Rain : ‘ಇಲ್ಲೇ ಪಕ್ಕದ ಕೆರೆಯ ಬಳಿ ಸಿಡಿಲೆರಗಿದ ಸದ್ದು, ಈ ಬೆಳಗ್ಗೆ ಕೆರೆ ಅಲುಗಾಡದೆ ನಿಂತಿದೆ’

Working in the Rain : ’ನಿನ್ನಿಂದ ತೊಯ್ದು ತೊಪ್ಪೆಯಾಗಿದ್ದ ಡೆಸ್ಕ್ ಚೀಫ್ ನನ್ನನ್ನು ಕಂಡೊಡನೆ, "ಯಾಕ್ರೀ, ಇಷ್ಟು ಬೇಗ ಬರ್ತಿದ್ದೀರ?" ಎಂದು ದನಿಯೇರಿಸಿ ಕೇಳಿದರು. ನಾನು, "ಸರ್, ಜೋರು ಮಳೆ..." ಎನ್ನುತ್ತಿದ್ದ ಹಾಗೆಯೇ, "ಮಳೆಯಾದರೆ ಏನು? ನಾವೆಲ್ಲಾ ಬಂದಿಲ್ಲವೆ? ನೀವೇನು ಆಫೀಸಿಗೆ ಬರ್ತಿದ್ದೀರ ಇಲ್ಲಾ ಫ್ಯಾಷನ್ ಪರೇಡಿಗೋ? ಮಳೆಯಂತೆ, ಮಳೆ... ಯಾಕಾದ್ರೂ ನಿಮ್ಮಂಥವರು ಇಲ್ಲಿಗೆ ಬರ್ತೀರಿ, ನಮ್ಮ ಪ್ರಾಣ ತಿನ್ನೋಕೆ," ಎನ್ನುತ್ತಾ ಸಿಗರೇಟಿನ ಪ್ಯಾಕನ್ನು ತೆಗೆದುಕೊಂಡು ಹೊರನಡೆದರು.’ ಚೈತ್ರಾ ಅರ್ಜುನಪುರಿ

Rain : ‘ಇಲ್ಲೇ ಪಕ್ಕದ ಕೆರೆಯ ಬಳಿ ಸಿಡಿಲೆರಗಿದ ಸದ್ದು, ಈ ಬೆಳಗ್ಗೆ ಕೆರೆ ಅಲುಗಾಡದೆ ನಿಂತಿದೆ’
ಕವಿ ಜ. ನಾ. ತೇಜಶ್ರೀ ಮತ್ತು ಪತ್ರಕರ್ತೆ ಚೈತ್ರಾ ಅರ್ಜುನಪುರಿ
Follow us
|

Updated on:Aug 12, 2021 | 7:24 PM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಇಂದಿನಿಂದ ಶುರುವಾಗುವ ಹೊಸ ಸರಣಿ. ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ ರಚಿಸಿ, ಬೆತ್ತಲೆ ಫಕೀರ ಮತ್ತು ಇರುವೆ ಮತ್ತು ಪಾರಿವಾಳ, ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ ನಾಟಕಗಳ ಅನುವಾದ ಮಾಡಿದ, ಹಾಸನದಲ್ಲಿರುವ ಕವಿ ಜ.ನಾ. ತೇಜಶ್ರೀ 2020ರಲ್ಲಿ ಮಹಾಮಳೆಯನ್ನು ನೆನೆಯುತ್ತ ಬರೆದ ಕವಿತೆ ಕಳಿಸಿದ್ದಾರೆ. ಪತ್ರಕರ್ತೆ, ಛಾಯಾಗ್ರಾಹಕಿಯಾಗಿರುವ ಮಂಡ್ಯ ಮೂಲದ ಚೈತ್ರಾ ಅರ್ಜುನಪುರಿ ಮೇಘರಾಜನಿಗಾಗಿ ದೂರದ ಕತಾರಿನಲ್ಲಿ ಮೊರೆ ಇಡುತ್ತ ಪತ್ರ ಕಳಿಸಿದ್ದಾರೆ.  

*

ಮಹಾಮಳೆಯನ್ನು ನೆನೆದು

ನಿನ್ನೆ ರಾತ್ರಿ ಮಹಾಮಳೆ,

ಇಲ್ಲೇ ಪಕ್ಕದ ಕೆರೆಯ ಬಳಿ ಸಿಡಿಲೆರಗಿದ ಸದ್ದು ಈ ಬೆಳಗ್ಗೆ ಕೆರೆ ಅಲುಗಾಡದೆ ನಿಂತಿದೆ.

ಆ ಸಿಡಿಲು ಹೊಡೆದಾಗಲೇ ರಾತ್ರಿ ಎಚ್ಚರವಾದದ್ದು, ಮಳೆ ಹುಯ್ಯಲು ತೊಡಗಿ ಎಷ್ಟೋ ಹೊತ್ತಾಗಿರಬೇಕು ಬಿರುಸು ಹನಿಗಳು ಅಥವಾ ಮಳೆಯ ಆರಂಭವೇ ಬಿರುಸಾಗಿರಬಹುದು.

ಕಂಬಳಿಯೆಳೆದು ಹೊರಳಿ ಮಲಗುವಾಸೆಯನ್ನು ನಿಷ್ಕರುಣೆಯಿಂದ ಕಿತ್ತೊಗೆದಂಥ ಬಿರುಸು ಮಳೆ.

ಕತ್ತಲೆಯ ತಡವಿ ತಡವಿ ತಡವರಿಸುವ ಹೆಜ್ಜೆಗಳನಿಡುತ್ತ ಕಿಟಕಿಗೆ ಗದ್ದ ಒತ್ತಿ ನೋಡಿದರೆ ಕಡುಗೆಂಪು ರಕ್ತವ ಹೊತ್ತು ಹರಿಯುತ್ತಿದೆ ಬೀದಿ, ರಕ್ತವಲ್ಲ ಅದು ಕೆಮ್ಮಣ್ಣು ಎಂದರೆ ಕೇಳುತ್ತಿಲ್ಲ ಮನಸ್ಸು ಅದಕ್ಕೋ ರಾತ್ರಿಯ ಮಂಪರು, ಆಗಷ್ಟೇ ಹೊಳೆದ ದೊಡ್ಡ ಮಿಂಚಲ್ಲಿ ಎದುರು ಬಯಲು ಪೂರ್ತಿ ಬಯಲಾಗಿ, ಮೈ ನಡುಗಿ ಅಲ್ಲೇ ಕಂಡದ್ದು ಗೂಟಕ್ಕೆ ಕಟ್ಟಿದ್ದ ಕಪ್ಪುಹಸು, ಅದರ ಬಾಯಲ್ಲಿ ಒಂದು ಹಸಿರು ಹುಲ್ಲುಕಡ್ಡಿ.

