Sign In

By signing in or creating an account, you agree with Associated Broadcasting Company's Terms & Conditions and Privacy Policy.

Rain : ನಾ ‘ಪ್ಲುವಿಯೋಫೈಲ್‌’, ನೀ ಎನ್ನ ರೂಹ್​! ಇರ್ತೀಯಲ್ವಾ?

Waiting : ‘ನಾ ನನಗೆ ನಿಲುಕಿದಷ್ಟು ನಿನ್ನ ಅರ್ಥ ಮಾಡ್ಕೊಂಡಿದೀನಲ್ವಾ? ಮತ್ಯಾಕೆ ನೀನು ನನಗೆ ಅಂದು ಉತ್ತರ ಕೊಡದೇ ಮೂಕವಾದೆ? ನಿನ್ನ ಹರಹು, ಧಾಟಿ, ಸೆಲೆ, ಸೆಳೆತ ಬದಲಾಗೋದ್ಯಾಕೆ? ಉತ್ತರವಿಲ್ಲದ ಪ್ರಶ್ನೆಗಳ ದಯಪಾಲಿಸಿ ಹೇಳದೇ ಹೋಗಿಬಿಡೋದ್ಯಾಕೆ?’

Rain : ನಾ ‘ಪ್ಲುವಿಯೋಫೈಲ್‌’, ನೀ ಎನ್ನ ರೂಹ್​! ಇರ್ತೀಯಲ್ವಾ?
ಲೇಖಕಿ ಕ್ಷಮಾ ವಿ. ಭಾನುಪ್ರಕಾಶ ಮತ್ತು ಕವಿ ಚಿದಂಬರ ನರೇಂದ್ರ
Follow us
ಶ್ರೀದೇವಿ ಕಳಸದ
|

Updated on:Aug 10, 2021 | 8:09 PM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಇಂದಿನಿಂದ ಶುರುವಾಗುವ ಹೊಸ ಸರಣಿ. ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರ ಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಚಿಕ್ಕಿ ತೋರಸ್ತಾವ ಬೆರಳ, ಹೂಬಾಣ, ಗಾಳಿಕೆನಿಯನ್ನು ಕಾವ್ಯಲೋಕಕ್ಕೆ ಕೊಟ್ಟ ಕವಿ ಅನುವಾದಕ ಚಿದಂಬರ ನರೇಂದ್ರ ಅವರು, ಈಗಿಲ್ಲಿ ಹಿರಿಯ ಕವಿ ಗುಲ್ಝಾರರ ಕವನವನ್ನು ಭಾವಾನುವಾದ ಮಾಡಿದ್ದಾರೆ. ವಿಜ್ಞಾನಲೋಕದ ಜ್ಞಾನಕುಸುಮಗಳು, ಪ್ರತಿಜೀವಕಗಳ ಪ್ರಪಂಚ, ದೇಹದೇಗುಲದಲ್ಲಿ ಅನ್ಯಜೀವಿಗಳು ಪುಸ್ತಕಗಳನ್ನು ಬರೆದಿರುವ ಲೇಖಕಿ ಕ್ಷಮಾ ವಿ. ಭಾನುಪ್ರಕಾಶ ಮಳೆಗೊಂದು ವಿಚಾರಭಾವಲಹರಿ ಅರ್ಪಿಸಿದ್ದಾರೆ.  

ಯಾವದೋ ಮಾನ್ಸೂನ್’ನ ಬಿರುಸು ಗೋಡೆಯ ಮೇಲಿನ ತೂಗು ಹಾಕಿದ್ದ ಫೋಟೋ ಫ್ರೇಮ್ ತಿರುವಿ ಹಾಕಿ ಹೋಗಿದೆ.

ಕಳೆದ ಶ್ರಾವಣದಲ್ಲಿ ಒದ್ದೆಯಾಗಿರಲಿಲ್ಲ ಈ ಗೋಡೆಗಳು ಯಾಕೋ ಈ ಬಾರಿ ಹಸಿ ಹಸಿಯಾಗಿವೆ, ಬಿರುಕು ಬಿಟ್ಟುಕೊಂಡಿವೆ, ಒಂದೇ ಸವನೆ ಸೋರುತ್ತಿವೆ, ಒಣಗಿದ ಗಲ್ಲದ ಮೇಲಿಂದ ಇಳಿದು ಬಂದಂತೆ ಒದ್ದೆ ಕಣ್ಣೀರು.

ಇದೇ ಮಾಳಿಗೆಯ ಇದೇ ಇಳಿಜಾರಿನ ಮೇಲೆ ಗುನುಗಾಡುತ್ತ ಓಡಾಡುತ್ತಿತ್ತು ಮಳೆ,

ಕಿಟಕಿಯ ಗಾಜಿನ ಮೇಲೆ ಬರೆದು ಹೋಗುತ್ತಿತ್ತು ಬೆರಳಿನಿಂದ ತನ್ನ ಮನದಾಳದ ಮಾತು.

ಆದರೆ ಇಂದು ಕಣ್ಣೀರು ಹಾಕುತ್ತ ಕುಳಿತುಕೊಂಡು ಬಿಟ್ಟಿದೆ ಮುಚ್ಚಿದ ಬೆಳಕಿನ ಕಿಂಡಿಗಳ ಹಿಂದೆ.

ಖಾಲಿ ಚದುರಂಗದ ಖಾನೆಗಳ ಹಾಸಿದಂತಿವೆ ಈ ಮಧ್ಯಾಹ್ನಗಳು. ಯಾರೂ ಇಲ್ಲ ಮನೆಯೊಳಗೆ ಆಟ ಆಡುವವರು, ತಂತ್ರ ಹೆಣೆಯುವವರು.

ರಾತ್ರಿಯಾಗುವುದಿಲ್ಲ ಈಗ, ಬೆಳಗೂ ಕೂಡ. ನಿಂತು ಹೋಗಿಬಿಟ್ಟಿದೆ ಜಗತ್ತು.

