Rumi Column – ರೂಮಿ ಕಾಲಂ : ಒಂದು ಹಂತದ ನಂತರ ನಂಗೆ ಈ ಖಯಾಲ್ ಅದರ ರಚನೆ ಅದರ ಭಾಷೆ ಅದರ ಜೀವ ತುಂಬಾ ಹತ್ರ ಆಯ್ತು. ಮಧ್ಯ ಬಂದ್ರೆ ಯಾವುದೋ ಖ್ವಾಜ, ಸೂಫಿ, ಪೀರ್ ಬರ್ತಾರೆ ಇಲ್ಲಾಂದ್ರೆ ಒಂದೊಂದ್ ಸರ್ತಿ ಗಣೇಸ, ಮಹದೇವ ಮತ್ತೆ ದೇವಿ ಮಾತ್ರ ಬರೋದು. ಈ ಅಖಿಲಾಂಡೇಸ್ವರಿ, ರಾಮ, ಮತ್ತೆ ಬ್ರಾಮಣ ದೇವರುಗಳು ಇಲ್ಲ. ಕೃಷ್ಣನ ಮಾತ್ರ ಎಲ್ಲಿ ಹೆಸರು ಹೇಳಕ್ಕೆ ಆಗಲ್ವೋ ಅಲ್ಲಿ ಯೂಸ್ ಮಾಡ್ತಾರೆ. ಅಂದ್ರೆ ನಮ್ ಮೇಷ್ಟ್ರು ಮಾಧ್ವ ಬ್ರಾಮಣರು, 22 ವರ್ಷ ಮುಸಲ್ಮಾನ್ ಉಸ್ತಾದರ ಮನೆಗಳಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಕ್ಕೆ ಉಳಿದಿದ್ದು. ಕಲಿತು ಬೆಂಗಳೂರಿಗೆ ಬಂದು ಮತ್ತೆ ಬ್ರಾಮಣರಾಗಿ ಮಾಧ್ವರ ಗುಂಪು ಚೇಂಜ್ ಮಾಡಿದ ಮೇಲೆ ನಮ್ ರಾಮರಾಯರ ಜೀವನ ಕಾಮಿಡಿ ಆಗೋಯ್ತು. ಈ ಕಡೆ ಮುಖ್ಯಪ್ರಾಣ ಅಂತಾರೆ ಆ ಕಡೆ ಗರೀಬ್ ನವಾಜ಼್ ಬಗ್ಗೆನೂ ಹಾಡ್ತಾರೆ. ಶಿವರಾತ್ರಿಯ ದಿನದಂದು ಶಿವ ಅಂತ ಹೇಳಕ್ಕೇ ನಮ್ ಮಾಧ್ವ ಮೇಷ್ಟ್ರು ಶಿವಮತ್ ಭೈರವ್ ಎನ್ನೋ ರಾಗನ ಆಲ್ ಇಂಡಿಯ ರೇಡಿಯೋದಲ್ಲಿ ಉಪವಾಸ ಇದ್ದು “ಪೀರ್ ತೂ ದರಸ ದೇ ಮೇರೆ ದರವೇಸ್” (ಪೀರ್ ನೀ ನನಗೆ ದರ್ಶನ ನೀಡು ದರವೇಶಿ) ಅಂತ ಹಾಡಿದ್ರು. ಇದು ನಮ್ ಹಿಂದೂಸ್ತಾನಿ ಖಯಾಲ್ ಸಂಗೀತದ ಮಹಾತ್ಮೆ.