ಈ ಬೆಳಗ್ಗೆ ಅಲುಗದೆ ನಿಂತಿದ್ದ ಕೆರೆ ನೋಡುತ್ತ ಮನಸ್ಸು ಮೆಲುಕುತ್ತಿರುವಾಗ, ಕೆರೆಯ ಆ ಕೊನೆಯಿಂದ ಸಣ್ಣಗೆ ಮಿಸುಕು ಒಂದು ತೆರೆ, ಮತ್ತೊಂದು, ಕಿರುತೆರೆ, ತೆರೆತೆರೆ ತಟತಟನೆ ದಡದ ಕಪ್ಪೆಗಳು ಚಿಲ್ಲೊಡೆದು ಕೆರೆಗೀಗ ಹೊಸಜೀವ.

ದೃಷ್ಟಿಯಿಟ್ಟು ನೋಡಿದರೆ ಕೆರೆಯ ಆ ತುದಿಯಲ್ಲಿ ನೀರು ಕುಡಿಯುತ್ತಿದೆ ಕಪ್ಪು ಹಸು ಅದರ ಬಾಯ್ತುದಿಯನ್ನು ಕಚ್ಚಿಕೊಂಡಿದೆ ಚಿಗುರುಹುಲ್ಲು.

*

rain series

ಕತಾರಿನ ಮೋಡಗಳು… ಫೋಟೋ : ಚೈತ್ರಾ ಅರ್ಜುನಪುರಿ

ಮರಳುಗಾಡಿನಲ್ಲಿ ಮಳೆಯ ಕನಸು 

ಹಲೋ ಮೇಘರಾಜ,

ಹೇಗಿದ್ದೀಯ?

ಪುಸ್ತಕಗಳನ್ನು ಎದೆಗವುಚಿಕೊಂಡು ಕಾಲೇಜಿಗೆ ಹೊರಟ ಯುವತಿಯರು. ಶರ್ಟಿನೊಳಗೆ ಪುಸ್ತಕ ಹುದುಗಿಸಿಕೊಂಡು ತಲೆಯ ಮೇಲಿನ ನೀರನ್ನು ಕೊಡವುತ್ತಿರುವ ಯುವಕರು. ಹಚ್ಚಿದ ಮೇಕಪ್ ಮೇಲೆ ನವಿರಾಗಿ ಹೊಡೆಯುತ್ತಿರುವ ನಿನ್ನ ಹನಿಗಳು, ಮೈ ಮೇಲೆ ಬೆಚ್ಚನೆಯ ಸ್ವೆಟರ್, ಬೇಡ ಬೇಡವೆಂದರೂ ಅಲ್ಲಲ್ಲಿ ಒದ್ದೆಯಾದ ಚೂಡಿದಾರ, ಕೈಯಲ್ಲೊಂದು ಛತ್ರಿ ಹಿಡಿದು ಆಫೀಸಿಗೆ ಹೊರಟ ಮಹಿಳೆ. ಸ್ವಚ್ಛ ಯೂನಿಫಾರ್ಮ್, ಕೊರಳಲ್ಲಿ ಬಿಗಿದ ಟೈ, ಕಾಲಿನಲ್ಲಿ ಮಿರಮಿರನೆ ಮಿಂಚುವ ಶೂಗಳಿಗೆ ಕೆಸರಾಗದಿರಲಿ ಎಂದು ನಾಜೂಕಾಗಿ ನಡೆಯುತ್ತಾ, ಬೆನ್ನ ಮೇಲಿನ ದೈತ್ಯ ಬ್ಯಾಗುಗಳನ್ನು ಹೊರಲಾರಾದೆ ಹೊರುತ್ತಿರುವ ಪುಟ್ಟ ಶಾಲಾ ಮಕ್ಕಳು. ಈ ಎಲ್ಲರನ್ನೂ ಒಂದೆಡೆ ಬೆಸೆದಿರುವುದು ಒಂದೇ ವಿಷಯ. ನೀನು!

ಪ್ರತಿ ವರ್ಷ ಕರ್ನಾಟಕದಲ್ಲಿ ಧೋ ಎಂದು ಸುರಿಯುತ್ತೀಯೆ. ಮಳೆಗಾಲದಲ್ಲಿ ನೀನಿಲ್ಲದ ಬದುಕನ್ನು ಮೇಲುಸೀಮೆಯವರಾದ ನಮಗೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಇನ್ನು ಮಲೆನಾಡಿನವರ ಕಥೆ ಹೇಗಿರಬೇಡ? ಅಲ್ಲಿ ಎಲ್ಲರೂ ನಿನ್ನನ್ನು ಆಹ್ವಾನಿಸಿ ಸಂಭ್ರಮಿಸುತ್ತಿದ್ದಾರೆ, ಅಷ್ಟಕ್ಕೂ ನೀನು ಈಗ ಇಲ್ಲಿ ಎಲ್ಲಿದ್ದೀಯ? ನಿನ್ನನ್ನು ಕಂಡು ಮಾಸಗಳೇ ಕಳೆದವು, ಭೇಟಿ ಯಾವಾಗ?

ನಾನು ಕತಾರಿಗೆ ಬಂದ ಮೇಲೆ ನೀನೆಂದರೆ ಕನಸಿನ ಮಾತಾಗಿ ಬಿಟ್ಟಿರುವೆ. ಬ್ಯಾಗಿನಲ್ಲಿ ಸದಾ ಪುಟ್ಟ ಛತ್ರಿಯನ್ನಿಟ್ಟುಕೊಂಡು ಓಡಾಡುತ್ತಿದ್ದ ನನಗೆ ಕಳೆದ ಒಂದು ದಶಕದಲ್ಲಿ ಒಮ್ಮೆಯೂ ಅದು ಇಲ್ಲಿ ಉಪಯೋಗಕ್ಕೆ ಬಂದಿಲ್ಲ. ಇಲ್ಲಿ ನೀನು ಬಂದೆಯೆಂದರೆ ತುಂತುರು, ಸೋನೆ ಹನಿಗಳಷ್ಟೇ. ಒಂದು ವೇಳೆ ಇಡೀ ವರ್ಷಕ್ಕಾಗುವಷ್ಟು ನೀನು ಒಮ್ಮೆಲೇ ಭೋರೆಂದು ಒಂದೇ ದಿನವೇನಾದರೂ ಸುರಿದರೆ, ಅದು ೭೫ ಮಿಮೀ, ಅಂದರೆ ೩ ಇಂಚಿಗಿಂತಲೂ ಕಡಿಮೆ!

ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ೨೦೧೫ರ ನವೆಂಬರ್ ೨೫ರಂದು ಕತಾರಿನಲ್ಲಿ ವರ್ಷ ಪೂರ್ತಿ ಸುರಿಯಬೇಕಾದ ನೀನು ಒಂದೇ ದಿನದಲ್ಲಿ ಭೋರೆಂದು ಸುರಿದು ಬಿಟ್ಟೆ. ಆ ಬುಧವಾರ ನೀನು ಸುರಿದ ೮೦ ಮಿಮೀ ವರ್ಷಧಾರೆ ಇಡೀ ದೇಶವನ್ನು ನಿಶ್ಚಲಗೊಳಿಸಿಬಿಟ್ಟಿತ್ತು. ಶಾಲಾ-ಕಾಲೇಜುಗಳು ರಜೆ ಘೋಷಿಸಿಬಿಟ್ಟವು, ಮಾಲ್ ಗಳು ಕದ ಮುಚ್ಚಿಬಿಟ್ಟವು, ನೌಕರರು ತಡವಾಗಿ ಹೋದರೂ ಆಫೀಸುಗಳು ತಲೆ ಕೆಡಿಸಿಕೊಳ್ಳಲಿಲ್ಲ. ಸಾಧ್ಯವಾದಷ್ಟು ಮನೆಯಿಂದ ಹೊರಬರಬೇಡಿ ಎಂದು ಕತಾರ್ ಸರ್ಕಾರ ನಿವಾಸಿಗಳಲ್ಲಿ ಮನವಿ ಮಾಡಿಕೊಂಡಿತ್ತು.

rain series

ಫೋಟೋ : ಚೈತ್ರಾ ಅರ್ಜುನಪುರಿ

ಕೆಳಮಟ್ಟದ ಏರಿಯಾಗಳಲ್ಲಿ ಕಾರುಗಳು ಮುಳುಗುವ ಮಟ್ಟದಲ್ಲಿ ನಿನ್ನ ನೀರು ರಸ್ತೆಗಳಲ್ಲಿ ನಿಂತು, ಇದು ಕತಾರೋ ಅಥವಾ ನೆರೆಹಾವಳಿಗೆ ಸಿಲುಕಿದ ಬೇರೆ ದೇಶವೋ ಎನ್ನುವಂತಹ ಪರಿಸ್ಥಿತಿ ಎದುರಾಗಿ ಬಿಟ್ಟಿತ್ತು. ಟಿವಿ, ರೇಡಿಯೋ, ಫೇಸ್ ಬುಕ್, ಟ್ವಿಟ್ಟರ್, ಎಲ್ಲೆಡೆಯೂ ನಿನ್ನದೇ ಸುದ್ದಿ, ನಿನ್ನ ನೀರಿನಲ್ಲಿ ಸಿಲುಕಿದ ಕಾರುಗಳ ಚಿತ್ರಗಳು, ನಿನ್ನ ನೀರಲ್ಲಿ ಮುಳುಗಿದ ಸಣ್ಣ ಕಾರುಗಳು, ಅವುಗಳನ್ನು ಹೊರ ತರಲು ಸಹಾಯ ಮಾಡುತ್ತಿರುವ ಲ್ಯಾನ್ಡ್ ಕ್ರೂಸರ್, ಜಿಎಂಸಿ, ಪ್ಯಾಟ್ರೋಲ್, ಮುಂತಾದ ದೈತ್ಯ ಕಾರುಗಳ ವಿಡಿಯೋಗಳು ಎಲ್ಲೆಡೆ ಹರಿದಾಡಿಬಿಟ್ಟವು. ದೋಹಾ ಅಕ್ಷರಸಃ ಜಲಪ್ರಳಯದಲ್ಲಿದೆ ಎನ್ನುವ ಹಾಗಾಗಿಬಿಟ್ಟಿಸಿದ್ದೆ!

ಉಸ್ಸಪ್ಪಾ, ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ನಿನ್ನ ರೌದ್ರ ನರ್ತನದ ಪರಿಚಯವಾಗಿದ್ದು ಮೂರು ವರ್ಷಗಳ ಬಳಿಕ. 2018ರ ಅಕ್ಟೋಬರ್ 20ರಲ್ಲಿ ನೀನು ಆಹ್ವಾನವಿಲ್ಲದ ಅತಿಥಿಯ ಹಾಗೆ ಭೋರೆಂದು ಹದಿನೈದನೇ ಮಹಡಿಯ ಕಿಟಕಿಯ ಗಾಜಿಗೆ ಅಪ್ಪಳಿಸಿ ಮನೆಯೊಳಗೇ ನುಗ್ಗಿದಾಗ ನಾನು ನಡುಗಿ ಹೋಗಿದ್ದೆ. ಒಂದೇ ದಿನದಲ್ಲಿ 84 ಮಿಮೀ ಮಳೆ ಬಂದು ದೇಶವನ್ನು ನಡುಗಿಸಿಬಿಟ್ಟಿತ್ತು. ಆ ಶನಿವಾರ ಮಧ್ಯಾಹ್ನ ನೀನು ಮನೆಯೊಳಗೆ ನುಗ್ಗಿದ ರಭಸಕ್ಕೆ ಬೆಚ್ಚಿ ಹಾಸಿಗೆಯ ಮೇಲಿದ್ದ ಬೆಡ್ ಶೀಟುಗಳನ್ನೂ ಬಿಡದೆ ಕೈಗೆ ಸಿಕ್ಕ ಕಾಟನ್ ಬಟ್ಟೆಗಳನ್ನೆಲ್ಲಾ ಕಿಟಕಿಗೆ ಕಿಟಕಿಗೆ ಅಡ್ಡಲಾಗಿ ತಡೆಗೋಡೆಯಂತೆ ಹಾಕಿದ್ದೆ. ಆದರೆ ಅದು ತಡೆಗೋಡೆಯೆನಿಸದೆ ನಿಮಿಷದಲ್ಲಿ ರೆಡ್ ಕಾರ್ಪೆಟ್ ಎನ್ನುವ ಹಾಗೆ ನೀನು ಅದನ್ನು ದಾಟಿ ಒಳಗೆ ಬರುತ್ತಿದ್ದೆ.

