Obituary: ಪದ ಸ್ತಬ್ಧಗೊಳಿಸಿದ ಪದ್ಯಾಣ ಗಣಪತಿ ಭಟ್ಟರು

Padyana Ganapathi Bhat: ತುಂಬು ತೋಳಿನ ಜುಬ್ಬ ಧರಿಸಿ, ಕುಂಕುಮದ ತಿಲಕವಿಟ್ಟು ಚಿನ್ನದ ಬಣ್ಣದ ಆವರಣವಿರುವ ಕನ್ನಡಕ ತೊಟ್ಟು ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ಬಂದು ಕುಳಿತರೆ ರಂಗಸ್ಥಳಕ್ಕೆ ಶೋಭೆ.

Obituary: ಪದ ಸ್ತಬ್ಧಗೊಳಿಸಿದ ಪದ್ಯಾಣ ಗಣಪತಿ ಭಟ್ಟರು
ಪದ್ಯಾಣ ಗಣಪತಿ ಭಟ್
Follow us
|

Updated on:Apr 12, 2022 | 11:45 AM

ಪದ್ಯಾಣ ಮನೆತನಕ್ಕೂ ಯಕ್ಷಗಾನಕ್ಕೂ ಅವಿನಾಭಾವ ನಂಟು. ಪದ್ಯಾಣದ ಮಣ್ಣಿನಲ್ಲಿ ಶೈಶವ- ಬಾಲ್ಯಗಳನ್ನು ಕಂಡ ನನಗೆ ಯಕ್ಷಗಾನದ ಆಸಕ್ತಿ ಹುಟ್ಟಿದ್ದು ಸ್ವಾಭಾವಿಕ. ಎಳವೆಯಿಂದಲೇ ಪದ್ಯಾಣ ಗಣಪತಿ ಭಟ್ಟರ ಪದ್ಯಗಳನ್ನು ಕೇಳಿ ಬೆಳೆದವನು ನಾನು. ಕ್ಯಾಸೆಟ್‌ಗಳಲ್ಲಿ ಗಣಪತಿ ಭಟ್ಟರ ಪದ್ಯಗಳನ್ನು ಕೇಳಿ ಹುಚ್ಚೆದ್ದು ಕುಣಿಯುತ್ತಿದ್ದೆ. ಅವರನ್ನು ಕಾಣಬೇಕೆಂದು ಹಂಬಲಿಸಿದ್ದ ನನಗೆ ತಿಳಿಯಿತು, ಪದ್ಯಾಣದ ಗಣಪತಿ ಭಟ್ಟರು ಇರುವುದು ಬೆಳ್ಳಾರೆಯಲ್ಲಿ ಅಂತ. ಅವರನ್ನು ಕಾಣುವ ತವಕ ಕೈಗೂಡಲಿಲ್ಲ ಎಂದು ಬಹಳ ಬೇಸರವಾಯಿತು. ಆದರೆ ಮನಸ್ಸಿನಲ್ಲೇ ಅವರ ಅಭಿಮಾನಿಯಾಗಿ, ಆರಾಧಕನಾಗಿ ಉಳಿದೆ. ನನ್ನ ನೆನಪಿನಂತೆ ನಾನು ಮೊದಲು ಅವರನ್ನು ಪ್ರತ್ಯಕ್ಷ ನೋಡಿದ್ದು, ಭಾಗವತಿಕೆಯನ್ನು ಪ್ರತ್ಯಕ್ಷವಾಗಿ ಕೇಳಿದ್ದು ಬಾಯಾರಿನಲ್ಲಿ ನಡೆದ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನದಲ್ಲಿ. ಅದು ಸುರತ್ಕಲ್ ಮೇಳದ ಬಯಲಾಟ ಆಗಿತ್ತು. ಅಂದು ಪದ್ಯಾಣ ಗಣಪತಿ ಭಟ್ಟರ ಭಾಗವತಿಕೆ. ಅತಿಥಿಯಾಗಿ ಬಂದಿದ್ದ ಶೇಣಿಯವರ ಬಪ್ಪಬ್ಯಾರಿ. ಆ ಪ್ರಸಂಗದಲ್ಲಿ ಬಂದ ಗುಳಿಗ ಮತ್ತು ಬಪ್ಪಬ್ಯಾರಿ ಎರಡೇ ಪಾತ್ರಗಳು ಈಗ ನೆನಪಿವೆ. ಆದರೆ ಮರೆಯದೆ ಉಳಿದದ್ದು ಪದ್ಯಾಣರ ಭಾಗವತಿಕೆ. ಮಧ್ಯರಾತ್ರಿಯ ನಿದ್ದೆಯ ಗುಂಗಿನಲ್ಲಿದ್ದ ನನ್ನನ್ನು ಥಟ್ಟನೆ ನೆಟ್ಟಗೆ ಕುಳಿತುಕೊಳ್ಳುವಂತೆ ಮಾಡಿದ್ದು ಪ್ರಧಾನ ಭಾಗವತರ ಸ್ಥಾನದಲ್ಲಿ ಬಂದು ಕುಳಿತ ಪದ್ಯಾಣರ ಆಗಮನ. ತುಂಬು ತೋಳಿನ ಜುಬ್ಬ ಧರಿಸಿ, ಕುಂಕುಮದ ತಿಲಕವಿಟ್ಟು ಚಿನ್ನದ ಬಣ್ಣದ ಆವರಣವಿರುವ ಕನ್ನಡಕ ತೊಟ್ಟು ಅವರು ರಂಗದಲ್ಲಿ ಬಂದು ಕುಳಿತರೆ ರಂಗಸ್ಥಳಕ್ಕೆ ಶೋಭೆ.

