Literature: ನೆರೆನಾಡ ನುಡಿಯೊಳಗಾಡಿ; ‘ನಾ ಗಂಡಸು, ನೂರು ಹೆಂಗಸರ ಬಳಿ ಹೋಗ್ತೇನೆ ಬರ‍್ತೇನೆ, ನೀ ಯಾರು ಕೇಳಲು?’
Sivasankari Chandrasekaran : “ಈ ಡ್ರೆಸ್ ಎಲ್ಲಿಯದು ಗೊತ್ತುಂಟಾ? ಒಂದು ಚಿತ್ರದಲ್ಲಿ ‘‘ರಾಜಾ ನನ್ನ ಮೇಲೆ ಮೋಹಗೊಳ್ಳು’’ ಅಂತಾ ರತ್ನಾ ಹಾಡಿ ಆಡಿದುದನ್ನು ನೋಡಿ ಮರುಳಾಗಿ ಅವಳ ನೆನಪಿಗಾಗಿ ಅವಳ ಬಳಿಯಿಂದ ಬೇಡಿ ತೆಗೆದುಕೊಂಡು ಬಂದಿದ್ದೇನೆ! ಭದ್ರವಾಗಿ ಇಟ್ಟುಕೊ. ನಾಟ್ಯವಂತೂ ಇಲ್ಲ; ಇದನ್ನು ಹಾಕಿಕೊಂಡರಾದರೂ ನೀ ಸ್ವಲ್ಪ ಸುಮಾರಾಗಿ ಕಾಣ್ತೀಯಾ ನೋಡ್ತೇನೆ’’
ನೆರೆನಾಡ ನುಡಿಯೊಳಗಾಡಿ |NereNaada Nudiyolagaadi : “ಯಾಕೆ, ಬಂದರೇನಂತೆ? ಈ ಫೇಸ್‌ಗೆ ಏನು ಕೊರತೆ?’’, “ದಯವಿಟ್ಟು ಬಿಟ್ಬಿಡಿ, ನಿಮ್ಮ ಸ್ನೇಹಿತರ ಎದುರಿಗೂ ಹೀಗೆ ನನ್ನನ್ನು ಬರ ಹೇಳ್ಬೇಡಿ. ಒಬ್ಬೊಬ್ಬರೂ ನೋಡೋ ನೋಟ… ಛೇ’’, “ಲೇ ನೋಡಿದ್ರೇನಂತೆ? ಹೆಂಗಸರಿಗೆ ದೇವರು ಯಾತಕ್ಕೆ ಸುಂದರವಾದ ದೇಹವನ್ನು ನೀಡಿದ್ದಾನೆ? ಗಂಡಸ್ರು ನೋಡಿ ರಂಜಿಸಲು ತಾನೇ?’’, ಅವಳ ವೇದನೆಯೋ, ಅವಸ್ಥೆಯೋ ಅರ್ಥವಾಗುತ್ತಿಲ್ಲವೋ ಎಂಬಂತೆ ರೇಗಿಸುತ್ತಾ ಚಪ್ಪಾಳೆ ತಟ್ಟುತ್ತಾ ನಗುತ್ತಿದ್ದನು. ಹೀಗೇ ಒಂದು ಬಾರಿ, ಚೆನ್ನೈಗೆ ಹೋಗಿ ಹಿಂತಿರುಗಿದವನ ಕೈಯಲ್ಲಿ ದೊಡ್ಡದಾಗಿ ಪೊಟ್ಟಣ. ಮಲಗಲು ಬಂದವಳ ಕೈಗಳಲ್ಲಿ ಅವುಗಳನ್ನಿತ್ತು ‘ತಕ್ಷಣ ಉಟ್ಟುಕೊ’ ಎಂದನು. ಬಿಚ್ಚಿದರೆ ಈರುಳ್ಳಿ ಸಿಪ್ಪೆ ಬಣ್ಣದ ಬಟ್ಟೆಯಲ್ಲಿ ನೈಟ್ಡ್ರೆಸ್, ಮ್ಯಾಚಿಂಗ್ ಬ್ರಾ, ಕಾಚಾ. “ಯಾ..ಕೆ.. ಯಾತಕ್ಕೆ ಇದೆಲ್ಲಾ?”, “ಇದೆಲ್ಲ ಹಾಕ್ಕೊಂಡು ನಿನ್ನ ಶೃಂಗಾರ ನೋಡಲು! ಬುದ್ಧಿಯಿಲ್ಲದೆ ಮಾತನಾಡಿದ್ರೆ ನಂಗೆ ಕೋಪ ಬರುತ್ತೆ. ಹೋಗು – ಎಲ್ಲವನ್ನೂ ಹಾಕ್ಕೊಂಡು ಜಂ ಅಂತಾ ನನ್ನ ಮುಂದೆ ಬಾ ನೋಡೋಣ.’’
