Yakshagana: ಬಡತನವೋ ಸಿರಿತನವೋ ಎಳೆಯರನ್ನು ಬಾಧಿಸದಿರಲಿ

YakshaRanga: ಅಶ್ವತ್ಥಾಮ ಎಂಬ ಈ ದುರ್ದೈವಿಯನ್ನು‌ ಎಳೆತನದಲ್ಲಿ ಯಾರಾದರೂ‌ ತಿದ್ದುತ್ತಿದ್ದರೆ, ಅವನಿಗೆ‌ ಬಾಲ್ಯವು ಒಂದಿಷ್ಟು ಮಧುರ ಎಂಬ ಅನುಭವವಾಗುತ್ತಿದ್ದರೆ, ಹಸ್ತಿನಾವತಿಯಲ್ಲಿ ಸಜ್ಜನರ‌ ಸಹವಾಸ ದೊರೆಯುತ್ತಿದ್ದರೆ, ಮಡದಿ ಮಕ್ಕಳು ಇರುತ್ತಿದ್ದರೆ..

Yakshagana: ಬಡತನವೋ ಸಿರಿತನವೋ ಎಳೆಯರನ್ನು ಬಾಧಿಸದಿರಲಿ
ಪುರಾಣ ಪಾತ್ರಗಳ ವರ್ತಮಾನ (ಚಿತ್ರ: ಮುರಳಿಮೋಹನ ಅಬ್ಬೆಮನೆ)
Follow us
|

Updated on: Aug 15, 2021 | 5:03 PM

ಹತ್ತಾರು ಮಕ್ಕಳು ಆಡುತ್ತಿದ್ದಾರೆ. ಅಲ್ಲೊಬ್ಬ ಎಳೆಯ ಹುಡುಗ. ಅವನಿಗೋ ಹಾಲು ಕುಡಿಯುವ ಆಸೆ. ಆದರೆ ಅವನ ಮನೆಯಲ್ಲಿ ಹಾಲಿಗೆ ಗತಿಯಿಲ್ಲದಷ್ಟು ಕಡುಬಡತನ. ಒಡನೆ ಆಡುವ ಬಾಲಕರಿಗೆ ಇದು ಹಾಸ್ಯ. ಅವರು ನೀರಿಗೆ ಅಕ್ಕಿಹಿಟ್ಟು ಸೇರಿಸಿ ಬೆಳ್ಳಗೆ ಮಾಡಿ ಇದು ಹಾಲು ಎಂದು ಕುಡಿಸುತ್ತಾರೆ. ಅದನ್ನು ಕುಡಿದು ಹುಡುಗ ಹಿಗ್ಗುತ್ತಾನೆ. ಹಾಲು ಕುಡಿದೆ ಎಂದು ಕುಣಿಯುತ್ತಾನೆ. ಉಳಿದವರೆಲ್ಲ ನಗುತ್ತಾರೆ.

ಆ ಹುಡುಗನ ಹೆಸರು ಅಶ್ವತ್ಥಾಮ. ದ್ರೋಣನ ಮಗ. ಈ ದ್ರೋಣ ಸಾಮಾನ್ಯನಲ್ಲ. ಸಾಕ್ಷಾತ್ ಪರಶುರಾಮರ ಶಿಷ್ಯ. ‘ಅಗ್ರತಶ್ಚತುರೋ ವೇದ’ ಜತೆಗೆ ಧನುರ್ವಿದ್ಯಾ ಪಾರಂಗತ. ಆದರೇನು, ಮಗನಿಗೆ ಹಾಲು ಕೊಡಿಸುವಷ್ಟೂ ಹೊನ್ನಿಲ್ಲದ ಬಡವ. ಸರಸ್ವತಿ ಒಲಿದರೂ ಲಕ್ಷ್ಮೀ ಪ್ರಸನ್ನತೆ ಇಲ್ಲದವನನ್ನು ಸಮಾಜ ಗುರುತಿಸುವುದಿಲ್ಲ ಎನ್ನುವುದಕ್ಕೆ ದೃಷ್ಟಾಂತವಾಗಿದ್ದವನು. ಮುಗ್ಧ ಬಾಲನಾಗಿದ್ದ ಅಶ್ವತ್ಥಾಮನ ಮನಸ್ಸನ್ನು ರೂಪಿಸಿದ್ದು ಇಂತಹ ಒಂದು ಅನುಭವ. ಹೀಗೆ ಕಹಿಯುಂಡವನಿಗೆ ಸಮತೂಕದ ವ್ಯಕ್ತಿತ್ವ ಸಿದ್ಧಿಯಾಗುವುದು ಹೇಗೆ? ವ್ಯಕ್ತಿತ್ವದಲ್ಲಿ ಅಸಮತೋಲ ಇದ್ದವನ ಮನಸ್ಸು ವಿಕೃತವಾಗದಿದ್ದೀತೆ? ಅಶ್ವತ್ಥಾಮ ಈ ದಿಕ್ಕಿನಲ್ಲಿ ಬೆಳೆದ.

ಕುರುಕ್ಷೇತ್ರ ಯುದ್ಧದ ಕೊನೆಗೆ ದುರ್ಯೋಧನ ತೊಡೆ ಮುರಿದು ಬಿದ್ದಿದ್ದಾನೆ. ಅವನ ಋಣದಲ್ಲಿ ಬೆಳೆದ ಅಶ್ವತ್ಥಾಮ ತನ್ನ ಒಡೆಯನ ದುಃಸ್ಥಿತಿಗೆ ಮರುಗಿ, ಅವನ ತೃಪ್ತಿಗಾಗಿ ಪಾಂಡವರನ್ನು ಕೊಂದು ಬರುವೆನೆಂದು ಹೊರಡುತ್ತಾನೆ. ಉಳಿದವರಿಗೆ ತಪ್ಪು ಸರಿಗಳನ್ನು ತಿಳಿಸಿಕೊಡಬೇಕಾದ ಗುರುಪುತ್ರ ತಾನೇ ಅನೀತಿಯ ಕೆಲಸಕ್ಕೆ ಮುಂದಾಗುತ್ತಾನೆ. ಆಯುಧ ಹಿಡಿದು ರಾತ್ರಿ ಪಾಂಡವರ ಸೇನಾಶಿಬಿರಕ್ಕೆ ನುಗ್ಗುತ್ತಾನೆ. ಸಿಕ್ಕಿಸಿಕ್ಕಿದವರನ್ನೆಲ್ಲ ನಿದ್ರೆಯಿಂದ ಎಬ್ಬಿಸಿ ಆಯುಧ ಹಿರಿಯುವ ಅವಕಾಶವನ್ನೂ ಕೊಡದೆ ಕೊಚ್ಚಿಹಾಕುತ್ತಾನೆ. ನೆತ್ತರ ಹೊಳೆ ಹರಿಸುತ್ತಾನೆ.

ಹೀಗೆ ಅಶ್ವತ್ಥಾಮ ರಾತ್ರಿ ಮಾಡಿದ ನೀತಿಬಾಹಿರ ಕೊಲೆಗೆಲಸವೂ ಅಪ್ರಯೋಜಕವಾಯಿತು. ಅವನು ಭ್ರಷ್ಟನಾದುದಷ್ಟೇ ಲಾಭ. ಆದರೆ ಅವನ ವಿವೇಕ ಜಾಗೃತವಾಗುವುದಿಲ್ಲ. ಆ ಬಳಿಕ ಪಾಂಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಮೂರ್ಖತನವನ್ನು ತೋರಿಸುತ್ತಾನೆ. ಅದೂ ಋಷಿಗಳ ಸಮ್ಮುಖದಲ್ಲಿ. ಭೀಕರ,ಮಾರಕ ಅಸ್ತ್ರಗಳು ಮೂರ್ಖರ ಕೈಯಲ್ಲಿದ್ದರೆ ಏನಾದೀತು ಎನ್ನುವುದಕ್ಕೊಂದು ಉದಾಹರಣೆಯಿದು. ಅಸ್ತ್ರವೊಂದರ ಪರಿಣಾಮದ ಅರಿವಿದ್ದೂ ಅದನ್ನು ಹಿಂತೆಗೆಯುವ ವಿಧಿಯ ಜ್ಞಾನವಿಲ್ಲದೆ ಪ್ರಯೋಗಿಸಿದ ಅವಿವೇಕ ಅವನದು.

