Pt. Rajshekhar Mansur‘s Death: ‘ಸಂಗೀತ ಕಲಿಸೋದು ಹಣ ಮಾಡುವ ವ್ಯವಹಾರವಲ್ಲ’ ಪಂ. ರಾಜಶೇಖರ ಮನ್ಸೂರ
Pt. Mallikarjun Mansur : ‘ಮನೆಯಲ್ಲಿ ಎಷ್ಟೋ ಸಲ ನಾನು ಹಾಡ್ತಾ ಇದ್ದಾಗ ಅವರು ತೋಟದಲ್ಲೆಲ್ಲೋ ಬೀಡಿ ಸೇದುತ್ತಾ, ಸುತ್ತಾಡುತ್ತಿರುತ್ತಿದ್ದರು. ನನ್ನ ಹಾಡುವಿಕೆ ಎಲ್ಲಿಯಾದರೂ ಸರಿಯಾಗದೇ ಇದ್ದಲ್ಲಿ ಅಲ್ಲಿಂದಲೇ ಕೂಗಿ, ‘ಏ ಐಸಾ ನಹೀ ಹೈ, ಐಸಾ ಕರೋ’ ಪಂ. ರಾಜಶೇಖರ ಮನ್ಸೂರ
Pandit Rajshekhar Mansur : ‘ನಮ್ಮ ತಂದೆಯೇ ಒಂದು ದೊಡ್ಡ ಟ್ರೆಷರ್. ಹಾಗಾಗಿ ಬೇರೆ ಪ್ರಭಾವ ಅಥವಾ ಬೇರೆಯವರಿಂದ ತೆಗೆದುಕೊಳ್ಳಬೇಕಾದ ತುರ್ತು ನನಗೆ ಬರಲೇ ಇಲ್ಲ.’ ಹೀಗಂದಿದ್ದರು ಪಂ. ರಾಜಶೇಖರ ಮನ್ಸೂರ್. ಅವರನ್ನು ಹಲವು ವರ್ಷಗಳ ಹಿಂದೆ ಅವರ ಮನೆಯಲ್ಲಿ ಮಾತನಾಡಿಸಿದ್ದೆವು. ತಂದೆ ಮಲ್ಲಿಕಾರ್ಜುನ್ ಮನ್ಸೂರ್ ಅವರನ್ನು ಕುರಿತು ಒಂದು ಸಂಚಿಕೆಯನ್ನು ತರುವ ಸಂದರ್ಭದಲ್ಲಿ ಅವರನ್ನು ಕಂಡಿದ್ದು. ಒಂದು ದಿನ ಅವರೊಂದಿಗೆ ಇದ್ದೆವು. ತುಂಬಾ ಪ್ರೀತಿಯಿಂದ ಮಾತನಾಡಿಸಿದ್ದರು. ಹಲವು ಲೇಖನಗಳನ್ನು, ಫೋಟೊಗಳನ್ನು ಹಂಚಿಕೊಂಡಿದ್ದರು. ಎಷ್ಟೋ ನಮಗೆ ಅರ್ಥವಾಗದ್ದನ್ನು ಹಾಡಿ ತೋರಿಸಿದ್ದರು. ತಂದೆಯವರ ಹೆಸರಿನಲ್ಲಿದ್ದ ಟ್ರಸ್ಟಿಗೂ ಫೋನ್ ಮಾಡಿ ಪೋಟೊ ಕೊಡಿಸಿದ್ದರು. ಇಂದು ಕೇವಲ ನೆನಪು. ಅವರೊಂದಿಗೆ ಕಳೆದಿದ್ದಕ್ಕೆ ಕೆಲವು ಫೋಟೋಗಳು, ಮಾಡಿದ ಒಂದು ಸಂದರ್ಶನ ಇದೆ. ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನಗೆ ಏನೋ ಹೊಸದು ಕಲಿಯುತ್ತಿದ್ದೇನೆ ಅನ್ನಿಸಲೇ ಇಲ್ಲ. ಟಿ. ಎಸ್. ವೇಣುಗೋಪಾಲ, ಸಂಪಾದಕರು ‘ರಾಗಮಾಲಾ’
ತಾವು ಮನ್ಸೂರರ ಮಗ, ಪ್ರಮುಖ ಶಿಷ್ಯರೂ ಆಗಿದ್ದೀರಿ. ಈ ಬಗ್ಗೆ ನಿಮ್ಮ ಅನುಭವವೇನು? ನಾನು ಸುಮಾರು 30 ವರ್ಷ ನನ್ನ ತಂದೇವ್ರ ಜೊತೆ ಹಿಂದೆ ಹಾಡ್ತಾ ಇದ್ದೆ. ಅಂದ್ರೆ ಸುಮಾರು ಒಂದು ಸಾವಿರ ಕಛೇರಿಗಳಲ್ಲಿ ಭಾಗವಹಿಸಿದ್ದೆ. ಆ ಕಛೇರಿಗಳಲ್ಲಿ ಒಂದೇ ರಾಗವನ್ನು ಅವರು ಬೇರೆ ಬೇರೆ ಕಡೆ ಹಾಡ್ತಾ ಇದ್ರು. ನನಗೆ ಡಿಫರನ್ಸ್ ಗೊತ್ತಾಗ್ತಾ ಇತ್ತು. ಆ! ಇಲ್ಲಿ ಬೇರೆ ಆಯ್ತು, ಇಲ್ಲಿ ಬೇರೆ ಆಯ್ತು, ಅಂತ ಹಿಡೀತಾ ಇದ್ದೆ. ಈ ಅವಕಾಶ ಶಿಷ್ಯನಿಗೆ ಸಿಕ್ಕೋದಿಲ್ಲ. There are many advantages in being both shishya and son. ಈಗ ಒಂದೇ ಬಿಹಾಗಡಾ ರಾಗ ಅಂದ್ರೂ ಅಪ್ಪ ಅದನ್ನು ಸುಮಾರು 49, 50 ಕಡೆ ಹಾಡಿದ್ರು. ಜೊತೆಯಲ್ಲೇ ಇದ್ದ ನನಗೆ ರಾಗದ ಬೇರೆ ಬೇರೆ ಆಯಾಮಗಳು ಸಿಕ್ತಿದ್ವು. ಆ ಆಯಾಮಗಳನ್ನು ಹಿಡಿದು, ನಾನು ಇನ್ನೂ ಇರಬಹುದಾದ ಹೊಸ ಆಯಾಮಗಳನ್ನು ಹುಡುಕ್ತಿದ್ದೆ. ಇದು ಎಷ್ಟು ಮಂದಿ ಶಿಷ್ಯರಿಗೆ ಸಿಗುತ್ತೆ ಹೇಳಿ? ಜೊತೆಗೆ ಮಗನಿಗೆ ಜೋರು ಮಾಡಿ ಹೇಳಿದಂತೆ ಶಿಷ್ಯರಿಗೆ ಜೋರು ಮಾಡಿ ಹೇಳಕ್ಕೆ ಆಗೋದಿಲ್ಲ.
