Rain : ‘ಜಡಂ ಗಡಾ, ನಿಸ್ತೇಜಂ ಗಡಾ… ಒಡಲೊಳ್ ಗುಡುಗುಟ್ಟುಗುಂ ಗುಡಾ…’

Literature : ‘ಮಾಬಿ ಡಿಕ್’ ಕಾದಂಬರಿಯ ಅಹಾಬ್ ಇರಲಿ, ‘ಕಿಂಗ್ ಲಿಯರ್’ ನಾಟಕದ ಹುಚ್ಚು ದೊರೆಯಿರಲಿ ಅವರು ನೆಂದ ಮಳೆಯಲ್ಲಿ ನಾನೂ ನೆಂದವನು. ಅದು ಬರಿ ಮಳೆಯಲ್ಲ. ಅಂಥ ಭಾವಸತ್ಯಗಳನ್ನು ಒಳಗೆ ತೆಗೆದುಕೊಂಡವನು. ಈ ಜನ್ಮದಲ್ಲಿ ಇಷ್ಟು ಭಾಗ್ಯ.’ ಡಾ. ಎಚ್. ಎಸ್. ರಾಘವೇಂದ್ರ ರಾವ್

Rain : ‘ಜಡಂ ಗಡಾ, ನಿಸ್ತೇಜಂ ಗಡಾ... ಒಡಲೊಳ್ ಗುಡುಗುಟ್ಟುಗುಂ ಗುಡಾ...’
ಹಿರಿಯ ವಿಮರ್ಶಕರಾದ ಡಾ. ಎಚ್. ಎಸ್ ರಾಘವೇಂದ್ರ ರಾವ್ ಮತ್ತು ಅನುವಾದಕ ಕೆ. ನಲ್ಲತಂಬಿ
Follow us
ಶ್ರೀದೇವಿ ಕಳಸದ
|

Updated on:Aug 13, 2021 | 6:08 PM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಿದ್ದಾರೆ ಅಕ್ಷರಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಅರ್ಧನಾರೀಶ್ವರ, ಹುಣಿಸೆಮರದ ಕಥೆ, ಹಳ್ಳ ಬಂತು ಹಳ್ಳ, ಯಾದ್ವಶೇಮ್, ಕಡುಗು ವಾಂಗಿ ವಂದವಳ್ (ತಮಿಳು-ಕನ್ನಡ, ಕನ್ನಡ ತಮಿಳು) ಅನುವಾದಿಸಿದ ಕೆ. ನಲ್ಲತಂಬಿ 2016ರಲ್ಲಿ ಬರೆದ ‘ಮಳೆ ಮತ್ತು ನಾನು’ ಕವನವಿಲ್ಲಿದೆ. ತರು ತಳೆದ ಪುಷ್ಪ, ನಮಸ್ಕಾರ, ಸಂಗಡ, ಚಕ್ರವರ್ತಿಯ ಬಟ್ಟೆಗಳು, ಕಣ್ಣಹನಿಗಳೆ ಕಾಣಿಕೆ, ನಿಜವು ತೋರದಲ್ಲ, ನೀರಿಗೆ ಮೂಡಿದ ಆಕಾರ, ಜನಗಣಮನ, ಹುಡುಕಾಟ, ಮಂಜಿನ ಶಿವಾಲಯಕ್ಕೆ ಮುಂತಾದ ವಿಮರ್ಶಾ ಮತ್ತು ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರ ಪ್ರಬಂಧವೂ ಇಲ್ಲಿದೆ.