ಯಾರದು ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೋ ಫ್ರೇಮ್ ತಿರುವಿ ಹಾಕಿ ಹೋಗಿದ್ದು ಮಾನ್ಸೂನ್’ನ ಬಿರುಸೆ ಅಥವಾ ಮುನಿಸೆ ?

*

ಓ ಮಳೆರಾಯಾ ಅನ್ನೋಣವೆಂದರೆ ಅದೇಕೋ ಬಾಯೇ ಬರದು; ಯಾಕೆ ನಿನ್ನನ್ನೂ ನಮ್ಮ ಜಗದ ನಿಯಮಗಳಲ್ಲಿ ಸಿಲುಕಿಸೋ ಪ್ರಯತ್ನ? ನೀ ಗಂಡೋ ಹೆಣ್ಣೋ ನನಗೇಕೆ? ಯಾವುದಾದರೂ ಒಂದು ಆಗಿರಬೇಕಾದ್ರೂ ಯಾಕೆ? ಆದ್ರೂ ನೀ ಬರದೆ ಮಾತ್ರ ನಾವಿಲ್ಲ ಅನ್ನೋ ಸತ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಒಂದನೇ ಕ್ಲಾಸಿನಲ್ಲೇ ತಿಳಿಯುತ್ತೆ; ಆದರೆ ಆ ಪಠ್ಯ ಕೇವಲ ಭೌತಿಕ ಅವಶ್ಯಕತೆಗಳ ಬಗ್ಗೆ ಮಾತಾಡೋದು ಅಂತ ಅರ್ಥ ಆಗೋದು ನಿನ್ನ ಹುಚ್ಚಿಗೆ ಬಿದ್ದ ನಂತರವೇ! ನಿನಗಾಗಿ ಕಾಯದೇ ವಿರಹ ಅಲ್ವಾ? ಅದೆಂಥಾ ಕಾಯುವಿಕೆ! ಅಬ್ಬಬ್ಬಾ ಬಿಸಿಲ ಬೇಗುದಿ ಮನದೊಳಗೋ, ಹೊರಗೋ ಗೊತ್ತಾಗದ ಹಾಗೆ. ನಿನ್ನ ಬಗ್ಗೆ ಅದೆಷ್ಟು ಬರೆದ್ರೂ ಸಾಲದು ನೋಡು. ನೀನು ನನ್ನ ಜೀವಿತದಲ್ಲಡಗಿದ ‘ಜೀವʼ, ಸಾಕ್ಷಿಭಾವ ಅಂತ ಅರಿವಾದದ್ದೇ, ನಾನೊಂದು ಗಝಲಿನ ಸಾಲಿನಂತೆ ಭಾಸವಾದೆ. ನಿನ್ನ ಬಗ್ಗೆ ನಂದೊಂದು ನೆನಪಿನ ಲಹರಿಯ ಝರಿ ಇಲ್ಲಿ.

ಜೂನ್‌ ಬಂತಂದ್ರೆ ನನ್ನ ಸಾಂಟಾಕ್ಲಾಸ್‌ ಬಂದಂತೇ! ಆಗಸದಗಲ ಹರವಿಕೊಳ್ಳೋ ಬಸುರೀ ಮೋಡಗಳೇ ನನ್ನ ಅತ್ಯಂತ ಪ್ರೀತಿಯ ನಿನ್ನನ್ನು ಹೊತ್ತು ತರುವ ಸಾಂಟಾ.

ಓ ಮಳೆ, ನೀ ಕೊಟ್ಟಷ್ಟು ವಿಶಿಷ್ಟ ಅನುಭವ, ಯಾವುದೂ ಕೊಟ್ಟಿಲ್ಲ ನನಗೆ. ನಾನೂ ನನ್ನ ಬಾಳಗೆಳೆಯ, ಮತ್ತು ಅತ್ಯಾಪ್ತ ಸ್ನೇಹಿತರು ನಮ್ಮನ್ನು ನಾವು ಮಳೆಹುಚ್ಚರು ಅಂತ್ಲೇ ಕರೆದುಕೊಳ್ಳೋದು. ಯಾವುದೋ ಜನ್ಮದಲ್ಲಿ ಮಲೆನಾಡಿನ ಮಣ್ಣಲ್ಲಿತ್ತೇನೋ ನನ್ನ ಬೇರು! ನಮಗೆ ಛಳಿಗಾಲ ಮತ್ತು ಬೇಸಿಗೆಕಾಲವೆಂದರೆ, ಛಳಿಯಿರುವ, ಸೆಖೆಯಿರುವ ಕಾಲವಲ್ಲ, ಅವು ಕೇವಲ ಮಳೆಗಾಗಿ ಕಾಯಲು ಇರುವ ಅವಧಿ ಎಂದಷ್ಟೇ ಲೆಕ್ಕ! ನಿಸರ್ಗದ ಭಾಗವಾಗೇ ಇರೋಕೆ, ಹೊರಗಿನ ಗಾಳಿ, ಬಿಸಿಲು, ಮಳೆಯನ್ನ ಮನದೊಳಗೆ, ಮೈಯೊಳಗೆ ಇಳಿಸಿಕೊಳ್ಳೋಕೆ ನಿರಂತರ ಪರಿಶ್ರಮ ಹಾಕಬೇಕಾದ ಕಾಲ ಇದು! ಇದೇನಿದು, ಅದಾಗೆ ಸಿಗುವ ಇವೆಲ್ಲಾ ನಮ್ಮೊಳಗೆ ಇಳಿಯೋದು ಕಷ್ಟವೇ? ಎನಿಸಬಹುದು, ಮಹಾನಗರಗಳಿಂದ ದೂರ ಇರೋವ್ರಿಗೆ; ಆದರೆ ನಮ್ಮ ಪಾಡೇ ಬೇರೆ. ಆಫೀಸ್‌ಗಳು ಸೆಂಟ್ರಲೈಸ್ಡ್‌ ಎ.ಸಿ ಮತ್ತು ಹಗಲಾದ್ರೂ ರಾತ್ರಿಯಾದ್ರೂ ಒಂದೇ ರೀತಿ ಉರಿಯುವ ದೀಪಗಳಿಂದ ಹೊರಲೋಕಕ್ಕೂ, ಒಳಲೋಕಕ್ಕೂ ಕೊಂಡಿ ಕಟ್‌ ಮಾಡಿ, ಬೇರೆಯದೇ ಪ್ರಪಂಚವಾಗಿಬಿಟ್ಟಿರುತ್ತವೆ. ಎಂತಹ ಬದುಕಪ್ಪಾ ಅದು? ಹೊರಗೆ ಬಿಸಿಲೋ ಬಿಸಿಲು, ಮೈಗೆ ಚೂರೂ ಬಿಸಿ ತಾಕದು, ಹೊರಗೆ ಧೋ ಮಳೆ, ಮೈಗೆ ಒಂದೇ ಒಂದು ಹನಿಯೂ ಸೋಕದು, ಇದನ್ನ ‘ಹಣ ಕೊಡಮಾಡುವ ಕಂಫರ್ಟ್‌ʼ, ‘ಮುಂದುವರಿದ ಕಾಲಘಟ್ಷʼ ಅಂತೆಲ್ಲ ಹೊಗಳುವಿರಾದ್ರೆ ಮುಂದೆ ಓದ್ಲೇ ಬೇಡಿ, ನಿಮಗೆ ಮಳೆ, ಮತ್ತದರ ಪ್ರವರ ಇಷ್ಟವಾಗೋದೂ ಡೌಟೇ!

