ಭಾರ್ಗವಿ ನಾರಾಯಣ | Bhargavi Narayan : ಮಧ್ಯಾಹ್ನದ ವೇಳೆಯಾಗಿತ್ತು. ಕೋವಲಂ ತಲುಪಿದಾಗ. ಅದು ಅಂತಹ ಟೂರಿಸ್ಟ್ಗಳು ಬರುವ ಸೀಸನ್ ಆಗಿರಲಿಲ್ಲ. ನಾವು ಕನ್ಯಾಕುಮಾರಿಯಲ್ಲಿ ಸೂರ್ಯಾಸ್ತವನ್ನು ನೋಡಲಾಗಲಿಲ್ಲ. ಅಕ್ಟೋಬರ್ ಮಧ್ಯಾಹ್ನದ ವೇಳೆಯಾಗಿತ್ತು. ಕೋವಲಂ ತಲುಪಿದಾಗ, ತಿಂಗಳ ಮೋಡಕವಿದ ವಾತಾವರಣವಾಗಿತ್ತು. ಬೀಚ್‌ನಲ್ಲಿ ಓಡಾಡಿದ ಮೇಲೆ ಅಲ್ಲಿಂದ ತಿರುವನಂತಪುರದ ರೈಲ್ವೆ ಸ್ಟೇಷನ್‌ನಿಂದ ಬೆಂಗಳೂರಿಗೆ ಹೋಗುವುದೆಂದು ತೀರ್ಮಾನಿಸಿ, ಅಲ್ಲಿಗೆ ಹೇಗೆ ಹೋಗಬೇಕೆಂದು ಚರ್ಚಿಸುತ್ತಿದ್ದಾಗ, ನಾವು ಬಂದಿದ್ದ ಟ್ಯಾಕ್ಸಿಯ ಡ್ರೈವರ್ ಸಲಹೆ ಕೊಟ್ಟ – ತಾನೇ ತಿರುವನಂತಪುರಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹಿಂದುಮುಂದು ನೋಡದೆ ಒಪ್ಪಿಕೊಂಡೆವು ತಿರುವನಂತಪುರ ತಲುಪಿ ಅವನಿಗೆ ಟ್ಯಾಕ್ಸಿ ಬಾಡಿಗೆ ಕೊಟ್ಟ ಮೇಲೆ ನಮ್ಮಲ್ಲಿ ಉಳಿದಿದ್ದುದು ಕೇವಲ ಬೆಂಗಳೂರಿಗೆ ತಲುಪುವಷ್ಟು ರೈಲು ಚಾರ್ಜ್ – ಸ್ವಲ್ಪ ಚಿಲ್ಲರೆ ಹಣ, ಯಾರೂ ಹೆಚ್ಚಿನ ಹಣ ತಂದಿರಲಿಲ್ಲ. ಟ್ಯಾಕ್ಸಿ ಇಳಿದವರೇ ನೆಟ್ಟಗೆ ರೈಲ್ವೆ ಸ್ಟೇಷನ್‌ಗೆ ಹೋಗಿ ಬೆಂಗಳೂರಿನ ರೈಲು ಯಾವಾಗ ಹೊರಡುತ್ತದೆ ಎಂದು ಕೇಳಿದೆವು. ಬೆಳಗ್ಗೆ 11.30ಕ್ಕೆ ಒಂದು ರೈಲ್ ಇದೆ ಅಂದರು. ಆಗ ಸಂಜೆ ಆರರ ಸಮಯ.
ಭಾಗ – 3
“ಅಯ್ಯೋ ಬನ್ರೇ, ಬೆಂಗಳೂರಿಗೇನು ಬೇಕಾದಷ್ಟು ಬಸ್‌ಗಳು ಇರುತ್ತದೆ. ಅದರಲ್ಲಿ ಹೋಗೋಣ” ಅಂದೆ.
ಸರಿ, ಎಲ್ಲರೂ ಮೂರೂ ಸಂಜೆ ವೇಳೆಯಲ್ಲಿ ಬೆಂಗಳೂರು ಬಸ್‌ಗಾಗಿ ತಡಕಾಡಿದೆವು. ತಿರುವನಂತಪುರದ ಬಸ್ ಸ್ಟೇಷನ್‌ನಲ್ಲಿ ಬೆಂಗಳೂರಿಗೆ ಹೋಗುವ ಬಸ್ಸು ಆ ಹೊತ್ತಿನಲ್ಲಿ ಇರಲಿಲ್ಲ. ಒಬ್ಬೊಬ್ಬರದು ಒಂದೊಂದು ಸಲಹೆ. “ಸೇಲಂ ಪೋಯಿ ಅಂಗಿರಂದು ಬೆಂಗಳೂರಿಕ್ ಬಸ್ ಎಡಿತ್ತು ಪೊಗಲಾಂ” ಅಂತ ಒಬ್ಬ –
“ತಿರುಚ್ಚಿಕು ಪೋರ ಬಸ್ಸು ಇರಕ್ಕೆ, ಅಂಗೆ ಪೋಯಿಟ್ಟು ಬೆಂಗಳೂರು ಬಸ್ಲೆ ಪೋಗಲಾಮೆ” ಅಂತ ಇನ್ನೊಬ್ಬ.