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ, ನಾವು ಹಾಸಿದ್ದ ಬೆಡ್ ಶೀಟುಗಳನ್ನೆಲ್ಲಾ ಒದ್ದೆ ಮುದ್ದೆಯಾಗಿಸಿ ನೀನು ಮನೆಯೊಳಗೆ ನದಿಯ ಹಾಗೆ ಹರಿಯುತ್ತಿದ್ದರೆ, ಮೂರೂ ರೂಮುಗಳಲ್ಲಿ ಮೂರು ಬಕೀಟುಗಳನ್ನು ಹಿಡಿದು ಗಂಟೆಗಟ್ಟಲೆ ಗಂಡ-ಹೆಂಡತಿ ನಿನ್ನ ಸೇವೆ ಮಾಡುವಂತೆ ಮಾಡಿದ ಆ ದಿನ ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ. ಮನೆಯೊಳಗೇ ನಿನ್ನನ್ನು ನೋಡಿ ಮೂರು ವರ್ಷದ ಮಗ ಕೇಕೆ ನಗು ಹಾಕುತ್ತಾ, ತಾನೂ ನಿನ್ನನ್ನು ತಡೆಯಲು ತನ್ನ ಪುಟ್ಟ ಕೈಗಳಿಂದ ನೀರನ್ನು ಬಾಚಿ, ಬಾಚಿ ಬಕೀಟುಗಳಿಗೆ ಹಾಕುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ.

rain series

ಫೋಟೋ : ಚೈತ್ರಾ ಅರ್ಜುನಪುರಿ

ಕತಾರಿನಲ್ಲಿ ನೀನು ಬಂದೆಯೆಂದು ಸಂತಸ ಪಡುವ ಹಾಗೂ ಇಲ್ಲ, ರಸ್ತೆಗಳಲ್ಲಿ ನೀನು ಬಿಟ್ಟು ಹೋಗುವ ನೀರು ತುಂಬುತ್ತದೆಂದು ಭಯ, ಮನೆ ತಲುಪುವುದು ನಿಧಾನವಾಗುತ್ತದೆನ್ನುವ ಭಯ, ಮಕ್ಕಳನ್ನು ಶಾಲೆಯಿಂದ ಹೇಗೆ ಕರೆತರುವುದೆನ್ನುವ ಭಯ ಕಾಡುತ್ತದೆ. ಜನರಲ್ಲಿ ಏನೋ ದುಗುಡ, ಹೊರಗೆ ಕಾಲಿಡಲು ಹಿಂದೆ ಮುಂದೆ ಯೋಚಿಸುತ್ತಾ, ಆ ದಿನ ಆಫೀಸಿಗೂ ತಡವಾಗಿ ತಲುಪುತ್ತಾರೆ. ತಲೆಯ ಮೇಲೆ ಸೂರ್ಯ ಚುರು ಚುರು ಸುಡುವಾಗ, 50 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ, ಜನರು ಹೊರಗೆ ಹೋಗಲು ಹಿಂದೇಟು ಹಾಕುವುದಿಲ್ಲ, ಆದರೆ ನೀನು ಬಂದೆಯೆಂದರೆ ಬಹುತೇಕ ಜನ ಗೂಡಿನಿಂದ ಹೊರಬರಲು ಹಿಂದೇಟು ಹಾಕುತ್ತಾರೆ.

ನೀನು ಹೇಗೆ ಬಂದರೂ ಕತಾರಿನಲ್ಲಿ ನಿನಗೆ ಒಂದೇ ಹೆಸರು – ಅದು ಸೋನೆಯಾಗಲಿ, ತುಂತುರಾಗಲಿ – ನೀನು ಇಲ್ಲಿ ಮಳೆಯೇ. ಆದರೆ ಹವಾಯಿ ದ್ವೀಪದಲ್ಲಿ ನಿನಗೆ 200ಕ್ಕೂ ಹೆಚ್ಚು ಪದಗಳಿವೆಯಂತೆ. ನೀನು ಬೀಳುವ ಹೊತ್ತು, ರೀತಿ, ಬಣ್ಣ, ರಭಸ, ದಿಕ್ಕು, ಸ್ಥಳ ಮುಂತಾದ ವಿಷಯಗಳನ್ನು ಆಧರಿಸಿ ಹವಾಯಿಯ ಜನರು ನಿನಗೆ ವಿವಿಧ ಪದಗಳನ್ನು ನೀಡಿದ್ದಾರೆ. ಉದಾಹರಣೆಗೆ, “ಕಿಲಿ ನೋ” ಎಂದರೆ ತುಂತುರು, “ಕಿಲಿ ಓಹು” ಎಂದರೆ ಮತ್ತಷ್ಟೂ ನವಿರಾದ ತುಂತುರು. ಎರಡರ ನಡುವೆ ಬಹಳ ವ್ಯತ್ಯಾಸವಿದೆ ಬಿಡು!

ನೀನು ಕೆಲವರಿಗೆ ರೊಮ್ಯಾಂಟಿಕ್ ವಿಷಯವಾದರೆ ಮತ್ತೆ ಕೆಲವರಿಗೆ ಕಹಿ ನೆನಪುಗಳ, ವಿಷಾದಕರ ನೆನಪುಗಳನ್ನು ಹೊತ್ತು ತರುವ ಯಮ ಭಯಂಕರ. ನಿನ್ನನ್ನು ನೆನೆದು ಸಂತಸ ಪಡುವ ಎಷ್ಟು ಜನರಿದ್ದಾರೋ, ಅದೇ ನಿನ್ನನ್ನು ನೆನೆದು ಅಳುವವರೂ ಅಷ್ಟೇ ಜನರಿದ್ದಾರೆ.

ನನ್ನ ಜೀವನದಲ್ಲಿ ನಿನ್ನನ್ನು ಬಹಳ ಕೋಪದಿಂದ ಶಪಿಸಿದ್ದು ಕರ್ನಾಟಕದಲ್ಲಿ ಒಂದೇ ಸಲ, ಅದೂ ಬೆಂಗಳೂರಿನಲ್ಲಿ. ಅದೇ ಮೊದಲು, ಅದೇ ಕೊನೆ. ನಾನು ಆಗ ವಿಜಯ್ ಟೈಮ್ಸ್ ದಿನಪತ್ರಿಕೆಯಲ್ಲಿ ಕೆಲಸಕ್ಕಿದ್ದೆ. ನೌಕರಿ ಸಿಕ್ಕು ಆರು ತಿಂಗಳೂ ಕಳೆದಿರಲಿಲ್ಲ. ನಾನು ವಾಸಿಸುತ್ತಿದ್ದ ಬಾಡಿಗೆ ಮನೆ ಬಯ್ಯಪ್ಪನ ಹಳ್ಳಿಯಲ್ಲಿತ್ತು. ಚಾಮರಾಜಪೇಟೆಯಲ್ಲಿದ್ದ ಆಫೀಸಿಗೆ ದಿನವೂ ಸ್ಕೂಟಿಯಲ್ಲಿಯೇ ಪಯಣ.

