Master Hirannaiah’s Birth Anniversary: ‘ನನ್ನಲ್ಲಿ ಎಡಪಂಥೀಯ ಒಲವು ಮೂಡಿಸಿ, ಆ್ಯಂಗ್ರಿ ಯಂಗ್​ಮ್ಯಾನ್ ಆಗಿಸಿದವರೇ​ ಇವರು’

|

Updated on: Feb 15, 2022 | 2:29 PM

Kannada Theatre : ಪೋಸ್ಟಾಫೀಸಿನಲ್ಲಿ ಪೆನ್ನು ಮರೆತು ಬಂದವನೊಬ್ಬ ಕೇಳುತ್ತಾನೆ, ಸ್ವಲ್ಪ ಪೆನ್ನು ಕೊಡ್ತೀರಾ? ಓ, ಬರೆಯಾಕಾ? ಇಲ್ಲ, ಚೀಪಕ್ಕೆ ಇನ್ನೊಂದು. ಹೀಗೇ ಲಂಚ ಬೆಳೀತಾ ಹೋದ್ರೆ ಅಷ್ಟೇ. ಮುಂದೊಂದು ದಿನ ಬರೀ ಸ್ವಿಚ್ ಹಾಕಿದ್ರೆ ಫ್ಯಾನ್ ತಿರಗಲ್ಲ, ಸ್ವಿಚ್ ಹಾಕಿ, ಫ್ಯಾನ್ ಮೇಲೆ ಹತ್ತುಪಾಯ್ ಇಟ್ರೆ ತಿರುಗುತ್ತೆ.

Master Hirannaiah’s Birth Anniversary: ‘ನನ್ನಲ್ಲಿ ಎಡಪಂಥೀಯ ಒಲವು ಮೂಡಿಸಿ, ಆ್ಯಂಗ್ರಿ ಯಂಗ್​ಮ್ಯಾನ್ ಆಗಿಸಿದವರೇ​ ಇವರು’
ಮಾಸ್ಟರ್ ಹಿರಣ್ಣಯ್ಯನವರೊಂದಿಗೆ ಮಂಡ್ಯ ರಮೇಶ್
Follow us on

ಮಾಸ್ಟರ್ ಹಿರಣ್ಣಯ್ಯ | Master Hirannaiah : ಬಾಲ್ಯದಲ್ಲಿ ರಾತ್ರಿಯಿಡೀ ನಡೆಯುವ ಹಳ್ಳಿಯ ಬಯಲಾಟವನ್ನು ನೋಡುತ್ತಿದ್ದ ನನಗೆ ನನ್ನ ಸೋದರಮಾವ ಮಂಡ್ಯ ಲಕ್ಷ್ಮೀ ಜನಾರ್ಧನ ಥಿಯೇಟರ್‌ನಲ್ಲಿ ಕಂಪನಿ ನಾಟಕ ನೋಡುವ ಹುಚ್ಚು ಹತ್ತಿಸಿದ. ಮಿಡ್ಲಿಸ್ಕೂಲ್ ದಾಟಿ ಹೈಸ್ಕೂಲ್ ಹತ್ತಿದ್ದೆ. ಹೀಗೊಂದು ದಿನ ಮಾ. ಹಿರಣ್ಣಯ್ಯನವರ ನಾಟಕವನ್ನು ಮೊದಲ ಬಾರಿ ನೋಡಿದ್ದೆ. ಗರ ಬಡಿದವನಂತಾದೆ! ನಾಟ್ಕ ಅಂದ್ರೆ ಹೀಗೂ ಇರುತ್ತೆ ಅಂತಾ ಪ್ರಶ್ನೆ ಪುಟಿದೆದ್ದಿತು. ದಿನಗಟ್ಟಲೆ ತಿಂಗಳುಗಟ್ಟಲೆ ನಾಟಕಗಳನ್ನು ನೋಡತೊಡಗಿದೆ. ಲಂಚಾವತಾರ, ಮಕ್ಕಲ್ ಟೋಪಿ, ನಡುಬೀದಿ ನಾರಾಯಣ, ಕಪಿಮುಷ್ಟಿ ದೇವದಾಸಿ, ಸದಾರಮೆ ಒಂದನ್ನೂ ಬಿಡದೆ ನೋಡಿದೆ. ಕಾಲೇಜಿನ ಆರಂಭದ ದಿನಗಳಲ್ಲಿ ನನ್ನಲ್ಲಿ ಎಡಪಂಥೀಯ ಒಲವು ಮೂಡಿಸಿ, ಆ್ಯಂಗ್ರಿ ಯಂಗ್ ಮ್ಯಾನ್ ಗುಣ ರೂಪುಗೊಳ್ಳುವಂತೆ ಮಾಡಿದ್ದೇ ಈ ಹಿರಣ್ಣಯ್ಯನವರ ಮಾತುಗಳು.
ಮಂಡ್ಯ ರಮೇಶ್, ರಂಗನಿರ್ದೇಶಕ