ತಿರುಮಲೇಶ್ವರ ಭಟ್ಟ- ಶ್ರೀಮತಿ ಸಾವಿತ್ರಿ ದಂಪತಿಗಳ ಮೂರನೆಯ ಮಗನಾಗಿ ಹುಟ್ಟಿದ ಈ ಪದ್ಯಾಣ ಭಾಗವತರು; ಒಂದು ಕಾಲದ ಪ್ರಸಿದ್ಧ ಭಾಗವತರಾಗಿದ್ದ ಪುಟ್ಟುನಾರಾಯಣ ಭಾಗವತರ ಮೊಮ್ಮಗ. ಗಣಪತಿ ಭಟ್ಟರ ತಂದೆ ತಿರುಮಲೇಶ್ವರ ಭಟ್ಟರು ಒಳ್ಳೆಯ ಮದ್ದಳೆಗಾರರಂತೆ. ಈ ಹಿನ್ನೆಲೆಯಲ್ಲಿ ಇವರಿಗೆ ಯಕ್ಷಗಾನದ ಆಸಕ್ತಿ ಆಕಸ್ಮಿಕವೇನೂ ಅಲ್ಲ. ಏಳನೇ ತರಗತಿಗೆ ಶಾಲೆ ತೊರೆದು ಧರ್ಮಸ್ಥಳದ ‘ಲಲಿತಕಲಾ ಕೇಂದ್ರ’ದಲ್ಲಿ ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ ಭಾಗವತಿಕೆ, ಮದ್ದಳೆವಾದನ, ಚೆಂಡೆವಾದನಗಳನ್ನು ಕರಗತಮಾಡಿಕೊಂಡವರು ಪದ್ಯಾಣರು. ದಾಸರಬೈಲು ಚನಿಯನಾಯ್ಕ – ಎಂಬ ಹಿರಿಯ ಭಾಗವತರ ಜೊತೆ ಮದ್ದಳೆ ವಾದಕರಾಗಿ ಚೌಡೇಶ್ವರಿ ಮೇಳದಲ್ಲಿ ತನ್ನ 16ನೆಯ ವಯಸ್ಸಿನಲ್ಲೇ ತಿರುಗಾಟ ಆರಂಭಿಸಿದರು. ಬಳಿಕ ಕುಂಡಾವು ಮೇಳದಲ್ಲಿ ಸಂಗೀತಗಾರರಾಗಿ (ಪೂರ್ವರಂಗದ ಹಾಡುಗಾರ), ಮದ್ದಳೆಗಾರರಾಗಿ ಅಪಾರ ಅನುಭವವನ್ನು ಗಳಿಸಿದರು. ಶಿವರಾಮ ಜೋಗಿ, ವೇಣೂರು ಸುಂದರ ಆಚಾರ್ಯರ ಪರಿಚಯದಿಂದ ಸುರತ್ಕಲ್ ಮೇಳಕ್ಕೆ ಸಂಗೀತಗಾರನಾಗಿ ಸೇರಿದರು. ಅಲ್ಲಿಂದ ಬಳಿಕ ಪದ್ಯಾಣರು ಅಗರಿ, ಶೇಣಿಯವರ ಮಾರ್ಗದರ್ಶನದಲ್ಲಿ ಬೆಳೆದು ಭಾಗವತಿಕೆಯಲ್ಲಿ ಅಸಾಧಾರಣ ಕೀರ್ತಿ- ಯಶಸ್ಸನ್ನು ಸಂಪಾದಿದಿದರು. ತಾನು ಕಲಿತ ಸಂಪ್ರದಾಯದ ಶೈಲಿಯೊಂದಿಗೆ ಅಜ್ಜನಗದ್ದೆ ಗಣಪಯ್ಯ, ಅಗರಿ ಶ್ರೀನಿವಾಸ ಭಾಗವತ, ದಾಮೋದರ ಮಂಡೆಚ್ಚರ ಪ್ರಭಾವಕ್ಕೊಳಗಾದ ಅವರು ಮುಂದೆ ತನ್ನದೇ ಆದ ಪದ್ಯಾಣ ಶೈಲಿಯನ್ನು ಹುಟ್ಟುಹಾಕಿದರು. ಶೇಣಿಯವರ ಮೆಚ್ಚಿನ ಭಾಗವತರಾಗಿದ್ದ ಪದ್ಯಾಣರು ಸುರತ್ಕಲ್ ಮೇಳದಲ್ಲಿ ಮುಂದೆ ಸತಿಶೀಲವತಿ, ರಾಣಿ ರತ್ನಾವಳಿ, ಪಾಪಣ್ಣ ವಿಜಯ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ, ಗಂಡುಗಲಿ ಕುಮಾರ ರಾಮ, ನಾಟ್ಯರಾಣಿ ಶಾಂತಲಾ, ತುಳುನಾಡ ಸಿರಿ, ರಾಜಾ ಯಯಾತಿ – ಹೀಗೆ ಪೌರಾಣಿಕ, ಐತಿಹಾಸಿಕ ಮತ್ತು ಕಾಲ್ಪನಿಕ ಪ್ರಸಂಗಗಳನ್ನು ರಂಗದಲ್ಲಿ ಮೆರೆಸಿದರು. ಪದ್ಯಾಣರ ಯೌವನದ ಭಾಗವತಿಕೆಯನ್ನು ಕೇಳಲೆಂದೇ ಆ ಕಾಲದಲ್ಲಿ ಕಾಸರಗೋಡಿನಿಂದ ಕುಂದಾಪುರ ವರೆಗೂ ಯಕ್ಷಗಾನಕ್ಕೆ ಹೋಗುತ್ತಿದ್ದರು!. ಇದು ಪದ್ಯಾಣರ ಪದ್ಯದ ಮೋಡಿ.