ರೂಮಿ ಹರೀಶ್, ಟ್ರಾನ್ಸ್ ಮ್ಯಾನ್
(ಅಲೆ : 4)
ಒಂದ್ ದಿವ್ಸ ನಮ್ ಮೇಷ್ಟ್ರು ಪಾಠ ಮಾಡ್ತಾ “ಬಾಲಮುವಾ ಮೋರೆ” ಅಂತ ಹಾಡಿದ್ರು. ನಂಗಿನ್ನು ಆಗ 8 ವಯಸ್ಸು. ಬಾಲಮುವಾ ಅಂದ್ರೆ ಏನು ಅಂತ ಕೇಳಿದೆ ಅದಕ್ಕವ್ರು “ಬಾಲಮ್ಮ ಅಂತ ಒಬ್ಳು ಇದ್ಲು, ಅವಳ ಬಗ್ಗೆ” ಅಂತ ಅಂದ್ರು. ಆಗ ಆ ವಯಸ್ಸಿನಲ್ಲಿ ನಂಗೆ ಗೊತ್ತಿದ್ದುದು ಏನಂದ್ರೆ ಭಾರತದಲ್ಲಿ ಎರಡು ಶಾಸ್ತ್ರೀಯ ಸಂಗೀತ ಇವೆ. ಒಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಇನ್ನೊಂದು ಹಿಂದೂಸ್ತಾನಿ ಸಂಗೀತ. ನಮ್ ಮನೇಲಿ ಎಲ್ರೂ ಅಂದ್ರೆ ಅಮ್ಮನ ಮನೆಯವರು “ಮ್ಯೂಸಿಕಲ್ ಫ್ಯಾಮಿಲಿ” ಅಂತ ಹೇಳೋವ್ರು. ಅವರೆಲ್ರೂ ಕರ್ನಾಟಕ ಶಾಸ್ತ್ರೀಯ ಸಂಗೀತ ಅಲ್ಪಸ್ವಲ್ಪ ಕಲ್ತಿದ್ರು. ಗೊತ್ತು ಶಾಸ್ತ್ರೀಯ ಸಂಗೀತ ಅಂದ್ರೆ ದೇವ್ರು ಭಕ್ತಿ ಇಂಥದೇ ಎಲ್ಲಾ ಹಾಡೋದು, ಆದ್ರೆ ರಾಮರಾಯರ (ರಾಮರಾವ್ ನಾಯಕ) ಹತ್ರ ಹಿಂದೂಸ್ತಾನಿ ಕಲಿಯಲು ಶುರು ಮಾಡಿದಾಗ ಈ ಬಾಲಮ್ಮ ಎಲ್ಲಿಂದ ಬಂದ್ಲು ಅಂತ ಗೊತ್ತಾಗ್ಲಿಲ್ಲ ಚಿಕ್ಕ ವಯಸ್ಸಿನಲ್ಲಿ. ಸ್ವಲ್ಪ ದಿನಗಳ ನಂತರ ಸಯ್ಯ ಅಂತೆ ಗುಯ್ಯ ಅಂತೆ ಬಟರಿಯಾ ಅಂತೆ ಹೀಗೆ ಏನೇನೋ ಕೇಳಕ್ಕೆ ಶುರು ಮಾಡಿದೆ. ಆಗ ಮೇಷ್ಟ್ರನ್ನು ಕೇಳಿದೆ, “ಹಿಂದೂಸ್ತಾನಿ ಸಂಗೀತ ಶಾಸ್ತ್ರೀಯ ಅಲ್ವ?” ಅದಕ್ಕವರು “ಯಾಕೆ ಹೀಗೆ ಕೇಳ್ತೀಯ” ಅಂದ್ರು. ನಾನಂದೆ “ದೇವ್ರುಗಳೇ ಇಲ್ಲ, ಬರೀ ಬಾಲಮ, ಸಯ್ಯ, ಗುಯ್ಯ ಅಂತ ಇದೆ. ಇವರೆಲ್ಲ ಯಾವ ದೇವ್ರುಗಳು?” ಅವರು ಜೋರಾಗಿ ನಕ್ಬಿಟ್ರು. ನಾನು ಸುಮ್ನಾಗಿಬಿಟ್ಟೆ.
