Orange Signal – ಆರೇಂಜ್ ಸಿಗ್ನಲ್ : ‘Duel income no kids’ ಇವರನ್ನು ಸ್ವಾರ್ಥಿಗಳು ಎಂದು ಸಾಂಪ್ರದಾಯಿಕ ಮನೋಭಾವದವರು ಜರಿಯಬಹುದು. ಹಾಗೆ ನೋಡಿದರೆ ಮಕ್ಕಳನ್ನು ಹೆತ್ತು, ಅವರಿಗಾಗಿ ಮತ್ತಷ್ಟು ಜನರ ಅನ್ನವನ್ನು ಕದಿಯುವುದು ಸ್ವಾರ್ಥ ಎಂದು ಈ ಮಂದಿ ವಾದಿಸುತ್ತಾರೆ. ಸ್ವಾರ್ಥ ಎಂಬುದು ಪ್ರತಿ ಮನುಷ್ಯನಲ್ಲಿದೆ. ಮಕ್ಕಳು ಬೇಕು, ಅವು ನಮ್ಮ ವಂಶವಾಹಿಗಳನ್ನು ಪ್ರಪಂಚದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ಸ್ವಾರ್ಥವೇ ಅಲ್ಲವೇ? ಸಮಾಜದ ಸಮ್ಮತಕ್ಕೆ ಅನುಗುಣವಾಗಿ ಬದುಕಿ ನೆಮ್ಮದಿಯಲ್ಲಿರಬೇಕು ಎನ್ನುವುದು ಸ್ವಾರ್ಥವಲ್ಲವೇ? ಮಕ್ಕಳನ್ನು ಹುಟ್ಟಿಸಿ, ಅವರಿಗಾಗಿ ತ್ಯಾಗಗಳನ್ನು ಮಾಡಿ, ಆಮೇಲೆ ಜೀವನವನ್ನೆಲ್ಲ ಮಕ್ಕಳಿಗಾಗಿ ಸವೆಸಿದೆವು ಎಂಬ ಅಪರಾಧೀ ಭಾವದ ಭಾರವನ್ನು ಮಕ್ಕಳ ಮೇಲೆ ಹಾಕಿ ಅವರ ಬದುಕನ್ನು ನರಕ ಮಾಡಬೇಕೇ ಎಂಬುದು ಇವರ ಪ್ರಶ್ನೆ.
ಸೌರಭಾ ಕಾರಿಂಜೆ
(ಸಿಗ್ನಲ್ : 3)
ಸಹೋದ್ಯೋಗಿಗಳ ಗುಂಪಿನಲ್ಲಿ ಚಹಾ ವಿರಾಮದ ಕಾಡುಹರಟೆ ನಡೆಯುತ್ತಿತ್ತು. ಮಕ್ಕಳು, ಮರಿ, ಸಂಸಾರ, ಊರು ಕೇರಿ ಇತ್ಯಾದಿ. ಒಬ್ಬರಂದರು,
“ನಾವು ಮಕ್ಕಳು ಬೇಡ ಅಂತ ನಿರ್ಧಾರ ಮಾಡಿದ್ದೇವೆ. ಅದಕ್ಕೆ ನಾವಿಬ್ಬರೇ ಇರೋದು ಮನೇಲಿ.”
ಒಂದಷ್ಟು ಹೆಂಗಸರು,
“ಒಳ್ಳೆದಾಯಿತು ಬಿಡಿ, ನಾವು ಮನೆ, ಮಕ್ಕಳು, ಆಫೀಸು ಎಲ್ಲ ನೋಡಿಕೊಂಡು ಸುಸ್ತಾಗಿದ್ದೀವಿ, ನಿಮಗೆ ಒಂದು ಚಿಂತೆಯಾದರೂ ತಪ್ಪಿತಲ್ಲ” ಅಂದರು. ಗಂಡಸರು ಮಾತಾಡಲಿಲ್ಲ. ಅವರಿಗೆ ಮಕ್ಕಳನ್ನು ನೋಡಿಕೊಳ್ಳುವ ಚಿಂತೆ ಹೇಗೂ ಇರಲಿಲ್ಲ. ಆದ್ದರಿಂದ ಅದೊಂದು ಚಿಂತೆಯ ವಿಷಯ ಅಂತ ಅವರಿಗೆ ತೋರಲಿಲ್ಲ ಅನ್ನುವುದನ್ನು ಅವರ ಮುಖಭಾವದಿಂದ ಗ್ರಹಿಸಬಹುದಿತ್ತು.
