತಿದ್ದರು. ಈ ಧ್ವಜ ತೆಗೆದುಕೊಳ್ಳೋದು ಎಂದರೆ ಅದು ನಮಗೆ ಒಲಂಪಿಕ್ಸ್​ನಲ್ಲಿ ಚಿನ್ನ ಪಡೆದಷ್ಟೆ ಸಂತಸದ ಗಳಿಗೆ. ತರಗತಿಯ ಒಬ್ಬರೇ ಒಬ್ಬರು ತಮ್ಮ ಟೈ, ಬೆಲ್ಟ್, ಬಿಟ್ಟು ಬಂದಿದ್ದರೂ ಧ್ವಜ ಮಿಸ್ ಆಗುವ ಸಂಭವ ಇತ್ತು. ಸಾಮಾನ್ಯವಾಗಿ ಧ್ವಜ 6, 7 ನೇ ಕ್ಲಾಸಿಗೆ ಹೋಗ್ತಾ ಇತ್ತು. ಆದ್ರೆ “ನಾವೆಲ್ಲ ಒಂದೇ” ಪಾಠ ಮುಗಿದ ಬಳಿಕ “ನೀವು ಎಲ್ಲ ಒಂದಾಗಿದ್ರೆ ಆ ಧ್ವಜ ನಿಮಗೇಕೆ ಬರಬಾರದು?” ಎಂಬ ಗುರುಗಳು ಹಾಕಿ ಹೋದ ಪ್ರಶ್ನೆ ನಮ್ಮನ್ನು ಬಡಿದೆಬ್ಬಿಸಿತ್ತು. ಆ ಧ್ವಜ ನಾಳೆ ಪಡೆಯಲೇಬೇಕು ಎಂದು ಎಲ್ಲ ಪಣ ತೊಟ್ಟು ಗಿಟ್ಟಿಸಿಕೊಂಡಿದ್ವಿ. ಎಂಥ ಸಂಭ್ರಮದ ಗಳಿಗೆಗಳು ಅವೆಲ್ಲ. ಈಗಲೂ ಬಾಲ್ಯದ ಸ್ನೇಹಿತರು ಸಿಕ್ಕಾಗಲೆಲ್ಲ ಅದನ್ನ ಮೆಲಕು ಹಾಕದೇ ಮಾತು ಮುಗಿಯಲ್ಲ.

