Lakshmibai Enagi Death : ಲಕ್ಷ್ಮೀಬಾಯಿ ಏಣಗಿಯವರ ‘ಕುಂಕುಮ’ ಕೀರ್ತಿಯ ಸಾಹಸಗಾಥೆ

Enagi Balappa : ‘ಲಕ್ಷ್ಮೀಬಾಯಿ ಬಂದ ಮೇಲೆ ‘ಕಲಾವೈಭವ ನಾಟ್ಯಸಂಘ’ಕ್ಕೆ ದೊಡ್ಡ ಬಲ ಬಂತು. ಲಕ್ಷ್ಮೀಬಾಯಿ ನಾಯಕಿ ಪಾತ್ರಗಳಿಗೆ ಹೊಂದಿಕೊಳ್ಳಲು ನಾನು ಪುರುಷ ಪಾತ್ರಗಳ ಕಡೆಗೆ ಹೊರಳಿದೆ. ಆಕೆ ಓದಿದ್ದು ಕೇವಲ ಎರಡನೇ ಕ್ಲಾಸು.’ ಏಣಗಿ ಬಾಳಪ್ಪ

Lakshmibai Enagi Death : ಲಕ್ಷ್ಮೀಬಾಯಿ ಏಣಗಿಯವರ ‘ಕುಂಕುಮ’ ಕೀರ್ತಿಯ ಸಾಹಸಗಾಥೆ
ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ಪತಿ ಏಣಗಿ ಬಾಳಪ್ಪನವರೊಂದಿಗೆ
Follow us
ಶ್ರೀದೇವಿ ಕಳಸದ
|

Updated on:May 04, 2022 | 2:29 PM

Lakshmibai Enagi : ನನ್ನ ಹೆಂಡ್ತಿ ಲಕ್ಷ್ಮೀಬಾಯಿ 1948ರಲ್ಲಿ ನಮ್ಮ ಕಲಾವೈಭವ ನಾಟ್ಯ ಸಂಘಕ್ಕೆ ಬಂದ್ಲು. ಆಕಿ ತಂದೆ ವಿರೂಪಾಕ್ಷಪ್ಪ ಬಳ್ಳಾರಿ. ಕಂಪನಿ ಮ್ಯಾನೇಜ್‍ಮೆಂಟು ಮಾಡ್ತಿದ್ರು. ಮತ್ತ ಹಾಸ್ಯ ಪಾತ್ರನೂ ಮಾಡ್ತಿದ್ರು. ಹೇಮರಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮಳಾಗಿ, ಪಠಾಣಿ ಪಾಷಾ ನಾಟಕದಲ್ಲಿ ವೃಂದಾ, ಚಲೇಜಾವ್‍ದಲ್ಲಿ ಆಶಾ, ಪೌರಾಣಿಕ ನಾಟಕಗಳಾದ ಕುರುಕ್ಷೇತ್ರದಲ್ಲಿ ದ್ರೌಪದಿ, ರಾಮಾಯಣದಲ್ಲಿ ಸೀತೆ, ಕಿತ್ತೂರು ಚನ್ನಮ್ಮದಲ್ಲಿ ಚನ್ನಮ್ಮ, ಸಾಮಾಜಿಕ ನಾಟಕಗಳಾದ ಕಂದಗಲ್ಲ ಹನುಮಂತರಾಯರ ಬಡತನ ಭೂತದಲ್ಲಿ ನೀಲಾ, ಮಧುವರದಲ್ಲಿ ಆಶಾ, ಆರ್.ಡಿ. ಕಾಮತ್‍ರ ‘ದೇವರ ಮಗು’ ನಾಟಕದಲ್ಲಿ ಸಾವಿತ್ರಿ… ಹಿಂಗ ಲಕ್ಷ್ಮಿಬಾಯಿ ಮುಖ್ಯ ಪಾತ್ರ ಮಾಡಿದ್ಲು. ಮುಂದೆ ಏನಾತು ಕೇಳ್ರಿ; 1994ರಲ್ಲಿ ಧಾರವಾಡದಾಗ ಮ್ಯಾಳ ನಾಟಕ ತಂಡ ಹುಟ್ಟಿಕೊಂಡಿತು. ನನ್ನ ಕಂಪನಿ ಕುಂಕುಮ ನಾಟಕ ಆಡಬೇಕಂತ ತಾಲೀಮು ಸುರುವಾತು. ಲಕ್ಷ್ಮಿಬಾಯಿ ಅವತ್ತ ಮಾಡಿದ ಅನುರಾಧಾ ಪಾತ್ರವನ್ನ ಮತ್ತ ಮಾಡಿದ್ಲು. ಯಾಕಂದ್ರ ಆ ಪಾತ್ರಧಾರಿ ನಾಟಕದ ಹಿಂದಿನ ದಿವಸ ಪಾತ್ರ ಮಾಡೂದಿಲ್ಲ ಅಂತ ಗೊತ್ತಾತು. ಆಗ ಲಕ್ಷ್ಮಿಬಾಯಿ ತಾಲೀಮಿಗೆ ಕರೆಸಿದ್ವಿ. ತಾಲೀಮು ಸುರು ಆದೊಡನೆ ಮಾತು ಪಟಾಪಟಾಂತ ಬಂದ್ವು. ಪಾತ್ರ ಮಾಡಬೇಕಿದ್ದಾಕೀನೂ ನಾಟಕ ನೋಡಲಿಕ್ಕೆ ಬಂದಿದ್ಲು. ದಿ. ಏಣಗಿ ಬಾಳಪ್ಪ, ಹಿರಿಯ ರಂಗಕಲಾವಿದರು

