Dharwad: ಮಾನವ ಜಾತಿ ತಾನೊಂದೆ ವಲಂ; ತರಗತಿಯ ನನ್ನ ಪಾಠಗಳ ಜಾತ್ಯಾತೀತ ಪೂಜೆಗೆ ಮೂವತ್ತನಾಲ್ಕು ವರ್ಷ

Sukanya Maruti : ಆಗ ಕಮಿಷನರ್​ಗಳೇ ಹೇಳುತ್ತಿದ್ದರು, "ಧಾರವಾಡದಲ್ಲಿ ಹಬ್ಬಗಳ ಸಂದರ್ಭದಲ್ಲಿ ಶಾಂತಿಸಭೆ ಕರೆಯುವ ಅವಶ್ಯಕತೆಯೇ ಇಲ್ಲ. ಇದು ಔಪಚಾರಿಕ ಸಭೆ. ಇಲ್ಲಿ ಯಾವಾಗಲೂ ಸೌಹಾರ್ದತೆ ನೆಲೆಸಿದೆ. ಹಾಗಾಗಿ ನಮಗೆ ಯಾವುದೇ ಟೆನ್ಶನ್ ಇರುವುದಿಲ್ಲ"ಎಂದು.

Dharwad: ಮಾನವ ಜಾತಿ ತಾನೊಂದೆ ವಲಂ; ತರಗತಿಯ ನನ್ನ ಪಾಠಗಳ ಜಾತ್ಯಾತೀತ ಪೂಜೆಗೆ ಮೂವತ್ತನಾಲ್ಕು ವರ್ಷ
ಡಾ. ಸುಕನ್ಯಾ ಮಾರುತಿ
Follow us
ಶ್ರೀದೇವಿ ಕಳಸದ
|

Updated on:Apr 13, 2022 | 10:26 AM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಧಾರವಾಡದಲ್ಲಿ ಪ್ರಾಧ್ಯಾಪಕರಾಗಿದ್ದ ಕವಿ, ಲೇಖಕಿ ಡಾ. ಸುಕನ್ಯಾ ಮಾರುತಿ ಬರಹ.

ನನ್ನ ಧಾರವಾಡ ಶಾಂತಿ ಸೌಹಾರ್ದದ ತವರಾಗಿತ್ತು. ಉಳಿವಿ ಬಸಪ್ಪನ ಜಾತ್ರೆ, ಮುರುಘಾಮಠದ ಜಾತ್ರೆ, ನುಗ್ಗಿಕೆರಿ ಹನುಮಂತಪ್ಪನ ಶನಿವಾರಗಳು, ಎಲ್ಲ ಹಬ್ಬಗಳು ಎಲ್ಲಾ ಕೋಮಿನ (ಈ ಶಬ್ದ ಈಗ ಬೇರೆ ಅರ್ಥ ಪಡೆದುಕೊಂಡಿದೆ) ಯುವಕ ಯುವತಿಯರ ಸಂಭ್ರಮ ಸಡಗರಗಳಿಗೆ ಸಾಕ್ಷಿಗಳಾಗಿದ್ದವು. ರಂಜಾನ್ ತಿಂಗಳಿನ ಇಫ್ತಿಯಾರ್ ಕೂಟಗಳಲ್ಲಿ ಎಲ್ಲಾ ಕೋಮಿನ ಗಣ್ಯರಿಗೆ ಆಹ್ವಾನವಿರುತ್ತಿತ್ತು. ಹಬ್ಬದ ದಿನ ಮುಸ್ಲಿಮರ ಮನೆಗಳಿಗೆ ಸುರಕುರ್ಮ ತಿನ್ನಲು, ಊಟಮಾಡಲು ಎಲ್ಲರೂ ಕಾತರಿಸುವುದಿತ್ತು. ಎಷ್ಟೋ ಅಂಜುಮನ್ ಕಾಲೇಜುಗಳ ಈದ್ಮಿಲಾದ್ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಮಹಮ್ಮದ್ ಪೈಗಂಬರರ ನಿಜವಾದ ಸಂದೇಶಗಳ ಸಾರವನ್ನು ಭಾಷಣದಲ್ಲಿ ವಿವರಿಸಿದಾಗ, ಅದನ್ನು ತುಂಬುಮನದಿಂದ ಸ್ವೀಕರಿಸಿ, ನಂತರ ಮತ್ತೆ ಮತ್ತೆ ಆಹ್ವಾನಿಸಿದ್ದಾರೆ.

