Child Marriage: ವೈಶಾಲಿಯಾನ; ಇದು ಶಿಶುಕಾಮ ದೃಷ್ಟಿಕೋನದ ತಣ್ಣನೆಯ ಕ್ರೌರ್ಯದರ್ಶನ

Child Marriage: ವೈಶಾಲಿಯಾನ; ಇದು ಶಿಶುಕಾಮ ದೃಷ್ಟಿಕೋನದ ತಣ್ಣನೆಯ ಕ್ರೌರ್ಯದರ್ಶನ

Hindu : “ಗರ್ಭದಾನ ಪ್ರಕ್ರಿಯೆ ಮೊದಲ ಋತುಸ್ರಾವದ ಬಳಿಕವೇ ನೆರವೇರಬೇಕು. ಇದು ಶಾಸ್ತ್ರೋಕ್ತ ಸಮ್ಮತ. ಹಿಂದೂ ಶಾಸ್ತ್ರಗಳ ಪ್ರಕಾರ ವಿವಾಹಿತ ಸ್ತ್ರೀ ಮೊದಲ ಬಾರಿ ಋತುಮತಿಯಾದ ಕೂಡಲೇ ಗಂಡನೊಡನೆ ದೈಹಿಕ ಸಮಾಗಮಕ್ಕೆ ಸಿದ್ಧಳಾಗಬೇಕು. ಇದನ್ನು ಪಾಲಿಸದವನು ಒಬ್ಬ ನಿಜವಾದ ಹಿಂದೂವೆನಿಸಿಕೊಳ್ಳಲಾರ.”

ಶ್ರೀದೇವಿ ಕಳಸದ | Shridevi Kalasad

|

Apr 02, 2022 | 10:24 AM

ವೈಶಾಲಿಯಾನ | Vaishaliyaana : ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಮುಸ್ಲಿಂ ತರುಣಿಯರು ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವ ಬಗ್ಗೆ ಹೊರಬಿದ್ದ ನಿರಾಶಾದಾಯಕ ತೀರ್ಪಿನ ನಂತರ, ಎಷ್ಟೋ ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೇ ಹೊರಗೆ ತೆರಳಲು ಸಾಧ್ಯವಿಲ್ಲವೆಂದು ತೀರ್ಮಾನಿಸಿ, ಪರೀಕ್ಷೆಗೆ ಹಾಜರಾಗದೇ, ಪರೀಕ್ಷೆಯನ್ನೇ ಬಹಿಷ್ಕರಿಸಿದ ದುರಂತಗಳ ಬಗ್ಗೆ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಓದುತ್ತಿರುವ ನನಗೆ ನಮ್ಮ ಭಾರತ ಉಪಖಂಡದಲ್ಲಿ ‘ಮಹಿಳಾ ಪ್ರಶ್ನೆ’, ಮಹಿಳೆಯರ ಶಿಕ್ಷಣ, ವಿವಾಹಕ್ಕೆ ಸಂಬಂಧಿಸಿದಂತೆ ಹೊರಬಂದ ಕಾಯ್ದೆ – ಕಾನೂನುಗಳು, ಸ್ಥಿತಿ-ಗತಿಗಳ ಚರಿತ್ರೆಯಲ್ಲಿ ಕಂಡುಬರುವ ಕೆಲವು ಗಮನಾರ್ಹ ಮೈಲಿಗಲ್ಲುಗಳನ್ನಾದರೂ ಪುನರಾವಲೋಕನ ಮಾಡಬೇಕೆನ್ನಿಸಿತು. ಅಫ್ಘಾನಿಸ್ತಾನದಲ್ಲಿ ತಾಲೀಬಾನಿಗಳು ಮಹಿಳೆಯರ ಮೇಲೆ ಅವ್ಯಾಹತವಾಗಿ ಎಸಗುತ್ತಿರುವ ದೌರ್ಜನ್ಯ ವರದಿಗಳು ಕೇಳಿ ಬೆಚ್ಚಿಬೀಳಿಸುತ್ತವೆ. ಆದರೆ ನಮ್ಮ  ಭಾರತೀಯ ಪರಂಪರೆಯಲ್ಲಿ ರಾರಾಜಿಸುತ್ತಿರುವ ಮೂಲಭೂತವಾದಿ, ಪುರುಷ ಪಕ್ಷಪಾತಿ, ಸ್ತ್ರೀಸ್ವಾತಂತ್ರ್ಯದ್ವೇಷಿಗಳ ಬಗ್ಗೆ ಚಕಾರವೆತ್ತದೇ ನಿರ್ಲಕ್ಷ್ಯ, ವಿಸ್ಮೃತಿಗೆ ಜಾರಿಬಿಡುತ್ತೇವೆ ಅಲ್ಲವೇ? ಇಂಥ ಇಬ್ಬಗೆಯ ನ್ಯಾಯ, ಎರಡು ಮಾನದಂಡಗಳ ಕಪಟತೆ ಅತ್ಯಂತ ಖಂಡನೀಯ, ಶೋಚನೀಯವೆಂದು ಮಾತ್ರ ಖಡಾಖಂಡಿತವಾಗಿ ಹೇಳಬಲ್ಲೆ. ಡಾ. ಕೆ. ಎಸ್. ವೈಶಾಲಿ (Dr. K. S. Vaishali)