ಅಗರಿ, ಶೇಣಿ, ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್, ಪೆರುವೋಡಿ (ಹಾಸ್ಯಗಾರ) ನಾರಾಯಣ ಭಟ್ಟರಂತರ ಹಿರಿಯರ ಒಡನಾಟದಿಂದ ಪದ್ಯಾಣರು ಸಾಕಷ್ಟು ಮಾಗಿದರು. ಮುಂದೆ ಕರ್ಣಾಟಕ, ಮಂಗಳಾದೇವಿ, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಸುದೀರ್ಘ ನಾಲ್ಕುದಶಕಗಳ ತಿರುಗಾಟ ನಡೆಸಿದರು. ಅದೆಷ್ಟೋ ಹಳೆಯ – ಹೊಸ ಪ್ರಸಂಗಗಳನ್ನು ಮೆರೆಸಿದರು. ರಾತ್ರಿಗಳನ್ನು ಬೆಳಗಿದರು. ಶ್ರೀ, ವಾಸಂತಿ, ಶೋಭಾವರಿ, ಕಲ್ಯಾಣವಸಂತ, ಝೋನ್ಪುರಿ ಮೊದಲಾದ ರಾಗಗಳನ್ನು ತನ್ನದೇ ರೀತಿಯಲ್ಲಿ ಬಹಳ ಪರಿಣಾಮಕಾರಿಯಾಗಿ ಬಳಕೆಗೆ ತಂದು ಜನಪ್ರಿಯಗೊಳಿಸಿದರು. ಸಂಪ್ರದಾಯದ ಮಟ್ಟುಗಳನ್ನೂ ಅಷ್ಟೇ ಯಶಸ್ವಿಯಾಗಿ ಹಾಡಿ ಮೆಚ್ಚುಗೆಗಳಿಸಿದರು. ತೆಂಕುತಿಟ್ಟಿನಲ್ಲಿ ಇಂದಿಗೂ ಒಡ್ಡೋಲಗ ಪದ್ಯಕ್ಕೆ ಉತ್ತಮ ಮಾದರಿ ಅಂದರೆ ಪದ್ಯಾಣರದ್ದು. ಒಡ್ಡೋಲಗದ ವೈಭವವನ್ನು ಸಾಕ್ಷಾತ್ಕರಿಸುವಂತೆ ಅವರು ತಾರಸ್ಥಾಯಿಯಿಂದ ಪದ್ಯ ಆರಂಭಿಸುತ್ತಿದ್ದ ಬಗೆ ನಿಜಕ್ಕೂ ಅತ್ಯದ್ಭುತ.