ಮೊಹರಂ ಮತ್ತು ಗಣೇಶನ ಹಬ್ಬಗಳಲ್ಲಿ ಪೊಲೀಸ್ ಕಮಿಶನರ್​ಗಳು ಕರೆಯುವ ಶಾಂತಿ ಸಮಿತಿ ಸಭೆಗಳಲ್ಲಿ ಎಲ್ಲಕೋಮಿನವರು ಹಾಜರಿರುತ್ತಿದ್ದೆವು. ಆಗ ಕಮಿಷನರ್​ಗಳೇ ಹೇಳುತ್ತಿದ್ದರು “ಧಾರವಾಡದಲ್ಲಿ ಈ ಶಾಂತಿ ಸಭೆ ಕರೆಯುವ ಅವಶ್ಯಕತೆಯೇ ಇಲ್ಲ. ಇದು ಬರೀ ಔಪಚಾರಿಕ ಸಭೆ. ನಮಗೆ ಇಲ್ಲಿನ ಹಬ್ಬಗಳು ಯಾವಾಗಲೂ ಶಾಂತಿ ಸೌಹಾರ್ದತೆಗಳಿಂದಲೇ ಕೂಡಿವೆ. ಹಾಗಾಗಿ ನಮಗೆ ಯಾವುದೇ ಟೆನ್ಶನ್ ಇರುವುದಿಲ್ಲ”ಎಂದು. ಶಾಂತಿ ಸಭೆ ಮುಗಿದ ಮೇಲೆ ಪರಸ್ಪರ ಹಬ್ಬದ ಶುಭಾಶಯ ಹೇಳಿ ಆಹ್ವಾನಿಸುವುದಿತ್ತು. ಶಾಲೆ ಕಾಲೇಜುಗಳ ಎಲ್ಲಾ ಚಟುವಟಿಕೆಗಳಲ್ಲೂ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಒಂದಾಗಿ ಭಾಗವಹಿಸುವುದು, ಮಾರ್ಗದರ್ಶನ ಮಾಡುವುದು ಇತ್ತು.

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ನಿಮ್ಮ ಜೈಶ್ರೀರಾಮ ಘೋಷಣೆಯ ಬರಿ ಹರಣ ಹರಣ ಹರಣ

ಊರಿನ ಎಲ್ಲಾ ಜಾತ್ರೆಗಳಲ್ಲಿ ಎಲ್ಲಾ ಕೋಮಿನ ವ್ಯಾಪಾರಸ್ಥರು (ವ್ಯಾಪಾರಸ್ಥರೆಲ್ಲಾ ಒಂದೇ) ಅಂಗಡಿ ಹಾಕುತ್ತಿದ್ದರು. ಗ್ರಾಹಕರು ಅವರ ಜಾತಿ ನೋಡಿ ಖರೀದಿ ಮಾಡುತ್ತಿರಲಿಲ್ಲ. ಪರಸ್ಪರ ಮನುಷ್ಯರು ಮನುಷ್ಯರಾಗಿ ವ್ಯವಹರಿಸುತ್ತಿದ್ದೆವು. ಜಾತಿಗಳಾಗಿ ಅಲ್ಲ. ಎಲ್ಲರಿಗೂ ಯಾವ ಭೇದವೂ ಇಲ್ಲದೆ ಸ್ನೇಹಿತರು, ಆಪ್ತರು, ಹಿತಚಿಂತಕರು ಈಗಲೂ ಇದ್ದಾರೆ. ಉಸ್ತಾದ್ ಬಾಲೇಖಾನರ ಕುಟುಂಬದವರನ್ನು ಬರಿ ಮುಸ್ಲಿಮರನ್ನಬಹುದೆ? ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರರನ್ನು ಜಾತಿಗೆ ಸೀಮಿತಗೊಳಿಸಬಹುದೆ? ನಮಗೆ ಮೊದಲಿನ ಧಾರವಾಡವೇ ಇರಲಿ.

ತರಗತಿಯ ನನ್ನ ಪಾಠಗಳ ಜಾತ್ಯಾತೀತ ಪೂಜೆಗೆ ಮೂವತ್ತನಾಲ್ಕು ವರ್ಷ. ಅನೇಕ ಮುಸ್ಲಿಂ ಕ್ರಿಶ್ಚಿಯನ್ ವಿದ್ಯಾರ್ಥಿ ಗಳು ರಾಜಕೀಯದ್ದಲ್ಲಿದ್ದಾರೆ, ಕ್ರೈಸ್ತ ಫಾದರ್​ಗಳಾಗಿದ್ದಾರೆ. ಈಗಲೂ ಸಂಪರ್ಕದಲ್ಲಿದ್ದಾರೆ. ಯಾರ್ಯಾರನ್ನು ಹೆಸರಿಸಲಿ? ನಾನು ಎನ್.ಎಸ್.ಎಸ್. ಆಫೀಸರಾಗಿದ್ದಾಗ ಎಲ್ಲಾ ಕೋಮಿನ ವಿದ್ಯಾರ್ಥಿಗಳೂ ಇದ್ದರು. ಅವರ್ಯಾರೂ ಜಾತಿಸೂಚಕವಾಗಿ ಕಂಡೇಇಲ್ಲ. ನಲವತ್ತು ವರ್ಷಗಳಿಂದ ಅನೇಕ ಹೋರಾಟಗಳಲ್ಲಿ ನನ್ನೊಂದಿಗಿದ್ದವರನ್ನು ಜಾತಿಗಾಗಿ ಕಾಣಲು ಸಾಧ್ಯವೆ?

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ನುಗ್ಗಿಕೆರಿಯ ನೀರು ಕಲಕುವುದನ್ನು ನೋಡುತ್ತಿದ್ದೀರಾ ರಹಿಮತ್ ಖಾನರೇ

Published On - 10:06 am, Wed, 13 April 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್