T. P. Kailasam’s Birthday ; ನಮ್ ಮಕ್ಳ್ ಇschool ನೋಡಕ್ಕೆ ನೀವಿರ್ಬೇಕಿತ್ ಪ್ರಹಸನ ಪಿತಾಮಹರೇ
Education : “ವಿದ್ಯಾಭ್ಯಾಸಕ್ರಮಗ್ಳು, ಅವುಗಳ ಪ್ರಯೋಜ್ನಗ್ಳು, ಮಹಿಮೆಗಳು, ಇವುಗಳಲ್ಲೆಲ್ಲಾ ನಂಗೆ ಬಹು ಪರಿಶ್ರಮವುಂಟು. ಅದ್ರಲ್ಲೂ ಈಗ ನಮ್ದೇಶ್ದಲ್ಲಿ ಇಂಗ್ಲೀಷು ವಿದ್ಯಾಭ್ಯಾಸ ಕ್ರಮಾಂತ್ಹೆಸರಿಟ್ಕೊಂಡು ಜರಿಗಿಸ್ತಾ ಇದ್ದೇವಲ್ಲ, ಆ ಕ್ರಮಾನ ಹೋಳ್ಹೋಳಾಗಿ ಹೆಚ್ಚಿ ಉಪ್ಪಿನಕಾಯ್ ಹಾಕಿಟ್ಟಿದೀನಿ. ಜಾಡೀ ಪಕ್ದಲ್ಲಿಟ್ಟಕೊಂಡೇ ಮಾತಾಡ್ತಿರೋದ್ನಾನು.’’ ಟಿ. ಪಿ. ಕೈಲಾಸಂ
T. P. Kailasam’s Birthday : ವಿಶಿಷ್ಟ ಸಂವೇದನೆಯ ನಾಟಕಕಾರ ಟಿ. ಪಿ. ಕೈಲಾಸಂ (29.7.1884- 26-12-1946) ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಕಮಲಮ್ಮ ತಂದೆ ತ್ಯಾಗರಾಜ ಪರಮಶಿವ. ಅವರ ಕೃತಿಗಳಲ್ಲಿ ಲಭ್ಯವಾದವು 17 ಕನ್ನಡ ಮತ್ತು 4 ಇಂಗ್ಲಿಷ್ ನಾಟಕಗಳು. ಕಥಾ ಹಂದರವನ್ನು ನಿರೂಪಿಸಿ, ಪೂರ್ತಿಗೊಳಿಸಲಾರದವು ಅದೆಷ್ಟೋ. ಹಾಸ್ಯ ಸಾಹಿತ್ಯ, ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ ಅವರು ಸ್ವತಃ ನಾಟಕಗಳನ್ನು ಬರೆಯುವುದರ ಹೊರತಾಗಿ ಇತರರಿಗೆ ಹೇಳಿ ಬರೆಸಿದ್ದೇ ಹೆಚ್ಚು. ಟೊಳ್ಳೂಗಟ್ಟಿ, ಬಹಿಷ್ಕಾರ, ಗಂಡಸ್ಕತ್ರಿ, ಪೋಲಿಕಿಟ್ಟಿ, ಸೂಳೆ, ನಂತರ ಕನ್ನಡ ಸಾಮಾಜಿಕ ನಾಟಕಗಳನ್ನೂ ತಾವರೆಕೆರೆ (ಕಥಾಸಂಗ್ರಹ), ಕೋಳಿಕೇರಂಗ (ಹಾಡುಗಳು), ಕರ್ಣ, ಕೀಚಕ (ಇಂಗ್ಲಿಷ್ ನಾಟಕಗಳು). 1945ರಲ್ಲಿ ಮದರಾಸಿನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕರಾಗಿದ್ದರು.
*
ಲೇಖಕ ಆರ್. ಶ್ರೀನಾಗೇಶ್ ಅವರು ಟಿಪಿಕಲ್ ಕೈಲಾಸಂ ಅವರ ಲೋಕದಲ್ಲೊಂದು ಸುತ್ತು ಹೊಡೆದಿರುವುದೂ ವಿಶಿಷ್ಟವಾಗಿಯೇ ಇದೆ.
* “ದೃಷ್ಟಾಂತಕ್ಕೆ ಹೇಳ್ತೇನು. ಲಾಲಿಸ್ಬೇಕು. ಹೆಸರುಗ್ಳು ಹೇಳಿದ್ರೆ ಜಗಳ. ತಂದೆ ಸ್ವಲ್ಪ ಬಲಿಷ್ಠ. ಕೂತ್ಕೊಂಡಿದ್ದೇ ನೋಡಿ ಆಸ್ಪತ್ರೇಲಿ. ರಿಸಲ್ಟ್ಸ್ ಬಂದು ಒಂದರ್ಧ ಘಂಟೆ ಕೂಡ ಇಲ್ಲ. ಹೊತ್ಕೊಂಡು ಬಂದ್ರು ಹುಡುಗನ್ನ. ಕೆಳಗಿಳಿಸುತ್ಲೂನೂವೆ ಆ ಡಾಕ್ಟು ಅಂಗಿ ಬಿಚ್ದ ಬಾತ್ಕೊಂಡಿದ್ವು ನೋಡಿ ಬಾಸುಂಡಗ್ಳು- ವಿನಾಯಕಂಚೌತಿ, ಸಂಕ್ರಾಂತಿ ಎರಡೂ ವಕ್ರಿಸ್ಕೊಂಡ್ಹಾಗೆ -ಕಡ್ಬು-ಕಬ್ಬು, ಕಬ್ಬು-ಕಡ್ಬು ಮೈಮೇಲೆಲ್ನೋಡಿದ್ರೂವೆ. ಎರ್ಡು ಸೀಸೆ ಕಾರ್ಬಾಲಿಕೆಣ್ಣೆ, ಅರ್ಧ ಪಿಂಡೆ ಹತ್ತಿ ಆಸ್ಪತ್ರೆಗೆ ಖರ್ಚು. ಈ ಷೋಡಶೋಪಚಾರಗ್ಳೆಲ್ಲ ಆ ಮಗೂಗ್ಯಾಕೇಂತ ಕೇಳ್ತೀರೋ… ಅದೆಂಥಾದ್ದು, ಆ ಲೆಖ್ಖ- ಮಾಟಿಕ್ಸಂತಾರಲ್ಲ, ಅದರಲ್ಲಿ ಒಂದು ಮರ‍್ಕಿನಲ್ಲಿ ಹೋಯ್ತಂತೆ.