ಕೆಲವು ವರ್ಷಗಳ ನಂತರ ನಾನು ಕಂಫರ್ಟಬಲ್ ಆದೆ. ದೇವರುಗಳಿಲ್ಲದೇ ಇರುವ ಬೇರೆ ರೀತಿಯ ಸಂಗೀತ. ಒಂಥರಾ ಎಷ್ಟು ಬೇಕಾದ್ರೂ ವಿಹರಿಸಬಹುದು. ಆದ್ರೆ ಆ ಸಂಗೀತದ ಭಾಷೆ ಅಂದ್ರೆ ಅದರಲ್ಲಿ ಬರುವ ಪದಗಳ ಭಾಷೆ ಅಲ್ಲ ಆ ಸಂಗೀತಕ್ಕೆ ಒಂದು ಭಾಷೆ ಇದೆ. ಅದು ನಾವು ನಮ್ಮ ದೇಹವನ್ನು ಪ್ರೀತಿಯಿಂದ ಸ್ಲೋ ಆಗಿ ಮುಟ್ಟುತ್ತಾ ಅಂದ್ರೆ ಆ ಸ್ಪರ್ಷದಲ್ಲಿ ಈ ಸಂಗೀತದ ಭಾಷೆ ಅರ್ಥ ಆಗುತ್ತೆ ಅನ್ಸಕ್ಕೆ ಶುರುವಾಯ್ತು. ಈ ಸಂಗೀತದ ತಾಳ ಕೂಡ ಅರ್ಜೆಂಟಲ್ಲಿ ಏನೋ ತೀರಿಸಬೇಕು ಅಂತಿಲ್ಲ. ಅದು ಪಾಡಿಗೆ ಅದು ಹೋಗ್ತಾ ಇರುತ್ತೆ. ನಾವು ಅದರ ಜೊತೆ ಜೊತೆ ನಡೀತ ಒಂದು ಕಥೆನೋ ಕವನನೋ ಕಾವ್ಯಾನೋ ಮನಸ್ಸಿನಲ್ಲಿ ಕಟ್ಟಿಕೊಂಡು ಹಾಡುವ ಪದಕ್ಕೆ ಸಂಬಂಧವೇ ಇಲ್ಲದಂತೆ ಕೇಳುವ ಜನಕ್ಕೂ ಗೊತ್ತಾಗದಂತೆ, ಆದರೆ ಅವರೂ ನಾವು ಕಟ್ಟುವ ಈ ಅರ್ಥ ಮೀರಿ ನಡೆಸುವ ಈ ಪಯಣಗಳಲ್ಲಿ ಜೊತೆಜೊತೆ ನಡೆಯುವ ಅನುಭವ. ಕೇಳುವವರು ಹಾಡುವವರು ನುಡಿಸುವವರು, ಎಲ್ಲರೂ ತಮ್ಮ ತಮ್ಮ ಅರ್ಥಗಳನ್ನು ಕಟ್ಟಿಕೊಳ್ಳುವ ಅವಕಾಶ. ಆಗ ನಂಗೆ ಗೊತ್ತಾಗಿದ್ದು, ನಾನು ಹಾಡುವ ಸಂಗೀತ ಪದ್ಧತಿ ಖಯಾಲ್ ಅಂತ. ಶಾಸ್ತ್ರ ಇರುವು ರಾಗಗಳಿಗೆ. ಅಂದ್ರೆ ಈ ರಾಗದಲ್ಲಿ ಈ ಸ್ವರ ಇಲ್ಲ ಈ ರಾಗದಲ್ಲಿ ಈ ಸ್ವರ ಹೀಗಿದೆ. ಆದರೆ ಕೇಳುಗನಿಗೆ ಅದನ್ನು ಅರಿಯುವ ಅಗತ್ಯ ಇಲ್ಲ. ಬರೀ ಅನುಭವಿಸಿದರೆ ಸಾಕು.