(ಯಾನ 7, ಭಾಗ 1)

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಲುವಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಮಹಿಳಾ ಸಬಲೀಕರಣ, ಸಮಸ್ಯೆಗಳು – ಸವಾಲುಗಳ ಕುರಿತಾಗಿ ಹಮ್ಮಿಕೊಂಡ ವಿಚಾರ ಸಂಕಿರಣದ ಅಧ್ಯಕ್ಷೆಯಾಗಿ, ಆಹ್ವಾನದ ಮೇರೆಗೆ ಕೋಲಾರಕ್ಕೆ ತೆರಳಿದ್ದೆ. ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ, ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಮೆಚ್ಚಿ ತಲೆದೂಗುವಂತೆ ಮಾತನಾಡಿದ, ಕೋಲಾರದ ಹಿರಿಯ ಸಾಮಾಜಿಕ ಕಾರ್ಯಕರ್ತೆ ಶಾಂತಮ್ಮನವರು, ‘‘ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ, ಹಲವಾರು ಸ್ಥಳೀಯ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಸ್ಥಗಿತಗೊಂಡಿದ್ದು, ಬಾಲ್ಯವಿವಾಹದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವ್ಯಥೆಯನ್ನು ವ್ಯಕ್ತಪಡಿಸಿದರು…

“ಹದಿಹರೆಯದ ಹುಡುಗಿಯರನ್ನು ಶಾಲೆಯಿಂದ ಬಿಡಿಸಿ ಮದುವೆ ಮಾಡಿಬಿಡುತ್ತಾರೆ. ಇನ್ನೂ ಸಮರ್ಪಕವಾದ ದೈಹಿಕ ಬೆಳವಣಿಗೆಯೂ ಆಗಿರದ ಆ ಹೆಣ್ಣುಮಕ್ಕಳ ಬವಣೆ ಹೇಳತೀರದು. ೧೫-೧೬ ವರ್ಷಕ್ಕೇ ಗರ್ಭಿಣಿಯರಾಗುವ ಹುಡುಗಿಯರಿಗೆ ಪ್ರಸವ ಬಹಳ ಕಷ್ಟವಾಗುತ್ತದೆ. ಶಾಲೆಯ ಚೀಲವನ್ನು ಹೊತ್ತು ನಡೆಯಬೇಕಾದ ಹುಡುಗಿಯ ಕಂಕುಳಲ್ಲಿ ಒಂದು ಕೂಸಿರುತ್ತದೆ. ಗಂಡನ ಮನೆಯಲ್ಲಿ ದುಡಿತ, ಅತ್ತೆ ಮಾವಂದಿರ ಕಿರುಕುಳ, ಮಕ್ಕಳ ಜವಾಬ್ದಾರಿಗಳನ್ನು ನಿಭಾಯಿಸುತ್ತ ಹೈರಾಣಾಗಿ ಕಂಗಾಲಾಗುವ ಹುಡುಗಿಯರಿಗೆ 23-24 ವರ್ಷಗಳವರೆಗೂ ಮದುವೆ ಮುಂದೂಡುವ ಅವಕಾಶವಿದ್ದಲ್ಲಿ ಅವರು ಎಷ್ಟು ಸಬಲಾರಾಗಬಹುದಲ್ಲವೇ ?” ಎಂದು ಸಭೆಯನ್ನುದ್ದೇಶಿಸಿದ ಅವರ ಭಾಷಣವನ್ನು ಆಲಿಸಿದ ನನ್ನ ಮನಸ್ಸಿನಲ್ಲಿ ಮೂಡಿದ್ದೇ ಹತ್ತೊಂಭತ್ತನೆಯ ಶತಮಾನದಲ್ಲಿ ವಿವಾಹಿತೆಯಾಗಿ ದಾಂಪತ್ಯ ಜೀವನ ನಡೆಸಬೇಕಾದ ಬಾಲಿಕಾವಧುವಿನ ದಾರುಣ ಚಿತ್ರಣಗಳು.