ಲಕ್ಷ್ಮೀಬಾಯಿ ಓದಿದ್ದು ಎರಡನೇ ಕ್ಲಾಸು. ಗಂಭೀರ ಪಾತ್ರ ಮಾಡುವಾಕಿ. ಗೋರಾ ಕುಂಬಾರ ನಾಟಕದಲ್ಲಿ ಗೋರಾ ಕುಂಬಾರನ ಪಾತ್ರ ನಾ ಮಾಡಿದ್ರ, ಆಕಿ ಸಂತೂಬಾಯಿ ಪಾತ್ರ ಮಾಡ್ತಿದ್ಲು. ಸ್ತ್ರೀ ಪಾತ್ರಧಾರಿಯಾಗಿ ನಾನು ಮಾಡಿದ್ದ ಪಾತ್ರಗಳನ್ನೆಲ್ಲ ನಂತರ ಲಕ್ಷ್ಮಿಬಾಯಿ ಮಾಡಿದ್ಲು. ಕೋಲ ಶಾಂತಪ್ಪನವರ ಸ್ತ್ರೀ ನಾಟಕವನ್ನೇ ಹಳ್ಳಿ ಹುಡುಗಿಯಾಗಿ ಆಡ್ತಿದ್ವಿ. ಇದರಲ್ಲಿ ಕಮಲಾ ಪಾತ್ರವನ್ನ ಲಕ್ಷ್ಮಿಬಾಯಿ ಮಾಡ್ತಿದ್ಲು. ಇದು ಆಕಿ ಸ್ವಭಾವಕ್ಕ ವಿರುದ್ಧವಾಗಿತ್ತು. ಯಾಕಂದ್ರ ಬರೀ ಗಂಭೀರ ಪಾತ್ರ ಮಾಡ್ತಿದ್ಲು. ಆಕಿ ತಂದೆ ಮತ್ತು ನಾನು ಸಲಹೆ ಕೊಟ್ವಿ. ಅದು ಎಂಥಾ ಪಾತ್ರ ಅಂತೀರಿ. ಹಳ್ಳಿ ಹುಡುಗಿ ಕಾಲೇಜಿಗೆ ಹೋಗಿ ಬದಲಾಗಿರ್ತಾಳ. ತಂದೆಯ ಸೋದರಳಿಯ ಹುಂಬ ಹುಡುಗ. ಆಕಿಗೆ ಮಾವ. ಆದ್ರ ಆಕಿ ಕಾಲೇಜಿನ ಸಹಪಾಠಿಯನ್ನ ಪ್ರೀತಿಸ್ತಾಳ. ಹುಂಬ ಮಾವನ ಜೊತೆ ಮದುವಿಯಾದ್ರೂ ಸಹಪಾಠಿಯಿಂದ ದೂರ ಆಗಿರೂದಿಲ್ಲ. ಈ ಪಾತ್ರ ಮಾಡುದಿಲ್ಲ ಅಂತ ಕುಂತಿದ್ಲು. ಕಡೀಕ ಆಕಿ ತಮ್ಮ ಕೃಷ್ಣಚಂದ್ರ ಬಳ್ಳಾರಿ ಸಹಪಾಠಿ ಪಾತ್ರ ಮಾಡಿದ ಮ್ಯಾಲ ಈಕಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ಲು. ಭಾಳ ಯಶಸ್ವಿಯಾದ ನಾಟಕವಿದು. ತಾಯಿ ಕರುಳು ನಾಟಕದಲ್ಲಿ ಎಂಬತ್ತರ ಹರೆಯದ ಗೌರಮ್ಮನ ಪಾತ್ರ ನೋಡಿದವರು, ಹಳ್ಳಿ ಹುಡುಗಿಯಲ್ಲಿ ಕಮಲಾ ಪಾತ್ರವನ್ನು ನೋಡಿ ಕೆಲವರು ಇವರಲ್ಲ ಇವರಲ್ಲ ಅಂತ ತಮ್ಮ ತಮ್ಮಲ್ಲೇ ಮಾತಾಡಿಕೊಳ್ತಿದ್ರು.