ಆಲ್ಲಪ್ಪ, ನಿಸರ್ಗದ ಒಂದು ಅಣುವಷ್ಟಿರುವ ನಾವು, ಅದರ ಭಾಗವಾಗಿರದೇ ನಮ್ಮದೇ ಬಯೋಬಬಲ್‌ನಲ್ಲಿ ಬದುಕೋಕಾಗತ್ತಾ? ಮಳೆ, ನೀನೇನು ಗೊತ್ತಾ? ನೀನು ನನ್ನ ಮಟ್ಟಿಗೆ ಈ ಅಗಾಧ ಬಾನು ಮತ್ತು ಭೂಮಿಯ ಪ್ರೇಮಕತೆಯಂತೆ ಅನಿಸುತ್ತೆ. ಭೂಮಿ ಕಾದು, ಮಳೆಯ ಬರುವಿಕೆಗಾಗಿ ಎದುರು ನೋಡುವ ತಪನೆ, ಇನ್ನೇನು ಬಂದೇ ಅನ್ನೋ ಸೂಚನೆ ಕೊಟ್ಟು ಹುಸಿ ಮೋಡಗಳನ್ನೂ, ಭರ್ರನೆ ಗಾಳಿಯ ಹಾಡನ್ನೂ ಮೊದಲಿಗೆ ಕಳಿಸಿ, ತುಸುವೇ ಆಟವಾಡಿಸಿ, ಕೊನೆಗೆ ನಾನೂ ನಿನ್ನ ಬಿಟ್ಟಿರಲಾರೆ ಎನ್ನುತ್ತಾ ಧೋ ಎಂದು ಇಳೆಯನ್ನ ಅಪ್ಪಿಕೊಂಡ ಮಳೆಯ ಸರದಾರ ಬಾನು. ಹನಿ ಹನಿ ಪ್ರೇಮ್‌ ಕಹಾನಿ ಅಂದಿದ್ದು ಇದನ್ನೇ ಏನೋ ಯೋಗರಾಜಭಟ್ಟರು! ಓಹ್‌ ಮುಂಗಾರು ಮಳೆಯ ಹಾಡುಗಳೂ ನಮ್ಮ ಮಳೆಹುಚ್ಚಿನ ಬೆಂಕಿಗೆ ತುಪ್ಪ ಸುರಿಯುತ್ತೆ. ಮೇಘಮಲ್ಹಾರ ರಾಗವಂತೂ ಅತಿಪ್ರಿಯ! ಭಾಷಾಭೇದವಿಲ್ಲದೇ ಮಳೆಹುಚ್ಚಿಗೆ ಕಿಚ್ಚು ಹಚ್ಚುವ, ಮನದಣಿಸುವ, ಮಳೆಗಾಗಿ ಕಾತರಿಸಿ ಕಾಯುವಂತೆ ಮಾಡುವ ಹಾಡುಗಳಿಗೇನೂ ಕಡಿಮೆ ಮಾಡಿಲ್ಲ ನಮ್ಮ ಗೀತರಚನೆಕಾರರು, ಸಂಗೀತ ಮಾಂತ್ರಿಕರು.