ಇದನ್ನೂ ಓದಿ : Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ

ನಾನು ಇವತ್ತು ಅಲ್ಪ ಮಟ್ಟಿಗೆ ಓದಿಕೊಂಡದ್ದು, ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದಕ್ಕೆ ನಾನು ಶಾಲೆಯಲ್ಲಿ ಓದಿದ ಪಠ್ಯಗಳು ಮತ್ತು ಅದನ್ನ ಕಲಿಸಿದ ಗುರುಗಳೇ ನನ್ನ ಪ್ರೇರಕ ಶಕ್ತಿಗಳು. ಗಣೇಶ ಹಬ್ಬದ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ಎಸೆದರು ಎಂತಲೋ, ರಂಜಾನ್ ಹಬ್ಬಕ್ಕೆ ಮತ್ತಿನ್ನೇನೋ ನೆಪ ತೆಗೆದು ಕೋಮುಗಲಭೆ ಎಬ್ಬಿಸುವ ಕಾಲದಲ್ಲಿ 8ನೇ ಕ್ಲಾಸಿಗೆ ಓದಿದ “ಮಗ್ಗದ ಸಾಹೇಬ್” ಎಂಬ ಕನ್ನಡದ ಮೊದಲ ಪಾಠ ಸೌಹಾರ್ದದ ಬದುಕಿನ ಸಾಧ್ಯತೆಯ ಕುರಿತು ತಿಳಿಸಿತ್ತು. ಸಾರಾ ಅಬೂಬಕ್ಕರ್ ಅವರ “ಪ್ರಾಮಾಣಿಕತೆ” ಎಂಬ ಗದ್ಯ ನನ್ನ ಅಷ್ಟೂ ಸಹಪಾಠಿಗಳ ನೆನಪಿನ ಕೋಣೆಯಲ್ಲಿ ಭದ್ರವಾಗಿದೆ. ಆದರೆ ಎರಡೇ ವರ್ಷಕ್ಕೆ ಆ ಗದ್ಯವನ್ನು ತೆಗೆದು ಅದೇ ಲೇಖಕಿಯ “ಯುದ್ಧ” ಎಂಬ ಗದ್ಯವನ್ನು ಸೇರಿಸಿತ್ತು. ನಾನು ಓದಿದ ಆ ಪಾಠ ನನಗೆ ಅಬೂಬಕ್ಕರ್ ಅವರ ಕಾದಂಬರಿಯ ರುಚಿ ಸವಿಯಲು ಪ್ರೇರೇಪಿಸಿತು. ಮೊನ್ನೆ ಮಾಸ್ಟರ್ಸ್​ನಲ್ಲಿ ಆಯ್ಕೆಯ ವಿಷಯವಾಗಿ (Optional Subject) ಕನ್ನಡ ಸಾಹಿತ್ಯವನ್ನು ಆಯ್ದುಕೊಂಡ ಪರೀಕ್ಷೆಯ ಪ್ರಶ್ನೆಗೆ ಎಂದೋ ಓದಿದ ಆ ಕಾದಂಬರಿ ಉತ್ತರವಾಗಿತ್ತು. ಆದರೆ ಅದೇಕೆ ನಮ್ಮ ಈಗಿನ ಪುಸ್ತಕ ಪರಿಷ್ಕರಣ ಸಮಿತಿಗೆ ಸಾರಾ ಅಬೂಬಕ್ಕರ್ ಅವರನ್ನು ಪುಸ್ತಕದಿಂದ ಹೊರಗಿಡುವ ಆಲೋಚನೆ ಬಂತೋ ನನಗೆ ಅರ್ಥ ಆಗಲಿಲ್ಲ.

ಇದನ್ನೂ ಓದಿ : Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ

ಈಗಾಗಲೇ ಖಾಸಗೀಕರಣವಾಗಿ ಹೋಗಿರುವ ಶಿಕ್ಷಣದ ಒಳಗೆ ಇದೀಗ ರಾಜಕೀಯ, ಧರ್ಮ, ಸಿದ್ಧಾಂತಗಳನ್ನು ಹೇರುತ್ತಿರುವುದು ವಿಷಾದ ಮಾತ್ರವಲ್ಲ ಅಪಾಯ ಕೂಡ ಎಂಬುದರ ಅರಿವು ಇದ್ದರೆ ಒಳಿತು. ಪುಸ್ತಕ ಪರಿಷ್ಕರಣೆ ನಿಜವಾಗಿಯೂ ಒಂದು ಜವಾಬ್ದಾರಿಯುತ ಕೆಲಸ. ಅದು ಮಕ್ಕಳಲ್ಲಿ ಪ್ರೀತಿ, ಅಂತಃಕರಣ, ಸಹಬಾಳ್ವೆ ಮತ್ತು  ವೈಜ್ಞಾನಿಕವಾಗಿ ಮಕ್ಕಳ ವಿಚಾರ ಶಕ್ತಿಯನ್ನು, ಬೌದ್ಧಿಕ ವಿಕಾಸವನ್ನು ವಿಸ್ತರಿಸುವಂತೆ ಇರಬೇಕು. ಸಂವಿಧಾನದ ಆಶಯಗಳಿಗೆ ಬದ್ಧವಾಗಿರಬೇಕೆ ವಿನಾ ಸಿದ್ಧಾಂತಗಳಿಗೆ ಅಲ್ಲ. ಇಲ್ಲಿ ಲೇಖಕನ ಜಾತಿ, ಊರು,  ಧರ್ಮಗಳೆಲ್ಲ ಮುಖ್ಯವಾಗಬಾರದು. ತನ್ನ ಧರ್ಮವನ್ನು ಮುಕ್ತವಾಗಿ ಅಧ್ಯಯನ ಮಾಡಲು, ಮಕ್ಕಳ ಮುಂದೆ ತೆರೆದಿಡಲು ನಾವೇಕೆ ಹಿಂಜರಿಯಬೇಕು? ಎಂದು ಸರಾಗವಾಗಿ ಪ್ರಶ್ನಿಸುವವರು ಇದ್ದಾರೆ. ಧರ್ಮದ ಕುರಿತು ಪಠ್ಯದಲ್ಲಿ ಸೇರಿಸುವುದು ಸೂಕ್ತ ಎನಿಸಿದರೆ ಎಲ್ಲ ಧರ್ಮಗಳ ಕುರಿತು ಸೇರಿಸಬಹುದಲ್ಲ. ಭಗವದ್ಗೀತೆ, ಕುರಾನ, ಬೈಬಲ್ ನ ಆಯ್ದ ಒಳ್ಳೆಯ ಭಾಗಗಳನ್ನು ಸೇರಿಸಬಹುದಲ್ಲವೆ..?! ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸಿ ಎನ್ನುವ ವಿಶಾಲತೆ ಇಲ್ಲವೇ ನಮ್ಮ ಧರ್ಮದಲ್ಲಿ?

