Music: ನಾಕುತಂತಿಯ ಮಿಡಿತ; ಅರೆ ವ್ಹಾ ಕ್ಯಾ ಬಾತ್ ಹೈ! ಕಲಾವಿದರ ಜೀವಸೆಲೆ ಈ ಆಪ್ತಕೋಣೆ

Music: ನಾಕುತಂತಿಯ ಮಿಡಿತ; ಅರೆ ವ್ಹಾ ಕ್ಯಾ ಬಾತ್ ಹೈ! ಕಲಾವಿದರ ಜೀವಸೆಲೆ ಈ ಆಪ್ತಕೋಣೆ

Baithak : ‘ದೊಡ್ಡ ಸಭಾಂಗಣದೊಳಗಿನ ಕತ್ತಲಿನಲ್ಲಾಗಲಿ, ಸಾವಿರಾರು ಜನ ಸೇರಿದ ಪೆಂಡಾಲಿನ ಅಡಿಯಲ್ಲಾಗಲಿ, ಆಧುನಿಕ ಸೌಲಭ್ಯಗಳುಳ್ಳ ರೆಕಾರ್ಡಿಂಗ್ ಸ್ಟುಡಿಯೋದಲ್ಲೇ ಆಗಲಿ, ರಾಗವು ಅರಳಲಾರದು.’ ಶ್ರೀಮತಿ ದೇವಿ

ಶ್ರೀದೇವಿ ಕಳಸದ | Shridevi Kalasad

|

Mar 03, 2022 | 11:22 AM

ನಾಕುತಂತಿಯ ಮಿಡಿತ | Naakutantiya Midita : ಪಂ. ಕುಮಾರ ಗಂಧರ್ವ, ವಸಂತರಾವ್ ದೇಶಪಾಂಡೆ ಅನೇಕರ ಹಳೆಯ ರೆಕಾರ್ಡಿಂಗ್‌ಗಳಲ್ಲಿ ಶ್ರೋತೃಗಳು ‘ವಾಹ್, ವಾಹ್, ಕ್ಯಾ ಬಾತ್’ ಎನ್ನುವುದು ಎಷ್ಟೋ ಬಾರಿ ಸಂಗೀತಕ್ಕಿಂತಲೂ ಜೋರಾಗಿ ಕೇಳುತ್ತಿರುತ್ತದೆ. ಸಂಗೀತ ಪ್ರೇಮಿಗಳ ಸಮೂಹದಿಂದ ದೊರಕುವ ಈ ಮೆಚ್ಚುಗೆಯ ‘ದಾದ್’ ಕಲಾವಿದರಲ್ಲಿ ಸ್ಫೂರ್ತಿ ತುಂಬುತ್ತದೆ. ಕಲಾವಿದರ ಸೃಜನಶೀಲತೆ ಗರಿಗೆದರುವುದೇ ‘ಬೈಠಕ್’ ಎಂಬ ಆಪ್ತ ವಾತಾವರಣದಲ್ಲಿ. ಇದು ಹಿಂದೂಸ್ತಾನಿ ಸಂಗೀತ ಪಡೆದ ಬಹುದೊಡ್ಡ ವರದಾನ. ಇಲ್ಲಿ ಕಲಾವಿದರು, ಕೇಳುಗರ ನಡುವೆ ವಿಶೇಷ ಸಂಬಂಧವೇರ್ಪಟ್ಟು ಯಾವ ಔಪಚಾರಿಕತೆಯೂ ಇಲ್ಲದ ಸಂವಹನ ಸಾಧ್ಯವಾಗುತ್ತದೆ. ಕಲಾವಿದರು ಹಾಡುತ್ತಲೇ ಶಿಷ್ಯನಿಗೆ ಪಾಠ ಹೇಳುತ್ತಾರೆ, ಸಾಥಿದಾರರೊಂದಿಗೆ ಕೊಡು-ಕೊಳ್ಳುವಿಕೆ ನಡೆಸುತ್ತಾ ರಾಗವನ್ನು ವಿಸ್ತರಿಸುತ್ತಾರೆ, ಹೊಸ ಪ್ರಯೋಗಗಳನ್ನು ಮಾಡುವ ಧೈರ್ಯದೊಂದಿಗೆ ತಮ್ಮನ್ನು ತಾವೇ ಪರೀಕ್ಷಿಸುತ್ತಿರುತ್ತಾರೆ. ತಾವೂ ಕಲಿಯುತ್ತಿರುತ್ತಾರೆ, ಸಹೃದಯಿ ಕೇಳುಗರ ಬೇಕು-ಬೇಡಗಳನ್ನು ಅವರ ಹಾವಭಾವಗಳ ಮೂಲಕ ಗ್ರಹಿಸುತ್ತಾ ಕೇಳುವಿಕೆಯ ಆನಂದವನ್ನು ಹೆಚ್ಚಿಸುತ್ತಾರೆ. ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)