*

ಮಳೆ ಮತ್ತು ನಾನು

ನಾನು ಹುಟ್ಟಿದ್ದು ಜಡಿ ಮಳೆಯ ದಿನ ಕುದುರೆ ಗಾಡಿಯಲ್ಲಿ ತೊಯ್ದ ದೇಹದೊಂದಿಗೆ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ದರು ನಾನು ಗರ್ಭದಲ್ಲೇ ಒದ್ದೆಯಾಗಿದ್ದವನು

ಅಂದಿನಿಂದ ನನಗೆ ಮಳೆಯೆಂದರೆ ಇಷ್ಟ ಮೋಡ ಕರಗಿ ಪನ್ನೀರಾಗಿ ಸುರಿಯುವಾಗೆಲ್ಲ ನಾನು ಆಕಾಶದ ಕೆಳಗೆ ನನ್ನ ಮೈತುಂಬಾ ಮಳೆಯ ಘಮಲು ತುಂಬಿಕೊಂಡೇ ಮನೆಯೊಳಗೆ ಬರುವುದು

ಮಳೆ ಬಂದಾಗೆಲ್ಲ ಎಲ್ಲೂ ಆಶ್ರಯಕ್ಕೆ ನಿಂತವನಲ್ಲ- ಮರದ ಕೆಳಗಗೋ, ಕಟ್ಟಡದ ಒಳಗಗೋ. ಮಳೆಯಲ್ಲಿ ಛತ್ರಿಯ ಮಡಿಚಿಟ್ಟು ನಡೆಯುವವನು ನಾನು ಮಳೆ ಬಂದಾಗೆಲ್ಲ ಮೊಮ್ಮಕ್ಕಳ ಬೀದಿಗೆಳೆದು ಆಡುವ ತಾತ ನಾನು ಒದ್ದೆಯಾಗಿ ಬಂದಾಗೆಲ್ಲ ಮಡದಿಯ ಸೆರಗಿನಲ್ಲಿ ತಲೆ ಒರೆಸಿಕೊಳ್ಳುವ ಮುಗ್ಧ ಪ್ರೇಮಿ ಇನ್ನೂ

ಮಳೆ ನನಗೊಂದು ಶುಭ ಸಂಕೇತ- ನಮ್ಮ ಮನೆಯ ಎಲ್ಲ ಹಬ್ಬಹರಿದಿನಗಳಲ್ಲಿ ಮಳೆ ಕರೆಯದೆ ಬರುವ ಅತಿಥಿ ಕಾಲ, ಋತುಗಳ ಕಟ್ಟುನಿಟ್ಟುಗಳನ್ನು ಮೀರಿ ಮೋಡವನ್ನು ಸೀಳಿ ಸುರಿವ ಗೆಳೆಯ

ನನ್ನ ಅಮ್ಮನ ಚಟ್ಟವ ಹೊತ್ತು ನಡೆದಂದೂ ಜೋರು ಮಳೆ-ತೋಯ್ದ ದೇಹದೊಂದಿಗೆ ಅವಳ ಅಂತಿಮ ಯಾತ್ರೆ ಅಂದೇಕೋ ನನ್ನ ಕಣ್ಣೀರಿನಿಂದ ಆ ಮಳೆ ತೋಯ್ದು ಹೋಯಿತು

*

rain series

ಸೌಜನ್ಯ : ಅಂತರ್ಜಾಲ

ಮಳೆಗೆ ಇಳೆಗೆ ಆಗೇದ ಲಗ್ನ

ಮಳೆಬಿದ್ದ ನೆಲದ ಘಾಟು ಗಮಲು, ನಾಲಿಗೆಯ ಮೇಲೆ ಕರಗುತ್ತಿರುವ ಆಲಿಕಲ್ಲು, ಕಿವಿ ತುಂಬುವ ಗುಡುಗುಡು ಗುಮ್ಮ, ಹೊರಗು-ಒಳಗು ನೆನೆಸಿ ನೆನಪುಬೆಂಕಿ ಹತ್ತಿಸುವ ಮಳೆಹನಿಷೇಕ, ಕೊಡೆಯಡಿಯ ಕಣ್ಣಿಗೆ ಮುಗಿಲಿಡಿ ಕಾಣಿಸುವ ‘ಝಲಲ ಝಲಲ ಜಲಧಾರೆ’ಯ ನೋಟ. ಹೀಗೆ ಐದು ಇಂದ್ರಿಯಗಳನ್ನೂ ಅರಳಿಸುವ ಕೆರಳಿಸುವ ಮಳೆಯನ್ನು ಮೀರಿಸುವ ಅನುಭವ ಬಹಳ ಕಡಿಮೆ. ಹೊರಗಿನ ಮಳೆ ಒಳಗಿನ ಮಳೆಯನ್ನು ಉದ್ದೀಪಿಸಿ ‘ವರ್ಷ ಹರ್ಷ’ವನ್ನು ‘ಕಾರ್ಗಾಲದ ವೈಭವ’ವನ್ನು ‘ವರ್ಷಭೈರವ’ನನ್ನು ನೆನಪಿಗೆ ತರುತ್ತದೆ.