ಮಾತು, ಮಾತು, ಮಾತು, ಬರೀ ಮಾತಲ್ಲ ಅಲ್ಲಿ ಅದ್ಭುತ ಭಾಷಾ ಸಾಮರ್ಥ್ಯ ಅವರದು. ಸಮಾಜವನ್ನು ವ್ಯಂಗೋಕ್ತಿಗಳಿಂದ ತಿವಿದು ಎಚ್ಚರಿಸುವ ಘಂಟಾನಿನಾದವಿತ್ತು. ಪ್ರೇಕ್ಷಕ ಪ್ರಭುಗಳನ್ನೂ ಮಗುವಿನಂತೆ ಲಾಲಿಸುವ ತಾಯ್ತನದ ಮಮತೆ ಇತ್ತು. ಮುಂದಿನ ಜನಾಂಗಕ್ಕೆ ಸತ್ವಪೂರ್ಣ ಮೌಲ್ಯಗಳ ಮಾರ್ಗದರ್ಶನವೂ ಇತ್ತು. ಅಲ್ಲಿ ಏನಿಲ್ಲ? ಅವರು ಹಾಡಬಲ್ಲವರಾಗಿದ್ದರು, ಆ ದೇಹ ಹೊತ್ತುಕೊಂಡೇ ಕುಣಿಯಬಲ್ಲವರಾಗಿದ್ದರು, ಪಟಪಟನೆ ಮಾತನಾಡಬಲ್ಲವರಾಗಿದ್ದರು. ಆ ಮಾತಿನ ಚಾಟಿಗೆ ತಲೆದೂಗದವರಿಲ್ಲ ಆ ನಿರರ್ಗಳತೆಗೆ ಬೆರಗಾಗದವರಿಲ್ಲ ಸ್ವಚ್ಚ ಮಲ್ಲಿಗೆಯಂಥ ಅಚ್ಚ ಕನ್ನಡದಷ್ಟೇ ಸ್ಪಷ್ಟವಾಗಿ ಪ್ರೌಢ ಇಂಗ್ಲಿಷನ್ನೂ ಲೀಲಾಜಾಲವಾಗಿ ನೀರ್ ಕುಡಿದಂತೆ ಆಡಬಲ್ಲವರಾಗಿದ್ದರು. ಅನ್ನದಾತರನ್ನು ಆದರಿಸಿ ಆರಾಧಿಸುವ ಅವಿಚ್ಛಿನ್ನ ವಿನಯದೊಂದಿಗೆ ಅಧಿಕಾರದಲ್ಲಿರುವವರ ಆಟಾಟೋಪಗಳನ್ನು ಅಡಗಿಸುವ ಅರ್ಥಪೂರ್ಣ ಆಕ್ರೋಶಕ್ಕೆ ವಿಡಂಬನೆಯ ಆಲಾಪ ನೀಡಿ ಅರಳಿಸಬಲ್ಲರಾಗಿದ್ದರು.

ಮೈ ಮನಸ್ಸುಗಳನ್ನು ಹೊಸ ಅಲೆ ನಾಟಕಗಳ ಹೆಸರಿನಲ್ಲಿ ಪ್ರೇಕ್ಷಕ ಸಮುದಾಯವನ್ನು ರಂಗಮಂದಿರದಲ್ಲಿ ಲಾಠಿಚಾರ್ಜ್ ಮಾಡಿ ಓಡಿಸಿದ ಹೊಸ ಅಲೆಯ ಅನೇಕ ರಂಗತಂಡಗಳ ಆತ್ಮರತಿಯ ಮುಂದೆ ಟಿ.ವಿ, ಸಿನಿಮಾ ಎಲ್ಲಾ ಬಿಟ್ಟೆದ್ದು ಬಂದು ಪ್ರೇಕ್ಷಕರು ಕ್ಯೂ ನಿಂತು ಹಿರಣ್ಣಯ್ಯನವರ ನಾಟಕಗಳನ್ನು ಆಸ್ವಾದಿಸುತ್ತಿದ್ದರೆಂದರೆ  ಅದು ಅಂತಃಶಕ್ತಿ ಇರುವ ನಟರಿಗೆ ಮಾತ್ರ ಹಾಗೆ ಎಂದೇ ನನ್ನ ಭಾವನೆ.