ಶಿಷ್ಯ ಆಯ್ಕೆ ಮಾಡಿಕೊಂಡು ಕಲಿಯೋದಕ್ಕೆ ಅಂತ ಬಂದಿರ್ತಾನೆ. ಆದರೆ ಮಗನಿಗೆ ಆ ಅವಕಾಶ ಇರೋದೇ ಇಲ್ಲ. ಹೌದು, ಶಿಷ್ಯ ಬೇರೆ ಘರಾನಾದಿಂದಲೂ ಬಂದಿರಬಹುದು. ಆದರೆ ಮಗ ಅದೇ ಘರಾನಾದಲ್ಲಿಯೇ ಇರ‍್ತಾನೆ. ಹಾಗಾಗಿ ಒಂದು stream ಏನಿರ‍್ತದೆ ಅದು, ಅಂದ್ರೆ ಸಂಗೀತದ ಪ್ರವಾಹ, ಅದು ಒಂದೇ ಪ್ರವಾಹ ಆಗಿರ‍್ತದೆ ಮತ್ತು ಪ್ರಭಾವವೂ ಒಂದೇ ಇರ‍್ತದೆ. ಶಿಷ್ಯರು ಮೂರು ನಾಲ್ಕು ಕಡೆ ಕಲಿತು ಇಲ್ಲಿಗೆ ಬರಬಹುದು ಮತ್ತು ಇಲ್ಲಿಂದ ಬೇರೆ ಕಡೆ ಹೋಗಬಹುದು. ಆದರೆ ಮಗನಿಗೆ ಆ ಅಧಿಕಾರವೇ ಇಲ್ಲವಲ್ಲ. ಒಂದು ಘರಾನ ಪದ್ಧತಿ ಅಂದ್ರೆ ಅದು ನಿಜವಾಗಿಯೂ ಮನೆತನವೇ. ಆ ಮನೆತನದ traditions ಬೆಳೆಸಿಕೊಂಡು ಹೋಗಬೇಕಲ್ಲ ನಾವು. ಆ ಜವಾಬ್ದಾರಿ ಮಕ್ಕಳಾದ ನಮ್ಮ ಮೇಲಿರ‍್ತದೆ, ಶಿಷ್ಯನ ಮೇಲಿರೋದಿಲ್ಲ. ಹಾಗೆಯೇ ಆ ಘರಾನದ ಸಂಗೀತದ ಪ್ರಭಾವ ನಮ್ಮ ಮೇಲಿರ‍್ತದೆ. ನಾವು ಹುಟ್ಟಿದಾಗಿನಿಂದ ನಮ್ಮ ತಾಯಿಯ ಕಡೆಯಿಂದ ಜೋಗುಳದ ಪದ ಕೇಳೇ ಇಲ್ಲ. ನಮ್ಮ ತಂದೇದೇ ಸಂಗೀತ. ಬೆಳಿಗ್ಗೆ ಎದ್ರೆ ಅವರು ಹಾಡ್ತಾನೇ ಇರ‍್ತಿದ್ರು. ನಾವೆಲ್ಲ ಸಿದ್ಧವಾಗಿ ಸ್ಕೂಲಿಗೆ ಹೋಗುವಾಗಲೂ ಹಾಡ್ತಾನೇ ಇರ‍್ತಾ ಇದ್ರು. ನಾವೆಲ್ಲ ಸ್ಕೂಲಿಂದ ಬಂದಾಗಲೂ ಹಾಡ್ತಾನೇ ಇರ‍್ತಿದ್ರು. ಇಷ್ಟೊಂದು ಸಂಗೀತದ effect ಇರಬೇಕಾದ್ರೆ where is the shishya? ನಾನು ಶಿಷ್ಯರು ಕಡಿಮೆ ಅಂತ ಹೇಳ್ತಾ ಇಲ್ಲ. ಬೇಕೋ ಬೇಡವೋ ಸಂಗೀತ ನಮ್ಮ ಕಿವಿಯ ಮೇಲೆ ಬಿದ್ದು ಒಳಕ್ಕೆ ಇಳಿದಿರುತ್ತದೆ. ಇದು unconscious imbibing,, ಅವರದ್ದು conscious imbibing.