‘‘ಹಯ್ಯೋ, ಫೇಲು ಅಂತ ತಿಳೀತ್ಲೂನೂವೆ ಮನೇಲ್ಚಮ್ಡಾ ಎಗ್ರಿಸ್ತಾರೇನ್ನೋ ಭಯದಿಂದ ಭಾವೀಲ್ಬಿದ್ದು ಸತ್ತಿದಾರೇಂದ್ರೇ, ಎಷ್ಟೋ ಮಂದಿ ಹುಡುಗ್ರೂ.”
ಇದು ಕೈಲಾಸಂ ಅವರ ಮೊದಲ ನಾಟಕ ಟೊಳ್ಳುಗಟ್ಟಿಯ ಕಥಾವಸ್ತು! ಪರೀಕ್ಷೆ, ಅಂಕಗಳಿಗೆ ನಾವು ಕೊಟ್ಟಿರುವ ಅತೀ ಒತ್ತಿನಿಂದಾಗಿ ಈಗಲೂ ಪರೀಕ್ಷೆ ಮತ್ತು ಫಲಿತಾಂಶಗಳ ಭಯ ಮಕ್ಕಳ ಜೀವವನ್ನು ಆಹುತಿ ತೆಗೆದುಕೊಳ್ಳುತ್ತಿದೆ. ಕನ್ನಡಕ್ಕೊಬ್ಬರೇ ಕೈಲಾಸಂ ಎಂಬ ಖ್ಯಾತಿ ಹೊಂದಿರುವ ಕೈಲಾಸಂ ಒಂದು ಅದ್ಭುತ ವ್ಯಕ್ತಿ. ಮಹಾ ಪ್ರತಿಭಾವಂತ.
ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿಯೇ. I was born with a silver spoon but it hurt me ಎಂದು ಅವರು ಹೇಳುತ್ತಿದ್ದರು. ಕಿರಿದಾಗಿ ಪರಿಚಯ ಮಾಡಿಕೊಡಬೇಕು ಎಂದರೆ, ಬಾಲ್ಯ ಹಾಸನ, ಮೈಸೂರು, ಬೆಂಗಳೂರು ಮುಂತಾದ ಕಡೆ ಆಯಿತು. ಆಗ ಪದವಿಗಾಗಿ ಮದರಾಸಿಗೆ ಹೋಗಬೇಕಿತ್ತು. ಅಲ್ಲಿ ಪದವಿ ಮುಗಿಸಿದ ನಂತರ ಉನ್ನತ ವ್ಯಾಸಂಗಕ್ಕಾಗಿ ಅಂದಿನ ಸಂಪ್ರದಾಯದಂತೆ ಇಂಗ್ಲೆಂಡಿಗೆ ತೆರಳಿದರು. ಆರು ವರ್ಷ ಅಲ್ಲಿ ವಾಸ.
ಈ ಸಮಯದಲ್ಲಿ ಪಠ್ಯದ ಜೊತೆ ಕೈಲಾಸಂ ಅವರ ದಿನಚರಿ ಲಂಡನ್ನಿನಲಿ ಮತ್ತು ಪ್ಯಾರಿಸ್ಗಳಲ್ಲಿ ನಾಟಕಗಳನ್ನು ನೋಡುವುದು, ಸಂಗೀತ ಕಛೇರಿಗಳಿಗೆ ಹೋಗುವುದು, ಫುಟ್‌ಬಾಲ್ ಪಂದ್ಯಗಳನ್ನು ನೋಡುವುದು ಹಾಗೂ ಪಬ್‌ಗಳಿಗೆ ಭೇಟಿ ಕೊಡುವುದು! ಈಗಿನ ವಿದ್ಯಾರ್ಥಿಗಳು ಗಮನಿಸಬೇಕಾದ ವಿಚಾರ ಎಂದರೆ, ಮೇಲಿನ ಚಟುವಟಿಕೆಗಳ ಜೊತೆಗೆ ಅವರ ಕಲಿಕೆಯ ಗುಣಮಟ್ಟ! ಪರೀಕ್ಷೆಯಲ್ಲಿ ಎಂಟು ಪ್ರಶ್ನೆಗಳನ್ನು ಕೊಟ್ಟು ಉತ್ತರಿಸಲು ಯಾವುದಾದರೂ ಆರನ್ನು ಆರಿಸಿಕೊಳ್ಳಿ ಎಂದು ಸೂಚಿಸಿದ್ದರೆ, ಇವರು ಎಂಟಕ್ಕೂ ಉತ್ತರ ಬರೆದು ಪ್ರಾರಂಭದಲ್ಲಿಯೇ ಮೌಲ್ಯಮಾಪನ ಮಾಡಲು ಯಾವುದೇ ಆರು ಉತ್ತರಗಳನ್ನು ಆರಿಸಿಕೊಳ್ಳಿ ಎಂದು ಮೌಲ್ಯಮಾಪಕರಿಗೇ ಸಲಹೆ ನೀಡಿರುತ್ತಿದ್ದರು!