ಕಥೆ : ಒಂದು ಮಾತು | ತಮಿಳು ಮೂಲ : ಶಿವಶಂಕರಿ ಚಂದ್ರಶೇಖರನ್ | ಕನ್ನಡಕ್ಕೆ : ಡಾ. ಮಲರ್ ವಿಳಿ ಕೆ.
*
ಭಾಗ 5
“ನ… ನನಗೆ ಸಂಕೋಚವಾಗ್ತಿದೆ ಬೇಡಾಂದ್ರೆ ರೀ’’
“ಯಾಕೆ ಸಂಕೋಚ ನಾನು ಯಾರು? ನಿನ್ನ ಗಂಡ ತಾನೇ ? ಹದಿನೆಂಟು ವಯಸ್ಸಲ್ಲಿ ಇದನ್ನು ಹಾಕದೆ ಯಾವಾಗ ಹಾಕುವಿ? ವಾದ ಮಾಡುತ್ತಾ ನಿಲ್ಲಬೇಡ; ಆಸೆಯಿಂದ ಕೊಂಡುಕೊಂಡು ಬಂದಿದ್ದೀನಲ್ಲಾ..?’’ ರೂಢಿಯಂತೆ ಅಂದೂ ಸಹ ಸೆಲ್ವಿ ಹೋಗಲಿ ಅಂತ ಸಹಿಸಿಕೊಂಡಳು. ತಾಳಿ ಕಟ್ಟಿದವರು ಆಸೆ ಪಡುತ್ತಿದ್ದಾರೆ. ನನಗೆ ಹಿಡಿಸುತ್ತೋ ಇಲ್ಲವೊ ಅವರ ಬಯಕೆಯನ್ನು ನೆರವೇರಿಸಬೇಕಾದುದು ನನ್ನ ಕರ್ತವ್ಯ – ಎಂಬಂತೆ ತನ್ನೊಳಗೆ ಸಮಾಧಾನಗೈದುಕೊಳ್ಳುತ್ತಾ ಅವುಗಳನ್ನು ಧರಿಸಿ ಬಂದವಳನ್ನು ಎಂದಿನಂತೆ ನಡೆಯಲು, ಬಾಗಲು, ಮಲಗಲು ತಿರುಗಿ ಮಲಗಲು ಹೇಳಿ, ರಂಜಿಸುತ್ತಾ ಸುಂದರ “ಈ ಡ್ರೆಸ್ ಎಲ್ಲಿಯದು ಗೊತ್ತುಂಟಾ? ಒಂದು ಚಿತ್ರದಲ್ಲಿ ‘‘ರಾಜಾ ನನ್ನ ಮೇಲೆ ಮೋಹಗೊಳ್ಳು’’ ಅಂತಾ ರತ್ನಾ ಹಾಡಿ ಆಡಿದುದನ್ನು ನೋಡಿ ಮರುಳಾಗಿ ಅವಳ ನೆನಪಿಗಾಗಿ ಅವಳ ಬಳಿಯಿಂದ ಬೇಡಿ ತೆಗೆದುಕೊಂಡು ಬಂದಿದ್ದೇನೆ! ಭದ್ರವಾಗಿ ಇಟ್ಟುಕೊ. ನಾಟ್ಯವಂತೂ ಇಲ್ಲ; ಇದನ್ನು ಹಾಕಿಕೊಂಡರಾದರೂ ನೀ ಸ್ವಲ್ಪ ಸುಮಾರಾಗಿ ಕಾಣ್ತೀಯಾ ನೋಡ್ತೇನೆ’’ ಎಂದು ಹೇಳಿ ನಕ್ಕಾಗ, ಆ ರಸಿಕತೆಯನ್ನು ಸ್ವೀಕರಿಸಲು ಸಾಧ್ಯವಾಗದೆ ಅವಳು ಅಂದು ನುಚ್ಚು ನೂರಾದಳು.
ಕಟ್ಟಿಕೊಂಡ ಹೆಂಡತಿಯನ್ನು ಯಾರೋ ಒಬ್ಬ ನಾಟ್ಯಗಾರ್ತಿಯೊಟ್ಟಿಗೆ ಹೋಲಿಸಿ ಅವಳು ಧರಿಸಿದ ವಸ್ತ್ರವನ್ನು ತೆಗೆದುಕೊಂಡುಬಂದು, ಧರಿಸಲು ನೀಡಿದ್ದಾನಲ್ಲಾ, ಇದು ಎಂಥ ಅಸಹ್ಯ? ಕಾಸಿಗಾಗಿ ದೇಹವನ್ನು ತೋರಿಸಿ ಆಡುವ ಅವಳೂ ನಾನೂ ಒಂದೇ ಥರವೇ? ಮನಸ್ಸು ಕಳವಳಕ್ಕೊಳಗಾದರೂ ಯಾವುದನ್ನೂ ಹೊರಗೆ ತೋರಿಸಿಕೊಳ್ಳಲಾಗದೆ ಸೆಲ್ವಿ ತಾನಾಗಿಯೇ ಪ್ರೀತಿ ತೋರಿದ ದಿನಗಳಲ್ಲಿಯೂ ಮತ್ತೆ ಮತ್ತೆ ಆಕೆಗೆ ಸುಂದರ, ತೊಂದರೆ ಕೊಡುತ್ತಲೇ ಇರುತ್ತಿದ್ದ.