*

(ಮಿಡಿತ : 5)

ಧಾರವಾಡಕ್ಕೆ ಬಂದ ಮೇಲೆ ಇಂಥ ‘ಬೈಠಕ್ ಸಂಸ್ಕೃತಿ’ಯ ಪರಿಚಯ ಇಲ್ಲಿಯ ‘ಅವನಿ ರಸಿಕರ ರಂಗ’ದ ಮೂಲಕ ನನಗಾಯಿತು. ‘ಅವನಿ ರಸಿಕರ ರಂಗ’ವು ಧಾರವಾಡ ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಚಿರಸ್ಥಾಯಿಯಾಗುವಂಥ ಕೆಲಸವನ್ನು ಮಾಡಿದ ಪುಟ್ಟ ಸಂಸ್ಥೆ. ಅಕಾಲಿಕವಾಗಿ ಮರಣ ಹೊಂದಿದ ತಮ್ಮ ಮಗನ ಹೆಸರಿನಲ್ಲಿ ಇದನ್ನು ಆರಂಭಿಸಿದ ದೆಹಲಿಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಎನ್.ಪಿ.ಭಟ್ ಹಾಗೂ ಅವರ ಪತ್ನಿ ಯಶೋದಾ ಭಟ್ (ವಿ.ಕೃ. ಗೋಕಾಕ್ ಅವರ ಮಗಳು) ದಂಪತಿ, ಹಲವು ವರ್ಷಗಳ ಕಾಲ ‘ಅವನಿ’ ಎಂಬ ಸಾಹಿತ್ಯಿಕ ಪತ್ರಿಕೆಯನ್ನೂ, ಕೆಲವು ಮಹತ್ವದ ಪುಸ್ತಕಗಳ ಪ್ರಕಟಣೆಯನ್ನೂ ಮಾಡಿದ್ದಾರೆ.

ತಮ್ಮ ಮನೆಯ ಮಾಳಿಗೆಯಲ್ಲಿ ನಿಯಮಿತವಾಗಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಇವರಿಗೆ ಸಂಗೀತ ಮತ್ತು ಸಂಗೀತಗಾರರ ಬಗ್ಗೆ ತುಂಬಾ ಪ್ರೀತಿ. 30 ರಿಂದ 40 ಜನ ಕೆಳಗೆ ಕುಳಿತು ಕೇಳಬಹುದಾಗಿದ್ದ ಈ ಕೊಠಡಿಯಲ್ಲಿ ಬಹಳ ಆಪ್ತವಾಗಿ ಕಾರ್ಯಕ್ರಮ ನಡೆಯುತ್ತಿತ್ತು. ಹಾಡುಗಾರರ ಎದುರಿನಲ್ಲೇ ನೇರವಾಗಿ ಕೂತು ಕೇಳಲು ಸಾಧ್ಯವಾಗುವ ಕಾರಣ ಸಂಗೀತದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಹಲವಾರು ಅಂಶಗಳನ್ನು ಕಲಿಯಲು ಸಾಧ್ಯವಾಗುತ್ತವೆ. ನಮ್ಮಂಥ ವಿದ್ಯಾರ್ಥಿಗಳಿಗೆ ಅಳುಕನ್ನು ಬಿಟ್ಟು ಮುಂದೆ ಹೋಗಿ ಕಲಾವಿದರನ್ನು ಪರಿಚಯ ಮಾಡಿಕೊಳ್ಳಿ ಎಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದ ಎನ್. ಪಿ. ಭಟ್ ಅವರಿಗೆ ಯಾವುದೋ ಊರಿನಿಂದ ಧಾರವಾಡಕ್ಕೆ ಒಬ್ಬಳೇ ಬಂದು ಸಂಗೀತ-ಪುಸ್ತಕ ಎಂದು ಊರಲೆಯುತ್ತಿದ್ದ ನನ್ನನ್ನು ಕಂಡರೆ ವಿಶೇಷ ಪ್ರೀತಿ. ಅದಕ್ಕೆ ನನ್ನ ಅಮ್ಮ ಅವರ ಅಜ್ಜನ ಮನೆಯ ಕುಟುಂಬದಿಂದ ಬಂದವಳು ಎಂಬ ಕಾರಣವೂ ಇತ್ತು.

