Padma Awards 2022: ದಲಿತ ಸಂವೇದನೆಗೆ ಅಕ್ಷರಲೋಕದಲ್ಲಿ ಶಾಶ್ವತ ಸ್ಥಾನ ದೊರಕಿಸಿದ ಕವಿ ಸಿದ್ದಲಿಂಗಯ್ಯಗೆ ಪದ್ಮಶ್ರೀ ಪ್ರಶಸ್ತಿ: ಹರ್ಷ ವ್ಯಕ್ತಪಡಿಸಿದ ಪುತ್ರಿ ಮಾನಸಾ
ನನ್ನ ತಂದೆ ಸಿದ್ದಲಿಂಗಯ್ಯನವರು ಸಮಾಜಕ್ಕಾಗಿ ಬರೆಯುತ್ತಿದ್ದರು, ಬದುಕಿದ್ದರು. ಸಮಾಜ ಅವರನ್ನು ಗುರುತಿಸಿತ್ತು. ಈಗ ಸರ್ಕಾರವೂ ಅವರನ್ನು ಗುರುತಿಸಿದೆ.
ಬೆಂಗಳೂರು: ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ (Siddalingiah) ಅವರಿಗೆ ಮರಣೋತ್ತರ ಪದ್ಮಶ್ರೀ ಪುರಸ್ಕಾರ (Padma Awards 2022) ಘೋಷಣೆಯಾಗಿರುವುದನ್ನು ಸಿದ್ದಲಿಂಗಯ್ಯ ಅವರ ಪುತ್ರಿ ಮಾನಸಾ ಸ್ವಾಗತಿಸಿದ್ದಾರೆ. ತಂದೆಯವರಿಗೆ ಪದ್ಮಶ್ರೀ (Padmashri) ಬಂದಿದ್ದು ಖುಷಿಯಾಗಿದೆ. ಆದರೆ ತಂದೆಯವರು ಇಲ್ಲವಲ್ಲಾ ಅನ್ನೋದೇ ನಮಗೆ ನೋವು. ತಂದೆಯವರು ಸಮಾಜಕ್ಕಾಗಿ ಬರೆಯುತ್ತಿದ್ದರು, ಬದುಕಿದ್ದರು. ಸಮಾಜ ಅವರನ್ನು ಗುರುತಿಸಿತ್ತು. ಈಗ ಸರ್ಕಾರವೂ ಅವರನ್ನು ಗುರುತಿಸಿದೆ. ಅವರು ಒಮ್ಮೊಮ್ಮೆ ತಾವು ಪಾಲ್ಗೊಂಡ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಜನರು ಸಣ್ಣಪುಟ್ಟ ಹಳ್ಳಿಗಳಿಗೆ ಕರೆದರೂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು ಎಂದು ನೆನಪಿಸಿಕೊಂಡರು.
ಕವಿ ಸಿದ್ದಲಿಂಗಯ್ಯ ಪರಿಚಯ
ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ (1953-2021) 66ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದ ಅವರು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ್ದರು. 1988-1994 ಮತ್ತು 1995-2001ರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟವರು ಡಾ.ಸಿದ್ದಲಿಂಗಯ್ಯ. ಅವರು ಬರೆದ ಕ್ರಾಂತಿಗೀತೆ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ರಾಜ್ಯವ್ಯಾಪಿ ಜನಪ್ರಿಯವಾಗಿತ್ತು. ದಲಿತ ಸಂವೇದನೆಗಳನ್ನು ಸಶಕ್ತವಾಗಿ, ಆಕ್ರೋಶವನ್ನು ಅಕ್ಷರಗಳಾಗಿ ಸಾರಿ ಹೇಳಿದ ಗೀತೆಯಿದು. ಕ್ರಾಂತಿಗೀತೆ, ನೊಂದವರ ಪಾಡುಗಳನ್ನೇ ಹಾಡಾಗಿಸುತ್ತಿದ್ದ ಈ ಕವಿಯು ಶೃಂಗಾರ ಗೀತೆಗಳನ್ನು ಬರೆಯಬಲ್ಲರು ಎಂದು ನಿರೂಪಿಸಿದ್ದು ಜನಪ್ರಿಯ ಗೀತೆ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’.
