Meeting Point : ‘ನಮ್ಮೂರಿಗೆ ನ್ಯಾಷನಲ್ ಹೈವೇ ಬಂದಷ್ಟು ಸುಲಭವಾಗಿರಲಿಲ್ಲ ಹುಡುಗರನ್ನು ಮಾತಾಡಿಸುವುದು’

Love Letter : ‘ಬದುಕೆಂದರೆ ಕೇವಲ ಬಟ್ಟೆ, ದುಡಿಮೆ, ಸಂಬಳ, ಮದುವೆ, ಮಕ್ಕಳ ಚೌಕಟ್ಟು ಎಂದುಕೊಂಡವರಿಗೆ, ಕಮ್ಯೂನಿಕೇಷನ್ ಎಂದರೆ ಕೇವಲ ಸ್ಪಷ್ಟವಾದ ಅರ್ಥ ಕೊಡುವ ಪದಗಳ ಸಮೂಹ ಎಂದುಕೊಂಡವರಿಗೆ ಇದೆಲ್ಲ ಹೇಗೆ ಅರ್ಥವಾದೀತು. ಕಳೆದುಕೊಳ್ಳುವುದು ಎಂದರೆ ಕೇವಲ ವಸ್ತುಗಳನ್ನಲ್ಲ. ನನಗಾಗಿ ಹೊತ್ತು ತಂದಿದ್ದ ಆ ಮೊದಲ ಪ್ರೇಮ ಪತ್ರದಲ್ಲಿ ಅದೇನು ನಿವೇದನೆ ಇತ್ತೋ?‘ ಎಡೆಯೂರು ಪಲ್ಲವಿ

Meeting Point : ‘ನಮ್ಮೂರಿಗೆ ನ್ಯಾಷನಲ್ ಹೈವೇ ಬಂದಷ್ಟು ಸುಲಭವಾಗಿರಲಿಲ್ಲ ಹುಡುಗರನ್ನು ಮಾತಾಡಿಸುವುದು’
ಲೇಖಕಿ ಎಡೆಯೂರು ಪಲ್ಲವಿ
Follow us
|

Updated on:Sep 09, 2021 | 10:49 AM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’.

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಅದೆಷ್ಟು ಜಟಿಲವಲ್ಲವೆ? ಈ ಸರಣಿಯಲ್ಲಿ ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರು ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಯಾರೂ ಈ ಸಂವಾದದಲ್ಲಿ ಬರಹ ಮತ್ತು ಪ್ರತಿಕ್ರಿಯೆಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಎಡೆಯೂರು ಪಲ್ಲವಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನವರು. ಫಾರ್ಮಸಿಯಲ್ಲಿ ಡಿಪ್ಲೊಮಾ, ಬಿ.ಎಸ್​ಸಿ ಪದವೀಧರರು. ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ, ಚೊಚ್ಚಲ ಕೃತಿ ‘ಭೂಮ್ತಾಯಿ ಅಜ್ಜಿ ಆದ್ಲಾ?’.

ಪಲ್ಲವಿ ಅವರ ಬರಹ ನಿಮ್ಮ ಓದಿಗೆ :

ಅದಿನ್ನೂ ಅಕ್ಷರಗಳೊಂದಿಗೆ ಆಟವಾಡಲು ಆಗತಾನೆ ಕಲಿಯುತ್ತಿದ್ದೆ. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲಿ ಪೂರೈಸಿ, ಹೈಸ್ಕೂಲ್ ಎಂದು ರೆಕ್ಕೆ ಎತ್ತರಿಸಿಕೊಂಡು ಪಟ್ಟಣಕ್ಕೆ ಹೋಗಲೇಬೇಕಿತ್ತು. ನಾನು ಬೆಳಗ್ಗೆ ಬಸ್​ಸ್ಟ್ಯಾಂಡಿಗೆ 9:15ಕ್ಕೆ ಸರಿಯಾಗಿ ಬರುತ್ತಿದ್ದುದರಿಂದ, ಅವನು ದಿನಾಲು ಅದೇ ಸಮಯಕ್ಕೆ ಬರುತ್ತಿದ್ದ. ನಾನು ಹತ್ತುವ ಬಸ್ಸಿಗೆ ಹತ್ತಿ ಸಾಧ್ಯವಾದರೆ ನನ್ನ ಪಕ್ಕದಲ್ಲಿ ಸೀಟು ಹಿಡಿಯಲು ಹಾತೊರೆಯುತ್ತಿದ್ದ. ಹಾಗೆ ಸೀಟು ಸಿಕ್ಕರೂ ಮಾತನಾಡಿಸುವ ಇಚ್ಛೆ ಇದ್ದರೂ, ಅದ್ಯಾಕೋ ಕೂತಲ್ಲಿಯೇ ಬೆವರುತ್ತಿದ್ದ. ಇನ್ನೂ ಮೀಸೆ ಚಿಗುರದ ಅವನು ಒಂದೊಮ್ಮೆ ಪ್ರಪೋಸ್ ಮಾಡಬಹುದು ಎಂದೆಣಿಸಿದ್ದೆ.