ನಿಮ್ಮ ತಂದೆಯವರು ಕಲಿಸುವ ಕ್ರಮ ಏನಾಗಿತ್ತು? ಸುಮ್ಮನೆ ಕಣ್ಮುಚ್ಚಿ, ಅವರು ಹಾಡುವುದನ್ನು ಅನುಸರಿಸುವುದಕ್ಕೆ ಹೇಳುತ್ತಿದ್ದರು. ರಾಗವು ಅರಳಿ ವಿಸ್ತಾರವಾಗುವ ಕ್ರಮ ನಿಧಾನವಾಗಿ ನನ್ನ ಗ್ರಹಿಕೆಗೆ ದಕ್ಕುತ್ತದೆ ಎಂದು ಹೇಳುತ್ತಿದ್ದರು. ಅವರು ತರಗತಿಯೊಳಗೆ ವ್ಯವಸ್ಥಿತವಾಗಿ ಹೇಳಿಕೊಡುವ ಕ್ರಮದಲ್ಲಿ ಹೇಳಿಕೊಡುತ್ತಿರಲಿಲ್ಲ. ಬದಲಾಗಿ ಅದು ಒಬ್ಬ ಸಹಗಾಯಕನ ಹಾಗೆ ಇರುತ್ತಿತ್ತು. ಹಾಗಾಗಿ ನಾನು ನನ್ನದೇ ಆದ ದಾರಿಯನ್ನು ಹುಡುಕಿಕೊಳ್ಳಲೇಬೇಕಿತ್ತು ಮತ್ತು ನಾನು ಏನು ಹಾಡುತ್ತಿದ್ದೆ ಎನ್ನುವುದನ್ನು ನಾನು ಅರ್ಥಮಾಡಿಕೊಳ್ಳಲೇಬೇಕಿತ್ತು. ಇದರಿಂದ ನನಗೆ ತುಂಬಾ ಒಳ್ಳೆಯದಾಯಿತು ಕೇವಲ ತನ್ನ ಶೈಲಿಯನ್ನು ಕುರುಡಾಗಿ ಅನುಸರಿಸಬೇಕು ಎಂದು ಬಯಸದೆ, ಶಿಷ್ಯ ತನಗಿಂತ ಭಿನ್ನವಾಗಿ ಮಾಡಲಿ ಎನ್ನುವುದನ್ನು ಪ್ರೋತ್ಸಾಹಿಸುವವನೇ ನಿಜವಾದ ಗುರು ಎನ್ನುವುದು ನನ್ನ ಅನಿಸಿಕೆ.
ಈ ವಿಧಾನ ನನಗೆಷ್ಟು ಮೆಚ್ಚುಗೆಯಾಯಿತೆಂದರೆ, ನಾನು ಕಲಿಸುವಾಗ ಈಗ ಇದೇ ಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದೇನೆ. ನಾನು ಯಾವ ಕಾರಣಕ್ಕೂ ಒಂದೊಂದೇ ಸಂಗತಿಯನ್ನು ಹೇಳಿಕೊಟ್ಟು ಕಲಿಸುವುದಿಲ್ಲ. ಯಾವುದಾದರೊಂದು ಸಂಗತಿ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಿನ ಸಂಗತಿಯ ಮೇಲೆ ಗಮನ ಹರಿಸಲು ಹೇಳುತ್ತೇನೆ. ಏಕೆಂದರೆ ಸಂಗೀತವೆಂಬ ಸಾಗರ ಅನಂತವಾಗಿದೆ. ನಾನು ಯಾವುದೇ ರಚನೆಯ ಸ್ವರಪ್ರಸ್ತಾರವನ್ನು ಬರೆದುಕೊಳ್ಳುವುದಿಲ್ಲ. ಅದು ನನ್ನ ಮನಸ್ಸಿನಲ್ಲಿ ಮತ್ತು ನನ್ನ ಕಲ್ಪನೆಯಲ್ಲಿ ಇರುತ್ತದೆ. ನನ್ನ ಶಿಷ್ಯರಿಗೂ ಹಾಗೇ ಕಲಿಸಬೇಕೆಂದು ಬಯಸುತ್ತೇನೆ.
ಭಾರತೀಯ ಅಭಿಜಾತ ಸಂಗೀತವನ್ನು ಬರವಣಿಗೆಯ ಮೂಲಕ ಹೇಳುವುದಕ್ಕಾಗುವುದಿಲ್ಲ. ನೋಡಿ, ತೋಡಿ ರಾಗದ ರಿಷಭ ಎಷ್ಟು ಘನವಾಗಿರಬೇಕು ಎನ್ನುವುದನ್ನು ಸ್ವರವನ್ನು ಬರೆದು ಹೇಗೆ ಹೇಳುವುದಕ್ಕಾಗುತ್ತದೆ? ಹಾಗಾಗಿಯೇ ನನ್ನ ಅಭಿಪ್ರಾಯದಲ್ಲಿ ಸಂಗೀತ ಮತ್ತು ಅದರ ವ್ಯಾಕರಣದಲ್ಲಿ, ಸಂಗೀತವೇ ಮೊದಲು. ವ್ಯಾಕರಣ ಏನಿದ್ದರೂ ನಂತರ. ವೇದಿಕೆಯ ಮೇಲೆ ಪ್ರಸ್ತುತಿಗೊಳ್ಳುವ ಸಂಗೀತದ ಮೂಲಕ ವ್ಯಾಕರಣ ರೂಪುಗೊಳ್ಳಬೇಕೇ ಹೊರತು ವ್ಯಾಕರಣಕ್ಕನುಗುಣವಾಗಿ ಸಂಗೀತವನ್ನು ರೂಪಿಸುವುದು ಸಾಧ್ಯವಿಲ್ಲ ಮತ್ತು ಸರಿಯೂ ಅಲ್ಲ.