ಮುಖ್ಯ ಕಾರ್ಯಕ್ರಮಕ್ಕಿಂತ ಮೊದಲು ಪ್ರಾರ್ಥನೆ ಹೇಳುವುದು, ಕಲಾವಿದರ ಪರಿಚಯ ಓದಿ ನಿರೂಪಣೆ ಮಾಡುವುದು, ತಾನಪುರಾ ಸಾಥ್ ಮಾಡುವುದು, ಟೇಪ್ ರೆಕಾರ್ಡರ್ ಪಕ್ಕದಲ್ಲಿ ಇದ್ದುಕೊಂಡು ಕಾರ್ಯಕ್ರಮವನ್ನು ಮುದ್ರಿಸಿಕೊಳ್ಳುವುದು, ಹಳೆಯ ಕ್ಯಾಸೆಟ್​ಗಳಲ್ಲಿದ್ದ ಸಂಗೀತವನ್ನು ಕೇಳಿ ರಾಗ-ಕಲಾವಿದರನ್ನು ಗುರುತಿಸಿ ಲೇಬಲ್ ಮಾಡುವುದು ಇವೆಲ್ಲಾ ನಾನು ಅಲ್ಲಿ ಪ್ರೀತಿಯಿಂದ ಮಾಡುತ್ತಿದ್ದ ಕೆಲಸಗಳು. ಈ ಎಲ್ಲಾ ಕೆಲಸಗಳನ್ನು ಎನ್. ಪಿ. ಭಟ್ ಅವರಂಥ ಹಿರಿಯರ ಮಾರ್ಗದರ್ಶನದಲ್ಲಿ ಮಾಡುವ ಮೂಲಕ ನಾನು ತುಂಬಾ ಕಲಿತೆ.

ಇದನ್ನೂ ಓದಿ : Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು

Naakutantiya Midita Column Classical Vocalist Shrimathi Devi discussed Baithak Trend