ಹೀಗೆ ತಲೆಗೊಂದು ಸಲಹೆ. ಅವರಿಗೆ ಖುಷಿ – ಯಾರೋ ಬೆಪ್ಪುತಕ್ಕಡಿಗಳು. ದಿಟ್ಟ ಪಾರ್ವತಿಗಳ ಹಾಗೆ, ಹೀಗೆ ದಿಕ್ಕಾಪಾಲಾಗಿ ಓಡಾಡ್ತಿರೋದನ್ನು ನೋಡಿ, ಬೆಂಬಿಡದ ಭೂತಗಳ ಹಾಗೆ ಬೆನ್ನಟ್ಟಿ ಬಂದು ಸಲಹೆಗಳ ಸುರಿಮಳೆ ಕೊಡ್ತಾ ಇದ್ದದ್ದನ್ನ ನೋಡಿ ನನಗೂ ಗಾಬರಿ ಆಯ್ತು. ನಮ್ಮ ವಸೂ ಹೇಗೂ ಹೈದಾರಾಬಾದಿಗೆ ಹೋಗಬೇಕಾಗಿತ್ತು. ಅವಳೂ, ಅವಳ ಮಗ ತಿರುಚ್ಚಿ ಬಸ್ ಹತ್ತಿ ಅಲ್ಲಿಂದ ಹೈದಾರಾಬಾದಿಗೆ ಹೋಗೀನೀಂತ ಹೇಳಿ ಹೊರಟುಹೋದಳು.
ಉಳಿದವರು ನಾವು ಏನು ಮಾಡುವುದೆಂದು ಸ್ವಲ್ಪ ಹೊತ್ತು ಯೋಚಿಸಿದೆವು. ನನ್ನ ಸಲಹೆ – “ನಾವು ಈ ರೈಲ್ವೆ ಸ್ಟೇಷನ್‌ನಲ್ಲೇ ಕೂತು ರಾತ್ರಿ ಕಳೆದು ಬೆಳಗ್ಗೆ ಟ್ರೈನ್ ಹತ್ತಿಬಿಡೋಣ” ಅಂದೆ. ಅಲ್ಲೇ ಇದ್ದ ರೈಲ್ವೆ ನೌಕರ – “ಇಲ್ಲ, ರಾತ್ರಿ ಇಲ್ಲಿ ಉಳಕೊಳ್ಳೋದಕ್ಕೆ ಯಾರನ್ನೂ ಬಿಡೋಲ್ಲ – ಆದು ಕ್ಷೇಮಾನೂ ಅಲ್ಲ’’ ಅಂದ.
ಈಗ ಬಂತು ಪೇಚಾಟ. ಯಾವುದಾದರೂ ಹೋಟೆಲ್‌ನಲ್ಲಿ ರೂಮ್ ತೊಗೊಂಡು ಉಳಕೊಬಹುದಿತ್ತು. ಅಂಥಿಂಥ ಹೋಟೆಲ್‌ಗೆ ಬರೀ ಹೆಣ್ಣುಮಕ್ಕಳೇ ಹೋದರೆ ಆಗೊ ಫಜೀತಿ ಬಗ್ಗೆ ಈಗಾಗಲೇ ತಿಳಿದಿತ್ತು. ಒಳ್ಳೆ ಹೋಟೆಲ್‌ಗಳಿಗೆ ಹೋಗೋಷ್ಟು ಹಣ ನಮ್ಮಲ್ಲಿರಲಿಲ್ಲ. ಹಿಂದುಮುಂದು ನೋಡದೆ ಟ್ಯಾಕ್ಸಿ ಎಂಗೇಜ್ ಮಾಡಿಕೊಂಡು ಬಂದಿದ್ದರಿಂದ ಎಲ್ಲಾ ಖರ್ಚು ಆಗಿತ್ತು. ಅದೂ ಅಲ್ಲದೆ ಇದೊಂದು Unplanned trip ತಾನೆ?
ಬೆಳಗಿನ ಹತ್ತು ಗಂಟೆಯವರೆಗೂ ಏನು ಮಾಡೋದು ಅನ್ನೋದು ಯಕ್ಷಪ್ರಶ್ನೆ. ಹೊಟ್ಟೆಪಾಡು ಹೇಗೋ ಆಗೋದು, ಎರಡೆರಡು ಬಾಳೆಹಣ್ಣು ತಿಂದು ಪ್ರಾಣ ಹಿಡಕೊಂಡು ಇರಬಹುದು, ಆದರೆ ರಾತ್ರಿ ವೇಳೇನ ನೆಮ್ಮದಿಯಿಂದ, ಸುರಕ್ಷಿತವಾಗಿ ಕಳೆಯೋ ಬಗೆ?
ಮೊದಲ ಭಾಗ : Bhargavi Narayan Birthday : ‘ಯಾವ ರೈಲು ಹೇಗೆ ಹೋಗುವುದು ಗೊತ್ತಿಲ್ಲ, ನಾವೈದೂ ಹೆಣ್ಣುಮಕ್ಕಳು ಹತ್ತಿಬಿಟ್ಟೆವು!’