ಅನಂತರ ವಾಪಸು ಬಂದರು. ಬಾಲ್ಯದಿಂದಲೂ ಇವರ ಪ್ರತಿಭೆಯನ್ನು ಗುರುತಿಸಿದ್ದ ಮಹಾರಾಜರು ಇವರಿಗೆ ಜಿಯಾಲಜಿಸ್ಟ್ ಆಗಿ ಕೆಜಿಎಫ್‌ನಲ್ಲಿ ನೌಕರಿ ಕೊಟ್ಟರು. ಆದರೆ, ಕೈಲಾಸಂ ಅವರ ವ್ಯಕ್ತಿತ್ವ ಗಣಿಗಳೊಳಗೆ ಭೂಮಿಯಡಿಯಲ್ಲಿ ಬಚ್ಚಿಡುವಂತಹದ್ದಾಗಿರಲಿಲ್ಲ. ಕೆಲಸ ತ್ಯಜಿಸಿದರು. ಭೂಮಿಯೊಳಗಿನ ಶೋಧನೆಯ ಬದಲಿಗೆ ರಂಗಭೂಮಿಯ ಮೇಲೆ ಜನರನ್ನು ಪ್ರದರ್ಶಿಸುವುದು ಅವರ ಬದುಕಿನ ಗುರಿಯಾಗಿತ್ತು!
ಲಂಡನ್ನಿನಲ್ಲಿದ್ದಾಗ ಆಸ್ಕರ್ ವೈಲ್ಡ್, ಇಬ್ಸೆನ್ ಮತ್ತು ಜಾರ್ಜ್ ಬರ್ನಾರ್ಡ್ ಷಾ ಅವರುಗಳ ನಾಟಕಗಳಿಂದ ಪ್ರಭಾವಿತರಾಗಿದ್ದರು. ಆ ನಾಟಕಗಳಲ್ಲಿಯಂತೆ, ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ತಾವೂ ಇಲ್ಲಿ ಮಾಡಬಯಸಿದರು. ಅದರ ಮೊದಲ ಕೃತಿಯೇ ಟೊಳ್ಳು-ಗಟ್ಟಿ.
ಎರಡನೆಯ ಮಗ ಫೇಲಾದ್ದಕ್ಕೆ ಅವನಿಗೆ ಊಟಕ್ಕೆ ತುಪ್ಪವಿಲ್ಲ, ಮೊಸರಿಲ್ಲ, ಹೊದ್ದಿಕೊಳ್ಳಲು ಧಾವಳಿ ಇಲ್ಲ, ಮಲಗಲು ಚಾಪೆ ಇಲ್ಲ. ಅತ್ಯುತ್ತಮ ಅಂಕಗಳನ್ನು ಗಳಿಸುತ್ತಿದ್ದ ಮೊದಲ ಮಗನಿಗೇ ಎಲ್ಲಾ ಆದ್ಯತೆ. ಮಗ ಯಾಕೆ ಫೇಲು ಎಂದು ಅರಿಯಲು ಅಪ್ಪ ಎಂದಿಗೂ ಪ್ರಯತ್ನವನ್ನೇ ಮಾಡಿರಲಿಲ್ಲ. ಮನೆಯ ಎಲ್ಲ ಕೆಲಸಗಳೂ- ಅನಾರೋಗ್ಯ ಪೀಡಿತ ತಾಯಿಯ ಸೇವೆಯೂ ಸೇರದಂತೆ-ಅವನ ಮೇಲೇ ಬಿದ್ದಿದ್ವು. ಊರಿನಲ್ಲಿಯೂ ಅನೇಕರಿಗೆ ನೆರವಾಗುತ್ತಿದ್ದ. ಅದೇ ಓದಿನಲ್ಲಿಯೇ ಮುಳುಗಿರುತ್ತಿದ್ದ ಹಿರಿಯ ಮಗ ಮನೆಗೆ ಬೆಂಕಿ ಬಿದ್ದಾಗ ತನ್ನ ಪುಸ್ತಕಗಳನ್ನು ತೆಗೆದುಕೊಂಡು ದೂರ ಮರದ ಕೆಳಗೆ ಕುಳಿತಿರುವನು. ಮನೆಯ ಜನರನ್ನು ಕಾಪಾಡುವುದು ಫೇಲಾದ ಮಗನೇ. ಟೊಳ್ಳು ಟೊಳ್ಳೇ, ಗಟ್ಟಿ ಗಟ್ಟಿಯೇ ಎನ್ನುವ ಸಂದೇಶವನ್ನು ಕೊಡುವ ಮೂಲಕ ಮಕ್ಕಳ ಸಾಮರ್ಥ್ಯವನ್ನು ಅಳೆಯಲು ಪರೀಕ್ಷೆಯನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಡಿ ಎನ್ನುವ ಸಂದೇಶವನ್ನು ಕೈಲಾಸಂ ಪ್ರಬಲವಾಗಿ ಕೊಟ್ಟರು ತಮ್ಮ ಮೊದಲ ನಾಟಕದಲ್ಲಿ.
• ಕೈಲಾಸಂ ಅವರ ಕೃತಿಗಳನ್ನು ಎರಡು ವಿಭಾಗಗಳಲ್ಲಿ ಗುರುತಿಸಬಹುದು. ಒಂದು ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವುದು. ಅವರು ಸಮಸ್ಯೆಗಳನ್ನಷ್ಟೇ ಎತ್ತಿ ತೋರಿಸಿದ್ದಾರೆ. ನಾವು ಪರಿಹಾರ ಕೊಡುವುದು ಸರಿಯಲ್ಲ. ಅದನ್ನು ಜನರೇ ಕಂಡುಕೊಳ್ಳಬೇಕು. ಸಮಸ್ಯೆಯತ್ತ ಗಮನವನ್ನು ಸೆಳೆಯುವುದು ನಮ್ಮ ಕರ್ತವ್ಯ ಎನ್ನುವುದು ಅವರ ನಿಲುವಾಗಿತ್ತು.
• ಕೈಲಾಸಂ ಅವರ ನಾಟಕಗಳ ಮತ್ತೊಂದು ಆಯಾಮ ಎಂದರೆ, ಮನುಷ್ಯತ್ವದ ಮಹತ್ವವನ್ನು ವರ್ಣಿಸುವುದು. ಸಂಬಂಧಗಳಿಗೆ, ಭಾವನೆಗಳಿಗೆ ಗೌರವ ಕೊಡುವುದರ ಜೊತೆಗೆ ನೆರೆಹೊರೆಯವರಿಗೆ ನೆರವಾಗೋದೇ ಈ ಭೂಮಿ ಮೇಲೆ ವಾಸಿಸೋಕೆ ನಾವು ಭೂತಾಯೀಗ್ಕೊಡೋ ಬಾಡ್ಗೆ ಎಂಬ, ಹೊಂದಿಕೊಂಡು ಹೋಗುವ ಸಮಾಜ ಕಟ್ಟುವ ಕರೆಯನ್ನು ಕೊಡುವುದು.