ಸಂಗೀತ ಮಾತ್ರವಲ್ಲದೇ ಯಾವುದೇ ಬಗೆಯ ಕಲಾಮಾಧ್ಯಮವಾದ್ರೂ ಅಲ್ಲೊಂದು ಮಳೆಯ ಟಚ್‌ ಇದ್ರೆ ಅದರಿಂದ ದೊರೆಯುವ ಅನುಭೂತಿಯೇ ಅನನ್ಯ! ಕೆಲವು ಸಿನಿಮಾಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ಮಳೆಯ ಹಿನ್ನೆಲೆಯಲ್ಲಿ ಬರುವ ದೃಶ್ಯಗಳು, ಕಣ್ಣಿಗೆ ಕಟ್ಟಿದಂತಿದ್ದರೆ ಮತ್ತೂ ಕೆಲವು ದೃಶ್ಯಕಾವ್ಯಗಳಲ್ಲಿ, ಮಳೆಯನ್ನೇ ಮುಖ್ಯ ಪಾತ್ರವಾಗಿಸಿದ ಆ ನಿರ್ದೇಶಕ ಅದಿನ್ನೆಂಥಾ ಮಳೆಹುಚ್ಚನಿರಬಹುದು ಅಂತ ಮನ ಯೋಚಿಸತ್ತೆ. ಓ ಮಳೆ, ನಾ ಹೇಳೋದು ನಿನಗೆ ಕೇಳ್ತಾ? ನಿನ್ನ ನಾದ-ನಿನಾದ ಕೇಳ್ತಾ ನನ್ನೀ ಲಹರಿಯನ್ನ ಕೀಲಿಸುತ್ತಾ ಮನದ ಮೂಲೇಲೆಲ್ಲೋ ಬೇಸರ ಕಣಪ್ಪ ನನಗೆ; ಈ ಕೊರೋನಾ ಕಾಲಘಟ್ಟದಲ್ಲಿ ಮಳೆಗೆ ಅಂದ್ರೆ ನಿನ್ನಲ್ಲಿ ನೆನೆಯೋಕೆ ಹೊರಗೆಲ್ಲೂ ಹೋಗೋಕೆ ಆಗ್ತಿಲ್ವೇ ಅಂತಾ. ಆದ್ರೂ ವಿಶಾಲ ಬಾಲ್ಕನಿಯನ್ನ ಸದಾಕಾಲ ತೆರೆದಿಟ್ಟು ಮನೆಯ ಒಳಗೆ ಬಿಸಿಲು, ಛಳಿ ಮತ್ತು ನನ್ನ ಪ್ರೀತಿಯ ನಿನ್ನ ಇರುಚಲು ಹೊಡೆಯೋಕೆ ಅವಕಾಶ ಮಾಡಿಕೊಟ್ಟ ಆರ್ಕಿಟೆಕ್ಟಿಗೆ ಪುಣ್ಯ ಬರ್ಲಿ. ಬಾಲ್ಕನಿಯ ನೇರಾನೇರ ಎದುರಿಗೇ ಇದೆ ಮಳೆ ಮರ – ರೈನ್‌ಟ್ರೀ! ಅದರ ಆಸುಪಾಸಿಗೆ ನನ್ನ ನೆಚ್ಚಿನ ಪಾರಿಜಾತ! ಹೀಗೆ ಹೊರಗೆ ಹೋಗಲಾರದ ಕಾಲದ ಮಳೆಯ ಅನುಭವಕ್ಕೆ ನಮ್ಮ ಟೆಂಪರರಿ ಸೆಟ್‌-ಅಪ್‌ ತಯಾರಿದೆ.

rain series

ಸೌಜನ್ಯ : ಅಂಜರ್ಜಾಲ

ಟೆಂಪರರಿ ಯಾಕಂದ್ರೆ, ಪ್ಯಾಂಡೆಮಿಕ್‌ನ ನಂತರದ ಮಳೆಗಾಲದಲ್ಲಿ ಮನೆಯಲ್ಲಿದ್ದವನೇ ಪಾಪಿ ಅಲ್ವಾ? ನಮ್ಮದೊಂದು ಸಮಾನಮನಸ್ಕ ಸ್ನೇಹಿತರ ಗುಂಪಿದೆ, ನಿನಗೆ ಗೊತ್ತಿಲ್ದೆ ಏನು? ಮಳೆಗಾಲದ ನಮ್ಮ ಟ್ರಿಪ್‌ಗಳ ಕಾಮನ್‌ ದಿನಚರಿ ಅಂದ್ರೆ ಕಪ್ಪೆ, ಹಾವು ಹುಡುಕುತ್ತಾ ಅವುಗಳ ಬಗ್ಗೆ ಕಲಿಯೋಕೆ, ಫೋಟೋ ಸೆರೆಹಿಡಿಯೋಕೆ ಹೊರಡುವವರು ಕೆಲವರು, ಮಳೆಯಲ್ಲಿ ನೆನೆಯುತ್ತಾ ಕಾಡಿನ ಅನುಭವ ಪಡೆಯೋಕೆ ನಾವಿನ್ನು ಉಳಿದವರು, 3-4 ಘಂಟೆಗಳು ಮಳೆಯೊಂದಿಗೆ ನಮ್ಮದೇ ‘ಮೀ-ಟೈಮ್‌ʼ ಕಳೆಯೋದೇ ಒಂದು ತಪಸ್ಸಿನಂತಹ ಅನುಭವವಾದ್ರೆ, ಅದರ ನಂತರ ಆ ಗುಂಪೂ ಈ ಗುಂಪೂ ಒಟ್ಟುಗೂಡಿ ಗೂಡೊಂದರಲ್ಲಿ ನಡುಗುತ್ತಾ, ಬಿಸಿಬಿಸಿ ಮಿಸಳ್ ಪಾವ್ ತಿನ್ನುತ್ತಾ ಚರ್ಚಿಸೋದು ಸ್ವಾರಸ್ಯಕರ. ಅಲ್ಲೆಲ್ಲ ನಮ್ಮ ಚರ್ಚೆ ನಿನ್ನ ಸುತ್ತಲೇ ಗಿರಕಿ ಹೊಡೆದು ಹೊಡೆದು ಅಲ್ವೇನೋ? ಇನ್ನೇನು ವಿಷಯವಿಲ್ಲ ಎನ್ನಿಸಿದಾಗ ಹೊರಗೆ ಬಿಟ್ಟೂಬಿಡದೆ ಸುರೀತಾ ಇರೋ ನಿನ್ನ ಜಲ್‌ತರಂಗ್‌ ಕೇಳುತ್ತಾ ಮೌನವಾಗಿ ಕೂರುವುದಿದೆಯಲ್ಲಾ ಅದು ವರ್ಣಿಸಲಸದಳ.