1953ರಲ್ಲಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಜನಿಸಿದ್ದ ಅವರು, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಎ ಆನರ್ಸ್ ಕನ್ನಡ ಪದವಿ ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದ ಅವರು ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧಕ್ಕೆ 1989ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಡಾ.ಸಿದ್ದಲಿಂಗಯ್ಯ ಅವರ ಹೆಸರನ್ನು ಉಲ್ಲೇಖಿಸದೇ ಬಂಡಾಯ ಸಾಹಿತ್ಯದ ಇತಿಹಾಸ ಬರೆಯಲು ಸಾಧ್ಯವಿಲ್ಲ ಎಂಬಂತೆ ಅವರು ಹೆಸರುವಾಸಿಯಾಗಿದ್ದರು. ಪಂಪ, ನಾಡೋಜ ಪ್ರಶಸ್ತಿಗಳಿಗೂ ಭಾಜನರಾಗಿದ್ದ ಅವರು, ದಲಿತ, ಬಂಡಾಯವೆಂದರೆ ಹೊಡಿ-ಬಡಿ ಎಂಬುದಲ್ಲ ಎಂದು ವ್ಯಾಖ್ಯಾನಿಸಿದ್ದರು.
ದಲಿತರು ಬರುವರು ದಾರಿಬಿಡಿ, ದಲಿತರ ಕೈಗೆ ರಾಜ್ಯಕೊಡಿ ಎಂಬ ಅವರ ಕ್ರಾಂತಿಗೀತೆ ಈಗಲೂ ದಲಿತ ಚಳವಳಿಗಳಲ್ಲಿ ಕೇಳಿಬರುವಂತಹದ್ದು. ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಮೆರವಣಿಗೆ, ಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರೆ ಕವಿತೆಗಳು ಅವರ ಪ್ರಮುಖ ಕವಿತಾ ಸಂಕಲನಗಳು. ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1 ಮತ್ತು ಭಾಗ 2 ಅವರು ವಿಧಾನಪರಿಷತ್ ಸದಸ್ಯರಾಗಿ ಕರ್ತವ್ಯನಿರ್ವಹಿಸಿದ ಅನುಭವಗಳ ನೈಜ ಅನುಭವ ಕಥನ. ಅವರ ಆತ್ಮಕಥೆ ಊರು ಕೇರಿ ಭಾಗ 1 ಮತ್ತು ಭಾಗ 2ನ್ನು ಕನ್ನಡ ಸಾಹಿತ್ಯ ಎಂದಿಗೂ ಮರೆಯಲಾರದು.
‘ಊರು ಕೇರಿ’ ಅವರ ಆತ್ಮಕಥನ. ಈ ಕೃತಿಯು ಇಂಗ್ಲೀಷ್ ಮತ್ತು ತಮಿಳು ಭಾಷೆಗಳಿಗೆ ಅನುವಾದವಾಗಿದೆ. ಜತೆಗೆ ಅವರು ಬರೆದ ಕವಿತೆಗಳು ಭಾರತದ ಹಲವು ಭಾಷೆಗಳಿಗೆ ತರ್ಜುಮೆಗೊಂಡಿದ್ದು ಡಾ.ಸಿದ್ದಲಿಂಗಯ್ಯ ಅವರ ಹೆಸರು ಕನ್ನಡದ ಆಚೆಗೂ ಪಸರಿಸಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೂ ಅವರಿಗೆ ಸಂದಿವೆ.
ಇದನ್ನೂ ಓದಿ: ಕನ್ನಡಕ್ಕೊಬ್ಬರೇ ಸಿದ್ದಲಿಂಗಯ್ಯ: ದಲಿತ ಆಕ್ರೋಶದ ಅಭಿವ್ಯಕ್ತಿಗೆ ಹಾಸ್ಯವನ್ನೂ ಅಸ್ತ್ರವಾಗಿಸಿದ್ದ ಅಪರೂಪದ ಕವಿ ಇದನ್ನೂ ಓದಿ: ಸಿದ್ದಲಿಂಗಯ್ಯ ನುಡಿನಮನ : ತಮ್ಮನ್ನು ತಾವೇ ಹಾಸ್ಯಕ್ಕೆ ಒಳಪಡಿಸಿಕೊಳ್ಳುತ್ತಿದ್ದುದರ ಹಿಂದೆ ತಾತ್ವಿಕತೆ ಇತ್ತು