• ಈಗಿನ ಪೀಳಿಗೆಯವರಿಗೆ ಕೈಲಾಸಂ ಕೃತಿಗಳನ್ನು ಓದಲು ತುಸ ಪ್ರಯಾಸ ಎನಿಸಬಹುದೋ ಏನೋ! ಕಾರಣ ಆಡುಭಾಷೆಯಂತೆಯೇ ಇರುವ ಕೃತಿಯನ್ನು ಇತರ ಅನೇಕ ಕೃತಿಗಳ ಹಾಗೆ ಮನಸ್ಸಿನಲ್ಲಿಯೇ ಓದಿಕೊಂಡರೆ ಮನನವಾಗುವುದು ಕಷ್ಟ. ಗಟ್ಟಿಯಾಗಿ ಓದಿದರೆ ಉತ್ತಮ. ಜೊತೆಯಲ್ಲಿ ಯಾರನ್ನಾದರೂ ಕೂರಿಸಿಕೊಂಡು ಓದಿದರೆ ಮತ್ತೂ ಉತ್ತಮ!
• ಕೈಲಾಸಂ ಅವರು ಯಾವ ಭಾಷೆಯಲ್ಲಿ ನಾಟಕ ಬರೆದರು ಎಂದು ಕೇಳಿದರೆ, ನೇರವಾಗಿ ಕನ್ನಡದಲ್ಲಿ ಎಂದು ಹೇಳಲಾಗದು. ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಉರ್ದು ಎಲ್ಲ ಭಾಷೆಗಳೂ ಇವರ ಕೃತಿಗಳಲ್ಲಿ ಸಿಗುತ್ತವೆ!
• ಬರೆದರು ಎನ್ನುವುದೂ ತಪ್ಪೇ! ಇವರು ನಾಟಕ ಕುರಿತು ಅಲ್ಲಲ್ಲಿ ಗೀಚಿರುವರು. ಅನಂತರ ರಾತ್ರಿ ಅದನ್ನು ಹೇಳುತ್ತಾ ಹೋಗುವರು. ಕೆಲವು ರಾತ್ರಿಗಳು ಏನೂ ಹೇಳಿರುತ್ತಿರಲಿಲ್ಲ. ಕೆಲವು ರಾತ್ರಿಗಳು ಇಡೀ ರಾತ್ರಿ ಹೇಳಿರುತ್ತಿದ್ದರು. ಅದನ್ನು ತಾಳ್ಮೆಯಿಂದ ನಿದ್ದೆಗೆಟ್ಟು ಬರೆದುಕೊಂಡ ಕೆಲವು ಮಹನೀಯರಿಗೆ ನಾವು ಕೃತಜ್ಞತೆ ಸಲ್ಲಿಸಲೇಬೇಕು!
• ಕೈಲಾಸಂ ಪಾತ್ರಗಳೂ ಭಿನ್ನ! ಮನೆ ಕೆಲಸದ ಬೋರ, ಜಟಕಾ ಸಾಬಿ ಯಾಕೂಬ ಅಂತಹವರೂ ನಾಟಕಗಳಲ್ಲಿ ಹೀರೋಗಳ ಹಾಗೆಯೇ ಮಿಂಚುತ್ತಾರೆ. ಬದುಕಿನಲ್ಲಿ ಬಡತನ, ಯಾತನೆಗಳನ್ನೂ ಅನುಭವಿಸಿದ್ದರೂ ಬೇರೆಯವರಿಗೆ ನೆರವಾಗುವ ಪೋಲಿ ಕಿಟ್ಟಿ, ಪರಿಸ್ಥಿತಿಯಿಂದಾಗಿ ತನ್ನ ವೃತ್ತಿಧರ್ಮವನ್ನು ಪಾಲಿಸುತ್ತಿರುವ ಸೂಳೆ, ವಿತಂತು ನಾಗತ್ತೆ, ಎರಡನೆಯ ಹೆಂಡತಿಯಾಗಿ ಜಾಣತನದಿಂದ, ಧರ್ಮದ ನೆಲೆಗಟ್ಟಿನಲ್ಲಿ ಸಂಸಾರ ನಡೆಸುವ ವೆಂಕಮ್ಮ ಮುಂತಾದ ಪಾತ್ರಗಳು ಆಂತರಿಕವಾಗಿ ತುಂಬ ಪ್ರಬಲವಾದವು. ಅಹೋಬ್ಲು, ರಾಮಣ್ಣ, ನರಸಿಂಹಯ್ಯ ಅಂತಹ, ಸರಿಯಾಗಿ ಸಂಪಾದನೆ ಇಲ್ಲದಿದ್ದರೂ ಬಡಾಯಿಯನ್ನು ಮಾತ್ರ ಬಿಡದ ದುರ್ಬಲ ಪಾತ್ರಗಳೂ ಬರುತ್ತವೆ.
ಕೈಲಾಸಂ ಅವರ ಪರಿಚಯವಿಲ್ಲದ ಪೀಳಿಗೆಯವರಿಗೆ ಅವರ ಕೃತಿಗಳ ಒಂದು ವಿಹಂಗಮ ನೋಟವನ್ನು ಕೊಟ್ಟ ನಂತರ ಇಂದಿಗೂ ಪ್ರಸ್ತುತವಾಗುವ ಮತ್ತೊಂದು ಮಹತ್ತರ ಅಂಶದ ಕಡೆ ಗಮನ ಹರಿಸೋಣ.