ಯಕ್ಷಗಾನ ರಂಗದಲ್ಲಿ 80 ರ ದಶಕದಲ್ಲಿ ಅದೆಷ್ಟೋ ಉತ್ತಮೋತ್ತಮ ಆಟ, ಕೂಟ, ಕ್ಯಾಸೆಟ್‌ಗಳು ಇವರ ಭಾಗವತಿಕೆಯಿಂದ ಮೆರೆದುವು. ಶಾಸ್ತ್ರೀಯ ಸಂಗೀತದ ಸ್ಪರ್ಶವನ್ನು ಕೊಟ್ಟು ಸಂದರ್ಭಾನುಸಾರಿಯಾದ ರಾಗಗಳನ್ನು ಅಳವಡಿಸಿ ಪ್ರೇಕ್ಷಕರ ಮನಸ್ಸನ್ನು ತಟ್ಟುವಂತೆ ಹಾಡುವ ಕಲೆ ಪದ್ಯಾಣರಿಗೆ ಕರಗತ. ಶ್ರುತಿ – ಲಯಗಳ ಮೇಲೆ ಅವರ ಪ್ರಭುತ್ವ ಅಸಾಧಾರಣವಾದದ್ದು. ಬಯಲಾಟಕ್ಕೆ ಮತ್ತು ತಾಳಮದ್ದಳೆಗೆ ಬೇರೆಯೇ ಹಾಡುಗಾರಿಕೆ. ಪದ್ಯವನ್ನು ಕೇಳಿದರೆ ಸಾಕು ಇದು ಆಟವೋ ಕೂಟವೋ ತಿಳಿದೀತು. ಹಳೆಯ – ಹೊಸ ಶೈಲಿಗಳಲ್ಲಿ ಹಾಡುವುದಕ್ಕೆ ಸಮರ್ಥರಾಗಿದ್ದವರು ಪದ್ಯಾಣರು. ಸತ್ಯ ಹರಿಶ್ಚಂದ್ರ, ಸೀತಾ ಪರಿತ್ಯಾಗದಂತಹ ಪ್ರಸಂಗಗಳಿಗೆ ಯಶಸ್ವಿಯಾಗಿ ಭಾಗವತಿಕೆ ನಿರ್ವಹಿಸುತ್ತಿದ್ದ ಪದ್ಯಾಣರು ರಕ್ತರಾತ್ರಿಯಂತಹ ವೀರ-ರೌದ್ರ- ಅದ್ಭುತ ರಸ ಪ್ರಧಾನ ಪ್ರಸಂಗಗಳನ್ನೂ ಅಷ್ಟೇ ಯಶಸ್ವಿಯಾಗಿ ಮೆರೆಸಿದವರು. ಆಧುನಿಕ ಜನರ ಮನಃಸ್ಥಿತಿಗೆ ಕೂಡ ತನ್ನನ್ನು ಒಗ್ಗಿಸಿಕೊಂಡು ಗಾನ ವೈಭವದಲ್ಲೂ ಮೆರೆದವರು. ಸಂಪ್ರದಾಯ ಪ್ರಿಯರಿಗಾಗಿ ಆಲ್ಲಲ್ಲಿ ಒಂದೊಂದಾದರೂ ಪಾರಂಪರಿಕ ಕ್ರಮದಿಂದ ಹಾಡುವ ಉದಾರಿ. “ನಿನಗೆ ಇಷ್ಟ ಆಗುವಂತೆ ನಾನು ಹಳೆಯ ಕ್ರಮದಲ್ಲೇ ಹಾಡಿದರೆ ಉಳಿದವರು ಅದನ್ನು ಮೆಚ್ಚಲಿಕ್ಕಿಲ್ಲ” ಎಂದು ಹೇಳಿ ಕಿರು ನಗೆಸೂಸಿ ಸಮಾಧಾನಪಡಿಸುತ್ತಿದ್ದರು.