ಖಯಾಲ್ ಅಂದ್ರೆ ಏನು? ಖಯಾಲ್ ಅಂದ್ರೆ ಒಂದು ಯೋಚನೆ. ಯೋಚನೆಯನ್ನು ಬೇಳೆಸುವ ಸಂಗೀತ. ಇದನ್ನು ಶುರು ಮಾಡಿದ್ದು ಅಮೀರ್ ಖಸ್ರೋ ಅಂತಾರೆ, ಮಹಮ್ಮದ್ ಶಾ ರಂಗೀಲೆ ಅಂತಾರೆ. ಒಮ್ಮೆ ದಿನಕರ್ ಕೈಕಿಣಿ ಅನ್ನುವ ಮಹಾನ್ ಸಂಗೀತಗಾರಾರು, ಅದ್ಭುತ ಖಯಾಲ್ ರಚನಕಾರರು ಮುಂಬೈನಲ್ಲಿ ಬದುಕಿದ್ದವರು, ಹೇಳಿದರು, 17 ನೇ ಶತಮಾನದಲ್ಲಿ ಹರಿಯಾಣದ ಹಳ್ಳಿಯಲ್ಲಿ ಶುರುವಾದ ಹಾಡುವ ಒಂದು ಸ್ಟೈಲ್ನಿಂದ ಖಯಾಲ್ ರಚನೆ ಶುರುವಾದದ್ದು ಅಂತ ಹೇಳಿದರು. ವಿಚಿತ್ರ ಎಂದರೆ ಈ ಖಯಾಲ್‌ನಲ್ಲಿ ಬರುವ ಪದ್ಯ- ಅತ್ತೆ ಸೊಸೆ ಜಗಳಗಳ ಬಗ್ಗೆ ಇರುತ್ತೆ, ಸೀಕ್ರೆಟ್ ಲವ್ವರ್‌ಗಳ ಬಗ್ಗೆ ಇರುತ್ತೆ, ಬಟ್ಟೆಗಳಿಗೆ ಬಣ್ಣ ಹಚ್ಚುವುದರ ಬಗ್ಗೆ ಇರುತ್ತೆ, ಕಟ್ಟಿಗೆ ಕೆಲಸ ಮಾಡುವವರ ಬಗ್ಗೆ ಇರುತ್ತೆ, ಹೆಂಗಸರು ಬಿಂದಿಗೆಗಳಲ್ಲಿ ನೀರು ತರುವ ತೊಂದರೆಗಳು, ಪ್ರೀತಿ ಪ್ರೇಮಗಳ ಬಗ್ಗೆ ಹೀಗೆ ದಿನ ನಿತ್ಯದ ಸಾಮಾನ್ಯ ಜನರ ಜೀವನದ ಅನುಭವಗಳನ್ನು ಕಾವ್ಯಾತ್ಮಕವಾಗಿ ಉತ್ತರ ಭಾರತದ ಹಳ್ಳಿಭಾಷೆಗಳಲ್ಲಿ ಇರುತ್ತೆ. ಭೋಜ್ಪೂರಿ, ಪಹಾಡಿ, ದೇಹಾತಿ, ರಾಜಾಸ್ಥಾನಿ, ಪಂಜಾಬಿ, ಹೀಗೆ ಇದಕ್ಕೆ ಖಡಿ ಬೋಲಿ ಅಂತಾರೆ. ಖಡಿ ಬೋಲಿ ಅಂದ್ರೆ ಆಡು ಭಾಷೆ. “ಹಾರಿ ದೈಯ್ಯಾ…” ಅಂದ್ರೆ ಅಯ್ಯೋ ಹುಡ್ಗಿ ಅಥವಾ ಗೆಳತಿ… ಬಾಲಮುವ, ಸೈಯ್ಯ, ಪ್ರೀತಮ್ ಪ್ಯಾರೆ ಅಂದ್ರೆ ಪ್ರೇಮಿ. ಮೆ ಕೈಸೆ ಭೇಜು ಪಾತ್ತಿ ಅಂದ್ರೆ ನಾನು ಹೇಗೆ ನಿಂಗೆ ಪತ್ರ ಕಳಿಸಲಿ…
