Ramadan 2022: ನಿಮ್ಮ ಟೈಮ್ಲೈನ್; ಉಪವಾಸದ ಮಾಸದಲಿ ಕರುಣೆ ತುಳುಕಲಿ ಉದಾರವಾಗಿರಿ, ಮೌನದಲಿ ಧ್ಯಾನಿಸಿ
Communication with God : ವಾಸ್ತವದ ಅರಿವು ಇಲ್ಲದ ಆಡಂಬರ ಸೋಗಲಾಡಿತನದ್ದು. ಅಂತೆಯೇ, ಆಷಾಢಭೂತಿತನವಿಲ್ಲದಿರುವ ವಾಸ್ತವವು ‘ಪ್ರಾಮಾಣಿಕ’ವಾದುದು. ‘ಮಾತಿನ ಆಡಂಬರದಲಿ ಚತುರನಾದವನಿಗೆ ದೈವದೊಂದಿಗೆ ಸಂವಹನ ನಡೆಸಲು ನಾಲಗೆಯ ಅಗತ್ಯವಿಲ್ಲ’
ನಿಮ್ಮ ಟೈಮ್ಲೈನ್ | Nimma Timeline : ಮಾತು ದೈವವು ಮನುಷ್ಯನಿಗೆ ಕರುಣಿಸಿರುವ ಮಹಾ ವರದಾನ, ಆ ಕಾರಣವಾಗಿಯೇ ಮನುಷ್ಯ ಉಳಿದೆಲ್ಲ ಜೀವಿಗಳಿಗಿಂತ ಭಿನ್ನ. ಆದರೆ, ಮಾತಿನಲ್ಲಿಯೂ ಕೇಡುಕಿದೆ. ಹಾಗೆಂದೇ, ‘ನನ್ನ ಜನಗಳ ಕುರಿತು ನನಗಿರುವ ಅತಿ ಕೆಟ್ಟ ಭಯವೆಂದರೆ ಅವರ ನಾಲಗೆಯದು’ – ಎಂದು ಪ್ರವಾದಿ ಆತಂಕ ವ್ಯಕ್ತಪಡಿಸಿದ್ದರು. ಸ್ವಲ್ವದರಲ್ಲಿ ಹೇಳುವುದಾದರೆ, ಮಾತು, ಮದಿರೆಯಿದ್ದಂತೆ. ಅದು ಮನಸ್ಸಿಗೆ ಮತ್ತೇರಿಸುತ್ತದೆ. ಅದರ ರುಚಿ ಹತ್ತಿಸಿಕೊಂಡವರು ಅದನ್ನು ತ್ಯಜಿಸಲಾರರು. ಮಾತಿನ ಈ ಅಚಾತುರ್ಯದ ಗುಣವನ್ನು ಅರಿತ ಸೂಫಿಗಳು ತೀರ ಅಗತ್ಯವಿಲ್ಲದೆ ಮಾತನಾಡರು. ಅಂದರೆ, ಸಂವಾದದ ಆರಂಭ ಮತ್ತು ಉಪಸಂಹಾರ ಎರಡನ್ನೂ ಅವರು ಬಲ್ಲರು. ಅದು ದೈವಕ್ಕೆ ಸಂಬಂಧಿಸಿದ್ದಾದಾಗ ಮಾತ್ರ ಮಾತು, ಇಲ್ಲದ ವೇಳೆಯಲ್ಲಿ ಮೌನ. ದೈವಕ್ಕೆ ತಮ್ಮ ಗುಟ್ಟಾದ ಯೋಚನೆಗಳು ಏನೆಂಬುದು ತಿಳಿದಿದೆ, ಎಂಬ ಸ್ಪಷ್ಟ ಅರಿವು ಸೂಫಿಗಿರುತ್ತದೆ. ‘ಯಾರು ಮೌನಿಯೋ ಅವರು ಸುರಕ್ಷಿತರು’ ಎಂದು ಪ್ರವಾದಿ ಹೇಳಿದರೆಂದು ಅವರ ಸಂಗಾತಿ ಅಬ್ದುಲ್ಲ ಇಬ್ನೆ ಉಮರ್ ದಾಖಲಿಸಿದರು. ಕೇಶವ ಮಳಗಿ, ಲೇಖಕ
ಮೌನಕ್ಕೆ ಬಿಡುಗಡೆ ಮತ್ತು ಅನುಗ್ರಹದ ಶಕ್ತಿಯಿದೆ. ಸಾಧಕರು ಮಾತಿಗೆ ಬದಲಾಗಿ ಮೌನವನೇ ಆಯುವರು. ಸಾಮಾನ್ಯರಾದರೂ ಮೌನಕ್ಕೆ ಬದಲಾಗಿ ಮಾತಿಗೇ ಬೆಲೆ ನೀಡುವರು. ‘ಅಭಿವ್ಯಕ್ತಿಯು ಆಡಂಬರದ ದ್ಯೋತಕ. ಒಂದೊಮ್ಮೆ ವಾಸ್ತವದ ದರ್ಶನವಾಗಿದ್ದೇ ಅದರ ಸೋಗು ಕಳಚಿ ಬೀಳುತ್ತದೆ’ ಎಂದು ಮಹಾ ಗುರು ಜುನೈದ್ ಹೇಳುತ್ತಾರೆ.