ಶಾಸ್ತ್ರ ಓದಿದ ಸಾತ್ವಿಕ ಬ್ರಾಹ್ಮಣನಾಗಬೇಕಿದ್ದ ಅಶ್ವತ್ಥಾಮ ಹೀಗೆ ದುಷ್ಟಮೂರ್ಖನಂತೆ ಆದ ಯಾಕೆ? ನಮ್ಮ ಮನೋಧರ್ಮ ಹಾಗೂ ಸ್ವಭಾವಗಳನ್ನು ಪರಿಸರ ರೂಪಿಸುತ್ತದೆ ಎಂಬ ಒಂದು ಮಾತಿದೆ.‌ ಅಶ್ವತ್ಥಾಮನ ಬಾಲ್ಯದ ಅನುಭವ ಹಿತಕರವಲ್ಲ. ಬಡತನವೂ ಆ ಕಾರಣದಿಂದ ಅವನು ಅನುಭವಿಸಿದ ತಿರಸ್ಕಾರವೂ ಅವನಲ್ಲಿ ಒಂದು ವಿಕಾರ ಹುಟ್ಟಿಸಿದರೆ ಅದು ಸಹಜ. ತನ್ನ ಬಡತನವನ್ನು ನಿವಾರಿಸಿಕೊಳ್ಳಲೆಂದು ಅವನ ತಂದೆ ದ್ರೋಣನು ಪಾಂಚಾಲದ ರಾಜ ದ್ರುಪದನಲ್ಲಿಗೆ ಹೋಗುತ್ತಾನೆ. ದ್ರುಪದ ದ್ರೋಣರು ಸಹಪಾಠಿಗಳು, ಮಿತ್ರರು. ಈ ಸಲುಗೆಯಿಂದ ದ್ರೋಣ ಅವನ ಬಳಿಗೆ ಹೋದರೆ ಅಧಿಕಾರ ಹಾಗೂ ಸಂಪತ್ತಿನ ಮದ ತಲೆಗೇರಿದ್ದ ದ್ರುಪದನಿಗೆ ದ್ರೋಣ ತನ್ನ ಸ್ನೇಹಿತ, ಸಹಪಾಠಿ ಎಂಬುದು ಮರೆತಿತ್ತು. ಅಥವಾ ಹಾಗೆ ನಟಿಸುತ್ತಾನೆ. ದರಿದ್ರ ದ್ರೋಣನನ್ನು ತಿರಸ್ಕರಿಸುತ್ತಾನೆ. ಅವಮಾನಿಸುತ್ತಾನೆ. ಇದನ್ನು ಕಂಡ ಅಶ್ವತ್ಥಾಮನ ಮೇಲೆ ಏನು ಪರಿಣಾಮವಾಗಿರಬಹುದು?

ದ್ರೋಣ ಹಸ್ತಿನಾವತಿಯನ್ನು ಸೇರಿದ ಬಳಿಕ ಶ್ರೀಮಂತಿಕೆ ಬಂತು. ಆದರೆ ಅಶ್ವತ್ಥಾಮನಿಗೆ ಒಡನಾಟ ಸಿಕ್ಕಿದ್ದು ದುರ್ಯೋಧನ, ದುಃಶಾಸನ, ಕರ್ಣ, ಶಕುನಿ ಮುಂತಾದವರದ್ದು. ಅವರ ದುಷ್ಟಪ್ರವೃತ್ತಿ ಇವನನ್ನೂ ಪ್ರಭಾವಿಸಿರಬೇಕು. ಪ್ರಭುತ್ವದ ಋಣದಲ್ಲಿ ಬಿದ್ದ ತಂದೆ ಮಗ ಇಬ್ಬರೂ ದುರ್ಯೋಧನನನ್ನು ಬೆಂಬಲಿಸುವ ಅನಿವಾರ್ಯಕ್ಕೆ ಸಿಲುಕುತ್ತಾರೆ. ದ್ರೋಣನಿಗೆ ದ್ರುಪದನ ಮೇಲೆ ಮುನಿಸು. ಅಶ್ವತ್ಥಾಮನಿಗೆ ಸಮಾಜದ ಮೇಲೆ ಮುನಿಸು. ಇದೆಲ್ಲದರ ಫಲಿತಾಂಶ ಅವನು ಬ್ರಾಹ್ಮಣನಾದರೂ ಕ್ಷತ್ರಿಯನಂತೆ ಬೆಳೆದ. ಗೃಹಸ್ಥನಾಗಲಿಲ್ಲ.

