Orange Signal ; ನಮ್ಮ ಭಾರತ ಭವ್ಯವಾಗಬೇಕಾದರೆ ಕಟ್ಟಿಸಬೇಕಾಗಿರುವುದು ದೇವಾಲಯಗಳನ್ನಲ್ಲ ಶೌಚಾಲಯಗಳನ್ನು
Toilet Situation in India : ‘ನನ್ನ ಪರಿಚಯದ ಹಿರಿಯ ಮಹಿಳೆಯರೊಬ್ಬರು ಸದಾ ಊರಿನ ಸಮಾರಂಭಗಳಿಗೆ ಉತ್ಸಾಹದಿಂದ ಬರುತ್ತಿದ್ದವರು, ಏಕಾಏಕಿ ನಿಲ್ಲಿಸಿಬಿಟ್ಟರು. ಎಲ್ಲರೂ ಪ್ರಶ್ನಿಸಿದಾಗ ಪಾಪ ಅವರು ಏನೇನೋ ಸಬೂಬು ಹೇಳಿದರು. ಕೊನೆಗೆ ಗೊತ್ತಾದದ್ದು ಏನೆಂದರೆ ಅವರಿಗೆ ಸಕ್ಕರೆ ಕಾಯಿಲೆ ಶುರುವಾಗಿತ್ತು.’ ಸೌರಭಾ ಕಾರಿಂಜೆ
Orange Signal : ಆರೇಂಜ್ ಸಿಗ್ನಲ್ – ಹೆಣ್ಣುಮಕ್ಕಳು ನೀರೇ ಕುಡಿಯುವುದಿಲ್ಲ ಹೊರಗೆ ಹೋದಾಗ, ಶೌಚಾಲಯ ಬಳಸಬೇಕಾಗಬಹುದೆನ್ನುವ ಭಯದಲ್ಲಿ. ದಿನವಿಡೀ ನೀರು ಕುಡಿಯದೆ, ಮೂತ್ರ ತಡೆದುಕೊಂಡು ಕಿಡ್ನಿ ತೊಂದರೆಗಳಿಗೊಳಗಾಗುವುದು ಮಾಮೂಲಿ. ನೀರು ಕುಡಿದು, ಗಲೀಜಾದ ಶೌಚಾಲಯಗಳಿಗೆ ಹೋಗಿ ಮೂತ್ರಕೋಶದ ಸೋಂಕು ತರಿಸಿಕೊಂಡವರ ಸಂಖ್ಯೆ ಸಣ್ಣದಲ್ಲವೇ ಅಲ್ಲ. ಹೆಣ್ಣುಮಕ್ಕಳ ದೈಹಿಕ ಸಂರಚನೆಯ ಕಾರಣ ಅವರಿಗೆ ಈ ಸೋಂಕಿನ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗಿರುವಾಗ ಶೌಚಾಲಯಗಳು ಸ್ವಚ್ಛವಾಗಿಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಮುಟ್ಟಿನ ದಿನಗಳಲ್ಲಿ ಇಂತಹ ಗಲೀಜು ಶೌಚಾಲಯಗಳಲ್ಲಿ ಪ್ಯಾಡ್ ಬದಲಿಸುವುದಾದರೂ ಹೇಗೆ? ವೈದ್ಯರ ಪ್ರಕಾರ ಪ್ಯಾಡ್‍ಗಳನ್ನು ನಾಲ್ಕು, ಹೆಚ್ಚೆಂದರೆ ಆರು ಗಂಟೆಗಳೊಳಗೆ ಬದಲಿಸಬೇಕು. ಆದರೆ ನಮ್ಮ ಹೆಣ್ಣುಮಕ್ಕಳು, ಅದರಲ್ಲೂ ಎಳೆಯ ವಯಸ್ಸಿನ ವಿದ್ಯಾರ್ಥಿನಿಯರು ದಿನವಿಡೀ ಬದಲಿಸದೆ ಇರುವ ಕಾರಣ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಇನ್ನು ಮೆನೋಪಾಸ್ ವಯಸ್ಸಿನ ಹೆಂಗಸರ ಕಷ್ಟ ಬೇರೆಯೇ ಮಟ್ಟದ್ದು. ಅನಿಯಮಿತ ಮುಟ್ಟು, ವಿಪರೀತ ಸ್ರಾವ, ಪದೇಪದೆ ಮೂತ್ರ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ಇವೆಲ್ಲದರ ನಿರ್ವಹಣೆ ನಮ್ಮ ದೇಶದ ಅಸ್ವಚ್ಛ ವಾತಾವರಣದಲ್ಲಿ ಸುಲಭವಲ್ಲ. ಸೌರಭಾ ಕಾರಿಂಜೆ
(ಸಿಗ್ನಲ್ : 4)
ಎರಡು ವರ್ಷಗಳ ಹಿಂದೆ ಮಗಳನ್ನು ಕರೆದುಕೊಂಡು ಸಿಕ್ಕಿಂ ಪ್ರವಾಸಕ್ಕೆ ಹೊರಟಿದ್ದೆ. ಸುಂದರವಾದ ತಾಣ, ಪ್ರಕೃತಿ ಹರಸಿದ ಸೌಂದರ್ಯ. ಜಲಪಾತ, ಕಣಿವೆ, ಹಿಮ ಎಲ್ಲವೂ ಮೇಳೈಸಿ ಇನ್ನೇನು ಬೇಕಿತ್ತು ಅಂತ ಅನಿಸಬೇಕಿತ್ತು. ಆದರೆ ಒಂದಂತೂ ಬೇಕಿತ್ತು-ಶೌಚಾಲಯ.
ಎಲ್ಲ ಕಡೆ ಕೊಳಕಾದ ಶೌಚಾಲಯಗಳು, ಅನೇಕ ಕಡೆ ನೀರೇ ಇಲ್ಲ. ಚಿಕ್ಕ ಮಗುವನ್ನು ಹೇಗೆ ಕರೆದುಕೊಂಡು ಹೋಗುವುದು! ಕೆಲ ಕಡೆಯಂತೂ ಬಾಗಿಲೇ ಇಲ್ಲ. ಕಸದ ಬುಟ್ಟಿಯಂತೂ ನೋಡಲೂ ಸಿಗುವುದಿಲ್ಲ. ಬಳಸಿ ಬಿಸಾಕಿದ ಸ್ಯಾನಿಟರಿ ಪ್ಯಾಡ್‍ಗಳು, ಡೈಪರ್ಗಳು ಎಲ್ಲೆಲ್ಲೂ. ಸಿಕ್ಕಿಂ ಒಂದಲ್ಲ, ಭಾರತದ ಯಾವ ಮೂಲೆಗೆ ಹೋದರೂ ಇದೊಂದು ದೊಡ್ಡ ತಲೆಬಿಸಿ.
ಕೆಲ ವರ್ಷಗಳ ಮೊದಲಂತೂ ಪರಿಸ್ಥಿತಿ ಇನ್ನಷ್ಟು ಕೆಟ್ಟದಿತ್ತು. ಬಸ್ ಪ್ರಯಾಣಗಳಲ್ಲಿ ಗಂಡಸರು ಆರಾಮವಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡು ತಮ್ಮ ಕೆಲಸ ಮುಗಿಸುತ್ತಿದ್ದರೆ, ಹೆಣ್ಣುಮಕ್ಕಳದು ಶೌಚಾಲಯ ಇರುವಲ್ಲಿ ನಿಲ್ಲಿಸಲು ಬಸ್ ಡ್ರೈವರನಲ್ಲಿ ಗೋಗರೆತ. ಕೆಲವು ಚಾಲಕರು ಕರುಣೆಯಿಟ್ಟು ನಿಲ್ಲಿಸಿದರೆ ಕೆಲವರಂತೂ ದರ್ಪ ತೋರಿಸುವವರು. ಶೌಚಾಲಯಗಳ ಕೊರತೆ, ಇದ್ದ ಕೆಲವೂ ಗಲೀಜು. ಕೆಲವೇ ಕೆಲವು ಇರುವ ಕಾರಣ ಅವುಗಳಲ್ಲಿ ಉದ್ದನೆಯ ಕ್ಯೂ. ಎಷ್ಟು ಹೊತ್ತು ಮಾಡ್ತಾರಪ್ಪ ಈ ಹೆಂಗಸರು ಅಂತ ಬಸ್ ಚಾಲಕರ ಗೊಣಗಾಟ. ಅವರಿಗೂ ಪಾಪ ನಿದ್ದೆಯಿಲ್ಲ. ಬೇಗ ಊರು ಸೇರಿ ಅಡ್ಡಾಗುವ ಧಾವಂತ.