ಕಟ್ಟಿಹಾಕಲು ಸಾಧ್ಯ ‘ಕಿಡಿ’ ಶೇಷಪ್ಪರಾಗಲಿ, ಲಂಕೇಶರಾಗಲಿ, ರವಿ ಬೆಳಗೆರೆಯಾಗಲಿ, ಸಾಧಿಸಿದ್ದನ್ನು ನಲವತ್ತು ವರ್ಷಗಳಷ್ಟು ನಿರಂತರವಾಗಿ ರಂಗದಲ್ಲಿ ಕಟುವಾಸ್ತವವನ್ನು ಕೆಚ್ಚೆದೆಯಿಂದ ಮಂಡಿಸಿದ ಗಂಡು ಹಿರಣ್ಣಯ್ಯ, ಲಂಚದ ಮಂಚವನ್ನೇರಿದವರಿಗೆ, ಇಂಚಿಂಚಲ್ಲೂ ತಮ್ ಪಂಚ್ ಮಾತಿನ ಮೂಲಕ ಕಾದ ಹೆಂಚಿನ ಮೇಲೆ ಕೂತಂತೆ ಮಾಡುವುದರಲ್ಲಿ ಸಿದ್ಧಹಸ್ತರು ನಮ್ಮ ಮಾಸ್ಟರ್. “ಬತ್ತಲಾಗದೆ ಬಯಲು ಸಿಕ್ಕುವುದಿಲ್ಲ ಅಂದರು ಅಡಿಗರು. ಅಕ್ಷರಕ್ಷರ ಚಾಚೂ ತಪ್ಪದಂತೆ ನಡೆದರು ಹಿರಿಯಣ್ಣನವರು. ಅವರಪ್ಪನ ಕಥೆ ರಂಗದಲ್ಲಿ ಅವರಾಡುತ್ತಿದ್ದರೆ ನಮ್ಮ ಕಣ್ಣಲ್ಲಿ ನೀರು ಬದುಕಿನನುಭವವನ್ನು ಬಸಿದು ಬಡಿಸಿದ ಪರಮಾನ್ನವದು. ಅದಕ್ಕೇ ಅಷ್ಟೊಂದು ರುಚಿ. ಕೊಳೆಗೇರಿಯ ಕತ್ತಲನ್ನು ಕುರಿತು ಅರಮನೆಯ ಉಪ್ಪರಿಗೆಯಲ್ಲಿ ಚಿತ್ರಕಥೆ ಗಿಟ್ಟಿಸಿಕೊಳ್ಳುವ ಅರ್ಧ ಬೆಂದ ಮಡಕೆಯಲ್ಲ ಅವರು.

ರಚಿಸಿ, ಅವಾರ್ಡ್ ಇಡೀ ಬದುಕನ್ನು ನಾಟಕಕ್ಕಾಗಿ ಮೀಸಲಿಟ್ಟವರ ಮನುಷ್ಯ ಸಂಬಂಧಗಳ ವೈಚಿತ್ರಗಳು, ಆಸಹಾಯಕತೆಗಳು, ತಿಕ್ಕಲುತನಗಳು, ದುರಂತಗಳ ನಡುವೆ ರಂಗಕಲಾವಿದರಾಗಬೇಕೆನ್ನುವ ಹೊಸ ತಲೆಮಾರಿನ ಹುಡುಗರಿಗೆಲ್ಲಾ ಸ್ವಚ್ಛತೆಗೆ, ಶಿಸ್ತಿಗೆ, ಪ್ರಜ್ಞಾವಂತಿಕೆಗೆ, ವಾಣಿಜ್ಯತೆಗೆ, ಓದಿಗೆ, ಇನ್ನೂ ಕಲಿಯಬೇಕೆನ್ನುವ ಹಂಬಲಕ್ಕೆ, ಆಧುನಿಕ ಪರಂಪರೆಗೆ ಹೊಂದಿಕೊಳ್ಳುವ ಗುಣಕ್ಕೆ, ನಿಗರ್ವಕ್ಕೆ, ಮನುಷ್ಯತ್ವಕ್ಕೆ, ಎಲ್ಲ ಮೀರಿ ಸರಳತೆಗೆ, ಮಾದರಿಯಾಗಿ ನಿಂತರು ಹಿರಣ್ಣಯ್ಯನವರು.