ನಮ್ಮ ಬೀಚಿಯವರ ತಿಮ್ಮನ ಹಾಗೆ (ತಿಂಮನ ತಲೆ ಓಡಿತು. ನಮ್ಮ ಯಜಮಾನಪ್ಪ ಟಿಟಿಕೆನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ದೇಶ ಎಲ್ಲಾ ಸುತ್ತಿದಷ್ಟೇ ಅಲ್ಲ, ಭಯಂಕರ ಒಳ್ಳೆ ಹೆಸರನ್ನೂ ಮಾಡಿಕೊಂಡಿದ್ದರು. ಪ್ರೆಸ್ಟೀಜ್ ಕುಕ್ಕರ್ ಅಂದರೆ BNN (B.N. Narayan) – BNN ಅಂದರೆ ಪ್ರೆಸ್ಟೀಜ್ ಕುಕ್ಕರ್ ಅನ್ನೋಷ್ಟು ಒಳ್ಳೆ ಹೆಸರು ಇತ್ತು ಅವರಿಗೆ. ಅವರ ಆ ಹೆಸರಿನಿಂದಾನೇ ಅವರಿರುವವರೆಗೂ ಕುಕ್ಕರ್ ಗ್ಯಾಸ್ಕೆಟ್ ಕವರ್ ಮೇಲೆ ಅವರ ಭಾವಚಿತ್ರ ಇರುತ್ತಾ ಇತ್ತು (ಅದು ಓರಿಜಿನಲ್ ಗ್ಯಾಸ್ಕೆಟ್ – ಡೂಪ್ಲಿಕೇಟ್ ಅಲ್ಲ ಅನ್ನೋ ಖಾತ್ರಿಗೆ).
ಅಂತಹ ಪಾಪ್ಯುಲಾರಿಟಿ ಅವರು ಉಪಯೋಗಿಸಿಕೊಂಡಿರದಿದ್ದರೂ ನಾನಾದ್ರೂ ಅದರ ಫಲಾನ ಅನುಭವಿಸೋಣ ಅಂತ ಯೋಚನೆ, ಯೋಚನೆ ಏನು ಬಂತು ಬೇರೇ ದಾರೀನೇ ಇರಲಿಲ್ಲವಲ್ಲಾ. ಲೀಲಾಗೆ ಹೇಳಿದೆ – “ಬಾ ಲೀಲಾ, ಇಲ್ಲಿ ಎಲ್ಲಾದ್ರೂ ಪ್ರೆಸ್ಟೀಜ್ ಡೀಲರ್ ಇರಬಹುದು – ಇಷ್ಟು ದೊಡ್ಡ ಊರು ಅಂದ್ಮಲೆ – ಹೋಗಿ ನೋಡೋಣ” ಅಂತ. ಅಲ್ಲಿ ಒಂದು ಎಂ.ಜಿ. ರಸ್ತೆ. ಹೊರಟಿವಿ ಉದ್ದಕ್ಕೂ ಎಲ್ಲಾದ್ರೂ ಪ್ರೆಸ್ಟೀಜ್ ಡೀಲರ್ ಅಂಗಡಿ ಇದ್ಯಾಂತ ನೋಡಿಕೋತಾ. ಅಲ್ಲೇ ಕಾಣಿಸ್ತು ದೊಡ್ಡ ಬೋರ್ಡ್ ಪ್ರೆಸ್ಟೀಜ್ ಪ್ರಷರ್ ಕುಕ್ಕರ್ ಅಂತ. ಒಳಕ್ಕೆ ಹೋದಿವಿ. ಅಲ್ಲಿ ಸಭ್ಯ ಮನುಷ್ಯ ಒಬ್ಬಾತ ಕೂತಿದ್ದರು. ಅವರಿಗೆ ಹೇಳಿದೆ – “ನಿಮಗೆ ಗೊತ್ತಿರಬಹುದು ನಮ್ಮ ಯಜಮಾನರು BNN ಅಂತ. ಟಿಟಿಕೆಯಲ್ಲಿದ್ದರು ; ಈಗತಾನೆ ರಿಟೈರ್ ಆಗಿದ್ದಾರೆ. ಪ್ರೆಸ್ಟೀಜ್ ಕುಕ್ಕರ್‌ಗೆ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದರು” ಅಂತ.
“ಅವರ ಪರಿಚಯ ನನಗಿಲ್ಲ. ಆದರೆ ಗೊತ್ತು. ಕೇಳಿದ್ದೇನೆ ಅವರ ಹೆಸರು” ಎಂದರು.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)
ಹಿಂದಿನ ಭಾಗ : Bhargavi Narayan Birthday : ‘ಕಡೇ ಸ್ಟೇಷನ್ನಿನಲ್ಲಿ ನಿಲ್ಲಿಸಿದ ರೈಲಿನಲ್ಲಿ ಹತ್ತಿ ಕುಳಿತಿದ್ದೆವು!’