‘ಕುಂಕುಮ’ ನಾಟಕದ ಹಿಂದಿನ ಸಾಹಸಗಾಥೆ 1940ರ ನವೆಂಬರ್ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಹತ್ತಿರದ ಕಟಕೋಳದಲ್ಲಿ ನಾಲ್ಕು ಜನರ ಪಾಲುದಾರಿಕೆಯಲ್ಲಿ ‘ವೈಭವಶಾಲಿ’ ತಲೆಯೆತ್ತಿತು. ಡಿಸೆಂಬರ್ ತಿಂಗಳಲ್ಲಿ ಗೊಡಚಿ ಜಾತ್ರೆ ಇತ್ತು. ಜಾತ್ರೆ ಮುಂದಿಟ್ಟುಕೊಂಡು ಕಂಪನಿ ಮಾಡುವುದು ವ್ಯಾವಹಾರಿಕ ಜಾಣ್ಮೆಯಾಗಿತ್ತು. ಕೈಯಲ್ಲಿದ್ದ ಬಂಡವಾಳವನ್ನೆಲ್ಲ ರಂಗ ಸಲಕರಣೆಗಳಿಗೆ ತೊಡಗಿಸಿ ಖಾಲಿಯಾಗಿದ್ದಾಗ, ಜಾತ್ರೆಯಿಂದ ಬರುವ ನಿಶ್ಚಿತ ಆದಾಯ ಕಂಪನಿಯ ಸಂಚಾರಕ್ಕೆ ಅನುವು ಮಾಡುತ್ತಿತ್ತು. ಕಟಕೋಳದಲ್ಲಿ ‘ಪಠಾಣಿ ಪಾಶಾ’ ಆಡಿ ಗೊಡಚಿಗೆ ಹೋದೆವು. ಜಾತ್ರೆಯಲ್ಲಿ ಚೆನ್ನಾಗಿ ಲಾಭವಾಯಿತು. ಅಲ್ಲಿಂದ ಬಾಗಲಕೋಟೆಗೆ ಹೊರಟೆವು.