ಎನ್. ಪಿ. ಭಟ್ , ಯಶೋದಾ ಭಟ್ ದಂಪತಿಯೊಂದಿಗೆ ಗಾಯಕಿ ಸ್ಮಿತಾ ಬೆಳ್ಳೂರ

ಹಾಗೆಯೇ ನಮಗೆ ಕಲಿಕೆ, ಅನುಭವ, ಪರಿಪೂರ್ಣತೆ (Perfection), ಸಂಭ್ರಮಗಳ ಹೊರೆಯನ್ನು ಹೊತ್ತು ತರುತ್ತಿದ್ದದ್ದು ನಮ್ಮ ತರಗತಿಯ ಗುರುಪೂರ್ಣಿಮೆ ಬೈಠಕ್‌ಗಳು. ವರ್ಷವಿಡೀ ಕಾದು, ಹಲವು ತಿಂಗಳುಗಳ ತಯಾರಿ ಮಾಡಿ, ಕೊನೆಗೊಮ್ಮೆ ಎರಡು ದಿನವಿಡೀ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪುರಾಣಿಕಮಠ ಗುರುಗಳ ಎಲ್ಲಾ ಹಿರಿ-ಕಿರಿಯ ಶಿಷ್ಯರು, ಅತಿಥಿ ಕಲಾವಿದರ ಸಂಗೀತ ಪ್ರಸ್ತುತಿ ನಡೆದು ಕೊನೆಯಲ್ಲಿ ಗುರುಗಳ ‘ಮಂಗಲ ಸಂಗೀತ’ದೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಎಲ್ಲರೂ ತಾವು ಹಾಡುವ ರಾಗಗಳನ್ನು ಆಯ್ದುಕೊಂಡು ಆ ರಾಗದಲ್ಲಿ ಗುರುಗಳಿಂದ ಹೆಚ್ಚಿನ ಪಾಠ ಹೇಳಿಸಿಕೊಂಡು, ವಿಶೇಷವಾದ ತಯಾರಿ ಮಾಡುತ್ತಿದ್ದೆವಾದ ಕಾರಣ ಆ ಸಮಯದಲ್ಲಿ ಗುರುಗಳ ಮನೆಯಲ್ಲಿ ಬೆಳಗ್ಗಿನಿಂದ ರಾತ್ರಿ 9ರವರೆಗೂ ‘ಸಮರೋಪಾದಿ’ಯಲ್ಲಿ ಅಭ್ಯಾಸ ನಡೆದಿರುತ್ತಿತ್ತು. ಎಲ್ಲರೂ ಪಾಳಿ ಹಚ್ಚಿಕೊಂಡು ಕಾದು ಸರದಿ ಪ್ರಕಾರ ಹಾಡುವುದನ್ನು ನೆನೆದರೆ ಮೋಜೆನಿಸುತ್ತದೆ.

ಇದರಿಂದ ನಮಗಾದ ಲಾಭವೆಂದರೆ ಬೇರೆ ಬೇರೆ ರಾಗಗಳನ್ನು ಸತತವಾಗಿ ಕೇಳಲು ದೊರೆಯುವ ಕಾರಣ ಹಲವಾರು ರಾಗಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಜೊತೆಗೆ ಬೇರೆ ಬೇರೆ ವಿದ್ಯಾರ್ಥಿಗಳು ಮಾಡುತ್ತಿದ್ದ ಬೇರೆ ಬೇರೆಯದೇ ಆದ ತಪ್ಪುಗಳನ್ನು ಗುರುಗಳು ತಿದ್ದುತ್ತಿದ್ದ ಕಾರಣ ಸರಿ-ತಪ್ಪುಗಳ ವಿವೇಚನೆ ನಮ್ಮಲ್ಲಿ ಬೆಳೆಯಿತು. ‘ಎಲ್ಲಿ ಏನು ಹಾಡಬೇಕು, ಎಷ್ಟು ಹಾಡಬೇಕು, ಹೇಗೆ ಹಾಡಬೇಕು’ ಎನ್ನುವುದು ತುಂಬಾ ಮುಖ್ಯವಾದ ವಿಷಯ. ಕಣ್ಣ ಮುಂದೆ ಮಾದರಿಗಳಿದ್ದಾಗ ಈ ಅಂಶಗಳು ಸುಲಭವಾಗಿ-ಸಹಜವಾಗಿ ಮನವರಿಕೆಯಾಗುತ್ತವೆ. ಎಲ್ಲರೂ ಸೇರಿ ತಯಾರಿ ನಡೆಸಿ, ಕಾರ್ಯಕ್ರಮದ ದಿನ ಪ್ರತಿಯೊಬ್ಬರ ಪ್ರಸ್ತುತಿ ಕೇಳಿ, ಜೊತೆಯಲ್ಲಿ ಎಲ್ಲರೂ ಊಟ ಮಾಡಿ, ಹಿರಿಯರ ಗಾಯನದಿಂದ ಬೇಕಾದ ಅಂಶಗಳನ್ನು ನೋಟ್ಸ್ ಮಾಡಿಕೊಂಡು, ಇಷ್ಟವಾದ ರಾಗಗಳ ಬಗ್ಗೆ ಮೋಹ ಬೆಳೆಸಿಕೊಂಡು ಕಾರ್ಯಕ್ರಮ ಮುಗಿಯುವ ಹಂತ ತಲುಪಿ ಗುರುಗಳು ಹಾಡಲು ಕೂತೊಡನೆ ಅಳು ಬಂದುಬಿಡುತ್ತಿತ್ತು. ಮುಂದೆ ಸುಮಾರು ದಿನಗಳವರೆಗೆ ಯಾರು ಹಾಡಿದ್ದು ಚೆನ್ನಾಗಿ ಬಂತು, ಯಾರು ಏನು ತಪ್ಪು ಮಾಡಿದರು ಇತ್ಯಾದಿ ವಿಷಯದ ಚರ್ಚೆ ಕ್ಲಾಸಿನಲ್ಲಿ ನಡೆದೇ ಇರುತ್ತಿತ್ತು.