ಹಿಂದಿನ ಅಂಕಣವೊಂದರಲ್ಲಿ ರಸಸುಂದರೀದೇವಿಯವರ ಬಗ್ಗೆ ನಾನು ಪ್ರಸ್ತಾಪಿಸಿದ್ದೆ. ಬಂಗಾಲಭಾಷಿ ಪತ್ರಿಕೆಯ 1890ರ ಡಿಸೆಂಬರ್ ತಿಂಗಳ ವರದಿಯೊಂದನ್ನು ಇತಿಹಾಸ ತಜ್ಞೆ ತಾನಿಕಾ ಸರ್ಕಾರ್ ತಮ್ಮ Hindu wife, Hindu nation ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ವರದಿಯ ಸಾಲುಗಳೇ ನಮ್ಮನ್ನು ಅಪ್ರತಿಭರನ್ನಾಗಿಸುತ್ತವೆ. ದಾಂಪತ್ಯ ಜೀವನವನ್ನು ನಡೆಸಲು ಒಬ್ಬ ಕನ್ಯೆಯ ವಯಸ್ಸು ಎಷ್ಟಿರಬೇಕು ಎಂಬ ವಾದ ಸರಣಿ ಹೀಗೆ ಸಾಗುತ್ತದೆ: “ಗರ್ಭದಾನದ ಕಾರ್ಯಕ್ರಮ ಮೊದಲ ಋತುಸ್ರಾವದ ಬಳಿಕವೇ ನೆರವೇರಬೇಕು. ಇದು ಶಾಸ್ತ್ರೋಕ್ತವಾಗಿ ಸಮ್ಮತವಾದದ್ದು. ಹಿಂದೂ ಶಾಸ್ತ್ರಗಳ ಪ್ರಕಾರ ವಿವಾಹಿತ ಸ್ತ್ರೀಯರು ಮೊದಲ ಬಾರಿ ಋತುಮತಿಯರಾದ ಕೂಡಲೇ ತಮ್ಮ ಗಂಡನೊಡನೆ ದೈಹಿಕ ಸಮಾಗಮಕ್ಕೆ ಸಿದ್ಧರಾಗಬೇಕು. ಇದನ್ನು ಪಾಲಿಸದವನು ಒಬ್ಬ ನಿಜವಾದ ಹಿಂದೂವೆನಿಸಿಕೊಳ್ಳಲಾರ.” ಮದುವೆ ಮಂಟಪದಲ್ಲಿ ಕಂಗೊಳಿಸುವ ಬಾಲಿಕಾವಧುವಿನ ಚಿತ್ರಣವಂತೂ ಶಿಶುಕಾಮದ (ಪೀಡೋಫೀಲಿಯ) ದೃಷ್ಟಿಕೋನದ ತಣ್ಣನೆಯ ಕ್ರೌರ್ಯದ ದರ್ಶನವನ್ನೇ ಮಾಡಿಸುತ್ತದೆ. ಪ್ರೌಢಾವಸ್ಥೆಯನ್ನು ತಲುಪಿದ ತರುಣಿಯ ಮಾದರಿಯಲ್ಲಿ ಕಡುಗೆಂಪು ವರ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುವ ಪುಟ್ಟ ಬಾಲಿಕಾವಧು, ತಮಟೆ, ಡೋಲು, ಮಂಗಳ ವಾದ್ಯಗಳ ಮೊಳಗುವಿಕೆಯ ನಡುವೆ ಅವಳ ಸುಂದರ ವದನವನ್ನು ವೀಕ್ಷಿಸಲು ಧಾವಿಸುವ ನೆಂಟರ ಬಳಗ, ಅವರತ್ತ ನೋಡಿ ಮುದ್ದಾಗಿ ನಗುವ, ಗೊಂಬೆಯಂತಿರುವ ಪುಟ್ಟ ವಧುವಿನ ವರ್ಣನೆ, ಆಯ್ಕೆಯ ಸ್ವಾತಂತ್ರ್ಯವೇ ಇರದ. ವಿವಾಹವೆಂದರೆ ಏನೆಂಬುದರ ಕಿಂಚಿತ್ತೂ ಅರಿವು ಇಲ್ಲದ ಮುಗ್ಧ ಬಾಲಕಿಯ ಅಸಹಾಯಕತೆ, ಕೋಮಲತೆಯನ್ನು ಬಿಂಬಿಸುತ್ತದೆ.