ಮಕ್ಕಳಿಸ್ಕೂಲ್ ಮನೇಲಲ್ವೇ
ಟೊಳ್ಳು-ಗಟ್ಟಿಯಲ್ಲಿ ಪರೀಕ್ಷೆ, ಅಂಕಪಟ್ಟಿ ಆಧಾರದ ಮೇಲೆ ಮಕ್ಕಳ ಶಕ್ತಿ, ಉಪಯುಕ್ತತೆಗಳನ್ನು ಗಮನಿಸಬಾರದು ಎನ್ನುವ ಸಂದೇಶದ ಜೊತೆಗೆ ಮಕ್ಕಳನ್ನು ಬೆಳೆಸುವ ಸಮಯದಲ್ಲಿ ಪೋಷಕರ ಪಾತ್ರ ಕುರಿತು ಕೈಲಾಸಂ ಸುಮಾರು 100 ವರ್ಷಗಳ ಹಿಂದೆ ಕೇಳಿದ ಪ್ರಶ್ನೆಗಳು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ.
ಪುರುಷರ ಜೊತೆ Equal Rights ಪ್ರತಿಪಾದಿಸುವ ಸರೋಜಳಿಗೆ ಕಮಲೂ ಹೇಳುವ ಹಿತನುಡಿ Motherhood ಗೆ ಎಲ್ಲಿದೆಯೇ Equal Rightsಉ? ಮುಂದಕ್ಕವನು ಏನಾಗ್ತಾನೋ, Good manಓ, Bruteಓ, Scoundrelಓ, Self centered pigಓ, Self effacing patriotಓ ಯಾವುದಾಗ್ತಾನೋ ಅದೆಲ್ಲ ನಿನ್ನ ಕೈಲೇ ಇದೆ. ಆರೇಳು ವರ್ಷದಲ್ಲಿ ಅದಾಗ್ಲಿ, ಇಲ್ಲ ಇದಾಗ್ಲಿ, Decide ಮಾಡೋ ಜವಾಬ್ದಾರಿ ಎಲ್ಲ ನಿನ್ನ ಕೈಲೇ ಇದೆ”
ಮಕ್ಕಳಲ್ಲಿ ಬದುಕಿನ ಅಂತಃಸತ್ವವನ್ನು, ಶಕ್ತಿಯನ್ನು ತುಂಬುವಲ್ಲಿ ಅಮ್ಮನ ಪಾತ್ರವನ್ನು ಕೈಲಾಸಂ ಪ್ರತಿಪಾದಿಸಿರುವುದು ಹೀಗೆ. “ಏನು Whole of India ನೇ Mahatma Gandhi‘s non violence policy ನ ಹೊಗಳಿದ್ರೂನೂವೆ, ಯಾವ ಮಹಾತಾಯೀನೋ ಆತ ಮಗುವಾಗಿದ್ದಾಗ ಚೀಮೆಗಳ್ನ ಕೊಲ್ಲಬಾರ್ದು, ನೊಣಗಳನ್ನು ಹೊಡೀಬಾರ್ದು ನಾಯಿ ಬೆಕ್ಕುಗಳ್ನ ಒದೀಬಾರ್ದು ಜವಾನನ್ನ ಬೈಬಾರ್ದು ಅಂಬೋದ್ನೆಲ್ಲ ಒದ್ದೋ ಮುದ್ದಿಟ್ಟೋ ಹೊಡ್ದೋ ಬಡ್ದೋ ಬೈದೋ ಇಲ್ಲಾ ಬಾಚಿ ತಬ್ಕೊಂಡೋ ಹ್ಯಾಗೋ, ಆ ಮಗೂನ ಮನಸ್ನಲ್ಲಿ ಇಳಿಸ್ಬಿಟ್ಳೋ ಈಗ Mother India ಗೆ Freedom ಬರೋಕೆ ದಾರಿ ಒಂದೇವೊಂದು, ಅಹಿಂಸಾ ಪರಮೋ ಧರ್ಮಃ ಅಂತ ಆತ Proclaim ಮಾಡ್ತಿದಾನೆ ಪ್ರಪಂಚಕ್ಕೆಲ್ಲಾ.
ಆತನ ಪಾಲಿಸಿ, ಆತನ ಮಹಾತ್ಮೆ ಅಂತ ಎಲ್ರೂ ಹೇಳಿದೂನೂ ನಮಗ್ಗೊತ್ತು Women ಗೆ Early childhoodನಲ್ಲಿ Mother influenceಏ, Later Manhood ನಲ್ಲಿ Man’s charectarro, destiny ಅಂತಾ” ಮಕ್ಕಳಿಗೆ ಅಂತಃಸತ್ವದ ಚೌಕಟ್ಟನ್ನು ಹಾಕುವುದು ಅಮ್ಮನ ಕೆಲಸವಾದರೆ, ಮಗುವಿನಲ್ಲಿ ಕನಸುಗಳು ಗರಿಗೆದರುವಂತೆ ಪ್ರೇರೇಪಿಸಿ, ಆ ಕನಸುಗಳನ್ನು ಪೋಷಿಸಿ, ಸಾಧಿಸುವಂತೆ ಪ್ರೋತ್ಸಾಹಿಸುವುದು ಅಪ್ಪನ ಕೆಲಸ. ಆರೇಳು ವರ್ಷಗಳಲ್ಲಿ ಅಮ್ಮ ತುಂಬಿದ ಮೌಲ್ಯದ ಚೌಕಟ್ಟು ಆತನ ಭವಿಷ್ಯದ ಬದುಕಿನ ರೀತಿಯನ್ನು ನಿರ್ಧರಿಸುತ್ತದೆ ಎಂದು ಕೈಲಾಸಂ ಒತ್ತಿ ಹೇಳಿದ್ದಾರೆ.
“ಏನೂ ಬೀಳದ ಭಾವಿಯಲ್ಲಿ ಪಾತಾಳಗರಡಿ ಹಾಕಿ ಎಷ್ಟು ಏಳೆದ್ರೂ ಹೇಗೆ ಏನೂ ಬರಲ್ವೋ, ಹಾಗೇ ಮನೆಯಲ್ಲಿ ಏನೂ ಕಲಿಸ್ದೆ ಶಾಲೆಗೆ ಕಳುಹಿಸಿದ್ರೆ, ಅಲ್ಲಿ ಶಿಕ್ಷಕ ಏನು ತಾನೇ ಮಗುವಿನಿಂದ ಹೊರಗೆಳ್ದಾನು” ಎನ್ನುವ ಪ್ರಮುಖ ಪ್ರಶ್ನೆಯನ್ನು ಕೈಲಾಸಂ ಅವರು ಪೋಷಕರ ಮುಂದಿಡುತ್ತಾರೆ.