ಇದನ್ನೂ ಓದಿ : Music: ‘ಶ್ರೋತಾ ಹೌಸ್​’ನ ಲಿಟಲ್ ಖಯಾಲ್ ಯೂಟ್ಯೂಬ್ ಸೀರೀಸ್ ನೋಡಿಲ್ಲವಾ?

Naakutantiya Midita Column Classical Vocalist Shrimathi Devi discussed Baithak Trend

ಲೇಖಕಿ ದಮಯಂತಿ ನರೇಗಲ್ ಅವರ ಮನೆಯಲ್ಲಿ ನಡೆದ ಬೈಠಕ್​ನಲ್ಲಿ ಎನ್.ಪಿ. ಭಟ್ ದಂಪತಿ

ಇಂದಿನ ಮಕ್ಕಳಿಗೆ ಎದುರಾದ ಬಹುದೊಡ್ಡ ಕೊರತೆ ಎಂದರೆ ಈ ಮಾದರಿಗಳ ಕೊರತೆ. ಎಲ್ಲರೂ ಸಮಯದ ದಾಸರಾದ ಕಾರಣ, ಅವರವರ ಹೊತ್ತಿಗೆ ಸರಿಯಾಗಿ ಬಂದು ಪಾಠ ಹೇಳಿಸಿಕೊಂಡು ಹೋಗುತ್ತಾರೆ. ಹಿಂದಿನವರ ಅಥವಾ ಮುಂದಿನವರ ಪಾಠ ಕೇಳುವಷ್ಟು ಸಮಯ ಅವರಿಗಿರುವುದಿಲ್ಲ. ‘ಪ್ರದರ್ಶಕ ಕಲೆ’ಎಂದೇ ಹೆಸರು ಪಡೆದ ಸಂಗೀತ ಅರಳಲು ಶ್ರೋತೃಗಳು ಅತ್ಯಗತ್ಯ. ಅಲ್ಲದೇ ಹಾಡುತ್ತಾ ಹಾಡುತ್ತಾ ‘ನಾವೆಲ್ಲಿದ್ದೇವೆ’, ‘ಕೇಳುಗರನ್ನು ತಲುಪಲು ಸಾಧ್ಯವಾಯಿತೇ’ ಎನ್ನುವುದನ್ನು ನೋಡಿಕೊಳ್ಳುವುದರ ಅಗತ್ಯ ಕಲಾವಿದರಿಗಿರುತ್ತದೆ. ಇದರಿಂದ ಬೆಳೆಯುವವರಿಗೆ ತಮ್ಮ ಮುಂದಿನ ದಾರಿ ಕಾಣುತ್ತದೆ, ಪ್ರೋತ್ಸಾಹ ಸಿಗುತ್ತದೆ. ಈಗ ಎಲ್ಲಾ ಕಡೆಯಲ್ಲೂ ನಾವು ಕಾಣುವ ದೊಡ್ಡ ದೊಡ್ಡ ಸಭಾಗಳು ಅದಾಗಲೇ ಈ ಕ್ಷೇತ್ರದಲ್ಲಿ ಕಾಲೂರಿರುವ ಕಲಾವಿದರಿಗೆ ಅವಕಾಶ ಕೊಡಲು ಸಾಧ್ಯವಾಗುತ್ತದಲ್ಲದೆ, ಬೆಳೆಯುವ ಕಲಾವಿದರಿಗೆ ಈ ವೇದಿಕೆಗಳು ದೊರೆಯುವುದು ಸಾಧ್ಯವಿಲ್ಲ. ಪ್ರತಿಯೊಂದು ಸಂಗೀತ ತರಗತಿಯ ಮಟ್ಟದಲ್ಲಿ, ಸ್ನೇಹಿತರ ವಲಯದಲ್ಲಿ ಹೀಗೆ ನಮ್ಮ ಆಪ್ತರ-ನಮ್ಮ ಶ್ರೋತೃಗಳ ಗುಂಪನ್ನು ನಾವೇ ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ.