ಧೋ ಧೋ ಮಳೆ, ನಿಮ್ಮ ರೇನ್‌ಗೇರ್‌ ಯಾವ ಬ್ರ್ಯಾಂಡಿನದ್ದಾದ್ರೂ ನನ್ನ ಮುಂದೆ ಯಾವ ಲೆಕ್ಕ ಎಂದು ನಮ್ಮ ಕೊಡೆ, ಬೂಟುಗಳು, ರೇನ್‌ಕೋಟ್‌, ಪಾಂಛೋಗಳಿಗೆ ಒಂದು ಗತಿ ಕಾಣಿಸಿದ ಬಲುಜೋರು ಮಳೆ, ಇಲ್ಲಿಯವರೆಗೂ ನನ್ನಲ್ಲೇ ಒಂದಾಗಿದ್ದ ಇವರೆಲ್ಲಾ ಈ ಪುಟ್ಟ ಕತ್ತಲು-ಕತ್ತಲ ಗೂಡೊಳಗೆ ಹೊಕ್ಕು ಅದೇನು ತಿಂತಾರೆ ಹಬೆಯಾಡೋದನ್ನ, ಅದೂ ನನ್ನ ಬಿಟ್ಟು ಅಂತ ಹಗೆಯಾಡೋ ಮಳೆ, ಬನ್ನಿ ಹೊರಗೆ ಬಾರದೆ ಎಲ್ಲಿ ಹೋದೀರಿ? ಪ್ರತಿ ವರ್ಷ ನಿಮ್ಮದಿದೇ ಕಥೆ, ೩-೪ ಘಂಟೆ ನನ್ನಲ್ಲಿ ನೆನೆಯೋದು, ಒಳಗೆ ಕೂರೋದು, ಪುನಾ ೩-೪ ಘಂಟೆಯ ನೆನೆಯುವ ಆವರ್ತನಕ್ಕೆ ಮರಳೋದು ಅಲ್ಲವೇ ? ಅನ್ನುತ್ತಾ ನಗೆಯಾಡೋ ಮಳೆ, ಇಳೆಯ ಎಂದೂ ಕಾಣದ ಮುಖಗಳ ಪರಿಚಯ ಮಾಡೋ ಗೈಡ್‌ ಮಳೆ, ಕಾಡಿನ ಆಸುಪಾಸಿನಲ್ಲಿರುವ ಭತ್ತದ ನಾಟಿಮಾಡುವವರ ಮುದ್ದಿಸುತ್ತಾ ಕೈಹಿಡಿವ ಕರುಣಾಮಯಿ ಮಳೆ, ಈ ಕಾಡಿನೂರಿಗೆ ಬರಲು ಸಾಧ್ಯವಾಗಿಸಿದ ಸೇತುವೆಯನ್ನೇ ಮುಳುಗಿಸಿ ಮರಳಿಹೋಗದಿರಿ ನಿಮ್ಮೂರಿಗೆ ಅಂತ ಕಾಡಿಕಂಗೆಡುವ – ಹೆದರಿಸಿ ನಡುಗಿಸುವ ಮಳೆ, ಎಲ್ಲವೂ ನನ್ನದೇ ಎಂಬಂತೆ ಭುವಿಯನ್ನಾವರಿಸೋ ಪ್ರಣಯುನ್ಮಾದೀ ಮಳೆ, ಪ್ರತಿ ಚಿಗುರಿಗೂ ನೀಬೆಳೆದು ಮರವಾಗು, ನಾನಿದ್ದೇನೆ ಎಂಬ ಅಭಯಹಸ್ತ ನೀಡೋ ಅಪ್ಪನಂಥಾ ಮಳೆ, ಜೊತೆಗೆ ಅಮ್ಮನಂಥಾ ಇಳೆ – ಸಾಕಲ್ಲ ನಮ್ಮ ಮೌನಕ್ಕೆ! ಆ ಮಳೆಯಲ್ಲಿ ನೆನೆಯುತ್ತಾ, ಗೂಡೊಳಗಿಂದ ಮಳೆ ನೋಡುತ್ತಾ ಕ್ಷಣಗಳು, ಘಂಟೆಗಳು, ದಿನಗಳು ಉರುಳಿದ್ದು ತಿಳಿಯೋಲ್ಲ, ನಿಜಕ್ಕೂ ಸಮಯ ಸ್ತಬ್ಧ-ಸ್ತಬ್ದ!