ಇದನ್ನೂ ಓದಿ : Hijab: ವೈಶಾಲಿಯಾನ; ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಎಂಥಾ ಹೇಯವಾದ ಆಷಾಢಭೂತಿತನ!

ಆದರೆ ಶೋಚನೀಯ ಸಂಗತಿಯೆಂದರೆ, ಸಮಾಜ ಸುಧಾರಕರಿಗಾಗಲೀ ಆಥವಾ ಗರ್ಭದಾನದ ಶಾಸ್ತ್ರದ ಬಗ್ಗೆ ಫರ್ಮಾನುಗಳನ್ನು ಹೊರಡಿಸುತ್ತಿದ್ದ ಹಿಂದೂ ಸನಾತನಿಗಳಿಗಾಗಲೀ, ಬಾಲಿಕಾವಧುಗಳು ವಿವಾಹದ ಚೌಕಟ್ಟಿನಲ್ಲಿ ಲೈಂಗಿಕ ಹಿಂಸೆ, ಅತ್ಯಾಚಾರಗಳಿಗೆ ಬಲಿಯಾಗುವ ಸಾಧ್ಯತೆಗಳ ಬಗ್ಗೆ ಲವಲೇಶವೂ ಕಾಳಜಿಯಿರಲಿಲ್ಲವೆನ್ನುವುದು ಕರಾಳ ಸತ್ಯ. ಕಾಲ-ಕಾಲಕ್ಕೆ ಕೆಲವು ತಲ್ಲಣಗೊಳಿಸುವ ವರದಿಗಳು ಪ್ರಕಟಗೊಂಡರೂ, ಅವು ಅಂತಹ ಸಂಚಲನವನ್ನೇನೂ ಸೃಷ್ಟಿಸಿರಲಿಲ್ಲ. ಜೂನ್ ತಿಂಗಳ 1875ರ ಢಾಕಾ ಪ್ರಕಾಶ ಪತ್ರಿಕೆಯಲ್ಲಿ ತನ್ನ ಜೊತೆ ಲೈಂಗಿಕ ಸಂಬಂಧಕ್ಕೆ ಸಮ್ಮತಿಸಲಿಲ್ಲವೆಂಬ ಕಾರಣಕ್ಕಾಗಿ ಕ್ಷುದ್ರನಾಗಿದ್ದ ವಯಸ್ಕ ಪುರುಷನೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಬಾಲಕಿಯಾದ ಹೆಂಡತಿಯನ್ನು ಅಮಾನುಷವಾಗಿ ಥಳಿಸಿ, ಹತ್ಯೆ ಮಾಡಿದ್ದ ಘಟನೆ ವರದಿಯಾಗಿತ್ತಾದರೂ, ನೆರೆಹೊರೆಯವರು ಅದನ್ನು ಆತ್ಮಹತ್ಯೆಯೆಂದು ಬಿಂಬಿಸಲು ಪ್ರಯತ್ನಿಸಿದ್ದರು. ನಂತರ ನ್ಯಾಯಾಧೀಶರು ಗಂಡನಿಗೆ ಲಘುವಾದ ಶಿಕ್ಷೆ ನೀಡಿ ಖುಲಾಸೆಗೊಳಿಸಿದ್ದರು.