ಈಗಿನ ಬದಲಾದ ಸಂದರ್ಭದಲ್ಲೂ ಇದನ್ನು ಕೆಲವು ಮಾರ್ಪಾಡುಗಳೊಂದಿಗೆ ಬಳಸಿಕೊಳ್ಳಬಹುದು. ಫೇಸ್​ಬುಕ್​ನಲ್ಲಿ ಪ್ರೈವೇಟ್ ಆದ ಗುಂಪೊಂದನ್ನು ಮಾಡಿ, ಅದರಲ್ಲಿ ವಿದ್ಯಾರ್ಥಿಗಳು ಲೈವ್ ಆಗಿ ಬಂದು ಹಾಡಬಹುದು. ಉಳಿದ ಗೆಳೆಯರು, ಗುರುಗಳು ಆ ಹೊತ್ತಿಗೆ ಆನ್‌ಲೈನ್​ನಲ್ಲಿ ಒಟ್ಟು ಸೇರಲು ಸಾಧ್ಯವಿದೆ. ನಂತರದಲ್ಲಿ ಪ್ರಸ್ತುತಿ ಬಗ್ಗೆ ಚರ್ಚೆ-ತಿದ್ದುಪಡಿ ಇತ್ಯಾದಿಗಳನ್ನು ಮಾಡಲು ಸಾಧ್ಯವಿದೆ. ಕೊರೊನಾದ ಸಂದರ್ಭದಲ್ಲಂತೂ ಈ ರೀತಿಯ ಅನೇಕ ಸಾಧ್ಯತೆಗಳ ಶೋಧಗಳಾಗಿವೆ. ಸೋದಾಹರಣ ಉಪನ್ಯಾಸ, ಶಿಬಿರಗಳು ಎಲ್ಲವೂ ನಡೆದಿವೆ.

ನಮ್ಮೊಳಗಿನ ಜೀವಜಲವನ್ನು ಬತ್ತದಂತೆ ಕಾಪಾಡಿಕೊಳ್ಳಲು, ಕಲಾವಂತಿಕೆಯನ್ನು ಉಳಿಸಿಕೊಳ್ಳಲು ‘ಬೈಠಕ್ ಅಥವಾ ಮೆಹಫಿಲ್ ಸಂಸ್ಕೃತಿ’ಯು ಕೈ ತಪ್ಪದಂತೆ ನೋಡಿಕೊಳ್ಳಬೇಕು. ದೊಡ್ಡ ಸಭಾಂಗಣದೊಳಗಿನ ಕತ್ತಲಿನಲ್ಲಾಗಲಿ, ಸಾವಿರಾರು ಜನ ಸೇರಿದ ಪೆಂಡಾಲಿನ ಅಡಿಯಲ್ಲಾಗಲಿ, ಆಧುನಿಕ ಸೌಲಭ್ಯಗಳುಳ್ಳ ರೆಕಾರ್ಡಿಂಗ್ ಸ್ಟುಡಿಯೋದಲ್ಲೇ ಆಗಲಿ, ರಾಗವು ಅರಳಲಾರದು. ಮನಸ್ಸು ಮನಸ್ಸುಗಳ ಮಧ್ಯೆ ನಡೆಯುವ ಸಂವಹನ ಕಾಣದಂತೆ ಕೆಲಸ ನಡೆಸುತ್ತಿದ್ದಾಗಲೇ ಮುದಗೊಳಿಸುವ ಸಂಗೀತ ಹೊರಬರಲು ಸಾಧ್ಯ.

(ಮುಂದಿನ ಮಿಡಿತ : 17.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಮಿಡಿತ : ನಾಕುತಂತಿಯ ಮಿಡಿತ: ಕ್ಯಾಸೆಟ್​ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು

Follow us on

Most Read Stories

Click on your DTH Provider to Add TV9 Kannada