ಆವತ್ತು ವ್ಯಾಲೆಂಟೈನ್ಸ್ ಡೇ. ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ಊಟಕ್ಕೆಂದು ಸೀಗೆಮರದ ತಂಪಿನಲಿ ಕೂತಿದ್ದ ನಾನು ಅಚಾನಕ್ಕಾಗಿ ದೂರದಲ್ಲಿ ಅವನನ್ನು ಕಂಡೆ. ಅಮ್ಮನ ಹಸಿರು ಸ್ವೆಟರ್ ತೊಟ್ಟಿದ್ದೆ. ಅದು ಸುಮಾರು ಎರಡರ ಆಸುಪಾಸು, ಆಗ ಒಬ್ಬ ಪುಟ್ಟ ಹುಡುಗ ಬಂದು ನಿಮಗೆ ಅವರು ಕೊಟ್ಟಿದ್ದು ಎಂದು ಕಾಂಪೌಂಡಿನತ್ತ ಕೈ ತೋರಿ ಡಬ್ಬಿಯೊಂದನ್ನು ಕೊಡಲು ನೋಡಿದ. ಆದರೆ ಕೊಟ್ಟು ಕಳಿಸಿದ ಅವ ಅಲ್ಲಿರಲಿಲ್ಲ. ಅವನ ಹೆಸರಿದ್ದ ಹಸಿರು ರ್ಯಾಪರ್ ನಿಂದ ಆವೃತವಾಗಿದ್ದ ಆ ಸ್ಕ್ವೇರ್ ಡಬ್ಬಿಯನ್ನು ಒಂದು ಕ್ಷಣ ಸೂಕ್ಷ್ಮವಾಗಿ ನೋಡಿ ನಾನು ಇಸಿದುಕೊಳ್ಳಲು ನಿರಾಕರಿಸುವಷ್ಟರಲ್ಲಿ ನನ್ನ ಗೆಳತಿಯೂ ಬಂದು ಅದನ್ನು ಇಸಿದುಕೊಳ್ಳಬೇಡ ಕಣೇ ಅಂತ ಷರತ್ತು ಹಾಕಿದಳು. ಅದರೊಳಗೆ ಏನಿತ್ತೋ? ಯಾವ ಸಂದೇಶವಿತ್ತೋ? ತಿಳಿಯದು.

ಆದರೆ ನನಗೆ ಗೊತ್ತಿಲ್ಲದಂತೆಯೇ ಮನೆಯ ಯಾರಾದರೂ ಹಿರಿಯರಿಗೆ ಇದನ್ನು ವರದಿ ಒಪ್ಪಿಸಲೇಬೇಕೆಂಬ ಅಲಿಖಿತ ನಿಯಮ ನನ್ನ ಹೃದಯದಲ್ಲಿ ಅದ್ಹೇಗೋ ದಾಖಲಾಗಿಬಿಟ್ಟಿತ್ತು. ಅಪ್ಪನಿಗೆ ಹೇಳಲು ವಿಪರೀತ ಭಯ. ಅಮ್ಮನಿಗೆ ಹೇಳಿದರೆ ಅಪ್ಪನಿಗೆ ಹೇಳೇ ಹೇಳುವಳೆಂಬ ಸೆನ್ಸ್ ನನಗಿತ್ತು. ಹಾಗಾಗಿಯೇ ನಮ್ಮ ಇಡೀ ಕುಟುಂಬದಲ್ಲೇ ಎಲ್ಲಾ ಸನ್ನಿವೇಶಗಳನ್ನು ಸ್ವಲ್ಪ ಲಿಬರಲ್ ಆಗಿ ನೋಡುತ್ತಿದ್ದ ಚಿಕ್ಕಪ್ಪನೊಂದಿಗೆ ಮೆಲ್ಲ ದನಿಯಲ್ಲೇ ವಿಷಯ ಅರುಹಿದೆ. ಆದರೆ ಅವರು, ‘ಹುಡುಗರೊಂದಿಗೆ ನೀನೇನಕ್ಕೆ ಮಾತಾಡಕ್ಕೆಲ್ಲ ಹೋಗಿದ್ದೆ. ಅವನತ್ತ ನೋಡಿದ್ಯಾಕೆ? ಅವ್ರು ಹುಡುಗ್ರು ಹಂಗೇನೇ. ನೀವು ಹುಡುಗೀರು ತಲೆ ತಗ್ಗಿಸಿಕೊಂಡು ಸ್ಕೂಲ್ಗೆ ಹೋಗಿ ಬಂದ್ರೆ ಇಂಥವೆಲ್ಲ ಯಾಕ್ ಮಾಡ್ತಾರೆ?’ ಎಂದು ಬೈದುಬಿಟ್ಟರು!