ಮದುವೆಯಾಗಿ ಬಂದ ಮೇಲಿನ ಸ್ವತಂತ್ರಜೀವನದ ಭಾಗವಾಗಿ ನಿನ್ನಲ್ಲೇ ನೆನೆಯುತ್ತಾ ಕಾಡುಮೇಡು ಅಲೆಯುವ, ಚಾರಣ ಮಾಡಿ ಸೊಂಟಕ್ಕೆ ತಕ್ಕಶಾಸ್ತಿ ಮಾಡುವ ಇಂಥಾ ಹುಚ್ಚು ಸಾಹಸಗಳು ಲಭ್ಯವಾದ್ವು; ಆದರೆ ಚಿಕ್ಕಂದಿನಿಂದ್ಲೂ ಮಳೆಯ ಅಂದ್ರೆ ನಿನ್ನಬಗ್ಗೆ ಚೆಂದದ ಕತೆಗಳನ್ನ, ಅನುಭವಗಳನ್ನ ಹಂಚಿಕೊಳ್ತಿದ್ದ ಅಪ್ಪ, ಮಳೆಯ ರಮ್ಯತೆಯ ಬಗ್ಗೆ ಬೆರಗು ಮೂಡಿಸಿದ್ದು; ಅಮ್ಮನ ಬಯಲುಸೀಮೆಯ ಮಳೆಗಾಲದ ಅನುಭವ ಬೇರೆಯೇ; ದೂರದ ಶಾಲೆಗೆ-ಕಾಲೇಜಿಗೆ ಮಳೆಯಲ್ಲೇ ನೆನೆದುಕೊಂಡು ನಡೆದುಹೋಗಿ, ಒದ್ದೆಮುದ್ದೆಯಾಗಿ ನಡುಗುತ್ತಾ ಕೂತು ಕಲಿತ ಪಾಠಕ್ಕಿಂತಾ, ಅದು ಬರಿಸಿದ ಜ್ವರ ಚೆನ್ನಾಗಿ ನೆನಪಿದೆ ಅಮ್ಮನಿಗೆ; ಪಾಪ ಅದ್ಯಾಕೆ ಹಾಗೆ ಒದ್ದಾಡಿಸ್ತಾ ಇದ್ದೆ ಅವರನ್ನ? ಹಾಗೆಂದು ನನ್ನ ಮಳೆಯಲ್ಲಿ ನೆನೆಯೋ ಹುಚ್ಚಿಗೆ ಅಮ್ಮನದು ʼ ಮಜಾ ಮಾಡೋ ಕಂದಾʼ ಅನ್ನೋ ಗ್ರೀನ್‌ಸಿಗ್ನಲ್‌. ಅಕ್ಕಪಕ್ಕದ ಮನೆ ಆಂಟಿಯರು ಇದೇನು ಹೀಗೆ, ಮಳೇಲಿ ನೆನೆಯೋದಾ, ಜ್ವರ ಬಂದಾತು, ಬುದ್ಧಿಯಿಲ್ವಾ ಎಂಬುದಕ್ಕೆ ಇವರು ಡೋಂಟ್‌ ಕೇರ್‌! ನನ್ನ ನಿನ್ನ್‌ ಫ್ರೆಂಡ್‌ಸಿಪ್‌ ನೋಡು ಹೀಗೆ ಶುರು ಆಯ್ತು! ಉದ್ಯಾನ ನಗರಿಯಲ್ಲಿ ಟೈಮ್‌ಟೇಬಲ್‌ ತಪ್ಪದೇ ಬರಬೇಕಾದಾಗ ಬರುವ ಮಳೆಯಲ್ಲಿ ಹಾಡುತ್ತಾ ಕುಣಿಯುತ್ತಾ ಬೆಳೆದ ನನಗೆ, ಯು.ಪಿ.ಎಸ್‌ ಇಲ್ಲದ ಕಾಲದ, ಕರೆಂಟ್‌ ಹೋದ ರಾತ್ರಿಗಳಲ್ಲಿ ಮಳೆಯ ಜೋಗುಳಕ್ಕೆ ಮಲಗಿದ್ದು, ಮಲಗಿ – ಎದ್ದರೂ ಇನ್ನೂ ಮಳೆ ಬರ್ತಿದೆಯಾ ಎಂಬ ಮುದಕ್ಕೆ ಬೆಳಗಾದದ್ದು, ನೆನಪಿನ ನವಿಲುಗರಿ. ನಾ ಮಲಗಿದ್ದಾಗ ನೀ ನನ್ನ ಕಾಯ್ತಿದ್ಯಾ?

ನಾಯಿಯೆಂದರೆ ಮೂಗುಮುರಿಯೋ ಕುಟುಂಬಕ್ಕೆ, ಮಳೆಯಲ್ಲಿ ಸಿಕ್ಕ ನಾಯಿಮರಿಯನ್ನು ತಂದು, ಅವರನ್ನು ಕನ್ವಿನ್ಸ್‌ ಮಾಡಿ, ಅದಕ್ಕೊಂದು ಗೂಡು ರೆಡಿ ಮಾಡಿ, ಮರಿಯನ್ನು ಬೆಚ್ಚಗಿರಿಸಿದಾಗ ನನಗೆ ಸಿಕ್ಕ ಆ ಬೆಚ್ಚನೆಯ ಭಾವದ ಪರಿ, ನಂತರ ಯಾವಾಗ್ಲೋ ಹುಡುಕಿಕೊಂಡು ಬಂದ ಅದರ ಅಮ್ಮ ಆ ಮರಿಯನ್ನು ನನ್ನಿಂದ ಕಸಿದದ್ದು, ಆಗ ನನ್ನಮ್ಮನನ್ನು ನಾನು ತಬ್ಬಿ ಅತ್ತದ್ದು ಕೂಡ ನೆನಪಾಗುತ್ತೆ, ಮಳೆಯಲ್ಲಿ ನೆನೆಯುತ್ತಾ, ಸೂರಿಗಾಗಿ ಹುಡುಕಾಡುವ ನಾಯಿಗಳು ಕಂಡಾಗ. ಆಗೆಲ್ಲ ನಾನೂ ನಿನಗೆ ನೆನಪಾಗ್ತೀನಾ?