ಹೀಗೆಯೇ ಒಂದು ದಿನ ಭೋರೆಂದು ಸುರಿಯುತ್ತಿದ್ದ ನಿನ್ನ ವರ್ಷ ಧಾರೆಯಲ್ಲಿ ಸಿಕ್ಕಿಹಾಕಿಕೊಂಡೆ. ಗಾಡಿಯನ್ನು ಇಂದಿರಾನಗರದ ಹೋಟೆಲೊಂದರ ಮುಂದೆ ನಿಲ್ಲಿಸಿ ನೀನು ದೊಡ್ಡ ಮನಸ್ಸು ಮಾಡಿ ನಿಲ್ಲಲಿ ಎಂದು ಕಾಯುತ್ತಾ ನಿಂತೆ. ಆಫೀಸಿಗೆ ತೊಯ್ದು ತೊಪ್ಪೆಯಾಗಿ ಹೋಗಬೇಕಾಗುತ್ತದೆ ಎನ್ನುವ ಭಯದಿಂದಲ್ಲ, ಕಣ್ಣಿಗೆ ಹಾಕಿದ್ದ ಕನ್ನಡಕ ತೆಗೆದರೂ ರಸ್ತೆ ಕಾಣಿಸದಷ್ಟು ರಭಸದಲ್ಲಿ ನೀನು ಮುಖಕ್ಕೆ ಅಪ್ಪಳಿಸುತ್ತಿದ್ದುದ್ದರಿಂದ. ಅರ್ಧ ಗಂಟೆಯಾದರೂ ನೀನು ನಿಲ್ಲುವ ಸೂಚನೆ ಕಾಣಲೇ ಇಲ್ಲ. ಆಫೀಸಿಗೆ ತಡವಾಗಿ ತಲುಪುತ್ತೇನೆ ಎಂದು ತಿಳಿಸಲು ನಾನು ಕೆಲಸ ಮಾಡುತ್ತಿದ್ದ ಡೆಸ್ಕ್ ಚೀಫ್ ಗೆ ಮೂರ್ನಾಲ್ಕು ಬಾರಿ ಫೋನಾಯಿಸಿದರೂ ಆ ಕಡೆಯಿಂದ ಉತ್ತರವಿಲ್ಲ. ಕೊನೆಗೆ ಮೆಸೇಜ್ ಕಳುಹಿಸಿ, ನಿನ್ನ ಹೊಡೆತ ತಗ್ಗಿದ ಬಳಿಕ ಅಲ್ಲಿಂದ ಹೊರಟು ಆಫೀಸು ತಲುಪಿದೆ, ಅದೂ ಒಂದು ಗಂಟೆ ತಡವಾಗಿ!

rain series

ಫೋಟೋ : ಚೈತ್ರಾ ಅರ್ಜುನಪುರಿ

ನಿನ್ನಿಂದ ತೊಯ್ದು ತೊಪ್ಪೆಯಾಗಿದ್ದ ಡೆಸ್ಕ್ ಚೀಫ್ ನನ್ನನ್ನು ಕಂಡೊಡನೆ, “ಯಾಕ್ರೀ, ಇಷ್ಟು ಬೇಗ ಬರ್ತಿದ್ದೀರ?” ಎಂದು ದನಿಯೇರಿಸಿ ಕೇಳಿದರು. ನಾನು, “ಸರ್, ಜೋರು ಮಳೆ…” ಎನ್ನುತ್ತಿದ್ದ ಹಾಗೆಯೇ, “ಮಳೆಯಾದರೆ ಏನು? ನಾವೆಲ್ಲಾ ಬಂದಿಲ್ಲವೆ? ನೀವೇನು ಆಫೀಸಿಗೆ ಬರ್ತಿದ್ದೀರ ಇಲ್ಲಾ ಫ್ಯಾಷನ್ ಪರೇಡಿಗೋ? ಮಳೆಯಂತೆ, ಮಳೆ… ಯಾಕಾದ್ರೂ ನಿಮ್ಮಂಥವರು ಇಲ್ಲಿಗೆ ಬರ್ತೀರಿ, ನಮ್ಮ ಪ್ರಾಣ ತಿನ್ನೋಕೆ,” ಎನ್ನುತ್ತಾ ಸಿಗರೇಟಿನ ಪ್ಯಾಕನ್ನು ತೆಗೆದುಕೊಂಡು ಹೊರನಡೆದರು.

ಚೀಫ್ ಬಯ್ಯುವುದನ್ನು ಕಂಡು ನನ್ನ ಜಂಘಾಬಲವೇ ಹುದುಗಿ ಹೋಗಿತ್ತು. ಪಕ್ಕದ ಡೆಸ್ಕಿನ ಹುಡುಗಿಯರು ಮುಸಿ ಮುಸಿ ನಗುತ್ತಿರುವುದನ್ನು ನೋಡಿ ಯಾಕಾದರೂ ನೀನು ಬಂದೆಯೋ, ಯಾಕಾದರೂ ನಿನ್ನ ಹೊಡೆತ ಕಡಿಮೆಯಾಗಲಿ ಎಂದು ನಿಂತೆನೋ ಎಂದು ಆ ದಿನ ಸಾವಿರ ಸಲ ನಿನ್ನನ್ನು ಶಪಿಸಿದ್ದೇನೆ. ಅದೇ ಕೊನೆ, ಎಷ್ಟೇ ಜೋರಾಗಿ ನೀನು ಸುರಿದರೂ, ಆಫೀಸಿಗೆ ನೆನೆದೇ ಹೋಗಿದ್ದೇನೆ, ನೆನೆದೇ ಮರಳಿ ಮನೆಗೆ ಬಂದಿದ್ದೇನೆ!