ವಿದ್ಯಾಭ್ಯಾಸದ ಕ್ರಮ
ಈ ಕುರಿತು ಹೇಳಲು ಅವರಿಗೆ ಏನು ಅಧಿಕಾರವಿದೆ?
“ವಿದ್ಯಾಭ್ಯಾಸಕ್ರಮಗ್ಳು, ಅವುಗಳ ಪ್ರಯೋಜ್ನಗ್ಳು, ಮಹಿಮೆಗಳು, ಇವುಗಳಲ್ಲೆಲ್ಲಾ ನಂಗೆ ಬಹು ಪರಿಶ್ರಮವುಂಟು. ಅದ್ರಲ್ಲೂ ಈಗ ನಮ್ದೇಶ್ದಲ್ಲಿ ಇಂಗ್ಲೀಷು ವಿದ್ಯಾಭ್ಯಾಸ ಕ್ರಮಾಂತ್ಹೆಸರಿಟ್ಕೊಂಡು ಜರಿಗಿಸ್ತಾ ಇದ್ದೇವಲ್ಲ, ಆ ಕ್ರಮಾನ ಹೋಳ್ಹೋಳಾಗಿ ಹೆಚ್ಚಿ ಉಪ್ಪಿನಕಾಯ್ ಹಾಕಿಟ್ಟಿದೀನಿ. ಜಾಡೀ ಪಕ್ದಲ್ಲಿಟ್ಟಕೊಂಡೇ ಮಾತಾಡ್ತಿರೋದ್ನಾನು.’’
ಈಗಿನ್ಕಾಲ್ದಲ್ಲಿ ನಮ್ಮನೆಗ್ಳಲ್ಲಿ ಗಂಡ್ಮಗೂ ಹುಟ್ಟೂತ್ಲೋವೆ ಪಂಚಾಕ್ಷರೀ ಜಪಾ ನಾ ಪ್ರಾರಂಭಿಸ್ಬಿಡ್ತೇವೆ. ಮುಂ-ದ-ಕ್ಬ-ರ-ಬೇ-ಕೂ ಅಂತಾ.”
ಈ ಮುಂದಕ್ಬರಬೇಕೂ ಅನ್ನೋಕೆ ಪರೀಕ್ಷೆ, ಅಂಕಗಳು, ಓದಿನ ಮಟ್ಟಗಳನ್ನು ನಾವು ಮಾನದಂಡವಾಗಿ ಇಟ್ಟುಕೊಂಡು ಹೇಗೆ ಎಡವುತ್ತಿದ್ದೇವೆ ಎನ್ನುವುದರತ್ತ ಕನ್ನಡಿ ಹಿಡಿದರು ನೂರು ವರ್ಷಗಳ ಹಿಂದೆ ಕೈಲಾಸಂ.
ಪ್ರಸ್ತುತ ವಿದ್ಯಮಾನಗಳನ್ನು ಕೈಲಾಸಂ ಅವರ ಮಾತುಗಳ ಹಿನ್ನೆಲೆಯಲ್ಲಿ ಪರಾಮರ್ಶೆ ಮಾಡಿದರೆ, ಪೋಷಕರಿಗೆ ತಮ್ಮ ಪಾತ್ರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆಗ ತಮ್ಮ ಮಗು “ಅದಾಗಬೇಕೋ, ಇದಾಗಬೇಕೋ” ಎಂದು ಆರಿಸಿಕೊಳ್ಳುವುದು ಸುಲಭವಾಗುವುದು!
ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವಲ್ಲಿ ಕೇವಲ ಪೋಷಕರ ಪಾತ್ರವನ್ನು ಮಾತ್ರ ಕೈಲಾಸಂ ಅವರು ಎತ್ತಿಕೊಳ್ಳಲಿಲ್ಲ. ಶಿಕ್ಷಣದಲ್ಲಿರುವ ಲೋಪದೋಷಗಳು (ಪೋಲಿ ಕಿಟ್ಟಿ), ದಾಂಪತ್ಯದಲ್ಲಿ ಸಾಮರಸ್ಯ ಮೂಡಿಸಿಕೊಳ್ಳುವ ದಾರಿ (ಅಮ್ಮಾವ್ರಗಂಡ), ಟೋಪಿ ಹಾಕಿಸಿಕೊಳ್ಳುವವರು ಇರುವ ತನಕ ಟೋಪಿ ಹಾಕುವವರು ಲಾಭ ಗಳಿಸುತ್ತಾರೆ ಎಂಬ ಪರಮಸತ್ಯ (ಹುತ್ತದಲ್ಲಿ ಹುತ್ತ), ಬಡತನದ ಬೇಗೆ (ತಾಳೀಕ್ಖಟ್ಟೋಕ್ಕೂಲೀನೇ, ಬಹಿಷ್ಕಾರ) ಇಂತಹ ಸಾಮಾಜಿಕ ಸಮಸ್ಯೆಗಳನ್ನೂ ತೆಗೆದುಕೊಂಡಿದ್ದಾರೆ. ಸೂಳೆಯ ಪಾತ್ರವಂತೂ ಸಮಾಜದ ದ್ವಂದ್ವ ನೀತಿಯನ್ನು ಎತ್ತಿ ಹಿಡಿಯುತ್ತದೆ. ಸಮಾಜದಲ್ಲಿರೋದು ಎರಡೇ ಜಾತಿ. ದುಡ್ಡಿಂದ ಕೊಬ್ಬಿದವರು, ದುಡ್ಡಿಲ್ಲದವರು ಎನ್ನುತ್ತಾನೆ ಪೋಲಿ ಕಿಟ್ಟಿ.