ರಂಗದಲ್ಲಿ ಒಳ್ಳೆಯ ಭಾಗವತರಾಗಿದ್ದ ಗಣಪ್ಪಣ್ಣ ಚೌಕಿಯಲ್ಲಾಗಲಿ ಯಾವುದೇ ಸಭೆ-ಸಮಾರಂಭದಲ್ಲಾಗಲಿ ಎಲ್ಲಿ ಕಂಡರೂ “ಎಂತ ಮಾರಾಯ” ಎಂದು ಪ್ರೀತಿಯಿಂದ ಮಾತನಾಡಿಸುವ ಸೌಜನ್ಯವಂತ. ದರ್ಪ – ಅಹಂಕಾರಗಳು ಹತ್ತಿರ ಸುಳಿಯದ ಮುಗ್ಧ ಮನಸ್ಸು ಅವರದು. ಎಷ್ಟೇ ಸಣ್ಣವರಾದ ಕಲಾವಿದರ ಜೊತೆಗೂ ಹೊಂದಿಕೊಂಡು ಪ್ರದರ್ಶನವನ್ನು ಕಳೆಗಟ್ಟುವಂತೆ, ಸಹ ಕಲಾವಿದರನ್ನೂ ಮೆರೆಸುವಂತೆ ರಂಗದಲ್ಲಿ ನಡೆದುಕೊಳ್ಳುವ ಗುಣ ಪದ್ಯಾಣರದ್ದು. ಬಹುಮಂದಿ ಭಾಗವತರು ಹಾಡುವ ಸಂದರ್ಭಗಳಲ್ಲಿ ಕಿರಿಯರೊಂದಿಗೂ ಸೌಜನ್ಯದಿಂದ ಹೊಂದಿಕೊಂಡು ಕಿರಿಯರನ್ನೂ ಮೆರೆಸುತ್ತಿದ್ದುದು ಅವರ ಹೆಚ್ಚುಗಾರಿಕೆ. ಅಪಾರ ರಂಗಾನುಭವದ ಗಣಪ್ಪಣ್ಣ ಆಟ – ಕೂಟಗಳಲ್ಲಿ ರಂಗವೇರಿದರೆ ಸಾಕು, ವೇದಿಕೆಗೊಂದು ಅಲಂಕಾರ. ಅಪಾರ ಅನುಭವದಿಂದ ರಂಗದ ಓಟವನ್ನು ಹತೋಟಿಗೆ ತರುವ ಕೌಶಲ ಅವರಿಗಿತ್ತು. ಪ್ರದರ್ಶನವನ್ನು ಕೊನೆಯತನಕವೂ ಮೆರೆಸಿ ಪ್ರೇಕ್ಷಕರನ್ನು ಹಿಡಿದಿಡುವ ಸಾಮರ್ಥ್ಯ ಅವರಿಗಿತ್ತು. ಸಮಯಕ್ಕೆ ಮೊದಲೇ ಆಗಮಿಸಿ, ಕಾರ್ಯಕ್ರಮಕ್ಕೆ ‘ಇಷ್ಟು ಸಂಭಾವನೆ ಕೊಡಲೇ ಬೇಕು’ ಎಂದು ಒತ್ತಾಯಿಸದೆ, ಕಾರ್ಯಕ್ರಮದ ಆಯೋಜಕರಿಗೆ – ಸಂಘಟಕರಿಗೆ ತಲೆನೋವಾಗದಂತೆ ನಡೆದುಕೊಳ್ಳುವ ಗುಣ ಪದ್ಯಾಣರದ್ದು. ಇಂತಹ ಯಶಸ್ವಿ ಭಾಗವತ, ಪ್ರೀತಿತುಂಬಿದ ಅಂತರಂಗದ ನಗೆಮೊಗದ ಪದ್ಯಾಣರ ಅನಿರೀಕ್ಷಿತ ಅಗಲುವಿಕೆ ಅದೆಷ್ಟೋ ಬಂಧುಗಳ, ಕಲಾವಿದರ, ಅಭಿಮಾನಿಗಳ ಹೃದಯ ಆರ್ದ್ರವಾಗುವಂತೆ ಮಾಡಿದೆ. ಸಾಮಾನ್ಯರ ಜೊತೆ ಸಾಮಾನ್ಯನಂತೆ ನಡೆದಾಡಿ ಪ್ರೀತಿಯನ್ನುಣಿಸಿದ ಗಣಪ್ಪಣ್ಣ ಆ ಭಗವಂತನ ಸನ್ನಿಧಿಯನ್ನು ಸೇರಿದ್ದಾರೆ. ಮನುಷ್ಯನಿಗೆ ಸಾವು ಸಹಜ ಆದರು ಅವರ ಅಗಲಿಕೆಯಿಂದ ಕಲೆ ಬಡವಾದುದು ಸತ್ಯ.

ಬರಹ:  ಡಾ. ಶ್ರೀಕೃಷ್ಣ ಭಟ್ಟ, ಸುಣ್ಣಂಗುಳಿ

ಇದನ್ನೂ ಓದಿ: ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ನಿಧನ

Published On - 10:09 pm, Tue, 12 October 21

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್