ಕೆಲವೊಮ್ಮೆ ಮಾತನಾಡಬೇಕು ಎಂದೆನ್ನಿಸುತ್ತಿದ್ದರೂ ಮೌನವಾಗಿರುವುದೇ ಶ್ರೇಯಸ್ಕರ. ಒಳತುಡಿತ, ಸಾಮರ್ಥ್ಯವಿದ್ದಾಗ್ಯೂ ಹೆದರಿಕೆ ಮಾತನಾಡದಿರುವಂತೆ ಮಾಡಬಲ್ಲುದು. ದೈವದ ಕುರಿತು ನುಡಿಯುವುದನ್ನು ನಿರಾಕರಿಸಿದಾಗ ಅಂತಃಸತ್ವದಲಿ ಅಡಗಿರುವ ಶ್ರದ್ಧೆಯ ಅರಿವೂ ಮರೆಯಾಗುವುದು. ಆದರೆ ಯಾವುದೇ ಸಮಯದಲ್ಲಿಯೂ ವಾಸ್ತವದ ಲೇಪವಿಲ್ಲದ, ಸೋಗಲಾಡಿತನದ ತತ್ತ್ವವಾದ ಬೂಟಾಟಿಕೆಗಾಗಿ ಮನುಷ್ಯರನ್ನು ದೂರಲಾಗುವುದಿಲ್ಲ!
ವಾಸ್ತವದ ಅರಿವು ಇಲ್ಲದ ಆಡಂಬರ ಸೋಗಲಾಡಿತನದ್ದು. ಅಂತೆಯೇ, ಆಷಾಢಭೂತಿತನವಿಲ್ಲದಿರುವ ವಾಸ್ತವವು ‘ಪ್ರಾಮಾಣಿಕ’ವಾದುದು. ‘ಮಾತಿನ ಆಡಂಬರದಲಿ ಚತುರನಾದವನಿಗೆ ದೈವದೊಂದಿಗೆ ಸಂವಹನ ನಡೆಸಲು ನಾಲಗೆಯ ಅಗತ್ಯವಿಲ್ಲ’
ಹೊರಗಿನ ಅಭಿವ್ಯಕ್ತಿಯಿರುವುದು ದೈವವನ್ನು ಹೊರತುಪಡಿಸಿ ಉಳಿದವರೊಂದಿಗೆ ಸಂವಹನ ಸಾಧಿಸಲು. ನಮ್ಮ ಲೋಕದ ಆಗುಹೋಗುಗಳ ಕುರಿತು ದೈವಕ್ಕೆ ಯಾವ ವಿಶ್ಲೇಷಣೆಯೂ ಬೇಕಿಲ್ಲ. ದೈವವನು ಹೊರತುಪಡಿಸಿ ನಾವು ತಲ್ಲೀನರಾಗುವಂತಹ ಯಾವ ವಸ್ತುವೂ ಲೋಕದಲಿಲ್ಲ. ಇದನ್ನೇ ಮಹಾಗುರು ಜುನೈದರು-
‘ದೈವವನು ಬಲ್ಲವನು ಮೌನಿ’, ಎಂದು ಹೇಳಿದ್ದು. ಏಕೆಂದರೆ ನಿಜವಾದ ‘ಕಾಣ್ಕೆ’ (ಇಯಾನ್) ‘ವ್ಯಾಖ್ಯಾನ’ಗಳು (ಬಯಾನ್) ಪರದೆಗಳಾಗಿವೆ. ಒಮ್ಮೆ ಶೇಕ್ ಅಬೂಬಕ್ರ್ ಶಿಬ್ಲಿ, ಜುನೈದರನ್ನು ಭೇಟಿಯಾದಾಗ ದೈವವನ್ನು ಕುರಿತು, ‘ಓಹ್! ನನ್ನ ಬಯಕೆಯ ಸ್ವರೂಪವೇ’ ಎಂದು ಜೋರಾಗಿ ಉದ್ಗರಿಸಿದರಂತೆ.