“ಈ ಡ್ರೆಸ್ ಹಾಕಿಕೊಳ್ಳುವುದಿಲ್ಲವೇ? ಯಾಕೆ ನಾಚಿಕೆಯಾಗುತ್ತಾ? ಯಾಕೆ ನಾಚಿಕೆ, ನಿನ್ನ ಮುಖಕ್ಕೆ ಹೊಂದೋಲ್ಲಾಂತ ಹೇಳು ಒಪ್ಕೋಳ್ತೇನೆ.’’
“ಏನೇ ಆಗಲಿ ರತ್ನಾ ರತ್ನಾನೇ! ಅದೆಂತಹ ಕೋಮಲತೆ, ಏನು ನಯ ನಾಜೂಕು! ನಿಲ್ಲುವುದು, ನಡೆಯುವುದು, ನೋಡುವುದು, ಎಲ್ಲವೂ ಸೊಗಸು. ನೀನೂ ಇದ್ದೀಯಲ್ಲ… ಎಮ್ಮೆ ಥರ.”
“ಒಂದು ವಾರದಿಂದ ಮನೆಗೆ ಯಾಕೆ ಬರಲಿಲ್ಲಾಂತ ಕೇಳ್ತಿಯಲ್ಲ… ಇಲ್ಲಿ ನಂಗೆ ಏನಿದೆ ಬಂದು ಕೂತ್ಕೊಳೋಕೆ? ನಿನ್ನ ಅಳುಮೋರೆಯನ್ನು, ಅಪ್ಪ ಅಮ್ಮನ ಸಿಂಡರಿಸೋ ಮೋರೆಯನ್ನು ನೋಡಿ ನೋಡಿ ಬೇಸರವಾಗಿದೆ. ಇವತ್ತಾದ್ರೂ ಬಂದಿದ್ದೇನೆ ಅದಕ್ಕೆ ಸಂತೋಷ ಪಟ್ಟುಕೋ.’’
ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಬೇತಾಳ ಮತ್ತೆ ಮರ ಹತ್ತಿ ಕುಳಿತುಬಿಟ್ಟಿತೋ, ಮಾರಿಯಮ್ಮ ಕಣ್ಣು ತೆರೆದಳೋ
“ಬರಲ್ವಾ? ಸರಿ ಹೋಗೇಲೇ- ನಾನು ಗಂಡಸು, ನೂರು ಹೆಂಗಸರ ಬಳಿ ಹೋಗ್ತೇನೆ, ಬರ‍್ತೇನೆ. ನೀ ಯಾರು ನನ್ನ ಕೇಳಲು? ನಿಮ್ಮಪ್ಪನ ಮನೆಯ ಸ್ವತ್ತನ್ನು ಬಾಚ್ಕೊಂಡು ಹೋಗಲಿಲ್ಲ. ನನ್ನ ಹಣವನ್ನು ಖರ್ಚು ಮಾಡ್ತೀನಿ. ಬಾಯಿ ಮುಚ್ಚಿಕೊಂಡು ಒಂದು ಮೂಲೇಲಿ ಬಿದ್ದುಕೊಂಡು ಇದ್ರೆ ಇರು – ಇಲ್ಲದಿದ್ರೆ ತೊಲಗು.’’ ಮಾತುಮಾತಿಗೆ ತೊಲಗು, ತೊಲಗು, ಎಂದು ಬಯ್ಯುತ್ತಿದ್ದವನು, ಒಂದು ದಿನ ಅವನೇ ತಂದೆಯ ಬಳಿ ಜಗಳ ಮಾಡಿ ಆಸ್ತಿಯಲ್ಲೂ ತನ್ನ ಭಾಗವನ್ನು ವಿಭಾಗಿಸಿ ತೆಗೆದುಕೊಂಡು ಆ ಹಾಳಾದೋಳು ರತ್ನಾ ಮನೆಗೇ ತೊಲಗಿ ಹೋದ. ಹೊರಡುವ ಮುನ್ನ ಮಾತ್ರ ಅವನನ್ನು ಹೆತ್ತವರು ಹೊಟ್ಟೆಯುರಿದು ಗೋಳಾಡಿ ಕಿರುಚಿದರು.