ಸಕ್ಕರೆ ಕಾಯಿಲೆ ಇರುವ ಹಿರಿಯ ಮಹಿಳೆಯರ ಕಷ್ಟ ಕೇಳಬೇಡಿ. ನನ್ನ ಪರಿಚಯದ ಹಿರಿಯ ಮಹಿಳೆಯರೊಬ್ಬರು ಸದಾ ಊರಿನ ಸಮಾರಂಭಗಳಿಗೆ ಉತ್ಸಾಹದಿಂದ ಬರುತ್ತಿದ್ದವರು, ಏಕಾಏಕಿ ನಿಲ್ಲಿಸಿದಾಗ ಎಲ್ಲರೂ ಯಾಕೆ ಏನು ಅಂತ ಪ್ರಶ್ನೆ ಹಾಕತೊಡಗಿದರು. ಪಾಪ ಅವರು ಏನೇನೋ ಸಬೂಬು ಹೇಳಿದರು ಕೂಡ. ಕೊನೆಗೆ ಗೊತ್ತಾದದ್ದು ಏನೆಂದರೆ ಅವರಿಗೆ ಸಕ್ಕರೆ ಕಾಯಿಲೆ ಶುರುವಾಗಿತ್ತು. ಬೆಂಗಳೂರಿನಿಂದ ಬಸ್‍ನಲ್ಲಿ ಬರಲು ಶೌಚಾಲಯದ ತೊಂದರೆ! ಸಕ್ಕರೆ ಕಾಯಿಲೆ ಇರುವವರಿಗೆ ಮೂತ್ರದ ಒತ್ತಡ ತಡೆದುಕೊಳ್ಳುವುದು ಬಹಳ ಕಷ್ಟ. ಎಲ್ಲಿ ಅಂತ ಶೌಚಾಲಯ ಹುಡುಕೋದು ನಿಮಗೆ ಅಂತ ಚಾಲಕರ ಸಿಟ್ಟು. ಬರುವುದನ್ನೇ ನಿಲ್ಲಿಸಬೇಕಾಯಿತು ಅವರು. ನಮ್ಮ ಚಂದದ ರೈಲುಗಳಲ್ಲಿ ಹೋಗುವಾಗಲೂ ಇದೇ ಕತೆ. ಹೆಸರಿಗೆ ಎಸಿ ಕೋಚ್. ದುಡ್ಡಿರುವ, ಓದಿರುವ ಮಂದಿ. ಶೌಚಾಲಯಗಳನ್ನು ನೋಡಿದರೆ ವಾಂತಿ ಬರುವ ಹಾಗಾಗುತ್ತದೆ. ಈಗ ಹೋಟೆಲ್‍ಗಳು ಹೆಚ್ಚಿರುವ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರೆ ಬದುಕಿದೆಯಾ ಬಡಜೀವವೇ. ಸ್ವಚ್ಛತೆಯ ಖಾತ್ರಿ ಇಲ್ಲದಿದ್ದರೂ ಶೌಚಾಲಯವಾದರೂ ಇರುತ್ತದೆ. ಎಷ್ಟೋ ಸಲ ಕಾಫಿ ಡೇಗೆ ಬರೀ ಶೌಚಾಲಯದ ಸೌಕರ್ಯಕ್ಕಾಗಿ ಹೋಗಿದ್ದಿದೆ.