1873ರ ಮೇ ತಿಂಗಳ ಶೈಕ್ಷಣಿಕ ಗೆಜೆಟ್‌ನಲ್ಲಿ ಕೂಡ ಇದನ್ನೇ ಹೋಲುವ ಮತ್ತೊಂದು ಘಟನೆಯ ವರದಿಯಾಗಿತ್ತು. ತನ್ನ ಜೊತೆಗೆ ಮಲಗಲು ನಿರಾಕರಿಸಿದಳೆಂದು, ಮತ್ತೊಬ್ಬ ವಯಸ್ಕ ಗಂಡ ತನ್ನ ಹನ್ನೊಂದರ ಪ್ರಾಯದ ಹೆಂಡತಿಯ ಕೂದಲನ್ನು ಹಿಡಿದು, ದರದರ ಎಳೆದು ನಿಷ್ಕರುಣೆಯಿಂದ ಥಳಿಸಿ, ಹಲ್ಲೆ ಮಾಡಿ, ಘಾಸಿಗೊಳಿಸಿ ಅವಳನ್ನು ಕೊಂದಿದ್ದ. ಹೀಗೆ ಒಮ್ಮೊಮ್ಮೆ ಪ್ರಕಟವಾಗುತ್ತಿದ್ದ ಈ ವರದಿಗಳು ಅಲ್ಲಿಯವರೆಗೂ ಹಿಂದೂ ವಿವಾಹದ ಬಗ್ಗೆ ಯಾವುದೇ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿರಲಿಲ್ಲ. ವೈವಾಹಿಕ ಅತ್ಯಾಚಾರ, ಹೆಣ್ಣಿನ ದೈಹಿಕ ಸ್ವಾತಂತ್ರ್ಯ, ವಿವಾಹದಲ್ಲಿ ದಾಂಪತ್ಯ ಜೀವನವನ್ನು ನಡೆಸಲು ಅತ್ಯವಶಕ್ಯವಾದ ಪತ್ನಿಯ ಸಮ್ಮತಿ, ಆಕೆಯ ವಯಸ್ಸಿನ ಕುರಿತಾದ ಚರ್ಚೆಗಳಿಗೆ ಮಹತ್ವದ ತಿರುವು ನೀಡಿದ್ದು 1890ರಲ್ಲಿ ಸಂಭವಿಸಿದ ಹನ್ನೊಂದು ವರ್ಷದ ಬಾಲಕಿ ಫೂಲಮಣಿಯ ಹೃದಯವಿದ್ರಾವಕ, ದುರಂತ ಸಾವಿನ ಪ್ರಕರಣ.