ನೀನು ಮನುಷ್ಯನ ಅಂತಾರಾತ್ಮದ ಸಂಕೇತ – ಯಾರೂ ನಿನ್ನನ್ನು ತಪ್ಪಿಸಲಾರರು, ಯಾರೂ ನಿನ್ನಿಂದ ತಪ್ಪಿಸಿಕೊಳ್ಳಲಾರರು. ಭೂಗೋಳದ ಅರ್ಧ ಭಾಗ ನೀನೇ ಅಲ್ಲವೇ? ಪ್ರತಿ ಕ್ಷಣವೂ ಕೋಟ್ಯಾಂತರ ಲೀಟರ್ ನೀರು ಆವಿಯಾಗುತ್ತದೆ. ಮೇಲೆ ಹೋದ ನೀರು ಕೆಳಗೆ ಬೀಳಲೇ ಬೇಕಲ್ಲವೇ? ಬೀಳುತ್ತದೆ ಸಹ. ಬಿದ್ದ ನೀರಿನಡಿ, ಆ ನಿನ್ನ ಧಾರೆಯಲ್ಲಿ ಎಲ್ಲವೂ ಸಂಭವಿಸುತ್ತವೆ: ಕೃಷಿ, ಪ್ರಣಯ, ಹುಟ್ಟು, ಸಾವು, ನೋವು, ನಲಿವು, ಎಲ್ಲಾ.

ನಾನು ಈ ಮಲಯಾಳಿ ಹುಡುಗನನ್ನು ಮದುವೆಯಾದಾಗಲೂ ನೀನು ಭೋರ್ಗರೆದಿದ್ದೆ. ಕೇರಳದಲ್ಲಿ ನಿನ್ನ ಅವತಾರ ಹೇಗಿರುತ್ತದೆಂದು ಯಾರಾದರೂ ಮಲಯಾಳಿಗಳನ್ನು ಕೇಳಬೇಕು, ಇಲ್ಲವೇ ಮಲೆನಾಡಿನಲ್ಲಿ ನೀನು ತೋರುವ ಸ್ವರೂಪವನ್ನು ನೆನೆಸಿಕೊಳ್ಳಬೇಕು. ನಿನ್ನ ನೀರಿನಲ್ಲಿ ಸೀರೆ ನೆನೆಯದಿರಲೆಂದು ಮೊಣಕಾಲಿನವರೆಗೂ ನೆರಿಗೆಗಳನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಮದುವೆ ಛತ್ರದಿಂದ ನಾನು ಕಾರು ಹತ್ತುತ್ತಿರುವ ಫೋಟೋಗಳನ್ನು ಮತ್ತು ವಿಡಿಯೋ ನೋಡುವಾಗ ಈಗಲೂ ನಗು ಬರುತ್ತದೆ.

ಇನ್ನು ನನ್ನ ಮಗ ಹುಟ್ಟಿದ ದಿನವೂ ನೀನು ಜೋರು ಸುರಿದಿದ್ದೆ. ಐದನೆಯ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೊರಟು ನಿಂತರೆ ಮತ್ತದೇ ಭೋರ್ಗರೆತ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಲವೆಡೆ ಮಂಡಿಯುದ್ದ ನೀರು. ಎಲ್ಲಾ ದೊಡ್ಡ ವಾಹನಗಳೂ ಡಬಲ್ ಇಂಡಿಕೇಟರ್ ಹಾಕಿ ಆಮೆಗಳ ಹಾಗೆ ಒಂದರ ಹಿಂದೆ ಸಾವಕಾಶವಾಗಿ ಹೋಗುತ್ತಿದ್ದರೆ, ಬೈಕು ಮತ್ತು ಸಣ್ಣ ಪುಟ್ಟ ವಾಹನಗಳ ಚಾಲಕರು ಅಲ್ಲಲ್ಲಿ ಸಿಗುವ ಡಾಭಾ ಮತ್ತು ಹೋಟೆಲುಗಳ ಬಳಿ ಶರಣು ಪಡೆದಿದ್ದರು. ನೀನು ನಿಲ್ಲಲಿ ಎಂದು ಕಾರನ್ನು ಮಧ್ಯದಲ್ಲಿ ನಿಲ್ಲಿಸುವ ಹಾಗೂ ಇಲ್ಲ, ಕೈಯಲ್ಲಿ ಐದು ದಿನಗಳ ಹಸುಗೂಸು… ನಿನ್ನ, ಹೊರ ಜಗದ ಪರಿವೆಯಿಲ್ಲದೆ ಪುಟ್ಟ ಕಂದಮ್ಮ ಅವನ ಅಜ್ಜಿಯ ತೋಳುಗಳಲ್ಲಿ ನಿದ್ದೆಗೆ ಜಾರಿದ್ದ. ಆ ಸಂಜೆ ಮಂಡ್ಯದಿಂದ ಮದ್ದೂರಿಗೆ ೧೮ ಕಿಮೀ ದೂರವನ್ನು ಕ್ರಮಿಸಲು ಏನಿಲ್ಲವೆಂದರೂ ೪೫-೫೦ ನಿಮಿಷ ತೆಗೆದುಕೊಂಡ ನಾವು, ಮನೆ ತಲುಪಿದ ಮೇಲೆ ನೆಮ್ಮದಿಯ ಉಸಿರಾಡಿದ್ದೆವು.

rain series

ಫೋಟೋ : ಚೈತ್ರಾ ಅರ್ಜುನಪುರಿ

ಜೀವನ ನೀಡುವ, ಸಂತಸ ತರುವ ಅದೇ ನೀನು ಜೀವನವನ್ನೂ ಕಮರಿಸಿಬಿಡುತ್ತೀಯೆ. ಸೈಕ್ಲೋನ್ ಗಳು, ಹರಿಕೇನ್ ಗಳು, ಅವುಗಳಿಂದಾಗುವ ಅನಾಹುತಗಳನ್ನು ನೆನಸಿಕೊಂಡಾಗ ಯಾಕಾದಾರೂ ನೀನು ಬಂದೆಯಪ್ಪಾ ಎನಿಸಿಬಿಡುತ್ತದೆ. ನಿನ್ನಿಂದಾಗಿ ಚೆನ್ನೈನಲ್ಲಾದ ಸಾವು-ನೋವು ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ನೋವು, ನಲಿವು ಎರಡಕ್ಕೂ ನೀನು ಸಂಗಾತಿ. ಬಹುಶಃ ಇದೇ ಕಾರಣಕ್ಕಿರಬಹುದು ಕಥೆಗಾರ ಆಂಟನ್ ಚೆಕೊವ್ ಕಥೆಗಳನ್ನು ಬರೆಯುವಾಗ ಪಾತ್ರಗಳ ಮನಸ್ಥಿತಿಯನ್ನು ಹೇಗೆ ಬಿಂಬಿಸಬೇಕು ಎನ್ನುವ ಬಗ್ಗೆ ಹೀಗೆ ಸಲಹೆ ನೀಡುತ್ತಾನೆ: “ನಿಮ್ಮ ಪಾತ್ರ ದುಃಖದಲ್ಲಿದ್ದಾನೆ ಎಂದು ಹೇಳಬೇಡಿ: ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಆತ ಚಂದ್ರನ ಪ್ರತಿಬಿಂಬವನ್ನು ನೋಡುತ್ತಿರುವ ಹಾಗೆ ಮಾಡಿ.”