ಒಂದು ಕಂಪನಿಯ ಯಶಸ್ಸು ‘ಕಲಾವಿದರ ಸಾಮೂಹಿಕ ಶ್ರಮದ ಫಲ’ ಎನ್ನುವುದು ಮರೆಯಬಾರದು. ಮರೆತರೆ ಕಂಪನಿಯ ಆಯುಷ್ಯ ಬೇಗನೆ ಕುಸಿಯುತ್ತದೆನ್ನುವುದು ಬೇಗನೇ ಅನುಭವಕ್ಕೆ ಬಂದಿತು. ಮೂರೇ ತಿಂಗಳಲ್ಲಿ ಪಾಲುದಾರರೊಳಗೆ ಮತಭೇದ ಹುಟ್ಟಿಕೊಂಡಿತು. ಹಾವೇರಿ ಶಾಂತಪ್ಪ, ಅಮ್ಮಣಗಿ ರಾವಸಾಹೇಬರು ಕಂಪನಿ ಬಿಟ್ಟರು. ಅಲ್ಲಿಂದ ಇನಾಮದಾರ ಮತ್ತು ನಾನು ಇಬ್ಬರೇ ವೈಭವಶಾಲಿಗೆ ಪಾಲುಗಾರರಾಗಿ ಉಳಿದೆವು. ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ಧರ್ಮಪತ್ನಿ, ಜಹಗೀರದಾರ, ವಿಜಾಪುರ ಜಿಲ್ಲೆಯ ಬರಗಾಲ, ಸಿಂಧೂರ ಲಕ್ಷ್ಮಣ – ಇವು ಅವರು ಬರೆದ ನಾಟಕಗಳು. ಇನಾಮದಾರ ತಮ್ಮ ವೆಂಕಣ್ಣ ನಾಯಕನಾದರೆ, ನನ್ನದು ನಾಯಕಿ ಪಾತ್ರ. ನಮ್ಮೊಡನೆ ರಂಗಪ್ಪ ನಾಗರಾಳ, ಬಸವರಾಜು ಎಮ್ಮಿ, ಶಿರಸಿ ಪೇಂಟರ, ಕಲಾದಗಿ ಕೃಷ್ಣರಾವ್, ಮಹಾಲಿಂಗಪ್ಪ ಜಕ್ಕಲಿ ಮುಂತಾದ ಪ್ರತಿಭಾವಂತರಿದ್ದರು. ಸಾಹಿತ್ಯ, ಸಂಗೀತ ಅಭಿನಯಗಳ ಸಮನ್ವಯದಿಂದ ‘ವೈಭವಶಾಲಿ’ಯು ಸಂಘದ ಅನ್ವರ್ಥಕ ಹೆಸರೆನಿಸಿತು.

1946ರ ವೇಳೆಗೆ ಕಂಪನಿಯಲ್ಲಿ ಮತ್ತೆ ಬಿರುಕು ಕಾಣಿಸಿತು. ‘ನಾನು ನಾಯಕ ನಟ, ನಮ್ಮಣ್ಣ ನಾಟಕಕಾರ, ನಮ್ಮಿಂದಲೇ ಈ ಕಂಪನಿ’ ಎಂಬುದು ವೆಂಕಣ್ಣನ ಭಾವನೆ ಯಾಯಿತು. ಅದು ಅಣ್ಣನ ಮನಸ್ಸನ್ನು ಕಹಿ ಮಾಡಿತು. ನಾಟಕಕಾರರು ತಮ್ಮನ ಪರವಾಗಿ ನಿಂತಾಗ ವೈಭವಶಾಲಿ ಎರಡನೆಯ ಸಲ ಹೋಳಾಯಿತು. ತಾಳಿಕೋಟೆ ಮುಕ್ಕಾಮಿನಲ್ಲಿ ಕಂಪನಿಯ ಸಾಮಾನುಗಳೆಲ್ಲದರಲ್ಲಿ ಅರ್ಧ ಪಾಲಾಯಿತು. ಇನಾಮದಾರರ ಆ ವರ್ತನೆ ನನ್ನ ಸ್ವಾಭಿಮಾನಕ್ಕೆ ಸವಾಲಾಗಿತ್ತು. ಬೇರೆಯಾದ ದಿನವೇ ಅವರೆದುರಿಗೆ ನಾಟಕವನ್ನಾಡುವ ಛಲ ತೊಟ್ಟೆ. ಅದಕ್ಕಾಗಿ ಕಡಿಮೆ ಪಾತ್ರಗಳಿರುವ ಮತ್ತು ಒಂದೇ ಪಾತ್ರ ಪ್ರಮುಖವಾಗಿರುವ ನಾಟಕ ಆಯ್ಕೆ ಮಾಡಿದೆ. ಅನಂತರ ನಿಡಗುಂದಿಗೆ ಮುಕ್ಕಾಮು ಬದಲಿಸಿ ವಿಠ್ಠಲಸಾ ಖಟವಟೆ ಅವರನ್ನು ಕತೆತಂದು ಆರ್ಥಿಕ ಸ್ಥಿತಿ ಸುಧಾರಿಸಿಕೊಂಡೆ.