ಈ ಘೋರ ಘಟನೆ ಪಾರ್ಸಿ ಸಮಾಜ ಸುಧಾರಕರಾದ ಮಲಬಾರಿಯವರ ಬಾಲ್ಯವಿವಾಹದ ಮೇಲೆ ನಿಷೇಧ ಹೇರಬೇಕೆಂಬ ಪ್ರಚಾರಕ್ಕೆ, ಅದರ ವ್ಯಾಪ್ತಿಗೆ ಬರುವ ಕಾನೂನು, ದಂಡ ಸಂಹಿತೆಗಳ ಪರಿಷ್ಕರಣೆಗೆ ಬಲ ನೀಡಿ, ಲೈಂಗಿಕ ಸಂಬಂಧಕ್ಕೆ ಸಮ್ಮತಿಸುವ ಬಾಲಕಿಯ ವಯಸ್ಸನ್ನು ಹನ್ನೊಂದರಿಂದ ಹನ್ನೆರಡರ ವಯಸ್ಸಿಗೆ ಏರಿಸಲು ಸಹಾಯಕವಾಯಿತು. ಹಿಂದೂ ಹೆಣ್ಣು ಮಕ್ಕಳು ವಿವಾಹದ ಚೌಕಟ್ಟಿನಲ್ಲಿ ಎಂಥಾ ಯಮಯಾತನೆಯನ್ನು ಅನುಭವಿಸಿದರೆಂದನ್ನು ನೆನೆಸಿಕೊಂಡರೆ ಮೈನಡುಗುತ್ತದೆ. ಈ ಅಮಾನವೀಯ ಆಚರಣೆಗೆ ಒಂದು ವಿತಂಡ ವಾದದ ಸಮಜಾಯಿಷಿ ಕೂಡ ಚಾಲ್ತಿಯಲ್ಲಿತ್ತು. ಅದು ಪುರುಷ ಸಾರ್ವಭೌಮತ್ವದ ಮೌಲ್ಯಗಳನ್ನೇ ಆರಾಧಿಸುವ, ಪುರುಷರ ಅಧಿಕಾರವನ್ನೇ ಸಮರ್ಥಿಸಲು ಅನೇಕ ಕುಟಿಲೋಪಾಯಗಳನ್ನು ಧಾರ್ಮಿಕ ಹಂದರದಲ್ಲಿ ಬಳಸಿ, ಮಹಿಳೆಯ ಶೋಷಣೆಯಲ್ಲಿ ಮುಖ್ಯ ಪಾತ್ರ ವಹಿಸಿದ ಪುರೋಹಿತಶಾಹಿಯಿಂದ ಅನುಮೋದಿಸಲ್ಪಟ್ಟಿತ್ತು ಎಂಬ ಕಹಿ ಸಂಗತಿಯನ್ನು ಘಂಟಾಘೋಷವಾಗಿ ಸಾರಿ ಹೇಳಬೇಕಾಗಿಲ್ಲವಷ್ಟೇ? ಬಾಲಿಕಾ ವಧು ಅಕಸ್ಮಾತ್ ಹನ್ನೆರಡರ  ವಯಸ್ಸಿನ ಮುನ್ನವೇ ಋತುಮತಿಯಾದರೆ, ಆಕೆಯಿನ್ನೂ ಕಾನೂನಿನ ದೃಷ್ಟಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೆಂದು ಪರಿಗಣಿಸಲ್ಪಡುತ್ತಾಳೆ, ಹೀಗಾಗಿ ಆಕೆಯ ಶೋಭನ, ನಿಷೇಕ ಶಾಸ್ತ್ರ-ಸಮಾರಂಭಗಳನ್ನು ಸಾಂಗವಾಗಿ ನೆರವೇರಿಸಲು ಸಾಧ್ಯವಾಗದು. ಆದರೆ ಇಂತಹ ಸಂದರ್ಭದಲ್ಲಿ ಗಂಡನು ತನ್ನ ಪಿತೃಗಳಿಗೆ ನೀಡುವ ‘ಪಿಂಡ’ ಅಪವಿತ್ರವಾಗುತ್ತದೆ ಎಂದು ಸನಾತನಿಗಳು ದೊಡ್ಡ ಗುಲ್ಲನ್ನೇ ಎಬ್ಬಿಸಿದ್ದರು.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಹಿಂದಿನ ಯಾನ : Music: ವೈಶಾಲಿಯಾನ; ಕಾಮದಹನದಂದು ಹುಟ್ಟಿದ ಗುರು ಶೇಷಾದ್ರಿ ಗವಾಯಿಯವರನ್ನು ನೆನೆಯುತ್ತ

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana 

Follow us on

Related Stories

Most Read Stories

Click on your DTH Provider to Add TV9 Kannada