ಇದನ್ನೂ ಓದಿ : Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ
ನಿಮ್ಮ ತಂದೆಯವರು ಶಿಷ್ಯರು ಹಾಗೂ ಮಕ್ಕಳಿಗೆ ಕಲಿಸುವ ಕ್ರಮದಲ್ಲೇನಾದ್ರೂ ವ್ಯತ್ಯಾಸವಿತ್ತಾ? ಶಿಷ್ಯನಿಗೆ ಹಾಗೂ ಮಗನಿಗೆ ಕಲಿಸುವ ಕ್ರಮದಲ್ಲೇನು ವ್ಯತ್ಯಾಸವಿದೆ ಅಂತ ನನಗನ್ನಿಸುವುದಿಲ್ಲ. ವ್ಯತ್ಯಾಸ ತೊಗೊಳೋದ್ರಲ್ಲಿರುತ್ತೆ receptionಲ್ಲಿರುತ್ತೆ. ಮಗನಿಗೆ ಕಲಿಸುವ ಮೊದಲೇ ಕಲಿಕೆ ಶುರುವಾಗಿರುತ್ತದೆ. ಒಂದು ಸಲ ಕಲಿಸಿದ ಕೂಡಲೇ ಬಂದು ಬಿಡುತ್ತದೆ. ಕೇಳಿದ್ದಿರುತ್ತಲ್ಲ! ಶಿಷ್ಯರಿಗೆ ಅಪ್ರೆಂಟಿಸ್‌ಶಿಪ್ ಆಗಬೇಕು ಮತ್ತು ಅಡ್ವಾನ್ಸ್ಡ್ ಟ್ರೇನಿಂಗೂ ಆಗಬೇಕು. ಕಷ್ಟ ಆಗೋದು ಅದೇ. ಒಂದು ಸಲ ನಮ್ಮ ತಂದೆ ಹಾಡಿದರೆ, ಇದನ್ನ ಎಲ್ಲೋ ಕೇಳಿದೀನಲ್ಲ ಅಂತ ಅನ್ನಿಸುತ್ತೆ. ಹಾಡಿಕೊಂಡು ಬಿಡ್ತೇನೆ. ಹೊಸದಂತೇನು ಅನ್ನಿಸೋದಿಲ್ಲ. ಇದನ್ನು ಎಕ್ಸ್‌ಪ್ಲೇನ್ ಮಾಡೋದು ಹೇಗೆ? ತೀರಾ ಹೊಸರಾಗ ಅಂತ ಹೇಳಿಕೊಟ್ರೂ ಆ ಸಂಗತಿಗಳನ್ನು ಕೇಳಿದ್ದೇನೆ ಅಂತ ಅನ್ನಿಸುತ್ತೆ. ಆ ನೆನಪಿಂದ ತಕ್ಕೊಂಡು ನಾವು ಹಾಡ್ತೇವೆ. ಶಿಷ್ಯರಿಗೆ ಅದು ಆಗಲ್ಲ. ಅವರು ಅದನ್ನು ಕಲೀಬೇಕಾಗ್ತದೆ, ಗುರುವೂ ಕಲಿಸ್ಬೇಕಾಗ್ತದೆ. ಮನೆಯಲ್ಲಿ ಎಷ್ಟೋ ಸಲ ನಾನು ಹಾಡ್ತಾ ಇದ್ದಾಗ ಅವರು ತೋಟದಲ್ಲೆಲ್ಲೋ ಬೀಡಿ ಸೇದುತ್ತಾ, ಸುತ್ತಾಡುತ್ತಾ ಇರುತ್ತಿದ್ದರು, ನನ್ನ ಹಾಡುವಿಕೆ ಎಲ್ಲಿಯಾದರೂ ಸರಿಯಾಗದೇ ಇದ್ದ ಪಕ್ಷದಲ್ಲಿ ಅಲ್ಲಿಂದಲೇ ಕೂಗಿ ಹೇಳ್ತಾ ಇದ್ರು ಏ ಐಸಾ ನಹೀ ಹೈ, ಐಸಾ ಕರೋ ಎಂದು. ಇದು ಜೊತೆಯಲ್ಲೇ ಇರುವ ಮಗನ ಸಂದರ್ಭದಲ್ಲಿ ಸಾಧ್ಯವಾಗುತ್ತದೆ.