ಅದ್ಯಾಕೋ ಗೊತ್ತಿಲ್ಲಪ್ಪ, ಚಿಕ್ಕಂದಿನಲ್ಲಿ ಕದ್ದುಮುಚ್ಚಿ ಹೋಗ್ತಾ ಬರ್ತಾ, ಅಕ್ಕಿ ತಿನ್ನೋ ಅಭ್ಯಾಸವಿತ್ತು. ನೋಡಿದವರೆಲ್ಲಾ ಬಯ್ಯೋವ್ರು, “ಏನೇ, ನಿನ್ನ ಮದುವೆಗೆ ಮಳೆ ಬರಬೇಕಾ?” ಅಂತ. ಅವರಿಗೇನೂ ಹೇಳದಿದ್ರೂ, ಮನಸಲ್ಲೇ “ಏನು ಮೂಢನಂಬಿಕೆಯಪ್ಪಾ ಇವರ್ದ್ದು? ಅಷ್ಟಕ್ಕೂ ನನ್ನ ಮದುವೆಗೆ ಮಳೆ ಬಂದ್ರೆ ಬರ್ಲಿ, ಅದಕ್ಕಿಂತಾ ಖುಷಿಯ ವಿಚಾರ ಇನ್ನೇನಿದೆ?” ಅಂತ ಯೋಚಿಸ್ತಿದ್ದ ಮಳೆಹುಚ್ಚಿ ನಾನು; ಅದಕ್ಕೆ ತಕ್ಕಂತೆ ನನ್ನ ಮದುವೆಯ ದಿನ ಸುರಿದ ಮಳೆ, ಮತ್ತೆಂದೂ ಸುರಿದಿಲ್ಲ ಬಿಡಮ್ಮಾ ಅಂತಾರೆ ನೆಂಟರಿಷ್ಟರು; ನನಗೋ ಒಳಗೊಳಗೇ ಚೆಂದದ ಭಾವ, ಮಳೆ ಬಂದು ನಮ್ಮನ್ನ ಆಶೀರ್ವಾದ ಮಾಡ್ತು ಅಂತ, ಆದ್ರೆ ನಮ್ಮ ಮದುವೆಗೆ ಸರ್ವಾಲಂಕಾರಭೂಷಿತರಾಗಿ ಮಳೆಯಲ್ಲಿ ನೆನೆದು ಒದ್ದೆಮುದ್ದೆಯಾಗಿ ಬಂದ ಅಥವಾ ನೀರು ನಿಂತ ರಸ್ತೆಗಳಲ್ಲಿ ಬರಲಾರದೇ ಅರ್ಧದಾರಿಗೇ ಹಿಂದಿರುಗಿದ ಪ್ರೀತಿಪಾತ್ರರನ್ನು ನೆನೆದು ಕಸಿವಿಸಿ, ಬೇಸರ. ಮದುವೆಗೆ ಮಾತ್ರವಲ್ಲ, ನಮ್ಮ ಜೀವನದ ಪ್ರಮುಖ ಘಟ್ಟಗಳಲ್ಲೆಲ್ಲವೂ ಮಳೆ ನಮ್ಮ ಕೈಹಿಡಿದಿದೆ, ನಾಕು ಹನಿಯಾದ್ರೂ ಸರಿ, ಬಂದು ಆಶೀರ್ವದಿಸಿದೆ. ಅದು ಮಳೆಗಾಲವಲ್ಲದಿದ್ದರೂ ಸಹ. ಅಲ್ವಾ? ಹಾಗಿದ್ರೆ ನೀ ದೇವರೇ ಅಲ್ವಾ? ಮತ್ಯಾಕೆ ಹೇಳೋದಿಲ್ಲ ನೀನು? ಧರ್ಮದ ಹೆಸರಲ್ಲೇ ಬದುಕುವ, ಕೊಲ್ಲುವ ವಿಷಜಂತುಗಳಿಗೆ? ಅವರು ನಂಬಿದ್ದು ಸುಳ್ಳೆಂದು ತಿಳಿದಾಗ ನಿನ್ನನ್ನೂ ಭೂಮಿಗೆ ಬರಗೊಡರೇನೋ ಅಂತ ನಿನಗೂ ಭಯವೇ, ಮಳೆ?

rain series

ಸೌಜನ್ಯ : ಅಂತರ್ಜಾಲ

ನಿನ್ನ ಅಂದ್ರೆ ಮಳೆಯ ಮೋದವನ್ನ, ಅದರೊಂದಿಗಿನ ಅಪರೂಪದ ಬಾಂಧವ್ಯನ್ನ ಮೆಲುಕು ಹಾಕೋಕೆ ಸಮಯದ ಪರಿವೆಯಿಲ್ಲ, ಪದಗಳ ಮಿತಿಯಿಲ್ಲ, ತಾಣದ ತಾಪತ್ರಯವಿಲ್ಲ, ಕಾಣದ ಉರವಣಿಗೆಯಿಲ್ಲ. ಮಳೆಯೊಂದಿಗಿನ ಪ್ರತಿಕ್ಷಣವೂ ವಿಭಿನ್ನ, ಅವಿಚ್ಛಿನ್ನ. ಅದು ಬಿರುಮಳೆಯಲ್ಲಿ ಬಾಳಗೆಳೆಯನೊಂದಿಗಿನ 3 ಗಂಟೆಯ ಬೈಕ್‌ರೈಡ್‌ ಇರಬಹುದು, ಕಳೆದ ವರ್ಷದ ಪ್ರವಾಹದಲ್ಲಿ ಬೆಳಗಾವಿ-ಮಹಾರಾಷ್ಟ್ರದ ನಡುವಿನ ಕಾಣದೂರಿನಲ್ಲಿ ಕೊಚ್ಚಿಹೋಗದೇ ತಿರುಗಿಬಂದ ಪವಾಡಸದೃಶ ಘಟನೆಯಿರಬಹುದು, ಎಲ್ಲರ ಹತ್ರ ಬಯ್ಸಿಕೊಂಡರೂ ಕೇರ್‌ ಮಾಡದೆ ಪುಟ್ಟಕೂಸಿನೊಂದಿಗೆ ಮಳೆಯೂರಿಗೆ ಹೋಗಿ, ನೆನೆದು, ತಣಿದು ಮಳೆಯನುಭವದ ಮೊದಲ ಪುಟಗಳ ಪಾಠವನ್ನು ಕಂದನಿಗೆ ಕಲಿಸಿದ್ದು, ಮಳೆಗಾಲದ ಶಾಲಾದಿನಗಳಲ್ಲಿ, ದೇವರೇ, ಯಾವುದಾದ್ರೂ ಕಾರಣಕ್ಕೆ ಇವತ್ತು ರಜೆ ಸಿಗ್ಲಿ, ಮನೇಲೇ ಬೆಚ್ಚಗೆ ಮಳೆ ನೋಡ್ತಾ ಕೂರುವ ಅಂತ ಕನಸು ಕಂಡು, ಸಮಯವಾಯ್ತು ಇನ್ನು ಹೋಗ್ಲೇಬೇಕು ಅಂತ ಛತ್ರಿ ಹಿಡಿದು ಮಳೆಯಲ್ಲಿ ಶಾಲೆಗೆ ನಡೆದದ್ದು, ವರ್ಷಕ್ಕೊಮ್ಮೆ  ಮಳೆಬಂದಾಗ ಮಾತ್ರ ಹೊರಗೆ ಬಂದು ದರ್ಶನ ಕೊಡುವ ನನ್ನ ಪ್ರೀತಿಯ ಮರಗಪ್ಪೆ (ಟ್ರೀ ಫ್ರಾಗ್‌)ನ ನೋಡಿ ಪ್ರತಿ ಬಾರಿಯೂ ಆಗುವ ಪುಳಕ, ಭಯಂಕರ ಮಳೆಯ ಕಗ್ಗತ್ತಲು ರಾತ್ರಿಯಲ್ಲಿ ಕಾರು ಚಾಲೂ ಆಗದೆ, ಕಾರಿನ ಗಾಜು ಪಾರದರ್ಶಕವಲ್ಲ ಎಂದೆನಿಸುವಷ್ಟು ಏನೂ ಕಾಣದ ರಸ್ತೆಯಲ್ಲಿ ಬೆಟ್ಟ-ಕಾಡಿನ ನಡುವೆ ಸಿಲುಕಿದ ಪತ್ತೆದಾರಿ ಹಾರರ್‌ ಕಾದಂಬರಿಯ ಪಾತ್ರಗಳು ನಾವು ಎನಿಸಿದ ನಮ್ಮ ಹನಿಮೂನ್‌ ಪ್ರವಾಸದೊಂದು ರಾತ್ರಿ, ನಾವು ನೆನ್ನೆ ಕುಳಿತಿದ್ದ ಬೆಂಚು ಇಂದು ಗೋಕಾಕ್‌ ಜಲಪಾತದ ನೀರು ಉಕ್ಕಿ ಬಂದು ಅದರ ಉದರ ಸೇರಿದೆ ಎಂದು ನ್ಯೂಸ್‌ನಲ್ಲಿ ನೋಡಿದಾಗ ಆದ ವಿಚಿತ್ರ ಅನುಭವ – ಇವೆಲ್ಲಾ ಮತ್ತು ಇನ್ನೂ ಹಲವು ನನ್ನ ಅರ್ಬನ್‌ ಜೀವನದ ಮಳೆಯ ಅನುಭವಗಳ ಯಾದಿಯಲ್ಲಿ ಅಲ್ಲಲ್ಲಿ ಮೆಲುಕು ಹಾಕಲು ಉಳಿದ ಚರುಪು.