‘ದೈವವೇ ನಿಮ್ಮ ಬಯಕೆಯ ಸ್ವರೂಪವಾಗಿರುವಾಗ, ದೈವ ಎಲ್ಲದರಿಂದಲೂ ಸ್ವಾಯತ್ತವಾಗಿರುವ ದೈವವನೇ ಉದ್ದೇಶಿಸಿ ಏಕೆ ಉದ್ಗರಿಸಬೇಕು? ನಿಮ್ಮ ಬಯಕೆಯ ಸ್ವರೂಪ ಬೇರೆಯೇ ಆಗಿದ್ದರೆ, ನೀವು ಏನು ಹೇಳುತ್ತಿದ್ದೀರೆಂದು ದೈವ ಬಲ್ಲುದು. ಸುಳ್ಳೇಕೆ ಉಲಿಯುತ್ತಿರುವಿರಿ?’ – ಎಂದು ಜುನೈದ್ ಕೇಳಿದರಂತೆ. ಅಂತಹ ನುಡಿಯನ್ನು ಉಲಿದಿದ್ದಕ್ಕೆ, ಶಿಬ್ಲಿ ಕ್ಷಮಿಸುವಂತೆ ದೈವವನು ಬೇಡಿಕೊಂಡರಂತೆ.
‘ನನ್ನ ನಾಲಗೆಯ ಸ್ಥಿತಿಯು (ಲಿಸನ್ ಅಲ್-ಹಲ್) ನನ್ನ ನಾಲಗೆಗಿಂತಲೂ ನಿರರ್ಗಳವಾಗಿದೆ., ನನ್ನ ಮೌನವು ನನ್ನ ಸಂದೇಹವನು ಅರಹುವ ಅರ್ಥಧಾರಿಯಾಗಿದೆ.’