‘ನಾಗರಿಕತೆ’ಯು ನಮ್ಮ ಅಂತರಂಗ-ಬಹಿರಂಗಗಳಿಗೆ ಮುಸುಕು ಹಾಕುವ ಮೊದಲು, ನೆಲಮುಗಿಲುಕಡಲುಗಳ ನೇರ ಸಂಪರ್ಕವಿದ್ದ ಜಾನಪದರು, ಅವರನ್ನು ಆವಾಹಿಸಿಕೊಂಡ ಕಲಾವಿದರು ಗುಡ್ಡಗುಡ್ಡಗಳನ್ನು ಸ್ಥಾವರಲಿಂಗವಾಗಿ ಮಳೆಯನ್ನು ಅವಕ್ಕೆ ಎರೆಯುವ ಅಭ್ಯಂಗವಾಗಿ ಕಲ್ಪಿಸಿಕೊಂಡರು. ಅದೇಕೋ ನೀರು ಗಂಗಮ್ಮನಾದರೂ ಮಳೆಯು ‘ರಾಯ’ನಾಗಿಯೇ ಕಾಣಿಸಿಕೊಳ್ಳುತ್ತಾನೆ. ಕವಿಯಂತೂ ‘ಇಳೆಗೆ’ ಮತ್ತು ‘ಮಳೆಗೆ’, ‘ಆಗೇದ ಲಗ್ನ..’ ಎನ್ನುತ್ತಾನೆ.

ಹದಿನೆಂಟು ವರ್ಣನೆಗಳ ರೆಡಿಮೇಡ್ ಚೌಕಟ್ಟಿನಲ್ಲಿರುವ ಪ್ರಾಚೀನ ಕಾವ್ಯಗಳ ಮಳೆಗೂ, ಮಳೆಯು ಸಾವು ಬದುಕಿನ ಪ್ರಶ್ನೆಯಾದ ಜಾನಪದರ ಮಳೆಗೂ ವ್ಯತ್ಯಾಸವಿದೆ. ಒಕ್ಕಲಗೇರಿಯವರೇ ಮಕ್ಕಳನ್ನು ಮಾರಿಕೊಂಡು ‘ಭತ್ತ’ ಎಂದು ತಿರುಗುವಾಗ, ಮಳೆಗಾಗಿ ಹಾತೊರೆಯುವ ರೈತರು ಅದೇ ಮಳೆ ಅತಿವೃಷ್ಟಿಯಾಗಿ ಎಲ್ಲವನ್ನೂ ಕೊಚ್ಚಿಕೊಂಡು ಹೋದಾಗ ‘ಯಾವಾಗ ಬಂದೆಪ್ಪ, ಮಳಿರಾಯಾ?’ ಎಂದು ಹಂಗಿಸುತ್ತಾರೆ. ಅವರು ಮಳೆಗಿಂತ ಹೆಚ್ಚಾಗಿ ಅದರ ಅಭಾವದ ಬಗ್ಗೆ ಬರೆಯುತ್ತಾರೆ. ‘ಯಾತಕ್ಕೆ ಮಳೆ ಹೋದವೋ…ಶಿವ ಶಿವ … ಲೋಕ ತಲ್ಲಣಿಸುತಾವೋ…’ ಎನ್ನುತ್ತಾರೆ. ‘ಪಟ್ಟದಾನೆಯಂಥ ಸ್ತ್ರೀಯರು ಸೊರಗಿ, ಸೀರೆ ನಿಲ್ಲೋದಿಲ್ಲ ಸೊಂಟಾದಲೆ..’ ಎಂಬ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ಬಹುರೂಪಿಯಾದ ಮಳೆಯು ಕರ್ನಾಟಕಕ್ಕೆ ಜಡಿಮಳೆಯಾಗಿ, ಸೋನೆಮಳೆಯಾಗಿ, ಜಿನುಗುಮಳೆಯಾಗಿ, ಹೂಮಳೆಯಾಗಿ, ಕಾನ್ವೆಂಟು ಕಂದಗಳ ‘ಗೋ ಅವೇ’ ಮಳೆಯಾಗಿ, ಸ್ಲಮ್ಮುವಾಸಿಗಳ ‘ಮನೆಹಾಳು’ ಮಳೆಯಾಗಿ, ಒಲುಮೆನೇಹಿಗರ ತೋಳುತವಕಕ್ಕೆ ಆಸರೆಯಾಗಿ, ನನ್ನಂತಹ ಕ್ರಿಕೆಟ್ ಪ್ರೇಮಿಗಳ ಶತ್ರುವಾಗಿ ಹಲವು ಬಗೆಯಲ್ಲಿ ಕಂಡಿದೆ. ಅವರವರ ಭಾವಕ್ಕೆ.. ಮಲೆನಾಡಿನ ಹೃದಯವಾದ ತೀರ್ಥಹಳ್ಳಿ, ಹೊಸನಗರಗಳ ಫಾಸಲೆಯಲ್ಲಿ ಬಾಲ್ಯ ಕಳೆದ ನನಗೆ ಮಳೆಯೆಂದರೆ ಓಲೆಗರಿ ಕೊಡೆ, ಕಡುಕಪ್ಪು ಗೊರಬು, ಕಾಡು ಹಣ್ಣು, ಜಾರುವ ದಾರಿಗಳ ವಾಸ್ತವ. ನೆಗಡಿ ಮತ್ತು ನೆಂದ/ನೊಂದ ಒಡಲುಗಳ ನೆನಪು ತರುವ ವಾಸ್ತವ. ‘ಜೋರು ಮಳೆ ಮತ್ತು ಸಂಗೀತ ಒಟ್ಟುಗೂಡಿದಾಗ ಬೇರೆಲ್ಲವೂ ಮರೆತುಹೋಗುತ್ತದೆ ಅಥವಾ ಯಾವುದೂ ಮರೆಯುವುದಿಲ್ಲ.’ ಎನ್ನುತ್ತಾರೆ. ಇವೆರಡಲ್ಲಿ ಯಾವುದು ನಿಜ? ಎರಡೂ ನಿಜ. ಹಿಂದಿರುಗಿ ನೋಡಿದಾಗ ಮನಸ್ಸಿನಲ್ಲಿ ಉಳಿದಿರುವುದು ಮಳೆಯೆಂಬ ವಾಸ್ತವವೋ ಮಳೆಯೆಂಬ ರೂಪಕವೋ ಹೆಳುವುದು ಕಷ್ಟ. ತಂದೆತಾಯಿಯರ ಆತಂಕದಿಂದ ‘ಅತಿ ಪೋಷಿತವಾದ’ ಬಾಲ್ಯವು ನಿಸರ್ಗವನ್ನು ದೂರ ಇಡುತ್ತದೆ. ರಿಸ್ಕ್ ಬೇಡವೆನ್ನುವ ಭಯವೇ ಅನುಭವಕ್ಕೂ ಸೊನ್ನೆ ಸುತ್ತುತ್ತದೆ. ಆದ್ದರಿಂದ ಅಪರೂಪಕೊಮ್ಮೆ ಮುದನೀಡಿದ ಮಳೆಯು ಇಂದಿಗೂ ಮೈ ಜುಮುಗುಟ್ಟಿಸುತ್ತದೆ. ಅಕ್ಷರಲೋಕವು ನೀಡುವ ‘ಸೆಕೆಂಡ್ ಹ್ಯಾಂಡ್’ ಅನುಭವಕ್ಕೆ ಅದರದೇ ಚೆಲುವು ಇದ್ದರೂ ಅದು ಇಂದ್ರಿಯಾನುಭವಕ್ಕೆ ಸಂವಾದಿಯಲ್ಲ. ನಾನು ಅಂಥ ಲೋಕದಲ್ಲಿ ಸಾಕಷ್ಟು ಓಡಾಡಿದವನು. ‘ಮಾಬಿ ಡಿಕ್’ ಕಾದಂಬರಿಯ ಅಹಾಬ್ ಇರಲಿ, ‘ಕಿಂಗ್ ಲಿಯರ್’ ನಾಟಕದ ಹುಚ್ಚು ದೊರೆಯಿರಲಿ ಅವರು ನೆಂದ ಮಳೆಯಲ್ಲಿ ನಾನೂ ನೆಂದವನು. ಅದು ಬರಿ ಮಳೆಯಲ್ಲ. ಅಂಥ ಭಾವಸತ್ಯಗಳನ್ನು ಒಳಗೆ ತೆಗೆದುಕೊಂಡವನು. ಈ ಜನ್ಮದಲ್ಲಿ ಇಷ್ಟು ಭಾಗ್ಯ.