“ನನ್ನ ಪತ್ನಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ, ಅದಕ್ಕಾಗಿ ಪ್ರಯಾಣ ಮಾಡುವುದರಲ್ಲಿ ಬಹಳ ಆಸಕ್ತಿ, ಹಾಗಾಗಿ ಮಕ್ಕಳು ಬೇಡ ಅಂತ ನಿರ್ಧರಿಸಿದೆವು.” ಅವರು ಮುಂದುವರೆಸಿದರು.
ಹರಟೆ ಮುಗಿಸಿ ಹೊರಬಂದಾಗ,
“ಬಹುಶಃ ಏನೋ ತೊಂದರೆ ಇರಬೇಕು ಮಕ್ಕಳಾಗುವುದರಲ್ಲಿ, ಅದಕ್ಕೆ ಈ ಥರ ನೆವ ಹುಡುಕಿ ಮಾತಾಡುತ್ತಾರೆ.” ಅನ್ನುವ ಮಾತುಗಳೂ ಕೇಳಿಬಂದವು.
ಅದು ನಿಜವೂ ಇರಬಹುದು, ಇಲ್ಲದೆಯೂ ಇರಬಹುದು. ಭಾರತೀಯ ಸಮಾಜದಲ್ಲಿ ಎಂದಿನಂತೆ ಇಂದಿನದೂ ಪರ್ವಕಾಲ. ಒಂದು ಕಡೆ ಮಕ್ಕಳು ಬೇಕೆಂದು ಕಂಡಕಂಡ ದೇವರಿಗೆ ಹರಕೆ ಹೊತ್ತುಕೊಳ್ಳುವ, ಐವಿಎಫ್ ಅದೂ ಇದೂ ಮಾಡಿಸಿಕೊಂಡು ಆರೋಗ್ಯ, ಭವಿಷ್ಯ ಯಾವುದನ್ನೂ ಲೆಕ್ಕಿಸದೆ ಮಕ್ಕಳಿಗಾಗಿ ಪ್ರಯತ್ನಿಸುವ ಮಂದಿ. ಇನ್ನೊಂದು ಕಡೆ ಮಕ್ಕಳೇ ಬೇಡವೆಂದು ನಿರ್ಧರಿಸುವ ಮಂದಿ.
ಈ ಎರಡನೇ ಗುಂಪಿನ ಮಂದಿ ಬಹಳ ಆಸಕ್ತಿದಾಯಕವಾದ ಗುರಿಗಳನ್ನು, ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಇವರಲ್ಲಿ ಹೆಚ್ಚಿನವರು ಮಿಲೆನಿಯಲ್‍ಗಳು. ಅಂದರೆ 1980ರ ನಂತರ ಹುಟ್ಟಿದವರು. ಆಧುನಿಕತೆ, ತಂತ್ರಜ್ಞಾನಪ್ರಿಯತೆ, ಮುಕ್ತ ಬದುಕನ್ನು ಅಳವಡಿಸಿಕೊಂಡು ಬದುಕುವುದು… ಇವರ ಲಕ್ಷಣಗಳು. ಸಹಜವಾಗಿಯೇ ಸಾಂಪ್ರದಾಯಿಕ ಮನಸ್ಥಿತಿಯ ಜನರಿಗೆ ಇವರು ಸಿಡಿದೆದ್ದವರಂತೆ, ಸಾಮಾಜಿಕ ವ್ಯವಸ್ಥೆಯನ್ನು ನೆಲಸಮಗೊಳಿಸಲು ಬಂದವರಂತೆ ಕಾಣುತ್ತಾರೆ. ಮತ್ತು ಇದು ಅಸಹನೆಗೆ ದಾರಿ ಮಾಡಿಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ DINK (Double Income No Kids) ಅಂದರೆ “ಇಬ್ಬರ ಸಂಪಾದನೆ, ಮಕ್ಕಳು ಬೇಡ”ಎನ್ನುವ ಸಂಸಾರಗಳು ಹೆಚ್ಚಾಗುತ್ತಿವೆ. ಇದರ ಹಿಂದಿನ ಕಾರಣಗಳು ಅನೇಕ.