*
(ಹಜರತ್ ಅಲಿ ಬಿನ್ ಉಸ್ಮಾನ್ ಅಲ್ ಹುಜ್ವಿರಿ (ಕಶ್ಫ್ ಅಲ್ ಮಹ್‌ಜ಼ಬ್) ಮತ್ತು ಸುನನ್ ಅಲ್ ತಿರ್‌ಮೀಧಿ- 2501)
ಬೆಳಕಿನ ದಾರಿ ದೈವದ ದಾರಿಯಲಿ ಪಯಣವನು ಕೈಗೊಳ್ಳುವ ಅರಿವಿನ ಹೊರತಾಗಿ ಉಳಿದೆಲ್ಲ ಜ್ಞಾನವೂ ನಿರರ್ಥಕ. ಏಕೆಂದರೆ ಅದು ಮನುಷ್ಯನ ವಿವೇಚನೆಯಿಂದ ಹೊಮ್ಮಿರುವಂಥದ್ದು. ವಿವೇಕಿಯಾದ ಮನುಷ್ಯನಿಗೆ ನಿಜವಾದ ಧರ್ಮ ಅಂದರೆ ಯಾವುದು? ಯಾರ ರೊಟ್ಟಿ ಮತ್ತು ಮಾತುಗಳು ಗೋಧಿಯನು ಹೋಲುತ್ತವೆ? ಯಾವ ಶಕ್ತಿ ದಾರಿಯನು ಗುರುತಿಸಿ, ಪ್ರತ್ಯೇಕಿಸುತ್ತದೆ? ಮಾತನಾಡುವವನು ಮತ್ತು ಗೆಳೆಯನನ್ನು ಹೇಗೆ ಅನ್ವೇಷಿಸುತ್ತದೆ? ಪ್ರಿಯ ಸೋದರ ದೈವವು ಒಂದೊಮ್ಮೆ ನನ್ನನ್ನು ಕೇಳಿದರೆ, ಇನಿತೂ ಗೊಂದಲಕೆ ಒಳಗಾಗದೆ ಉತ್ತರಿಸುವೆ: ‘ನಿಮ್ಮ ಮುಖವನ್ನು ಲೋಕದ ಕಡೆಗೆ ತಿರುಗಿಸಲು, ಹೆಜ್ಜೆಯನು ಸಮೃದ್ಧಿಯೆಡೆ ಇಡಲು, ಮನಸಿನ ಸ್ತರದಿಂದ ಹೊರಗಿರಿಸಲು, ದೈವದ ಸೇವೆಗಾಗಿ ಬೆನ್ನನು ವಿನೀತವಾಗಿ ಬಾಗಿಸಲು, ಕೆಡಕುಗಳಿಂದ ನಮ್ಮನು ತೊಳೆದುಕೊಳ್ಳಲು, ನಮ್ಮ ಅಂತಃಸತ್ವದಲಿ ಅವಿತ ಕಾಣ್ಕೆಯನು ಬಡಿದೆಬ್ಬಿಸಲು..’ ಅದೇ, ಅದೇ ನಿಜವಾದ ಧರ್ಮ.
ಎಚ್ಚರವಿಲ್ಲದವನೆ, ಅಂತಹ ಪಯಣದ ದಾರಿಯನು ಆಯಲು ನಮಗಿರುವ ಪೂರ್ವಸಿದ್ಧತೆ ಯಾವುದು?
‘ಸುಳ್ಳಿನೊಂದಿಗಿನ ಬಂಧವನು ಕತ್ತರಿಸಿ, ಸತ್ಯದೆಡೆ ನೋಡುವುದು; ಮಾತಿನ ಮಂಟಪವನು ಕಟ್ಟುವವರಿಂದ ದೂರವಾಗಿ ಮೌನದ ಎದುರು ಕುಳಿತುಕೊಳ್ಳುವುದು; ದೈವದ ತೋರು ಕೆಲಸಗಳಿಂದ ಆತನ ವೈಶಿಷ್ಟ್ಯತೆಯೆಡೆ ಸಾಗುವುದು; ಆತನ ಗುಣವಿಶೇಷಣಗಳಿಂದ ಆತನ ಜ್ಞಾನದ ಮಹಲಿಗೆ ನಡೆಯುವುದು; ಹಸಿವಿನ ಹೊಸಿಲನು ಮುಟ್ಟಲು ಜ್ಞಾನದಿಂದ ರಹಸ್ಯ ಲೋಕಕೆ ಸಾಗುವುದು. ಆಗ ನೀನು ಬಡತನದ ಗೆಳೆಯನಾಗುವೆ, ನಿನ್ನ ಅಂತಃಸತ್ವವು ನಿನ್ನೊಳಗಿನ ಅಶುದ್ಧತೆಯನು ಅಳಿಸುವುದು. ಆಗ ನಿನ್ನೊಳಗಿನ ಆತ್ಮವೇ ನಾನಾಗುವೆನು. ಅದು ತನ್ನೆಲ್ಲ ಕಾರ್ಯಗಳ ಕುರಿತು ಮರುಗುವುದು, ಅದರ ಎಲ್ಲ ಸ್ವತ್ತುಗಳೂ ವಿಚಾರಣೆಯ ಹಾದಿಯಲಿ ಕರಗಿ ಹೋಗುವವು, ನಿನ್ನ ಆತ್ಮವು ನಿನ್ನ ದೇಹದಲಿ ಕರಗಿ, ಹಂತ ಹಂತದಲಿ ಸಾಧನೆಯಲಿ ತೊಡಗಿ, ದೈವವು ಅದನು ಸ್ವೀಕರಿಸುವುದು, ಅದರ ಬಡತನವನು ನೀಗಿಸುವುದು. ದಾರಿದ್ರ್ಯ ಕಳೆದಾದ ಮೇಲೆ ಉಳಿಯುವುದು ದೈವ ಮಾತ್ರ.’