ಭಾರತದಲ್ಲಿದ್ದಷ್ಟೂ ದಿನ ನೀನು ನಮ್ಮ ಪಾಲಿಗೆ ಆತ್ಮೀಯ ಗೆಳೆಯನಾಗಿದ್ದೆ. ನೀನು ಬರದಿದ್ದಾಗ ಬಂದಿಲ್ಲವೆನ್ನುವ ಚಿಂತೆ, ಬಂದ ಮೇಲೆ ಹೊರಟು ಹೋಗುತ್ತಾನಲ್ಲ ಎನ್ನುವ ಚಿಂತೆ. ನಿನ್ನ ವಾಸನೆ ಕುಡಿದು ಬೆಳೆದ ನಮಗೆ ದೋಹಾದಲ್ಲಿ ಮೂಗಿಗೆ ಬಡಿಯುವುದು ತೇವಾಂಶದ ಘಮವೇ ಹೊರತು ನಿನ್ನದಲ್ಲ – ನೀನು ಬಂದಾಗಲೂ ಸಹ!

ನೀನು ಬಂದಾಗ ಒಂಟಿ ಎಂದು ಇದುವರೆಗೂ ಅನಿಸಿದ್ದಿಲ್ಲ. ಅದೊಂದು ಹೇಳಿಕೊಳ್ಳಲಾಗದ ಬಾಂಧವ್ಯ. ನಮ್ಮ ಕುಟುಂಬದ ಸದಸ್ಯನ ಹಾಗೆ – ನೀನು ಬಂದೇ ಬರುವೆಯೆಂದು ಗೊತ್ತಿದೆ, ಯಾವಾಗ ಬೇಕಾದರೂ ಬಾ ಎಂದು ಮನೆಯ ಬೀಗದ ಗೊಂಚಲನ್ನು ಕೊಡುತ್ತೇವಲ್ಲ ಅಷ್ಟು ಆತ್ಮೀಯತೆ. ನಮಗೆ ನಿನ್ನ ದಿನಚರಿ ತಿಳಿದಿದೆ, ನಿನ್ನ ಹಾವಭಾವ ತಿಳಿದಿದೆ, ನೀನು ಬರುವ ಮುನ್ನವೇ ಮನಸ್ಸು ನಿನ್ನನ್ನು ಕಾಣಲು ಹಾತೊರೆಯುತ್ತದೆ.

ನಾನು ಚಿಕ್ಕವಳಿದ್ದಾಗ ಅಮ್ಮ ಮಧ್ಯಾಹ್ನವಾಗುತ್ತಿದ್ದ ಹಾಗೆಯೇ ಕಿಟಕಿಗಳನ್ನು ಮುಚ್ಚಿ, ಬೀರುವಿನಿಂದ ಸ್ವೆಟರ್ ಗಳನ್ನು ಹೊರತೆಗೆಯುತ್ತಿದ್ದ ಪರಿಯನ್ನು ನೋಡಿಯೇ ನೀನು ಬರುವ ಕಾಲವಾಯಿತೆಂದು ತಿಳಿದುಬಿಡುತ್ತಿತ್ತು. ಅದರ ಬಳಿಕ ಗಂಟೆಗಟ್ಟಳೆ ನಿನ್ನನ್ನು ನೋಡುತ್ತಾ ಕಿಟಕಿಯ ಪಕ್ಕ ಕೂರುವುದು, ಅಮ್ಮ ಮಾಡಿಕೊಡುತ್ತಿದ್ದ ಬಿಸಿ ಬಿಸಿ ಬಜ್ಜಿ, ಬೋಂಡ, ಪಕೋಡಗಳನ್ನು ಸವಿಯುವುದು, ಅಮ್ಮನ ಕಣ್ಣು ತಪ್ಪಿಸಿ ಪೇಪರ್ ದೋಣಿಗಳನ್ನು ನಿನ್ನ ನೀರಿನಲ್ಲಿ ತೇಲಿ ಬಿಡುವುದು, ಸ್ವೆಟರ್ ಒದ್ದೆ ಮಾಡಿಕೊಂಡು ಅಮ್ಮನ ಕೈಯಲ್ಲಿ ಮೋಕ್ಷ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ನೀನು ಬಂದೆಯೆಂದರೆ ನಾವು ಎಲ್ಲಿಲ್ಲದ ಬುದ್ಧಿವಂತರಾಗಿಬಿಡುತ್ತಿದ್ದೆವು. ಕಿಟಕಿಯ ಪಕ್ಕದಲ್ಲಿ ಕುಳಿತು ಕಾದಂಬರಿ ಓದುವುದು, ಇಲ್ಲವೇ ಯಾವುದೋ ಕಪ್ಪು ಬಿಳುಪು ಫಿಲಂ ನೋಡುವುದು, ಸಂಗೀತ ಕೇಳುವುದು, ಒಟ್ಟಿನಲ್ಲಿ ವರ್ಷ ಪೂರ್ತಿ ಎಲ್ಲೋ ಅಡಗಿ ಕುಳಿತಿದ್ದ ಸಾಂಸ್ಕೃತಿಕ ಹುಚ್ಚು ಪಟ್ಟನೆ ತಲೆಗೇರಿಬಿಡುತ್ತಿತ್ತು.