“ಲೇ… ರ್ಯಾಸ್ಕಲ್! ಮಹಾಲಕ್ಷ್ಮೀ ಥರ ಇರುವ ಇವಳನ್ನು ತುಳಿದು ಆ ಸೂಳೆಯೊಡನೆ ಕುಟುಂಬ ನಡೆಸಲು ಹೋಗ್ತಿನಂತಾ ಹೇಳ್ತಿಯಲ್ಲಾ, ಅಯ್ಯೋ – ದೇವ್ರೆ ನಿನ್ನ ಬಾಯಿ ಸೇದೋಗ! ನೀ ಚೆನ್ನಾಗಿರ‍್ತೀಯಾ? ನಿಂಗೆ ಇದು ನ್ಯಾಯಾ ಅನ್ನಿಸುತ್ತಾ? ಲೋ ಸುಂದರ! ಹೆಣ್ಣಿನ ಶಾಪ ಸುಮ್ನೆ ಬಿಡೋಲ್ಲ ಕಣೋ. ಬೇಡಾ ಕಣೊ, ಆ ಚಂಡಾಳಿಗೆ ಎಷ್ಟು ಕೊಡ್ಬೇಕೂಂತಾ ಬಯಸ್ತೀಯೋ ಅದನ್ನು ಅವಳ ಮುಖದಲ್ಲಿ ಬೀಸಿ ಒಗೆದು ಇಲ್ಲೇ ಬಂದ್ಬಿಡೋ. ಇವತ್ತು ನೀ; ನಾಳೆ ಅವಳಿಗೆ – ಯಾರೋ? ಹೊಟ್ಟೆ ಉರಿಯುತ್ತದೆ ಕಣೋ – ನನ್ನ ಸೊಸೆಗೆ ಏನು ಕೊರತೆ? ಅವಳು ರಾಣಿ ಕಣೋ ಯೋಚಿಸಿ ನಿರ್ಧಾರ ಬದಲಿಸ್ಕೊಳೊ’’
ಅವನ ಅಪ್ಪ ಪುನಃ ಪುನಃ ಕಿರುಚಲು ಗೆಳೆಯ ರಂಗನಾಥನ್ ಜೊತೆ ಕೈಯಲ್ಲಿ ಸಿಗರೇಟಿನೊಡನೆ ನಿಂತಿದ್ದ ಸುಂದರ ಅಸಡ್ಡೆಯಿಂದ ನಕ್ಕನು.
“ಇವಳಿಗೆ ಏನ್ ಕೊರತೆ ಅಂತಾನಾ ಕೇಳ್ತೀರಾ ? ಎಲ್ಲವೂ ಕೊರತೇನೇ – ಯಾವುದು ಸರಿಯಾಗಿ ಇದೆ- ಮೊದಲು ಅದ್ನ ಹೇಳಿ?’’
‘‘ಹಳ್ಳಿ ಗಮಾರಿಯನ್ನು ನನ್ನ ತಲೆಗೆ ಕಟ್ಟಿಟ್ಟು ನೀವು ತಮಾಷೆ ನೋಡ್ಬೇಕೂಂತಿದ್ದೀರಾ ? ಸಾರಿ- ನಡೆಯೋಲ್ಲ – ಇವಳೊಂದಿಗೆ ನಾನು ಇನ್ನು ಬಾಳುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ. ರತ್ನಾಳ ಗುಣ ನಿಮಗೆ ಹೇಗೆ ಅರ್ಥವಾಗುತ್ತದೆ? ನಾನಿನ್ನು ರತ್ನಾಳೊಂದಿಗೆ ಮದ್ರಾಸಿನಲ್ಲೇ ನಾನಿರುತ್ತೇನೆ’’
ಎರಡು ಹೆಜ್ಜೆ ಇಟ್ಟವನ ಅಂಗಿಯ ಕಾಲರನ್ನು ಹಿಡಿದು ಅಲುಗಾಡಿಸಿ, ಆವೇಶ ಬಂದವಳಂತೆ ಅವನ ತಾಯಿ ಗೋಳಾಡಿದಳು.
“ಬೇಡಾ ಕಣೋ ಪಾಪಿ. ಈ ಚಿಕ್ಕ ಹುಡುಗಿ ತಲೆ ಮೇಲೆ ಕಲ್ಲು ಎಳೆಯಬೇಡ ಕಣೊ’’ ಅವಳ ಕೈಗಳನ್ನು ಸುಂದರ ತಳ್ಳಿ ಪ್ರತ್ಯುತ್ತರಿಸದೆ ಮುಂದೆ ನಡೆದ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ಸಡಗರದ ಮಧ್ಯೆ ಸೆಲ್ವಿ ತನಗೂ ನಡೆಯುತ್ತಿರುವುದಕ್ಕೂ ಸಂಬಂಧವಿಲ್ಲವೆಂಬಂತಿದ್ದಳು