ಸಾವು ನಿನ್ನೆಡೆಗೆ ವೇಗದಲಿ ಬಂದಾಗ ನಿನ್ನ ಆತ್ಮವು ಆಗಲೇ ಅದರ ದಾರಿಯಲ್ಲಿರುವಂತೆ ಶ್ರಮಿಸು. ನಿನ್ನ ಸ್ಥಿರವಲ್ಲದ ಮನೆಯನು ತೊರೆದು ಬಿಡು. ನೀನು ದೈವದ ಬಾಗಿಲಿನಲ್ಲಿ ಇದ್ದರೆ, ಅಲ್ಲಿಯೇ ನೆಲೆಯೂರು. ಹಾಗಿಲ್ಲವೆ? ದೈವಕ್ಕೆ ಆಶ್ರಯವನು ಕೋರು. ದೈವದಿಂದ ಸೇವಕರು ಸಂತೃಪ್ತರಾಗಿಲ್ಲವೆ? ಹಾಗಿದ್ದರೆ, ಏಳು ಸಗ್ಗದ ಅಧಿಪತಿಯಾಗಿಯೂ ಅವರ ಗುಲಾಮಿ ಬೆನ್ನು ಬಾಗಿಯೇ ಇರುತ್ತದೆ.
(ಹಕೀಮ್ ಸನಾಯಿ)
* ದೈವ ಪ್ರೀತಿ ನಿನ್ನ ಪ್ರೇಮಕಾಗಿ ನಿಂದನೆಗೆ ಗುರಿಯಾಗಲು ನಮಗೇನೂ ನಾಚಿಕೆಯಿಲ್ಲ, ಪ್ರೇಮದ ಅಜ್ಞಾನದೊಂದಿಗೆ ನಮ್ಮದೆಂಥದೂ ಕಲಹವಿಲ್ಲ. ಈ ಪ್ರೇಮಪಾನೀಯವನು ನೀಡಿರುವುದು ನಮಗಷ್ಟೇ, ಪ್ರೇಮಪಾತ್ರೆಯಲಿ ಅಪಾತ್ರರಿಗೆ ಪಾಲಿಲ್ಲವಷ್ಟೇ! * ಕಣ್ಣುಪಟ್ಟಿ ಕಟ್ಟಿಕೊಂಡೇ ಈ ಸಮೂಹದ ಬರಹವನು ನಾನು ಓದಬಲ್ಲೆ ಅವರನು ಸಂಧಿಸಿ, ಹಾರೈಸ ಬಯಸುವೆ, ಆದರೆ ಹಾಗೆ ಮಾಡಲಾರೆ. ನಾನು ನ್ಯಾಯಪರರನ್ನು ಪ್ರೀತಿಸುವೆ, ಆದರೆ ಅವರೊಡನೆ ಇಲ್ಲ ಆ ದೈವ ನಮಗೆ ಸನ್ನಡತೆಯನು ದಯ ಪಾಲಿಸಲಿ. * (ಐನ್ ಅಲ್ ಖುದಾತ್ ಅಲ್- ಹಮದಾನಿ)
ಗಮನಿಸಿ: ‘ನಿಮ್ಮ ಟೈಮ್ಲೈನ್’ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್ಬುಕ್ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com
ಇದನ್ನೂ ಓದಿ : Facebook: ನಿಮ್ಮ ಟೈಮ್ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!
ಇದನ್ನೂ ಓದಿ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ
Published On - 12:11 pm, Sun, 3 April 22