ಹೆಣ್ಣುಮಕ್ಕಳು ನೀರೇ ಕುಡಿಯುವುದಿಲ್ಲ ಹೊರಗೆ ಹೋದಾಗ, ಶೌಚಾಲಯ ಬಳಸಬೇಕಾಗಬಹುದೆನ್ನುವ ಭಯದಲ್ಲಿ. ದಿನವಿಡೀ ನೀರು ಕುಡಿಯದೆ, ಮೂತ್ರ ತಡೆದುಕೊಂಡು ಕಿಡ್ನಿ ತೊಂದರೆಗಳಿಗೊಳಗಾಗುವುದು ಮಾಮೂಲಿ. ನೀರು ಕುಡಿದು, ಗಲೀಜಾದ ಶೌಚಾಲಯಗಳಿಗೆ ಹೋಗಿ ಮೂತ್ರಕೋಶದ ಸೋಂಕು ತರಿಸಿಕೊಂಡವರ ಸಂಖ್ಯೆ ಸಣ್ಣದಲ್ಲವೇ ಅಲ್ಲ. ಹೆಣ್ಣುಮಕ್ಕಳ ದೈಹಿಕ ಸಂರಚನೆಯ ಕಾರಣ ಅವರಿಗೆ ಈ ಸೋಂಕಿನ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗಿರುವಾಗ ಶೌಚಾಲಯಗಳು ಸ್ವಚ್ಛವಾಗಿಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಮುಟ್ಟಿನ ದಿನಗಳಲ್ಲಿ ಇಂತಹ ಗಲೀಜು ಶೌಚಾಲಯಗಳಲ್ಲಿ ಪ್ಯಾಡ್ ಬದಲಿಸುವುದಾದರೂ ಹೇಗೆ? ವೈದ್ಯರ ಪ್ರಕಾರ ಪ್ಯಾಡ್‍ಗಳನ್ನು ನಾಲ್ಕು, ಹೆಚ್ಚೆಂದರೆ ಆರು ಗಂಟೆಗಳೊಳಗೆ ಬದಲಿಸಬೇಕು. ಆದರೆ ನಮ್ಮ ಹೆಣ್ಣುಮಕ್ಕಳು, ಅದರಲ್ಲೂ ಎಳೆಯ ವಯಸ್ಸಿನ ವಿದ್ಯಾರ್ಥಿನಿಯರು ದಿನವಿಡೀ ಬದಲಿಸದೆ ಇರುವ ಕಾರಣ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಇನ್ನು ಮೆನೋಪಾಸ್ ವಯಸ್ಸಿನ ಹೆಂಗಸರ ಕಷ್ಟ ಬೇರೆಯೇ ಮಟ್ಟದ್ದು. ಅನಿಯಮಿತ ಮುಟ್ಟು, ವಿಪರೀತ ಸ್ರಾವ, ಪದೇಪದೆ ಮೂತ್ರ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ಇವೆಲ್ಲದರ ನಿರ್ವಹಣೆ ನಮ್ಮ ದೇಶದ ಅಸ್ವಚ್ಛ ವಾತಾವರಣದಲ್ಲಿ ಸುಲಭವಲ್ಲ.
ಹಲವಾರು ಹೆಣ್ಣುಮಕ್ಕಳು ಪಾಶ್ಚಾತ್ಯ ಕಮೋಡ್ಗಳ ಸೀಟು ತಾಕದಂತೆ ಮಂಡಿ ಬಗ್ಗಿಸಿ ಮೂತ್ರ ವಿಸರ್ಜಿಸುತ್ತಾರೆ. ಕೀಲು ನೋವಿರುವವರಿಗೆ, ಗರ್ಭಿಣಿಯರಿಗೆ ಅದು ಅಸಾಧ್ಯ. ಹೆಂಗಸರ ಪರದಾಟಕ್ಕೆ ಪರಿಹಾರವಾಗಿ ಕೆಲವು ಕಂಪನಿಗಳು ಪೋರ್ಟಬಲ್ ಮೂತ್ರ ವಿಸರ್ಜನೆಯ ಸಾಧನಗಳನ್ನು ಮಾರುಕಟ್ಟೆಗೆ ತಂದಿವೆ. ಇದರಿಂದಾಗಿ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡಲು ಸಾಧ್ಯ. ಇನ್ನೂ ಸ್ಯಾನಿಟರಿ ಪ್ಯಾಡ್ ಗಳಿಗೆ ಒದ್ದಾಡುವ ನಮ್ಮ ದೇಶದಲ್ಲಿ ಇವೆಲ್ಲ ಮನೆಮಾತಾಗುವುದು ಅಷ್ಟು ಸುಲಭವಲ್ಲ.