ಅದುವರೆಗೆ ಇನ್ನೊಬ್ಬರ ಸಲಹೆ-ಸೂಚನೆಗಳನ್ನು ಕೇಳಿ ಹೆಜ್ಜೆ ಇಡಬೇಕಾಗಿದ್ದ ನನಗೆ, ಸ್ವತಂತ್ರ ವಿಚಾರಕ್ಕೆ, ಪ್ರಯತ್ನಕ್ಕೆ, ಪ್ರಯೋಗಶೀಲತೆಗೆ ಆಸ್ಪದ ದೊರೆಯಿತು. ಅದರ ಫಲವಾಗಿ ‘ಕಲಾವೈಭವ ನಾಟ್ಯ ಸಂಘ, ಬೆಳಗಾವಿ (ಕರ್ನಾಟಕ)’ ಎಂಬ ಹೊಸ ಹೆಸರಿನ, ಸ್ವತಂತ್ರ ಒಡೆತನದ ಕಂಪನಿಯನ್ನು 1947ರಲ್ಲಿ ಆರಂಭಿಸಿದೆ. ಜಿ.ಜಿ. ಹೆಗಡೆಯವರ ‘ಹರಿಶ್ಚಂದ್ರ’ವು ಕಂಪನಿಯ ಮೊದಲ ಕೊಡುಗೆಯಾಯಿತು. ಹರಿಶ್ಚಂದ್ರನಾಗಿ ಡಿ. ದುರ್ಗಾದಾಸ, ತಾರಾಮತಿಯಾಗಿ ನಾನು ಅಭಿನಯಿಸಿ, ನಾಟಕದ ಯಶಸ್ಸಿಗೆ ಶ್ರಮಿಸಿದೆವು. 1948ರಲ್ಲಿ ಬೈಲಹೊಂಗಲದಲ್ಲಿದ್ದಾಗ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಕುಟುಂಬದವರು ಕಂಪನಿಗೆ ಬಂದರು. ವಿರೂಪಾಕ್ಷಪ್ಪ ಕಲಾವಿದರಲ್ಲದೆ ದಕ್ಷ ಮ್ಯಾನೇಜರ್ ಎನಿಸಿದ್ದರು. ಅವರ ಮಗಳು ಲಕ್ಷ್ಮೀಬಾಯಿ, ಮಗ ಕೃಷ್ಣಚಂದ್ರ – ಉತ್ತಮ ಕಲಾವಿದರಾಗಿದ್ದರು. ಅವರಿಂದ ಕಲಾವೈಭವಕ್ಕೆ ದೊಡ್ಡ ಬಲ ಬಂತು. ಲಕ್ಷ್ಮೀಬಾಯಿ ನಾಯಕಿ ಪಾತ್ರಗಳಿಗೆ ಹೊಂದಿಕೊಳ್ಳಲು ನಾನು ಪುರುಷ ಪಾತ್ರಗಳ ಕಡೆಗೆ ಹೊರಳಿದೆ.