ನಮ್ಮೂರಿಗೆ ನ್ಯಾಷನಲ್ ಹೈವೇ ಬಂದಷ್ಟು ಸುಲಭ ಸರಳವಾಗಿರಲಿಲ್ಲ ಹುಡುಗರನ್ನು ಮಾತಾಡಿಸುವುದು. ಒಂದು ಕ್ಷಣ ಅವರನ್ನು ತಲೆಎತ್ತಿ ನೋಡುವುದಕ್ಕೂ ಸಹ ಹಿಂಜರಿಯುತ್ತಿದ್ದ ಪರಿಸರ ನಮ್ಮದು. ಆದರೆ ನಂತರದಲ್ಲಿ ಓದು ಕಾಲೇಜ್​ಗೆ ಶಿಫ್ಟ್ ಆಗಿದ್ದಾಗ ನನ್ನ ಹಲವು ಸ್ವೀಟ್ ಗೆಳತಿಯರು ಹುಡುಗರನ್ನು ನಿರ್ಭಿಡೆಯಿಂದ ಮಾತಾಡಿಸುತ್ತಿದ್ದರು. ಅವರ ಸಂಗ ಸಾಧಿಸಿ ಅನೇಕ ಕುತೂಹಲಕರ ಕಥೆಗಳನ್ನ ಹೆಣೆಯುತ್ತಿದ್ದರು ಅಥವಾ ಅವರ ಲೋಕದ ಪರಿಚಯವೇ ಇಲ್ಲದ್ದರಿಂದ ನನ್ನಂಥವರಿಗೆ ಕುತೂಹಲ ಎನ್ನಿಸಿರಬಹುದು. ಇದರೊಂದಿಗೆ ಅವರ ಬಗ್ಗೆ ಹಲವಾರು ಗಾಸಿಪ್​ಗಳನ್ನು, ಅವರ ತುಂಟತನವನ್ನು ನನ್ನೊಂದಿಗೆ ಹೇಳಿಕೊಳ್ಳುವಾಗ, ಯಾವುದೋ ಒಂದು ಅನುಭವವನ್ನು ನಾನು ಕಳೆದುಕೊಳ್ಳುತ್ತಿರುವ ಗುರುತು ಸಿಗುತ್ತ ಹೋಯಿತು. ಆಗೆಲ್ಲ ನನಗೂ ಒಬ್ಬ ಗೆಳೆಯನಿದ್ದಿದ್ದರೆ ಎಷ್ಟು ಚೆಂದ, ಈ ಲೋಕದ ಅನೇಕ ಕಥೆಗಳಿಗೆ ಕಿವಿಯಾಗಬಹುದಿತ್ತು ಎನ್ನಿಸುತ್ತಿತ್ತು.