ಇನ್ನೂ ಹತ್ತು ಹಲವು ಕಾರಣಗಳಿವೆ. ಇವರಲ್ಲಿ ಹಲವು ಮಂದಿ ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುವವರೂ ಇದ್ದಾರೆ.
ಇವರನ್ನು ಸ್ವಾರ್ಥಿಗಳು ಎಂದು ಸಾಂಪ್ರದಾಯಿಕ ಮನೋಭಾವದವರು ಜರಿಯಬಹುದು. ಹಾಗೆ ನೋಡಿದರೆ ಮಕ್ಕಳನ್ನು ಹೆತ್ತು, ಅವರಿಗಾಗಿ ಮತ್ತಷ್ಟು ಜನರ ಅನ್ನವನ್ನು ಕದಿಯುವುದು ಸ್ವಾರ್ಥ ಎಂದು ಈ ಮಂದಿ ವಾದಿಸುತ್ತಾರೆ. ಸ್ವಾರ್ಥ ಎಂಬುದು ಪ್ರತಿ ಮನುಷ್ಯನಲ್ಲಿದೆ. ಮಕ್ಕಳು ಬೇಕು, ಅವು ನಮ್ಮ ವಂಶವಾಹಿಗಳನ್ನು ಪ್ರಪಂಚದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ಸ್ವಾರ್ಥವೇ ಅಲ್ಲವೇ? ಸಮಾಜದ ಸಮ್ಮತಕ್ಕೆ ಅನುಗುಣವಾಗಿ ಬದುಕಿ ನೆಮ್ಮದಿಯಲ್ಲಿರಬೇಕು ಎನ್ನುವುದು ಸ್ವಾರ್ಥವಲ್ಲವೇ? ಮಕ್ಕಳನ್ನು ಹುಟ್ಟಿಸಿ, ಅವರಿಗಾಗಿ ತ್ಯಾಗಗಳನ್ನು ಮಾಡಿ, ಆಮೇಲೆ ಜೀವನವನ್ನೆಲ್ಲ ಮಕ್ಕಳಿಗಾಗಿ ಸವೆಸಿದೆವು ಎಂಬ ಅಪರಾಧೀ ಭಾವದ ಭಾರವನ್ನು ಮಕ್ಕಳ ಮೇಲೆ ಹಾಕಿ ಅವರ ಬದುಕನ್ನು ನರಕ ಮಾಡಬೇಕೇ ಎಂಬುದು ಇವರ ಪ್ರಶ್ನೆ.
ಸಂತಾನೋತ್ಪತ್ತಿ ನಿಸರ್ಗದ ನಿಯಮ ಎಂದು ವಾದಿಸುವವರಿಗೆ “ಮನುಷ್ಯ ನಿಸರ್ಗದತ್ತ ನಿಯಮಗಳಿಂದ ದೂರ ಸರಿದು ಕಾಲ ಬಹಳವಾಯಿತು. ಸಹಜವಾಗಿ ಬದುಕಿದ್ದಿದ್ದರೆ ನಮ್ಮ ಪೂರ್ವಜರಂತೆ 35 ವರ್ಷಕ್ಕೆ ಸಾಯಬೇಕಿತ್ತು. ವೈದ್ಯಕೀಯ ವ್ಯವಸ್ಥೆ ನಮ್ಮ ಆಯಸ್ಸನ್ನು ವಿಪರೀತ ಹೆಚ್ಚು ಮಾಡಿದೆ. ಅದನ್ನೆಲ್ಲ ಸಂತೋಷವಾಗಿ ಅನುಭವಿಸಿ ಈಗ ನಿಸರ್ಗದ ಮಾತೆತ್ತಬೇಡಿ” ಅಂತ ಇವರು ಉತ್ತರಿಸುತ್ತಾರೆ.