ಕಲಾವೈಭವ ಲಕ್ಷ್ಮೇಶ್ವರದಲ್ಲಿದ್ದಾಗ ಮಹಾಂತೇಶ ಶಾಸ್ತ್ರೀಗಳು ‘ವಧು ವರ’ ನಾಟಕ ತೆಗೆದುಕೊಂಡು ಬಂದರು. ಅವರ ನಿರ್ದೇಶನದಲ್ಲಿ ನಾಟಕ ಕೂಡಿಸಿದೆವು. ಅದು ತುಂಬ ಯಶಸ್ಸಾಗಿ ಕಂಪನಿಗೆ ಆದಾಯ ತಂದಿತು. ಅದಕ್ಕೆ ಪಂಡಿತ ಸಿದ್ಧರಾಮ ಜಂಬಲದಿನ್ನಿ ಅವರ ಸಂಗೀತವಿತ್ತು. ಮುಂದೆ ಸೊಲ್ಲಾಪುರದಲ್ಲಿ ಮುಕ್ಕಾಮು ಮಾಡಿದೆವು. ಆಗ ನಿರಾಗಸ ಥಿಯೇಟರದಲ್ಲಿ ಛೋಟಾ ಗಂಧರ್ವರ ನಾಟಕಗಳು ನಡೆಯುತ್ತಿದ್ದವು. ನಾವೂ ಅದೇ ರಂಗಮಂದಿರ ಬಾಡಿಗೆಗೆ ಹಿಡಿದೆವು. ಮೂರು ದಿನ ಮರಾಠಿ ನಾಟಕಗಳು, ಮೂರು ದಿನ ಕನ್ನಡ ನಾಟಕಗಳು ನಡೆಯುತ್ತಿದ್ದವು. ಕನ್ನಡ ನಾಟಕಗಳನ್ನು ಅವರು ನೋಡುತ್ತಿದ್ದರು. ಅವರ ನಾಟಕಗಳನ್ನು ನಾವು ನೋಡುತ್ತಿದ್ದೆವು. ನಾನು ನೋಡಿದ, ನಾಗೇಶ್ ಜೋಶಿ ಬರೆದ ಫೂಲ್ ಪಾಖರು, ಮೈಲಾಚಾ ದಗಡ, ದೇವ ಮಾಣೂಸ ನಾಟಕಗಳು ಒಂದೇ ದೃಶ್ಯದಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಇಂಥ ತಂತ್ರವು ಕನ್ನಡ ಕಂಪನಿ ನಾಟಕಗಳಲ್ಲಿರಲಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಬೆಳೆಯುತ್ತ ಹೋಗುವ ನಾಟಕಕ್ಕೆ ರಂಗಪರದೆಗಳು, ಇನ್ನಿತರ ಪರಿಕರಗಳು ಹೆಚ್ಚಿಗೆ ಬೇಕಾಗುತ್ತವೆ. ಪ್ರದರ್ಶನಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಒಮ್ಮೊಮ್ಮೆ ಕಥೆ ವಿಷಯಾಂತರವಾಗಿ ಆಭಾಸವಾಗುವುದುಂಟು. ಇವನ್ನೆಲ್ಲ ತಡೆಗಟ್ಟುವ ಉಪಾಯವಾಗಿ `ಏಕದೃಶ್ಯ ತಂತ್ರ’ವು ಅನುಕರಣೀಯವೆನಿಸಿತು. ಅಂಥ ತಂತ್ರವನ್ನಳವಡಿಸಿಕೊಂಡು ಹೊಸ ನಾಟಕವನ್ನೊಂದು ಬರೆದುಕೊಡಲು ಮಹಾಂತೇಶ ಶಾಸ್ತ್ರಿಗಳಿಗೆ ಕೇಳಿಕೊಂಡೆ.

ಇದನ್ನೂ ಓದಿ : Theatre Stories : ಪಿತೃಪ್ರಧಾನದ ಕಪಿಮುಷ್ಟಿಯೊಳಗೂ ಇವರು ‘ಆತ್ಮಜ್ಯೋತಿ’ ಬೆಳಗಿಸಿಕೊಂಡೇ ಬದುಕಿಬಿಡುತ್ತಾರಲ್ಲಾ!