rain series

ಫೋಟೋ : ಚೈತ್ರಾ ಅರ್ಜುನಪುರಿ

ನಿನ್ನಿಂದ ಆನಂದ ಬಯಸುವವರು ನಿನ್ನ ಕೈಯಿಂದ ತಪ್ಪಿಸಿಕೊಂಡು ಹೋಗುವ ದಾರಿ ಹುಡುಕುವುದಿಲ್ಲ ಎಂದು ಎಲ್ಲೋ ಓದಿದ ನೆನಪು. ಭೋರೆಂದು ನೀನು ಸುರಿಯುವಾಗ ದಾರಿಯ ಪಕ್ಕದಲ್ಲಿ ಸಿಗುವ ಯಾವುದೇ ಕಟ್ಟಡದ ಕೆಳಗೆ, ಫ್ಲೈಓವರ್ ಕೆಳಗೆ, ಬಸ್ ಸ್ಟ್ಯಾಂಡ್ ಒಳಗೆ ಕಾಯುತ್ತಾ ನಿಲ್ಲುವವರಿಗೆ ತಾಳ್ಮೆ ಹೇಳಿಕೊಡುವ ನೀನು, ಅಪರಿಚಿತರನ್ನೂ ಆ ಸಮಯದಲ್ಲಿ ಪರಿಚಿತರನ್ನಾಗಿ ಮಾಡಿಬಿಡುತ್ತೀಯೆ. ನಿನ್ನ ಹೊಡೆತದಿಂದ ಬಚಾವಾಗಲು ಒಂದೇ ಸೂರಿನಡಿ ನಿಂತ ಪ್ರತಿಯೊಬ್ಬರೂ ಇತರರನ್ನು ಗಮನಿಸುತ್ತಾ, ಸಾಧ್ಯವಾದರೆ ಮಾತಿಗೆಳೆದು ತೃಪ್ತಿ ಕಂಡುಕೊಳ್ಳುತ್ತಾರೆ.

ಅದೇನು ವಿಚಿತ್ರವೋ, ಛತ್ರಿ ತೆಗೆದುಕೊಂಡು ಹೋದ ದಿನ ನೀನು ಬರುವುದಿಲ್ಲ, ಮರೆತ ದಿನ ಭೋರೆಂದು ಸುರಿಯುತ್ತೀಯೆ. ಎಷ್ಟೋ ಸಲ ನೀನು ಬರಲಿ ಎಂದೇ ಛತ್ರಿಯನ್ನು ಮನೆಯಲ್ಲಿ ಬಿಟ್ಟು ಹೋಗುತ್ತಿದ್ದದ್ದೂ ಇದೆ. ಬಾಳೆ ಎಲೆಗಳ ಮೇಲೆ, ನೆಲೆದ ಮೇಲೆ ಪಟ ಪಟ ಸದ್ದು ಮಾಡುತ್ತಾ ಬೀಳುತ್ತಿದ್ದ ನಿನ್ನ ಹನಿಗಳನ್ನು ನೋಡುತ್ತಾ, ಅವುಗಳ ನಿನಾದವನ್ನು ಕೇಳುತ್ತಾ ಬೆಳೆದ ನನಗೆ ನೀನು ಎಂದೆಂದಿಗೂ ಪರಮಾಪ್ತ. ಇಲ್ಲಿ ನೀನು ಬೇಕೆಂದೇನೂ ಇಲ್ಲ, ಆದರೆ ಭಾರತದ ನಿನ್ನ ಸ್ವರೂಪವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ಬಾರದ ಮರಳುಗಾಡಿನಲ್ಲಿ ನಿನ್ನ ಕೊರತೆ ಕಾಡುತ್ತದೆ, ಒಣ ಗಾಳಿ ಮುಖಕ್ಕೆ ಅಪ್ಪಳಿಸುವಾಗಲೆಲ್ಲಾ ನಿನ್ನೊಡನೆ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ನಿನ್ನ ನೀರಿನಲ್ಲಿ ಆಟವಾಡಿ ಬಾಲ್ಯ ಕಳೆಯದ ನನ್ನ ಮಗನ, ಇಲ್ಲಿನವರ ಜೀವನವನ್ನು ನೋಡಿ ಹಲವು ಬಾರಿ ಮರುಕ ಪಡುತ್ತೇನೆ. ನೀನು ಬರುತ್ತಿಯೆಂದು ಛತ್ರಿಯನ್ನು ಬ್ಯಾಗಿನಲ್ಲಿರಿಸಿಕೊಂಡು ಹೋಗದ ಇಲ್ಲಿನ ಬದುಕನ್ನು ಕಂಡು ಸಂಕಟ ಪಡುತ್ತೇನೆ. ನಾವು ಆನಂದಿಸಿದ ಬಾಲ್ಯದ ದಿನಗಳು ನನ್ನ ಪುಟ್ಟ ಮಗನಿಗೆ ಸಿಗುತ್ತಿಲ್ಲವೆಂದು ಕಳವಳ ಪಡುತ್ತೇನೆ. ನೀನು ಬರುವ ಕಾಲದಲ್ಲಿ ನಾವು ಭಾರತದಲ್ಲಿ ಇಲ್ಲವಲ್ಲ ಎಂದು ಕೊರಗುತ್ತೇನೆ. 50 ಡಿಗ್ರಿ ತಾಪಮಾನದ ಈ ಮರಳುಗಾಡಿನಲ್ಲಿ ನಿನ್ನ ಭೇಟಿಗೆ ಈಗಲೂ ಕಾದು ನಿಂತಿದ್ದೇನೆ.

ಕೊನೆಗೆ ಮರಳುಗಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ನಮ್ಮಂಥವರ ಹಣೆಬರಹವೇ ಇಷ್ಟು ಎಂದುಕೊಂಡು ನಿನ್ನ ಮೇಲೆ ಬರೆದ ಯಾವುದಾದರೂ ಹಾಡನ್ನು ಗುನುಗುತ್ತಾ, ನಿನ್ನ ಕನಸು ಕಾಣುತ್ತಾ, ಮನೆಯ ಹೊರಗೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುವ ತಿಳಿ ನೀಲಿ ಸಮುದ್ರವನ್ನು ನೋಡುತ್ತಾ, ಕಿಟಕಿಯ ಬಳಿ ಆಡುತ್ತಿರುವ ಮಗನ ಜೊತೆ ಗಂಟೆಗಟ್ಟಲೆ ಕೂತುಬಿಡುತ್ತೇನೆ.

ಆದಷ್ಟು ಬೇಗ ಬರುವೆ ತಾನೇ?

ಇದನ್ನೂ ಓದಿ : Rain : ಊರ ತಿರಗೋ ಈ ‘ಹರಾಹುರಿ ಪಂಢರಾಪುರಿ’ಯ ವಾರಕರಿ ಅಸನರಿ ಮನಸ್ಯಾ ಅಲ್ಲ ಮತ್ತ

Published On - 7:23 pm, Thu, 12 August 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್