ಮಳೆಯ ವರ್ಣನೆಗೂ ಪ್ರಾದೇಶಿಕತೆಯ ಸ್ಪರ್ಶ ಇರುತ್ತದೆ. ಕಡಲಕರೆಯಿಂದ ಬಂದ ಮುದ್ದಣ ‘ಜಡಂ ಗಡಾ, ನಿಸ್ತೇಜಂ ಗಡಾ..ಒಡಲೊಳ್ ಗುಡುಗುಟ್ಟುಗುಂ ಗುಡಾ..’ ಎಂದು ಭಾಷೆಯಲ್ಲಿಯೇ ಗುಡುಗಿದರೆ, ಪಂಜೆಯವರು ಮಡದಿಯರುಡೆಯನು ಸಡಿಲಿಸಿ, ಬಡ ಮುದುಕರ ಕೊಡೆ ಹಾರಾಡಿಸುವ ‘ತೆಂಕಣಗಾಳಿಯಾಟ’ವನ್ನು ವರ್ಣಿಸುತ್ತಾರೆ. ‘ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವವನ್ನು ಬರೆದ ಶಂಕರಭಟ್ಟರಿಗೆ ಮಳೆಯು, ಆಗಸವೆಣ್ಣು ನಲ್ಲಾ ಎಂದು ಕೂಗುತ್ತಾ ಹರಿಸಿದ ಕಣ್ಣೀರ ಹೊನಲಿನಂತೆ ಕಾಣುತ್ತದೆ. ಧಾರವಾಡದ ಕಣವಿಯವರಿಗೆ ಮಳೆಹನಿಧಾರೆಯು ಶೇವಿಗೆಯ ಸಿವುಡಿನಂತೆ ಕಂಡರೆ, ಅವರಿಗೆ ಹತ್ತಿರದ ಗದಗಿನ ಕುಮಾರವ್ಯಾಸನು ‘ಮುಗಿಲ ಬೆನಕಗೆ ಲಡ್ಡುಗೆಗಳಾದವು ಸಮಸ್ತ ಗ್ರಹಸುತಾರೆಗಳು’ ಎಂದು ಗಣಪತಿಯಂಥ ಮೋಡಗಳನ್ನು ವರ್ಣಿಸುತ್ತಾನೆ. ಶಿಶುನಾಳ ಶರೀಫರು ‘ಸೋರುತಿಹುದು ಮನೆಯ ಮಾಳಿಗಿ.’ ಎಂದಾಗ ಮಳೆಗೆ ಬೇರೆಯದೇ ಆಯಾಮ. ಎಂಥ ಮಳೆಯನ್ನೂ ‘ಎನಗೆ ಮಜ್ಜನಕ್ಕೆರೆದರೆಂಬೆನು’ ಎಂದು ಸ್ವೀಕರಿಸುವ ಅಕ್ಕನ ಹದವೇ ಬೇರೆ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ಯಲ್ಲಿ ಮಳೆಯದೇ ಋತುಮಾನದ್ದೇ ಚೌಕಟ್ಟು. ಹೀಗೆ ಕನ್ನಡ ಲೇಖಕರು ಮಳೆಯ ವಿಶ್ವರೂಪವನ್ನೇ ಕಂಡಿದ್ದಾರೆ, ಕಂಡರಿಸಿದ್ದಾರೆ. ಸಂಗೀತಗಾರರು ಕೂಡ ಮೇಘಮಲ್ಹಾರದಂತಹ ರಾಗಗಳಲ್ಲಿ ಮಳೆಗೆ ಅಹವಾಲು ಮಾಡಿದ್ದಾರೆ. ಹಿಂದಿ ಸಿನಿಮಾಗಳಿಗೂ ಮಳೆಗೂ ಅವಿನಾ ಸಂಬಂಧ. ಕಳೆದ ಕಾಲದಲ್ಲಿಯೂ ಈ ಕಾಲದಲ್ಲಿಯೂ ನೆನೆಯುತ್ತಿದ್ದುದುನಾಯಕಿಯರ ಮೈ ಮಾತ್ರವಲ್ಲ, ಕೇಳುವವರ ಹೃದಯಗಳು ಕೂಡ. ನಾವೆಲ್ಲರೂ ಈ ‘ಬರ್ಸಾತ್’ ಮತ್ತು ‘ಬಸಂತ್’ನಲ್ಲಿ ನೆಂದವರೇ. ಮಳೆಗಾಗಿ ಮುಗಿಲಿಗೆ ಮುಖಮಾಡಿ ಕುಣಿಯುವ ನವಿಲು ಕೂಡ, ‘ಸುನ್ ಸುನ್ ಸುನ್ ಬರ್ಸಾತ್ ಕಿ ಧುನ್’ ಎಂದೇ ಕರೆಯುತ್ತದೆ.