ಒಂದೇ ದೃಶ್ಯದ ನಾಟಕ ಬರೆಯುವುದು ತುಂಬಾ ಜವಾಬ್ದಾರಿಯ ಕೆಲಸವಾಗಿತ್ತು. ಪಾತ್ರಗಳ ಆಗಮನ – ನಿರ್ಗಮನ ಸಕಾರಣವಾಗಿರಬೇಕು. ವಸ್ತುವಿನ ಔಚಿತ್ಯ ಕೆಡದಂತೆ ಘಟನೆಗಳು ನಡೆದುಕೊಂಡು ಹೋಗಬೇಕು. ಜೊತೆಗೆ ಪ್ರೇಕ್ಷಕರಿಗೂ ನಾಟಕದ ಬೆಳವಣಿಗೆಗೂ ಆಡಚಣೆಯಾಗಬಾರದು. ಈ ದಿಶೆಯಲ್ಲಿ ನಾನು ಮತ್ತು ಶಾಸ್ತ್ರಿಗಳು ಚರ್ಚಿಸುವಾಗ ಶ್ರೀಪಾದರಾವ್ ಗರುಡ, ಶಿರಸಿ ಪೇಂಟರ್, ಪಂಚಯ್ಯಸ್ವಾಮಿ ಮೆಳ್ಳಿಗೇರಿ ಭಾಗವಹಿಸಿ ಉಪಯುಕ್ತ ಸಲಹೆಗಳನ್ನು ಕೊಟ್ಟರು. ಮಹಾಂತೇಶ ಶಾಸ್ತ್ರಿಗಳು ವಿಧವಾ ಸಮಸ್ಯೆ ಎತ್ತಿಕೊಂಡು ‘ಕುಂಕುಮ’ ನಾಟಕದ ಪ್ಲಾಟ್ ಸಿದ್ಧಪಡಿಸಿದರು. ಉತ್ತರ ಕನ್ನಡದ ಸಿದ್ಧಾಪುರ ಮುಕ್ಕಾಮಿನಲ್ಲಿ ನಾಟಕ ಆಡಿದೆವು. ಅದು 1950. ಅದೇ ವೇಳೆಗೆ ಮಂಗಳೂರು ಮತ್ತು ಕಾರವಾರ ಭಾಗಗಳಲ್ಲಿ ವಿಧವಾ ವಿವಾಹ ಕುರಿತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಆರಂಭವಾಗಿದ್ದವು. ಹೀಗಾಗಿ `ಕುಂಕುಮ’ ನಾಟಕದ ಪ್ರಾರಂಭೋತ್ಸವ ವನ್ನು ಆ ಭಾಗದ ಸಿದ್ಧಾಪುರದಲ್ಲಿಯೇ ಹಮ್ಮಿಕೊಂಡೆವು. ನಾಟಕಾಲಂಕಾರ ಗರುಡ ಸದಾಶಿವರಾಯರಿಂದ ನಾಟಕದ ಉದ್ಘಾಟನೆಯಾಯಿತು. ನಾಟಕಕಾರರಿಗೆ ಕೊಡ ಬೇಕಾಗಿದ್ದ ಗೌರವಧನವೆಲ್ಲ ಮೊದಲ ದಿನದ ಕಲೆಕ್ಷನ್ನಿನಲ್ಲಿ ಕೂಡಿತು. ಒಂದೇ ದೃಶ್ಯದಲ್ಲಿ ಪೂರ್ಣಾವಧಿ ನಾಟಕ ಬಂದಿದ್ದು ಕನ್ನಡ ರಂಗಭೂಮಿಯಲ್ಲಿ ಆಗ ಅದೇ ಮೊದಲು. ಇದು ನನ್ನ ಮೊದಲನೇ ಸಾಹಸ.