ಒಮ್ಮೊಮ್ಮೆ ಅವರೊಂದಿಗೆ ಕ್ಯಾಶುಯಲ್‌ ಆಗಿ ಮಾತನಾಡುತ್ತಿದ್ದರೂ ಈ ಪೋಲಿ ಹುಡುಗರ ಮಧ್ಯೆ ಆತ್ಮೀಯತೆಗೆ ತೆರೆದುಕೊಳ್ಳುವುದು ಕಷ್ಟವಾಗಿ ಇದ್ದುದರಲ್ಲಿಯೇ ಬದುಕಿ ಹೋಗುತ್ತಿದ್ದೆವು. ನಂತರ ಅದೆಷ್ಟೋ ವರ್ಷಗಳ ನಂತರ ಕೆಲಸಕ್ಕೆ ಸೇರಿ ಮಹಾನಗರವೆಂಬ ಮಾಯಾವಿಗೆ ದಾಪುಗಾಲಿಟ್ಟೆ. ಇಲ್ಲಿ ಎಲ್ಲರೂ ಸಲೀಸಾಗಿ ಲಿಂಗಭೇದವಿಲ್ಲದೆ ಹರಟುವಾಗ ನಾನು ನನ್ನ ಗ್ರಾಮಾಯಣದ ಆ ಬಂಧನದ ದಿನಗಳಿಗೆ ಮತ್ತೆ ಮತ್ತೆ ಜಾರಿಹೋಗುತ್ತಿದ್ದೆ. ಇಲ್ಲೆಲ್ಲ ಹೀಗೂ ಉಂಟೆ? ಎಂದು ಆಶ್ಚರ್ಯಪಡುವುದು ಮಾತ್ರವಲ್ಲ ಹೊಂದಿಕೊಳ್ಳಲು ಬಹು ತ್ರಾಸವೇ ಪಡಬೇಕಾಗಿತ್ತು. ನಮ್ಮ ಮನೆಗಳಲ್ಲಿ ಅಥವಾ ಹಳ್ಳಿ ಪರಿಸರದಲ್ಲಿ ಜೀವಂತವಾಗಿದ್ದ ಈ ಭೇದವನ್ನೇನಾದರೂ ಇಲ್ಲಿ ಮುಂದುವರೆಸಿದರೆ ಕೆಲಸ ಮಾಡಲು ಸಾಧ್ಯವಾಗುವುದೇ ಇಲ್ಲವೆನ್ನಿಸಿತು. ಆದಾಗ್ಯೂ ಇಲ್ಲಿ ಸಿಗುವ ಅಭೇದ್ಯ ಕೋಟೆಯ ನಿಟ್ಟುಸಿರನ್ನಾಗಲಿ, ಭಾವನೆಗಳನ್ನಾಗಲಿ ಅಥವಾ ಮನದ ಬೇಗುದಿ, ಆಂದೋಲನಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳುವುದು ಸಾಧ್ಯವೇ?

meeting point edeyuru pallavi

ಸೌಜನ್ಯ : ಅಂತರ್ಜಾಲ

ನಾನು ಮೆಲ್ಲಮೆಲ್ಲನೆ ಇತರರೊಂದಿಗೆ ಸಲಿಗೆಯಿಂದ ತೆರೆದುಕೊಂಡು ಇಲ್ಲಿ ಒಂದಾಗುವ ಸಂಕಷ್ಟವನ್ನೆದುರಿಸುತ್ತಿರುವಾಗಲೆ ಅವನು ಪರಿಚಯವಾಗಿದ್ದ, ನನ್ನ ಸಹೋದ್ಯೋಗಿ. ಅವನ ಕಣ್ಣಲ್ಲಿದ್ದ ಸ್ನೇಹಪರತೆ ಮತ್ತು ಅವ ನನ್ನನ್ನು ಘಾಸಿಗೊಳಿಸುವುದಿಲ್ಲ ಎಂದು ತಿಳಿಯುವುದರೊಳಗೆ ಆತ್ಮೀಯನೂ ಎನಿಸಿಬಿಟ್ಟಿದ್ದ. ಅರೆ! ಬದುಕು ನಾನಂದುಕೊಂಡಷ್ಟು ಕಟ್ಟಳೆಗಳ ಕೂಪವಲ್ಲ ಎನ್ನಿಸಿ ಕಣ್ಣರಳಿಸಿದ್ದೆ. ಸದಾ ನಿದ್ರಿಸದ ಬೆಂಗಳೂರಿನೊಂದಿಗೆ ಬೆರೆತು ಅವನಲ್ಲೊಂದು ಕಾತರ, ಕೌತುಕ, ಆ ಕ್ಷಣವನ್ನು ಆತ್ಮೀಯನೊಂದಿಗೆ ಸಮಯ ಕಳೆಯುವ ಹಂಬಲವಷ್ಟೇ ಇದ್ದದ್ದು. ನಮ್ಮೊಳಗಿನ ಕೆಲವು ಭಾವನೆಗಳನ್ನು ಒಂದಿಷ್ಟು ಹರಡಿಕೊಂಡು ಹರಟುತ್ತಿದ್ದೆವು. ಅದು ಆತ್ಮೀಯತೆಯ ಆಪ್ತ ಸ್ವಾದ. ಅವನೊಂದಿಗೆ ಕಳೆದ ಆ ಕ್ಷಣಗಳಲ್ಲಿ ಒಂದು ನಿರಾಳತೆ ನನ್ನನ್ನಾವರಿಸುತ್ತಿತ್ತು. ಹೌದು ಹಿ ಈಸ್‌ ಮೈ ಬೆಸ್ಟ್‌ ಫ್ರೆಂಡ್.