ಒಂದು ಹಂತದ ನಂತರ ನಂಗೆ ಈ ಖಯಾಲ್ ಅದರ ರಚನೆ ಅದರ ಭಾಷೆ ಅದರ ಜೀವ ತುಂಬಾ ಹತ್ರ ಆಯ್ತು. ಮಧ್ಯ ಬಂದ್ರೆ ಯಾವುದೋ ಖ್ವಾಜ, ಸೂಫಿ, ಪೀರ್ ಬರ್ತಾರೆ ಇಲ್ಲಾಂದ್ರೆ ಒಂದೊಂದ್ ಸರ್ತಿ ಗಣೇಸ, ಮಹದೇವ ಮತ್ತೆ ದೇವಿ ಮಾತ್ರ ಬರೋದು. ಈ ಅಖಿಲಾಂಡೇಸ್ವರಿ, ರಾಮ, ಮತ್ತೆ ಬ್ರಾಮಣ ದೇವರುಗಳು ಇಲ್ಲ. ಕೃಷ್ಣನ ಮಾತ್ರ ಎಲ್ಲಿ ಹೆಸರು ಹೇಳಕ್ಕೆ ಆಗಲ್ವೋ ಅಲ್ಲಿ ಯೂಸ್ ಮಾಡ್ತಾರೆ. ಅಂದ್ರೆ ನಮ್ ಮೇಷ್ಟ್ರು ಮಾಧ್ವ ಬ್ರಾಮಣರು, 22 ವರ್ಷ ಮುಸಲ್ಮಾನ್ ಉಸ್ತಾದರ ಮನೆಗಳಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಕ್ಕೆ ಉಳಿದಿದ್ದು. ಕಲಿತು ಬೆಂಗಳೂರಿಗೆ ಬಂದು ಮತ್ತೆ ಬ್ರಾಮಣರಾಗಿ ಮಾಧ್ವರ ಗುಂಪು ಚೇಂಜ್ ಮಾಡಿದ ಮೇಲೆ ನಮ್ ರಾಮರಾಯರ ಜೀವನ ಕಾಮಿಡಿ ಆಗೋಯ್ತು. ಈ ಕಡೆ ಮುಖ್ಯಪ್ರಾಣ ಅಂತಾರೆ ಆ ಕಡೆ ಗರೀಬ್ ನವಾಜ಼್ ಬಗ್ಗೆನೂ ಹಾಡ್ತಾರೆ. ಶಿವರಾತ್ರಿಯ ದಿನದಂದು ಶಿವ ಅಂತ ಹೇಳಕ್ಕೇ ನಮ್ ಮಾಧ್ವ ಮೇಷ್ಟ್ರು ಶಿವಮತ್ ಭೈರವ್ ಅನ್ನೋ ರಾಗನ ಉಪವಾಸ ಇದ್ದು ಆಲ್ ಇಂಡಿಯ ರೇಡಿಯೋದಲ್ಲಿ “ಪೀರ್ ತೂ ದರಸ ದೇ ಮೇರೆ ದರವೇಸ್” (ಪೀರ್ ನೀ ನನಗೆ ದರ್ಶನ ನೀಡು ದರವೇಶಿ) ಅಂತ ಹಾಡಿದ್ರು. ಇದು ನಮ್ ಹಿಂದೂಸ್ತಾನಿ ಖಯಾಲ್ ಸಂಗೀತದ ಮಹಾತ್ಮೆ.
ನಮ್ ಶಾಸ್ತ್ರೀಯನೋ ಅಲ್ಲದ್ದೋ ಆಗಿರುವ ಖಯಾಲ್‌ನಲ್ಲಿ ಒಂದು ಪಾಲಿಟಿಕ್ಸ್ ಇದೆ. ಎಲ್ಲಾ ಪ್ರೆಜುಡಿಸ್‌ನ ಮೀರುವ ಒಂದು ಆತ್ಮ. ಇಲ್ಲಂದ್ರೆ ನೀವೇ ಯೋಚನೆ ಮಾಡಿ, ಲೆಸ್ಬಿಯನ್ (ಸ್ತ್ರೀ ಸಲಿಂಗ ಕಾಮೀ) ರಚನೆ ಮಾಡೋದು ಸಾಧ್ಯಾನಾ?