ಪ್ರಹಸನ ಪ್ರಪಿತಾಮಹ ವಿನೂತನ ರೀತಿಯ ಹಾಸ್ಯವನ್ನು ಬಳಸಿದ ಕೈಲಾಸಂ ಅವರು ತಮಗೆ ತಾವೇ ಕೊಟ್ಟುಕೊಂಡ ಬಿರುದು ಪ್ರಹಸನ ಪ್ರಪಿತಾಮಹ! ಅವರ ನಾಟಕಗಳಲ್ಲಿನ ಪಾತ್ರಗಳ ಸಂಭಾಷಣೆಗಳು, ಸನ್ನಿವೇಶಗಳು ನಗಿಸುತ್ತವೆ, ನಗುವಿನ ಹಿಂದೆ ಮನಸ್ಸಿನಲ್ಲಿ ಪ್ರಶ್ನೆಗಳನ್ನೂ ಹುಟ್ಟಿ ಹಾಕುತ್ತವೆ. ಅವರ ಜನಪ್ರಿಯತೆಗೆ ಅವರ ಚಾಟೂಕ್ತಿಗಳು ಪ್ರಮುಖ ಕಾರಣ ಎನ್ನಬಹುದೇನೋ!
ಏನ್ಸಾರ್ Lean ಆಗಿಬಿಟ್ಟಿದೀರಿ ಎಂದರೆ, ಹೌದಪ್ಪ, ನನ್ನ Play ನಲ್ಲಿ ತುಂಬ ತಲ್ಲೀನ್ ಆಗಿಬಿಟ್ಟಿದ್ದೀನಿ ಎನ್ನುವರು. ಇವರ ಪ್ರಸಿದ್ಧ ಚಾಟೂಕ್ತಿಯ ಕೆಲವು ಸಾಲುಗಳನ್ನು ಉಲ್ಲೇಖಿಸಬಯಸುವೆ.
ತಂದೆಯ ಮನೆಯಿಂದ ಹೊರಬಂದ ಮೇಲೆ, ಕೆಲವರಿಗೆ ತಮ್ಮ ಮನೆಯನ್ನು ತೋರಿಸುತ್ತ ಅವರು ಹೇಳಿದ್ದು, “ಅದೇ ಕಣ್ರೋ ನಮ್ಮನೆ. ವೈಟ್ಹೌಸೂ. ನಾನು ಅದರ ಬ್ಲಾಕ್ ಸ್ಪಾಟು. ಎಲ್ಲಿಯೋ ಮಾತನಾಡುತ್ತ, ಹಾರಲಿಕ್ಕೆ ಎಂಬ ಪದವನ್ನು ಬಳಸಿಕೊಂಡು, ಒಂದು ಮಾತು ಹೇಳಿದರು ನಿಮಗ್ಗೊತ್ತೇ, ಹಾರಲಿಕ್ ಮಿಲ್ಕ್ ಕುಡಿದೇ ಹನುಮಂತ ಸಮುದ್ರ ಹಾರಿದ್ದು ಯಾರೋ ಕೇಳಿದರು, ಹನುಮಂತನ ಸ್ವಾಮಿ ಏನು ಕುಡಿದ? “ರಾಮ, ಅರ್ಜುನ ಇವರೆಲ್ಲ ಆರೋ ರೂಟ್ ಗಂಜಿ (ಅವರದು ಬಿಲ್ಲುಗಾರಿಕೆ ತಾನೇ!) “ಭೀಮ”” “ಭೀಮ, ದುರ್ಯೋಧನ, ಬಲರಾಮ ಎಲ್ಲ Kruchenes Salt ತಿಂದಿದ್ದು” ಕಂಕುಳಲ್ಲಿ ಕ್ರಷ್ ಮಾಡಿದ ಅಭಿನಯ ತೋರಿಸುತ್ತ “ಭೀಷ್ಮ” ಭೀಷ್ಮ ಮಾತ್ರ ಶುದ್ದವಾದ ತಾಯಿ ಹಾಲು ಕುಡಿದೇ ಬೆಳೆದಿದ್ದು, ಗುಡ್ ಓಲ್ಡ್ ಗಂಗಾಪಾನಿ “ಕರ್ಣ?” “ಕೋಕೋ. ಅದಕ್ಕೆ ಕವಚ ಕೋ ಕುಂಡಲ ಕೋ ಅಂತ ಕೇಳಿದ್ನೆಲ್ಲ ಕೋ ಕೋ ಅಂತ ಕೊಟ್ಟುಬಿಟ್ಟ” ಶಕುನಿ? ಕ್ಷಣಕಾಲ ಯೋಚಿಸಿದರು. “ವಿಕಸಿತ ಬಕುಲಾಮೋದಃ” ಎಂದರು. ಯಾರಿಗೂ ಅರ್ಥ ಆಗಲಿಲ್ಲ. ವೇದಿಕೆಯಿಂದ ಇಳಿಯಲು ಸುಸಮಯ ಎಂದು “ಯೋಚಿಸ್ತಿರಿ, ಒಂದು ದಮ್ ಎಳೆದು ರ‍್ತೇನೆ” ಎಂದರು. ಬಕುಲ ಎಂದರೆ ಪಗಡೆ. ಪಗಡೆ ಹೂವಿನ ರಸವನ್ನು ಕುಡಿದೇ ಶಕುನಿ ಬೆಳೆದಿದ್ದಂತೆ!
ಪ್ರಾಸಪ್ರಿಯ ವಾಕ್ಯಗಳ ರಚನೆಯಲ್ಲಿ ಹಲವೆಡೆ ಪ್ರಾಸವನ್ನು ಅವರು ಸೊಗಸಾಗಿ ಬಳಸುತ್ತಿದ್ದರು.