ಅದು ಎಲ್ಲರೊಂದಿಗೂ ಅಥವಾ ಯಾರೊಂದಿಗೋ ಸಂಭವಿಸಬಹುದಾದ ಗೆಳೆತನವಲ್ಲ. ಒಮ್ಮೊಮ್ಮೆ ಇಬ್ಬರೇ, ಕೆಲವೊಮ್ಮೆ ಜೊತೆಗೆ ಮತ್ತಿಬ್ಬರು ಗೆಳೆಯರು ಸೇರುತ್ತಿದ್ದರು. ನಾನು ಟೀ, ಕಾಫಿ ಕುಡಿಯುವುದಿಲ್ಲವಾದ್ದರಿಂದ ಐಸ್ಕ್ರೀಮ್, ಅವರವರ ಆಯ್ಕೆಯಂತೆ ಮತ್ತೇನೋ ಮೆಲ್ಲುತ್ತಾ ತಡರಾತ್ರಿಯವರೆಗೂ ಹರಟಿದ್ದಿದೆ. ಸುದೀರ್ಘವಾಗಿ ಫೋನಿನಲ್ಲಿ ಮಾತನಾಡಿದ್ದಿದೆ. ಬದುಕೆಂದರೆ ಇದೇ ಅಲ್ಲವೇ? ಆ ಕ್ಷಣಗಳನ್ನು ತೀವ್ರವಾಗಿ ಆಸ್ವಾದಿಸುವುದು. ಇಂಥವನ್ನೆಲ್ಲ ಸಮಾನ ಮನಸ್ಕರೊಂದಿಗೆ ಹರಟದೆ ಹಿರಿಯರೊಂದಿಗೆ ಕಾತುರದಿಂದ ಹೇಳಿಕೊಳ್ಳುವುದು ಸಾಧ್ಯವೆ?  ಹಾಗೆಂದು ಇವೆಲ್ಲವಕ್ಕೂ ಘನ ನಿರ್ದಿಷ್ಟ ಉದ್ದೇಶಗಳೇ ಇರಬೇಕಿಲ್ಲವಲ್ಲ. ಬದುಕು ಫುಲ್‌ಸ್ಟಾಪ್‌ ಅಲ್ಲವಲ್ಲ?

ಮುಂದುವರೆದು ನಮ್ಮಿಬ್ಬರ ಸಲುಗೆಯನ್ನು ಇತರ ಗೆಳೆಯರು ಸಹ ಬೇರೆಯದೇ ರೀತಿ ಸಂಬಂಧ ಕಲ್ಪಿಸಲು ನೋಡಿದರು. ಅದರಾಚೆ ಇದರ ನೆರಳನ್ನು ಆಫೀಸಿಗೆ ಸಾಗಿಸಿದ್ದು ಒಂದಷ್ಟು ಕಣ್ಣುಗಳು ಗುಮಾನಿಯಿಂದ ನೋಡಿದಾಗ ಅವನು ʻಐ ಡೋಂಟ್ ಕೇರ್ʼ ಅಂತ ಹೇಳಿದ್ದ. ಆದರೆ ನನಗದು ಅಷ್ಟು ಸುಲಭ ಸರಳವಾಗಿರಲಿಲ್ಲ ಜೀರ್ಣಿಸಿಕೊಳ್ಳಲು. ಎಲ್ಲಿಂದಲೋ ಬಂದ ಹೆಣ್ಣುಮಕ್ಕಳು ಒಂದೆಡೆ ಬೆಳೆಯುವಾಗ ಅವಳನ್ನು ಕುಗ್ಗಿಸಲು ಸಮಾಜ (ಗಂಡಾಗಲಿ ಹೆಣ್ಣಾಗಲಿ) ಮಸಲತ್ತು ಮಾಡಿ ಸೃಷ್ಟಿಸಿದ ಆಯುಧ ಅವಳ ಚಾರಿತ್ಯ್ರವನ್ನು ಹಿಡಿದು ಹಣಿಯುವುದು. ಆಗ ಅಕ್ಕನ ʻಸಂತೆಯೊಳಗೊಂದು ಮನೆಯ ಮಾಡಿ ಶಬ್ದಗಳಿಗೆ ಅಂಜಿದೊಡೆಂತಯ್ಯʼ ಈ ಸಾಲುಗಳನ್ನು ಪದೇಪದೆ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ.