ಹಿಮಾಲಯದ ಕಡೆ ಚಾರಣ ಹೋದಾಗ ಅಲ್ಲಿ ಅನೇಕ ಕಡೆ ಜನವಸತಿ ಇರುವುದಿಲ್ಲ. ಉಳಿದುಕೊಳ್ಳಲು ಹೋಟೆಲುಗಳಾಗಲೀ, ಬಳಸಲು ಪೂರ್ಣಪ್ರಮಾಣದ ಶೌಚಾಲಯಗಳಾಗಲೀ ಇರುವುದಿಲ್ಲ. ನಿರ್ವಾಹಕ ಸಂಸ್ಥೆಗಳು ಕಾಡಿನ ನಡುವೆ ಕ್ಯಾಂಪಿಂಗ್ಗೆ ಜಾಗ ಆರಿಸುತ್ತವೆ. ಅದಕ್ಕಿಂತ ಸ್ವಲ್ಪ ದೂರದಲ್ಲಿ ಗುಂಡಿ ತೋಡಿ, ಸುತ್ತ ಟೆಂಟ್ ಕಟ್ಟಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುತ್ತವೆ. ಇವುಗಳೊಳಗೆ ನೀರಿಲ್ಲ. ಮಲ-ಮೂತ್ರ ವಿಸರ್ಜನೆ ಮಾಡಿ, ಅಲ್ಲೇ ಇಟ್ಟಿರುವ ಮರಳನ್ನು ಹಾಕಿ ಮುಚ್ಚಿ ಬರಬೇಕು. ಶುಚಿಗೊಳಿಸಿಕೊಳ್ಳಲು ಒದ್ದೆ ಮಾಡಿದ ಟಿಶ್ಯೂ ಪೇಪರುಗಳಷ್ಟೇ. ಮೊದಮೊದಲು ಹೇಗಪ್ಪಾ ಇದನ್ನು ಬಳಸುವುದು ಅಂತ ಅನಿಸಿದರೂ ಆಮೇಲೆ ನಗರಗಳ ಕೊಳಕು ಶೌಚಾಲಯಗಳಿಗಿಂತ ಇವೇ ವಾಸಿ ಅಂತ ನಮ್ಮ ಗುಂಪಿನ ಪ್ರತಿ ಹುಡುಗಿಗೂ ಅನಿಸಿತ್ತು. ದಿನಕ್ಕೆ ಹಲವಾರು ಕಿಮೀ ನಡಿಗೆ ಇರುತ್ತದೆ. ಜೊತೆಗೆ ಸಮುದ್ರ ಮಟ್ಟದಿಂದ ಎತ್ತರ ಇರುವುದರಿಂದ ಆಮ್ಲಜನಕದ ಕೊರತೆ ಬಾಧಿಸುತ್ತದೆ. ಆ ಕಾರಣಕ್ಕೆ ಹೆಚ್ಚು ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಹೆಚ್ಚು ಹೆಚ್ಚು ಮೂತ್ರ ವಿಸರ್ಜಿಸಬೇಕಾಗುತ್ತದೆ ಕೂಡ. ಚಾರಣದ ನಡುವೆ ಅಲ್ಲೇ ಕಾಡಲ್ಲಿ ಹೋಗಬೇಕಷ್ಟೇ. ಆದರೆ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದಕ್ಕಿಂತ ಇದು ಎಷ್ಟೋ ವಾಸಿ.
ಮುಂದುವರೆದ ದೇಶಗಳಲ್ಲಿ ಈ ಸಮಸ್ಯೆ ಸ್ವಲ್ಪ ಕಡಿಮೆ. ತುಲನಾತ್ಮಕವಾಗಿ ನೋಡಿದರೆ ಬಹುತೇಕ ಸ್ವಚ್ಛತೆ ಇರುತ್ತದೆ, ಭಾರತೀಯರು ಇರುವಲ್ಲಿಯೂ. ನಮ್ಮ ದೇಶದ ವಿಷಯ ಬಂದಾಗ ದೇಶಪ್ರೇಮದ ಕತೆ ಹೊಡೆಯುವ ನಾವು ಮನುಷ್ಯನಿಗೆ ಬೇಕಾದ ಕನಿಷ್ಟ ಸ್ವಚ್ಛತೆಯ ಸಾಮಾನ್ಯ ತಿಳಿವಳಿಕೆ ಇಲ್ಲದಂತೆ ವರ್ತಿಸುತ್ತೇವೆ. ಐಟಿ ಕಂಪೆನಿಗಳಲ್ಲಿಯೂ ಮಾಲ್‍ಗಳ ಥರವೇ ಫಳಫಳಿಸುವ ಶೌಚಾಲಯಗಳನ್ನು ಕಟ್ಟಿಸಿರುತ್ತಾರೆ. ಅಲ್ಲಿ ದುಡಿಯುವ ಮಂದಿ ಸುಶಿಕ್ಷಿತರೇ. ಆದರೆ ಇವರಲ್ಲಿ ಅನೇಕರು ಸ್ವಚ್ಛತಾ ಸಿಬ್ಬಂದಿಗೆ ಬೇಸರ ಬರುವಷ್ಟು ಕೊಳಕು ಮಾಡಿ ಬರುತ್ತಾರೆ.