ಚೆನ್ನಾಗ್ಚುನಾಯಿಸ್ದೆ ಚಾಕ್ರಿಗೀ ಚಟುಷ್ಪಾದಾನ ಬಿಡ್ಗಾಸು ಬಿದ್ದಿದ್ಯಾಂತ ಬಗ್ನೋಡ್ಕೊಂಡ್ರ‍್ತಿದೀಯೇನೋ ಬಕ್ವೇ ನನ್ಕಟ್ಟ್ಹಾಕೋ ಕಾಲೇಜ್ಕಟ್ಟೋಕೆ ಕಲ್ಲಿನ್ನೂ ಕೈಗೆ ಸಿಕ್ಕಿಲ್ಲ ಕಂಟ್ರಾಕ್ರ‍್ಗೆ ಎಂಜಲಿದ್ರೂ ಎನಾಮೆಲ್ ತಟ್ಟೇಲಿ ತಿನ್ನಬೇಕು ಓಹ್ Godಏ ಗುಡ್ ರಿಸಲ್ಟ್ಸೂ ಗಿವಪ್ಪಾ
ಅವರಿಗೆ ನ್ಯಾಷನಲ್ ಕಾಲೇಜಿನಲ್ಲಿ ಸನ್ಮಾನ ಮಾಡಿ ನಿಧಿಯನ್ನು ಅರ್ಪಿಸಲಾಯಿತು. ಅದಕ್ಕೆ ಅವರ ಉತ್ತರ ಕಾನಕಾನಹಳ್ಳಿ ಕಡೆ ಕಾಲ್ಹಾಕ್ಬೇಕಿದೆ. ಕತ್ತಲಾಗ್ತಾ ಇದೆ. ಕಿಸೇಲಿ ಕಾಸಿದೆ. ಕಳ್ಳರ ಕಾಟ. ಕ್ಷಮಿಸಿ (ಆಗ ಅವರು ಕನಕಪುರ ರಸ್ತೆಯಲ್ಲಿ ಎಲ್ಲಿಯೋ ಒಂದು ಕಡೆ ವಾಸವಿದ್ದರು. ಆ ಪ್ರದೇಶಕ್ಕೆ ಕಾನಕಾನಹಳ್ಳಿ ಎಂದು ಕರೆಯಲಾಗುತ್ತಿತ್ತು) ಸಂಗೀತಜ್ಞಾನವಂತೂ ಅಪ್ರತಿಮ! ಲಂಡನ್ನಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಒಬ್ಬ It is a long way to Tipperary, Constantinople ಹಾಡುಗಳನ್ನು ಹೇಳಿ ನನ್ನ ಹಾಗೆ ಯಾರಾದರೂ ಹಾಡಿದರೆ ಐದು ಪೌಂಡು ಬಹುಮಾನ ಕೊಡುವೆ ಎಂದ. ಕೂಡಲೇ ವೇದಿಕೆ ಏರಿದ ಕೈಲಾಸಂ ಅಲ್ಲಿಯೇ ಪದಗಳನ್ನು ಜೋಡಿಸಿಕೊಳ್ಳುತ್ತ ನಮ್ಮ ತಿಪ್ಪಾರಳ್ಳಿ ಬಲುದೂರ ಮತ್ತು ಕೋಳೀಕೆ ರಂಗ ಹಾಡುಗಳನ್ನು ಹೇಳಿ ಐದು ಪೌಂಡು ಗಿಟ್ಟಿಸಿಕೊಂಡರು. ಭಾರತೀಯ ಮತ್ತು ಪಾಶ್ಚಾತ್ಯ ಪರಂಪರೆಯ ಸಂಗೀತ ಜ್ಞಾನ ಅದ್ಭುತವಾಗಿತ್ತು. ಅವರ ಹಾಡುಗಳ ಸಿಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೇಳಿಲ್ಲದವರು ಕೇಳಿ ಹೊಸ ಅನುಭವವನ್ನು ಪಡೆದುಕೊಳ್ಳಬಹುದು!
ಕೈಲಾಸಂ ಅವರ ಎಲ್ಲ ಕೃತಿಗಳ ಸಮಗ್ರ ಸಂಪುಟವೂ ಪ್ರಕಟವಾಗಿವೆ. ಕೈಲಾಸಂ ಅವರ ಒಡನಾಟ ಹೊಂದಿದ್ದವರು ಹಂಚಿಕೊಂಡ ಅನುಭವಗಳೂ ಪುಸ್ತಕರೂಪದಲ್ಲಿ ಹೊರಬಂದಿವೆ. ಅವುಗಳನ್ನು ಕೊಂಡು ಓದಿದರೆ ಕೈಲಾಸಂ ಅವರ ಪ್ರತಿಭೆಯ ಪರಿಚಯವಾದೀತು. ಆದರೆ, ಆಗಲೇ ಹೇಳಿರುವಂತೆ, ಕೈಲಾಸಂ ಅವರ ಕೃತಿಗಳನ್ನು ನೀವು ಮನಸ್ಸಿನಲ್ಲಿಯೇ ಓದಿಕೊಳ್ಳಲು ಪ್ರಯತ್ನಿಸಿದರೋ, ಊಹೂಂ ಉಪಯೋಗ್ವಿಲ್ಲ. ಆರ್ಥವಾಗಲ್ಲ. ಯಾರನ್ನಾದ್ರೂ ಎದ್ರಿನಲ್ಲಿ ಕೂರಿಸ್ಕೊಂಡು ಗಟ್ಟಿಯಾಗಿ ಓದಿದರೋ, ನಿಮಗೂ ನಮ್ಮ ಹಾಗೇನೇ ಕೈಲಾಸಂ ಹುಚ್ಚು ಹಿಡಿದೀತು, ಹುಷಾರ್. ಇನ್ನ ಕೈಲಾಸಂ ಅವರ ಕೃತಿಗಳ ಪರಿಚಯ ಇರೋ ಯಾರನ್ನಾದ್ರೂ ರ‍್ಸಿ ಓದ್ಸಿದ್ರಂತೂ ನಿಮ್ಮ ಪಾಡು ಕೇಳ್ಳೇಬೇಡಿ!
ಇದನ್ನೂ ಓದಿ : Art and Entertainment : ‘ಸಂಪೂರ್ಣ ನಗ್ನರಾದ ಹೆಣ್ಣುಮಕ್ಕಳನ್ನು ನೋಡುವುದು ಸಾಧ್ಯವಾಗಲಿಲ್ಲ’
Published On - 11:30 am, Thu, 29 July 21