ಬದುಕೆಂದರೆ ಕೇವಲ ಬಟ್ಟೆ, ದುಡಿಮೆ, ಸಂಬಳ, ಮದುವೆ, ಮಕ್ಕಳ ಚೌಕಟ್ಟು ಎಂದುಕೊಂಡವರಿಗೆ, ಕಮ್ಯೂನಿಕೇಷನ್ ಎಂದರೆ ಕೇವಲ ಸ್ಪಷ್ಟವಾದ ಅರ್ಥ ಕೊಡುವ ಪದಗಳ ಸಮೂಹ ಎಂದುಕೊಂಡವರಿಗೆ ಇದೆಲ್ಲ ಹೇಗೆ ಅರ್ಥವಾದೀತು. ಕಳೆದುಕೊಳ್ಳುವುದು ಎಂದರೆ ಕೇವಲ ವಸ್ತುಗಳನ್ನಲ್ಲ. ನನಗಾಗಿ ಹೊತ್ತು ತಂದಿದ್ದ ಆ ಮೊದಲ ಪ್ರೇಮ ಪತ್ರದಲ್ಲಿ ಅದೇನು ನಿವೇದನೆ ಇತ್ತೋ? ಅದೇನು ಉಡುಗೊರೆ ಬಚ್ಚಿಟ್ಟುಕೊಂಡು ಆ ಪುಟ್ಟ ಸ್ಕ್ವೇರ್ ಬುಟ್ಟಿ ಹೊತ್ತು ಬಂದಿತ್ತೋ? ನಾನದನ್ನು ತೆರೆಯುವ ಮನಸ್ಸು ಮಾಡಲೇ ಇಲ್ಲವೆಂಬ ಬೇಸರ ಈಗಲೂ ಕಾಡುತ್ತದೆ. ಅದನ್ನು ತೆರೆದು ನೋಡಲಾರದ ಕುರುಡು ನನ್ನನ್ನ್ಯಾಕೆ ಆವರಿಸಿಕೊಂಡಿತ್ತು. ಅಷ್ಟಕ್ಕೂ ಪ್ರೇಮವೆಂದರೆ ತಪ್ಪು ಎನ್ನುವ ತಪ್ಪು ಕಲ್ಪನೆಯನ್ನು ಎಳೆಯ ಮನಸ್ಸಿಗೆ ಸುರಿಯುವುದೆಷ್ಟು ಸರಿ? ಇದೆಲ್ಲದರ ಆಚೆ ಲೈಂಗಿಕತೆ ಬಗ್ಗೆ, ಹರೆಯದ ತಳಮಳಗಳ ಕುರಿತು ಮನಬಿಚ್ಚಿ ಪೋಷಕರೊಂದಿಗೆ ಹೇಳಿಕೊಳ್ಳುವಷ್ಟು ಸಲುಗೆ ಇದೆಯೆ? ಗಂಡು ಹೆಣ್ಣು ಖಾಸಗಿತನ ನಿರೀಕ್ಷಿಸುವ ಉದ್ದೇಶವನ್ನು ಪೂರ್ವಗ್ರಹದಿಂದ ನೋಡುವುದು ಇಂದಿಗೂ ಉಳಿದುಕೊಂಡಿರುವುದು ಎಷ್ಟು ಸರಿ?