ಓದುವ ಆ ಎಳೆಯ ವಯಸ್ಸಿನ ಸ್ವಚ್ಚ, ನಿಷ್ಕಲ್ಮಶ ತಿಳಿ ಮನಸ್ಸೆಂದರೆ ಈಗ ತಾನೇ ಮಳೆಗೆ ಮೈಯೊಡ್ಡಿ ಹದಗೊಂಡ ನೆಲದಂತೆ ಏನನ್ನು ಬಿತ್ತುತ್ತಿರೋ ಅದೇ ಬೆಳೆಯುತ್ತದೆ. ನೀವು ಧರ್ಮ ಶ್ರೇಷ್ಠ ಎಂದರೆ ಧರ್ಮ, ರಾಷ್ಟ್ರ ಶ್ರೇಷ್ಠ ಅಂದರೆ ರಾಷ್ಟ್ರ, ವ್ಯಕ್ತಿ ಎಂದರೆ ವ್ಯಕ್ತಿ, ಸಿದ್ದಾಂತ ಎಂದರೆ ಸಿದ್ಧಾಂತ. ತಮಗೆ ಯಾವುದು ಶ್ರೇಷ್ಠ ಎನಿಸುವುದೋ ಅದನ್ನೇ ಅವರ ಮನಸ್ಸುಗಳಲ್ಲಿ ಬಿತ್ತುವ ಖಯಾಲಿಯೊಂದಿದೆ ಆಳುವ ವರ್ಗಕ್ಕೆ ಮತ್ತು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳಿಗೆ. ಎಲ್ಲ ಸಂಕುಚಿತಗಳನ್ನು ಮೀರಿದ ಜ್ಞಾನವನ್ನು ಅವರೆದುರು ಹರಡಿ ಯಾವುದು ಶ್ರೇಷ್ಠ ಎಂಬುದನ್ನು ಅವರ ಆಯ್ಕೆಗೆ ಬಿಡುವಷ್ಟು ದೊಡ್ಡತನದ ಕುರುಹುಗಳಿನ್ನೂ ಬೆಳೆದಿಲ್ಲ ನಮ್ಮಲ್ಲಿ. ಶಿಕ್ಷಣದ ವಿಷಯದಲ್ಲಿ ಹಿರಿಯರ ದಡ್ಡತನಕ್ಕೂ ಈ ಹೇರುವಿಕೆಯ ರೋಗವೇ ಮುಖ್ಯ ಕಾರಣ ಎಂದೆನಿಸುತ್ತದೆ ನನಗೆ.

(ಮುಂದಿನ ಹರಿವು : 15.6.2022)

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Follow us on

Related Stories

Most Read Stories

Click on your DTH Provider to Add TV9 Kannada