rain series

ಸೌಜನ್ಯ : ಅಂತರ್ಜಾಲ

ಪ್ರಕೃತಿಯನ್ನು ಗುಲಾಮನಂತೆ ಬಳಸಿಕೊಳ್ಳುವ ಆಧುನಿಕತೆಯು ಮಳೆಬಿತ್ತನೆ ಮಾಡುತ್ತಿದೆ, ಕೀಟನಾಶಕಗಳನ್ನು ಬಳಸಿ ಮಳೆಯು ನೀಡಿದ ಬೆಳೆಗೆ ವಿಷ ಬೆರೆಸುತ್ತಿದೆ. ಗಾಳಿಯನ್ನು ಬಿತ್ತಿ ಬಿರುಗಾಳಿಯನ್ನು ಪಡೆಯುತ್ತಿದೆ. ಈ ದೃಷ್ಟಿಕೋನವು ನಿತ್ಯವತ್ಸಲೆಯೋ ನಿರ್ಲಿಪ್ತೆಯೋ ಆದ ಪ್ರಕೃತಿಯನ್ನು ಶತ್ರುವಾಗಿ ಮಾರ್ಪಸುತ್ತಿದೆ. ‘ಚಿಗುರಿಗಂಗಳ ಚೆಲುವೆ’ಯಾದ ಭೂಮಿಯೇ ಬೆದರಿ ನಿಂತಾಗ, ಮಳೆಯು ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆಯಿಂದ ಹುಟ್ಟಿದ ವಸ್ತುವಾಗಿಬಿಡುತ್ತದೆ. ವಾಸ್ತವವು ರೂಪಕಗಳಾಗಿ ಪ್ರೀತಿ, ಪೂಜೆಗಳನ್ನು ಪಡೆಯುತ್ತಿದ್ದ ನಮ್ಮ ನಾಡಿನಲ್ಲಿ ರೂಪಕಗಳು ಕೂಡ ವಾಸ್ತವವಾಗಿ, ವಾಸ್ತವವು ಮಾರಾಟದ ಸರಕಾಗಿ ಬದಲಾಗುತ್ತಿದೆ. ‘ಇಳಿದು ಬಾ ತಾಯಿ, ಇಳಿದು ಬಾ..’ ಎಂದು ಕರೆಯುವುದು ಮೂಢನಂಬಿಕೆಯಲ್ಲ, ಅದು ಯಾಂತ್ರಿಕತೆಯನ್ನು ಭಾವನೆಯಾಗಿ ಬದಲಿಸುವ ಮಾಂತ್ರಿಕತೆ. ಆದ್ದರಿಂದ ಅಮೆರಿಕಾದ ಜನಪದ ಕವಿ/ಗಾಯಕ ಬಾಬ್ ಡಿಲನ್ ಹೇಳಿದಂತೆ,

“Some people feel the rain. Others just get wet.”

ಡಿಲನ್ ಹೇಳುವ ಹಾಗೆ, ಒದ್ದೆಯಾಗುವುದರ ಆಚೆಗಿನ ಮಳೆಯ ಸಂವೇದನೆ, ಕೂಡುವುದರ ಆಚೆಗಿನ ಕೂಟ, ನೋಟದಾಚೆಗಿನ ದರ್ಶನ ಇದನ್ನು ಪಡೆದಾಗ ಮಳೆಯು ಮಳೆಯಾಗಿ ಉಳಿಯುವುದಿಲ್ಲ. ನಾವು ನಾವಾಗಿ ಉಳಿಯುವುದಿಲ್ಲ. ಆಗ ಅನುಭವವು ಅನುಭಾವವಾಗುತ್ತದೆ. ಕಾಣುವಿಕೆಯು ಕಾಣ್ಕೆಯಾಗುತ್ತದೆ. ಆದ್ದರಿಂದ ನಾವು ಕೂಡ ಕೊರೋನಾ ಕಾಲದ ‘ಮುಖವಾಡ’ಗಳನ್ನು ಬದಿಗಿರಿಸಿ, ಮಳೆ ಬರುವ ಕಾಲಕ್ಕೆ, ಒಳಗೆ ಕೂರದೆ ‘ಮಳೆಯೊಳಗೆ ಜಳಕ ಮಾಡೋಣ.’ ಅದರ ಐಂದ್ರಿಯಿಕ, ತಾರಕ, ಮಾರಕ ಮುಖಗಳನ್ನು ಒಳಗೊಳ್ಳುತ್ತಲೇ ಮನುಷ್ಯರು ಸುರಿಸುವ ಮಳೆಗೆ ನೆಲವಾಗೋಣ. ಅವರ ನೆಲಗಳ ಮೇಲೆ ಮಳೆಯಾಗಿ ಸುರಿಯೋಣ.

ಇದನ್ನೂ ಓದಿ : Rain : ‘ಇಲ್ಲೇ ಪಕ್ಕದ ಕೆರೆಯ ಬಳಿ ಸಿಡಿಲೆರಗಿದ ಸದ್ದು, ಈ ಬೆಳಗ್ಗೆ ಕೆರೆ ಅಲುಗಾಡದೆ ನಿಂತಿದೆ’

Published On - 5:29 pm, Fri, 13 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