ಗುರುವಿನಿಂದ ಕಲಿತ ಶಿಷ್ಯನಿಗೆ ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು ಎನ್ನುವ ತುರ್ತು ಮಗನಿಗಿಂತ ಹೆಚ್ಚಾಗಿರುತ್ತದೆ ಅಲ್ವಾ? ಇಲ್ಲ ಆ ತುರ್ತು ಮಗನಿಗೇ ಹೆಚ್ಚಾಗಿ ಇರುತ್ತದೆ. ಇದು ನಂದು, ನನ್ನ ಮನೆತನ, ನಡೀಲಿ ಎನ್ನುವ ಕಳಕಳಿ ಮಗನಿಗಿದ್ದಷ್ಟು ಶಿಷ್ಯನಿಗಿರಲ್ಲ. How does it matter to him? ಈಗ ನನಗಿರುವಷ್ಟು ಕಳಕಳಿ ತಂದೆಯವರ ಬೇರೆ ಶಿಷ್ಯರಿಗಿಲ್ಲ. ನನಗೆ ಇದು ನನ್ನದು, ನನ್ನ ಮನೆತನದಿಂದ ಬಂದಿದ್ದು ಅಂತ ಅನ್ನಿಸುತ್ತೆ. ಇದು ಹಾಳಾಗಿ ಹೋಗಬಾರದು ಅಂತ ನಾನು ಕಲಿಸ್ತೀನಿ. We are interested in the tradition more than the Shishyas, ಅಂತ ನಾನು ಅಂದ್ಕೊಂಡಿದ್ದೀನಿ. Not everybody. ಕೆಲವು ಸಂಗೀತಗಾರರ ಮಕ್ಕಳು ಕಲಿಯಲೇ ಇಲ್ಲ.
ಹೀಗೆ ಕಲಿಸಬೇಕು ಎನ್ನೋ ಮನೋಭಾವಕ್ಕೆ ನಿಮ್ಮ ವೃತ್ತಿಯೂ ಕಾರಣವೇ? ಇಲ್ಲ, ಬಹುಶಃ ಪ್ಯಾಶನ್ ಕಾರಣ ಅಂತ ಅನ್ನಿಸುತ್ತೆ. ಟೀಚರ್ ಆಗಿದ್ದರಿಂದ ಕಲಿಸುವ ಟೆಕ್ನಿಕ್ ಗೊತ್ತಿದ್ದು ನಾನು ಚೆನ್ನಾಗಿ ಕಲಿಸುತ್ತೇನೆ ಅಂತ ಅನ್ನಿಸುತ್ತೆ. ನನಗೆ ಸಂಗೀತ ಕಲಿಸೋದು ಹಣ ಮಾಡುವ ಒಂದು ವ್ಯವಹಾರವಲ್ಲ. ನನಗೆ ನನ್ನ ಅಧ್ಯಾಪನ ವೃತ್ತಿ ಕೂಡ ಎಷ್ಟೋ ಸಲ ಬೇಸರ ಅಂತ ಅನ್ನಿಸಿ ಅದನ್ನು ಬಿಟ್ಟು ಬಿಡಬೇಕು ಅಂತ ಅಂದುಕೊಂಡಿದ್ದೆ. ಆದರೆ, ನಮ್ಮ ತಂದೆ ಬೇಡ ಹಾಗೆ ಮಾಡಬೇಡ ಎಂದು ಹೇಳಿದ್ದರಿಂದ ನಾನು ಅದನ್ನು ಮುಂದುವರೆಸಿದೆ.