ಇದನ್ನೂ ಓದಿ : Mandya Ramesh Birthday : ‘ಇವೆರಡೂ ನನ್ನಿಷ್ಟದ ಪುಸ್ತಕಗಳು’

ಮಾಸ್ಟರ್ ಹಿರಣ್ಣಯ್ಯ

ಚಿತ್ರೀಕರಣದ ಸೆಟ್‌ನಲ್ಲಿ ಅವರೊಡನಿರುವುದೇ ದೊಡ್ಡ ಸೌಭಾಗ್ಯ. ಪ್ರತಿ ನುಡಿಯಲ್ಲೂ ನಮಗೆ ಕಲಿಕೆಯಿದೆ. ಅವರ ಕ್ಯಾನ್ವಾಸ್ ಆದರೂ ಎಂಥದ್ದು! ಕಿತ್ತುಹೋದ ‘ಕೆಂಪೇಗೌಡ’ ಚಿತ್ರಮಂದಿರದ ಕನ್ನಡ ಚಿತ್ರದಿಂದ ಹಿಡಿದು ‘ಕುರುಸೋವನ ಚಿತ್ರದವರೆಗೆ, ಮೌಸ್‌ಹಂಟ್‌ನಿಂದ-ಬಸ್ಟರ್‌ ಕೀಟನ್‌ವರೆಗೆ, ಬೀದಿ ನಾಟಕದಿಂದ ರಾಯಲ್ ಶೇಕ್ಸ್‌ಪಿಯರ್ ಕಂಪನಿಯವರೆಗೆ, ಬೀಚಿಯಿಂದ ಬರ್ನಾರ್ಡ್​ ಶಾ ಸಾಹಿತ್ಯವೆಲ್ಲಾ ಅವರ ಬಾಯಲ್ಲಿ ತಕ್ಷಣವೇ ಮಾರ್ಕ್ಸ್, ಲೆನಿನ್, ರಾಯ್ ಸಮಾಜವಾದದ ಒಳತಿರುವುಗಳು, ಸಾಮಾಜಿಕ ವ್ಯವಸ್ಥೆಯಲ್ಲಿ ಪರಂಪರೆಯ ಊನಗಳು, ಉಪ್ಪಿನಕಾಯಿ ತಯಾರಿಯಿಂದ ಹಿಡಿದು ಜಾಗತೀಕರಣದವರೆಗಿನ… ಎಂಥದ್ದೇ ವಿಷಯವನ್ನು ಅಥೆಂಟಿಕ್ ಆಗಿ ನಿಮ್ಮ ಮುಂದಿಡಬಲ್ಲವರಾಗಿದ್ದರು. ಹೇಳುವಾಗ ಆತ್ಮೀಯತೆ ಇರುತ್ತಿತ್ತು. ನಿಷ್ಕಪಟವಾದ ಕಾಳಜಿಯೂ ಇರುತ್ತಿತ್ತು. ಎಲ್ಲಕ್ಕಿಂತ ಹೆಚ್ಚು ಎಲ್ಲರಿಗೂ ತಲುಪಬಲ್ಲ ನಗೆಯ ಲೇಪವೂ.