ರಾಗ ಮಿಯಾನ್ ಕಿ ತೋಡಿ (ತಾನ್ಸೇನ್ ಸೃಷ್ಟಿಸಿದ ರಾಗ) ದುಖಃ, ಪ್ಯಾಥೋಸ್ ಇರುವ ಅಂತ ಡಿಫೈನ್ ಆಗಿರೋ ರಾಗದಲ್ಲಿ ಘಠಾನುಘಟಿಗಳು ಹಾಡಿರುವ ಖಯಾಲ್ ರಚನೆ…
“ಏ ದಯ್ಯ ಬಾಟ ದೂಬರ್ ಭಯಿ ಮೈಕಾ ಲಂಗೂರವ ಭರನನ ದೇತ್ ಗಗರಿಯಾ
ವಿಹನ ತೋರೇ ಸಂಗ್ ಕೈಸೆ ಜಾವು ಸಜನಿ ಬೀಚ್‌ಮೆ ಠಾಡೋ ಸದಾರಂಗ್, ಉಛಕೈಯ್ಯ”
(ಏ ಗೆಳತಿ, ಈ ರಸ್ತೆ ತುಂಬಾ ತೊಂದರೆಯಿಂದ ಕೂಡಿದೆ. ನಾನು ಹೋಗಿ ಬಿಂದಿಗೆಯಲ್ಲಿ ನೀರು ತರಲೂ ಕಷ್ಟ ಆಗಿದೆ
ಗೆಳತೀ, ನಿನ್ನ ಜೊತೆ ವಿಹಾರಕ್ಕೆ ಪ್ರೀತಿಗೆ ಹೋಗಲು ಸಮಸ್ಯೆ ಆಗಿದೆ. ನಾವು ಮಿಲನಕ್ಕೆ ಬರುವಾಗ ಸದಾರಂಗ್ ಎನ್ನುವ ಕೋತಿ ನಮ್ಮ ಮಧ್ಯ ಎಗುರುತ್ತಾ ಇದ್ದಾನೆ.)
ಶಾಸ್ತ್ರೀಯ ಅನ್ನೋದಕ್ಕಿಂತ ಜೀವನ ಹಾಡುವ ಈ ಸ್ಟೈಲ್ ನನಗೆ ಮುಖ್ಯ ಆಗಿದ್ದು ಯಾವಾಗ ಅಂದ್ರೆ ಈ ಬ್ರಾಮಣಿಕೆ. ಈ ಜಾತಿ, ಈ ಹಿಂದುತ್ವ, ಈ ಪ್ರೆಜುಡಿಸಸ್ನ ಮೀರಕ್ಕೆ ಸಾಧ್ಯ ಆದಾಗ. ನಮ್ ಹಣೆಬರ… ಈ ಭಾಷೆ ನಮ್ ಜನಕ್ಕೆ ಅರ್ಥ ಆಗಲ್ಲ. ಈ ಭಾಷೆಗಳ ಸೊಗಸು ನಮ್ ಕನ್ನಡದಷ್ಟೇ ಸೊಗಸಾಗಿದೆ, ಅಂದ್ರೆ ನಮ್ ಕನ್ನಡ ಸುಲಭವಾದ ಕನ್ನಡ ನಮ್ ಕನ್ನಡ.
*
ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುತ್ತಿದೆ. ಪ್ರತಿಕ್ರಿಯೆಗಳಿಗಾಗಿ tv9kannadadigital@gmail.com
ಹಿಂದಿನ ಅಲೆ : Transgender World : “ನಿಮ್ ಹತ್ರ 20 ನಿಮಿಷ ಮಾತಾಡ್ತೀನಿ, ನೀವು ಸಲಿಂಗಕಾಮಿಯೋ ಇಲ್ಲ ಹೆಂಗಸೋ ಆಗಿಬಿಡ್ತೀರಾ?’’
Published On - 11:39 am, Tue, 23 November 21