ಉತ್ತರೆಯ ಗರ್ಭನಾಶಕ್ಕೆ ಹೊರಟ ಅವನಿಗೆ ಕೃಷ್ಣ ಕಠೋರವಾದ ಒಂದು ಶಾಪವನ್ನು ಕೊಡುತ್ತಾನೆ. ‘ನಿನ್ನ ಮೈಯಿಡೀ ಹುಣ್ಣುಗಳಾಗಿ‌ ದುರ್ಗಂಧ ಹರಡುತ್ತಿರಲಿ. ನಿರಂತರ ಮೂರು ಸಾವಿರ ವರ್ಷ ಅಲೆದಾಡುತ್ತಲೇ‌ ಇರು. ಹುಣ್ಣುಗಳ ನೋವಿನಿಂದ ಬಿಡುಗಡೆ ಇಲ್ಲವಾಗಲಿ’ ಎಂಬ ಶಾಪ ಅದು. ನಿರಂತರ ಅಲೆಮಾರಿತನ,ಉಳಿದವರಿಂದ ತಿರಸ್ಕಾರ,ಅಸ್ಪೃಶ್ಯತೆ, ತೀರದ ನೋವು ಇದು ಅಶ್ವತ್ಥಾಮನ ಪಾಲಿಗೆ ಅನುಭವಿಸಬೇಕಾದ ಫಲಗಳು. ಕೊನೆಗೆ ಅತೃಪ್ತ ಆತ್ಮವಾಗಿ‌ ಸುಳಿಯುವುದು ಅವನ ಪಾಡು.

ಅಶ್ವತ್ಥಾಮ ಎಂಬ ಈ ದುರ್ದೈವಿಯನ್ನು‌ ಎಳೆತನದಲ್ಲಿ ಯಾರಾದರೂ‌ ತಿದ್ದುತ್ತಿದ್ದರೆ, ಅವನಿಗೆ‌ ಬಾಲ್ಯವು ಒಂದಿಷ್ಟು ಮಧುರ ಎಂಬ ಅನುಭವವಾಗುತ್ತಿದ್ದರೆ, ಹಸ್ತಿನಾವತಿಯಲ್ಲಿ ಸಜ್ಜನರ‌ ಸಹವಾಸ ದೊರೆಯುತ್ತಿದ್ದರೆ, ಮಡದಿ ಮಕ್ಕಳು ಇರುತ್ತಿದ್ದರೆ… ಈಗ ಹೀಗೆಲ್ಲ ಕಲ್ಪಿಸಬಹುದು ಅಥವಾ ಅದನ್ನು ಓದಿ ಈಗಿನ ಎಳೆಯರು ಅಶ್ವತ್ಥಾಮನಂತೆ ಬೆಳೆಯುವುದನ್ನು ತಪ್ಪಿಸಲಾದೀತೆ ಎಂದು ಚಿಂತಿಸಬಹುದು. ಸಾಧ್ಯವಾದರೆ ಬಡತನವೋ ಸಿರಿತನವೋ ಅವರ ವ್ಯಕ್ತಿತ್ವವನ್ನು ಬಾಧಿಸದಂತೆ ಜಾಗರೂಕತೆ ವಹಿಸಬಹುದು. ಅಷ್ಟೆ.

ಬರಹ: ರಾಧಾಕೃಷ್ಣ ಕಲ್ಚಾರ್

***

ಟಿವಿ9 ಕನ್ನಡ ಡಿಜಿಟಲ್‌ ಹೊಸ ಪ್ರಯತ್ನ ಪುರಾಣ ಪಾತ್ರಗಳು, ಪುರಾಣದ ಘಟನೆಗಳು, ಅನುಭವ, ಆಸ್ವಾದನೆ ಬದುಕಿಗೆ ದಾರಿದೀಪ ಆಗಬಲ್ಲವು. ಒಂದಷ್ಟು ಹೊಸನೋಟ, ತಿಳುವಳಿಕೆಯನ್ನೂ ನೀಡಬಲ್ಲವು. ಮನಸಿಗೆ ಸಂತೋಷ, ನೆಮ್ಮದಿಯನ್ನೂ ತುಂಬಬಲ್ಲವು.