ಅತ್ಯಂತ ಪ್ರೀತಿಪಾತ್ರ ಆದ್ರೂ ಭಯ ಹುಟ್ಟಿಸುವ, ಏಕತಾರಿಯಂತೆ ಏಕತಾನತೆ ಹುಟ್ಟುಹಾಕುವ ಆದ್ರೂ ಒಂದು ಕ್ಷಣಕ್ಕೂ ಬೋರ್‌ ಆಗದ, ಮಗುವಿನಂತೆ ಮುದ್ದು ಎನಿಸೋ ಮಳೆ ನೋಡುತ್ತಾ…. ಮಳೆಹಾಡು ಹಾಡ್ತಾ… ಹೀಗೇ ಇದ್ದುಬಿಡಬೇಕು. ಮಳೆಯೇ ತಪಸ್ಸು, ಮಳೆಯೇ ತಪಸ್ಸಿನ ಫಲ, ಮಳೆಯೇ ದೈವೀಕ, ಮಳೆಯೇ ಸಾರ್ವಕಾಲಿಕ ಸತ್ಯ, ಮಳೆಯೇ ಅನುಭಾವ, ಮಳೆಯೇ ಅನುಭೂತಿ, ಮಳೆಯೇ ಕಣ್ಬೆಳಕು, ಮಳೆಯೇ ಕಾಣ್ಕೆ, ಮಳೆಯೇ ಶಿವಶಿವೆಯರ ಅನಂತಶಕ್ತಿ, ವೃಷ್ಠಿ, ಮಳೆಯೇ ಮುದ, ಮಳೆಯೇ ಮನದೊಳಗಿನ ಸಮಷ್ಟಿಭಾವ, ಮಳೆ ಮುಗಿದರೂ ಮುಂದಿನ ಮಳೆಗಾಗಿ ಕಾಯುವ ಮನದೊಳಗಿನ ನಿರಂತರ ತಪನ, ಗಾನ, ಉನ್ಮಾದ, ಜೀವಸೆಲೆ… ಮಳೆ.

ನಾ ನನಗೆ ನಿಲುಕಿದಷ್ಟು ನಿನ್ನ ಅರ್ಥ ಮಾಡ್ಕೊಂಡಿದೀನಲ್ವಾ? ಮತ್ಯಾಕೆ ನೀನು ನನಗೆ ಅಂದು ಉತ್ತರ ಕೊಡದೇ ಮೂಕವಾದೆ? ನಿನ್ನ ಹರಹು, ಧಾಟಿ, ಸೆಲೆ, ಸೆಳೆತ ಬದಲಾಗೋದ್ಯಾಕೆ? ಉತ್ತರವಿಲ್ಲದ ಪ್ರಶ್ನೆಗಳ ದಯಪಾಲಿಸಿ ಹೇಳದೇ ಹೋಗಿಬಿಡೋದ್ಯಾಕೆ? ನೀನು ನಿರಂತರ, ನಿರಾಮಯ, ನಿರಂಕುಶನೆಂದ ಮೇಲೆ ಪ್ರಶ್ನಾತೀತನೂ ಹೌದಲ್ವ? ನನ್ನ ಗೋರಿಯ ನೆನೆಸಿ ನೀನು ಅರಳಿಸೋ ಹೂಗಿಡದ ಎಲೆಗಳ ಮೇಲೆ ಬಿಂದುವಾಗಿ ನಿಲ್ಲೊಮ್ಮೆ, ಪುರುಸೊತ್ತಾಗಿ…ಆ ಕ್ಷಣದಲ್ಲಿ ಹೃದಯದ ಬಡಿತದ ಗದ್ದಲವೂ ಇರದು, ರೂಹ್‌ ನೀನು. ನೀನಿರ್ತಿಯಲ್ವಾ?

ಇದನ್ನೂ ಓದಿ : Rain : ಮಳೆ ಬಂತು ಮಳೆ : ‘ಚೋಳರಾಜ್ಯದ ಬೀದಿಯಲ್ಲಿ, ಸುರಿವ ಮಳೆಯಲ್ಲಿ ಸರಿದು ಹೋದರು ಕನ್ನಗಿ ಕೋವಲರು’

Published On - 7:51 pm, Tue, 10 August 21