ಇನ್ನು ನಮ್ಮ ಹಳ್ಳಿ ಪ್ರದೇಶಗಳದ್ದು ಬೇರೆಯೇ ಮಟ್ಟದ ಸಮಸ್ಯೆ. ಬಯಲು ಶೌಚಾಲಯದ ಸಮಸ್ಯೆ ಭಾರತದಲ್ಲಿ ಬಹಳ ಹೆಚ್ಚಿದೆ. 2017ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಇವತ್ತಿಗೂ 344 ಮಿಲಿಯನ್ ಜನರು ಬಯಲಿನಲ್ಲೇ ಶೌಚಕ್ಕೆ ಹೋಗುತ್ತಾರೆ. 2000 ಇಸವಿಯ ಸುಮಾರಿಗೆ ಈ ಸಂಖ್ಯೆ 700 ಮಿಲಿಯನ್ ಇತ್ತು. ಸರಕಾರ ಕೋಟಿಗಟ್ಟಲೆ ಖರ್ಚು ಮಾಡಿ ಸ್ವಚ್ಛ ಭಾರತ ಅಭಿಯಾನಕ್ಕೆ ಮೊದಲಿಟ್ಟಿದೆ. ಆದರೆ ಸರಕಾರದ ಘೋಷಣೆಗಳ ಹೊರತಾಗಿಯೂ ಸಮಸ್ಯೆಯ ನಿರ್ಮೂಲನೆ ಇನ್ನೂ ದೂರದ ಮಾತು. ಕಟ್ಟಿದ ಸುಲಭ ಶೌಚಾಲಯಗಳಲ್ಲಿ ನೀರಿಲ್ಲ, ಚೊಕ್ಕಟವಾಗಿ ಇಟ್ಟುಕೊಳ್ಳುವ ಸಿಬ್ಬಂದಿಯಿಲ್ಲ. ಹಳ್ಳಿಗಳಲ್ಲಿ ಕಟ್ಟಿದ ಶೌಚಾಲಯಗಳು ಸಂಗ್ರಹಣಾ ಕೋಣೆಗಳಾಗಿ ಬಳಸಲ್ಪಡುತ್ತಿವೆ. ನಮ್ಮ ಜನ ಇನ್ನೂ ಬಯಲನ್ನೇ ಬಳಸುತ್ತಿದ್ದಾರೆ. ಬೇಧಿ, ಕಾಲರಾದಂತಹ ರೋಗಗಳಿಂದ ಸಾಯುತ್ತಲೇ ಇದ್ದಾರೆ. ಜನರ ಮನಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗದೆ ಇವ್ಯಾವುವೂ ಪ್ರಯೋಜನವಿಲ್ಲ.
ದೇವಾಲಯಗಳಿಗೆ, ಪ್ರತಿಮೆಗಳಿಗೆ ಕೊಡುವ ಬೆಲೆಯ ಸ್ವಲ್ಪವನ್ನಾದರೂ ಶೌಚಾಲಯಗಳಿಗೆ, ಆಸ್ಪತ್ರೆಗಳಿಗೆ ಕೊಟ್ಟರೆ ನಮ್ಮ ಜೀವನ ಮಟ್ಟ ಸ್ವಲ್ಪ ಸುಧಾರಣೆಯಾದೀತು.
ಹಿಂದಿನ ಸಿಗ್ನಲ್ : Orange Signal : ‘ಗುಡ್ ನ್ಯೂಸ್ ಯಾವಾಗ?’ ಹೀಗೆ ಕೇಳುವುದನ್ನು ನಿಲ್ಲಿಸುವುದು ಸೂಕ್ತ