ಪುರಾಣ ಪಾತ್ರಗಳನ್ನು ತಿಕ್ಕಿ, ತೀಡಿ, ವಿರೋಧಿಸಿ, ಪ್ರಶ್ನಿಸಿ, ಎದುರಿಸಿ, ಒಪ್ಪಿ, ಅಪ್ಪುವ ಅವಕಾಶ ಯಕ್ಷಗಾನ ಕಲಾ ವಲಯದ ಜನತೆಗೆ ಹೆಚ್ಚು. ಪುರಾಣ ಪಾತ್ರಗಳನ್ನೂ ದಿನವೂ ಮಾತನಾಡಿಸುವಂತೆ.. ಏಕೆಂದರೆ ಇಲ್ಲಿ ದಿನನಿತ್ಯವೂ ನೂರಾರು ಆಟ.

ಈ ನೆಲೆಯಲ್ಲಿ ʼಪುರಾಣ ಪಾತ್ರಗಳ ವರ್ತಮಾನʼ ಎಂಬ ಸರಣಿಯನ್ನು ಪುರಾಣ ಮತ್ತು ಯಕ್ಷಗಾನದ ಸಮೀಕರಣದೊಂದಿಗೆ ಆರಂಭಿಸಿದ್ದೇವೆ. ಸದ್ಯ ಆಯ್ದ ಸಹೃದಯರು ಪುರಾಣ ಪಾತ್ರಧಾರಿಗಳಾಗಿ ತಮ್ಮ ಅನುಭವ, ಅದರ ತಯಾರಿಯಲ್ಲಿನ ಅನುಭವ, ಅಥವಾ ರಂಗಸ್ಥಳದಲ್ಲಿ ಪುರಾಣ ಪಾತ್ರಗಳನ್ನು ಕಂಡ ಬಗೆ, ರಂಗದ ಹಿಂದಿನ ಚೌಕಿಯ ನೆನಪು, ಮತ್ತು ಅದರಿಂದ ಬದುಕಿಗೇನು? ಬದುಕಲ್ಲಿ ಏನು? ಎಂದು ಚರ್ಚಿಸುತ್ತಾರೆ.

ಮುಂದೆ ಇದನ್ನು ವಿಸ್ತರಿಸುವ ಇರಾದೆ ಇದೆ. ಈ ನೆಲೆಯಲ್ಲಿ ತಾವೂ ಕೂಡ ಮೇಲಿನ ಉದ್ದೇಶಕ್ಕೆ ಸರಿಯಾಗಿ ತಮ್ಮ ಬರಹವನ್ನು ನಮಗೆ ಕಳುಹಿಸಿಕೊಡಬಹುದು. ಮೇಲ್ ಮಾಡುವಾಗ ‘ಯಕ್ಷಗಾನ’, ‘ಯಕ್ಷರಂಗ’ ಅಥವಾ ‘ಪುರಾಣ ಪಾತ್ರಗಳ ವರ್ತಮಾನ’ ಸರಣಿಗೆ ಲೇಖನ ಎಂದು ನಮೂದಿಸಲು ಮರೆಯಬೇಡಿ.

ನಮ್ಮ ಇಮೇಲ್‌ ವಿಳಾಸ:  tv9kannadadigital@gmail.com

ಇದನ್ನೂ ಓದಿ: Yakshagana: ಪುರಾಣ ಎಂದರೆ ಬಹಳ ಹಿಂದಿನದು, ಪುರಾತನ ಎನ್ನುವ ಅರ್ಥ ಮಾತ್ರವೇ?

ಅಭಿನವ ವಾಲ್ಮೀಕಿ ಖ್ಯಾತಿಯ, ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ನಿಧನ

(Series on Yakshagana and Purana characters YakshaRanga special write up by Radhakrishna Kalchar)

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