ನಾಟಕದ ನಾಯಕ ಅಶ್ವಿನಿ, ಅತ್ತೆಯ ಮಗಳು ವಿಧವೆ ಅನುರಾಧಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಆಕೆಯ ಹಣೆಗೆ ‘ಕುಂಕುಮ’ ಹಚ್ಚುವುದು ನಾಟಕದ ಪ್ರಧಾನ ಕ್ರಿಯೆ. ಅಶ್ವಿನಿಯ ವರ್ತನೆಯಿಂದ ಆತನ ಕುಟುಂಬದಲ್ಲಿ ಕೋಲಾಹಲವುಂಟಾಗುತ್ತದೆ. ಹೆತ್ತವರು ಮನೆಯಿಂದ ಹೊರ ಹಾಕಲು ನಿರ್ಧರಿಸುತ್ತಾರೆ. ಅಶ್ವಿನಿ ಸ್ವಾವಲಂಬಿಯಾಗಿ ಬದುಕಲು ನೆಲೆ ಕಲ್ಪಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ವಿಧವಾ ವಿವಾಹಕ್ಕೆ ವಿರೋಧಿಯಾಗಿದ್ದ ಯಜಮಾನಿಯ ಮಗಳು (ಆಕೆಯೂ ವಿಧವೆ) ಅನೈತಿಕ ಸಂಬಂಧದಿಂದ ಬಸುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅದರಿಂದ ಯಜಮಾನಿಗೂ ಪರಿಸ್ಥಿತಿಯ ಅರಿವಾಗಿ ಪಶ್ಚಾತ್ತಾಪವಾಗುತ್ತದೆ. ವಿಧವಾ ವಿವಾಹಕ್ಕೆ ಅನುಕೂಲ ಕಲ್ಪಿಸುವುದರಲ್ಲಿಯೇ ಕುಟುಂಬದ ಸ್ವಾಸ್ಥ್ಯ ಇದೆ, ಸಮಾಜದ ಕ್ಷೇಮವಿದೆ – ಎಂಬುದನ್ನು ಈ ನಾಟಕ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.

ನಾನು ಅಶ್ವಿನಿಯಾಗಿ, ಲಕ್ಷ್ಮೀಬಾಯಿ ಅನುರಾಧೆಯಾಗಿ, ಗುರುಸಿದ್ಧಯ್ಯನವರು ಖಳನಾಯಕ, ಶ್ರೀಪಾದರಾವ್ ಗರುಡ, ಶಿರಸಿ ಪೇಂಟರ್ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಪಾತ್ರಗಳಿಗೆಲ್ಲ ವಿಶಿಷ್ಟವೆಂದು ನಕ್ಷತ್ರಗಳ ಹೆಸರುಗಳನ್ನೇ ಕೊಡಲಾಗಿತ್ತು. ಕಥೆ ಮತ್ತು ಪ್ರದರ್ಶನ ತಂತ್ರದಿಂದಾಗಿ ‘ಕುಂಕುಮ’ವು ಕನ್ನಡ ರಂಗಭೂಮಿಗೆ ವಿನೂತನವೆನಿಸಿತು. ಅಂಥ ಪ್ರಯೋಗಶೀಲತೆ ಉಳಿದ ಕಂಪನಿಗಳು ಅನುಸರಿಸಿದ್ದರೆ ಕನ್ನಡ ರಂಗಭೂಮಿಗೆ ಹೊಸ ತಿರುವು ಒದಗುತ್ತಿತ್ತು. ಕಂಪನಿ ನಾಟಕಗಳಿಗೆ ಆರೋಪಿಸಲಾಗುವ ಅತಿರೇಕಗಳು ಕಡಿಮೆಯಾಗಬಹುದಿತ್ತು. ಉತ್ತರ ಕನ್ನಡದಿಂದ ಹುಬ್ಬಳ್ಳಿತನಕ ಈ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಗೊಡಚಿ ವೀರಭದ್ರದೇವರ ಜಾತ್ರೆಯಲ್ಲಿ ಜನರ ಒತ್ತಾಯದ ಮೇರೆಗೆ ದಿನಕ್ಕೆ ಮೂರು ಸಲ ಆಡಬೇಕಾದ ಸ್ಥಿತಿ ಒದಗಿತು. ‘ಕುಂಕುಮ’ವು ಕೀರ್ತಿಯ ಜೊತೆಗೆ ಉತ್ಪನ್ನವನ್ನು ಚೆನ್ನಾಗಿ ಕೊಟ್ಟಿತು.

(ಸೌಜನ್ಯ : ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಲೇ: ಗಣೇಶ ಅಮಿನಗಡ)

ಇದನ್ನೂ ಓದಿ : Lakshmibai Enagi death : ಹಿರಿಯ ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ

Published On - 2:26 pm, Wed, 4 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