ನಿಮ್ಮ ಮೇಲೆ ಬೇರೆ ಸಂಗೀತ ಮತ್ತು ಸಂಗೀತಗಾರರಿಂದಲೂ ಏನಾದರೂ ತೆಗೆದುಕೊಳ್ಳಬೇಕು ಅನ್ನಿಸಿದೆಯಾ? ನಮ್ಮ ತಂದೆಯೇ ಒಂದು ದೊಡ್ಡ ಟ್ರೆಷರ್. ಹಾಗಾಗಿ ಬೇರೆ ಪ್ರಭಾವ ಅಥವಾ ಬೇರೆಯವರಿಂದ ತೆಗೆದುಕೊಳ್ಳಬೇಕಾದ ತುರ್ತು ನನಗೆ ಬರಲೇ ಇಲ್ಲ.
ನಿಮ್ಮ ತಂದೆಯವರು ತಮ್ಮ ಕ್ಷೇತ್ರದಲ್ಲಿ ತುಂಬಾ ಇನ್ನೋವೇಷನ್ಸ್ ಮಾಡಿದ್ದರು. ಅವರು ಅಷ್ಟೊಂದು ಇನ್ನೋವೇಷನ್ಸ್ ಮಾಡಿದ ಮೇಲೆ ನೀವು ಅದನ್ನು ಮುಂದಕ್ಕೆ ಹೇಗೆ ಒಯ್ಯುತ್ತೀರಿ? ಅವರ ಜೊತೆಗೆ ಇಷ್ಟು ದಿನ ಇದ್ದು ಅವರು ಮಾಡಿದ್ದನ್ನು ಕೇಳಿದ ಮೇಲೆ ನನಗೆ ಇನ್ನೋವೇಷನ್ಸ್ ಮಾಡಲು ಇನ್ನು ಆ ರಾಗದಲ್ಲಿ ಎಲ್ಲೆಲ್ಲಿ ಸ್ಪೇಸ್ ಇದೆ, ಎಲ್ಲಿ ಇನ್ನೋವೇಷನ್ಸ್ ಮಾಡಬಹುದು ಅಂತ ನನಗೆ ಕಾಣುತ್ತಾ ಇತ್ತು. ನನಗೊಂದು ಕಲ್ಪನೆ ಬರ‍್ತಾ ಇತ್ತು. ನನಗೆ ಇನ್ನೂ ಒಂದು ಉದ್ದೇಶವೂ ಇದೆ. ತಮ್ಮ ಘರಾನಕ್ಕೇ ವಿಶೇಷವಾಗಿ ಸೇರಿದ್ದು ಮತ್ತು ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕಾಗಿಲ್ಲ ಎಂದು ನಮ್ಮ ತಂದೆ ಭಾವಿಸಿದ್ದ ಮತ್ತು ಅದೇ ಕಾರಣಕ್ಕೆ ಸಾರ್ವಜನಿಕವಾಗಿ ಹಾಡದೇ ಇದ್ದ ಲಾಚಾರಿ ತೋಡಿ, ಮೇಘಾವಳಿ, ಲಚ್ಚಸಾಖ್ ಮುಂತಾದ ರಾಗಗಳನ್ನು ಮೆಹಫಿಲ್ಲುಗಳಲ್ಲಿ ಹಾಡಬೇಕು ಎನ್ನುವುದು ನನ್ನ ಗುರಿ.
* ಇದನ್ನೂ ಓದಿ : ನಾಕುತಂತಿಯ ಮಿಡಿತ: ಕ್ಯಾಸೆಟ್ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು
ಗಮನಿಸಿ: ‘ನಿಮ್ಮ ಟೈಮ್ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್ಬುಕ್ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ ಹಾಗೇ ನಿಮ್ಮ ಫೇಸ್ಬುಕ್ ಲಿಂಕ್. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com
Published On - 8:54 am, Mon, 2 May 22