ಪೋಸ್ಟಾಫೀಸಿನಲ್ಲಿ ಪೆನ್ನು ಮರೆತು ಬಂದವನೊಬ್ಬ ಕೇಳುತ್ತಾನೆ: ಸ್ವಲ್ಪ ಪೆನ್ನು ಕೊಡ್ತೀರಾ? ಓ, ಬರೆಯಾಕಾ? ಇಲ್ಲ, ಚೀಪಕ್ಕೆ ಇನ್ನೊಂದು :

ಹೀಗೇ ಲಂಚ ಬೆಳೀತಾ ಹೋದ್ರೆ ಅಷ್ಟೇ. ಮುಂದೊಂದು ದಿನ ಬರೀ ಸ್ವಿಚ್ ಹಾಕಿದ್ರೆ ಫ್ಯಾನ್ ತಿರಗಲ್ಲ

ಸ್ವಿಚ್ ಹಾಕಿ, ಫ್ಯಾನ್ ಮೇಲೆ ಹತ್ತುಪಾಯ್ ಇಟ್ರೆ ತಿರುಗುತ್ತೆ. ಕಲಾವಿದ ಬದುಕಿನ ಬವಣೆಗೆ ಅವರಲ್ಲೊಂದು ಕವಣೆ :

“ಎಲ್ಲಿವರೂ ಪ್ರೇಕ್ಷಕ ಕೈ ಚಪ್ಪಾಳೆ ತಟ್ಟಿದ್ದಾನೆ ಅಲ್ಲೀವರೂ ಕಲಾವಿದ ಕೈಲಾಸದಲ್ಲಿದ್ದಾನೆ. ಯಾವತ್ತು ಚಪ್ಪಾಳೆ ತಟ್ಟೋದಿಲ್ಲೋ ಆಗ ಕಲಾವಿದನಿಗೆ ಕೈಲಾಸ ಇದ್ದಿ, ಕೈ ಸಾಲ ಕೂಡ ಸಿಕ್ಕೋದಿಲ್ಲ”

ಅನೇಕ ಬಾರಿ ಅತಿ ಅಚ್ಚರಿ ಕಂಡಿದ್ದೇನೆ ಅವರಲ್ಲಿ

‘ಸುಚಿತ್ರಾ’ದಲ್ಲಿ ನಾವು ರಂಗಾಯಣದವರು ‘ಮೂಕನ ಮಕ್ಕಳು’ ನಾಟಕ ಆಡಿದಾಗ ‘ಅದ್ಭುತ’ ಅಂದು ನಮ್ಮನ್ನೆಲ್ಲಾ ಮುದ್ದಾಡಿದ್ದರು.

ಕಂಡವರ ನಾಟಕವನ್ನೇ ನೋಡದೆ ಕಲಾಕ್ಷೇತ್ರದ ಕಟ್ಟೆಯಲ್ಲಿ ಕೂತು ಕಾಮೆಂಟ್ ಮಾಡುವ ಕಲಾವಿದರನೇಕರನ್ನು ಕಂಡಾಗ ಕನಿಕರವಾಗುತ್ತದೆ. ಅಂಥದ್ದರಲ್ಲಿ ಎಳೆಯರಾಡುವ ನಾಟಕದ ಬಗ್ಗೆ ಆಸ್ಥೆ ವಹಿಸಿ ನೋಡುತ್ತಿದ್ದ ಅವರ ಪ್ರೀತಿಗೆ ಮನ ಸೋಲುತ್ತದೆ. ರಂಗ ಅಧ್ವರ್ಯು, ನನ್ನ ಗುರು ಬಿ.ವಿ.ಕಾರಂತರ ಮಾತು ನೆನಪಾಗುತ್ತದೆ ಕಲಾವಿದ ಮಗುವಿನಂತಿರಬೇಕು

ನಿಜ;

ಅದಕ್ಕೆ ಅವರು Child like,

ನಾನು…? Childish.

ಅಷ್ಟೇ ವ್ಯತ್ಯಾಸ.

ಅವರ ಬಗ್ಗೆ ಬರೆದಷ್ಟೂ ಉಳಿದಿದೆ. ವಿಶ್ವ ಇರುವಷ್ಟು ದಿನ ರಂಗಭೂಮಿ ಇರುತ್ತದೆ. ರಂಗಭೂಮಿ ಇರುವಷ್ಟೂ ದಿನ ಹಿರಣ್ಣಯ್ಯ ಇರುತ್ತಾರೆ… ಎಚ್ಚರದ ದನಿಯಾಗಿ!

*

ಇದನ್ನೂ ಓದಿ : Bhargavi Narayan Birthday : ರಾತ್ರಿ ನಮ್ಮನೇಲಿದ್ದು ಬೆಳಗ್ಗೆ ರೈಲಿಗೆ ಹೋಗಿ ಎಂದರು ಆ ಪುಣ್ಯಾತ್ಮ

 

Published On - 1:51 pm, Tue, 15 February 22