“ಅಯ್ಯೋ, ನಮ್ಮ ಕಾಲದಲ್ಲಿ ಹತ್ತು ಹೆರುತ್ತಿದ್ದೆವು, ನೀವು ಒಂದಕ್ಕೆ ಹೀಗಾಡುತ್ತಿದ್ದೀರಲ್ಲ” ಎಂದು ಮೂಗುಮುರಿಯುವವರು, ಕಾಲ ಬದಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಂದಿಯ ಅನೇಕ ವಾದಗಳಿಗೆ ನಮ್ಮಲ್ಲಿ ಉತ್ತರವಿಲ್ಲ ಎಂಬುದನ್ನೂ ಒಪ್ಪಿಕೊಳ್ಳಲೇಬೇಕಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಮಗು ಮಾಡಿಕೊಳ್ಳುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ, ಅದರಲ್ಲೂ ಹೆಣ್ಣಿನ ಆಯ್ಕೆ ಎನ್ನುವುದಕ್ಕೆ ತೆರೆದುಕೊಳ್ಳಬೇಕಾಗಿದೆ. ಮದುವೆಯಾಗಿ ಮೂರು ತಿಂಗಳಿಗೆ “ಗುಡ್ ನ್ಯೂಸ್ ಯಾವಾಗ?’’ ಅಂತ ಪ್ರಶ್ನಿಸುವುದನ್ನು ನಿಲ್ಲಿಸುವುದು ಸೂಕ್ತ. ಗುಡ್ ನ್ಯೂಸ್‍ನ ಪರಿಕಲ್ಪನೆ ಬದಲಾಗುತ್ತಿರುವ ಕಾಲಘಟ್ಟ ಇದು. ಇತಿಹಾಸವನ್ನು ಚೂರುಪಾರಾದರೂ ಓದಿಕೊಂಡವರಿಗೆ ತಿಳಿಯುತ್ತದೆ- ಸಮಾಜ, ಬದುಕು ಮತ್ತದರ ಉದ್ದೇಶ ನಿಂತ ನೀರಾಗಿದ್ದೇ ಇಲ್ಲ. ಬದಲಾವಣೆ ನೀರಿನಂತೆ, ದಾರಿ ಮಾಡಿಕೊಂಡು ಸಾಗುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ.
ಇಂದಿನವರೆಗೆ ಆಚರಿಸಿಕೊಂಡು ಬಂದದ್ದು ಮಾತ್ರ ಸತ್ಯ ಅಲ್ಲ, ಜೊತೆಗೆ ಮಿಥ್ಯೆಯೂ ಅಲ್ಲ. ಮಕ್ಕಳು ಹೊಂದಿದವರನ್ನೆಲ್ಲ ಹೇಗೆ ತಪ್ಪಿತಸ್ಥರೆಂದು ಸಾರಾಸಗಾಟಾಗಿ ಕರೆಯಬಾರದೋ ಹಾಗೇ ಮಕ್ಕಳು ಬೇಡವೆನ್ನುವವರನ್ನು ಗೌರವಿಸುವುದೂ ಮುಖ್ಯ.
ಯಾವುದಕ್ಕೂ ವ್ಯಕ್ತಿಗತ ನಿರ್ಧಾರಗಳನ್ನು ಹೆಚ್ಚು ಗೌರವಿಸುವುದು ಸಮಾಜದ ಸ್ವಾಸ್ಥ್ಯಕ್ಕೆ ಬಹಳ ಒಳ್ಳೆಯದು.
ಹಿಂದಿನ ಸಿಗ್ನಲ್ : Orange Signal : ‘ಅವರು ತುಂಬಾ ಕಪ್ಪಗಿದ್ದಾರೆ, ಚೆನ್ನಾಗಿ ಕೆಲಸ ಮಾಡುತ್ತಾರೋ ಇಲ್ಲವೋ’