ನಾವು ಭಾರತೀಯರು, ಗಂಡು ಹೆಣ್ಣು ಒಬ್ಬರಿಗೊಬ್ಬರು ಮನಸ್ಪೂರ್ವಕವಾಗಿ, ಮುಕ್ತವಾಗಿ ಮಾತಾಡಿಕೊಳ್ಳುವುದೇ ಇಲ್ಲ. ಅಷ್ಟಕ್ಕೂ ನಾವು (ಗಂಡು-ಹೆಣ್ಣಿಗೆ, ಹೆಣ್ಣು-ಗಂಡಿಗೆ) ನಿಮಗೆ ಅರ್ಥವಾಗುವುದಿಲ್ಲ ಎಂದು ದೂರಿದ್ದೇ ಬಂತು. ಸೋಲುವಲ್ಲೇ ನಿಂತು ಹುಡುಕಾಡಿದ್ದೇ ಬಂತು, ಮುಂದುವರೆದು ಪರಸ್ಪರ ಅರಿಯಲು ನೀವು (ಒಟ್ಟು ಸಮಾಜ) ಬಿಟ್ಟಿದ್ದಾದರೂ ಎಂದು? ನಾವು ಪ್ರಯತ್ನಿಸುವುದಾದರೂ ಎಂತು?

ಗಂಡಿನ ಲೋಕದೃಷ್ಟಿ ಬೇರೆ. ಹೆಣ್ಣಿನ ಲೋಕದೃಷ್ಟಿ ಬೇರೆ. ಆದರೆ ಪರಸ್ಪರರ ಲೋಕಗಳನ್ನು ಅರ್ಥ ಮಾಡಿಕೊಳ್ಳಲು ಪೂರಕ ವಾತಾವರಣ, ಅವಕಾಶಗಳು ಇಲ್ಲದೆ ಬದುಕನ್ನು ಅರಿಯುವುದಾದರೂ ಹೇಗೆ? ಹೆಣ್ಣುಗಂಡಿನ ನಡುವಿನ ಆಕರ್ಷಣೆ ಸಹಜ ಎನ್ನುವುದನ್ನು ಮತ್ತು ಇನ್ನೂ ಎಷ್ಟು ಶತಮಾನಗಳ ಕಾಲ ಹೀಗೇ ಸಮಾಜಕ್ಕೆ ಅರಹುತ್ತಲೇ ನಮ್ಮ ಆಯಸ್ಸನ್ನು ಕಳೆದುಕೊಳ್ಳುತ್ತ ಹೋಗಬೇಕು? ಇರುವುದೊಂದೇ ಬದುಕು. ನಮಗಿಷ್ಟವಾದವರೊಂದಿಗೆ ಅಂತರಂಗವನ್ನು ಹಂಚಿಕೊಳ್ಳಲು ನಮಗೆ ಏಕಾಂತ ಬೇಕಲ್ಲವೆ? ಹೇಗೆ ಅರ್ಥ ಮಾಡಿಸುವುದು ಹೆಣ್ಣಿನ ಮನಸ್ಸನ್ನು? ಕವಿ ನಂದಿನಿ ಹೆದ್ದುರ್ಗ ಅವರ ‘ಅವಳು’ ಕವಿತೆಯ ಕೆಲವು ಸಾಲುಗಳನ್ನ ಒಮ್ಮೆ ಓದಿ ‘ನಾವು’ ಅರ್ಥವಾಗಬಹುದಾ?

ಅವಳು ಅಭೇದ್ಯಳಲ್ಲ ವೇದ್ಯಳೂ ಅಲ್ಲ ಅವಳು ಕ್ಷುದ್ರಳಲ್ಲ ಅಪದ್ಧಳೂ ಅಲ್ಲ

ಅವಳು ಆದವಳಲ್ಲ ಆಗದೆ ಉಳಿದವಳು ಅಲ್ಲ

ಬಗೆಯಲಾಗದೆ ಒಗೆಯಲೂ ಆಗದೆ ಅವಳ ನೆನಪಲ್ಲಿ ಗಾಯವಾದಾಗಲೆಲ್ಲ ನೀವು ಬಟ್ಟೆ ನೇಯಬಹುದು

ಇದನ್ನೂ ಓದಿ : Meeting Point : ‘ನಾವು ಜಾಗಗಳಿಗೆ ಒಂದೊಂದು ಲೇಬಲ್ ಕೊಟ್ಟುಬಿಟ್ಟಿದ್ದೇವೆ’

Published On - 11:27 am, Thu, 2 September 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್